ಪ್ರಶ್ನೆಗಳು?
ಬದರಿನಾಥ ಪಲವಳ್ಳಿ
ವೈದೇಹಿಯಲಿ ಬಂಡಾಯಗಾರ್ತಿ
ಊರ್ಮಿಳೆಯಲಿ ನಿರಂತರ ಎಚ್ಚರ
ಕೌಸಲ್ಯೆ ಕೈಯಲಿ ದಶರಥನ ಜುಟ್ಟು
ಇದ್ದಿದ್ದರೇ, ಓದಿಗೆ ಒದಗುತ್ತಿತ್ತು
ಒಂದು ಸಹ್ಯ ರಾಮಾಯಣ!
ಉತ್ತರಿಸಬೇಕಿದ್ದ ಪುರುಷೋತ್ತಮನೇ
ನಾರುಟ್ಟು ಹೊರಟ,
ಮಂಥರೆ ನೆಪಮಾತ್ರ ಪಾತ್ರ
ಅಲ್ಲಿನ್ನೊಂದು ಮಾಯಾ ಜಿಂಕೆ!
ನಾವು ಬರೆಸಿದ್ದಲ್ಲ
ಕೃತ ಯುಗದ ಅಳಲಿನ ವ್ರಣ;
ನಮಗೂ ಬೇಕಿರಲಿಲ್ಲ,
ಅಪ್ಪನು ಮೆಚ್ಚೋ ಶ್ರೀರಾಮ
ಅಣ್ಣನ ಹಿಂಬಾಲಕ ಲಕ್ಷ್ಮಣ
ರಾಜ್ಯ ಸುಖ ವಂಚಿತ ಭರತ
ಕಾದು ಕಾದೇ ಉಳಿದ ಶತ್ರುಜ್ಞ…
ಒಂದಿಡೀ ಸಮೃದ್ಧ ರಾಜ್ಯಕೆ
ಜೋಡಿ ಪಾದುಕೆ ಕಾವಲೇ?
ವಧಿಸ ಬಹುದೇ ಪತಿವ್ರತೆಯ ಗಂಡ
ಪತಿವ್ರತೆಯರ ಗಂಡಿರನೇ?
ವಿಭೀಷಣನೂ ನ್ಯಾಯಮತಿಯೇ?
ಪ್ರಶ್ನೆಗಳ ಸರಮಾಲೆ…
ಹೆಣ್ಣಿನೆಡೆ ತುಸು ಮೃದುತ್ವ
ಸುದೀರ್ಘ ಕಾಲ ರಾಮ ರಾಜ್ಯ
ರಾವಣಗೆ ಆತ್ಮ ಲಿಂಗ,
ಕಲ್ಪಿಸೋ ಸುಖ ಕಥನ
ಬರೆದುಕೊಡ ಬಹುದಿತ್ತು
ನೆಮ್ಮದಿ ಶಾಯಿಯಲಿ ಅದ್ದಿ…
ಕಥೆಗಾರನೂ ಏಕೋ
ಮನಸು ಮಾಡಲೇ ಇಲ್ಲ!







uttama kavana ..
ಹಾಗಿದ್ದಿದ್ದರೆ ಏನು ಚೆನ್ನ? ಹೀಗಿದ್ದುದರಿಂದಲೇ ಬಂತಲ್ಲವೇ ಈ ಕವನ?
ಇಷ್ಟವಾಯಿತು.
”ವಧಿಸಬಹುದೇ ಪತಿವ್ರತೆಯ ಗಂಡ
ಪತಿವ್ರತೆಯರ ಗಂಡಿರನೇ?”
-ಎಂಥಾ ಪ್ರಶ್ನೆ…! ಅಬ್ಬಾ ಬದರಿ… ನಿಮಗೊಂದು ಸಲಾಂ.
ವಾಹ್! ತುಂಬಾ ಚೆನ್ನಾಗಿದೆ ಪಲವಳ್ಳಿ!
ನಿಜಕ್ಕೂ ನೀವು ಹಳೆಯ ಪ್ರತಿಮೆಗಳನ್ನು ಕಡೆದು ಹೊಸ ಪ್ರತಿಮೆಗಳನ್ನು ಸೃಜಿಸಿದ್ದೀರ. ’ರಾಮಾಯಣ’ ಅನ್ನುವುದೇ ’ರಾಮನತ್ತ ಪಯಣ’(ರಾಮ ಎಂದರೆ leisure/pleasure/ ಎನ್ನುವ ಅರ್ಥದಲ್ಲಿ) ಆಗುವುದು ಇಂಥ ಪ್ರಯತ್ನಗಳಿಂದಲೇ!
waah just fabulous………….