ಅಕ್ಷಯ ಕಾಂತಬೈಲು
೧
ನಿನ್ನ ಲೆಗ್ಗಿಂಗ್ಸ್
ನಿಂದ
ಹಿಡಿದು
ಟಾಪ್ ತನಕ
ಸುಳ್ಳಿನ ಮೃದು ನೆಯ್ಗೆ
ಅದೇಕೋ ಸಿಹಿ
ಆಗಾಗ ನನ್ನ ದೆಸೆ
ಮುಳುಗಿ
ನಿನ್ನ ವೇಲು ಹಿಡಿದು
ಏರಿ ಬಂದಾಗ
ದಿಕ್ಕು ಸಿಗುವ ಉನ್ಮಾದ
ಒಬ್ಬರಿಗೊಬ್ಬರ ಹುಚ್ಚು ಕನಿಕರ

೨
ಪ್ರತಿಯೊಂದು ದಿನ
ಪ್ರತಿಯೊಂದು ಕ್ಷಣ
ನಿನ್ನ ಪ್ರೇಮದ ಮೊನಚು
ನನಗೆ ಮಾತ್ರ ನೆಟ್ಟಿದ್ದರೆ
ಮುಜುಗರ ಗೊಂದಲ ತಳಮಳ
ರೆಕ್ಕೆಯಿದ್ದರೂ ಹಾರಲು ತಿಳಿಯದ
ಹಕ್ಕಿಯು
ಹಿಕ್ಕೆ ಹಾಕಲೂ ಹೆದರಿಕೊಂಡು
ಅಪ್ಪಣೆಗಾಗಿ ಕಾಯುವಂತೆ
೩
ಆವತ್ತಿನ ಸ್ಥಿತಿ ಗೊತ್ತಾ?
“ಏನಿರುತ್ತದೆ, ಹೊಳಪಿನಿಂದ
ಕೂಡಿರುತ್ತದೆ”
ಹಾಗಾದರೆ ಇವತ್ತು
ಕಂಡ ಮಿಂಚುಹುಳ ನಾಳೆ
ಯಾವ ಕಾಡಿನಲ್ಲಿ ಮಿನುಗುವುದು ಹೇಳುವೆಯಾ?
“ಪವಿತ್ರ ಕತ್ತಲೆಯ ಕಲಕದಿರುವ ಜೀವವ ತಿಳಿಸು”
ಬಸವನಹುಳು ತುಟಿಯ ಮೇಲೆ ತೆವಳಿದರೆ ಹೇಗೆ?
“ಇಸ್ಸಿ!”
ಅದೇ ಪರಿಸ್ಥಿತಿಯಿತ್ತು ಆವತ್ತು






0 Comments