ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈದೇಹಿಗೊಂದು ‘ಅಕ್ಷತಾ’ ಪತ್ರ

ಸ್ವಗತವಾಗಿ ಕಾಡುವ `ಸೌಗಂಧಿ’

ವೈದೇಹಿ,

ನಿಮ್ಮನ್ನು ಹಾಗೆ ಹೆಸರು ಹಿಡಿದು ಕರೆಯೋದೆ ಚೆಂದ. ಮೇಡಂ ಅಂತ ಕರೀಬಹುದೇನೋ ಆದರೆ ವೈದೇಹಿ ಅನ್ನುವಾಗ ಒಂದು ಭಾವ ಸ್ಪುರಿಸುತ್ತದಲ್ಲ ಅದು ನಿಮ್ಮನ್ನು ಮೇಡಂ ಅಂತ ಕರೆದಾಗ ವ್ಯಕ್ತ ಆಗೋದೇ ಇಲ್ಲ. ಕೆಲವು ಹೆಸರುಗಳೇ ಹಾಗೇ ಮುಕ್ಕಾಗಿಸದೇ, ಅರ್ಧ ಮಾಡದೇ ಅಥವಾ ಬೇರೆ ವಿಶೇಷಣ ಏನೂ ಸೇರಿಸದೇ ಕರೆದರೆ ಚೆನ್ನ. ಅಂಥದರ ಪಟ್ಟಿಯಲ್ಲಿ ನಿಮ್ಮ ಹೆಸರೇ ಮೊದಲು ವೈದೇಹಿ.

ನಾನು ಹುಟ್ಟುವ ಮೊದಲೇ ನಿಮ್ಮ ಮೊದಲ ಕಥಾ ಸಂಕಲನ `ಗಿಡ ಮರ ಬಳ್ಳಿ’ ಬಂದಾಗಿತ್ತು. ಸಾಹಿತ್ಯದ ಓದನ್ನು ಸುರು ಮಾಡುವ ಹೊತ್ತಿಗೆ ನೀವು ಕತೆ-ಕವಿತೆ-ನಾಟಕ ಎಲ್ಲ ಪ್ರಕಾರದಲ್ಲೂ ಬರೆದು ಹೆಸರು ಮಾಡಿದ್ದಿರಿ. ನೀನಾಸಂನಲ್ಲಿ ನಿಮ್ಮನ್ನು ಮೊದಲು ಕಂಡಾಗ ನಾನು ಎರಡನೇ ಬಿಎ ಓದುತ್ತಿದ್ದೆ ಜೊತೆಗೆ ಕವಿ- ಕತೆಗಾರರೆಂದರೆ ನಮ್ಮಂಥವರು ನೋಡಲು ಸಾಧ್ಯವೇ ಇಲ್ಲದವರು. ಅವರೇನಿದ್ದರೂ ಪತ್ರಿಕೆ ಪುಸ್ತಕಗಳಲ್ಲಿ ಫೋಟೊ ಮೂಲಕವೇ ಕಾಣಿಸಿಕೊಳ್ಳುವಂಥವರು ಎಂಬ ನನ್ನ ಕಲ್ಪನೆ ನಿಧಾನಕ್ಕೆ ದೂರವಾಗುತ್ತಿದ್ದ ಹೊತ್ತದು.

ಅದಾಗಲೇ ನಿಮ್ಮ ಮೊದಲ ಕಥಾ ಸಂಕಲನವೂ ಸೇರಿದಂತೆ ಅಂತರಂಗದ ಪುಟಗಳು, ಗೋಲ ಸಂಕಲನಗಳನ್ನು ಮತ್ತು ಲಂಕೇಶ್ ಪತ್ರಿಕೆಯಲ್ಲಿ ಜಾತ್ರೆ ಕುರಿತ ಲೇಖನಗಳನ್ನು ಓದಿದ್ದೆ. ನಿಮ್ಮ `ಅಡುಗೆ ಮನೆಯ ಹುಡುಗಿ’ ನಮಗೆ ಪಿಯುಸಿಯಲ್ಲಿ ಪಠ್ಯವಾಗಿತ್ತು. `ಮುರಿಯುತ್ತ ಮೆಣಸಿನ ಚೊಟ್ಟು ಆಕಾಶದ ಸದ್ದಿಗೆ ಕಿವಿಯ ತೆರೆದಿಟ್ಟು ಕಳೆಯುವಳು ಆಯುಷ್ಯ ಷಂಚಿ ಬೊಟ್ಟುಬೊಟ್ಟು’ ಅನ್ನುವ ಕೊನೆಯ ಸಾಲುಗಳಂತೂ ಸೈಯೇ ಸೈ ಅವು ಸೇರಿದಂತೆ ಇಡೀ ಪದ್ಯವೇ ಬಾಯಿ ಪಾಠವಾಗಿ ಹೋಗಿತ್ತು. ಆ ಪದ್ಯವನ್ನು ಹಲವು ಸಾರಿ ಹೇಳಿಕೊಂಡೆವು.

ಅದು ನಮ್ಮದೇ ಸ್ಥಿತಿ ಅಂತ ಮನದಟ್ಟಾಗಿತ್ತಾದರೂ ಅಡುಗೆ ಮನೆ ಹುಡುಗಿಯ ದುಸ್ಥಿತಿಗೆ ನಾವು ಮರುಗಿದೆವು. ಅವಳ ನೋವಿಗೆ ನಾವು ಕರಗಿದೆವು. ಅಂಥದೊಂದು ಪದ್ಯ ಬರೆದ ನಿಮ್ಮನ್ನು ನೀನಾಸಂನಲ್ಲಿ ನೋಡಿ ಕಣ್ತುಂಬಿಕೊಂಡೆ.

ಮೂರು ವರ್ಷದ ಹಿಂದೆ ಆಶಾದೇವಿ ಮೇಡಂ ಕರೆದು ವೈದೇಹಿ ನಾಳೆ ಶಿವಮೊಗ್ಗಕ್ಕೆ ಬರ್ತಾ ಇದ್ದಾರೆ. ನಾನು ಇರೋದಿಲ್ಲ. ಅವರಿಗೆ ಇಲ್ಲಿ ಏನೋ ಕೆಲ್ಸ ಇದೆಯಂತೆ ನೀನು ಅವರ ಜೊತೆ ಹೋಗಿ ಬಾ ಅಂದ್ರು. ಮರುದಿನ ನಾನು ಕುವೆಂಪು ರಂಗಮಂದಿರಕ್ಕೆ ನಿಮ್ಮನ್ನು ಕಾಣಲು ಹೋದೆ. ನೀವು ನಗೆಮೊಗದಲ್ಲೇ ರಂಗ ಮಂದಿರದ ಬಾಗಿಲ ಬಳಿ ಎದಿರಾದಿರಿ.  ನಾವಿಬ್ಬರೂ ನೆಹರೂ ರಸ್ತೆಯಲ್ಲಿ  ನಡೆದೇ ಹೊರಟೆವು. ನೀವು ಪ್ರತಿಯೊಂದು ಅಂಗಡಿ-ಮುಂಗಟ್ಟುಗಳನ್ನು ಕಣ್ಣಲ್ಲಿ ತುಂಬಿಸಿಕೊಂಡು ನಡೆಯುತ್ತಿದ್ದಿರಿ. ಶಿವಮೊಗ್ಗೆಯ ಸೊಸೆ ನೀವು… ಇದೆಲ್ಲ ನಾನು ನಡೆದಾಡಿದ ರಸ್ತೆಯೇ, ದುರ್ಗಿ ಗುಡಿಗೆ ಏನಾರೂ ಬೇಕಂದ್ರೆ ನಾವು ಬರ್ತಾ ಇದ್ದದ್ದು ಎಂದು ಸಂಭ್ರಮಿಸಿದಿರಿ.

ಒತ್ತಾಯದಿಂದ ನಿಮ್ಮ ಗೆಳತಿಯ ಮನೆಗೆ `ನಿನಗೊಬ್ಬ ಅಪೂರ್ವ ಸುಂದರಿಯನ್ನು ತೋರಿಸ್ತೇನೆ ಬಾ ‘ಅಂತ್ಹೇಳಿ ಕರೆದುಕೊಂಡು ಹೋದ್ರಿ. ಒಳಗೊಂಚೂರು ಗುಮಾನೀನೂ ಇಟ್ಕಳದೇ ಎಷ್ಟು ಸರಳ-ಸುಲಲಿತವಾಗಿ ಪದ-ವಾಕ್ಯಗಳನ್ನು ಕಟ್ಟೋಕೆ ಸಾಧ್ಯವಾಗತ್ತೆ ವೈದೇಹಿ ನಿಮಗೆ!.

ಬಂಗಲೆ ಮನೆ, ಚೆಂದದ ಕೈತೋಟ, ಮನೆಯೊಳಗೆ ನೀಟಾಗಿ ಜೋಡಿಸಿದ ಪೀಠೋಪಕರಣಗಳು ಎಲ್ಲದರ ನಡುವೆ ನಿಮ್ಮ ಗೆಳತಿಯಿದ್ದರು. ಮಕ್ಕಳು ವಿದೇಶದಲ್ಲಿದ್ದಾರೆ. ಗಂಡ ದೊಡ್ಡ ಉದ್ಯಮಿ, ಹೆಚ್ಚಾಗಿ ಕೆಲಸದ ನಿಮಿತ್ತ ಬೆಂಗಳೂರಿನಲ್ಲೆ ಇರುತ್ತಾರೆ ಎಂದರು. ನೀವು ಹೇಳಿದ ಹಾಗೆ ಆಕೆ ನಿಜಕ್ಕೂ ಸುಂದರಿಯಾಗಿದ್ದರು ಮತ್ತು ಅಂಥ ಏಕಾಕಿತನವನ್ನೂ ಅವರು ಗಾಢವಾದ ನಿರ್ಲಿಪ್ತತೆಯಿಂದ ಸಂಭಾಳಿಸುತ್ತಿರುವಂತೆ ಕಂಡಿತು. `ನಡೆದಾಡುವ ಕಾವ್ಯ’ ಎಂದು ಅವರನ್ನು ನೀವು ಬಣ್ಣಿಸಿದ್ದು ಅರ್ಥಪೂರ್ಣವಾಗಿತ್ತು. ಅವರ ಹೆಸರು ಸುಮಿತ್ರಾ.  ನಿರ್ಲಿಪ್ತತೆಗೆ ಇನ್ನೊಂದು ಹೆಸರೇ ಸುಮಿತ್ರೆ… ಆ ನಿಮ್ಮ ಗೆಳತಿ ಸುಮಿತ್ರಾ ನನಗೆ ನಿಮ್ಮ ಯಾವುದೇ ಕತೆಯ ಪಾತ್ರದಂತೆ ತೋರಲಿಲ್ಲ. ಬದಲಿಗೆ ರಬೀಂದ್ರ ನಾಥ ಟಾಗೋರರ ಗಾಢ ವಿಷಾಧವೇ ಮೈವೆತ್ತಿದಂತ (ಅಂಥ ವಿಷಾದದಲ್ಲೂ ಆಕೆಯ ವ್ಯಕ್ತಿತ್ವವಿರಲಿ, ಸೌಂದರ್ಯ ಕೂಡ ಚೂರೂ ಮಸುಕಾಗದಂಥ) ನಾಯಿಕೆಯರಂತೆ ಕಂಡರು. ಆದರೆ ನನ್ನನ್ನು ಮಧ್ಯೆ ಕೂರಿಸಿಕೊಂಡು ಅಕ್ಕ ಪಕ್ಕ ಕೂತು ಒತ್ತಾಯ ಮಾಡುತ್ತಾ ಸೇವಿಗೆ ಬಾತ್ ಕೊಟ್ಟು ಉಪಚರಿಸುವ ಹೊತ್ತಿನಲ್ಲಿ ಮಾತ್ರ ನೀವಿಬ್ಬರೂ ಗೆಳತಿಯರು ಒಂದೆ ಆಗಿ ಕಾಣುತ್ತಿದ್ದಿರಿ.

ಆಮೇಲೆ ನೀವು ನನ್ನ ಮೊದಲ ಕವನ ಸಂಕಲನಕ್ಕೆ ಬೆನ್ನುಡಿ ಬರೆದು ಕೊಟ್ಟಿರಿ. ನನ್ನ ಕವನಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಸ್ತಾಪವಾದಾಗ ಹಿರಿಯಕ್ಕನಂತೆ ಸಂಭ್ರಮಿಸಿದಿರಿ. ಒಂದೆರಡು ವಿಮರ್ಷೆಗಳಲ್ಲಿ `ಕವಿಗಳ ಮೊದಲನೆ ಸಂಕಲನದಲ್ಲಿರುವ ಕ್ಲೀಷೆಗಳಿಂದ ಈ ಕವಿತೆಗಳು ಪಾರಾಗಿವೆ’ ಎಂದು ಪ್ರಸ್ತಾಪವಾಗಿದ್ದನ್ನು ನೋಡಿದ ನಾನು `ಮೊದಲ ಕೃತಿ ಆ ಕವಿ ಪಡೆದ ನೋಡಿದ ಅನುಭವಗಳ ತಾಜಾ ಅಭಿವ್ಯಕ್ತಿ ಆಗಿದ್ದರಿಂದ ಸಹಜವಾಗೇ ಫ್ರೆಷ್ ಆಗಿರತ್ತೆ. ಹೋಗ್ತಾ ಹೋಗ್ತಾ ಬರಹ ಕ್ಲೀಷೆ ಆಗ ತೊಡಗತ್ತೆ. ಅಷ್ಟೂ ಅರ್ಥವಾಗಲ್ವಾ ಬರೆಯೋರಿಗೆ’ ಎಂದು ನಿಮ್ಮ ಹತ್ತಿರ ಗೊಣಗಿದಾಗ. `ಏಯ್ ಹಾಗೆಲ್ಲ ಎಂತ ಹೇಳಕ್ಕೋಗ್ಬೇಡ್ವೆ. ಅವರು ನಿನ್ನ ಪದ್ಯ ಗುರುತಿಸಿ ಬರೀತಿದ್ದಾರಲ್ಲ. ಉದ್ದೇಶ ಪೂರ್ವಕವಾಗಿ ಇದರ ಬಗ್ಗೆ ಬರೀಲೆ ಬಾರದು ಅಂತ ಬಿಟ್ಟಿಲ್ವಲ್ಲ.

ಅವರು ಹ್ಯಾಗೆ ಗ್ರಹಿಸ್ತಾರೋ ಹಾಗೇ ಬರೀಲಿ. ನೀನು ಸುಮ್ಮನೆ ಓದಿ ಖುಷಿ ಪಡೋದು ನೋಡು. ನಿನ್ನ ಪಾಡಿಗೆ ನೀನು ಬರವಣಿಗೆ ಮುಂದುವರೆಸು ‘ಎಂದು ಬುದ್ದಿಮಾತು ಹೇಳಿದಿರಿ. ಥೇಟ್ ಹಿರಿಯಕ್ಕನ ಶೈಲಿ ಯಲ್ಲಿ ಅದೂ ನಮ್ಮ ಕನ್ನಡ ಸಾಹಿತ್ಯ ಲೋಕದ ಹಿರಿಯಕ್ಕ…

ವೈದೇಹಿ, ನಿಮ್ಮ ದೊಡ್ಡಮ, ಚಿಗಮ, ಅಕ್ಕು, ಲಿಲ್ಲಿಬಾಯಿ, ಪುಟ್ಟಮ್ಮತ್ತೆಯ ಮೊಮ್ಮಗಳು, ಮಾಂಕಾಳಿ, ಅಮ್ಮಚ್ಚಿ ಎಲ್ಲರನ್ನು ಓದುವಾಗಲೂ ಓದುಗರಾದ ನಮಗೆ ಒಂದು ಗಾಢ ವಿಷಾಧ ಕವಿದುಕೊಳ್ಳುತ್ತದೆ. ಆದರೆ ಅಂಥದೊಂದು ವಿಷಂದಂವನ್ನು ನಮ್ಮಲ್ಲಿ ಹುಟ್ಟಿಸುವ ಆ ಜೀವಗಳು ತಮ್ಮ ಬಗ್ಗೆ ಎಲ್ಲೂ ವಿಷಾದದಿಂದ ಕೊರಗುವುದನ್ನು ನಾವು ನೋಡೋದೆ ಇಲ್ಲ ನಿಮ್ಮ ಕತೆಗಳಲ್ಲಿ. ಬದಲಿಗೆ ಸಾಧ್ಯವಾದರೆ ಜಾಣತನದಲ್ಲಿ ಸಾಧ್ಯವಾಗದಿದ್ದರೆ ಒಂದು ಬಗೆಯ ಹುಚ್ಚುತನದಲ್ಲಾದರೂ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ಹೆಂಗಸರು ನಿಮ್ಮ ಕತೆಯಲ್ಲಿ ರಾರಾಜಿಸುತ್ತಾರೆ.

ಜಾತ್ರೆಗೆ ಹೋದ್ರೆ ಕಾಲು ಮುರಿದು ಹಾಕ್ತೀನಿ ಎನ್ನುವ ಗಂಡನ ಮಾತನ್ನು ಮೀರಿ ಜಾತ್ರೆ ಮುಗಿಸಿ ಬಂದ ಮೇಲೆ ಕಂಡ್ಕಂಡ್ರಾಯ್ತು ಎಂದು ಮಕ್ಕಳನ್ನು ಕರೆದುಕೊಂಡು ಜಾತ್ರೆ ಮಾಡಿ ಬರುವ ದೊಡಮ, ಸಿನಿಮಾಕ್ಕೆ ಹೋಗುವುದನ್ನು ತಡೆದ ಗಂಡಸರಿಗೆ `ಒಳ್ಳೆ ಕತೆ ಒಂದು ಸಿನಿಮಾ ನೋಡಲು ನಾಲಾಯಕಾದೆವೇ? ನೀವು ಹೇಳಿದ ಹಾಗೆ ಕೇಳಿದರೆ ಹೇಗೂ ಕುಣಿಸೀರಿ’ ಎಂದು ಉತ್ತರ ಕೊಟ್ಟು ಸಿನಿಮಾ ನೋಡೆ ತೀರುವ ಹೆಂಗಸರು ತಮ್ಮ ತಮ್ಮ ಲೋಕದಲ್ಲೇ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಬಿಡುತ್ತಾರೆ. ಆದರೆ ಅಲ್ಲೂ ಕೂಡಾ ಒಳ ಎಚ್ಚರ ಅವರಿಗೆ ಯಾವಾಗಲೂ ಇರುತ್ತದೆ. ಲೋಕದ ಮಾತನ್ನು ಧಿಕ್ಕರಿಸಿದ ಸಂದರ್ಭದಲ್ಲಿ ಕೂಡಾ ಅವರು ಒಳ ಎಚ್ಚರದ ಮಾತಿಗೆ ತುಂಬಾ ಬೆಲೆ ಕೊಡುವ ಘನತೆಯ ಹೆಣ್ಣುಗಳು. `ಯಾಕೆ, ಮರ್ಯಾದೆ ಹೋಪುಕೆ ಬಿಡ್ಲಕ್ಕಿತ್ತಲೇ”ಎಂದು ಪುಟ್ಟಮ್ಮತ್ತೆ ಕಮಲಾವತಿಗೆ ಹೇಳಿದಾಗ `ಎಂಥವರಿಂದ ಅದು ಹೋಯ್ಕ್ ಅಂತನಂಗೊತ್ತಿತ್ತ್  ಎಂದು ಕಮಲಾವತಿ ಕೊಡುವ ಉತ್ತರ ಇಂಥ ಒಳ ಎಚ್ಚರದ ಪ್ರಜ್ಞೆಗೆ ಸಾಕ್ಷಿ.

ವೈದೇಹಿ, ಇಷ್ಟೆಲ್ಲದರ ನಂತರವೂ ನನ್ನದೊಂದು ಪ್ರಶ್ನೆ. ಇಷ್ಟೆಲ್ಲಾ ಜಾಣೆಯರಾದ, ಗಟ್ಟಿಗಿತ್ತಿಯರಾದ, ಬದುಕನ್ನು ಕಟ್ಟಿಕೊಳ್ಳುವ ಕಲೆ ಅರಿತ ನಿಮ್ಮ ಹೆಣ್ಣುಗಳು ಅನಕ್ಷರಸ್ಥರು, ಹಳ್ಳಿಗರು, ಆರ್ಥಿಕ ಸ್ವಾತಂತ್ರದ ಪರಿಕಲ್ಪನೆಯಿಂದಲೇ ಹೊರಗಿರುವವರು ಆಗಿದ್ದಾರೆ. ಆದರೆ ನಿಮ್ಮ ಆ `ಸೌಗಂಧಿ’ ವಿದ್ಯಾವಂತೆ, ನಗರ ಕಂಡವಳು, ತನ್ನ ಕಾಲ ಮೇಲೆ ತಾನು ನಿಂತಿರುವವಳು ಆಗಿದ್ದೂ, ಅವಳಿಗ್ಯಾಕೆ ತನಗೆ ಸರಿ ಕಂಡಂತೆ, ತನ್ನ ಮನಸ್ಸು ಹಾತೊರೆದಂತೆ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ? ಅಂಥದೊಂದು ಪ್ರಕ್ರಿಯೆಯನ್ನು ಸಮಾಜ ವಿರೋಧಿಸುತ್ತಲೇ ಬರುತ್ತಿರಬಹುದು. ಆದರೆ ಮನಸ್ಸಿನ ವಾಂಛೆ ಸಾಮಾಜಿಕ ವಿರೋಧಕ್ಕಿಂತ ಶಕ್ತಿಯುತವಾದುದಲ್ಲವೇ? ಅಥವಾ ಸೌಗಂಧಿಯ ಒಳಗಿನ ವಾಂಛೆ ಸಾಮಾಜಿಕ ಕಟ್ಟು ಪಾಡು ವಿರೋಧಗಳನ್ನು ಮರೆಸುವಂಷಂಂಔ ಶಕ್ತಿಯುತವಾಗಿರಲಿಲ್ಲವೇ? ಅವಳ ಶಕ್ತಿಯನ್ನು ನಿರಾಸೆಯೇ ತಿಂದು ಹಾಕಿತ್ತೇ? ಈ ಎಲ್ಲ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ ವೈದೇಹಿ… ಸ್ವಗತಗಳಾಗಿ

-ಕೆ ಅಕ್ಷತಾ

‍ಲೇಖಕರು avadhi

31 October, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. ರಾಧಿಕಾ

    ವೈದೇಹಿಯವರ ಬಗ್ಗೆ ಆಪ್ತಭಾವ ಮೂಡಿಸುವ ಲೇಖನ ಇಷ್ಟವಾಯ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading