ಕೆ ನಲ್ಲತಂಬಿ ಅನುವಾದ ಸರಣಿ- ಸಾಂಚಿಯನ್ನು ಆಳಿದ ಅಶೋಕ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

20

ಬ್ರಾಹ್ಮಿ ಎಡದಿಂದ ಬಲ ಪಕ್ಕ ಬರೆಯುವ ಲಿಪಿಯ ಪದ್ಧತಿ. ವ್ಯಂಜನಗಳಿಗೆ ಪ್ರತ್ಯೇಕ ಆಕಾರಗಳೂ, ಸ್ವರಗಳಿಗೆ ಪ್ರತ್ಯೇಕ ಆಕಾರಗಳೂ ಇವೆ.  ವ್ಯಂಜನಗಳ ಮೇಲೆ ಸ್ವರ ಬರೆದು ಸಂಯುಕ್ತಾಕ್ಷರಗಳನ್ನು  ಬರೆದರು. ಸಂಧಿ ಅಕ್ಷರಗಳನ್ನು ಬರೆಯುವಾಗ ಒಂದು ಲಿಪಿಯ ಕೆಳಗಿ ಮತ್ತೊಂದು ಲಿಪಿಯನ್ನು ಇಡಲಾಗುತ್ತದೆ. 

ಐರಾವತಮ್ ಮಹಾದೇವನ್ ಮುಂತಾದ ಪುರಾತತ್ವ ಶಾಸ್ತ್ರಜ್ಞರು, ತಮಿಳು ಬ್ರಾಹ್ಮಿಯಿಂದಲೇ ಅಶೋಕನ ಬ್ರಾಹ್ಮಿ ತೋರಿರಬಹುದು ಎಂಬ ಅಭಿಪ್ರಾಯವನ್ನು ಮುಂದಿಡುತ್ತಾರೆ. ಅಶೋಕನ ಬ್ರಾಹ್ಮಿಯಂತೆ, ತಮಿಳು ಬ್ರಾಹ್ಮಿಯಲ್ಲಿ ಕೂಡಕ್ಷರಗಳು ಇಲ್ಲ. ಅಶೋಕನ ಬ್ರಾಹ್ಮಿಯಲ್ಲಿ ಕಾಣದ ற, ன, ள, ழ ಇವು ತಮಿಳಿನ ವಿಶೇಷ ಅಕ್ಷರಗಳು. ಈ ನಾಲ್ಕು ಅಕ್ಷರಗಳು ಅಶೋಕನ ಬ್ರಾಹ್ಮಿಯನ್ನು ತಮಿಳು ಬ್ರಾಹ್ಮಿಯನ್ನು ವ್ಯತ್ಯಾಸ ಕಾಣಲು ನೆರವಾಗುತ್ತದೆ. ತಮಿಳು ಬ್ರಾಹ್ಮಿ ಅಕ್ಷರಗಳು ಅಶೋಕನ ಬ್ರಾಹ್ಮಿಗೆ ಮೊದಲೇ ಕಿ.ಪೂ. ಐದನೇಯ ಶತಮಾನಕ್ಕೆ ಸೇರಿರಬಹುದು ಎಂಬ ಅಭಿಪ್ರಾಯ ಒಂದನ್ನು ಮುಂದಿಡಲಾಗುತ್ತದೆ. 

ಪುರಾತನ ಕಳಿಂಗ ಎಂಬುದು ಇಂದಿನ ಒಡಿಸ್ಸಾ, ಆಂಧ್ರ ಮುಂತಾದ ರಾಜ್ಯಗಳ ಪ್ರದೇಶಗಳನ್ನು ಒಳಗೊಂಡದ್ದು. ಕುಲೋತ್ತುಂಗ ಎಂಬ ಚೋಳ ರಾಜ ಕಾಂಚಿಯನ್ನು ಆಳಿದಾಗ, ಅನಂತವರ್ಮ ಎಂಬ, ಕಳಿಂಗದ ರಾಜ ತೆರಿಗೆ ಕೊಡದಿರುವಾಗ, ಅವನ ಮೇಲೆ ಮೊದಲನೇಯ ಕುಲೋತ್ತುಂಗನ ಸೈನ್ಯದ ದಳಪತಿಯೂ, ಮಂತ್ರಿಯೂ ಆದ ಕರುಣಾಕರ ತೊಂಡಮಾನ್, ಕಿ.ಪೂ. 1112ರಲ್ಲಿ ದಾಳಿ ಮಾಡಿ ಕಳಿಂಗವನ್ನು ಗೆದ್ದ ಸುದ್ದಿ ಜಯಂಗೊಂಡಾರ್ ರಚಿಸಿದ ‘ಕಳಿಂಗತ್ತುಪ್ಪರಣಿ’ ಹೇಳುತ್ತದೆ. 

ಆ ಕಾಲದಲ್ಲಿ ಒಡಿಸ್ಸಾವನ್ನು ಕಾರವೇಳರು ಆಳುತ್ತಿದ್ದರು. ಅವರ ‘ಹದಿಕುಂಬ’ ಶಿಲಾಶಾಸನದಲ್ಲಿ ‘ತಮಿಳಗಂ’ ರಾಜರ ಬಗ್ಗೆ ಉಲ್ಲೇಖಗಳಿವೆ. ಒಡಿಸ್ಸಾದಲ್ಲಿ ಕಳಿಂಗತ್ತುಪ್ಪರಣಿಗೆ ವಿರೋದ ರೂಪದಂತೆ, ಕಾಂಚಿಯನ್ನು ಕಳಿಂಗ ಗೆದ್ದ ಕಥೆಯನ್ನು ನೃತ್ಯ ನಾಟಕವಾಗಿ ಆಡುತ್ತಾರೆ. ಇದು ಪ್ರತಿ ವರ್ಷ ಧೌಲಿಯಲ್ಲಿ ನಡೆಯುವ ಕಳಿಂಗ ಮಹೋತ್ಸವದಲ್ಲಿ ನಡೆಯುತ್ತದೆ. ಅಶೋಕನ ಕಾಲದಲ್ಲಿ ಒಂಭತ್ತು ಜನ ಇರುವ ಒಂದು ರಹಸ್ಯ ಪಡೆ ಇತ್ತು. (Nine Unknown Men) ಅವರೊಬ್ಬಬ್ಬರೂ ಒಂದು ಕಲೆಯಲ್ಲಿ ನಿಪುಣರು. ಒಂಭತ್ತು ಜನರೂ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು.

ಅಶೋಕನ ರಹಸ್ಯ ಸಂಘದ ಕೆಲಸ, ಭಾರತದ ಪಾರಂಪರಿಯ ಸಂಪ್ರದಾಯವನ್ನು ಜ್ಞಾನವನ್ನೂ ಕಾಪಾಡಿ ಭವಿಷ್ಯದ ತಲೆಮಾರಿಗೆ ತಲುಪಿಸುವುದು ಎಂಬ ಕಥೆ ಬಹಳ ಕಾಲದಿಂದ ಇದೆ. ಹೀಗೊಂದು ಗುಟ್ಟಾದ ಸಂಘ ಇದ್ದದ್ದಕ್ಕೆ ಯಾವ ಇತಿಹಾಸದ ಕುರುಹುಗಳು ಇಲ್ಲಿಯವರೆಗೆ ಸಿಗಲಿಲ್ಲ. ಆದರೇ, ಅದನ್ನು ಊದಿ ದೊಡ್ಡದು ಮಾಡಿ ಅನೇಕ ಸಾಹಸ ಕತೆಗಳೂ, ಸಾಹಸ ಕಾದಂಬರಿಗಳೂ ಬರೆಯಲಾಗಿದೆ. 

ಅಶೋಕನ ಜೀವನವ ಕುರಿತು ನೇರವಾದ ಪುರಾವೆಗಳು ಕಡಿಮೆಯಾಗಿ ಇವೆ. ತಂದೆ ಬಿಂದುಸಾರ ಆಡಳಿತದಲ್ಲಿದ್ದಾಗ, ತಕ್ಷಶಿಲ, ಉಜ್ಜಯಿನಿ ಮುಂತಾದ ಪ್ರದೇಶಗಳ ಆಡಳಿತ ಅಧಿಕಾರಿಯಾಗಿ ಅಶೋಕನನ್ನು ನೇಮಕಮಾಡಲಾಯಿತು. ಅಶೋಕ ಮಾಹಾದೇವಿ ಎಂಬ ವ್ಯಾಪಾರಿಯ ಮಗಳನ್ನು ಮದುವೆಯಾಗಿ, ಮಹೇಂದ್ರ, ಸಂಗಮಿತ್ರೆ ಎಂಬ ಮಕ್ಕಳಿಗೆ ತಂದೆಯಾದನು. ಅವರನ್ನು ಮುಂದೆ ಬುದ್ಧ ಮತ ಪ್ರಚಾರಕ್ಕಾಗಿ ಶ್ರೀಲಂಕೆಗೆ ಕಳುಹಿಸಲಾಯಿತು. ಬಿಂದುಸಾರನ ಸಾವಿನ ನಂತರ, ಕ್ರಿ .ಪೂ. 273ನೇಯ ಇಸವಿಯಲ್ಲಿ ಅಶೋಕ ಸಿಂಹಾಸನ ಹತ್ತಿದನು. ಆಡಳಿತಕ್ಕೆ ಬಂದು ನಾಲ್ಕು ವರ್ಷಗಳ ತರುವಾಯವೇ ಪಟ್ಟಾಭಿಷೇಕ ನಡೆಯಿತು.

ಅಶೋಕನ ಶಿಲಾಶಾಸನಗಳ ಉಲ್ಲೇಖಗಳಿಂದ, ಅವನ ಸಾಮ್ರಾಜ್ಯ ಪಶ್ಚಿಮಕ್ಕೆ ಕುಶ್ ಪರ್ವತ ಶ್ರೇಣಿಯಿಂದ ಹಿಡಿದು ಪೂರ್ವಕ್ಕೆ ಬ್ರಹ್ಮಪುತ್ರ ನದಿಯವರೆಗೂ, ಉತ್ತರಕ್ಕೆ ಹಿಮಾಲಯದ ತಪ್ಪಲಿನಿಂದ ಹಿಡಿದು, ದಕ್ಷಿಣಕ್ಕೆ ಮದರಾಸಿನವರೆಗೂ ಹರಡಿತ್ತು ಎಂಬುದು ತಿಳಿಯ ಬರುತ್ತದೆ. ಮೊಗಲ್ ಸಾಮ್ರಾಟರುಗಳಾದ ಅಕ್ಬರ್, ಬಾಬರ್ ಸಹ ಇಷ್ಟು ದೊಡ್ಡ ಭೂಪ್ರದೇಶವನ್ನು ಆಳಿರಲಿಲ್ಲ. ತನ್ನ ಭೂಪ್ರದೇಶವನ್ನು ಐದು ಪ್ರದೇಶಗಳಾಗಿ ವಿಂಗಡಿಸಿ ಅವಕ್ಕೆ ತಕ್ಷಶಿಲಾ, ಉಜ್ಜಯನಿ, ಸ್ವರ್ಣಗಿರಿ, ತೋಶಾಯಿ, ಪಾಟಲೀಪುತ್ರ ಎಂಬ ರಾಜಧಾನಿಗಳನ್ನು ನಿರ್ಮಾಣ ಮಾಡಿದ್ದನು. 

ಅಶೋಕನ ಕಾಲದಲ್ಲಿ ಯಾವ ಕೆಲಸವನ್ನು ಯಾರು ಮಾಡುವುದು? ಅದನ್ನು ಹೇಗೆ ಮೇಲ್ವಿಚಾರಣೆ ಮಾಡುವುದು? ಪ್ರಜೆಗಳಿಗಾದ ಯೋಜನೆಗಳನ್ನು ಹೇಗೆ ಕಾರ್ಯ ರೂಪಕ್ಕೆ ತರುವುದು? ಎಂಬುದನ್ನು ವಿಂಗಡಿಸಿದ್ದಾರೆ. ಆಡಳಿತ ಶಾಸ್ತ್ರಕ್ಕೆ ಅಶೋಕನೇ ಮುಂಚೂಣಿಯಲ್ಲಿರುವ ಸಾಧಕ. 

ಅಶೋಕ ಎರಡು ನೀತಿಗಳಿಗೆ ಪ್ರಾಮುಖ್ಯತೆ ನೀಡಿದ್ದಾನೆ. ಒಂದು ಸಾಮಾಜಿಕ ನೀತಿ – ಇದನ್ನು ಪ್ರಜೆಗಳೂ, ರಾಜ್ಯವೂ, ಅಧಿಕಾರಿಗಳೂ ಪಾಲಿಸಬೇಕಾಗಿರುವುದು. ಮತ್ತೊಂದು ವ್ಯಕ್ತಿ ನೀತಿ – ಇದನ್ನು ಪ್ರತಿ ಮನುಷ್ಯನೂ ಪಾಲಿಸಬೇಕಾಗಿರುವುದು. ಅದರಲ್ಲಿ, ಒಳ್ಳೆಯ ನಡತೆ, ಸತ್ಯ, ಸ್ವಚ್ಛತೆ, ಸಹ ಜೀವಗಳನ್ನು ಪ್ರೀತಿಸುವುದು, ಸಹನೆ, ಮಹಿಳಾ ಶಿಕ್ಷಣ, ಸತ್ಯವನ್ನು ಮುನ್ನಡೆಸುವುದು, ಕ್ರಮವಾದ ನೀರಾವರಿ ಹಂಚಿಕೆ ಮುಂತಾದವು ಸೇರುತ್ತದೆ. ಈ ಎರಡೂ ನೀತಿಗಳು ಒಂದಕ್ಕೊಂದು ಪೂರಕವಾಗಿರಬೇಕು. ಆಗಲೇ, ಒಂದು ಒಳ್ಳೆಯ ಆಡಳಿತ ಸಾಧ್ಯ ಎಂದ ಅಶೋಕ, ತನ್ನ ಪಕ್ಕದ ರಾಜ್ಯಗಳು ತನ್ನನ್ನು ನೋಡಿ ಭಯಪಡಬೇಕಾಗಿಲ್ಲ, ಅವರ ಸಂತೋಷವನ್ನು ನಾನು ಎಂದಿಗೂ ಕೆಡಿಸುವುದಿಲ್ಲ ಎಂದೂ ಒಂದು ಶಿಲಾಶಾಸನ ಬರೆದಿಟ್ಟಿದ್ದಾನೆ. 

ಅಶೋಕನ ಶಿಲಾಶಾಸನಗಳ ಬರಹಗಳನ್ನು ಜೀವನ ಪರ್ಯಂತ ಮನುಷ್ಯರು ಪಾಲಿಸಬೇಕಾದ ಮೂಲಭೂತ ನೀತಿಗಳು. ಇಂದು ಅಶೋಕನ ಶಿಲಾಶಾಸನಗಳಿರುವ ಬಂಡೆಗಳ ಮೇಲೆ ಪ್ರೇಮಿಗಳು ತಮ್ಮ ಹೆಸರನ್ನು ಹಿಂದಿ, ಇಂಗ್ಲೀಷಿನಲ್ಲಿ ಕೆತ್ತಿಟ್ಟಿದ್ದಾರೆ. ಕೆಲವು ಕಡೆ ಗಾಜಿನ ಗೋಡೆಗಳನ್ನು ನೀರ್ಮಾಣಿಸಿ ಅಶೋಕನ ಶಿಲಾಶಾಸನಗಳನ್ನು ಕಾಪಾಡಲಾಗಿದೆ. 2000 ವರ್ಷಗಳನ್ನು ದಾಟಿ ಬಂದ ಶಿಲಾಶಾಸನಗಳನ್ನು ನಿಂತು ಓದಿ ಹೋಗಲು ಯಾರಿಗೂ ಆಸಕ್ತಿ ಇಲ್ಲ. ಧೌಲಿಗೆ ಬರುವ ಪ್ರವಾಸಿಗರು, ಶಿಲಾಶಾಸನದ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವದಷ್ಟಕ್ಕೆ ಮುಗಿಯುತ್ತದೆ. 

ದಯಾ ನದಿ ಬೆಟ್ಟದ ಹಿಂದೆ ಹರಿಯುತ್ತದೆ. ಅದು ಒಂದು ಕಾಲದಲ್ಲಿ ದೊಡ್ಡ ನದಿಯಾಗಿ ಇದ್ದಿರಬೇಕು. ಇಂದೂ ಅದರ ವಿಶಾಲವಾದ ತೀರದಲ್ಲಿ ನೀರು ಉಕ್ಕಿ ಹರಿಯುತ್ತಲೇ ಇದೆ. ಜಪಾನ್ ಸರಕಾರ ಬುದ್ಧನ ನೆನಪಾಗಿ ಇಲ್ಲಿ ಒಂದು ಶಾಂತಿ ಸ್ತೂಪವನ್ನು ನಿರ್ಮಾಣಿಸಿದೆ. ಜಪಾನೀಯ ಬಿಕ್ಕುಗಳೂ ಅದಕ್ಕೆ ಜತೆಯಾಗಿದ್ದಾರೆ. 

ಅಶೋಕನಿಗೆ ಕಲೆಗಳ ಬಗ್ಗೆ ತೀವ್ರ ಆಸಕ್ತಿ ಇತ್ತು. ಅವನು ನೀರ್ಮಾಣಿಸಿದ ಸ್ತೂಪಿಗಳು, ಸ್ತಂಭಗಳು ಕಲಾತ್ಮಕವಾದವು. ಅವರ ಕಾಲದಲ್ಲಿ 84ಸಾವಿರ ಸ್ತೂಪಿಗಳನ್ನು ಕಟ್ಟಲಾಯಿತು. ಸಾರನಾಥ್ ಬೌದ್ಧ ಕಲೆಯ ರೂಪಗಳಲ್ಲಿ ಉನ್ನತವಾದದ್ದು. ಇಲ್ಲಿ ಅಶೋಕ ಕಟ್ಟಿದ ಕಲ್ಲಿನ ಕಂಬ ಒಂದಿದೆ. ಅದರ ತುದಿಯಲ್ಲಿ ನಾಲ್ಕು ಸಿಂಹದ ಆಕರಗಳನ್ನು ಕೆತ್ತಲಾಗಿದೆ, ಆ ಚಿನ್ಹೆಯನ್ನೇ ಇಂದು ಭಾರತ ಸರಕಾರದ ಲಾಂಛನವಾಗಿ ಬಳಸಲಾಗುತ್ತದೆ. ಪ್ರಜೆಗಳ ಗಮನ ಇಲ್ಲದ್ದರಿಂದ ಈ ಸಾರನಾಥ್ ಮಣ್ಣು ಮುಚ್ಚಿಕೊಂಡಿತ್ತು.

ಬ್ರಿಟೀಷ್ ಸಂಶೋಧಕ ಅಲೆಕ್ಸಾಂಡರ್ ಕನ್ನಿಂಗ್ ಹಾಂ (Alexaander Cunningham) ಸಾರಾನಾಥನ್ನು ಗುರುತಿಸಿ, ಅದರ ಸುತ್ತ ಇದ್ದ ಮಣ್ಣಿನ ಗುಡ್ಡಗಳನ್ನು ಅಗೆದು ತೆಗೆದರು. ಇಂದಿರುವ ಬೌದ್ಧ ವಿಹಾರಗಳನ್ನು ಜಗತ್ತಿಗೆ ತೋರಿಸಿದವರು ಅಲೆಕ್ಸಾಂಡರ್  ಕನ್ನಿಂಗ್ ಹಾಂ.  ಸೈನ್ಯದ ಅಧಿಕಾರಿಯಾಗಿ ಭಾರತಕ್ಕೆ ಬಂದ ಇವರು ಜೇಮ್ಸ್ ಪ್ರಿನ್ಸೆಪ್ ಅನ್ನು ಒಮ್ಮೆ ಬೇಟಿಯಾಗಿ ಮಾತನಾಡುತ್ತಿರುವಾಗ, ಬೌದ್ಧ ಕಲಾತ್ಮಕ ವಿಷಯಗಳ ಬಗ್ಗೆ ಮಾತು ಬಂದಿತು. ಅದರಲ್ಲಿ ಆಸಕ್ತಿ ತೋರಿದ ಕನ್ನಿಂಗ್ ಹಾಂ, ಬೌದ್ಧ ವಿಹಾರಗಳನ್ನೂ, ಬೌದ್ಧ ಕಲಾತ್ಮಕ ಕೃತಿಗಳನ್ನೂ ಹುಡುಕುವ ಕೆಲಸದಲ್ಲಿ ತೀವ್ರವಾಗಿ ತೊಡಗಿಸಿಕೊಂಡರು.

ಮಧ್ಯಪ್ರದೇಶದಲ್ಲಿರುವ ಸತ್ನಾ ಪ್ರದೇಶಕ್ಕೆ ಒಮ್ಮೆ ಹೋದಾಗ, ಪಾಳುಬಿದ್ದ ಬೌದ್ಧ ವಿಹಾರ ಒಂದನ್ನು ನೋಡಿದರು. ಅದು ಏನೆಂದು ವಿಚಾರಿಸಿದಾಗ ಯಾರಿಗೂ ಗೊತ್ತಿರಲಿಲ್ಲ. ಅದನ್ನು ಚಿತ್ರವಾಗಿ ಬರೆದು ತಂದು ಕಲ್ಕತ್ತಾದಲ್ಲಿರುವ ಏಷ್ಯಾ ಸಂಘದ ಸಂಶೋಧಕರ ಬಳಿ ವಿಚಾರಿಸಿದ್ದಾರೆ. ಅದರ ನಂತರವೇ ಅದು ಬಹಳ ಪುರಾತನವಾದದ್ದು ಎಂದು ಅರಿತುಕೊಂಡರು. ಅಂದಿನಿಂದ ತನ್ನ ಕೆಲಸದ ಜತೆಜತೆಯಲ್ಲೇ ಅವರು ಬೌದ್ಧ ವಿಹಾರಗಳನ್ನು ಹುಡುಕುವ ಕೆಲಸವನ್ನೂ ತೊಡಗಿಕೊಂಡರು. ಜತೆಯಲ್ಲಿಯೇ ಬೌದ್ಧ ಸಿದ್ಧಾಂತಗಳನ್ನೂ ಕಲಿತರು. ಬೌದ್ಧ ತತ್ವಗಳ ಬಗ್ಗೆ ವಿಸ್ತಾರವಾದ ಕೃತಿಯೊಂದನ್ನೂ ರಚಿಸಿದ್ದಾರೆ. 

1835ರಲ್ಲಿ ಒಂದು ಪ್ರಯಾಣದ ಸಮಯದಲ್ಲಿ ಸಾರನಾಥ್ ಎಂಬ ಗ್ರಾಮದಲ್ಲಿ ದಟ್ಟವಾದ ಪೊದರಿನ ನಡುವೆ ಛಿದ್ರವಾಗಿ ಬಿದ್ದಿದ್ದ ಹಳೆಯ ಕಾಲದ ಕಲ್ಲುಗಳನ್ನು ಒಬ್ಬ ಹುಡುಗ ತಂದು ಕೊಟ್ಟನು. ಅದು ಒಂದು ಪ್ರತಿಮೆಯ ಒಡೆದ ಒಂದು ಭಾಗ ಎಂದು ಅರಿತುಕೊಂಡ ಕನಿಂಗ್ ಹಾಂ, ಅದು ದೊರತ ಸ್ಥಳವನ್ನು ವಿಚಾರಿಸಿದ್ದಾರೆ. ಹುಡುಗ, ದಟ್ಟವಾದ ಪೊದರಿನ ಜಾಗವನ್ನು ತೋರಿಸಿದ್ಡಾನೆ. ತನ್ನ ಸೈನ್ಯದ ಯೋಧರನ್ನು ಕರೆದು ಆ ಪೊದರನ್ನು ಸ್ವಚ್ಛ ಮಾಡುವಂತೆ ಹೇಳಿದರು. 

ಒಂದು ವಾರದ ನಂತರ ಪೊದರಿನೊಳಗೆ ಮರೆಯಾಗಿದ್ದ ಒಂದು ವಿಹಾರವನ್ನು ಕಂಡುಹಿಡಿದರು. ಅದನ್ನು ಪುರಾತತ್ವ ಸಮೀಕ್ಷೆ ಇಲಾಖೆಯ ನೆರವಿನಿಂದ ಸಂಪೂರ್ಣವಾಗಿ ಉತ್ಖನನ ಮಾಡಿ ಹೊರಗೆ ತಂದರು. ಅದರ ನಂತರ ಪಾಹಿಯಾನ್ ಟಿಪ್ಪಣಿಯಲ್ಲಿ ಇರುವ ಸಾರನಾಥ್ ಇದೇ ವಿಹಾರ ಎಂಬುದನ್ನು ಅರಿತುಕೊಂಡರು. 

ಅಶೋಕ, ತನ್ನ ಆಡಳಿತದ ಇಪ್ಪತ್ತೈದನೇಯ ಇಸವಿಯಲ್ಲಿ, ಬುದ್ಧ ಹುಟ್ಟಿದ ಸ್ಥಳದಿಂದ ಪಯಣವನ್ನು ಮೊದಲುಗೊಂಡು ಪ್ರಮುಖ ಜಾಗಗಳಿಗೆಲ್ಲ ಹೋದನು. ಆ ಪ್ರಯಾಣದ ನೆನಪಾಗಿ ಅಲ್ಲೆಲ್ಲಾ ಸ್ತೂಪಿಗಳನ್ನು ನಿರ್ಮಾಣಿಸಿದನು. 37 ವರ್ಷಗಳು ರಾಜ್ಯವಾಳಿದ ಅಶೋಕನ ವೃಧ್ಯಾಪ್ಯ ಒಂಟಿತನವೂ, ನಿರಾಕರಣೆಯಿಂದಲೂ  ತುಂಬಿತ್ತು. ಪದವಿಯಿಂದ ಕೆಳಗಿಳಿದ ಮೇಲೆ ಬೌದ್ಧ ಬಿಕ್ಷುವಾಗಿ ಮಠದಲ್ಲಿ ಉಳಿದುಕೊಂಡನು. ಉಪವಾಸವಿದ್ದು 72ನೇಯ ವಯಸ್ಸಿನಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡನು ಎಂದು, ನೀರಜ್ ಜೈನ್ ಎಂಬ ಇತಿಹಾಸ ತಜ್ಞರು ಹೇಳುತ್ತಾರೆ. 

ಜಗತ್ತಿನ ಇತಿಹಾಸವನ್ನು ಬರೆಯುವ ಹೆಚ್. ಜಿ. ವೆಲ್ಸ್ (H. G. Wales), ‘ಬಹಳ ರಾಜರುಗಳು ಭೂಮಿಯಲ್ಲಿ ಹುಟ್ಟಿ ಮರೆಯಾಗಿದ್ದಾರೆ. ಅದರಲ್ಲಿ ವಿಶೇಷ ವ್ಯಕ್ತಿತ್ವ ಉಳ್ಳವನು ಸಾಮ್ರಾಟ ಅಶೋಕ. ಅವನ ಧರ್ಮ ಕಾರ್ಯಗಳಿಗಾಗಿ ಎಂದಿಗೂ ನೆನಪಿನಲ್ಲಿ ಉಳಿಯುತ್ತಾನೆ’ ಎಂದು ಉಲ್ಲೇಖಿಸಿದ್ದಾರೆ. 

ಕಾಲ, ತನ್ನ ನೆನಪಿನಲ್ಲಿ ಕೆಲವು ಹೆಸರುಗಳನ್ನು ಮಾತ್ರ ಇಟ್ಟಿರುತ್ತದೆ. ಉಳಿದವು ಉದುರಿದ ಎಲೆಗಳಂತೆ ಗಾಳಿಯೊಂದಿಗೆ ತೂರಿಹೋಗುತ್ತವೆ. ಹಾಗೆ, ಕಾಲದ ನೆನಪಿನಲ್ಲಿ ಚಿರಂತನವಾಗಿ ಇರುವ ಒಂದು ಹೆಸರಾಗಿ ಅಶೋಕ ವಿರಾಜಿಸುತ್ತಾನೆ. ಅದಕ್ಕೆ ಪ್ರಮುಖ ಕಾರಣ ಅವನು ಕೈಗೆತ್ತಿಕೊಂಡ ಧರ್ಮ ಕಾರ್ಯಗಳು!

| ಇನ್ನು ನಾಳೆಗೆ |

‍ಲೇಖಕರು Admin

August 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: