-ವಿಜಯರಾಜ ಕನ್ನಂತ
ವಿಜಯರಾಜ ಕನ್ನಂತ ಅವರು ಈ ಹಿಂದೆ ತಮ್ಮ ಬ್ಲಾಗ್ ‘ಮನಸಿನ ಮರ್ಮರ‘ ದಲ್ಲಿ ಬರೆದ ವೈದೇಹಿ ಅವರ ಕಥಾ ಲೋಕ ಕುರಿತ ಲೇಖನವನ್ನು ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಮತ್ತೆ ಮೆಲುಕು ಹಾಕಲು ನೀಡುತ್ತಿದ್ದೇವೆ.

ಬಹುಷಃ ವೈದೇಹಿಯವರ ಕಥಾಲೋಕವೆಂಬ ಮಾಯಾ ಜಗತ್ತಿಗೆ ನಾನು ಮೊಟ್ಟಮೊದಲು ಕಾಲಿರಿಸಿದ್ದು ೨೦೦೩ರಲ್ಲಿ ಇರಬೇಕು. ಸಪ್ನಾ ಬುಕ್ ಹೌಸ್ನಲ್ಲಿ ಕಣ್ಣಿಗೆ ಬಿದ್ದ ‘ಅಮ್ಮಚ್ಚಿಯೆಂಬ ನೆನಪು’ ಮೊದಲ ನೋಟಕ್ಕೇ ಕಣ್ಸೆಳೆಯಿತು. ಕುತೂಹಲದಿಂದ ಕೊಂಡೊಯ್ದು ಮೊದಲ ಕಥೆ ಓದಿದಾಕ್ಷಣವೇ ನಾ ವೈದೇಹಿಯವರ ಕಥೆಗಳ ಅಭಿಮಾನಿಯಾಗಿಬಿಟ್ಟೆ. ಆ ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಆಪೋಷನ ತೆಗೆದುಕೊಂಡು, ಅದರಿಂದ ನನಗಾದ ಖುಷಿಯನ್ನು ಅಲ್ಲಿಗೆ ಮುಗಿಯಲು ಬಿಡಬಾರದೆಂದುಕೊಂಡು ಅವರ ಬೇರೆ ಯಾವ ಪುಸ್ತಕ ಸಿಗುತ್ತದೆಂದು ಹುಡುಕುತ್ತಾ ಪುಸ್ತಕದಂಗಡಿ ಸುತ್ತಿದ್ದು ಇನ್ನೂ ಮರೆತಿಲ್ಲ. ಅವರ ಮಲ್ಲೀನಾಥನ ಧ್ಯಾನ, ಕ್ರೌಂಚ ಪಕ್ಷಿಗಳು ಎಲ್ಲ ಓದಿ ಮುಗಿಸುವಷ್ಟರಲ್ಲಿ ಬಂದೇ ಬಿಟ್ಟಿತ್ತು ಅವರ ಇಲ್ಲಿಯವರೆಗಿನ ಸಮಗ್ರ ಕಥಾಸಂಕಲನ. ಆದರೆ ವೈದೇಹಿ ಕಥೆಗಳ ಸೆಳೆತ ಎಷ್ಟು ಅಂದ್ರೆ.. ಈಗಲೂ ಯಾವುದಾದರು ವಿಶೇಷಾಂಕ ಬಂದ್ರೆ ಮೊದಲು ಕಣ್ಣುಗಳು ಅರಸೋದು ವೈದೇಹಿ ಕಥೆಯೇನಾದ್ರೂ ಬಂದಿದೆಯ ಅಂತ.
ವೈದೇಹಿಯವರ ಬರಹಗಳಲ್ಲಿ ನನಗೆ ಮೊದಲು ಇಷ್ಟವಾಗಿದ್ದು ಅವರ ಬರಹಗಳ ಸರಳತೆ. ನಮ್ಮ ಸುತ್ತ ಮುತ್ತಲಿನ ಜಗತ್ತಿನ ಜೀವಿಗಳ ಕುರಿತು, ವಿದ್ಯಮಾನಗಳ ಕುರಿತು ಸುಲಲಿತ ಪ್ರಬಂಧವೊಂದರ ಶೈಲಿಯಲ್ಲಿ ಆಪ್ತವಾಗಿ ಹೇಳುವ ಪರಿ, ಶಬ್ದಾಡಂಬರದ ಹಂಗಿಲ್ಲದೆ ಸಹಜ ಮಾತುಗಳಲ್ಲಿ ಮಾತಾಡುವ ಅವರ ಕಥೆಗಳ ಪಾತ್ರ…ನಿಜಕ್ಕೂ ಆಪ್ತವೆನಿಸುತ್ತವೆ. ಕುಂದಗನ್ನಡದ ಸೊಗಡಿನ ಹಿನ್ನೆಲೆಯಲ್ಲಿ ಅವರು ಬಿಚ್ಚಿಡುತ್ತಾ ಹೋಗುವ ಸ್ತ್ರೀ ಸಂವೇದನೆಯ ಸೂಕ್ಷ್ಮಲೋಕ ಬೆರಗು ಮೂಡಿಸುತ್ತದೆ. ಅವರ ಪಾತ್ರಗಳ ಮುಗ್ಧತೆ, ಬೋಳೇತನ, ನೋವು, ಅಸಮಾಧಾನ, ಸಂಕಟ, ಹಂಗಿಸೋದು, ನಗು, ಅಳುನುಂಗಿ ನಕ್ಕ ನಗು, ಶೋಷಣೆ-ದೂಷಣೆ, ದೊಡ್ಡವರ ಮಕ್ಕಳಾಟಿಕೆ, ಮಕ್ಕಳ ದೊಡ್ಡಸ್ತಿಕೆ….ಹೀಗೆ ದಿನನಿತ್ಯದ ಘಟನೆಗಳೇ ಅವರ ಸೂಕ್ಷ್ಮನೋಟದ ಮೂಲಕ ಹಾದು ಕಥೆಗಳಾಗಿ ನಮ್ಮನ್ನು ತಲುಪಿವೆ. ಅಕ್ಕು, ವಾಣಿಮಾಯಿ, ಮಂಜಿ, ಚಿಕ್ಕನ ಹೋರಾಟ, ಪಾರ್ಸಿನ ರತ್ನ, ಗುಲಾಬಿ, ಅಮ್ಮಚ್ಚಿ ಹೀಗೆ ಒಮ್ಮೆ ಒಳಹೊಕ್ಕರೆ ಹೊರಬರಲು ಮನಸೇ ಬರದಂತಹ ರಮ್ಯಲೋಕ ಕಟ್ಟಿಕೊಡುವ ವೈದೇಹಿಯವರ ಕಥೆಗಳ ಚಂದ ಓದಿಯೇ ತಿಳಿಯಬೇಕು. ಸ್ತ್ರೀವಾದಿಯೆಂಬ ಹಣೆಪಟ್ಟಿಯ ಹಂಗಿಲ್ಲದೆ ಕಥೆಗಳ ಮೂಲಕವೆ ಹೇಳಬೇಕೆನಿಸಿದ್ದನ್ನು ಬಿಚ್ಚಿಡುವ ವೈದೇಹಿಯವರ ಬರಹಗಳಂದ್ರೆ ನಂಗಂತೂ ಪಂಚಪ್ರಾಣ.
ವೈದೇಹಿಯವರ ಬರಹದ ಕುರಿತು ಆಸಕ್ತಿಯಿರುವ ಎಲ್ಲರೂ ಓದಲೇಬೇಕಾದ ಇನ್ನೊಂದು ಪುಸ್ತಕವಿದೆ. ಅದು ಮೇಜು ಮತ್ತು ಬಡಗಿ. ತಮ್ಮ ಪಾತ್ರಗಳು ಹುಟ್ಟಿ ಬಂದ ಬಗೆ, ಹಿನ್ನೆಲೆ, ಸ್ಫೂರ್ತಿಗಳನ್ನು ಬಿಡಿಸಿಟ್ಟಿದ್ದಾರೆ. ಮೇಜು ಕುರ್ಚಿಗಳ ಮೂಲಕ ನಡೆಯೋ ತಾರತಮ್ಯ, ಬಳೆಗಾರ್ತಿಯ ಲೋಕ ಹೀಗೆ ಎಲ್ಲವನ್ನೂ ಆತ್ಮೀಯತೆಯ ಎಳೆಯೊಂದಿಗೆ ನವಿರಾಗಿ ಹೊಸೆಯುವ ವೈದೇಹಿ ನಿಮಗೆ ಇಷ್ಟ ಆಗದಿದ್ದರೆ ಹೇಳಿ ಮತ್ತೆ. ಕುಂದಗನ್ನಡ ಇವರ ಬರವಣಿಗೆಯ ಆಳದಲ್ಲಿ ಸೆಲೆಯಾಗಿ ಹರಿಯುವ ಗುಪ್ತಗಾಮಿನಿ. ಕುಂದಾಪ್ರ ಕನ್ನಡದಲ್ಲಿ ಬರೆದ್ರೆ ನಾಡಿನಾದ್ಯಂತ ತಲುಪುವುದು ಕಷ್ಟ ಅಂತ ಒಮ್ಮೆ ವೈದೇಹಿ ಅವರಿಗೆ ಶಿವರಾಮ ಕಾರಂತರು ಕಿವಿಮಾತು ಹೇಳಿದ್ರಂತೆ. ಅದನ್ನು ಸುಳ್ಳಾಗಿಸಿ ತೋರಿಸುವ ಹಟಕಟ್ಟಿ ಬರೆದು ಬೆಳೆದು ತೋರಿಸಿದ್ದು ಇಂದು ಎಲ್ಲರೆದುರಿಗಿರುವ ದೃಷ್ಟಾಂತ.
ವೈದೇಹಿಯವರ ‘ಅಕ್ಕು’ ಕಥೆಯನ್ನಾಧರಿಸಿ ದೂರದರ್ಶನದಲ್ಲಿ ಕಿರುಚಿತ್ರವಾಗಿ ಬಂದ ‘ಅಕ್ಕು’ವನ್ನು ಕನಿಷ್ಟ ೪-೫ ಬಾರಿ ನೋಡಿ ಪ್ರತೀ ಬಾರಿಯೂ ಧನ್ಯತೆ ಅನುಭವಿಸಿದ್ದೇನೆ. ಕುಂದಾಪ್ರ ಕನ್ನಡದಲ್ಲೇ ಹೇಳುವುದಾದರೆ ಒಂತರಾ ‘ಅರೆಪಿರ್ಕಿ’ ಹೆಣ್ಣೊಬ್ಬಳ ಕಥೆ. ಅದು ಟೆಲಿಚಿತ್ರವಾಗಿ ಅದ್ಭುತವಾಗಿ ಮೂಡಿಬಂದಿತ್ತು. ಈಗ ಇವರ ಗುಲಾಬಿ ಟಾಕೀಸು ಕಥೆಯನ್ನಾಧರಿಸಿದ ಸಿನೆಮಾ ಗಿರೀಶ್ ಕಾಸರವಳ್ಳಿಯವರ ಸಮರ್ಥ ನಿರ್ದೇಶನದಲ್ಲಿ ಮೂಡಿ ಬರ್ತಾ ಇದೆ. ಅದು ಮುಂದಿನ ಮೇ ತಿಂಗಳು ತೆರೆ ಕಾಣುವ ನಿರೀಕ್ಷೆ ಇದೆ. ಅಲ್ಲಿವರೆಗೆ ಏನು ಮಾಡಲಿ ಅಂತಿರಾ…ಇದೆಯಲ್ಲ ವೈದೇಹಿ ಕಥೆಗಳ ಮಾಯಾಲೋಕ. ಅವರ ಕಥೆಗಳ ತಂಪಿನಲಿ ನಿಮ್ಮ ಈ ಬೇಸಿಗೆ ತಣ್ಣಗಾಗಲಿ ಎಂಬ ಹಾರೈಕೆಗಳೊಂದಿಗೆ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





Vaidehi’s personality and her simple charms (the charm of her simplicity) are more heart warming than her stories. She is touching in her speech and thoughts and always leaves behind an impression of being “dhanya” once you see and listen to her. Her personableness can best be described in Kannada words as “nirabharana soundarya.”