ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಶಿಭೂಷಣ ರಾಜು ಹೊಸ ಕವಿತೆ- ಯುದ್ಧಕಾವ್ಯ

ಎಂ.ವಿ. ಶಶಿಭೂಷಣ ರಾಜು

ಹೇಗೆ ಬರೆಯಲಿ ನಾ ಕವಿತೆಯ
ಅಲ್ಲೆಲ್ಲೋ ಜೀವಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ
ಅಕ್ಷರಗಳಂತೆ ದಿಕ್ಕುತಪ್ಪಿ ಹೋಗಿರಲು

ಇಲ್ಲಿ ಅಕ್ಷರಗಳನ್ನು ಪದಗಳನ್ನಾಗಿ ಪರಿವರ್ತಿಸಿದಂತೆ
ಸುಲಭವಲ್ಲ, ಪ್ರಾಣವನ್ನು ಕಾಪಾಡಿಕೊಳ್ಳುವುದು
ಅಕ್ಷರಗಳಿಗೆ ಜೀವ ತುಂಬಬಹುದೇನೋ
ಕ್ಷಣಮಾತ್ರದಲ್ಲಿ ಭಸ್ಮವಾಗಿ ಆವಿಯಾಗುವ ಆತ್ಮಗಳ ಹುಡುಕುವುದೆಂತು

ಖಾಲಿತನದಲಿ ಕವಿತೆ ಉಕ್ಕಿಬರುವುದು, ಆದರೆ
ತಲೆಮೇಲೆ ಬೀಳುತ್ತಿರುವ ಅಗ್ನಿಕುಂಡಗಳಿಂದ ತಪ್ಪಿಕೊಳ್ಳಲು
ತಪಿಸುತ್ತಿರುವಾಗಲಲ್ಲಾ
ಕಾಮುಕ ಸೈನ್ಯರಿಂದ ದೇಹವ ಬಚ್ಚಿಡಲು ಜಾಗ ಹುಡುಕುವಾಗಲಲ್ಲಾ
ತಲೆಕಡಿದಾಗ ಚಿಮ್ಮುವ ರಕುತದಿಂದ ಶಾಯಿ ಮಾಡಲಾಗುವುದಿಲ್ಲ
ರಮ್ಯತೆ, ವರ್ಣನೆ, ಅನುಭೂತಿ, ಅಲಂಕಾರಗಳೆಲ್ಲಾ
ಶೂನ್ಯ

ಅಕ್ಷರಗಳ ಹೆಕ್ಕಿ ಪೋಣಿಸಬಹದು ಒಂದು ಭಾವವಾಗಲು
ಆತ್ಮಗಳ ಪೋಣಿಸುವುದೆಂತು
ಪ್ರಾಣವಿರದ ದೇಹಗಳನ್ನೂ ಪ್ರದರ್ಶನಕ್ಕೆ ಇಟ್ಟಾಗ
ವಾಸುದೇವನೊಬ್ಬ ವಸ್ತ್ರ ಕಳಿಹಿಸಬಹುದಿತ್ತು
ಸ್ವಇಚ್ಛೆಯಿಂದ ಅಕ್ಕನಾಗಬಹುದು, ಬಲವಂತದಿಂದಲ್ಲ

ಏನೋ ಒಂದು ಬರೆಯಬೇಕು, ಕಾರಿಕೊಳ್ಳಲು ಮನವ
ಅಲ್ಲೆಲ್ಲೋ ಒದ್ದ ನೋವು ಇಲ್ಲಾಗಬೇಕು
ವಿಶ್ವದಲ್ಲೆಲ್ಲಿ ನೆತ್ತರು ಕಾರಿದರೂ, ಕರುಳು ಅರಿಯಬೇಕು
ತನ್ನಪಾಡಿಗೆ ಇರುವ ದೇವರನು
ನಾವೇ ತಟ್ಟಿ ಎಬ್ಬಿಸಬೇಕು

ಅಕ್ಷರಗಳೆಲ್ಲಾ ನಮ್ಮವೇ, ಸೃಜಿಸಬಹದು ಯುದ್ಧಕಾವ್ಯ ಅಥವಾ ಪ್ರೇಮಕಾವ್ಯ
ಜೀವಿಗಳೆಲ್ಲಾ ನಮ್ಮವೇ, ಪ್ರೀತಿಸಬಹದು ಅಥವಾ ದ್ವೇಷಿಸಬಹುದು
ಆದರೆ
ಎದೆ ಬಯಸುವುದು ಪ್ರೀತಿಯೊಂದನೆ
ಯುದ್ಧವಿರುವಡೆ ಪ್ರೇಮವಿಲ್ಲ, ಗೆಲುವೂ ಇಲ್ಲ  
ಪ್ರೀತಿಗೆ ಗೆಲುವೊಂದೇ ಗೊತ್ತು

‍ಲೇಖಕರು avadhi

25 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading