ಇಂದು ವಿಶ್ವ ರಂಗಭೂಮಿ ದಿವಸ. ಈ ಸಂದರ್ಭದಲ್ಲಿ ರಂಗಭೂಮಿಯ ಬಗ್ಗೆ, ರಂಗ ಸಂಸ್ಕೃತಿಯ ಬಗ್ಗೆ ಒಂದು ಲೇಖನ ಬರೆದುಕೊಡಿ ಎಂದು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರನ್ನು ಕೇಳಿದಾಗ, ಕೊನೆ ಘಳಿಗೆಯಲ್ಲಿ ಕೇಳಿದ್ದರೂ ತುಂಬಾ ಪ್ರೀತಿಯಿಂದ ಅವರು ಈ ಲೇಖನವನ್ನು ಬರೆದು ಕೊಟ್ಟಿದ್ದಾರೆ.
ಅವರಿಗೆ ’ಅವಧಿ’ಯ ವಂದನೆಗಳು.
ರಂಗಪ್ರೀತಿ ಹೆಚ್ಚಾಗಲಿ, ರಂಗ ಸಂಸ್ಕೃತಿ ಬೆಳೆಯಲಿ ಎನ್ನುವ ಹಾರೈಕೆಗಳೊಂದಿಗೆ ನಿಮಗೆಲ್ಲಾ ವಿಶ್ವ ರಂಗಭೂಮಿ ದಿನದ ಶುಭಾಶಯಗಳು.
ಶ್ರೀಪತಿ ಮಂಜನಬೈಲು
ಚಿಟ್ಟೆ ಸಂಸ್ಕೃತಿ
ರಂಗಭೂಮಿ, ಎನ್ಕೌಂಟರ್ ವಿತ್ ಎಬ್ಸೆನ್ಸ್ (Encounter with Absense) ತರ. ಅಂದರೆ ಇಲ್ಲದ್ದನ್ನು ಇದೇ ಎಂದು ನಂಬುಗೆಯನ್ನು ಸೃಷ್ಟಿಸುವ ನಂಬಿಕೆಯ ಮಜಲಾಗಿದೆ. ಈ ಸಂಕೀರ್ಣ ನಂಬಿಕೆಯ ಮಜಲನ್ನು ಗುರುತಿಸಲಾಗದೆ, ಪ್ರೇಕ್ಷಕ ನಾಟಕವನ್ನು ನೋಡುವಾಗ ಯಾವ ರೀತಿಯಲ್ಲಿ ತೊಡಗುತ್ತಾನೆ ಎನ್ನುವುದನ್ನು ಗುರುತಿಸಲಾಗದೆ ಹೋಗುತ್ತೇವೆ. ಹಾಗಾದರೆ ವಾಸ್ತವದಿಂದ ಅವಾಸ್ತವದ ಅನುಭವವೋ ಅಥವಾ ಅವಾಸ್ತವದಿಂದ ವಾಸ್ತವದ ವಿರೂಪವೋ? ಅದು ನೋಡುವಿಕೆಯ ಬೀಸು. ಈ ಬೀಸುವಿಕೆ ಬಿರುಗಾಳಿಯಂತೆ ಸಂದಿಗ್ಧವಾಗಿದೆ. ಒಂದು ನಾಟಕವನ್ನು ಪ್ರೇಕ್ಷಕ ಮೌಲಿಸುವ ಪ್ರಕ್ರಿಯೆ ಅರಿಯಲು ಮತ್ತು ಇದಕ್ಕೆ ಅಡಿಪಾಯವಾಗಿರುವ ಅವನ ನಂಬುಗೆಯನ್ನು ಗಮನಿಸುವುದು ಅತ್ಯಂತ ಕಠಿಣ ಸಮಸ್ಯೆಯೇ ಹೌದು.
ಮರಾಠಿಯ ‘ಏಕಚ್ ಪ್ಯಾಲಾ’ ಎಂಬ ನಾಟಕ ತನ್ನ ವಸ್ತುವನ್ನಾಗಿ ಕುಡಿಯುವ ದುರಂತವನ್ನು ಅಭಿವ್ಯಕ್ತಿಸಿದರೂ ಯಾರೂ ಕುಡಿಯುವುದನ್ನು ಬಿಡಲಿಲ್ಲ, ಅಷ್ಟೆ ಅಲ್ಲ ಕುಡಿದೇ ನೋಡುವ ಪ್ರೇಕ್ಷಕ ಗಣವೇ ಹೆಚ್ಚಾಗಿತ್ತು. ಆದರೆ ಕಣ್ಣೀರು ಸುರಿಸದ ಒಬ್ಬ ಪ್ರೇಕ್ಷಕ ಸಿಗುವುದು ಕಠಿಣವಾಗಿತ್ತು. ಅಷ್ಟೇ ಏಕೆ! ಹಿಂದುಸ್ಥಾನಿ ಸಂಗೀತದ ವಿವಿಧ ಘರಾಣೆಗಳ ಖ್ಯಾತನಾಮ ಸಂಗೀತಗಾರರು ನಟರಾಗಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದರಿಂದ, ನಾಟಕದ ವಸ್ತುವು ಮರೆಯಾಗಿ ರಾಗ ತಾನಗಳಲ್ಲಿ ಲೀನವಾಗಿ ಆನಂದಭಾಷ್ಪವೋ, ದುಃಖಾಶ್ರುಗಳೋ ಹೊರಹೊಮ್ಮುತ್ತಿತ್ತು.
ಹಾಗಾದರೆ ಈ ಪ್ರೇಕ್ಷಕ ಪ್ರಕ್ರಿಯೆಯಲ್ಲಿ ಒಟ್ಟಾರೆಯಾಗಿ ಹೊರಹೊಮ್ಮುವುದು, ‘ಚೆನ್ನಾಗಿದೆ, ಸಾಧಾರಣ, ಚೆನ್ನಾಗಿಲ್ಲ’ ಈ ಅಭಿಪ್ರಾಯಗಳು. ಈ ಅಭಿಪ್ರಾಯಗಳ ವಿಶ್ಲೇಷಣೆ ಕೂಡ ವಿಭಿನ್ನ ಆಗಿರುತ್ತದೆ. ಅದಕ್ಕೆ ಖ್ಯಾತ ವಿಮರ್ಶಕ ಝೆಂಟೋ ತನ್ನ ಥೇಟರ್ ಎಂಡ್ ಪ್ರೊಪೊಗಂಡಾ ಕೃತಿಯಲ್ಲಿ ಹೇಳಿದ ಮಾತುಗಳನ್ನು ನೋಡಿ . “ Audience are comprised of persons who react both similarly and differently to the piece of theatre they are watching, the stronger will be the applause or the disapproval.”

ಹೀಗಾಗಿ ಒಂದು ನಾಟಕವನ್ನು ಪ್ರೇಕ್ಷಕ ಮೌಲಿಸುವ ಪ್ರಕ್ರಿಯೆ ಅರಿಯಲು ಮತ್ತು ಇದಕ್ಕೆ ಅಡಿಪಾಯವಾಗಿರುವ ಅವನ ನಂಬುಗೆಯನ್ನು ಗಮನಿಸುವುದು ಅತ್ಯಂತ ಕಠಿಣ ಸಮಸ್ಯೆಯೇ ಹೌದು. ಅದಕ್ಕೆ ಕನ್ನಡದ ಕವಿ ಕತೆಗಾರ ಬಿ.ಸಿ.ದೇಸಾಯಿಯವರು ಹೇಳುತ್ತಾರೆ, ಒಂದು ಸಂಸ್ಕೃತಿ ಒಬ್ಬ ಮನುಷ್ಯನ ಮನಸ್ಸನ್ನು ರೂಪಿಸುವುದಕ್ಕಿಂತ ಮೊದಲು ಅವನ ಶರೀರದ ಚಲನೆಯನ್ನು ನಿರ್ಧರಿಸುತ್ತದೆಅಂತ. ಆದರೆ ಸಂಸ್ಕೃತಿಯ ಜೊತೆಗೆ ಹಲವು ಇತರ ಸಂಸ್ಕೃತಿಗಳ ಸಂಗವಾದಾಗ ಅದು ಚಿಟ್ಟೆ ಸಂಸ್ಕೃತಿ ಎನಿಸುತ್ತದೆ ಎಂಬುದು ನನ್ನ ಅನಿಸಿಕೆ. ಹೀಗಾದಾಗ ಅಂತಹ ಮನುಷ್ಯನ ಮನಸ್ಸಿನ ರೂಪಣೆ ಆತನ ಶರೀರ ಚಲನೆಯಿಂದ ನಿಧರ್ಾರಿತ ಆಗುವುದಿಲ್ಲ. ಅಂದರೆ ಮಾನವಿ ಶರೀರ ಜೀವಶಾಸ್ತ್ರೀಯ ಅಲ್ಲ ಅದು ಸಾಂಸ್ಕೃತಿಕ ಶರೀರವಾಗಿದೆ. ಈ ಚಲನಶೀಲಿತ ಸಾಂಸ್ಕೃತಿಕ ಶರೀರ ಪರಂಪರೆಯನ್ನು ಗರ್ಭಗುಡಿಯಂತೆ ಸ್ಥಾಪಿತಗೊಳಿಸುತ್ತದೆ. ಇಂತಹ ಸಂಸ್ಕೃತಿಗೆ, ಹಲವು ಇತರ ಸಂಸ್ಕೃತಿಗಳು ಮುಟ್ಟಬಹುದೇ ವಿನಹ ಸಂಗಮಿಸುವುದು ಸಾಧ್ಯವಾಗುವುದಿಲ್ಲ. ಈ ವಿಷಯದ ಬಗ್ಗೆ ಮತ್ತೆ ವಿಸ್ತೃತವಾಗಿ ಹೇಳುವ ಪ್ರಸಂಗ ಬರಬಹುದು, ಸದ್ಯಕ್ಕೆ ನಮ್ಮ ರಂಗಭೂಮಿಯ ಸಂಸ್ಕೃತಿಯ ಕುರಿತಾಗಿ ತಿಳಿಸಲು ಇಷ್ಟು ಸಾಕು.
ಕನ್ನಡ ರಂಗಭೂಮಿಯ ಸಂಸ್ಕೃತಿ ಕನ್ನಡಿಗನ ಶರೀರ ಚಲನೆಯನ್ನು ನಿರ್ಧರಿಸುತ್ತಿಲ್ಲವೆಂದೇ ಹೇಳಬಹುದು. ಯಕ್ಷಗಾನ ಕಲೆಯು ಪ್ರಮುಖವಾಗಿರುವ ಜಿಲ್ಲೆಗಳವರನ್ನು ನೋಡಿ! ಅವರ ಮಾತಿನ, ನಡಿಗೆಯ, ಹಾಡುವಿಕೆಯ ಅಥವಾ ವಾದಿಸುವ ಶೈಲಿಯಲ್ಲಿ ಯಕ್ಷಗಾನದ ಸಂಸ್ಕೃತಿಯನ್ನು ಸಹಜವಾಗಿ ಕಾಣಬಹುದು. ಒಬ್ಬ ಪಕ್ಕಾ ಮಹಾರಾಷ್ಟ್ರೀಯನನ ಗುರುತನ್ನು ಅವನ ಶರೀರ ಚಲನೆಯ ಮುಖಾಂತರ ಕೂಡಲೇ ಕಂಡುಹಿಡಿಯಬಹುದು. ಹೀಗೆ ರೂಪುಗೊಂಡ ಮನಸ್ಸುಗಳೇ ಪರಂಪರೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳುತ್ತವೆ ಮತ್ತು ಜನ ಪರಂಪರೆ ತಾನಾಗಿಯೇ ಜನ್ಯಿತಗೊಳ್ಳುತ್ತದೆ. ಹೀಗಾಗಿ ಅದು ರಕ್ತಗತವೇನೋ ಅನ್ನುವಷ್ಟರ ಮಟ್ಟಿಗೆ ಉಳಿಯುತ್ತದೆ. ಆದರೆ ಕನ್ನಡಿಗನನ್ನು ಹೀಗೆ ಶರೀರ ಚಲನೆಯಿಂದ ಗುರುತಿಸುವುದು ಕಷ್ಟ. ಅದಕ್ಕೆ ಭೌಗೋಲಿಕ ಕಾರಣಗಳು ಅಥವಾ ಇನ್ನಿತರ ವಲಸೆ ಸಂಸ್ಕೃತಿಯ ಕಾರಣಗಳು ಹಲವು ಇರಬಹುದು. ಹೀಗೆ ಚಿಟ್ಟೆ ಸಂಸ್ಕೃತಿಯ ಬೆಳವಣಿಗೆಯಿಂದ ನಮ್ಮ ರಂಗಭೂಮಿ ಪರಂಪರೆ ಜನಪರಂಪರೆಯಾಗಿಲ್ಲ.
ಕನ್ನಡ ರಂಗಭೂಮಿಯು ಈ ಸಂದಿಗ್ದತೆಯೊಳಗಿಂದ ಹೊರಬಂದಿಲ್ಲ. ಡಾ|| ಚಂದ್ರ ಶೇಖರ ಕಂಬಾರರು ಹೇಳಿದಂತೆ ಕನ್ನಡ ನಾಟಕ ಸಾಹಿತ್ಯಿಕವಾಗಿ ಗೆಲ್ಲುತ್ತದೆ, ಆದರೆ ನಾಟಕವಾಗಿ ಸೋಲುತ್ತದೆ. ಏಕೆ0ದರೆ ಕನ್ನಡದಲ್ಲಿ ರಂಗಪ್ರದರ್ಶನದ ಪರಂಪರೆ ಇಲ್ಲ. ನನ್ನ ನಲವತ್ತು ವರ್ಷಗಳ ಕನ್ನಡ ರಂಗಭೂಮಿಯಲ್ಲಿನ ಅನುಭವದಲ್ಲಿ ಇದು ಹೌದೆನಿಸಿದ್ದು. ನಾಟಕಗಳಿಗೆ ಸ್ವಯಂ ಪ್ರೇಕ್ಷಕ ಸಿದ್ದನಾಗುವವರೆಗೆ ರಂಗಭೂಮಿಯ ಜನಪರಂಪರೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಮಹಾರಾಷ್ಟ್ರದಲ್ಲಿ ಐದಾರು ತಲೆಮಾರಿನ ಹಿಂದಿನ ಹಲವಾರು ನಾಟಕಗಳು ಈಗಲೂ ಹೌಸ್ಫುಲ್ ಆಗಿ ಪ್ರರ್ದಶನಗೊಳ್ಳುತ್ತಿವೆ. ಅಲ್ಲಿ ಯಾವ ನಾಟಕಕಾರನನ್ನು ಜನಪರಂಪರೆ ಭೂತಕಾಲಕ್ಕೆ ತಳ್ಳಲಿಲ್ಲ. ಹೀಗಾಗಿ ರಾಮಗಣೇಶ ಗಡಕರಿಯಿಂದ ಹಿಡಿದು ಯಲಕುಂಚವಾರ, ಗೊಪು ದೇಶಪಾಂಡೆ ವರೆಗಿನ ಎಲ್ಲ ನಾಟಕಕಾರರು ವರ್ತಮಾನದಲ್ಲೇ ಇರುತ್ತಾರೆ. ಆದರೆ ಕನ್ನಡದ ನಾಟಕಕಾರರು ಬಹುಬೇಗ ಭೂತಕಾಲದೊಳಗೆ ಲೀನವಾಗುವುದರಿಂದ, ವರ್ತಮಾನಕ್ಕೆ ಬರುವುದೇ ಇಲ್ಲ.
ಇವೆಲ್ಲವುಗಳಿಂದ ಹೊರಬರಬೇಕು, ಅಂದರೆ ಸಮಾಜಕ್ಕೆ ನಾಟಕದ ಅಗತ್ಯದ ಅರಿವು ಹುಟ್ಟಲು, ಬೇರೆ ಚಟಗಳಂತೆ ನಾಟಕ ನೋಡುವ ಚಟವಾಗಲು, ರಂಗಭೂಮಿಯ ವಿಚಿತ್ರ ಶಕ್ತಿಯಲ್ಲಿ ನಂಬಿಕೆ ಹುಟ್ಟುವಂತಾಗಲು,- ರಂಗಭೂಮಿಯ ಚಿಟ್ಟೆ ಸಂಸ್ಕೃತಿಯನ್ನು ಮುಟ್ಟಿಸಿಕೊಂಡತ್ತಿದ್ದು, ಸಂಗಮಿಸದೇ, ಪ್ರೇಕ್ಷಕನ ಮಿಡಿತಗಳಿಗೆ ಪ್ರತಿಕ್ರಿಯಿಸಿ ನಂಬಿಕೆಯನ್ನು ಗಳಿಸಿಕೊಂಡಾಗ ಮಾತ್ರ ಪ್ರೇಕ್ಷಕ ಸಿದ್ದಗೊಂಡು, ನಮ್ಮನ್ನು ನಂಬಿ ರಂಗಪರಂಪರೆಯ ನಿರ್ಮಾಣದ ಭಾಗವಾಗುತ್ತಾನೆ. ಈ ಶತಮಾನದ ಹದಿನಾಲ್ಕನೇ ವಿಶ್ವರಂಗ ದಿನಾಚರಣೆಯ ಸಂದರ್ಭದ ಇದು ನಿಶ್ಚಯವಾಗಲಿ ಎಂದು ಆಶೆಯನ್ನು ವ್ಯಕ್ತಪಡಿಸುತ್ತೇನೆ.






Oppide geLeyaa… 🙂
Dhanyavadagalu Gopya.
ಶ್ರೀಪತಿ ಸರ್ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ.
Thanks Shushma.
ಎಲ್ಲರಿಗೂ ವಿಶ್ವರಂಗಭೂಮಿ ದಿನದ ಶುಭಾಶಯಗಳು
ಲೇಖನ ತುಂಬಾ ಚೆನ್ನಾಗಿದೆ! “ಕನ್ನಡ ರಂಗಭೂಮಿಯ ಸಂಸ್ಕೃತಿ ಕನ್ನಡಿಗನ ಶರೀರ ಚಲನೆಯನ್ನು ನಿರ್ಧರಿಸುತ್ತಿಲ್ಲವೆಂದೇ ಹೇಳಬಹುದು”… ಇದು ತುಂಬ ಸತ್ಯವಾದ ಮಾತು!