ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಂಕು ಕುತ್ತಿಗೆಯ ತಿರುವು.. ಹೊಕ್ಕಳ ಸುಳಿಯ ಆಳ..

ಹೆಣ್ಣೇ ಮಾಯೆ ಎಂದು ಘೋಷಿಸಿದವನಿಗೆ
ತನ್ನ ಮಾತನ್ನು ಉಳಿಸಿಕೊಳ್ಳುವ ಭ್ರಮೆ
ತನ್ನದೇ ಮದ್ದಳೆಯ ಸದ್ದಿಗೆ ಹೆಜ್ಜೆಯಿಟ್ಟವಳನ್ನು
ಕಡೆಗಣ್ಣಲ್ಲೂ ನೋಡಲಾರ
ಮದ್ದಳೆಯನ್ನೇ ನೆಟ್ಟ ನೋಟದಿಂದ ದಿಟ್ಟಿಸುತ್ತಿದ್ದರೂ
ಎದುರು ನರ್ತಿಸುವ
ಹೆಣ್ಣಿನ ಹೆಜ್ಜೆಯ ಗತಿಯನ್ನು
ಎದೆ ಬಡಿತದ ಲಯವನ್ನು
ಅವನಿಗಿಂತ ಹೆಚ್ಚು ಬಲ್ಲವರಿಲ್ಲ

ಒಮ್ಮೆಯಾದರೂ ತನ್ನೆಡೆಗೆ ನೋಡಬಾರದೇ
ಕಾತರಿಸಿ ಕನವರಿಸಿದವಳಿಗೆ
ಪ್ರತಿ ಹೆಜ್ಜೆಯಲ್ಲೂ ಆಮೋದ
ಕಣ್ಣಂಚಿನ ಸುಳಿ ಮಿಂಚು
ಸೊಂಟದ ಬಳುಕಿನ ಆಹ್ವಾನ
ಯಾವುದೂ ಆತನಿಗೆ ನಿಲುಕದ ನಿರಾಸೆ
ನಿಡುಸುಯ್ದಳು ಪ್ರೇಮವೇ ಘನಿಕರಿಸಿದಂತೆ

ಶಂಕು ಕುತ್ತಿಗೆಯ ತಿರುವು
ಹೊಕ್ಕಳ ಸುಳಿಯ ಆಳ
ಎಲ್ಲವೂ ಅವನಂತೆಯೇ ಬಟಾಬಯಲು
ಮುಚ್ಚಿಟ್ಟರೂ ಅಷ್ಟೇ, ತೆರೆದಿಟ್ಟರೂ
ಅದಾವುದೂ ತನಗೆ ಸಂಬಂಧಿಸಿದ್ದಲ್ಲ
ಎನ್ನುವ ಆತ ಇಂದ್ರಿಯ ನಿಗ್ರಹಿ
ಯೋಚನೆಯಲ್ಲಿ ಮಂಕಾದ ನರ್ತಕಿಗೆ
ಹೆಜ್ಜೆ ಗತಿ ತಪ್ಪಿ ಹೋದದ್ದೂ ಅರಿವಾಗಲಿಲ್ಲ

ಶಿವ ಶಿವಾ ಅದೇನದು
ಕಿವಿಗಡಚಿಕ್ಕುವ ಭೀಕರ ಶಬ್ಧ
ಮೇಘವೇ ಆಸ್ಪೋಟಗೊಂಡಂತೆ ಕೋಲ್ಮಿಂಚು
ಕೈಲಾಸದಲ್ಲಿ ಶಿವನ ರುದ್ರ ತಾಂಡವ
ಮರುಕ್ಷಣವೇ ಸುತ್ತೆಲ್ಲ ಕಾರ್ಮೋಡ
ಭೂಮಿಯೇ ಗಡಗಡನೆ ನಡುಗುವಂತೆ
ಮದ್ದಳೆಯ ಚರ್ಮ ಕಿತ್ತೆಸೆದ
ಮನದೊಳಗಿನ ಕಾಮನೆಯ ಕಿತ್ತೆಸೆಯದೇ
ನೀನು ನರ್ತಕಿಯಾಗಲಾರೆ
ಆರ್ಭಟಿಸಿ ಹೊರಟೇ ಹೋದ ಹಿಂದಿರುಗದೇ
ತಪ್ಪಾಯಿತೆಂದು ಗಲ್ಲ ಬಡಿದು
ಬೆನ್ನತ್ತಿದವಳಿಗೆ ದಕ್ಕಿದ್ದು ಬರೀ ಪಾದಧೂಳಿ

ಮುಂದಿನ ಕಥೆಗೀಗ ವಿಚಿತ್ರ ತಿರುವು
ಅಲ್ಲಮ ಎಂಬ ವಿರಾಗಿಯ ಬಯಸಿದ ಮಾಯೆ
ಮೈತುಂಬ ಪಾದಧೂಳಿಯ
ಭಸ್ಮ ಲೇಪಿಸಿಕೊಂಡ ಚಿರವಿರಹಿ

ಆತ ವಿರಾಗಿ ಎಂಬುದು ತಿಳಿದಿದ್ದರೂ..

ಆತ ವಿರಾಗಿ ಎಂಬುದು ತಿಳಿದಿದ್ದರೂ
ಇನ್ನಿಲ್ಲದಂತೆ ಬಯಸಿದ
ತನ್ನ ಮೂರ್ಖತನದ ಬಗ್ಗೆ
ಎಲ್ಲಿಲ್ಲದ ಹಳಹಳಿಕೆ
ಕುಳಿತಲ್ಲೂ ನಿಂತಲ್ಲೂ
ಆತನ ಮದ್ದಳೆಯ ಮರ್ಧನ
ಕಿವಿ ತುಂಬಿದಂತಾಗಿ
ಮನದೊಳಗೆ ಕಡಲ ದಂಡೆಯ
ಹೆಬ್ಬಂಡೆಯ ಕೆಡವಿದಂತೆ

ಖಿನ್ನವಾದ ಮನಸ್ಸಿಗೆ
ಯಾವುದೂ ಬೇಕೆನಿಸುತ್ತಿಲ್ಲ
ಊಟ ತಿಂಡಿಯ ಮಾತು ಒತ್ತಟ್ಟಿಗಿರಲಿ
ಸ್ನಾನ ನಿತ್ಯಕರ್ಮವೂ ಮಾಡಲಾಗದ ಆಲಸ್ಯ
ಗಂಧ ಲೇಪನ ಬೇಡ
ಒಡವೆ ಅಲಂಕಾರವೂ ನಿಷಿದ್ಧ
ಹಾಳುಸುರಿವ ಮುಖದಲ್ಲಿ
ವಿರಹವೊಂದೇ ಸ್ಥಾಯಿಭಾವ

ಸನಿಹ ಬಂದ ಸಖಿಯರಿಗೆ
ಬಿರು ನೋಟವೊಂದೇ ಉತ್ತರ
ಸಮಾಧಾನ ಸಾಂತ್ವಾನಗಳಿಗೆಲ್ಲ
ಕಣ್ಣೀರೊಂದೇ ಭಾಷೆ
ಬಯಸಿದವ ಬಳಿಬರದೇ
ಧುತ್ತನೆ ಮರೆಯಾದ ಬಗೆಗೆ
ಜಗತ್ತನ್ನೇ ಮರೆಯುವ ವಿಸ್ಮೃತಿ

ಒಂದು ನಾದ, ಇನ್ನೊಂದು ಶೃತಿ
ಚಿಕ್ಕದೊಂದು ಕಣ್ಸನ್ನೆ .
ಯಾರಿಗೂ ಕಾಣಿಸದ
ತನ್ನೊಬ್ಬಳಿಗೇ ಅರ್ಥವಾಗುವ ಕಿರುನಗೆ
ಇದೇ ಪ್ರೇಮ ಎಂದು ಭ್ರಮಿಸಲು
ಯೌವ್ವನದ ಸೋಮರಸದ ಅಮಲಲ್ಲಿ
ಮುಳುಗೇಳುವ ನರ್ತಕಿಗೆ
ಬೇಕಿರಲಿಲ್ಲ ಮತ್ತೊಂದು ಮಾತು

ಹೇಳದೆ ಹೊರಟು ಹೋದ
ಹೇಳಿದರೂ ಯಾವ
ಉಪಯೋಗವಿಲ್ಲ ಎಂಬಂತೆ
ಎದೆಯೊಳಗಿನ ಪ್ರೇಮದ ಕಳಶ
ಬೋರಲು ಬಿದ್ದು
ಎಲ್ಲವೂ ಬರಿದಾದ ಶಬ್ಧ
ಸುರಿದು ಹೋದ ಮೋಹವೀಗ
ಒಣನೆಲದಲ್ಲಿ ಇಂಗಿ
ಗುರುತೂ ಇಲ್ಲದಂತೆ ನಿಂತ ನಿರಾಕಾರಿ

ಶೂನ್ಯ ಪೀಠಕ್ಕೀಗ ಅವನೇ ಉತ್ತರಾಧಿಕಾರಿಯಂತೆ
ಎಲ್ಲಿಂದಲೋ ಬಂದ ಮಾಹಿತಿಗೆ
ತುಟಿಯಂಚಲ್ಲಿ ಭೀಷಣ ನಗು
ಹೃದಯ ಸಿಂಹಾಸನವನ್ನೇ
ನಿರ್ದಯನಾಗಿ ತಳ್ಳಿದವನ
ಅಮಲುಗಣ್ಣು, ಕುರುಚಲು ಗಡ್ಡ
ನೇವರಿಸಬೇಕೆಂಬ ಬಯಕೆ ಹುಟ್ಟಿಸುವ
ಜೊಂಪೆಗೂದಲು ಎದೆಯೊಳಗೆ
ಇನ್ನೂ ಹುಚ್ಚು ಹಿಡಿಸುವ ಪರಿಗೆ
ಮೈಯ್ಯೆಲ್ಲ ಸುಡುವ ಕೆಂಡದುಂಡೆ

ಎಂದೂ ಕೈಗೆಟುಕದ
ಪುರುಷಹಂಕಾರವನ್ನು ಬಯಸಿ
ಪರಸಂಗದ ಹಾದರಕ್ಕೆಳೆಸಿದ
ಶಿವದ್ರೋಹದ ನೋವು ಮನದೊಳಗೆ
ಕಂಗೆಟ್ಟ ಕಣ್ಣ ತುಂಬ ಪಾಪಪ್ರಜ್ಞೆ
ಪ್ರೀತಿಯೆಂಬುದೀಗ ಕುಸಿದು ಬಿದ್ದ
ಮಹಾಸೌಧದ ಪಳೆಯುಳಿಕೆ

‍ಲೇಖಕರು Avadhi

23 July, 2018

12 Comments

  1. Siddu Yapalaparvi

    Very nice depiction

  2. Siddu Yapalaparvi

    Nice depiction

  3. Kaidal krishnamurthy

    ವಿರಹದುರಿ ತಾಕಿತು.

  4. Sangeeta Kalmane

    ಅದ್ಭುತವಾದ ರಚನೆ

  5. Bhuvana

    ಎಂದೂ ಕೈಗೆಟುಕದ ಪುರುಷಾಹಂಕಾರ ಬಯಸಿ…..!!

  6. Nasrin

    Nice…

    • Suryakant Sarang

      Very nice writing as always…

  7. Sunil

    ತುಂಬಾ ತುಂಬಾ ಅರ್ಥ ಪೂರ್ಣ ವಿವರಣೆ

  8. Kotresh

    Amazing

  9. Giriyappa

    ನೈಸ ಮನಮುಟ್ಟುವ ವಿರಹದುರಿಯಲಿ ..ಅಲ್ಲಮನ ಬಯಲು

  10. giriyappa

    ವೆರಿ ನೈಸ್

  11. ಜಯಶ್ರೀ. ಜೆ.ಅಬ್ಬಿಗೇರಿ

    ತಮ್ವ ಕಾವ್ಯ ಶಕ್ತಿ‌
    ವಿಷಯ ವಸ್ತು ಅಮೋಘ ಶ್ರೀ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading