ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಿಶ್ವವಿದ್ಯಾನಿಲಯಗಳಿಗೆ ಲೇಖಕರ ಬಗ್ಗೆ ಅನಾದರ ಏಕೆ’ – ಜಿ ಪಿ ಬಸವರಾಜು

ಲೇಖಕರನ್ನು ಕಡೆಗಣಿಸುತ್ತಿರುವ ಪರಿಪಾಠ

ಜಿ ಪಿ ಬಸವರಾಜು

ಮೊನ್ನೆ ನನ್ನ ಮಿತ್ರರೊಬ್ಬರು ಫೋನ್ ಮಾಡಿ ವಿಶ್ವವಿದ್ಯಾನಿಲಯವೊಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿರುವ ವಿಚಾರವನ್ನು ಹೇಳಿ, ಇದನ್ನು ಪರಿಹರಿಸುವಲ್ಲಿ ನೆರವಾಗಲು ಸಾಧ್ಯವೇ ಎಂದು ಕೇಳಿದರು. ಖ್ಯಾತ ಲೇಖಕರೊಬ್ಬರ ಆರು ಪ್ರಬಂಧಗಳನ್ನು ಸೇರಿಸಿ ಆ ವಿಶ್ವವಿದ್ಯಾನಿಲಯ ಪುಸ್ತಕವನ್ನು ಪ್ರಕಟಿಸಿತ್ತು. ಈ ಪುಸ್ತಕ ಡಿಗ್ರಿ ತರಗತಿಗೆ ಪಠ್ಯವಾಗಿತ್ತು. ಇಬ್ಬರು ಪ್ರಾಧ್ಯಾಪಕರು ಈ ಪ್ರಬಂಧಗಳನ್ನು ಆಯ್ದು ಸಂಕಲಿಸಿದ್ದರು. ಹೀಗಾಗಿ ಇವರು ಈ ಪುಸ್ತಕದ ಸಂಪಾದಕರು. ಅದೇ ವಿಶ್ವವಿದ್ಯಾನಿಲಯದ ಪ್ರಸಾರಾಂಗ ಈ ಕೃತಿಯನ್ನು ಪ್ರಕಟಿಸಿತ್ತು. ಈ ಕೃತಿಗಾಗಿ ಲೇಖಕರ ಅನುಮತಿಯನ್ನು ಪಡೆದಿರಲಿಲ್ಲ. ಕೃತಿಯ ಸಂಪಾದಕರು ಅನುಮತಿ ಪಡೆದಿರುತ್ತಾರೆಂದು ವಿಶ್ವವಿದ್ಯಾನಿಲಯ ಭಾವಿಸಿತ್ತೊ, ಸಂಪಾದಕರು ಈ ಅಂಶವನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಿರಲಿಲ್ಲವೋ, ಅಂತೂ ಲೇಖಕರ ಅನುಮತಿ ಇಲ್ಲದೇ ಕೃತಿ ಪ್ರಕಟವಾಗಿತ್ತು. ಪ್ರಕಾಶನದ ಹೊಣೆಹೊತ್ತಿದ್ದ ಪ್ರಸಾರಾಂಗವೂ ಈ ಬಗ್ಗೆ ಹೊಣೆಯರಿತು ನಡೆದಿರಲಿಲ್ಲವೋ ತಿಳಿಯದು.
ಈ ಸಂಗತಿ ಯಾವುದೂ ಬೆಳಕಿಗೆ ಬರುತ್ತಿರಲಿಲ್ಲವೇನೋ. ಆದರೆ ನೂರಾರು ವಿದ್ಯಾಥರ್ಿಗಳು ಓದುವ ಈ ಪಠ್ಯ ಲೇಖಕರ ಗಮನಕ್ಕೆ ಬಾರದೆ ಹೋಗುವುದು ಹೇಗೆ ಸಾಧ್ಯ? ಹೇಗೋ ಗಮನಕ್ಕೆ ಬಂದಿದೆ. ಹಕ್ಕುದಾರರಿಗೆ ಸಹಜವಾಗಿಯೇ ಸಿಟ್ಟು ಬಂದಿದೆ. ಕೂಡಲೇ ಅವರು ವಿಶ್ವವಿದ್ಯಾನಿಲಯಕ್ಕೆ ಒಂದು ನೋಟಿಸ್ ನೀಡಿದ್ದಾರೆ; ಈ ತಪ್ಪಿಗಾಗಿ ಕ್ಷಮಾಪಣೆ ಮತ್ತು ಒಂದು ಲಕ್ಷ ರೂಪಾಯಿ ಪರಿಹಾರ ಕೋರಿದ್ದಾರೆ. ತಕ್ಷಣ ಸಂಬಂಧಿಸಿದವರೆಲ್ಲ ಎಚ್ಚೆತ್ತುಕೊಂಡಿದ್ದಾರೆ. ಯಾರದು ತಪ್ಪು ಎಂದು ಹುಡುಕುವ ಯತ್ನವೂ ನಡೆದಿದೆ. ಒಂದು ಲಕ್ಷ ರೂಪಾಯಿ ಪರಿಹಾರ ಕೊಡುವ ಪ್ರಸಂಗ ಅಗತ್ಯ ಚುರುಕು ಮುಟ್ಟಿಸಿದೆ.
ಇದು ಕೇವಲ ಒಂದು ವಿಶ್ವವಿದ್ಯಾಲಯ ಮಾಡಿರುವ ಒಂದೇ ಒಂದು ತಪ್ಪಲ್ಲ. ಅನೇಕ ವಿಶ್ವವಿದ್ಯಾಲಯಗಳು ಇಂಥ ತಪ್ಪುಗಳನ್ನು ಮಾಡಿವೆ; ಮಾಡುತ್ತಲೂ ಇವೆ. ಇದೊಂದು ಮಾಮೂಲು ಸಂಗತಿ ಎನ್ನವಷ್ಟು ತಪ್ಪುಗಳು ನಡೆದು ಹೋಗುತ್ತಿವೆ. ಇವು ಬೆಳಕಿಗೂ ಬರುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮುಚ್ಚಿ ಹೋಗುತ್ತವೆ. ತಮ್ಮನ್ನು ಕೇಳದೆ ತಮ್ಮ ಲೇಖನ, ಕಥೆ, ಕವಿತೆ, ವಿಮರ್ಶೆ, ಬರಹ ಇತ್ಯಾದಿಗಳನ್ನು ಪಠ್ಯದಲ್ಲಿ ಸೇರಿಸಿರುವುದು ಅನೇಕ ಲೇಖಕರ ಗಮನಕ್ಕೆ ಬರುತ್ತದೆ. ಆದರೂ ಅವರು ಹೋರಾಟಕ್ಕೆ ಇಳಿಯುವುದಿಲ್ಲ. ಹೋರಾಟ ಎಂದರೆ ನ್ಯಾಯಾಲಯದ ಕಟ್ಟೆ ಹತ್ತಬೇಕು; ವಕೀಲರನ್ನು ಹಿಡಿದು ನ್ಯಾಯಾಲಯಕ್ಕೆ ಅಲೆಯಬೇಕು. ಹಣ, ಕಾಲ, ಶ್ರಮ ಎಲ್ಲವನ್ನು ವಿನಿಯೋಗಿಸಲು ಸಿದ್ಧರಿರಬೇಕು. ಶಿವರಾಮ ಕಾರಂತರಾದರೆ ಅಂಥ ಹೋರಾಟಕ್ಕೂ ಸಿದ್ಧ. ಅವರು ಈ ಬಗೆಯ ಹೋರಾಟಗಳನ್ನೂ ಮಾಡಿ ಹಲವರಿಗೆ ‘ಬುದ್ಧಿ’ಯನ್ನೂ ಕಲಿಸಿದ್ದಾರೆ. ಆದರೂ ಮತ್ತೆ ಮತ್ತೆ ಇಂಥ ತಪ್ಪುಗಳು ಯಾಕೆ ಆಗುತ್ತಿವೆ. ‘ಬುದ್ಧಿ’ ಕಲಿತವರು ಹಳೆಯ ಮಂದಿ; ತಪ್ಪು ಮಾಡುವವರು ಹೊಸ ಮಂದಿ. ಕಾರಂತರು ಮುಟ್ಟಿಸಿದ ಬಿಸಿ ಎಂದೋ ಆರಿಹೋಗಿದೆಯೇ ಅಥವಾ ನಮ್ಮ ಜನರೇ ದಡ್ಡುಗಟ್ಟಿಹೋಗಿದ್ದಾರೆಯೇ?

ಅನೇಕ ಲೇಖಕರು, ‘ಹೋಗಲಿ ಬಿಡಿ, ವಿದ್ಯಾರ್ಥಿಗಳು ನಮ್ಮ ಬರಹವನ್ನು ಓದುತ್ತಾರೆ; ಅಷ್ಟಾದರೆ ಸಾಕಲ್ಲ!’ ಎಂದು ತೃಪ್ತಿಪಟ್ಟುಕೊಳ್ಳುತ್ತಾರೆ. ಇದೇನು ತೃಪ್ತಿಯೋ, ಅಸಹಾಯಕತೆಯೋ ಗೊತ್ತಾಗುವುದಿಲ್ಲ.
ವಿಶ್ವವಿದ್ಯಾಲಯವೆಂದರೆ, ಪ್ರಾಧ್ಯಾಪಕರೆಂದರೆ ಲೇಖಕರ ಮಹತ್ವವನ್ನು ತಿಳಿದವರು; ಓದುವುದು, ಬರೆಯುವುದು, ಪಾಠಮಾಡುವುದು ಅವರ ನಿತ್ಯದ ಕಾಯಕವಾಗಿರುವ ಕಾರಣ, ಪಠ್ಯಗಳ ಬೆಲೆ ಅವರಿಗೆ ತಿಳಿದಿರುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿರುತ್ತದೆ. ಈ ಪ್ರಾಧ್ಯಾಪಕರಲ್ಲಿಯೂ ಬಹುಪಾಲು ಮಂದಿ ಲೇಖಕರೇ ಆಗಿರುತ್ತಾರೆ. ಅಂದಮೇಲೆ ಅವರಿಗೆ ಲೇಖಕರ ಮಹತ್ವ ತಿಳಿದಿರುವುದಿಲ್ಲವೇ? ಕೃತಿ ಸ್ವಾಮ್ಯದ ವಿಚಾರ ಬಂದಾಗ ಇವರೇಕೆ ಹೀಗೆ ವರ್ತಿಸುತ್ತಾರೆ? ಇದು ಉಡಾಫೆಯ ಮನೋಭಾವವೇ? ಅಥವಾ ಉಪೇಕ್ಷೆಯೇ?
ನನ್ನ ಪದ್ಯವೊಂದು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿರುವ ವಿಚಾರ ನನಗೆ ತಿಳಿದೇ ಇರಲಿಲ್ಲ. ಯಾರೋ ನನ್ನ ಗಮನಕ್ಕೆ ತಂದಾಗ, ಆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಮಿತ್ರರಿಗೆ ಫೋನ್ ಮಾಡಿದೆ. ‘ಇರಲಿ ಬಿಡಿ; ವಿಶ್ವವಿದ್ಯಾನಿಲಯ ಲೇಖಕರಿಗೆ ತಿಳಿಸುವುದೂ ಇಲ್ಲ, ಅವರ ಅನುಮತಿಯನ್ನು ಪಡೆಯುವುದೂ ಇಲ್ಲ. ಹೇಗೋ ಪಠ್ಯದಲ್ಲಿ ಸೇರಿದೆ, ವಿದ್ಯಾರ್ಥಿಗಳು ಓದುತ್ತಾರೆ, ಅದೇ ಮುಖ್ಯವಲ್ಲವೇ’ ಎಂಬ ಸಮಜಾಯಿಷಿಯನ್ನು ನೀಡಿ ಅವರು ನನ್ನನ್ನು ಸಮಾಧಾನಪಡಿಸಲು ನೋಡಿದರು. ಇದು ನನ್ನೊಬ್ಬನ ಅನುಭವವಲ್ಲ, ಅನೇಕ ಬರಹಗಾರರ ಅನುಭವ. ಅವರಿಗೂ ಇಂಥವೇ ಸಮಜಾಯಿಷಿಗಳು ಸಿಕ್ಕಿರಬಹುದು. ಪಠ್ಯದಲ್ಲಿ ತಮ್ಮ ಬರಹ ಸೇರಿರುವುದೇ ತಿಳಿಯದ ಲೇಖಕರೂ ಇರಬಹುದು. ಇದು ಇವತ್ತಿನ ಪರಿಸ್ಥಿತಿ.
ಬಹುಪಾಲು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಪ್ರಾಧ್ಯಾಪಕರಲ್ಲಿ ಇಂಥ ಅನಾದರದ ಭಾವ ಅದು ಹೇಗೆ ಹುಟ್ಟಿಕೊಂಡಿತು? ಈ ಪ್ರಶ್ನೆಯೆ ನನ್ನನ್ನು ಕಾಡುತ್ತಿದೆ.
ನಿಜ; ಆಧುನಿಕ ಮಾಹಿತಿ ಮತ್ತು ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವ ಈ ದಿನಗಳಲ್ಲಿ ಲೇಖಕರ ಹಕ್ಕುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅಂತಜರ್ಾಲ ತಾಣಗಳಲ್ಲಿ ಜಾಲಾಡಿ, ತೆಗೆದ ಮಾಹಿತಿ ಯಾರದೆಂಬುದನ್ನೂ ತಿಳಿಸುವ ಗೋಜಿಗೆ ಹೋಗದೆ, ಅದನ್ನು ತಮ್ಮದೇ ಎನ್ನುವ ರೀತಿಯಲ್ಲಿ ಲೇಖಕರು ಬಳಸುತ್ತಿರುವ ಈ ಸಂದರ್ಭದಲ್ಲಿ ಬರಹದ ಹಕ್ಕು ಎಂಬುದಕ್ಕೆ ಎಷ್ಟು ಬೆಲೆ? ಕೃತಿಗೆ ಕೃತಿಯನ್ನೇ ಹಾರಿಸಿಕೊಂಡು ಹೋಗುವ ಚಾಣಾಕ್ಷರೂ ಇದ್ದಾರೆಂದು ನನ್ನ ಮಿತ್ರರೊಬ್ಬರು ವಿವರಿಸಿದರು. ಒಟ್ಟಾರೆಯ ಸನ್ನಿವೇಶವೇ ಹೀಗೆ ಬದಲಾದರೆ ಯಾವ ಹೊಣೆಗಾರಿಕೆಯನ್ನು ಯಾರಿಂದ ನಿರೀಕ್ಷಿಸುವುದು ಸಾಧ್ಯ? ಹಕ್ಕಿನ ಪ್ರಶ್ನೆಯ ಆಚೆಗೆ ನೈತಿಕ ಪ್ರಶ್ನೆಯೂ ಇದೆಯಲ್ಲವೇ?
ಗಾಂಧೀಜಿಯವರ ಬರಹಗಳ ಹಕ್ಕುಗಳು ಇದ್ದದ್ದು ‘ನವಜೀವನ ಟ್ರಸ್ಟ್’ಗೆ. ಗಾಂಧೀಜಿಯವರು ತೀರಿಹೋದ ನಂತರ ಈ ಹಕ್ಕುಗಳನ್ನು ‘ನವ ಜೀವನ ಟ್ರಸ್ಟ್’ ಪಡೆದುಕೊಂಡಿತ್ತು. ಗ್ರಂಥಸ್ವಾಮ್ಯದ ಕಾಯಿದೆ (1957) ಸೆಕ್ಷನ್ 22ರ ಪ್ರಕಾರ ಈ ಹಕ್ಕುಗಳು ಲೇಖಕ ತೀರಿಕೊಂಡ ನಂತರ 60 ವರ್ಷಗಳ ವರೆಗೆ ಇರುತ್ತವೆ. ಈ ಅವಧಿ ಮುಗಿದ ಮೇಲೆ ಹಕ್ಕುಗಳು ಸಾರ್ವಜನಿಕರ ಸ್ವತ್ತು. ‘ನವ ಜೀವನ ಟ್ರಸ್ಟ್’ ಈ ಕಾಯ್ದೆಯಂತೆ 2008ರವರೆಗೆ ಈ ಹಕ್ಕನ್ನು ತನ್ನದಾಗಿ ಮಾಡಿಕೊಂಡಿತ್ತು. ಮುಂದೆ ಅದನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟಿತು. ವಾಸ್ತವವಾಗಿ ಗಾಂಧೀಜಿ ಅವರಿಗೇ ಗ್ರಂಥಸ್ವಾಮ್ಯ ಹಕ್ಕುಗಳ ಬಗ್ಗೆ ಮಾತ್ರವಲ್ಲ, ಆಸ್ತಿ ಹಕ್ಕಿನ ಬಗ್ಗೆಯೂ ಮೋಹವಿರಲಿಲ್ಲ. ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ಅವರು ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಬರೆದೂ ಇದ್ದರು. 1906ರಲ್ಲಿಯೇ ಅವರು ತಮ್ಮ ಪಿತ್ರಾರ್ಜಿತ ಆಸ್ತಿ ಹಕ್ಕನ್ನೇ ಬಿಟ್ಟುಕೊಟ್ಟಿದ್ದರು. ತಮ್ಮ ಅಣ್ಣನಿಗೆ ಬರೆದ ಕಾಗದದಲ್ಲಿ ಅವರು, ‘ನಾನಾಗಲೀ ಅಥವಾ ನನ್ನ ಮಕ್ಕಳಾಗಲೀ, ಪೋರ್ಬಂದರಿನ ನಮ್ಮ ಪಿತ್ರಾಜರ್ಿತ ಆಸ್ತಿಯ ಮೇಲೆ ಹಕ್ಕನ್ನು ಪ್ರತಿಪಾದಿಸುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ತಮ್ಮ ಜೀವಿತ ಅವಧಿಯಲ್ಲಿಯೇ ಅವರು ತಮ್ಮ ಬರಹಗಳ ಮೇಲಿನ ಹಕ್ಕನ್ನು ಇಟ್ಟುಕೊಳ್ಳಲು ಬಯಸಿರಲಿಲ್ಲ. ಅದು ಸಾರ್ವಜನಿಕರಿಗೆ ಸೇರಿದ್ದು ಎಂದೇ ಭಾವಿಸಿದ್ದರು. ಆದರೆ ಮಿತ್ರರ ಒತ್ತಾಯಕ್ಕೆ ಕಟ್ಟುಬಿದ್ದು ಹಾಗೆ ಘೋಷಿಸಿರಲಿಲ್ಲ.
ಮಾರ್ಕ್ಸ್ ಕೂಡಾ ಖಾಸಗೀ ಆಸ್ತಿ ಹಕ್ಕಿನ ವಿರೋಧಿಯಾಗಿದ್ದ. ಖಾಸಗೀ ಒಡೆತನವನ್ನು ಅವನು ಒಪ್ಪಿರಲಿಲ್ಲ. ಸಮುದಾಯದ ಒಡೆತನವನ್ನೇ ಅವನು ಪ್ರತಿಪಾದಿಸಿದ್ದ. ಗಾಂಧಿ ಚಿಂತನೆಯಿಂದ ಪ್ರಭಾವಿತರಾಗಿದ್ದ ಲೋಹಿಯಾ ಕೂಡಾ ಈ ಆಸ್ತಿ ಹಕ್ಕಿನ ವಿರೋಧಿಯಾಗಿಯೇ ಇದ್ದರು.
ಇವತ್ತಿನ ಲೇಖಕರು ಖಾಸಗೀ ಆಸ್ತಿಗಾಗಲಿ ಅಥವಾ ಆಸ್ತಿಹಕ್ಕಿನ ಬಗೆಗಾಗಲೀ ವಿರೋಧಿಗಳಲ್ಲ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಾಗಲಿ, ಅಲ್ಲಿನ ಅಧ್ಯಾಪಕರಾಗಲೀ ಆಸ್ತಿಹಕ್ಕನ್ನು ಬಿಟ್ಟುಕೊಡುವ ಮನೋಭಾವದವರೇನೂ ಅಲ್ಲ. ಗಾಂಧೀ, ಲೋಹಿಯಾ, ಮಾರ್ಕ್ಸ್, ಅಂಬೇಡ್ಕರ್, ಬುದ್ಧ ಹೀಗೆ ಹಲವರ ಬದುಕು ಮತ್ತು ಸಾಧನೆಯ ಬಗ್ಗೆ, ಅವರ ವೈಚಾರಿಕ ಶ್ರೀಮಂತಿಕೆಯ ಬಗ್ಗೆ ಗಂಟೆ ಗಟ್ಟಲೆ ಪಾಠ ಹೇಳಿದರೂ, ಆಸ್ತಿ ಹಕ್ಕಿನ ಮೋಹವನ್ನು ಅವರೇನೂ ಬಿಟ್ಟಿರುವುದಿಲ್ಲ. ಹೀಗಿರುವಾಗ ಪಠ್ಯಪುಸ್ತಕಗಳ ವಿಚಾರ ಬಂದಾಗ ಅಲ್ಲಿಯ ಲೇಖಕರನ್ನು, ಅವರ ಬರಹಗಳ ಹಕ್ಕನ್ನು ಕಡೆಗಣಿಸುವುದರ ಹಿಂದೆ ಯಾವ ತರ್ಕವಿದೆ? ಈ ಪಠ್ಯಗಳಲ್ಲಿ ಅವರ ಬರಹಗಳೂ ಸೇರಿದಾಗ ಅವರ ನಿಲುವು ಏನಾಗಿರುತ್ತದೆ? ಆಗಲೂ ಅವರು ಲೇಖಕರ ಹಕ್ಕುಗಳ ಬಗ್ಗೆ ನಿರಾಸಕ್ತರಾಗಿಯೇ ಇರುತ್ತಾರಾ? ಅಷ್ಟಕ್ಕೂ ಲೇಖಕರನ್ನು ಸೌಜನ್ಯದಿಂದ, ಗೌರವದಿಂದ ನಡೆಸಿಕೊಳ್ಳಬೇಕಾದ ಒಂದು ವಿಧಾನವನ್ನು ಯಾಕಾಗಿ ಕಡೆಗಣಿಸಬೇಕು? ಇಂಥ ಪ್ರಶ್ನೆಗಳನ್ನು ವಿಶ್ವವಿದ್ಯಾನಿಲಯಗಳು ಕೇಳಿಕೊಳ್ಳಬೇಕು; ಲೇಖಕರ ಹಕ್ಕುಗಳನ್ನು ಉದಾಸೀನದಿಂದ ನೋಡುವ ಪ್ರಾಧ್ಯಾಪಕರು ಕೇಳಿಕೊಳ್ಳಬೇಕು.
ಇವತ್ತು ಯಾವುದೇ ವಿಶ್ವವಿದ್ಯಾನಿಲಯಕ್ಕೂ ಹಣದ ವಿಚಾರದಲ್ಲಿ ಬಡತನವಿಲ್ಲ. ಕೋಟ್ಯಂತರ ರೂಪಾಯಿಯ ಸಹಾಯ ಧನ ಬರುತ್ತಲೇ ಇರುತ್ತದೆ. ಪಠ್ಯಪುಸ್ತಕವನ್ನು ವಿಶ್ವವಿದ್ಯಾನಿಲಯವೇ ಪ್ರಕಟಿಸಿದರೆ, ಆ ಪಠ್ಯದಲ್ಲಿರುವ ಲೇಖಕರಿಗೆ ಗೌರವಧನವನ್ನು ಕೊಡಲಾಗದ ಸ್ಥಿತಿಯಂತೂ ಯಾವ ವಿಶ್ವವಿದ್ಯಾನಿಲಯಕ್ಕೂ ಇಲ್ಲ. ಪಠ್ಯವನ್ನು ಬೇರೆಯ ಪ್ರಕಾಶಕರು ಪ್ರಕಟಿಸಿದರೆ, ಗೌರವಧನವನ್ನು ಕೊಡುವ ಹೊಣೆಗಾರಿಕೆ ಪ್ರಕಾಶಕರ ಮೇಲಿರುತ್ತದೆ. ಪುಸ್ತಕವನ್ನು ಪ್ರಕಟಿಸುವ ಪ್ರಕಾಶಕ ಅದನ್ನು ಉಚಿತವಾಗಿ ವಿದ್ಯಾಥರ್ಿಗಳಿಗೆ ಹಂಚುವುದಿಲ್ಲ; ಹಣಕ್ಕೆ ಮಾರುವ ಪ್ರಕಾಶಕ ಲೇಖಕರಿಗೆ ಗೌರವಧನ ಕೊಡದೆ ನುಣುಚಿಕೊಳ್ಳಲು ಹೇಗೆ ಸಾಧ್ಯ? ಹಾಗೆ ಮಾಡಿದರೆ ವಿಶ್ವವಿದ್ಯಾನಿಲಯಗಳು ಅದನ್ನು ಸಹಿಸುತ್ತವೆಯೇ?
ಲೇಖಕರಾಗಲೀ, ಕಲಾವಿದರಾಗಲೀ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದು ಅವರಿಗೆ ಸೇರಿದ ವಿಚಾರ. ಅದನ್ನು ಕಿತ್ತುಕೊಳ್ಳುವ ಹಕ್ಕು ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದುದಲ್ಲ.
(ಸೌಜನ್ಯ: ಸಂಯುಕ್ತ ಕರ್ನಾಟಕ)
 

‍ಲೇಖಕರು G

3 November, 2014

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. Sharadhi

    This is a very sensible article. On a surprising note, not only the Universities, but also a number of well-known columnists never got into the habit of referencing the original authors while delivering a vast sea of information, often available on the net.
    Further, obtaining copyright permission is rather a commonsense!

  2. C. N. Ramachandran

    ಪ್ರಿಯ ಜಿ. ಪಿ.:
    ನಿಮ್ಮ ಲೇಖನವನ್ನು ಓದಿ ಈ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ. ಸಾಮಾನ್ಯವಾಗಿ ಕನ್ನಡ ಲೇಖಕರು ತಮ್ಮ ಲೇಖನಗಳಿಗೆ ಪ್ರತಿಫಲ ಸಿಗದಿರುವ ಬಗ್ಗೆ ಸಾರ್ವಜನಿಕವಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಸಂಕೋಚಪಡುತ್ತಾರೆ. ಆದರೆ ನೀವು ನೇರವಾಗಿ ಈ ವಿಷಯವನ್ನು ಚರ್ಚಿಸಿದ್ದೀರಿ; ವಂದನೆಗಳು.
    ನಿಮಗಾಗಿರುವ ಅನುಭವ ನಾನೂ ಸೇರಿದಂತೆ ಅನೇಕ ಲೇಖಕರಿಗೆ ಆಗಿರುವುದು ಸಹಜ. ನನ್ನ ಬಗ್ಗೆಯೇ ಹೇಳುವುದಾದರೆ:
    ಅ)ಎಂಟು ವರ್ಷಗಳ ಹಿಂದೆ ಎಂದು ಕಾಣುತ್ತದೆ; ಕರ್ನಾಟಕ ವಿವಿ ಪ್ರಾಧ್ಯಾಪಕರೊಬ್ಬರು ತಾವು ವಿವಿಗಾಗಿ ಸಂಪಾದಿಸುತ್ತಿರುವ ವಿಮರ್ಶಾ ಸಂಕಲನಕ್ಕಾಗಿ ನನ್ನ ಒಂದು ಲೇಖನವನ್ನು ಆಯ್ಕೆ ಮಾಡಿರುವುದಾಗಿಯೂ, ಅದಕ್ಕೆ ನನ್ನ ಲಿಖಿತ ಒಪ್ಪಿಗೆ ಬೇಕೆಂದು, ಪ್ರಕಟವಾದ ಕೂಡಲೇ ವಿವಿಯು ನಿರ್ಧರಿಸಿರುವ ಗೌರವಧನವನ್ನು ಕೊಡುವುದಾಗಿಯೂ ದೂರವಾಣಿಯಲ್ಲಿ ಹೇಳಿದರು; ಆಗಲಿ ಎಂದು ಒಪ್ಪಿಗೆ ಕೊಟ್ಟೆ. ಅನಂತರ, ಆ ಸಂಕಲನ ಪ್ರಕಟವಾಯಿತೋ ಇಲ್ಲವೋ ಗೊತ್ತಿಲ್ಲ; ನನಗೆ ಅದರ ಪ್ರತಿಯನ್ನು ಕಳುಹಿಸಿಲ್ಲ, ಗೌರವ ಧನವಂತೂ ಇಲ್ಲವೇ ಇಲ್ಲ. ಈ ರೀತಿ ಎರಡು ಬಾರಿ ಆಗಿದೆ.
    ಆ) ೨೦೦೭-೦೮ರಲ್ಲಿ, ಕನ್ನಡ ವಿವಿ, ಹಂಪಿಯ ಪ್ರಾಧ್ಯಾಪಕ- ಮಿತ್ರರೊಬ್ಬರು ತಾವು ಸಂಪಾದಿಸುತ್ತಿರುವ “ರಾಮಾಯಣ ಮರುದರ್ಶನ” ಸಂಕಲನಕ್ಕೆ ನನ್ನ ಒಂದು ಲೇಖನವನ್ನು ಬಳಸಿಕೊಳ್ಳುತ್ತಿರುವುದಾಗಿಯೂ, ಅದಕ್ಕೆ ನನ್ನ ಒಪ್ಪಿಗೆ ಬೇಕೆಂದು, ಅನಂತರ ಅದಕ್ಕೆ ಸೂಕ್ತ ಗೌರವ ಧನವನ್ನು ಕೊಡಲಾಗುವುದೆಂದು ಪತ್ರ ಬರೆದರು. ನಾನು ನನ್ನ ಲಿಖಿತ ಒಪ್ಪಿಗೆಯನ್ನು ಕೊಟ್ಟೆ. ಕೆಲವು ತಿಂಗಳುಗಳ ನಂತರ (೨೦೦೮)ರಲ್ಲಿ, ಆ ಸಂಕಲನದ ಒಂದು ಪ್ರತಿ ನನಗೆ ತಲಪಿತು. ಮತ್ತೆ ಆರು ತಿಂಗಳು ಬಿಟ್ಟು, ಸಂಪಾದಕರನ್ನು ನನ್ನ ಗೌರವಧನದ ಬಗ್ಗೆ ನೆನಪಿಸಿದೆ; ಕೂಡಲೇ ಕಳುಹಿಸುತ್ತೇನೆಂದರು. ಮತ್ತಾರು ತಿಂಗಳು ಕಳೆಯಿತು. ೩೪ ಪುಟಗಳ ದೀರ್ಘ ಲೇಖನವಾದುದರಿಂದ, ಈ ಬಾರಿ ವಿಸಿ ಅವರಿಗೆ ಒಂದು ಪತ್ರ ವರೆದು, ಅದರೆ ಪ್ರತಿಯನ್ನು ಈ ಸಂಪಾದಕರಿಗೆ ಕಳುಹಿಸಿದೆ. ಯಾರಿಂದಲೂ ಉತ್ತರ ಬರಲಿಲ್ಲ. ಬೇಸರದಿಂದ ಸುಮ್ಮನಾದೆ.
    ನನಗನ್ನಿಸುವುದು: ಲೇಖಕರಿಗೆ ಸಂಭಾವನೆಯನ್ನು ಕೊಡಲೇ ಬೇಕು ಎಂದೇನಿಲ್ಲ; ಮೊದಲೇ ’ಸಂಭಾವನೆ ಕೊಡಲಾಗುವುದಿಲ್ಲ; ಸಹಕರಿಸಿ’ ಎಂದರೆ ಯಾರೂ ಆಗುವುದಿಲ್ಲ ಎನ್ನುವುದಿಲ್ಲ. ಆದರೆ, ಸಂಭಾವನೆ ಕೊಡುತ್ತೇನೆಂದು ಭರವಸೆ ಕೊಟ್ಟು ಕೊಡದೆ ಹೋದಾಗ, ಮತ್ತು ಆ ಪುಸ್ತಕಗಳನ್ನು ವಿವಿಯೇ ಮಾರಾಟಮಾಡುವಾಗ, ಒಂದು ೩೦೦-೪೦೦ ರೂಗಳನ್ನು ಲೇಖಕರಿಗೆ ಕೊಡುವುದಕ್ಕೆ ಏನು ಕಷ್ಟ? ನನಗಂತೂ ಅರ್ಥವಾಗುವುದಿಲ್ಲ.
    ಇದು ಖಂಡಿತವಾಗಿಯೂ ’ಭ್ರಷ್ಟಾಚಾರ’ದ ಆರೋಪವಲ್ಲ; ಲೇಖಕರ ಬಗ್ಗೆ ಇರುವ ಔದಾಸೀನ್ಯ ಹಾಗೂ ತಿರಸ್ಕಾರ ಇವುಗಳ ಬಗ್ಗೆ ಇರುವ ನೋವು.
    ನೋಡೋಣ; ನಮಗಿಬ್ಬರಿಗೆ ಮಾತ್ರ ಹೀಗಾಗಿದೆಯೋ ಅಥವಾ ಇತರರಿಗೂ ಇಂತಹ ಅನುಭವ ಆಗಿದೆಯೋ ಎಂದು.
    ಸಿ. ಎನ್. ರಾಮಚಂದ್ರನ್

  3. Anonymous

    ಮಿತ್ರ ಜೆಪಿಯವರ ಲೇಖನ ಚೆನ್ನಾಗಿದೆ, ಅದಕ್ಕೆ ನನ್ನದೊಂದು ಸೇರ್ಪಡೆ, ಹತ್ತು ಹನ್ನೆರಡು ವರ್ಷಗಳ ಹಿಂದಿನ ಮಾತು, ಖ್ಯಾತ ಲೇಖಕ ಆ ರಾ ಮಿತ್ರ ನೇತೃತ್ವದ ಸಮಿತಿ ಪದವಿಪೂರ್ವ ತರಗತಿಗೆ ನನ್ನ ಕಥೆ ದೇವರಹೆಣ ಆಯ್ಕೆ ಮಾಡಿತು, ಆದರೆ ಬಿಡಿಕಾಸು ಸಂಭಾವನೆ ಇದುವರೆಗೂ ಸಂದಾಯವಾಗಿಲ್ಲ,

  4. kvtirumalesh

    ವಿಶ್ವವಿದ್ಯಾಲಯ ಎನ್ನುವುದೊಂದು ಸಂಸ್ಥೆ. ಸಂಸ್ಥೆಯೊಂದು ಲೇಖಕರನ್ನು ಕಡೆಗಣಿಸುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಇನ್ನು ಈ ಸಂಸ್ಥೆಗಳ ಪದಾಧಿಕಾರಿಗಳೂ ಬೇಕೆಂದೇ ಹಾಗೆ ಮಾಡುತ್ತಾರೆ ಎನ್ನುವಂತಿಲ್ಲ. (ಅ)ವ್ಯವಸ್ಥೆಯಲ್ಲಿ ಹಾಗೆ ಆಗುತ್ತದೆ. ನೋಡಿ, ನಮ್ಮ
    `ಸಂಸ್ಕೃತಿ’ಯೇ ಆ ರೀತಿ: ಪತ್ರಕ್ಕೆ ಉತ್ತರಿಸುವವರು ಎಷ್ಟು ಮಂದಿ ಇದ್ದಾರೆ? ಒಂದು ಕೃತಜ್ಞತೆ ಹೇಳುವವರು?
    ಲೇಖಕರು ಮತ್ತು ವಿಶ್ವವಿದ್ಯಾಲಯಗಳು ಪರಸ್ಪರ ಸಹಯೋಗದಿಂದ ವರ್ತಿಸಿದರೆ ಒಳ್ಳೆಯದು. ಲೇಖಕರ ಕುರಿತು ಗೌರವ ಇಲ್ಲದಿದ್ದರೆ, ವಿಶ್ವವಿದ್ಯಾಲ್ಯಗಳು ಯಾಕೆ ಅವರ ಬರಹಗಳನ್ನು ಆರಿಸಿಕೊಳ್ಳುತ್ತಾರೆ? ಯಾರದಾದರೂ ಬರಹಗಳನ್ನು ಆರಿಸಿಕೊಳ್ಳಲೇ ಬೇಕು ಎನ್ನುವ ಅನಿವಾರ್ಯತೆಯೇ?
    ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ತಮ್ಮ ಲೇಖನಗಳು ಸೇರಿದರೆ, ಅದು ಲೇಖಕರಿಗೂ ಒಂದು ಗೌರವವಲ್ಲವೇ? ಕೆಲವು ಪ್ರಾಧ್ಯಾಪಕ-ಲೇಖಕರು ಇದನ್ನೇ ತಮ್ಮ ಬಯೋಡೇಟಾದಲ್ಲಿ ನಮೂದಿಸಿಕೊಳ್ಳಬಹುದು. ತಪ್ಪೇನಿಲ್ಲ. ನಮ್ಮ ಹಲವು ವಿದ್ಯಾರ್ಥ್ಹಿಗಳಿಗೆ ಲೇಖಕರ ಪ್ರಥಮ ಪರಿಚಯವೇ ಪಠ್ಯಗಳ ಮೂಲಕ ಆಗುವಂಥದು.
    ಇಲ್ಲಿ ಸಿ.ಎನ್.ಆರ್. ಓದುಗರ ಸ್ವಂತ ಅನುಭವಗಳ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ. ನನ್ನದೊಂದು ಲೇಖನ ಸಂಗ್ರಹವನ್ನು ಪ್ರಕಾಶಕರೊಬ್ಬರಿಗೋಸ್ಕರ ತಯಾರಿಸುತ್ತಿದ್ದೆ; ಆಗ ವಿಶ್ವವಿದ್ಯಾಲಯವೊಂದು ಯಾವುದೋ ಮಾಲಿಕೆಗೋಸ್ಕರ ನನ್ನಿಂದ ಒಂದು ಪುಸ್ತಕ ಅವ್ಪೇಕ್ಷಿಸಿತು. ನಾನು ಯಾಕೆ ಈ ತಯಾರಿಯಲ್ಲಿರುವ ಪುಸ್ತಕವನ್ನೇ ವಿಶ್ವವಿದ್ಯಾಲಯಕ್ಕೆ ನೀಡಬಾರದು ಎಂದುಕೊಂಡೆ. ನನ್ನ ಪ್ರಕಾಶಕರಲ್ಲಿ ಈ ವಿಷಯ ಹೇಳಿದಾಗ ಅವರು ತಕರಾರೇನೂ ಎತ್ತಲಿಲ್ಲ. ವಿಶ್ವವಿದ್ಯಾಲಯದ ಕುರಿತು ನನಗೆ ಗೌರವ ಇರುವ ಕಾರಣ ನಾನು ಈ ಆಯ್ಕೆ ಮಾಡಿದೆ. ಆದರೆ ಹಣಕಾಸಿನಲ್ಲಿ ನನಗೆ ನಷ್ಟವೇ ಆಯಿತು: ಯಾಕೆಂದರೆ ವಿಶ್ವವಿದ್ಯಾಲಯದ ನೀತಿಯ ಪ್ರಕಾರ ಪುಸ್ತಕದ ಮುಖಬೆಲೆ ಅತ್ಯಲ್ಪವಾಗಿತ್ತು. ಈ ಬಗ್ಗೆ ನಾನವರಲ್ಲಿ ಪತ್ರವ್ಯವಹಾರ ಮಾಡಿದಾಗ, ಅವರಿಗೂ ಇದು ಮನದಟ್ಟಾಗಿ, ಹಸ್ತಪ್ರತಿಯ ಖರ್ಚು ಎಂಬ ತಲೆಬರಹದ ಕೆಳಗೆ ಹಣವನ್ನು ಕೂಡಿಸಿಕೊಟ್ಟರು. ಇದರಿಂದ ಈ ಮಾಲಿಕೆಯ ಉಳಿದ ಲೇಖಕರಿಗೂ ಸಹಾಯವಾಯಿತು.
    ನನ್ನ ಅನುಭವ ಇದು–ಬೇರೆಯವರ ಅನುಭವ ಹೀಗಿರಬೇಕೆಂದೇನೂ ಇಲ್ಲ.
    ಇನ್ನು ಕೆಲವೊಂದು ಕವಿತೆಗಳನ್ನೋ ಲೇಖನಗಳನ್ನೋ ಯಾರಾದರೂ ಸೇರಿಸಿಕೊಳ್ಳಬೇಕೆಂದು ಕೇಳಿದರೆ ನಾನು ಸಂತೋಷದಿಂದ ಒಪ್ಪುತ್ತೇನೆ. ನನಗೆ ಅದೊಂದು ಗೌರವ ಎಂದುಕೊಂಡಿದ್ದೇನೆ. ಅದರಿಂದ ಸಿಕ್ಕಿದ ಹಣದ ಲೆಕ್ಕಾಚಾರ ನಾನು ಇಟ್ಟುಕೊಳ್ಳುವುದೇ ಇಲ್ಲ. ಯಾಕೆಂದರೆ, ನನ್ನನ್ನು ಲೇಖಕನನ್ನಾಗಿ ಮಾಡಿದವರೇ ಜನರು. ಕೆಲವೊಮ್ಮೆ ಅವಮಾನಗಳೂ ಆಗುತ್ತವೆ: ಅದು ಪೆಚ್ಚಾಗಿ ಬೇರೆ ಮೂಲಗಳಿಂದ; ಇಲ್ಲಿ ಅಪ್ರಸ್ತುತ.
    ಈ ಮಾತಿನ ಅರ್ಥ ಜಿ.ಪಿ.ಯವರ ಮಾತುಗಳನ್ನು ನಾನು ವಿರೋಧಿಸುತ್ತೇನೆ ಎಂದಲ್ಲ; ಅವರ ಉದ್ದೇಶ ಉತ್ತಮವಾಗಿದೆ.
    ಕೆ.ವಿ.ತಿರುಮಲೇಶ್

    • Anonymous

      ಮಾನ್ಯ ತಿರುಮಲೇಶ ಸರ್ ಅವರೆ,
      ನನಗೆ ಇಲ್ಲಿ ಅರ್ಥವಾಗದ ವಿಚಾರವೆಂದರೆ ಸೌಜನ್ಯವನ್ನು, ಜವಾಬ್ದಾರಿಯನ್ನು ಹೇಳಿಕೊಡಬೇಕಾದ ಸಂಸ್ಥೆಯೊಂದು ಈ ರೀತಿ ವರ್ತಿಸುವುದು ಸರಿಯೆ? ನಿಮ್ಮ ಉದಾಹರಣೆಯನ್ನು ತೆಗೆದುಕೊಂಡರೆ ನಿಮ್ಮ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಸಂಸ್ಥೆ ಹೇಗೆ ನಡೆದುಕೊಳ್ಳಬೇಕೊ ಹಾಗೆ ನಡೆದುಕೊಂಡಿದೆ. ಅದನ್ನ ಆ ವಿಶ್ವವಿದ್ಯಾಲಯದ ಹೆಚ್ಚುಗಾರಿಕೆಯಾಗಿ ಗುರುತಿಸಲು ಸಾಧ್ಯವಿಲ್ಲ. ಅದು ತನ್ನ ಕರ್ತವ್ಯವನ್ನು ನಿಭಾಯಿಸಿದೆ. ಆದರೆ, ಎಲ್ಲರ ವಿಚಾರದಲ್ಲೂ ಎಲ್ಲ ವಿಶ್ವವಿದ್ಯಾಲಯಗಳು ಹೀಗೆಯೇ ವರ್ತಿಸಬೇಕಲ್ಲವೆ. ಕೃತಿಕಾರರಿಗೆ ಅವರ ಬರಹವನ್ನು ಪಠ್ಯ ಪುಸ್ತಕಕ್ಕೆ ಆಯ್ಕೆ ಮಾಡಿಕೊಂಡದ್ದನ್ನಾದರೂ ತಿಳಿಸುವ ಶಿಷ್ಟಾಚಾರ ಪಾಲಿಸಬೇಡವೆ? ವಿಶ್ವ ವಿದ್ಯಾಲಯಕ್ಕೆ ಕೃತಿಯೊಂದು ಆಯ್ಕೆಯಾಗುವುದು ಕೃತಿಕಾರನಿಗೆ ಸಲ್ಲುವ ಗೌರವ ಹೌದು. ಆತ/ಆಕೆ ಅದನ್ನು ತನ್ನ ಬಯೋಡಾಟದಲ್ಲಿ ನಮೂದಿಸಲಾದರೂ ಅವರಿಗೆ ಮಾಹಿತಿ ಬೇಕಲ್ಲವೆ.
      ಆರ್.ಎಸ್.ಎಚ್.

  5. kum veerabhadrappa

    ಲೇಖಕರಾದ ಜಿಪಿ ಮತ್ತು ಸಿಎನ್ನಾರ್ ಬರೆದ ಲೇಖನ ಹಾಗೂ ಪ್ರತಿಕ್ರಿಯೆಗಳನ್ನು ಓದಿದ ಪರಿಣಾಮವಾಗಿ ನನ್ನ ಅನುಭವವನ್ನು ಪೂರಕವಾಗಿ ಹಂಚಿಕೊಳ್ಳುತ್ತಿರುವೆ, ಹತ್ತು ಹನ್ನೆರಡು ವರ್ಷಗಳ ಹಿಂದೆ ನನ್ನ ಕಥೆ ದೇವರಹೆಣ ಪಿಯು ತರಗತಿಗೆ ಪಠ್ಯವಾಗಿತ್ತು, ಲಿಖಿತ ಮಾತುಕತೆಯಂತೆ ಸಂಭಾವನೆಯಾಗಲೀ ಗೌರವಪ್ರತಿಯಾಗಲೀ ಸಂದಾಯವಾಗಲಿಲ್ಲ, ಅಲೆದಾಟ ನೋಡಿ ಬೇಸತ್ತ ಅಧಿಕಾರಿ ಆ ಕಾರ್ನಾಡ ತೇಜಸ್ವಿಯವರಂಥ ಹಿರಿಯಲೇಖಕರೇ ಇದುವರೆಗೆ ಸಂಭಾವನೆ ಕೇಳಿಲ್ಲ, ನೀವು ಕೇಳೋದು ಆಶ್ಚರ್ಯ, ವಿದ್ಯಾರ್ಥಿಗಳು ನಿಮ್ಮ ಕಥೆ ಓದೋದೆ ನಿಜವಾದ ಸಂಭಾವನೆ ಎಂದು ಹೇಳಿದರು, ಈಗಲೂ ನನ್ನಂಥ ಹಲವು ಲೇಖಕರ ಬರಹಗಳು ತಮ್ಮ ಜನಕರಾಯರ ಹಂಗು ತೊರೆದು ವಿವಿಧ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಪೋಜ್ ಕೊಡುತ್ತಲೇ ಇವೆ, ಗೈಡು ತಯಾರಕರ ವಾಹನಗಳಿಗೆ ಇಂದನವಾಗುತ್ತಲೇ ಇವೆ, ಲೇಖಕರ ಕಣ್ಣುಗಳಲ್ಲಿ ತುಳುಕುವ ಆನಂದ ಬಾಷ್ಪವೇ ಸಂಭಾವನೆ, ನಿಟ್ಟುಸಿರೇ ಗೌರವಪ್ರತಿ, ಇದಕ್ಕಿಂತ ಹೆಚ್ಪಿನದ್ದು ವಿಶ್ವವಿದ್ಯಾಲಯಗಳಿಂದ ನಿರೀಕ್ಷಿಸುವುದು ಅಸಾಧ್ಯ (ಕುಂವೀ)

  6. mmshaik

    nija ee oudasinya sahayyavaadudalla…uttama baraha..JP SIR.

  7. lalithasiddabasavaiah

    ಅಂತೂ ಈ ವಿಷಯ ಚರ್ಚೆಗೆ ಬಂದಿತು, ನನಗೆ ನೆಮ್ಮದಿಯೆನಿಸಿದೆ. ನನ್ನ ಎರಡು ಪುಸ್ತಕಗಳು ಕನ್ನಡ ಎಂಎ ತರಗತಿಗಳಿಗೆ ಪಠ್ಯವಾಗಿವೆ. ಗೌರವಧನದ ಮಾತಿರಲಿ ಆ ಬಗ್ಗೆ ಈವರೆಗೆ ನನಗೆ ಲಿಖಿತ ಪತ್ರ ಬಂದಿಲ್ಲ.
    ೧.ಕರ್ನಾಟಕ ವಿವಿಯು ಸುಮಾರು ನಾಲ್ಕು ವರ್ಷಗಳ ಹಿಂದೆ ಕನ್ನಡ ಎಂಎ ತರಗತಿಗಳಿಗೆ ಮಹಿಳಾಕಾವ್ಯ ಎನ್ನುವ ಹೊಸ ವಿಷಯವನ್ನು ಪಠ್ಯಕ್ಕೆ ಸೇರಿಸಿದರಂತೆ. ಮೊದಲ ತಂಡಕ್ಕೆ ಪಠ್ಯಪುಸ್ತಕವಾಗಿ ನನ್ನ “ಕೆಬ್ಬೆನೆಲ” ಎನ್ನುವ ಕವನಸಂಕಲನವನ್ನು ಆಯ್ದುಕೊಂಡರು. ಈ ವಿಷಯವನ್ನು ದುರ್ಗಾದಾಸ್ ಎನ್ನುವ ಹಿರಿಯರೊಬ್ಬರು ತುಮಕೂರಿಗೆ ಅವರು ಕಾರ್ಯಾರ್ಥವಾಗಿ ಬಂದಿದ್ದಾಗ ಅವರು ಉಳಿದುಕೊಂಡ ಹೋಟೆಲಿಗೆ ನನ್ನನ್ನು ಕರೆಸಿಕೊಂಡು ಮಾಹಿತಿ ಕೊಟ್ಟರು. ಅವರಲ್ಲಿ ನಾವು ಗಂಡಹೆಂಡತಿ ಕೇಳಿದ್ದು ಒಂದೆ.ಈ ಬಗ್ಗೆ ಲಿಖಿತವಾಗಿ ಒಂದು ಪತ್ರ ಕಳುಹಿಸಿಕೊಡಿ ಅಂತ. ಏಕೆಂದರೆ ಗೌರವಧನದ ಬಗ್ಗೆ ನಮಗೆ ಗೊತ್ತೂ ಇರಲಿಲ್ಲ. ಇದು ನಡೆದು ನಾಲ್ಕು ವರ್ಷ ಆಗಿರಬೇಕು.ನನ್ನ ಪುಸ್ತಕವನ್ನು ವಿವಿಯಲ್ಲಿ ಪಾಠ ಮಾಡುತ್ತಲೆ ಇದ್ದಾರೆ. ಪಾಠ ಮಾಡುವ ಪ್ರೊಫೆಸರ್ ನನ್ನಿಂದಲೆ ಎರಡು ಪ್ರತಿ ತರಿಸಿಕೊಂಡರು. ಲಿಖಿತ ಪತ್ರದ ಬಗ್ಗೆ ಕೇಳಿದ್ದಕ್ಕೆ ಅವರು ತಮ್ಮದೆ ವಿವಿಯ ಅಸಮರ್ಪಕತೆ ಬಗ್ಗೆ ಅಸಹಾಯಕತೆಯಿಂದ ಮಾತನಾಡಿದರು. ಆಮೇಲೆ ದುರ್ಗಾದಾಸರಿಗೆ ನಾನು ಎರಡು ಬಾರಿ ಫೋನ್ ಮೂಲಕ ವಿವಿಯಿಂದ ಒಂದು ಪತ್ರ ಕಳಿಸಲು ತೊಂದರೆಯೇನು ಎಂದು ಕೇಳಿಯೇ ಕೇಳಿದೆ. ಹೌದಾ ಬಂದಿಲ್ಲವಾ ಅಂತಲೆ ಕಥೆ ಕಳೆದರು.
    ೨. ಈ ವರ್ಷದಿಂದ ” ಇನ್ನೊಂದು ಸಭಾಪರ್ವ” ಎನ್ನುವ ನನ್ನ ನಾಟಕವನ್ನು ಬಿಜಾಪುರದ ಮಹಿಳಾ ವಿವಿ ಕನ್ನಡ ಎಂಎ ತರಗತಿಗೆ ಪಠ್ಯವಾಗಿ ಬೋಧಿಸುತ್ತಿದೆ. ಈ ಬಗ್ಗೆ ಅಲ್ಲಿನ ವಿಜಯಾದೇವಿಯವರು ಫೋನ್ ಮೂಲಕ ನನಗೆ ತಿಳಿಸಿದ್ದರು. ಕರ್ನಾಟಕ ವಿವಿಯ ಪ್ರಕರಣವನ್ನು ನೆನಪಲ್ಲಿಟ್ಟುಕೊಂಡು ಮಹಿಳಾ ವಿವಿಯಾದರು ಲೇಖಕಿಯರ ಪುಸ್ತಕಕ್ಕೆ ನ್ಯಾಯ ಒದಗಿಸಲಿ ಎಂದು ಅವರನ್ನು ಈ ಬಗ್ಗೆ ಲಿಖಿತಪತ್ರ ಬರೆಯಲು ಕೋರಿದೆ. ಆದರೆ ಪುಸ್ತಕ ಪಠ್ಯವಾದಮೇಲೆ ವಿದ್ಯಾರ್ಥಿಯೊಬ್ಬರು ಆ ಬಗ್ಗೆ ನನ್ನೊಡನೆ ಅವರ ಕೆಲವು ಪ್ರಶ್ನೆ ಕೇಳಿದಾಗಲೆ ನನಗೆ ಗೊತ್ತಾಗಿದ್ದು, ಆಗಲೆ ಪಠ್ಯ ಜಾರಿಗೆ ಬಂದಿದೆ ಎನ್ನುವುದು. ಕೂಡಲೆ ವಿಜಯಾದೇವಿಯವರನ್ನು ಈ ಬಗ್ಗೆ ವಿಚಾರಿಸಿದರೆ ಅವರು ಹೇಳಿದ ಮಾತು ಅಧ್ಭುತವಾಗಿತ್ತು. ” ಮೇಡಮ್, ನಾವು ಈವರೆಗೆ ಯಾವ ಲೇಖಕರಿಂದಲೂ ಅನುಮತಿ ಗಿನುಮತಿ ಅಂತ ತೆಗೆದುಕೊಂಡಿಲ್ಲ. ನಿಮಗೆ ಫೋನ್ ಮೂಲಕ ತಿಳಿಸಿದ್ದೆನಲ್ಲ, ಸಾಕಲ್ಲವೇ? ಪುಸ್ತಕ ಹುಡುಗರು ಓದೋದೆ ಹೆಚ್ಚಲ್ಲವೆ? ಅನುಮತಿ ತಗೊಳ್ಳಬೇಕೂಂತ ವಿವಿ ನಿಯಮಗಳಲ್ಲೆ ಇಲ್ಲ”. ನಾನು ಅವರೊಂದಿಗೆ ಕೊಂಚ ರೇಗಿನಿಂದಲೆ ಮಾತಾಡಿ ಆಮೇಲೆ ವಿವಿಯ ಕುಲಪತಿಯವರೊಂದಿಗೆ ಮಾತನಾಡಿದೆ. ಅವರು ವಿಚಾರಿಸುತ್ತೇನೆ ಎಂದರು. ಆಮೇಲೊಂದು ದಿನ ಕನ್ನಡವಿಭಾಗದ ಗುಮಾಸ್ತರು ನನ್ನ ವಿಳಾಸ ಕೇಳಿದರು ಫೋನ್ ಮೂಲಕ , ಆಮೇಲೊಂದು ಕಾಗದ ಬಂತು, ಹನ್ನೆರೆಡು ಸಾಲಿನ ಆ ಕಾಗದದಲ್ಲಿ ಹನ್ನೆರಡು ತಪ್ಪುಗಳಿವೆ. ನನ್ನ ಹೆಸರೂ ಸಮೇತ. ಆ ಪತ್ರ ಸಮೇತ ಕೋರ್ಟಿಗೆ ಹೋಗಬೇಕೂಂತ ಅನ್ನಿಸಿತು ಹೋಗಲಿಲ್ಲ. ಕಾರಣ ನನಗಿರುವ ಕಾನೂನಿನ ಕಡಿಮೆ ತಿಳುವಳಿಕೆ ಮತ್ತು ತಿಳಿದವರ ಸಲಹೆ ತೆಗೆದುಕೊಳ್ಳಲು ಇರುವ ಉದಾಸೀನ. ನಮ್ಮನ್ನು ಅಂದರೆ ಲೇಖಕರನ್ನು ಈ ಉದಾಸೀನವೆ ಹಾಳು ಮಾಡುತ್ತಿದೆ.
    ೩. ನನ್ನ ಕೆಲವು ಪದ್ಯಗಳು ಯಾವಾವುದೊ ಪಠ್ಯಗಳಲ್ಲಿ ಸೇರಿವೆ. ಕೆಲವೊಮ್ಮೆ ಯಾರೋ ವಿದ್ಯಾರ್ಥಿ ಫೋನ್ ಮಾಡಿದಾಗಲೆ ಅದು ತಿಳಿಯೋದು. ಆಗ ಹೌದಾ ಎನ್ನುವಂತಾಗಿದೆ. ಅದರಲ್ಲಿ, ಬೇಗೂರು ರಾಮೇಗೌಡರು, ಪಿಯೂಸಿ ಪಠ್ಯಸಮಿತಿಯ ಸತ್ಯನಾರಾಯಣ, ಜೈನ್ ವಿವಿಯ ಹೊನ್ನೆಗೌಡರು ಅಪವಾದವೆನ್ನುವಂತೆ ಪೂರ್ವಭಾವಿ ಅನುಮತಿ ಕೋರಿ ಲೇಖಕರೊಂದಿಗೆ ವ್ಯವಹರಿಸಬೇಕಾದ ಸೌಜನ್ಯವನ್ನು ತೋರಿಸಿರುವುದು ಮತ್ತು ಅಚ್ಚರಿಯೆನ್ನುವಂತೆ ಪ್ರತಿ ಕಳುಹಿಸಿರುವುದು.
    ೪. ಮೇಲಿನ ಇಡಿ ಪುಸ್ತಕಗಳಲ್ಲಾಗಲಿ, ಬಿಡಿ ಕವನಗಳಲ್ಲಾಗಲಿ ಗೌರವಧನದ ಮಾತೂ ಇಲ್ಲ.ಪ್ರತಿಯಂತೂ ಇಲ್ಲವೆ ಇಲ್ಲ. ಈಗ ಈ ಚರ್ಚೆಯಲ್ಲಿ ಸಿಎನ್ನಾರ್ ಅಂಥಾ ಹಿರಿಯರೂ ಇಂಥದ್ದೆ ಅನುಭವಕ್ಕೆ ಒಳಗಾಗಿದ್ದರೆಂದು ತಿಳಿದು ವಿಕೃತ ಸಂತೋಷಾವಾಯಿತು!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading