ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಾಕುಮಾರಿ ಕವಿತೆ- ಬದುಕೆಂದರೆ…

ಶಾಂತಾಕುಮಾರಿ

ಬದುಕೆಂದರೆ, ಹುಲಿಯ ಬೇಟೆ
ಅಟ್ಟಾಡಿಸಿ ಹೊಡೆದು ಸಾಯಿಸುವುದು!
ಸತ್ತ ಹುಲಿಯ ಇಡಿಯಾಗಿ ಚರ್ಮಸುಲಿದು
ಅದರೊಳಗೆ ಹುಲ್ಲು ತುಂಬಿಸಿ ಹಜಾರದೊಳಗಿಟ್ಟು
ಹುಲಿಯ ಭ್ರಮೆ ಹುಟ್ಟಿಸಿ ಹೆದರಿಸುವುದು!!

ಬದುಕೆಂದರೆ, ಜಾತ್ರೆಯಲಿ ಕೊಂಡ ಬೊಂಬೆಗೆ
ಸೀರೆ ಉಡಿಸಿ ಬೊಟ್ಟಿಡಿಸಿ ಅಂದಗಾಣಿಸಿ
ನವರಾತ್ರಿಗೆ ಜೋಡಿಸಿ ಪ್ರದರ್ಶನಕ್ಕಿಟ್ಟು
ಮತ್ತೆ ಗಾಳಿ ಆಡದ ಹಾಗೆ ಸುತ್ತಿ ಟ್ರಂಕಿನಲ್ಲಿಟ್ಟು
ಮತ್ತೆ ರವರವವೆಂದು ನವರಾತ್ರಿಗೆ ಕಾಯುವುದು!!

ಬದುಕೆಂದರೆ, ಹಾರಿಸುವ ಗಾಳಿಪಟ
ಅತ್ತಿತ್ತ ಬಿದ್ದ ಕಾಗದದ ಚೂರು ಮುರಿದ ಕಡ್ಡಿ
ಹೆಕ್ಕಿ ತಂದು ಕತ್ತರಿಸಿ ಜೋಡಿಸಿ ಬಣ್ಣತುಂಬಿಸಿ
ಬಾಲಂಗೋಚಿ ಕಟ್ಟಿ ಹಾರಬಿಡುವುದು…
ವಿದ್ಯುತ್ ತಂತಿಗೆ ಸಿಲುಕಿದ್ದ ನೋಡಿ ನಲುಗುವುದು!!

ಬದುಕೆಂದರೆ, ರಚ್ಚೆ ಹಿಡಿದ ಮಗುವಿಗೆ
ರಸ್ತೆ ತಿರುವಿನಲಿ ನಿಂತ ಬಲೂನಿನವನ ತೋರಿಸಿ
ರಮಿಸುವುದು ಕೊಂಡ ಬಲೂನಿಗೆ ಗಾಳಿ ಊದಿ
ಕಣ್ಣಲ್ಲಿ ಆಸೆ ತುಂಬುವಾಗ ಪಟ್ ಎಂದು ಒಡೆದು
ಕೆನ್ನೆ ಮೇಲೆ ಜಾರಿದ ಕಂಬನಿಯ ಒರೆಸಿಕೊಳ್ಳುವುದು!!

ಬದುಕೆಂದರೆ, ಖಾಲಿ ಮನಸಿಗೆ ಕನಸ ತುಂಬುವುದು
ಬಿಳಿಯ ಬಟ್ಟೆಗೆ ಬಣ್ಣ ತುಂಬಿ ಚಿಟ್ಟೆ ಹಾರಿಬಿಡುವುದು
ಕಣ್ಣಕೊನೆಯಲ್ಲಿ ಹನಿ ಉಳಿಸಿ ನಗೆ ಅರಳಿಸುವುದು
ಹಸಿರ ಕೊನರಿಸಿ ಹೂಕಾಯಿ ಹಣ್ಣಾಗಿಸುವುದು
ಮಾಗಿ ಉದುರುವುದು ಉದುರಿ ಮಣ್ಣಾಗುವುದು!!

ಬದುಕೆಂದರೆ ಇಷ್ಟೇ ಕಣ್ಣಗಲಿಸಿ ನೋಡಿ ಕಣ್ಣತುಂಬಿ
ಕಣ್ಣು ಮುಚ್ಚುವುದು ಮಿಕ್ಕೆಲ್ಲ ಬರಿದೇ ಹುಚ್ಚೆನಿಸುವುದು!!

‍ಲೇಖಕರು Admin

10 October, 2022

1 Comment

  1. ನೂತನ ದೋಶೆಟ್ಟಿ

    ಶಾಂತಾ..ಬದುಕನ್ನು ಹೀಗೂ ನೋಡಬಹುದಲ್ವಾ..ಒಂದು ಖುಷಿ ಕೊಟ್ಟಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading