ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಲಾ ಭಂಡಿ ಕವಿತೆ: ಅಪ್ಪ ಹುಟ್ಟಿದ ದಿನಕೆ

“ಕರಾಗ್ರೇ ವಸತೇಲಕ್ಷ್ಮೀ”ಗುಣುಗುಡುತ ಅರಳಿದ ಬೆರಳ ನಡು ಹಸ್ತ ದಿಟ್ಟಿಸಿದೆ ಹಸ್ತದ ಚಿತ್ರದಲಿ ಅಮ್ಮಗೇನೋ ಸಡಗರವು ಇಲ್ಲವಂತವಳಿಗೆ ಪುರುಸೊತ್ತು ಆಡಲು ನಾಲ್ಕು ಹೆಚ್ಚುಳಿದ ಮಾತು ಕಾರಣವೇನಿಹುದು ಕಣ್ಣರಳಿ ಕೇಳಿದೆ ಅಮ್ಮ ನುಡಿಯುತ್ತಾಳೆ”ಏನಿಲ್ಲ ಬಿಡು..” ಮರುಪ್ರಶ್ನೆಯಡಿ ಮರೆಸಲೆತ್ನಿಸುತ್ತಾಳೆ “ಹೌದೇನೆ ಕವನವಿಹುದಂತೆ ‘ಕನ್ನಡಪ್ರಭ’ದಲ್ಲಿ! ಅಪ್ಪ ಓದಿಹರಂತೆ ನಾನೂ ಓದಿಬರಲೇನೇ?” ಪುನಃ ಪುಸಲಾಯಿಸೆ ಪುನರಾವರಿಪ ಪ್ರಶ್ನೆ ಆದರಮ್ಮನದು ಅದೇ ಉತ್ತರ “ಏನಿಲ್ಲ ಬಿಡು ಏನಿಲ್ಲ ಬಿಡು”

ದೇವನೆದುರು ನಾಲ್ಕೆಳೆ ಹೆಚ್ಚೇ ರಂಗೋಲೆ ತುಪ್ಪದ ದೀಪಗಳೇಕಿಂದು ಇಷ್ಟು ನಗಬೇಕು! ಗ್ಯಾಸೊಲೆಯೂ ಕೆಂಪಗೆ ನಲಿಯುತ್ತ ಬ್ಯುಸಿ ಅಡುಗೆ ಮನೆ ಹರಡಿ ಸಿಹಿಸಿಹಿ ಪರಿಮಳವು ಸಾರುತಿವೆಯಲ್ಲ ಸರ್ವ ಸಂಭ್ರಮವನ್ನು ಇನಿತು ಸುಳಿವ ನೀಡುತ್ತಿಲ್ಲಯಾರೂ ! ನನಗಿರದ ಸಂಭ್ರಮವು ಇವಕೆ ಏನು? ಅಮ್ಮನೆದುರಿಟ್ಟೆ ಹುಸಿಮುನಿಸನೊಂದಿಷ್ಟು ಅಮ್ಮ ನಕ್ಕಳು ಒಗಟ ಬಿಡಿಸಿಟ್ಟು “ಅವನೊಡನೆ ಅಲ್ಲವೇ ಆಡಿ ಬೆಳೆದದ್ದು! ಸೋದರ ಸೊಸೆ ನಾ ಸೊಸೆಯಾಗಿ ಬಂದದ್ದು ಹಾಗೇ ಕಣೇ ಅಂದವಗೆ ನಾ ಮಡದಿಯಾಗಿದ್ದು ಇಂದು ಶಿವರಾತ್ರಿ ಅವರು ಹುಟ್ಟಿದ ದಿನವು ಅದಕೇ ನೋಡು ನನಗಿಷ್ಟು ಸಂಭ್ರಮವು! ಇಟ್ಟೆ ದೇವಗೆ ಎರಡೆಳೆ ಜಾಸ್ತಿ ರಂಗೋಲೆ ದೀಪಕ್ಕಿಷ್ಟೇ ಇಷ್ಟು ಜಾಸ್ತಿ ತುಪ್ಪ ನಿನಗೊಂದಿಷ್ಟು ಬೇಡವೇ ಸಿಹಿಪಾಕ ಕೂಡ ಅವಗಾಗಿ ನಾನಿಷ್ಟೂ ನಗಬಾರದೇನೆ? ಇರು ಇಷ್ಟು ಕೆಲಸ ಜಾಸ್ತಿಯಿಹುದಿಂದು ಕೋರಿಬರುವೆನು ಬೇಗ ಶುಭಾಶಯವ “ನೆಂದು ಭರದಿ ನಡೆದಳು ಅಮ್ಮ ಅಪ್ಪನನ್ನರಸಿ ಅಮ್ಮ ನುಡಿಯುತಲಿರೆ ಅಲವತ್ತುಕೊಂಡೆ ಮರೆಯಿಸುವ ಮರೆವಿಗೆ ಮರುಗಿಕೊಂಡೆ “ಅಯ್ಯೋ ಅಪ್ಪಾ… ಕ್ಷಮಿಸಿಬಿಡಿ ಡೇಟುಗಳ ಕಾಲದಲಿ ತಿಥಿ ಲೆಕ್ಕದರಿವಿಲ್ಲ ತಿಥಿಲೆಕ್ಕವನು ನೀವು ಕಲಿಸಿಕೊಡಲೇ ಇಲ್ಲ ಇಗೊಳ್ಳಿ ಹುಟ್ಟುಹಬ್ಬಕೆ ಶುಭಾಶಯ ಬೊಗಸೆಯಿಂದ ವಾಪಸ್ಸು ಮುಷ್ಠಿ ಪ್ರೀತಿ ನೀವಿತ್ತಿದ್ದರಲ್ಲಿಯೇ ನಿಮಗಿಷ್ಟು ಇಗೊಳ್ಳಿ ಆ ಕೆನ್ನೆಗೂ ಮುತ್ತು ಕೊಡುವಿರಲ್ಲ ಅದರೊಳಗೆ ಒಂದು ವಾಪಸ್ಸು ?”]]>

‍ಲೇಖಕರು G

20 February, 2012

3 Comments

  1. Manjula

    Kavana Saralavagiddiroo chennagide

  2. Murthy

    nice one

  3. D.RAVI VARMA

    nimmalli obba kavanagarti saadaa echharaavastiyalliddale,nimma barha nanage tumbaa ista

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading