‘ಮದ್ಯಸಾರ’ ನಮ್ಮೆಲ್ಲರ ಮನವನ್ನು ಸೂರೆಗೊಂಡಿತ್ತು . ಹೃದಯವನ್ನೂ ಒಂದಷ್ಟು ಒದ್ದೆ ಮಾಡಿತ್ತು. ಆದರೆ ಏಕೋ ಅಪಾರ ಇನ್ನು ನಾನು ಮದ್ಯಸಾರದ ಜೊತೆಗಿಲ್ಲ ಎಂಬಂತೆ ಎದ್ದು ಹೋಗಿಬಿಟ್ಟರು. ಒಂದು ನಿಟ್ಟುಸಿರು ಹೊರ ಬೀಳುವ ವೇಳೆಗೆ ಈಗ ‘ಶಪಿತನ ಹಾಡಿ’ನೊಂದಿಗೆ ವಾಪಸಾಗಿದ್ದಾರೆ. ಕವಿತೆಯನ್ನು ಯಾರೂ ಬೇಕಾದರೂ ಬಿಟ್ಟು ಹೋಗಬಹುದು ಆದರೆ ಕವಿತೆ ಬಿಡಬೇಕಲ್ಲ. ‘ಸಂಸ್ಕಾರ’ದ ನಾರಣಪ್ಪನಂತೆ..ಅಪಾರ ವೆಲ್ ಕಮ್ ..
1
ದಣಿವಾಯಿತೆಂದು ಕೂತಿರುವೆ
ಈ ಊರು ನಂದಲ್ಲ
ಸ್ವಂತ ಊರು ಸ್ವಂತ ಮನೆ
ಸೋತವನಿಗೆ ಹೊಂದಲ್ಲ
2
ಮೂರು ದಾರಿ ಕೂಡುವಲಿ ಯಾರೊ
ನನ್ನ ಸರ್ವಸ್ವವನೂ ಕದ್ದರು
ಗೆಳೆಯಾ, ಆಗಲೂ ಈ ಜಗದಲಿ
ಮುಕ್ಕೋಟಿ ದೇವರುಗಳು ಇದ್ದರು
ನೀನು ವಂಚಿಸುತಿರುವುದರ ಅರಿವು
ನನಗಿಲ್ಲ ಎಂದಲ್ಲ
ಸದಾ ಎಚ್ಚರಿಕೆಯಿಂದಿದ್ದು ನನಗೂ
ಸಾಕುಸಾಕಾಗಿದೆಯಲ್ಲ
4
ಮಾಡದ ತಪ್ಪಿಗೆ ಕಲ್ಲಾಗಿ ಹೋಗಿರುವೆ
ಗಂಧರ್ವನಲ್ಲ ಸಾಧಾರಣ ಶಪಿತ
ಕಲ್ಲಾದುದಕೆ ಉಳಿದಿರುವೆ ಇಲ್ಲಾದರುಂಟೆ
ವಿಮೋಚನೆ ಬೇಡ ಇದೇ ನನಗೆ ಬಲುಹಿತ
ಇದೇ ಈ ಬೀದಿಯಿಂದ ಒಂದು ದಿನ ಎದ್ದು
ಬಿದ್ದು ಕುದ್ದು, ರಾತ್ರಿಗೂ ಅದನೆ ಹೊದ್ದು
ಅರಳಿದರೂ ಬೆನ್ನ ತುಂಬ ಬೀದಿಹೋಕರ ಗುದ್ದು
ಈ ಹಾಳು ಬೀದಿ ಮೇಲೇಕೊ ನಂಗೆ ಮುದ್ದು
ನೀನೊಂದು ನೆಪಮಾತ್ರ
ನನ್ನ ಹಣೆಯಲೆ ಇದೆ ಶಾಪ
ನೀನಲ್ಲದಿದ್ದರೆ ಇನ್ನೊಬ್ಬರು ಅಳಿಸುತಿದ್ದರು
ನಿನ್ನ ಮೇಲೇಕೆ ನನಗೆ ಕೋಪ
7
ಸೋಲೇ ನನ್ನ ಹಣೆಬರಹವೇನಲ್ಲ
ಒಮ್ಮೊಮ್ಮೆ ನಾನೂ ಗೆಲ್ಲುವುದುಂಟು
ಇವತ್ತು ಮತ್ತೆ ಪಿಕ್ ಪಾಕೆಟ್ ಆಯ್ತು ಬಸ್ಸಲ್ಲಿ
ಒಂದು ಬಿಡಿಗಾಸೂ ಇರಲಿಲ್ಲ ಪರ್ಸಲ್ಲಿ






Apara,
Just loved the poems. It’s wonderful tha way you take them, the way they flow in their own effortless manner. Will look forward for more!!
-Tina