ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಾ ನಾಗರಾಜ್ ಬರೆಯುವ ’ನಾರ್ಸಿಸ್’ ಕಥೆ

ತನ್ನ ಬಣ್ಣಿಸ ಬೇಡ

೧

ಶಾಂತಾ ನಾಗರಾಜ್

ಹಿಂದೆ ಗ್ರೀಕ್ ದೇಶದಲ್ಲಿ ’ನಾರ್ಸಿಸ್ ’ ಹೆಸರಿನ ಅತ್ಯಂತ ಚಲುವ ರಾಜಕುಮಾರನೊಬ್ಬ ಇದ್ದನಂತೆ. ಆತ ರಸ್ತೆಯಲ್ಲಿ ಹೋಗುತ್ತಿದ್ದರೆ ಜನ ತಾವು ಮಾಡುತ್ತಿದ್ದ ಕೆಲಸವನ್ನೂ ಮರೆತು, ತೆರೆದ ಬಾಯಿ ಬಿಟ್ಟುಕೊಂಡು ಅವನನ್ನೇ ನೋಡುತ್ತಾ ನಿಂತುಬಿಡುತ್ತಿದ್ದರಂತೆ. ನಾರ್ಸಿಸ್‍ಗೂ ತನ್ನ ಸೌಂದರ್ಯದ ಬಗ್ಗೆ ಇನ್ನಿಲ್ಲದ ಹೆಮ್ಮೆ, ಜೊತೆಗೆ ಅಹಂಕಾರ! ಒಮ್ಮೆ ಅವನು ಪ್ರಯಾಣ ಮಾಡಬೇಕಾದ ಸಂದರ್ಭ ಬಂತು. ಕಾಡಿನಲ್ಲಿ ಹೋಗುತ್ತಿರುವಾಗ ತುಂಬಾ ಬಾಯಾರಿಕೆಯಾಯಿತು. ಅಲ್ಲೇ ಇದ್ದ ಸಣ್ಣ ಕೊಳದಲ್ಲಿ ನೀರು ಕುಡಿಯಲು ಹೋದ. ನಿರ್ಮಲವಾಗಿದ್ದ ನೀರಿನಲ್ಲಿ ಇವನ ಪ್ರತಿಬಿಂಬ ಕಾಣಿಸಿತು. ತಕ್ಷಣ ಮೋಹಿತನಾಗಿ ಅದನ್ನು ಅಪ್ಪಿ ಮುದ್ದಾಡಲು ನೀರಿಗೆ ಧುಮುಕಿದ. ಅವನಿಗೆ ಈಜು ಬರುತ್ತಿರಲಿಲ್ಲವಾಗಿ ನೀರಿನಲ್ಲೇ ಪ್ರಾಣ ಬಿಟ್ಟ! ಈ ಕಥೆ ಕೇಳಿದರೆ ’ಅವನೆಂಥಾ ಪೆದ್ದ’ ಎನಿಸುತ್ತದೆ. ಆದರೆ ನಿಧಾನವಾಗಿ ಮತ್ತು ಆಳವಾಗಿ ಯೋಚಿಸಿದರೆ ನಮ್ಮ ಸುತ್ತಲೂ ’ನಾರ್ಸಿಸ್’ ನಂಥವರು ಸಿಗುತ್ತಾರೆ. ಇವರು ನಿಜವಾದ ಕೊಳದಲ್ಲಿ ಬಿದ್ದು ಸಾಯದಿರಬಹುದು, ಆದರೆ ಬದುಕೆಂಬ ಕೊಳದಲ್ಲಿ ಸುತ್ತಲಿನ ಸಂಬಂಧಗಳನ್ನು ತಮ್ಮದೇ ಒಣಜಂಭಗಳಿಂದ ನಿಭಾಯಿಸಲಾರದೇ ನೆರಳುತ್ತಾರೆ. ನಾರ್ಸಿಸ್ ಯಾವ ಶತಮಾನದಲ್ಲಿದ್ದನೋ ಗೊತ್ತಿಲ್ಲ, ಆದರೆ ಅವನ ಹೆಸರು ಈ ಶತಮಾನದಲ್ಲೂ ಮತ್ತು ಮುಂದೆಯೂ ಮನಶಾಸ್ತ್ರದಲ್ಲಿ ಅಜರಾಮರವಾಗಿ ಉಳಿಯುತ್ತದೆ. ತಮ್ಮನ್ನು ತಾವು ಅತಿಯಾಗಿ ಭಾವಿಸಿಕೊಂಡು , ಆತ್ಮಪ್ರಶಂಸೆ, ಸ್ವಮೋಹ ಇತ್ಯಾದಿ ಗುಣಗಳಿಂದ ತಮ್ಮ ಸುತ್ತಲಿನ ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲಾರದೇ ಒದ್ದಾಡುವ ವ್ಯಕ್ತಿತ್ವ ದೋಷವುಳ್ಳವರಿಗೆ ’ ನಾರ್ಸಿಸ್ಟಿಕ್ ಬಿಹೇವಿಯರ್ ಡಿಸಾರ್ಡರ್ ’ ಎನ್ನುತ್ತಾರೆ.
ಮಗುವಿಗೆ ಯಾವಾಗ ’ನಾನು’ ಎನ್ನುವ ಪರಿಕಲ್ಪನೆ ಮೂಡುತ್ತದೆಯೋ ಆಗ ಅದು ತನ್ನನ್ನು ತಾನು ಅತಿಯಾಗಿಯೇ ಪ್ರೀತಿಸಿಕೊಳ್ಳುತ್ತದೆ. ಇದು ಸಹಜ ಪ್ರವೃತ್ತಿ. ಮಗು ಬೆಳೆಯುತ್ತಾ ಬೆಳೆಯುತ್ತಾ ವ್ಯಕ್ತಿತ್ವವೂ ವಿಕಾಸವಾಗುತ್ತಾ ಹೋಗುತ್ತದೆ ಆಗ ಈ ನಾರ್ಸಿಸ್ ಸ್ವಭಾವ ಕಡಿಮೆಯಾಗುತ್ತಾ ಹೋಗಬೇಕು. ’ ಈ ಪ್ರಪಂಚದಲ್ಲಿರುವ ಅಸಂಖ್ಯಾತ ಮಾನವರಲ್ಲಿ ನಾನೂ ಒಬ್ಬ, ನನ್ನದೇನೂ ಹೆಚ್ಚಿಲ್ಲ, ನನಗಿಂತಾ ಹೆಚ್ಚು ಸಾಧನೆ ಮಾಡಿದವರು ಅನೇಕರಿದ್ದಾರೆ ’ ಎನ್ನುವ ವಿಶ್ವದೃಷ್ಟಿ ಬೆಳೆದಂತೆ ಈ ’ನಾನು’ ಎನ್ನುವುದು ತಗ್ಗುತ್ತದೆ. ಇದು ಸಹಜವಾಗಿ ಸಕಾರಾತ್ಮಕವಾಗಿ ತಗ್ಗಿದಾಗ, ’ ನಾನು ಏನಾದರೂ ಸಾಧಿಸಬಲ್ಲೆ’ ಎನ್ನುವ ಆತ್ಮವಿಶ್ವಾಸ ಮಾತ್ರ ಉಳಿದು, ’ ನಾನೇ ಸರ್ವಜ್~ಝ ’ ಎನ್ನುವ ಹುಂಬತನ ಮರೆಯಾಗುತ್ತದೆ. ಇದು ಯಾವ ವಯಸ್ಸಿಗೆ ಆಗುತ್ತದೆ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಏಕೆಂದರೆ ’ ವ್ಯಕ್ತಿತ್ವ ವಿಕಾಸ ’ ಒಬ್ಬೊಬ್ಬರಲ್ಲಿ ಒಂದೊಂದು ವಯಸ್ಸಿಗೆ ಪೂರ್ತಿಯಾಗಬಹುದು. ಅಥವಾ ಆಗದೆಯೂ ಇರಬಹುದಲ್ಲ? ಆಗಲೇ ಇಂಥಾ ವ್ಯಕ್ತಿತ್ವ ದೋಷಗಳು ಕಂಡುಬರುವುದು. ಸಾಧಾರಣವಾಗಿ ಪ್ರತಿ ಮನುಷ್ಯನೂ ಬುದ್ಧಿ ಬೆಳೆಯುವ ಹಂತದಿಂದ ೨೫ನೇ ವಯಸ್ಸಿನವರೆಗೆ ತನ್ನ ವ್ಯಕ್ತಿತ್ವದ ವಿಕಾಸದ ಹಂತದಲ್ಲಿ ಇರುತ್ತಾನೆ ಅಥವಾ ಇರುತ್ತಾಳೆ.
2
ಇದಕ್ಕೆ ಉತ್ತಮ ಉದಾಹರಣೆ. ಇಂದಿನ ಯುವ ಪೀಳಿಗೆಯ ’ಸೆಲ್ಫಿ ’ ಚಿತ್ರಗಳನ್ನು ಫ಼ೇಸ್‍ಬುಕ್ ಅಥವಾ ವ್ಯಾಟ್ಸ್ ಆಪ್‍ನಲ್ಲಿ ನೋಡಿ. ವಿವಿಧ ವಿಚಿತ್ರ ಮೂತಿಗಳನ್ನು ಮಾಡಿಕೊಂಡು ಸೆಲ್ಫ಼ಿ ತೆಗೆದು ತಮಗೆ ಬೇಕಾದವರಿಗೆ, ಬೇಡವಾದವರಿಗೂ ಕಳಿಸುತ್ತಿರುತ್ತಾರೆ. ಅಲ್ಲದೇ ಇದಕ್ಕೆ ’ಲೈಕ್ ಮತ್ತು ಕಾಮೆಂಟ್’ಗಳನ್ನೂ ನಿರೀಕ್ಷಿಸುತ್ತಿರುತ್ತಾರೆ! ಇದು ಒಂದು ಮಿತಿಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದೇ. ಏಕೆಂದರೆ ಇಂಥಾ ಚಟುವಟಿಕೆಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರೆ ಇದೇ ಅತಿಯಾದರೆ? ಇತ್ತೀಚೆಗೆ ಬಂದ ಸುದ್ದಿಯೇನೆಂದರೆ ಐದನೇ ತರಗತಿಯ ಹುಡುಗಿಯೊಬ್ಬಳು ತನ್ನ ಗೆಳತಿಯ ಸೆಲ್ಫ಼ಿಗೆ ೮೫ ಲೈಕ್ ಬಂತೆಂದೂ ತನಗೆ ಬರೇ ೨೫ ಬಂದಿದೆಯೆಂದೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳಂತೆ!! ಇದನ್ನೇನೋ ’ ಹುಡುಗ ಬುದ್ಧಿ ’ ಎಂದು ಕರೆದುಬಿಡಬಹುದು. ನನ್ನ ಹತ್ತಿರ ಬರುವ ೨೦ರ ತರುಣಿಯೊಬ್ಬಳಿಗೆ ಐವತ್ತರ ಹತ್ತಿರವಿರುವ ಸುಂದರಿಯಾದ ತನ್ನಮ್ಮನ ಸೆಲ್ಫ಼ಿಯಿಂದಲೇ ತನಗೆ ಕೀಳರಿಮೆಯುಂಟಾಗುತ್ತಿದೆ ಎನ್ನುತ್ತಾಳೆ! ಇದಕ್ಕೆ ಏನೆನ್ನೋಣ? ಆಕೆಯ ಅಮ್ಮ ಸುಂದರಿ. ಐವತ್ತರ ಹತ್ತಿರವಿದ್ದರೂ ಇಪ್ಪತ್ತೈದರಂತೆ ಕಾಣುವಹಾಗೆ ಶರೀರವನ್ನು ಹದದಲ್ಲಿಟ್ಟುಕೊಂಡಿದ್ದಾಳೆ. ತನ್ನ ಚಲುವಿನ ಬಗ್ಗೆ ಶರೀರದ ಹದದ ಬಗ್ಗೆ ವಿಪರೀತ ಹೆಮ್ಮೆಯಿದೆ. ಅದನ್ನು ಸೆಲ್ಫ಼ಿಯ ಮೂಲಕ ತನ್ನ ಪರಿಚಿತರೊಡನೆ ಹಂಚಿಕೊಳ್ಳುವುದೇ ಅವಳ ನಿತ್ಯದ ಉದ್ಯೋಗ! ಇದು ಕಪ್ಪಗೆ ಡುಮ್ಮಗಿರುವ ಮಗಳಿಗೆ ಕಿರಿಕಿರಿ. ಈ ಅಮ್ಮನ ’ನಾರ್ಸಿಸ್ಟಿಕ್ ಡಿಸಾರ್ಡರ್’ ಮಗಳ ಡಿಪ್ರೆಷನ್‍ಗೆ ಕಾರಣವಾಗಿದೆ. ಸೌಂದರ್ಯ, ಬಣ್ಣ, ತೆಳ್ಳಗಿನ ದೇಹ ಇವೆಲ್ಲಾ ಆನುವಂಶಿಕವಾಗಿ ಬರುವಂಥದು. ಸ್ವಲ್ಪ ಚೆನ್ನಾಗಿ ವ್ಯಾಯಾಮ ಮಾಡಿದವರಿಗೆ ಬೊಜ್ಜು ದೂರವೇ ಉಳಿದು ಬಳ್ಳಿಯಂಥಾ ಶರೀರ ಉಳಿಯುತ್ತದೆ. ಅದು ಅವರ ದೇಹದ ಆರೋಗ್ಯವನ್ನು ಕಾಪಾಡಬಹುದು. ಅದಕ್ಕೆ ಸಂತೋಷ ಪಡಲಿ. ಯಾರೂ ಬೇಡವೆನ್ನುವುದಿಲ್ಲ. ಆದರೆ ಇದನ್ನು ಹೀಗೆ ಪ್ರದರ್ಶಿಸಿಕೊಳ್ಳುವ ಅಗತ್ಯವಿದೆಯೇ? ಇದು ಪ್ರಶ್ನೆ. ಅದೂ ತಾರುಣ್ಯಕ್ಕೆ ಕಾಲಿಡುತ್ತಿರುವ ಮಕ್ಕಳ ಮುಂದೆ ಇಂಥಾ ಪ್ರದರ್ಶನ ಮಾಡಿಕೊಳ್ಳುವಾಗ ’ ನನ್ನ ಇಂಥಾ ನಡವಳಿಕೆ ನನ್ನದೇ ಮಕ್ಕಳ ಮನಸ್ಸಿನಲ್ಲಿ ಯಾವ ಭಾವ ಮೂಡಬಹುದು’ ಎನ್ನುವ ಎಚ್ಚರಿಕೆಯೂ ಅಗತ್ಯವಲ್ಲವೇ?
ಈ ನಾರ್ಸಿಸ್ಟಿಕ್ ದೋಷದ ಗರಿಷ್ಠ ಮಟ್ಟದ ನಡವಳಿಕೆಯನ್ನು ನಾನು ಮೊನ್ನೆ ನೋಡಿದೆ. ಈ ವಿಚಿತ್ರವನ್ನು ನನಗಿನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಪರಿಚಯದ ಸಂಗೀತ ಕಲಾವಿದರೊಬ್ಬರ ಮನೆಗೆ ಹೋಗಿದ್ದೆ. ಅವರು ಹೊಸದಾಗಿ ಮಹಡಿಯಲ್ಲಿ ಕಟ್ಟಿಸಿರುವ ಸಂಗೀತಾಭ್ಯಾಸದ ಸಭಾಂಗಣವನ್ನು ತೋರಿಸುವುದಾಗಿ ಹೆಮ್ಮೆಯಿಂದ ಕರೆದರು. ಮಹಡಿ ಹತ್ತಿ ಹೋದೆ. ಆ ಹಾಲ್‍ನಲ್ಲಿ ಕಾಲಿಟ್ಟ ಕೂಡಲೇ ತಲೆ ತಿರುಗಿ ಬೀಳುವ ಹಾಗಾಯಿತು!! ಏಕೆ ಗೊತ್ತೆ? ಅಲ್ಲಿ ಕಿಟಕಿ ಬಾಗಿಲುಗಳನ್ನು ಬಿಟ್ಟು ಉಳಿದ ಗೋಡೆಯ ತುಂಬಾ ನೆಲದಿಂದ ತಾರಸಿಯವರೆಗೆ ಈ ಕಲಾವಿದರ ವಿವಿಧ ಭಂಗಿಯ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಯಾವ ದಿಕ್ಕಿಗೆ ತಿರುಗಿದರೂ ಅವರದೇ ಚಿತ್ರ!!! ಅದೂ ಸಣ್ಣ ಪುಟ್ಟ ಗಾತ್ರದ್ದಲ್ಲ. ಆಳೆತ್ತೆರಕ್ಕಿಂತಾ ದೊಡ್ಡವು! ರಸ್ತೆಗಳಲ್ಲಿ ರಾಜಕಾರಣಿಗಳ, ಥಿಯೇಟರ್ ಮುಂದೆ ಸಿನಿಮಾ ನಟರ ಕಟ್‍ಔಟ್ ಹಾಕಿರುತ್ತಾರಲ್ಲ? ಅಂಥದ್ದು ಮನೆಯಲ್ಲಿ! ಅವರಿಗೆ ನಾರ್ಸಿಸ್ ವ್ಯಕ್ತಿತ್ವ ದೋಷವಿದೆಯೆಂದು ಗೊತ್ತಿತ್ತು. ಆದರೆ ಈ ಮಟ್ಟದಲ್ಲಿದೆಯೆಂದು ತಿಳಿದು ವ್ಯಥೆಯಾಯಿತು. ಪಾಪ!! ಈ ಭಾವಚಿತ್ರಗಳ ಗೊಂಡಾರಣ್ಯದ ನಡುವೆ ಕುಳಿತು ಸಂಗೀತ ಕಲಿಯುವ ಅವರ ಶಿಷ್ಯರನ್ನು ಆ ಭಗವಂತನೇ ಕಾಪಾಡಬೇಕು!!
ನಮ್ಮ ಸೆಂಟರಿಗೆ ಮಹಿಳೆಯೊಬ್ಬರು ಬರುತ್ತಾರೆ. ಅವರ ಗಂಡನ ನಡವಳಿಕೆ ಅವರಿಗೆ ಸಹಿಸಲಸಾಧ್ಯವಾಗಿದೆ. ಆತ ಇದುವರೆವಿಗೆ ೨೫ ಕಂಪನಿಗಳಿಂದ ಕೆಲಸ ಕಳೆದುಕೊಂಡಿದ್ದಾರೆ! ಉತ್ತಮ ವಾಗ್ಮಿಯಾದ ಅವರು ಯಾವುದೇ ಸಂದರ್ಶನಕ್ಕೆ ಹೋದರೂ ಮಾತಿನಲ್ಲಿ ಮರುಳು ಮಾಡಿ ಕೆಲಸ ಗಿಟ್ಟಿಸುತ್ತಾರೆ. ’ ಮಾರ್ಕೆಟಿಂಗ್ ಮ್ಯಾನೇಜರ್’ ಆಗಿ ಉದ್ಯೋಗ ಕೈಗೊಳ್ಳುತ್ತಾರೆ. ಒಂದಾರು ತಿಂಗಳು ಅಥವಾ ವರ್ಷದಲ್ಲಿ ಅಲ್ಲಿಂದ ಹೊರದಬ್ಬಿಸಿಕೊಳ್ಳುತ್ತಾರೆ. ಯಾವ ವಾಕ್‍ಶಕ್ತಿ ಆತನಿಗೆ ಕೆಲಸ ಕೊಡುತ್ತದೋ ಅದೇ ಅವರ ದೌರ್ಬಲ್ಯವೂ ಆಗಿ ಕೆಲಸ ಕಳೆಯುತ್ತದೆ. ಏಕೆಂದರೆ ಮಾರ್ಕೆಟಿಂಗ್ ಸಲುವಾಗಿ ಬೇರೆ ಬೇರೆ ಕಂಪನಿಗಳಿಗೆ ಹೋಗುವ ಆತ ಅಲ್ಲಿಯ ಜನ ಸ್ವಲ್ಪ ಪರಿಚಿತರಾದಂತೆ ತನ್ನನ್ನು ತಾನು ಹೊಗಳಿಕೊಳ್ಳಲು ಪ್ರಾರಂಭಿಸುತ್ತಾರೆ. ಅದೂ ಎಷ್ಟರ ಮಟ್ಟಿಗೆ ಎಂದರೆ ಕೇಳುವವರ ತಲೆ ಚಿಟ್ಟುಹಿಡಿಯುವಷ್ಟು!! ಒಂದು ಕಂಪನಿಯ ಮುಖ್ಯಸ್ಥರಂತೂ ಈತನ ಬಾಸ್‍ಗೆ ಫೋನ್ ಮಾಡಿ ” ಏನು ನೀವು ನಿಮ್ಮ ಕಂಪನಿಯ ಪ್ರಾಡೆಕ್ಟನ್ನು ಮಾರಾಟಕ್ಕಿಟ್ಟಿದ್ದೀರೋ ಅಥವಾ ನಿಮ್ಮ ಮಾರ್ಕೆಟಿಂಗ್ ಮ್ಯಾನೇಜರ್ ಅವರನ್ನೇ ಮಾರಾಟ ಮಾಡುತ್ತೀರೋ ” ಎಂದು ದಬಾಯಿಸಿ ಇನ್ನು ಮೇಲೆ ಇವರನ್ನು ಕಳಿಸಿದರೆ ನಾವು ನಿಮಗೆ ಯಾವ ಆರ್ಡರನ್ನೂ ಕೊಡುವುದಿಲ್ಲ ಎಂದರಂತೆ!!
ಇದೊಂದು ಗಂಭೀರವಾದ ನಡವಳಿಕೆಯ ವ್ಯಕ್ತಿತ್ವ ದೋಷ!! ಇಂಥವರು ನಮ್ಮ ನಿಮ್ಮ ನಡುವೆ ಬೇಕಾದಷ್ಟು ಜನರಿದ್ದಾರೆ. ನಾವು ಅವರಿಗೆ ’ ಕೊರೆಯಪ್ಪ, ಡ್ರಿಲ್ಲು, ’ ಇತ್ಯಾದಿ ಏನೇನೋ ಅಡ್ಡಹೆಸರಿಟ್ಟು ಹಿಂದೆ ಆಡಿಕೊಳ್ಳುತ್ತೇವೆ. ಇವರು ನಮಗೇ ಮೇಲಧಿಕಾರಿಯಾಗಿ ಬಿಟ್ಟರಂತೂ ’ ಹೇಗಪ್ಪಾ ಇವರೊಡನೆ ಏಗುವುದು’? ಎಂದು ಕೊರಗುತ್ತೇವೆ. ಏಕೆಂದರೆ ಈ ದೋಷವುಳ್ಳವರಿಗೆ ’ ತಾವು ಯಾವಾಗಲೂ ಸರಿ, ಉಳಿದವರು ಸರಿಯಿಲ್ಲ’ ಎನ್ನುವ ನಂಬಿಕೆ ಗಾಢವಾಗಿ ಬೇರೂರಿರುತ್ತದೆ! ಆದ್ದರಿಂದಲೇ ಇಂಥವರ ಜೊತೆ ಹೆಣಗುವುದು ಕಷ್ಟವೆಂದು ಭಾವಿಸುತ್ತೇವೆ. ಆದರೆ ಅದೊಂದು ’ವ್ಯಕ್ತಿತ್ವದೋಷ’ವೆಂದು ಅರಿಯದೇ ಹೋಗುತ್ತೇವೆ. ಇಂಥವರಿಗೆ ಬೇಕಾದಷ್ಟು ಥೆರಪಿಗಳಿವೆ. ಆಮೂಲಾಗ್ರವಾಗಿ ಅವರ ಚಿಂತನ ಕ್ರಮವನ್ನೇ ಬದಲಾಯಿಸಿಕೊಳ್ಳಲು ಮನೋವೈದ್ಯರು ’ಕಾಗ್ನೆಟೀವ್ ಬಿಹೇವಿಯರ್ ಥೆರಪಿ ’ ಮಾಡುತ್ತಾರೆ. ಆದರೆ ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವವರು ಯಾರು? “

‍ಲೇಖಕರು G

8 August, 2015

3 Comments

  1. Vijaya lakshmi S.P.

    ನಾರ್ಸೀಸ್ ಬಗೆಗಿನ ಈ ಲೇಖನ ಬಹಳ ಚೆನ್ನಾಗಿದೆ . ನಿಜಕ್ಕೂ ಇಂಥವರು ಅನೇಕ ಸಂಖ್ಯೆಯಲ್ಲಿ ಕಂಡುಬರುತ್ತಾರೆ . ಇದು ಅವರಿಗೂ ಒಳಿತಲ್ಲ , ಸಹಿಸಿಕೊಳ್ಳುವ ಇತರರಿಗೂ ಕಷ್ಟ ಎನ್ನುವ ಸಂಗತಿಯನ್ನು ವಿಶದವಾಗಿ ತಿಳಿಸಿರುವ ಲೇಖಕರಿಗೆ ವಂದನೆಗಳು . ಎಲ್ಲರೂ ತಿಳಿಯಬೇಕಾದ ಅಗತ್ಯ ಮಾಹಿತಿಯ ಲೇಖನ .

  2. oduga

    thumba chennaagide

  3. santu mandal

    nice article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading