ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕಾನಂದ ಕಾಮತ್ ಕವಿತೆ- ವಿರಹ ಕಲಿಸುತ್ತದೆ..

 ವಿವೇಕಾನಂದ ಕಾಮತ್

ವಿರಹ ಕಲಿಸುತ್ತದೆ-
ಕತ್ತಲಿನ ಕೋಣೆಯಲ್ಲಿ
ಒಂಟಿಯಾಗಿ ಉರಿಯುವುದನ್ನು
ಸುಡುವ ಕುಲುಮೆಯಲ್ಲಿ
ಭಾವನೆಗಳು ಬೇಯಿಸುವುದನ್ನು.

ವಿರಹ ಕಲಿಸುತ್ತದೆ-
ತಾರೆ ಚಂದಿರನ ಕನ್ನಡಿಯಲ್ಲಿ
ನಿನ್ನ ಮುಖ ನೋಡುವುದನ್ನು
ನಿದ್ದೆ ಕದ್ದ ಇರುಳಲ್ಲಿ ಪರಿತಪಿಸಿ
ಸುಮ್ಮನೆ ಹೊರಳಾಡುವುದನ್ನು.

ವಿರಹ ಕಲಿಸುತ್ತದೆ –
ಸುತ್ತ ಮುತ್ತಲಿನ ಮಂದಿ
ಮರೆತು ನಿನ್ನನೇ ನೆನೆಯುವುದನ್ನು
ನನ್ನನು ನಿನ್ನ ವಶಕೆ ಕೊಟ್ಟು
ನನ್ನನೇ ನಾ ಕಳೆದುಕೊಳ್ಳುವುದನ್ನು.

ವಿರಹ ಕಲಿಸುತ್ತದೆ –
ಕಾವ್ಯದ ಕಾಗುಣಿತ ಗೊತ್ತಿಲ್ಲದವನಲ್ಲಿ
ಒಬ್ಬ ಕವಿ ಹುಟ್ಟುವುದನ್ನು
ರೋಮಿಯೋ-ಜೂಲಿಯೆಟ್ ಹೀರ್ ರಾಂಜಾ
ದುರಂತ ಕಥೆಗಳು ಹಿತವಾಗಿಸುವುದನ್ನು.

ವಿರಹ ಕಲಿಸುತ್ತದೆ-
ನೋವು ಮುಳ್ಳ ಗಾಯದಲ್ಲೂ
ನಗು ಅರಳಿಸುವುದನ್ನು
ನಿನ್ನ ನೆನಪಿನ ಮಧುಪಾನದ
ಅಮಲಿನಲ್ಲಿ ಮೈ ಮರೆಯುವುದನ್ನು.

ವಿರಹ ಕಲಿಸುತ್ತದೆ-
ಎಲ್ಲಾ ತೊರೆದು ಶಾಂತಿ ಅರಸುವ
ಬುದ್ಧನಾಗುವುದನ್ನು
ಮತ್ತೆ ಮತ್ತೆ ನಿನ್ನ ಹಂಬಲಿಸಿ
ಹೊಸದಾಗಿ ಪ್ರೀತಿಸುವುದನ್ನು.

‍ಲೇಖಕರು Admin

25 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading