ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ

ಅಭಿಲಾಷಾ ಎಸ್

ಸಾಮಾಜಿಕ ಅಂತರದ ನೆರಳಲ್ಲಿ ಹುಟ್ಟಿಕೊಂಡ  ದೂರ ಶಿಕ್ಷಣದ ಹಾಡು-ಪಾಡು.

‘ಶಾಲೆ’ ಎಂದಾಕ್ಷಣ ಮನಸ್ಸೊಳಗೆ ಮೊದಲು ಕೇಳಿಬರುವುದು ಶಾಲೆಯದ್ದೇ ಆದ ಅಪ್ಪಟ ಸದ್ದುಗಳು! ಮಕ್ಕಳ ತಂಟೆ ತಕರಾರು, ನಗು- ಕೇಕೆ, ಮಾತುಕತೆ – ಈ ಎಲ್ಲ ಗೌಜಿ ಗಮ್ಮತ್ತುಗಳು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಹಠಾತ್ತಾಗಿ ಸ್ತಬ್ಧವಾಗಿ ಹೋಯಿತು. ಇದಕ್ಕೆ ಕಾರಣ ಕೊರೋನಾ ಹರಡುವಿಕೆಯ ಭಯಕ್ಕಾಗಿ ಮಕ್ಕಳಿಗೆ ಅನಿರ್ದಿಷ್ಟಾವಧಿಯ ರಜೆ ಸಾರಲಾಗಿತ್ತು. ವರ್ಷಕ್ಕೊಮ್ಮೆ ಬೇಸಗೆಯ ದೀರ್ಘ ರಜೆಯ ಹೊತ್ತು ಶಾಲೆಗಳು ಹೀಗೆ ಮೌನ ಧರಿಸಿ ಬಿಡುವುದು ವಾಡಿಕೆ.

ಆದರೆ ಅದು ಗರ್ಭದಲ್ಲಿರುವ ಭ್ರೂಣ ಮೌನದಂತೆ. ಜೂನ್ ತಿಂಗಳ ಹೊಸ ಹುಟ್ಟಿಗೆ ತಯಾರಾಗುವ ಒಳ ಕಾರ್ಯ-ಕಾರಣ ಅಲ್ಲಿ ಬಿರುಸಾಗಿ ನಡೆಯುತ್ತಿರುತ್ತದೆ .  ಆದರೆ ಈ ಬಾರಿ ಹಾಗಲ್ಲ, ಇದು ಸಾಮಾಜಿಕ ಅಂತರದ ಅಗತ್ಯತೆಯಾಗಿ ಸಮಾಜದ ಬಹುಮುಖ್ಯ ಅಂಗವಾದ ಶಿಕ್ಷಣ ಸಂಸ್ಥೆಗಳಿಗೆ ಅನೇಸ್ತೇಶಿಯಾ ಕೊಟ್ಟು ಮರಗಟ್ಟಿಸಿಬಿಟ್ಟಂತಹ ಒಂದು ವಿಚಿತ್ರ ಸನ್ನಿವೇಶ.

ಜೂನ್ ನಿಂದ ಏಪ್ರಿಲ್ ವರೆಗೆ ಸರಸರನೆ ಉರುಳುವ ಶಾಲಾಚಕ್ರ ದೊಡನೆ ಬಿಗಿದುಕೊಂಡಿದ್ದ ನಮ್ಮಂಥವರಿಗೆ, ಇದು ಕಾಲನೇ ಇದ್ದಕ್ಕಿದ್ದಂತೆ  ಬ್ರೇಕ್ ಹಾಕಿ  ಮುಕ್ಕರಿಸುವಂತೆ ಮಾಡಿದಂತ ಅನುಭವ ನೀಡಿತು.

ಮೊದಮೊದಲು “ಓಡುತ್ತಿರುವ ಕುದುರೆಗೆ ಸಿಕ್ಕ ತಾತ್ಕಾಲಿಕವಾದ ಬಿಡುವು ಇದು” ಎಂಬ ನಿರಾಳತೆ ಎಲ್ಲರಲ್ಲೂ ಇತ್ತು. ಆದರೆ ಈ  ಬಿಡುವಿನ ಅಂತ್ಯ ಸದ್ಯಕ್ಕಿಲ್ಲ ಎಂಬ ನಿಜಸ್ಥಿತಿಯ ಅರಿವು ನಿಧಾನವಾಗಿ ಮೂಡುತ್ತಿದ್ದಂತೆ ಒಂದು ಬಗೆಯ ಚಡಪಡಿಕೆ, ಅನಿಶ್ಚಿತತೆ ತರುವ ತಳಮಳ ಕಾಡಲು ಶುರುವಾಯಿತು. ಪರಿಸ್ಥಿತಿ ಹೇಗಿತ್ತೆಂದರೆ ಒಂದೇ ದಿಕ್ಕಿನಲ್ಲಿ ಓಡುತ್ತಿದ್ದ ಕುದುರೆಯ ಮಾರ್ಗವೇ ಮಂಜು ಬಿದ್ದು ಮುಚ್ಚಿ ಹೋದಂತಾಗಿತ್ತು.

ಮುಂದೆ ಹೋಗುವಂತೆಯೂ ಇಲ್ಲ ಮಂಜು ಕರಗಲಿ ಎಂದು ಕಾಯುವಂತೆಯೂ ಇಲ್ಲ, ಪ್ರಯಾಣ ಮುಂದುವರಿಯಬೇಕಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯೇ ಜಡ್ಡುಗಟ್ಟಿದಂತಿದ್ದ  ಶಿಕ್ಷಣ ಕ್ಷೇತ್ರದಲ್ಲಿ ಒಂದು ಅಪೂರ್ವ ಸಂಚಲನ ಮೂಡಿಸಿ ಬಿಟ್ಟದ್ದು ದೊಡ್ಡ ವಿಪರ್ಯಾಸ!

ಮಕ್ಕಳಿಗೆ ಶಾಲೆಗಳು ತೆರೆಯಬೇಕೇ ಬೇಡವೇ ? ತೆರೆಯದಿದ್ದರೆ ಮಕ್ಕಳ ಶಿಕ್ಷಣದ ಕಥೆಯೇನು? ಶಾಲೆಯಿಲ್ಲದೆ ಮಕ್ಕಳನ್ನು ತಲುಪುವುದು ಸಾಧ್ಯವೇ? ಯಾವ ರೀತಿಯ ಪಾಠ ಮಾಡಬೇಕು? ಏಕೆ ಮಾಡಬೇಕು?

 ಹೀಗೆ ದಿನ ಬೆಳಗಾದರೆ ಏಳುತ್ತಿದ್ದ ಚರ್ಚೆಗಳಿಗೆ ಉತ್ತರವನ್ನೋ ನಿರ್ಣಯವನ್ನೋ ಯಾರೋ ಕೊಡಲಿ ಎಂದು ಕಾಯುತ್ತಾ ಕುಳಿತುಕೊಳ್ಳುವಷ್ಟು ಸಮಯ ಯಾರಿಗೂ ಇರಲಿಲ್ಲ. ಎಲ್ಲರಿಗೂ ಇದು ಹೊಸದಾದ ಸಂದರ್ಭ, ಇಲ್ಲಿ ಎಲ್ಲವನ್ನೂ  ನಾವೇ ಕಂಡುಕೊಳ್ಳಬೇಕಿತ್ತು, ನಮ್ಮ ನಮ್ಮ ಪರಿಧಿಯಲ್ಲಿ ನಾವು ಹುಡುಕಾಟಕ್ಕೆ ಇಳಿದು ಬಿಟ್ಟಿದ್ದೆವು. ಕಲಿಕೆಯನ್ನುವುದು ನಿರಂತರವಾದದ್ದು, ಅದು ನಿಂತುಹೋಗಬಾರದು, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸುವುದು ಈ ಸಮಾಜದ ಜವಾಬ್ದಾರಿ.

ಹಾಗಾಗಿ ಶಾಲೆಗಳ ಹೊರಗೆ ಅಂಥದ್ದೊಂದು ವಾತಾವರಣ ನಿರ್ಮಿಸುವುದು ಸಾಧ್ಯವೇ ಎಂಬ ಯೋಚನೆಗಳೇ ಶೈಕ್ಷಣಿಕ ಚಟುವಟಿಕೆಗಳ ಮುಂದುವರಿಕೆಗಾಗಿ ಹೊಸ ಹಾದಿಗಳನ್ನು  ನಿರ್ಮಿಸುವ ನಮ್ಮ ಉಮೇದಿಗೆ ವೇಗವನ್ನು ಕೊಡುತ್ತಿದ್ದವು.

ಈ ಹೊತ್ತಿನಲ್ಲಿ ಆಪದ್ಬಾಂಧವನಂತೆ ನಮಗೆ ಗೋಚರಿಸಿದ್ದು, ತಂತ್ರಜ್ಞಾನದ ಬಳಕೆಯ ಮೂಲಕ ನಡೆಸಬಹುದಾದ ದೂರಶಿಕ್ಷಣದ ಕಲ್ಪನೆ. ಅದಾಗಲೇ ಮೊಬೈಲ್ ಬಳಕೆ ಸಾರ್ವತ್ರಿಕವಾಗಿತ್ತಾದ್ದರಿಂದ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮಗಳು ಶಾಲೆ ಮತ್ತು ಮನೆಯ ಸಂಪರ್ಕ ಸೇತುವೆ ಆಗುವ ಸಾಧ್ಯತೆ ಸ್ವಲ್ಪಮಟ್ಟಿಗೆ ನಿಚ್ಚಳವಾಗ ತೊಡಗಿತು.

 ಆದರೆ ಈ ಹಂತದಲ್ಲಿ ಅನೇಕ ಗೊಂದಲಗಳು, ಅನುಮಾನಗಳು ಎಲ್ಲ ಪ್ರಜ್ಞಾವಂತರನ್ನು ಸಹಜವಾಗಿಯೇ ಕಾಡಿತು. ಮೊದಲನೆಯದಾಗಿ, ಶಿಕ್ಷಣ ಎಂದರೆ ಬರಿಯ ಜ್ಞಾನದ ವರ್ಗಾವಣೆಯಲ್ಲ. ಅದು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ. ಜೊತೆಗೆ ಮಕ್ಕಳು ವಿವಿಧ ಕೌಶಲಗಳ ಪರಿಣತಿ ಹೊಂದಿ ಅವು ಅವರ ಸಾಮರ್ಥ್ಯವಾಗಿ ಮಾರ್ಪಾಟಾಗುತ್ತಾ ಹೋದಾಗಲೇ ಆ ಕಲಿಕೆ ಅರ್ಥಪೂರ್ಣವಾಗುವುದು.

ಆದರೆ ಇದು ಸಾಧ್ಯವಾಗುವುದು ಮಾತ್ರ, ಪುಟ್ಟ ಸಮಾಜವೇ ಆಗಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬಳಗದೊಳಗೆ ಮತ್ತು ವಿದ್ಯಾರ್ಥಿ ಶಿಕ್ಷಕರ ನಡುವೆ ಮಾನವೀಯ ಸಂಪರ್ಕ, ಸಂಬಂಧ, ಒಡನಾಟಗಳು ಏರ್ಪಟ್ಟಾಗ. ಆದರೆ “ತೆರೆ”ಯ ಮೇಲೆ ಕಾಣುವ ಪಾಠವನ್ನು ಅವರವರ ಗೋಡೆಗಳ ನಡುವೆ ಕುಳಿತು ನೋಡುವ ವಿದ್ಯಾರ್ಥಿಗಳಲ್ಲಿ ಈ ಬಗೆಯ ಕಲಿಕೆ ಸಾಧ್ಯವೇ? ಖಂಡಿತಕ್ಕೂ ಸಾಧ್ಯವಾಗದು. ಹಾಗೆಂದು ಸುಮ್ಮನಿರುವಂತೆಯೂ ಇಲ್ಲ.

ನೇರ ಶಿಕ್ಷಣಕ್ಕೆ ಬದಲಿಯಲ್ಲದಿದ್ದರೂ ಅದಕ್ಕೆ ಪೂರಕವಾಗಿ ಈ “ದೂರ ಶಿಕ್ಷಣವನ್ನು” ಕೊಡುವಂತಾಗಬೇಕು ಎಂಬ ಸಂಕಲ್ಪ ತೊಟ್ಟೆವು. ಇದರ ಜೊತೆಗೆ ಇನ್ನೊಂದು ಮಾನವೀಯ ಪ್ರಶ್ನೆಯೂ ನಮ್ಮನ್ನು ಅವಿರತವಾಗಿ ಕಾಡುತ್ತಿತ್ತು. ಅದು, ಅಂತರ್ಜಾಲ ಮತ್ತು ತಂತ್ರಜ್ಞಾನ ಈ ದೇಶದ ಹಲವರಿಗೆ ನಿಲುಕದು ಎಂಬ ವಾಸ್ತವ!

ಈ ಸಮಸ್ಯೆಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಯಾವ ಕಾರಣಕ್ಕೂ ಯಾವ ಮಗುವೂ ಶಿಕ್ಷಣದಿಂದ ವಂಚಿತನಾಗದಂತೆ ನೋಡಿಕೊಳ್ಳುವ ಬದ್ಧತೆಯನ್ನು ಹೊತ್ತುಕೊಂಡೇ ಈ ಪೂರಕ ವ್ಯವಸ್ಥೆಗೆ ನಾವು ಮುಂದಾಗಬೇಕಾಯಿತು. ಹಾಗೆಯೇ ಮಕ್ಕಳು ದಿನದ ಅತ್ಯಂತ ಕಡಿಮೆ  ಕಾಲ ಎಲೆಕ್ಟ್ರಾನಿಕ್ಸ್‌ ಸಾಧನವನ್ನು ಬಳಸುವಂತ ವ್ಯವಸ್ಥೆಯನ್ನು ಸಿದ್ಧ ಮಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು  ಎಂಬ ತೀರ್ಮಾನಕ್ಕೆ ಬಂದೆವು.

ಇಂತಹ “ಸ್ವಸಾಂತ್ವನ”ದ ಪ್ರಯತ್ನದೊಂದಿಗೆ ಗೂಗಲ್ ಸರ್ಚ್ ಮೂಲಕ “e- ಪ್ರಪಂಚ ಪ್ರದಕ್ಷಿಣೆ” ಪ್ರಾರಂಭವಾಯಿತು. ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಬಹುದಾದ ಎಲ್ಲ ತಾಣಗಳ ಬಾಗಿಲು ತಟ್ಟಿ, ಅಲ್ಲಿನ ಅಪಾರ ಸಾಧ್ಯತೆಗಳನ್ನು ಕಂಡು ಬೆರಗಾಗಿ ಹೋದೆವು. ಅಪರಿಮಿತ ಜ್ಣಾನ ಮೂಲಗಳ ಪತ್ತೆಯಾದದ್ದಷ್ಟೆ ಅಲ್ಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಸಹಾಯದಿಂದ “ಸತ್ಯ ಲೋಕಕ್ಕೆ” ಎದುರಾಗಿ “ಪ್ರತಿಲೋಕವನ್ನು” ಸೃಷ್ಟಿ ಮಾಡಬಹುದೆಂಬ ಭಯಂಕರ ಸತ್ಯವನ್ನು ತಿಳಿದು ದಂಗಾಗಿ ಹೋದೆವು.

ಇಷ್ಟು ಕಾಲ ಇಂತದ್ದೊಂದು ಜ್ಞಾನಲೋಕದ ಬಗೆಗೆ ಅಸಡ್ಡೆ ತೆಳೆದ ನಮ್ಮ‌ದು ಮೂರ್ಖತನವೇ ಎಂಬುದು ಇನ್ನೊಮ್ಮೆ ಖಾತ್ರಿಯಾಯ್ತು. ಅಯಾ ಶಾಲೆಗಳ ಸಾಮಾಜಿಕ, ಮಾನವಿಕ ಮತ್ತು ವೈಚಾರಿಕ ವಾತಾವರಣಕ್ಕೆ ಸರಿಹೊಂದುವ ವರ್ಚುವಲ್ ಭೂಮಿಕೆಯೊಂದನ್ನು ಆಯ್ದುಕೊಂಡು ತಾಂತ್ರಿಕ ಮಾಧ್ಯಮದ ಸಾಮರ್ಥ್ಯವನ್ನು ನಮ್ಮ ಅಗತ್ಯಕ್ಕೆ ಬೇಕಾದಂತೆ ದುಡಿಸಿಕೊಳ್ಳಲು ಸಾಧ್ಯವಾದರೆ ಒಂದು ಅದ್ಭುತ ಅನುಭವವನ್ನು ಮಕ್ಕಳಿಗೆ ಕೊಡುವುದು ಕಷ್ಟವಲ್ಲ ಎಂಬ ಸತ್ಯ ದರ್ಶನವಾಯ್ತು.

ಆದರೆ ಈ ತಾಂತ್ರಿಕ ಮಾಧ್ಯಮವನ್ನು ದುಡಿಸಿಕೊಳ್ಳುವ ನಾಯಕರಾದ ನಮ್ಮ ಶಿಕ್ಷಕರು ಇದಕ್ಕೆ ಸಿದ್ಧರಾಗಿದ್ದಾರೆಯೇ ಎಂಬುದು ತುಂಬಾ ಮುಖ್ಯವಾದ ಪ್ರಶ್ನೆ. ಶಿಕ್ಷಣದಲ್ಲಿ ತಂತ್ರಜ್ಞಾನ ಎಂಬುದನ್ನು ಮಾತಾಡುತ್ತಲೇ, ತಂತ್ರಜ್ಞಾನ ನಮ್ಮ ಪೀಳಿಗೆಯವರಿಗೆ ಅಲ್ಲ ಎಂದು ನೆಮ್ಮದಿಯಿಂದಿದ್ದ ನನ್ನಂತಹ ಎಷ್ಟೋ ಶಿಕ್ಷಕರಿಗೆ ಆನ್ಲೈನ್ ಶಿಕ್ಷಣದ ಕಲ್ಪನೆಯೇ ಹಲವು ದಿನಗಳ ಕಾಲ ನಿದ್ದೆಗೆಡಿಸಿತು. ಆದರೆ ಅನಿವಾರ್ಯತೆಯ ಒತ್ತಡ ಶಿಕ್ಷಕ ಸಮುದಾಯವನ್ನು ತಂತ್ರಜ್ಞಾನದ ವಿದ್ಯಾರ್ಥಿಗಳನ್ನಾಗಿಸಿತು.

ಬದುಕಿನ ಈ ಘಟ್ಟದಲ್ಲಿ ಒಂದು ಹೊಸ ಕಲಿಕೆಗೆ ಸಜ್ಜಾದ ಶಿಕ್ಷಕರ ಮಾನಸಿಕ ತುಮುಲದ ಕಥನಗಳು ಹೇಳಿಧಷ್ಟೂ ಮುಗಿಯದು. ಶಿಕ್ಷಕ ತರಬೇತಿ ತರಗತಿಗಳ ಪಾಠವಾಗಲೀ, ಅನೇಕ ವರ್ಷಗಳ ದಟ್ಟ ಅನುಭವವಾಗಿಲೀ ಈಗ ಕೆಲಸಕ್ಕೆ ಬರುತ್ತಿಲ್ಲ.ಇಷ್ಟರವರೆಗೆ ಕಂಡು ಕೇಳರಿಯದ ಹೊಸ ಮಾಧ್ಯಮದ ಮೂಲಕ ನಮ್ಮ ಕಣ್ಣಳತೆಗೆ ಕೂಗಳತೆಗೆ ಸಿಗದ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕೀಗ! ಇದಕ್ಕಾಗಿ ಶಿಕ್ಷಕರೇ ತಮ್ಮನ್ನ ಕಲಿಕೆಗೆ ಒಡ್ಡಿಕೊಳ್ಳಬೇಕಾದ ಪರಿಸ್ಥಿತಿ.

ಅದೂ ತಮಗಿಂತ ಕಿರಿಯರಾದ ಸಹೋದ್ಯೋಗಿಗಳಿಂದಲೋ, ವಿದ್ಯಾರ್ಥಿಗಳಿಂದಲೋ ಅಥವಾ ಸ್ವಂತ ಮಕ್ಕಳಿಂದಲೋ ಪಾಠ ಹೇಳಿಸಿಕೊಳ್ಳುವ ಸಂದರ್ಭ. ಇದು ಮಾತ್ರ ಎಲ್ಲಾ “ಉಪರಾಟೆ”, ತಲೆಕೆಳಗು ಆದ ಸನ್ನಿವೇಶ. ಶಿಕ್ಷಕರ್ಯಾರು, ವಿದ್ಯಾರ್ಥಿಗಳ್ಯಾರು ಎಂದು ಗೊತ್ತಾಗದಂತಹ ಪರಿಸ್ಥಿತಿ. “ನಾನಾಯ್ತು ನನ್ನ ಕೆಲಸವಾಯಿತು” ಎಂಬಂತೆ ಬಿಡಾರ ಬೇರೆ ಮಾಡಿಕೊಂಡಿದ್ದ ಶಿಕ್ಷಕರು ತಮ್ಮ ಎಲ್ಲ ಸ್ವಪ್ರತಿಷ್ಠೆ ಬಿಟ್ಟು ಎಲ್ಲರೊಂದಿಗೆ ಬೆರೆಯಬೇಕಾಯ್ತು.  

ತಂತ್ರಜ್ಞಾನದ ಹೊಸ ಹೊಸ ಕೌಶಲಗಳನ್ನು ಕರಗತ ಮಾಡಿಕೊಳ್ಳಲು, ಗುಂಪಿನಲ್ಲಿ ಚರ್ಚಿಸಿ ಪರಸ್ಪರರ ಸಹಕಾರವನ್ನು ಪಡೆಯಬೇಕಾಯಿತು. ಹೀಗೆ ಸಾಮಾಜಿಕ ಅಂತರ ಸೃಷ್ಟಿಸಿದ ಬಿಕ್ಕಟ್ಟು ಶಿಕ್ಷಕರ ನಡುವಿನ ಮಾನಸಿಕ ಅಂತರವನ್ನು ಕಿರಿದುಗೊಳಿಸಿದ್ದು ಈ ಹಂತದ ಒಂದು ಒಳ್ಳೆಯ ಬೆಳವಣಿಗೆ. ತಮ್ಮ e- ಕಲಿಕೆಯ ಪ್ರಗತಿ ನೀಡಿದ ತೃಪ್ತಿ, ಹೆಮ್ಮೆ ಅನೇಕ ಶಿಕ್ಷಕರ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು.

ಇಲ್ಲಿ ಬರೆ ತಂತ್ರಜ್ಞಾನದ ಬಳಕೆಯ ಕಲಿಕೆಯಷ್ಟೇ ಸಾಲದು. ಈ ಮಾಧ್ಯಮದ ಮೂಲಕ ಪಾಠ ಮಾಡುವ ಹೊಸ ಬಗೆಯನ್ನು ಆವಿಷ್ಕರಿಸಿಕೊಳ್ಳುವ ಸವಾಲು ಶಿಕ್ಷಕರೆದುರಿತ್ತು. ಶಿಕ್ಷಣ ತಜ್ಞರು ಈವರೆಗೆ ಹೇಳಿದ ಪಠ್ಯ ಯೋಜನೆ, 5Ess, ಫಾರ್ಮೆಟಿವ್ ಅಸೆಸ್ಮೆಂಟ್ ಮುಂತಾದ ಎಲ್ಲ ಪರಿಕಲ್ಪನೆಗಳನ್ನು ಹೊಸದಾಗಿ ನಿರ್ವಚಿಸಿಕೊಳ್ಳಬೇಕಾದ  ಹಚ್ಚ ಹೊಸ ಸಂದರ್ಭ ಇದು.

ಮಕ್ಕಳ ನಡವಳಿಕೆಗಳೂ ಪ್ರತಿಕ್ರಿಯೆಗಳೂ ಇಲ್ಲಿ ವಿಭಿನ್ನವಾಗಿರುವುದರಿಂದ ಮಕ್ಕಳ ಮನಃಶಾಸ್ತ್ರದ ವಿವರಣೆಯೂ ಮೊದಲಿನಂತಲ್ಲ ಈಗ. ಪಾಠ ಮಾಡುವುದೆಂದರೆ ಅದೊಂದು ಬರೆ ಕ್ರಿಯೆಯಲ್ಲ, ಮಕ್ಕಳ ವಿವಿಧ ಕ್ರಿಯೆಗಳಿಗೆ ಸಂವಾದಿಯಾಗಿ ನಡೆಯುವ ಪ್ರತಿಕ್ರಿಯೆಗಳೂ ಹೌದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕನ್ನಡಿಯ ಮುಂದೆ ನಿಂತು ಪಾಠ  ಮಾಡಿದಂತೆ ಏಕಮಖ ಸಂವಹನ ನಡೆಸುವುದು ಶಿಕ್ಷಕರ ಪಾಲಿಗೆ ಅಸಾಧ್ಯ ಕಿರಿಕಿರಿ ಉಂಟುಮಾಡಿತು.

ಈ ಹಂತದಲ್ಲಿ ಅಪಾರ  ಮಾನಸಿಕ ಒತ್ತಡ ಅನುಭವಿಸಿದ ಅನೇಕ ಶಿಕ್ಷಕರಿಗೆ ಆಪ್ತ ಸಮಾಲೋಚನೆಯ ಅಗತ್ಯವೂ ಕಂಡುಬಂತು.  ವರ್ಚುವಲ್ ಕ್ಲಾಸ್ ನ  ಅನೇಕ ಮಿತಿಗಳ ಜೊತೆಗೆ ವಿಶ್ವಮಟ್ಟದ ದೃಶ್ಯ- ಶ್ರಾವ್ಯ ಆಕರಗಳನ್ನು  ಬಳಸಿಕೊಳ್ಳುವ ಅಗಣಿತ ಸಾಧ್ಯತೆಯನ್ನು ಸಮತೂಗಿಸಿಕೊಂಡು ಹೋಗುವ ಸೃಜನಶೀಲತೆ  ಶಿಕ್ಷಕರಲ್ಲಿ ಇರದಿದ್ದರೆ ತರಗತಿಗಳು ಪರಿಣಾಮಕಾರಿಯಾಗಲಾರದು.

ಈ ಎಲ್ಲಾ ಎಡರು-ತೊಡರುಗಳನ್ನು ಅಪ್ಪಿಕೊಳ್ಳುತ್ತಲೇ ಹೊಸ ಮಾಧ್ಯಮದಲ್ಲಿ ಹೊಸ ಬಗೆಯಲ್ಲಿ ಮಕ್ಕಳ ”ಮನೆ-ಮನ” ಮುಟ್ಟುವ ಪ್ರಯತ್ನವನ್ನು ಶಿಕ್ಷಕರು ಪ್ರಾರಂಭಿಸಿಯೇಬಿಟ್ಟರು. 

ದೊಡ್ಡವರ ಹಾಗೆ ಪೂರ್ವಾಗ್ರಹವೇನನ್ನೂ ಮನಸ್ಸಿಗೆ ಆಂಟಿಸಿಕೊಂಡಿರದ ಮಕ್ಕಳು ನಾವು ಊಹಿಸಿದ್ದಕ್ಕೆ ವ್ಯತಿರಿಕ್ತವಾಗಿ ಈ online class ನ್ನು ಸಂಭ್ರಮದಿಂದಲೇ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಕಿರಿಯ ವಿದ್ಯಾರ್ಥಿಗಳೂ ಪಾಠಕ್ಕಾಗಿ ಕಾಯುತ್ತಿರುತ್ತಾರೆ  ಎಂಬುದು ಅತ್ಯಂತ ಸೋಜಿಗದ ವಿಷಯವಾಗಿದೆ.

ಆದರೆ ಹೊಸತನಕ್ಕೆ,ವೈವಿಧ್ಯತೆಗೆ  ಹಪಹಪಿಸುವ ಮಕ್ಕಳ ತುಡಿತವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ತರಗತಿಗಳನ್ನು ಯೋಜಿಸಿಕೊಳ್ಳದಿದ್ದಾಗ  ವಿದ್ಯಾರ್ಥಿಗಳು ಸಹಜವಾಗೆ  ಆಸಕ್ತಿ ಕಳೆದುಕೊಂಡು ಬಿಡುತ್ತಿದ್ದಾರೆ.  ಏಕೆಂದರೆ ಜೈವಿಕ ಸಾಂಗತ್ಯವಿರದ ಈ ತರಗತಿಗಳು ಬಹಳ ಬೇಗ ಏಕತಾನತೆಯಿಂದ ಸೊರಗಿಬಿಡುವುದು.  

ಇದೇ ಹೊತ್ತಲ್ಲಿ ಆನ್ಲೈನ್ ಸಾಧ್ಯತೆಗಳನ್ನು ಬಳಸಿಕೊಳ್ಳಲಾಗದ ಮಕ್ಕಳಿಗಾಗಿ ಮುದ್ರಣ ಮಾಧ್ಯಮದಿಂದ ದೂರಶಿಕ್ಷಣದ ಪ್ರಯತ್ನವನ್ನು ಮಾಡಲಾಯ್ತು. ರಕ್ಷಕರೊಂದಿಗೆ ಮಕ್ಕಳು ಬಂದರೆ ಶಾಲೆಯಲ್ಲೂ ಪಾಠದ ವ್ಯವಸ್ಥೆ ಮಾಡುವುದಕ್ಕೆ ತಯಾರಿ ಮಾಡಿಕೊಂಡೆವು. ಹೀಗೆ ಮಕ್ಕಳನ್ನು ತಲುಪಬಹುದಾದ ಎಲ್ಲ ದಾರಿಗಳ ಶೋಧನೆ ದಿನವೂ ನಡೆಯತೊಡಗಿತು.

ಭಾರತೀಯ ಜನ ವಿಜ್ಞಾನ ಸಮಿತಿಯ ಒಂದಿಷ್ಟು ಶಿಕ್ಷಕ ಮಿತ್ರರು “ವಠಾರ ಶಾಲೆ”  ಎಂಬ  ಪರಿಕಲ್ಪನೆ ರೂಪಿಸಿಕೊಂಡು ದೈಹಿಕ ಅಂತರ ಕಾಯ್ದುಕೊಂಡೆ ಮಕ್ಕಳಿಗೆ ನೇರಶಿಕ್ಷಣ ಕೊಡುವ ಪ್ರಯತ್ನಕ್ಕೆ ಚಾಲನೆ ನೀಡಿದರು . ಮಗು ತಾನಿರುವ ವಠಾರದಲ್ಲೇ ತನ್ನ ನೆರೆಹೊರೆಯ ಮಕ್ಕಳೊಂದಿಗೆ ಸ್ಥಳೀಯ ಶಿಕ್ಷಕರ ಮಾರ್ಗದರ್ಶನದಲ್ಲಿ  ಭಾಷಾ ಕಲಿಕೆ, ಸರಳ ವಿಜ್ಣಾನವನ್ನು ವಿವಿಧ ಚಟುವಟಿಕೆಗಳ ಮೂಲಕ ಕಲಿಯುವಂತಾಗಬೇಕೆಂಬುದು ಇವರ ಆಶಯ. ಸದ್ಯ ಶಿಕ್ಷಣ ಇಲಾಖೆ ಪ್ರಾರಂಭಿಸಿದ ವಿದ್ಯಾಗಮವೂ ಕೂಡ ವಠಾರ ಶಾಲೆಯಿಂದ ಸ್ಪೂರ್ತಿ ಪಡೆದ ಒಂದು ಅಭಿಯಾನವಾಗಿದೆ ಎಂಬುದು ಗಮನಾರ್ಹ.

ಈ ಎಲ್ಲ ದಾರಿಗಳೂ  ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿವೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಲಾಕ್ಡೌನ್ನಿಂದಾಗಿ ಸೃಷ್ಟಿಯಾಗಬಹುದಾಗಿದ್ದ  ಶಾಲೆ ಮತ್ತು ಮಕ್ಕಳ ನಡುವಿನ ಬಹುದೊಡ್ಡ ಅಂತರವನ್ನು ಈ ದೂರ ಶಿಕ್ಷಣ ಸ್ವಲ್ಪ ಮಟ್ಟಿಗೆ ಕಿರಿದಾಗಿಸಿದ್ದು ಸುಳ್ಳಲ್ಲ.  ಈಗ ನಮ್ಮ ಮುಂದಿರುವ ಸವಾಲುಗಳೆಂದರೆ ಮಕ್ಕಳ ಆಟ, ಹಾಡು, ಕುಣಿತದಂತಹ ಸಹಪಠ್ಯ ಚಟುವಟಿಕೆಗಳನ್ನು ಮಕ್ಕಳು ಮನೆಯಲ್ಲೇ ನಡೆಸುವಂತೆ ಅವರನ್ನು ಪ್ರೋತ್ಸಾಹಿಸುವುದು.

ಅವರ ದೈನಂದಿನ ದಿನಚರಿಯೆ ಏರುಪೇರಾಗಿರುವ ಈ ಹೊತ್ತು ಅವರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿರುವುದೂ  ಬಹಳ ಮುಖ್ಯ. ಸುಲಭದಲ್ಲಿ ವೀಡಿಯೋ ಗೇಮ್ಗಳ ಹಿಡಿತಕ್ಕೆ ಸಿಕ್ಕಿಬೀಳುತ್ತಿರುವ ಮಕ್ಕಳನ್ನು ಮತ್ತೆ ಹಳಿಗೆ ತರಬೇಕಾಗಿದೆ. ಇದಕ್ಕೆ ರಕ್ಷಕರನ್ನು ನಿರಂತರವಾಗಿ ಎಚ್ಚರಿಸುತ್ತಿರುವುದು ತುಂಬಾ ಮುಖ್ಯ. ತಮ್ಮ ಸ್ನೇಹಿತರು, ನಿಜದ ಆಟ-ಪಾಠ ಇವು ಯಾವುವೂ ಇಲ್ಲದೆ  ಸೊರಗಿಹೋಗುತ್ತಿರುವ ಮಕ್ಕಳ ಬಾಲ್ಯ ನಮ್ಮೆಲ್ಲರ ಆದ್ಯ ಕಾಳಜಿಯಾಗಬೇಕಿದೆ. 

ಮಕ್ಕಳು ಆದಷ್ಟು ಬೇಗ ಶಾಲೆಗೆ ಬರುವಂತಾಗಬೇಕು. ಆದರೆ ಆ ”ಶಾಲೆಯನ್ನು” ನಾವು ಪುನರ್ರೂಪಿಸಿಕೊಳ್ಳುವ ಅಗತ್ಯತೆ ಇದೆ. ಶಾಲೆ ಮತ್ತು ವಿದ್ಯಾರ್ಥಿಗಳ ನಡುವೆ ಅಂತರ ಬೆಳೆದ ಈ ಹೊತ್ತು ನಾವು ಕಲಿತ ಪಾಠ ಅನೇಕ ಸತ್ಯಗಳನ್ನು ನಮ್ಮ ಮುಂದಿಟ್ಟಿದೆ. ಈಗ ವಿದ್ಯಾರ್ಥಿಗಳಾಗಿ ಕಲಿಯುತ್ತಿರುವ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಅವರು ಬದುಕುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ.

ನಾವು ಈಗ  ಕಲಿಸುತ್ತಿರುವ ಅನೇಕ ಪಠ್ಯಾಂಶಗಳು ಅವರಿಗೆ ಆಗ ಅಗತ್ಯವೇ ಇರುವುದಿಲ್ಲ. ಏಕೆಂದರೆ ಅದೆಲ್ಲವೂ ಅವರ ಬೆರಳ ತುದಿಯಲ್ಲೇ ಅವರಿಗೆ ಮಾಹಿತಿಯಾಗಿ ಸಿಗುತ್ತಿರುತ್ತವೆ. ಹಾಗಾಗಿ  ಇಂತಹ ಮಾಹಿತಿ ವರ್ಗಾವಣೆಗೆ ನಾವು ಇಡೀ ವರ್ಷದ  ಶಾಲಾವಧಿಯನ್ನು ಮುಡಿಪಾಗಿಡಬೇಕೆ? ನಾವು ಹುಡುಕಿಕೊಂಡ ತಂತ್ರಜ್ಞಾನಾಧಾರಿತ ತರಗತಿಗಳು ಶಾಲೆಗೆ ಪೂರಕವಾಗಿ ಆ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡಿಬಿಡಬಹುದು.

ಹಾಗಾದರೆ ಶಾಲೆಯ ಕೆಲಸವೇನು? ಅಲ್ಲಿ ಒಂದಿಷ್ಟು ಚಟುವಟಿಕೆಗಳು ನಡೆಯಬೇಕು – ಚರ್ಚೆ, ರಂಗ ಸಂಬಂಧೀ ತರಗತಿಗಳು, ಕಲೆ, ಆಟ, ಓಟ ಪ್ರಾಯೋಗಿಕ ತರಗತಿಗಳು ಇತ್ಯಾದಿ. ಇವು ಮಕ್ಕಳ  ವಿಮರ್ಶಾತ್ಮಕ ಚಿಂತನೆಯಂತಹ ಅನೇಕ ಜೀವನ್ಮುಖಿ ಕೌಶಲಗಳನ್ನು ಬೆಳೆಸುತ್ತವೆ. ಮಾಹಿತಿಯಾಗಿ ದೊರೆತ ಪಾಠಗಳನ್ನು  ಪ್ರಯೋಗಾತ್ಮಕವಾಗಿ ಅರಿಯುವ ಉದ್ದೇಶಕ್ಕಾಗಿ ನಮ್ಮ ಶಾಲೆಗಳು ಸಮಾಜಶಾಸ್ತ್ರೀಯ ಪ್ರಯೋಗಾಲಯಗಳಾಗಬೇಕು.

ಪ್ರಯೋಗ,  ಅದರಿಂದ ಪಡೆದ  ಅನುಭವ, ಆ ಅನುಭವದ ವಿಶ್ಲೇಷಣೆ – ಇದು  ಒಂದು ಕಲಿಕಾ ವೃತ್ತವನ್ನು ಸಂಪೂರ್ಣಗೊಳಿಸುತ್ತದೆ.  ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದು ಅವರ ಸಮೃದ್ಧ ಬಾಲ್ಯ. ಹಾಗಾಗಿ ಶಾಲೆಗಳು “ ಬಾಲ್ಯದ ಆರೈಕೆ ಕೇಂದ್ರಗಳಾಗಿ” ಮಾರ್ಪಾಟಾಗ ಬೇಕಾಗಿರುವುದು ಇಂದಿನ ತುರ್ತು.

ಅಭಿಲಾಷಾ ಎಸ್ಪ್ರಾಂಶುಪಾಲರು ಮತ್ತು ಶೈಕ್ಷಣಿಕ ಚಿಂತಕರು. ರಂಗಕರ್ಮಿ, ಕವಯತ್ರಿ.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shreelatha Rao

    Nicely depicted article on current education scenarios in schools. I feel as if I am in the middle of an ocean sailing without any clue about which direction will take me to the shore. You can’t quit.
    What strategies are to be employed to bring in the desired changes in children keeping in mind their cognitive and emotional aspects. This is the question in front of us apart from the Board Exam….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This