
ಮೂಲ: W H Auden (Refugee Blues)

ಕನ್ನಡಕ್ಕೆ : ಶಿವಕುಮಾರ್ ಮಾವಲಿ
ಈ ನಗರದಲ್ಲಿ ಹತ್ತು ಲಕ್ಷ ಜನರಿದ್ದಾರೆ ಎನ್ನುತ್ತಾರೆ
ಕೆಲವರು ಬಂಗಲೆಗಳಲ್ಲಿದ್ದರೆ ಮತ್ತೆ ಕೆಲವರು ಗುಂಡಿ-ಗಟಾರಗಳಲ್ಲಿ ನೆಲೆಸಿದ್ದಾರೆ
ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ ಡಿಯರ್
ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ …
ಒಂದು ಕಾಲದಲ್ಲಿ ನಮಗೂ ಒಂದು ದೇಶವಿತ್ತು, ಎಲ್ಲವೂ ಸರಿಯಿತ್ತು ;
ಈಗಲೂ ನೀನಾದೇಶವನ್ನು ಅಟ್ಲಾಸ್ ನಲ್ಲಿ ಕಾಣಬಹುದು
ಆದರೆ ನಾವೀಗ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ ಡಿಯರ್,
ನಾವೀಗ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ.
ಊರ ಹೊರಗಿನ ಚರ್ಚ್ ನ ಆವರಣದಲ್ಲೊಂದು
ಹಳೆಯ ಮರ ಇದೆ
ಪ್ರತೀ ವಸಂತದಲ್ಲೂ ಹೊಸ ಹೂಗಳನ್ನು ಬಿಡುತ್ತದೆ
ಆದರೆ ಹಳೆಯ ಪಾಸ್ ಪೋರ್ಟ್ ಗಳೀಗ ನಡೆಯುವುದಿಲ್ಲ ಡಿಯರ್…
ಹಳೆಯ ಪಾಸ್ ಪೋರ್ಟ್ ಗಳೀಗ ನಡೆಯುವುದಿಲ್ಲ…

ರಾಯಭಾರ ಕಛೇರಿಯಲ್ಲಿ ಮೇಜು ಕುಟ್ಟಿ ಹೇಳಿದರು;
‘ನಿಮ್ಮ ಬಳಿ ಹೊಸ ಪಾಸ್ ಪೋರ್ಟ್
ಇಲ್ಲವಾದಲ್ಲಿ ನೀವು ಅಧೀಕೃತವಾಗಿ ಸತ್ತಿದ್ದೀರ’
ಆದರೆ ನಾವಿನ್ನೂ ಬದುಕಿದ್ದೇವೆ ಡಿಯರ್ …
ಆದರೆ ನಾವಿನ್ನೂ ಬದುಕಿದ್ದೇವೆ …
ಒಂದು ಸಮಿತಿಯ ಮುಂದೆ ಹೋಗಿ ನಿಂತೆ…
ಕುಳಿತುಕೊಳ್ಳಲು ಕುರ್ಚಿ ಕೊಟ್ಟರು…
ಮುಂದಿನ ವರ್ಷ ಬನ್ನಿ ಎಂದು ನಯವಾಗಿ ಹೇಳಿ ಕಳಿಸಿದರು…
ಆದರೆ ಇವತ್ತು ನಾವೆಲ್ಲಿಗೆ ಹೋಗುವುದು ಡಿಯರ್ ?
ಇವತ್ತು ನಾವೆಲ್ಲಿಗೆ ಹೋಗುವುದು ?
ಒಂದು ಸಾರ್ವಜನಿಕ ಸಭೆಗೆ ಹೋಗಿದ್ದೆ ;
ಭಾಷಣಕಾರ ಎದ್ದು ನಿಂತು ಏರು ಧ್ವನಿಯಲ್ಲಿ ಅರಚಿದ;
‘ನಾವು ಅವರನ್ನು ಒಳಗೆ ಬಿಟ್ಟುಕೊಂಡರೆ, ಅವರು ನಮ್ಮ ದಿನದ ಅನ್ನವನ್ನೇ ಕಿತ್ತುಕೊಳ್ಳುತ್ತಾರೆ’
ಅವನು ಹೇಳಿದ ಆ ಅವರು, ನಾನು -ನೀನೇ ಡಿಯರ್…
ಆ ಅವರು ನಾನು -ನೀನೇ …
ಆಕಾಶದಲ್ಲಿ ಗುಡುಗಿನ ಘರ್ಜನೆ ಕೇಳಿಸಿಕೊಂಡೆ ಎಂದುಕೊಂಡರೆ,
ಅದು ಹಿಟ್ಲರ್ ಯೂರೋಪ್ ನ ಕುರಿತು ‘ಅವರು ಸಾಯಲೇಬೇಕು’ ಎಂದು ಹೇಳಿದ್ದಾಗಿತ್ತು
ಅವನ ಮನಸ್ಸಲ್ಲಿದ್ದದ್ದು ನಾವೇ ಡಿಯರ್,
ಅದು ನಾವೇ …
ಜಾಕೇಟ್ ನೊಳಗೆ ನಾಯಿಯೊಂದನ್ನು ಸುತ್ತಿದ್ದು ಕಂಡೆ
ಮನೆಯೊಂದರ ಬಾಗಿಲು ತೆರೆದು ಬೆಕ್ಕನ್ನು ಒಳಗೆ ಬಿಟ್ಟುಕೊಂಡಿದ್ದನ್ನು ಕಂಡೆ
ಆದರೆ ಅವು ಜರ್ಮನ್ ಯಹೂದಿಗಳಾಗಿರಲಿಲ್ಲ ಡಿಯರ್ …
ಆದರೆ ಅವು ಜರ್ಮನ್ ಯಹೂದಿಗಳಾಗಿರಲಿಲ್ಲ …
ಬಂದರಿನ ಬಳಿ ಹೋಗಿ ಹಡಗುಕಟ್ಟೆಯ ಮೇಲೆ ನಿಂತೆ
ಮೀನುಗಳು ಸ್ವತಂತ್ರವಾಗಿ ಈಜಾಡುವುದು ಕಂಡೆ
ಕೇವಲ ಹತ್ತು ಅಡಿ ದೂರದಲ್ಲಿ ಡಿಯರ್,
ಕೇವಲ ಹತ್ತೇ ಅಡಿ ದೂರದಲ್ಲಿ …

ಅಡವಿಯಲ್ಲಿ ನಡೆದು ಹೋಗುವಾಗ ಮರಗಳಲ್ಲಿ ಹಕ್ಕಿಗಳ ಕಂಡೆ ;
ಅವುಗಳಿಗೆ ರಾಜಕಾರಣಿಗಳಿರಲಿಲ್ಲ ಮತ್ತು ಮನಸೋಯಿಚ್ಛೆ ಹಾಡಿಕೊಂಡಿದ್ದವು;
ಸದ್ಯ, ಅವು ಮನುಷ್ಯರಾಗಿರಲಿಲ್ಲ ಡಿಯರ್
ಅವು ಮನುಷ್ಯರಾಗಿರಲಿಲ್ಲ…
ಕನಸಲ್ಲಿ ಸಾವಿರ ಅಂತಸ್ತಿನ ಕಟ್ಟಡವೊಂದನು ಕಂಡೆ
ಸಾವಿರ ಕಿಟಕಿ ಮತ್ತು ಸಾವಿರ ಬಾಗಿಲುಗಳಿದ್ದವು ;
ಅವುಗಳಲ್ಲಿ ಒಂದೂ ನಮ್ಮದಾಗಿರಲಿಲ್ಲ ಡಿಯರ್,
ಅವುಗಳಲ್ಲಿ ಒಂದೂ ನಮ್ಮದಾಗಿರಲಿಲ್ಲ…
ಒಂದು ವಿಶಾಲ ಮೈದಾನದಲ್ಲಿ ಬೀಳುತ್ತಿದ್ದ ಹಿಮದಲ್ಲಿ ನಿಂತು ನೋಡಿದೆ ;
ಹತ್ತು ಸಾವಿರ ಸೈನಿಕರು ಗಸ್ತು ತಿರುಗುತ್ತಿದ್ದರು;
ನನ್ನ- ನಿನ್ನ ಹುಡುಕಿ ಪ್ರಿಯೆ
ನನ್ನ – ನಿನ್ನ ಹುಡುಕಿ …






Very touching
ಮನಮುಟ್ಟಿತು