ಮಹಾಮನೆ ಅಂಕಣ – ದಿಕ್ಕು ತಪ್ಪುವ ದಾರಿ… ನಿಲ್ದಾಣವಲ್ಲದ ತಾಣ ನನ್ನದು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

11

ನೂರು ಕಣ್ಣು ಸಾಲದು
ನಾ ನಿನ್ನ ನೋಡಲು
ನೂರಾರು ಮಾತು ಸಾಲದು
ಈ ಅಂದ ಬಣ್ಣಿಸಲು
ಯಾರ ಕನಸ ಕನ್ಯೆಯೋ
ಶೃಂಗಾರ ಕಾವ್ಯವೋ
ಈ ಹೊಳೆವ ಮೆಳ್ಳಗಣ್ಣ ನೋಟ
ಮುಂಗುರುಳ ತೂಗುವಾಟ
ಈ ಚೆಲುವ ಮೈಯಮಾಟ
ಬಂಗಾರದ ಸಿಂಗಾರಿ ಕಂಡು
ಮೂಕನಾದೆನು.
ಆ ಬಾಲೆ… ಆ ಸಂದರ್ಭದಲ್ಲಿ ಹಾಗಿದ್ದಳು… ಶಿಲಾಬಾಲಿಕೆಯಂತೆ…

ಬಸ್ಸಿನೊಳಗೆ ಕುಳಿತಿದ್ದಾಗ ಕಿಟಕಿಯಿಂದ ನುಸುಳಿ ಬರುವ ತಂಪುಗಾಳಿಗೆ ಅವಳ ಗುಂಗುರು ಮುಂಗುರುಳು ಆಕೆಯ ಹಣೆಯನ್ನು ಹಾಗೂ ಕಪೋಲವನ್ನು ವೇದಿಕೆ ಮಾಡಿಕೊಂಡು ನೃತ್ಯ ಮಾಡುತ್ತಿದ್ದವು. ಆ ಗುಂಗುರು ಕೂದಲಿಗೆ ಕಿವಿಯ ಬುಗುಡಿಗಳು ಸಾತ್ ನೀಡಿದ್ದವು. ಅವರೆ ಹೂವಿನ ನಡುವೆ ಇಟ್ಟ ನೇರಳೆ ಹಣ್ಣಿನಂತೆ ಕಾಣುತ್ತಿದ್ದ ಅವಳ ಕಣ್ಣುಗಳು ಆಗಾಗ ನನ್ನತ್ತ ನೋಡುತ್ತಿದ್ದವು. ವಸಂತ ಕಾಲದ ಹೊಂಗೆಯ ತಳಿರಂತೆ ನಸುಗೆಂಪಾಗಿದ್ದ ತುಟಿಗಳಿಂದ ನೈದಿಲೆಯ ನಗೆಯೊಂದು ತೇಲಿ ಬರುತ್ತಿತ್ತು. ಹುಣ್ಣಿಮೆಯ ಬಾಲ ಚಂದ್ರನಂತಾ ಕಾಂತಿ ಆಕೆಯ ಮೊಗದ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು… ಚಲುವೆಯೊಬ್ಬಳು… ಮನದನ್ನೆಯಾಗುವವಳು… ಮಡದಿಯಾಗುವವಳು… ಮೈ ತಾಗಿ ಮೊದಲ ಬಾರಿಗೆ ಕುಳಿತಾಗ ಆಗುವ ಭಾವಲಹರಿಗಳು ನನ್ನಲ್ಲೂ ಮೂಡಿದವು… ಭಾವ ತರಂಗಗಳ ಅಲೆ ನನ್ನಲ್ಲೂ ಎದ್ದಿತು.

ಮಡದಿಯಾಗುವವಳ ಜೊತೆಗೆ ಕುಳಿತಾಗ… ಆ ಗಳಿಗೆ ಮೌನವಾಗಿದ್ದರೂ ಅದೊಂದು ಶೃಂಗಾರ ಕಾವ್ಯವೇ… ನನ್ನ ಕನಸಿನ ಕನ್ಯೆ… ನನ್ನ ಬಾಳ ಸಂಗಾತಿಯಾಗುವವಳು… ಬದುಕ ಬಂಗಾರ ಮಾಡುವವಳು. ಆ ಸಿಂಗಾರಿ ಸನಿಹದಲ್ಲಿ ಕುಳಿತಾಗ ನಾ ಮೂಕನಾಗದೆ ಇನ್ನೇನ್ರೀ ಮಾಡಕ್ಕಾಗುತ್ತೆ…
ತಾರುಣ್ಯದಲ್ಲಿ… ಮದುಮಕ್ಕಳಿಗೆ ನನ್ನ ಅನುಭವವೇ ಎಲ್ಲರಿಗೂ ಆಗಿರಲಿಕ್ಕೇ ಬೇಕು… ಅಲ್ವಾ… ಹೌದಾದರೆ ಹೌದೆನ್ನಿ… ಇಲ್ಲವಾದರೆ ಇಲ್ಲವೆನ್ನಿ…

ಬಸ್ಸು ಬೆಂಗಳೂರು ಸೇರಿತು… ನವರಂಗ ಟಾಕೀಸಿನ ಬಳಿ ನಾವಿಳಿದು ಕುರುಬರಹಳ್ಳಿಗೆ ಆಟೋ ಹಿಡಿದೋ… ಅವರ ಮನೆ ಸೇರಿದೋ… ಅವರ ಮನೆಯಲ್ಲಿ ನನಗೆ ಆದರವೊ ಆದರ… ಅವರಿಗೆ… ಆ ತಾಯಿಗೆ ಸಂತೋಷವೋ ಸಂತೋಷ… ರೇಣುಕಾ ಓಡೋಡಿ ಬಂದಳು… ಅಕ್ಕನ ಕೈ ಹಿಡಿದು ಏನೇನೋ ಗುಸುಗುಸು ಮಾತಾಡುತ್ತಾ… ನನ್ನತ್ತಲ್ಲೂ ಆಗಾಗ ಕಳ್ಳ ನೋಟ ಬೀರುತ್ತಾ… ನಮ್ಮಿಬ್ಬರನ್ನೂ ಮನೆಯೊಳಗೆ ಕರೆದುಕೊಂಡು ಹೋದಳು…
ಅವರ ಮನೆಯಲ್ಲೇ ನಾನು ಊಟ ಮಾಡಿ ನನ್ನ ಶ್ರೀನಿವಾಸ ನಗರದ ಮನೆಗೆ ಬಂದೆ…

ಆ ಮನೆಗೋ ಬ್ಯಾಂಕ್ ಕಾಲೋನಿ ಮುಖ್ಯರಸ್ತೆಯಿಂದಿಳಿದು ಒಂದತ್ತು ನಿಮಿಷ ನಡೆದು ಹೋಗಬೇಕು… ಆ ಮನೆಗೆ ವಿಳಾಸವೂ ಇರಲಿಲ್ಲ… ಏನೂ ಇರಲಿಲ್ಲ. ನೀವೊಂದು ವಿಳಾಸಕ್ಕೆ ಹೋದ್ರಿ… ಸರಿಯಾಗಿ ರಸ್ತೆಯೇ ಇರಲಿಲ್ಲ ಕಣ್ರಿ ಅಂತೀನಿ… ರೆವಿನ್ಯೂ ಸೈಟಿನ ಆ ಮನೆಗಳಿಗೆ ಅದ್ರಲ್ಲಿ ಇದ್ದಾತ್ತು ಮೂಲ ಸೌಕರ್ಯಗಳು. ರಸ್ತೆ… ನೀರು… ದೀಪ… ವಿಳಾಸ… ಅಂಚೆ… ವಾಸವಿದ್ದ. ಇಷ್ಟಾವೂ ಇಲ್ಲದಂತ ಸ್ಥಳದಲ್ಲಿ ನಾನು ವಾಸವಿದ್ದ ಮನೆಯ ಕೊಳಚೆಯ ನೀರೆಲ್ಲ ರಸ್ತೆಗೆ ಬರುತ್ತಿತ್ತು. ರಸ್ತೆಯಲ್ಲಿ ಗಂಗಾ-ಕಾವೇರಿ ಸದಾ ಹರಿಯುತ್ತಿದ್ದರು… ನೀರು ಬೇಕೆಂದರೆ ರಸ್ತೆ ಅಂಚಿಗಿದ್ದ ಬ್ರಾಹ್ಮಣರ ಮನೆಯಲ್ಲಿನ ಬಾವಿಗೆ ಎಲ್ಲರೂ ಎಡತಾಕಬೇಕಾಗಿತ್ತು… ಸದಾ ಗಿಜುಗುಡುತ್ತಿತ್ತು ಆ ಬಾವಿ… ಸರದಿಯ ಮೇಲೆ ನೀರು ಸೇದುಕೊಳ್ಳಬೇಕಾಗಿತ್ತು. ಅಂತ ಸ್ಥಿತಿಯಲ್ಲಿ ನಾನಿದ್ದೆ. ಅಡ್ರೆಸ್ ಇಲ್ಲದ ಮನೆಯಲ್ಲಿ ನನ್ನ ವಾಸ… ನನ್ನ ಮನೆಗೂ ಆಗಾಗ ಸ್ನೇಹಿತರು ಬರುತ್ತಲೇ ಇದ್ದರು… ಅವರಿಗೆ ನನ್ನ ಮನೆಯ ಗುರುತು ಹೇಳಲು ಸಾಕು ಸಾಕಾಗಿ ಹೋಗುತ್ತಿತ್ತು. ಅಲ್ಲಿ ಬನ್ನಿ ಇಲ್ಲಿ ತಿರುಗಿ… ಸೀದಾ ಬನ್ನಿ… ಹೀಗೆಲ್ಲಾ ಹೇಳಬೇಕಾಗಿತ್ತು.

ಬಾಳೆ ಬಲಕ್ಕೆ ಬೀಡೋ
ಸೀಗೆ ಎಡಕ್ಕೆ ಬೀಡೋ
ಅಲ್ಲಿಹುದೇ ನನ್ನ ತವರೂರು
ಅಲೆ ಆಡುತಾವೆ… ಗಾಣ ತಿರುಗುತ್ತಾವೆ
ನವಿಲು ಸಾರುಗ ನಲಿತಾವೆ ಬಳೆಗಾರ
ಅದೇ ಕಾಣೋ ನನ್ನ ತವರೂರೂ
ಅಂತ ಆ ಹಳ್ಳೀ ಹಕ್ಕಿ ತನ್ನ ತವರೂರು ದಾರಿಯ ಭಾಗ್ಯದ ಬಳೆಗಾರನಿಗೆ ತೋರುವಂತೆ ನಾನು ನನ್ನ ವಿಳಾಸವನ್ನು ಹೇಳಬೇಕಾಗಿತ್ತು ಕಣ್ರಪ್ಪಾ… ಅದು ಎಂತಾ ಭಂಗ ಅನ್ನತ್ತೀರಾ ನನಗೆ. ಎಷ್ಟೇ ವಿವರವಾಗಿ ವಿವರಿಸಿದರೂ ಒಬ್ಬರೂ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ, ಅಲ್ಲಿ ಇಲ್ಲಿ ಸುತ್ತಾಡಿ ಹಳ್ಳ ದಿಣ್ಣೆ ದಾಟಿ… ಆ ರಸ್ತೆ ಈ ರಸ್ತೆ ಹಾದು… ಕೊಚ್ಚೆ ಪಚ್ಚೆಲೆಲ್ಲ ಕಾಲಿಕ್ಕಿ ಹಂಗೂ ಇಂಗೂ ಹೆಂಗೂ ನನ್ನ ಮನೆಗೆ ಬಂದು ನನಗೆ ಎಂತಾ ಕೊಂಪೇತಿ ಮನೆ ಮಾಡಿದ್ದಿಯಾ ಲೇ ನೀ… ಬೆಂಗಳೂರಿನಲ್ಲಿ ಬೇರೆಲ್ಲೂ ನಿನಗೆ ಮನೆ ಸಿಗಲಿಲ್ವೇನೂ ಎಂದು ವಾಚಮಾಗೋಚರವಾಗಿ ಉಪದೇಶ ಮಾಡುತ್ತಿದ್ದರು. ಅಲ್ಲ ಅವರಿಗೇನು ಗೊತ್ತು… ನಾನು ಕೊಡುವ ಬಾಡಿಗೆಗೆ ರೂಮಿರುವ ಮನೆ ಎಲ್ಲಿ ಸಿಗುತ್ತದೆ… ಅಂತಾ… ಅಲ್ರೀ ನಮ್ಮಂತೋರೆಲ್ಲ ಜಯನಗರದಲ್ಲೋ… ಸದಾಶಿವನಗರದಲ್ಲೋ ಅಥವಾ ವಿಧಾನಸೌಧದ ಪಕ್ಕದಲ್ಲೋ ಬಾಡಿಗೆ ಮನೆ ಹಿಡಿಯೋದಕ್ಕಾಗುತ್ತಾ.

ಆ ರಸ್ತೆಗಳಿಗೋ ದೀಪಗಳೇ ಇರುತ್ತಿರಲಿಲ್ಲ… ನನ್ನ ಮನೆಗೆ ಬರುತ್ತಿದ್ದ ಬಹುತೇಕರು ಸೂರ್ಯಮುಳುಗಿದ ಮೇಲೇ ಬರುವ ಚಂದ್ರಪುತ್ರರು… ಐ ಮೀನ್ ರಾತ್ರಿ ರಾಜರು… ರಾತ್ರಿ ರಾಜರು ಎಂದರೆ ಯಾರು ಗೊತ್ತಾಯ್ತೋ ನಿಮ್ಗೆ… ನೂರಾರು ಕನಸುಗಳನ್ನು ತುಂಬಿಕೊಂಡು ಬೈಟು ಟೀಯಲ್ಲೇ ಕಾಲ ತಳ್ಳುತ್ತಾ… ಚಿತ್ರಾನ್ನವನ್ನೇ ಮೃಷ್ಟಾನ್ನವೆಂದು ಬಾವಿಸಿರ್ಪ-ಕಲಾಕೋವಿದರು… ಕುಲಾಪುಂಗವರು… ಕಲಾ ಕೇಸರಿಗಳು. ಹೊಟ್ಟೆ ಹಸಿದು ಉದರ ರಣಕೇಕೆ ಹಾಕುತ್ತಿದ್ದರೂ ಭೂರಿ ಭೋಜನವನ್ನು ಮಾಡಿದ್ದೀವಿ ಎಂದು ತೋರ್ಪಡಿಸಿಕೊಳ್ಳುತ್ತಿದ್ದ ನಟ ಭಯಂಕರರು… ನನ್ನ ಮನೆಗೆ ಬಂದ್ರೆ ಉಪ್ಪಿಟ್ಟು ಅಥ್ವಾ ಚಿತ್ರಾನ್ನ ಗ್ಯಾರಂಟಿ ಅಂತಾ ಬರೋರು…

ಅಷ್ಟೆಲ್ಲಾ ಬೆಂಗಳೂರಿನ ಬದುಕಿನಲ್ಲಿ ರಸಭಂಗವಾಗಿದ್ದರೂ ಅದೆಂಗೊ ‘ರಸ’ ಹೊಂಚಿಕೊಂಡು ಬರೋರು ಕಣ್ರಿ… ರಸ ಒಳಗೆ ಹೋಗುತ್ತಿದ್ದಂತೆಯೇ ತಾವೇ ತೇಲಿಬಿಟ್ಟ ದೂಮಲೀಲೆಯಲ್ಲಿ ಅವರ ಕನಸುಗಳೆಲ್ಲ ರೂಪಪಡೆಯುತ್ತಿತ್ತೋ…. ಕನಸ್ಯಾವುದು… ವಾಸ್ತವವ್ಯಾವುದು… ಭ್ರಮೆ ಯಾವುದು ಎಂಬುದು ತಿಳಿಯುತ್ತಲೇ ಇರಲಿಲ್ಲ. ಏಕೆಂದರೆ ತೇಲ್ತಾಯಿರೋರಲ್ಲಾ ‘Artists are Dreamers… but they are not practical personalities’ಕಲಾವಿದರು ಬಹುತೇಕರು ತಮ್ಮ ತಮ್ಮ ವೈಯಕ್ತಿಕ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸೋಲುತ್ತಾರೆ... ತಮ್ಮ ಜೀವನವನ್ನು ತಮ್ಮ ಕೈಯಿಂದಲೇ ನಾಶ ಮಾಡಿಕೊಳ್ಳುತ್ತಾರೆ... ಬಹುತೇಕರ ಫ್ಯಾಮಿಲಿ ಮ್ಯಾನೇಜ್‌ಮೆಂಟ್ ಅಸ್ತವ್ಯಸ್ತವಾಗಿರುತ್ತೇ... ಪೈನಾಸ್ಸಿಯಲ್ ಮ್ಯಾನೇಜ್‌ಮೆಂಟ್ ಗೊತ್ತೇ ಇರಲ್ಲ... ಇವರಾರು ವ್ಯಾವಹಾರಿಕವಾಗಿ ಇರಲ್ಲ... ಪ್ರಾಕ್ಟಿಕಲ್ಲಾಗಿರಲ್ಲ...

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ ಮಾತು ಮಾತು ಮಥಿಸಿ ಬಂದ ನಾದದ ನವನೀತ ಮಸದಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ... ಬೇಂದ್ರೆಯವರ ಈ ಸಾಲುಗಳು ಬಹಳ ಅರ್ಥವಿಸ್ತಾರತೆಯನ್ನು ಪಡೆದುಕೊಳ್ಳುತ್ತದೆ. ಈ ಕವಿತೆಯನ್ನು ಕಲಾವಿದರ ಬದುಕಿಗೆ ಮಾತ್ರವೇ ನಾನು ಕಟ್ಟಿಹಾಕುವುದಿಲ್ಲ. ಆದರೆ ಇವರ ಬದುಕು ಸ್ವಾರ್ಥವಿಲ್ಲ ಅರ್ಥವಿಲ್ಲ ಅಷ್ಟೇ. ನಮ್ಮ ಗ್ರಾಮ್ಯದಲ್ಲಿ ಮಾತಲ್ಲಿ ಹೇಳಬೇಕೆಂದರೆಉಪ್ಗಿಲ್ಲ ಸೊಪ್ಗಿಲ್ಲ… ಬರೀ ಮಾತ್ನೊಳೂ… ಬ್ಯಾಳೆ ರಸ್ದೋಳು’’ ಅನ್ನೋತರ ನಮ್ಮ ಕಲಾವಿದರ ಬದುಕು… ಕಲ್ಪನಾ ವಿಲಾಸಿಗಳು… ಆದರೆ ಆ ಕಲ್ಪನೆಯನ್ನು… ಆ ಕನಸುಗಳನ್ನು ಸಾಕಾರ ಮಾಡಿಕೊಳ್ಳುವುದಿಲ್ಲ. ಬಹುತೇಕ ಕಲಾವಿದರು ಬರೀ ಕನಸು ಕಟ್ಟುವುದರಲ್ಲೇ ತಮ್ಮ ಬದುಕನ್ನು ಬರ್ಬಾದ್ ಮಾಡಿಕೊಂಡುಬಿಡುತ್ತಾರೆ. ಆದರೆ ಇವತ್ತು ಕಲಾವಿದರಲ್ಲಿ ಕೆಲವರು ಸುಧಾರಿಸಿದ್ದಾರೆ. ಏಕೆಂದರೆ ಅವರು ವಿದ್ಯಾವಂತರಾಗಿದ್ದಾರೆ.

ಕ್ರಿಮೀ ಲೆವಲ್ಲಿನ ಕೆಲ ಕಲಾವಿದರು ತಕ್ಕ ಮಟ್ಟಿಗೆ ಪರವಾಗಿಲ್ವೇನೋ ಅನ್ನಿಸುತ್ತಾಪ್ಪ ನನಗೆ… ಇವತ್ತು ಕಲೆ-ಸಂಸ್ಕೃತಿ ಅನ್ನೋದು ವ್ಯಾಪಾರವೂ ಆಗಿದೆ. ಉದ್ಯಮವೂ ಆಗ್ಬಿಟ್ಟಿವೆ ಕಣ್ರಿ… ಮೇಲ್‌ಹಂತರ ಕಲಾವಿದರ ಹಣಕಾಸೂ ಸ್ಥಿತಿ ಯಾವ ಸ್ಥಿತಿವಂತರಿಗೂ ಕಡಿಮೆಯೇನಿಲ್ಲ… ಆದರೆ ಬದುಕು… ಕುಟುಂಬ…??? ಅವರಿಗೂ ಕೌಟುಂಬಿಕ ಬವಣೆಗಳು ಇರ‍್ತಾವಾ…? ನನಗೊತ್ತಿಲ್ಲಪ್ಪ… ಓ… ನಾನು ತುಂಬಾ ಮುಂದೆ ಬಂದ್ಬಿಟ್ಟೆ ಕಣ್ರಪ್ಪಾ… ಹೀಗೆ ಬರೆಯುತ್ತಾ ಹೋದರೆ ‘Artists and their family maters and socio cultural stats’ ಅನ್ನೋ ವಿಷಯದ ಮೇಲೆ ದೊಡ್ಡ ಥಿಯೇರಿ ಬರೆಯಬೇಕಾಗುತ್ತೆ… ಸಂಶೋಧನೆಯನ್ನೇ ಮಾಡ್ಬೇಕಾಗುತ್ತೆ ಸ್ವಾಮಿ… ಇದನ್ನು ಇಲ್ಲಿಗೇ ನಿಲ್ಲಿಸಿ ಮುಂದಕ್ಕೋಗುತ್ತೀನಿ.

ಅಯ್ಯೋ ಶಿವ… ನನ್ನ ಮನೆಗೆ ರಾತ್ರಿ ಹೊತ್ತು ಸೇರುತ್ತಿದ್ದ ಮರಿ ಕಲಾವಿದರ… ಕಿರಿ ಸಾಹಿತಿಗಳ ಕಥೆ ಒಂದಾ ಎರಡಾ. ಇದ್‌ಮಾಡ್ಬೇಕು… ಅದ್ಮಾಡ್ಬೇಕು… ಆ ನಾಟಕ ಆ ಥರ ಇರಬೇಕಾಗಿತ್ತು… ಈ ನಟಿ ಕಥೆ ಇಂಗಂತೆ… ಓಹೋ… ಆ ನಿರ್ದೇಶಕ ಮಾಡೋದೂ ಒಂದು ನಾಟಕವಾ… ಇವನಿಗೆ ನಾಟ್ಕ ಮಾಡೋಕ್ಕೇ ಬರಲ್ಲಾ… ಹೀಗೆ ಏನೇನೋ ಮಾತುಗಳು. ಗುಬ್ಬಿ ವೀರಣ್ಣನವರ ಆದಿಯಾಗಿ ಶೇಕ್ಸ್ ಪಿಯರ್‌ವರೆಗೂ ಬಂದೋಗಿ ಬಿಡೋರು… ಕುವೆಂಪುಯಿಂದ ಕೀಟ್ಸ್ ವರೆಗೆ… ಕಾಪ್ಕನಿಂದ ಕಾರಂತರವರೆಗೆ… ಬೇಂದ್ರೆಯಿಂದ ಭೈರನ್‌ವರೆಗೆ… ವರ್ಡ್ಸ್ ವರ್ತ್ ನಿಂದ ಅನಂತಮೂರ್ತಿವರೆಗೆ… ಈ ಕಡೆಗೆ ಲಂಕೇಶೂ… ಕಾಂಬರ‍್ರೂ… ತೇಜಸ್ಸಿ… ಡಿ.ಆರ್… ಬರಗೂರು… ಸಿದ್ಧಲಿಂಗಯ್ಯಾ… ಚಂಪಾ… ಗಿರಡ್ಡಿ… ಕೀ. ರಂ… ಕುರ್ತಕೋಟಿವರೆಗೆ. ಆ ಕಡೆ ಬಿ.ವಿ. ಕಾರಂತರು… ಪ್ರಸನ್ನ… ನಾಗೇಶು… ಸಿ.ಜಿ.ಕೆ… ಸಿ.ಆರ್. ಸಿಂಹ… ಜಯಶ್ರೀ… ಸುಬ್ಬಣ್ಣ… ಎ.ಎಸ್. ಮೂರ್ತಿ… ವಿಜಯಮ್ಮನವರೆಗೆ ಓಹೋ ಹೋ ಈ ರೀತಿ ಎಲ್ಲಾ ಕಲಾ ಸಾಹಿತಿಗಳು ಇವರ ಮಾತ್ನಲ್ಲಿ ಒಂದು ಹೋಗೋರು ಕಣ್ರಪ್ಪ.
ಮಾತಿಗೆ ಮಾತು ಸೇರಿ
ಮಾತು ಮಂಥನವಾಗಿ
ಮಾತು ಚಿಂತನವಾಗಿ
ಮಾತು ಮಾತು ಸಿಹಿ ಮಾತಾಗಿ
ಮಾತು ಬೆತ್ತಲಾಗಿ
ಮಾತು ಚಿತೆಯಾಗಿ
ಮಾತು ದೊಳಾಗಿ
ಮಾತು ಮಾತು ಬರೀ ಮಾತಾಗಿ
ಮಾತು ಈರ್ಷೆಯಾಗಿ
ಮಾತು ನೋವಾಗಿ
ಮಾತು ಕೋಪವಾಗಿ
ಮಾತು ಮಾತು ಬರೀ ಬೋಳೆಯಾಗಿ
ಮಾತು ಕತ್ತಿಯಾಗಿ
ಮಾತು ಖಡ್ಗವಾಗಿ
ಮಾತು ಕದನವಾಗಿ
ಮಾತು ಮಾತು ಹಿರಿನ ದ್ವೇಷವಾಗಿ

ಕೊನೆಗೆ ಮಾತು ಅಸ್ತವ್ಯಸ್ತವಾಗಿ… ಚಲ್ಲಾ ಪಿಲ್ಲಿಯಾಗಿ… ಚೆಲ್ಲಾಡಿ ಹೋಗುತ್ತಿತ್ತು… ಅವರು ಮಾತಾಡುತ್ತಲೇ ಹಾಗೇ ಮಲಗಿ ಬಿಡುತ್ತಿದ್ದರು… ಒಮ್ಮೊಮ್ಮೆ ನಾನು ಮಾಡಿಟ್ಟ ಚಿತ್ರಾನ್ನವೂ ಅನಾಥವಾಗಿ ಬಿಡುತ್ತಿತ್ತು…
ಹೀಗೆ ನನ್ನ ಮನೆಯಲ್ಲಷ್ಟೇ ಅಲ್ಲಾ… ಅನೇಕ ಬ್ಯಾಚರ‍್ಸ್ ಗೂಡುಗಳಲ್ಲಿ… ಕಲಾವಿದರ ರಾತ್ರಿ ಕೂಟಗಳಲ್ಲಿ, ಬಹುತೇಕ ರಾತ್ರಿಗಳು ಪರಿತಪಿಸುತ್ತಿದ್ದವು… ಗೋಳಾಡುತ್ತಿದ್ದವು… ಕಿಡಿಕಾರುತ್ತಿದ್ದವು. ಮಮ್ಮಲ ಮರುಗುತ್ತಿದ್ದವು…

ಕೊನೆಗೆ ರಾತ್ರಿ ರಾಜರು ತಪ್ಪು ಹೆಜ್ಜೆಗಳನ್ನಾಕುತ್ತ ಅವರದೇ ಮನೆ ಸೇರುತ್ತಿದ್ದರು. ಕೆಲವರಿಗೆ ಕಲಾಕ್ಷೇತ್ರವೇ ಮನೆಯಾಗಿತ್ತು. ಇನ್ನೂ ಕೆಲವರು ವಿಳಾಸವಿಲ್ಲದ ನನ್ನಂತವನ ಮನೆಗಳೇ ಅವರಿಗೆ ರಾತ್ರಿ ತಾಣಗಳಾಗುತ್ತಿದ್ದವು. ವಿಳಾಸವಿಲ್ಲದ ನನ್ನ ಮನೆಯನ್ನು ಹೇಗೆ ಹುಡುಕಾರು ನನ್ನ ಗೆಳೆಯರು… ರಸ್ತೆಯೇ ಇಲ್ಲದ ನನ್ನ ಮನೆಯ ಹೇಗೆ ತಾನೇ ತಡಕಾರು… ಹೆಸರಿಲ್ಲದ ರಸ್ತೆ… ವಿಳಾಸವಿಲ್ಲದ ಮನೆ…
ಗುರುತಿಲ್ಲದ ಮನೆ… ಗೊತ್ತಿಲ್ಲದ ರಸ್ತೆ…
ದಿಕ್ಕು ತಪ್ಪುವ ದಾರಿ ನಿಲ್ದಾಣವಲ್ಲದ ತಾಣ
ನನ್ನದು…

ಇಂತಹ ಮನೆಗೆ ಗೆಳೆಯರು ಬರುತ್ತಿದ್ದರು… ಈ ಗೆಳೆಯರಿಗೆ, ನನ್ನ ಮನೆಗೆ ಬರುವವರಿಗೆ… ಅನುಕೂಲವಾಗಲಿ ಎಂದು ನಾನು… ಬ್ಯಾಂಕ್ ಕಾಲೋನಿಯ ಮುಖ್ಯರಸ್ತೆಯಿಂದ ನನ್ನ ಮನೆಗೆ ಬರುವ ದಾರಿಗೆ… ‘ಡಾ. ರಾಜ್ ರಸ್ತೆ’ ಎಂದು ಹೆಸರಿಟ್ಟೆ... ನಾನೇ ಒಂದು ರಾತ್ರಿ ಕೆಂಪು ಬಣ್ಣ ತೆಗೆದುಕೊಂಡು ಅಲ್ಲಲ್ಲೇ ಅವರಿವರ ಮನೆಯ ಗೋಡೆಗಳ ಮೇಲೆ ಡಾ. ರಾಜ್ ರಸ್ತೆ… ಡಾ. ರಾಜ್ ರಸ್ತೆ… ಎಂದು ಬರೆಯುತ್ತಾ ಬಂದೆ… ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆ ರಸ್ತೆ ‘ಡಾ ರಾಜ್ ರಸ್ತೆ’ಯಾಗಿ ಬಿಟ್ಟಿತ್ತೂ. ನಿನ್ನ ಮನೆ ಎಲ್ಲಿದೆ’ ಎಂದು ಯಾರೇ ಕೇಳಿದರೂ ಡಾ. ರಾಜ ರಸ್ತೆ’ಯಲ್ಲಿ ಎಂದು ಹೇಳುತ್ತಿದ್ದೆ. ಈಗಲೂ ಬ್ಯಾಂಕ್ ಕಾಲೋನಿಯ ಶ್ರೀನಿವಾಸನಗರದ ೨ನೇ ಮುಖ್ಯ ರಸ್ತೆಗೆ 'ಡಾ. ರಾಜ್ ರಸ್ತೆ’ ಎಂದೇ ಹೆಸರಿದೆ.

ವಿಳಾಸವಿಲ್ಲ ನನ್ನಂಥ ಬಡಕಲಾವಿದನನ್ನು ಡಾ. ರಾಜ್ ವಿಳಾಸವಿತ್ತು ಕಾಪಾಡಿದ ಪರಿ ಇದು... ರಸ್ತೆಯ ಹೆಸರಾಗಿ ನನಗೂ ಹಾಗೂ ಆ ಬಡಾವಣೆಯವರಿಗೂ ಡಾ. ರಾಜ ದಾರಿ ದೀಪವಾದ ಬಗೆ ಇದು. ಆ ಕುಸುಮ ಬಾಲೆ... ಆ ಮೆಳ್ಳಗಣ್ಣು... ನಿಮ್ಮ ಮನೆ ಎಲ್ಲಿ ಎಂದು ಕೇಳಿದಾಗಲೂ ನಾನು ಡಾ. ರಾಜ್ ರಸ್ತೆಯಲ್ಲಿ ಎಂದು ಹೇಳಿದ್ದೆ ಕಣ್ರಪ್ಪಾ.

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

August 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: