ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಾಪುರ ಜಿಲ್ಲೆಯ ದಲಿತರ ವಿಮೋಚಕ ಕಾಕಾ

ದಲಿತರ ಬಂಧು : ಪದ್ಮಶ್ರೀ ಕಾಕಾ ಕಾರಖಾನೀಸ

ಡಾ. ಅಪ್ಪಗೆರೆ ಸೋಮಶೇಖರ್

ಭಾರತೀಯ ಜಾತಿ ಶ್ರೇಣೀಕೃತ ಸಮಾಜವು ಆ ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ(ಹೆಣ್ಣಾಗಲಿ/ಗಂಡಾಗಲಿ) ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುತ್ತಿರುತ್ತದೆ; ಪ್ರಭಾವಿಸುತ್ತಿರುತ್ತದೆ; ರೂಪಿಸುತ್ತಿರುತ್ತದೆ.ಯಾವುದೇ ಸಮಾಜದಲ್ಲಿ ಹುಟ್ಟಿದ ಮನುಷ್ಯನು ಆ ಸಮಾಜ, ಸಂಸ್ಕೃತಿಯಿಂದ ತರಬೇತಿಗೊಂಡ ಮನಸ್ಥಿತಿಯವರೆ ಆಗಿರುತ್ತಾರೆ.ಹೀಗೆ ತರಬೇತಿಗೊಂಡವರಲ್ಲಿ ಕೆಲವರು ಸಮಾಜ-ಸಂಸ್ಕೃತಿಯ ಆಜ್ಞಾಪಾಲಕರಾಗಿರುತ್ತಾರೆ. ಮತ್ತೆ ಕೆಲವರು ತಾವು ಪಡೆದ ಶಿಕ್ಷಣದಿಂದಲೊ, ವಿವೇಕದಿಂದಲೊ; ಮನುಷ್ಯತ್ವದಿಂದಲೊ, ಪರಂಪರೆಯಿಂದ ಕಲಿತ ಪಾಠದಿಂದಲೊ ಸಮಾಜದಲ್ಲಿನ ಒಳಿತು-ಕೆಡುಕುಗಳನ್ನ ಪ್ರಜ್ಞಾಪೂರ್ವಕವಾಗಿ ಅರ್ಥೈಸಿಕೊಂಡು ಜೀವಪರವಾಗಿ ಬದುಕುತ್ತಲೇ ಮಾನವೀಯ ಸಮಸಮಾಜವನ್ನು ಕಟ್ಟ ಬಯಸುತ್ತಾರೆ. ಜಾತಿ, ಮತಾಂಧತೆ, ಕೋಮುವಾದ, ಧರ್ಮಾಂಧತೆಯನ್ನು ಮೀರಲು ಇಚ್ಛಿಸುತ್ತಾರೆ.ಜಾತಿಗಿಂತ ಮನುಷ್ಯತ್ವ ಮುಖ್ಯವೆಂದು ಪ್ರತಿಪಾದಿಸುತ್ತಾರೆ. ಎಲ್ಲಾ ಜಾತಿಯಲ್ಲಿರುವ ಅವಮಾನಿತರು, ಬಡವರು, ಮಹಿಳೆಯರು,ಹಸಿದವರು, ನಿರ್ಗತಿಕರ ಬಗೆಗೆ ಚಿಂತಿಸುತ್ತಾರೆ.ತಮ್ಮೆಲ್ಲವನ್ನು ತ್ಯಾಗ ಮಾಡುತ್ತ ಅವರ ಪರ ದುಡಿಯುತ್ತಾರೆ.

ಈ ಕಾರಣಕ್ಕಾಗಿ ಸ್ವತಃ ತಾವು ತಮ್ಮ ಜಾತಿ, ಸಮಾಜದಿಂದ ಅವಮಾನಕ್ಕೆ, ಬಹಿಷ್ಕಾರಕ್ಕೆ ಒಳಗಾಗುತ್ತಾರೆ.ಹೀಗೆ ಅಸ್ಪೃಶ್ಯರ ಪರ ಹೋರಾಡಿದ ಕಾರಣಕ್ಕಾಗಿ, ಅವರ ಸಾಮಾಜಿಕ ನ್ಯಾಯದ ಪರ ದನಿ ಎತ್ತಿದ ಉದೇಶಕ್ಕಾಗಿ ನೋವುಂಡವರು ಕರ್ನಾಟಕದ ಪದ್ಮಶ್ರೀ ಕಾಕಾ ಕಾರಖಾನೀಸ, ಶ್ರೀ ಕುದ್ಮಲ್ ರಂಗರಾವ್, ಆರ್.ಗೋಪಾಲ ಸ್ವಾಮಿ ಅಯ್ಯರ್ ಪ್ರಮುಖರು.ಯಾವ ಬ್ರಾಹ್ಮಣಶಾಹಿ ವ್ಯವಸ್ಥೆ ಈ ಸಮಾಜದಲ್ಲಿ ಮನುಷ್ಯರ ನಡುವೆ ಜಾತಿ ತಾರತಮ್ಯದ ಅಡ್ಡಗೋಡೆಗಳನ್ನ ನಿರ್ಮಿಸಿ ಮನಸ್ಸುಗಳನ್ನು ಹೊಡೆಯಿತೊ; ಅಂತಹ ಬ್ರಾಹ್ಮಣ ಜಾತಿ ಸಮಾಜದಿಂದ ಬಂದವರು ಇವರು.ಜಾತಿಯ ಅವರಮಾನಕ್ಕೆ ಒಳಗಾಗಿರುವ ಯಾವೊಬ್ಬ ವ್ಯಕ್ತಿಯನ್ನೇ ಕೇಳಿದರು ನಮ್ಮ ಈ ಸ್ಥಿತಿಗೆ ಬ್ರಾಹ್ಮಣರೆ ಕಾರಣ ಎಂದೇಳುತ್ತಾನೆ. ಇದು ಚಾರಿತ್ರಿಕ ಸತ್ಯವೂ ಹೌದು. ಹಾಗಂತ ಬ್ರಾಹ್ಮಣರೆಲ್ಲಾ ಜಾತಿವಾದಿಗಳಲ್ಲ ಎಂಬುದು ಸಹಾ ಅಷ್ಟೇ ಕಟು ಸತ್ಯ.ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವ ಮುಖ್ಯವೇ ಹೊರತು ಆತನ ಜಾತಿ, ಧರ್ಮ ಮುಖ್ಯವಲ್ಲ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಯೂ ಕೂಡ ಬ್ರಾಹ್ಮಣಶಾಹಿಗೆ ವಿರುದ್ಧವಾಗಿ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟವರು ಕಾಕಾ ಕುದ್ಮಲ್ ಅಯ್ಯರ್.ಈ ಮೂರುಜನ ಸಮಾಜ ಚಿಂತಕರು ಬ್ರಾಹ್ಮಣ ಜಾತಿಯನ್ನು ಒಳಗೊಂಡಂತೆ ಭಾರತದ ಎಲ್ಲಾ ಜಾತಿ ಸಮಾಜಗಳಿಗೂ ಚರಿತ್ರೆಯ ಮಾದರಿ ಪಾಠಗಳಾಗಬೇಕಿದೆ.

ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಬರೆದಿರುವ ಪದ್ಮಶ್ರೀ ಕಾಕಾ ಕಾರಖಾನೀಸರು(ಪದ್ಮಶ್ರೀ ಪ್ರಕಾಶನ, ವಿಜಾಪುರ, 1989) ಗ್ರಂಥವು ಕಾಕಾ ಅವರ ಜೀವನ, ಹೋರಾಟ ಹಾಗೂ ಚಿಂತನೆಗಳ ಬಗೆಗಿನ ಮಹತ್ವ ದಾಖಲೆಯಾಗಿದೆ. ತಮ್ಮ ಈ ಗ್ರಂಥದ ಮೂಲಕ ಕಾಕಾ ಅವರನ್ನು ಪರಿಚಯಿಸಿದ ಡಾ. ಕೆ.ಕೆ.ಕುಲಕರ್ಣಿ ಅವರು ಅಭಿನಂದನಾರ್ಹರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಿಂತ ಒಂದು ವರ್ಷ ಹಿರಿಯರಾದ ಪದ್ಮಶ್ರೀ ಗಣೇಶ ಗೋವಿಂದ ಕಾರಖಾನೀಸರು ಏಪ್ರಿಲ್ 20, 1890 ರಂದು ಕೊಲ್ಲಾಪುರ ಜಿಲ್ಲೆಯ ಮಲಕಾಪುರ ಗ್ರಾಮದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರು.ತಂದೆ ಗೋವಿಂದರಾವ, ತಾಯಿ ಪಾರ್ವತೀಬಾಯಿ. ಈ ದಂಪತಿಗಳ ಐದು ಜನ ಮಕ್ಕಳಲ್ಲಿ ಕಾಕಾ ನಾಲ್ಕನೆಯವರು. ‘ಡಾ. ಬಾಳಕೃಷ್ಣ(ಅಣ್ಣಾ ಸಾಹೇಬ), ಶಂಕರದೇವ’ಅಣ್ಣಂದಿರು; ಗೋದಾತಾಯಿ ಅಕ್ಕ, ಬಾಳೂತಾಯಿ ತಂಗಿ.ಅಣ್ಣ ಡಾ.ಬಾಳಕೃಷ್ಣ ಡಾಕ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಮಖಂಡಿಯ ಸಂಸ್ಥಾನದಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡು ಜಮಖಂಡಿಗೆ ಬಂದು ನೆಲಸಿದರು. ಇವರ ಜೊತೆಯಲ್ಲಿ ಕಾಕಾ ಅವರು ಸಹಾ ವಿದ್ಯಾಭ್ಯಾಸಕ್ಕಾಗಿ 1903ರಲ್ಲಿ ಆಗಿನ ಬಿಜಾಪುರ ಜಿಲ್ಲೆಯ ಜಮಖಂಡಿಗೆ(ಈಗ ಇದು ಬಾಗಲಕೋಟೆ ಜಿಲ್ಲೆಗೆ ಸೇರಿದೆ.) ಬಂದು ನೆಲೆಸಿದರು.

ಮುಂದೆ ಇದೇ ಕಾಕಾ ಅವರ ಕಾರ್ಯಕ್ಷೇತ್ರವಾಯಿತು.’ಕಾರಖಾನೀಸ’ ಇವರ ಮನೆತನದ ಹೆಸರಾಗಿದೆ.ಕಾರಖಾನೀಸ ಎಂದರೆ ಕೋಟೆಯಲ್ಲಿಯ ವಿವಿಧ ಇಲಾಖೆಗಳ ನಾಗರಿಕ ಅಧಿಕಾರಿ ಎಂದರ್ಥ.13ನೇ ಶತಮಾನದ ಆರಂಭದಲ್ಲಿ ಕಾಕಾ ಅವರ ಮನೆತನದವರು ಮೊಗಲಾಯಿ ಪ್ರಾಂತದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದವರೆಂದು ಕಾರಖಾನೀಸರ ಮನೆತನಕ್ಕೆ ಸಂಬಂಧಿಸಿದ ಕಡತಗಳು ಹೇಳುತ್ತವೆ. ಇವರ ಮನೆತನಕ್ಕೆ ‘ಕಾರಖಾನೀಸ’ ಎಂಬ ಹೆಸರು ಬರುವುದಕ್ಕಿಂತ ಮುಂಚೆ ಇವರ ಮನೆತನಕ್ಕೆ ಓರ್ಪ ಎಂಬ ಅಡ್ಡ ಹೆಸರಿತ್ತೆಂದು ದಾಖಲೆಗಳು ಹೇಳುತ್ತವೆ.ಸುಮಾರು ಕ್ರಿ. ಶ. 1647ರ ಸಂದರ್ಭದಲ್ಲಿ ಇವರ ಮನೆತನದ ಕಾರಖಾನೀಸ ಎಂಬ ವ್ಯಕ್ತಿ ವಿಶಾಲಗಢ ಸಂಸ್ಥಾನದಲ್ಲಿ ಕರವೀರ ಕೋಟೆಯಲ್ಲಿ ಕೆಲಸಕ್ಕಿದ್ದನಂತೆ.ಇದೇ ಸಂಸ್ಥಾನದಲ್ಲಿ ಕಾಕಾ ಅವರ ತಂದೆ ಗೋವಿಂದರಾವರುಕೆಲಸ ಮಾಡುತ್ತಿದ್ದರಂತೆ.ಇವರ ಮನೆತನಕ್ಕಿದ್ದ ಓರ್ಪ ಎಂಬ ಅಡ್ಡಹೆಸರಿಗೆ ಬದಲಾಗಿ ಇವರ ಮನೆತನದ ಹಿರಿಯನಾದ ಕಾರಖಾನೀಸನ ಹೆಸರನ್ನೆ ಮನೆತನದ ಹೆಸರನ್ನಾಗಿ ಬಳಸಲಾಗಿದೆ.

ನೂರು ವರ್ಷಗಳ ಅರ್ಥಪೂರ್ಣ ಬದುಕನ್ನು ಬದುಕಿದ ಕಾಕಾ ಅವರು ಪ್ರಾಥಮಿಕ ಶಿಕ್ಷಣವನ್ನು ಮಲಕಾಪುರದಲ್ಲಿಯೂ, ಮಾಧ್ಯಮಿಕ ಶಿಕ್ಷಣ(ಇಂಗ್ಲೀಷ್)ವನ್ನು ಜಮಖಂಡಿಯ’ಪರಶುರಾಮ ಭಾವು ಮಾಧ್ಯಮಿಕ ಶಾಲೆ’ಯಲ್ಲಿ ಪಡೆದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಉಚ್ಚ ಶಿಕ್ಷಣವನ್ನು ಪಡೆದ ಕಾಕಾ ಅವರು 1917ರಲ್ಲಿ ಬಿ.ಎ. ಪದವಿಯನ್ನು ಗಳಿಸಿದರು.ಕಾಕಾ ಅವರ ತಂಗಿ ಬಾಳೂತಾಯಿ ಠಾಕೂರರು ಹೇಳುವ ಹಾಗೆ : ಕಾಕಾ ಅವರು ತಮ್ಮ ಸೇಹಿತ ಹಾಗೂ ಸ್ಥಳೀಯರ ಸಹಕಾರದಿಂದ ಪುಣೆಯ ಹತ್ತಿರದ ‘ಚಿಂಚವಡ’ದ ಹತ್ತಿರ 1918ರಂದು ‘ಅನಾಥ ವಿದ್ಯಾರ್ಥಿಗೃಹ'(ಆಶ್ರಮ ಮತ್ತು ಶಾಲೆ)ವನ್ನು ಸ್ಥಾಪಿಸಿ ಅದೇ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು.ಮುಂದೆ ಈ ಶಾಲೆಯು ‘ರಾಷ್ಟ್ರೀಯ ಪಾಠಶಾಲೆ’ ಎಂದು ಮರುನಾಮಕರಣಗೊಂಡಿತು.ಕಾಕಾ ಅವರು 1921 ರಿಂದ 1927ರವರೆಗೆ ಇದೇ ರಾಷ್ಟ್ರೀಯ ಪಾಠಶಾಲೆಯ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.

ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದ ಕಾಕಾ ಅವರು ಅದರಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಆ ಸಂಬಂಧ ಅನೇಕ ಸಲ ಸೆರೆವಾಸವನ್ನು ಅನುಭವಿಸಿದರು. ಕಾಕಾ ಅವರು ಜಮಖಂಡಿಗೆ ಬಂದ ಮೇಲೆ ಮುಧೋಳ ಕೌಜಲಗಿ ಹಣಮಂತರಾಯರ ಪರಿಚಯವಾಯಿತು.ಕೌಜಲಗಿ ಹಣಮಂತರಾಯರು ಕರ್ಮ ಯೋಗಿ; ಕರ್ನಾಟಕದ ಗಾಂಧಿ; ಖಾದೀ ಹಣಮಂತರಾವ ಎಂದೇ ಹೆಸರಾದವರು. ಇವರಿಬ್ಬರೂ ಪರಸ್ಪರ ಪ್ರೇರಣೆ-ಪ್ರಭಾವಕ್ಕೆ ಒಳಗಾದ ಗಾಢ ಸ್ನೇಹಿತರು. ಕಾಕಾ ಮತ್ತು ಕೌಜಲಗಿ ಹಣಮಂತರಾಯರು ತಮ್ಮ ವ್ಯಕ್ತಿತ್ವ ಮತ್ತು ಸಾಮಾಜಿಕ ಪರಿವರ್ತನ ಹೋರಾಟದ ಕಾರಣದಿಂದಾಗಿ ಬಿಜಾಪುರ ಜಿಲ್ಲೆಯ ಜನಪ್ರಿಯ ವ್ಯಕ್ತಿಗಳಾಗಿದ್ದರು.ಕಾಕಾ, ಕಾಳೋಪಂತ ಕುಲಕರ್ಣಿ ಅವರು ಜಮಖಂಡಿಯ ವಿದ್ಯಾರ್ಥಿಗಳ ನಾಯಕರಾಗಿದ್ದರೆ;

ಕೌಜಲಗಿ ಹಣಮಂತರಾಯರು ಮುಧೋಳದ ವಿದ್ಯಾರ್ಥಿಗಳ ಮುಂದಾಳಾಗಿದ್ದರು. ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದ್ದ ಇವರು ಜಮಖಂಡಿ ಮತ್ತು ಮುಧೋಳದ ನಡುವಿನ ಅಡವಿ ಮತ್ತು ಪಾಳುಬಿದ್ದ ಗುಡಿಯಲ್ಲಿ ಸಭೆ ಸೇರಿಸಿ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಆಂದೋಲನದ ಬಗೆಗೆ ಅರಿವು ಮೂಡಿಸುತ್ತಿದ್ದರು.’ವಿದೇಶಿ ಸಕ್ಕರೆಯನ್ನು ಉಪಯೋಗಿಸಬೇಡಿ; ಹೆಣ್ಣು ಮಕ್ಕಳು ದೇಶೀ ಬಳೆಗಳನ್ನು ಬಳಸಬೇಕು; ವಿದೇಶಿ ವಸ್ತುಗಳನ್ನು ಮಾರುವ ಅಂಗಡಿಗಳ ಮುಂದೆ ಧರಣಿ ಮಾಡಬೇಕು; ಸ್ವದೇಶಿ ವಸ್ತುಗಳನ್ನು ಬಳಸಬೇಕು’ ಎಂಬಂತಹ ವಿಚಾರಗಳ ಪ್ರಕಟಣೆಯನ್ನು ಜಮಖಂಡಿ ಮತ್ತು ಮುಧೋಳದ ಪ್ರತಿಯೊಂದು ಮನೆಯ ಬಾಗಿಲುಗಳ ಮೇಲೆ ಅಂಟಿಸುವ ಚಳವಳಿಯನ್ನು ಮಾಡಿದರು.ಸ್ವಾತಂತ್ರ್ಯ ಚಳವಳಿಯಷ್ಟೇ ಸಾಮಾಜಿಕ ಹೋರಾಟವೂ ಅಷ್ಟೇ ಮುಖ್ಯ ಎಂಬುದನ್ನು ಅರಿತಿದ್ದ ಕಾಕಾ ಅವರು ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲ ಸೇವೆ, ಜೋಗತಿ ಪದ್ಧತಿ, ವೇಶ್ಯಾ ವೃತ್ತಿ, ಓಕುಳಿ ಆಚರಣೆ ವಿರುದ್ಧ ಕೂಡ ಅರ್ಥಪೂರ್ಣವಾದ ಚಳವಳಿಯನ್ನು ರೂಪಿಸಿದರು.

ಸ್ಪೃಶ್ಯ-ಅಸ್ಪೃಶ್ಯ ಭೇದನೀತಿಯನ್ನು ತೊಡೆದು ಹಾಕಲು, ಜಾತಿ ಜಾತಿಗಳ ನಡುವೆ ಭ್ರಾತೃತ್ವ, ಸಾಮರಸ್ಯವನ್ನು ಬಿತ್ತುವ ಕಾರಣಕ್ಕಾಗಿ ಹಲವು ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತಂದರು.ಅವುಗಳಲ್ಲಿ ಬಹಳ ಮುಖ್ಯವಾದದ್ದು, ಬ್ರಾಹ್ಮಣ ವಿದ್ಯಾರ್ಥಿಗಳು ಅಸ್ಪೃಶ್ಯರ ಕೇರಿಗಳಿಗೆ ಹೋಗಿ ಅರವಟ್ಟಿಗೆಗಳಲ್ಲಿ ನೀರು ಕುಡಿಯುವುದು.ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಸಮಸ್ಯೆಯನ್ನು ಭಾಷಣ, ಬೋಧನೆಯಿಂದ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ. ಎಂಬುದರ ಸ್ಪಷ್ಟ ಅರಿವಿದ್ದ ಕಾಕಾ ಅವರು ಈ ಬಗೆಗೆ ಹೋರಾಟಗಳನ್ನು ಕಟ್ಟಿದರು.ಕೌಜಲಗಿ ಹಣಮಂತರಾಯರು 1908ರಲ್ಲಿ, ತಮ್ಮ ಬದುಕಿನ ಮುಂದಿನ ಕಾರ್ಯಕ್ರಮವೇನು ಎಂಬುದನ್ನು ಕುರಿತು ತಮ್ಮ ತಂದೆಗೆ ಬಹಿರಂಗ ಪತ್ರ ಬರೆದಿದ್ದರು.ಮರಾಠಿ ಭಾಷೆಯಲ್ಲಿ ಬರೆದ’ಯುವಕರು ತಮ್ಮ ತಾಯ್ನಾಡಿಗಾಗಿ ಏನು ಮಾಡಬೇಕೆಂಬ’ ವಿಚಾರ ಕುರಿತ ಆ ಪತ್ರವು,ವಿಜಾಪುರದ ‘ಕರ್ನಾಟಕ ವೈಭವ’ ಪತ್ರಿಕೆಯ 12 ಸೆಪ್ಟಂಬರ್ 1908ರ ಸಂಚಿಕೆಯಲ್ಲಿ ಪ್ರಕಟವಾಯಿತು.ಇದನ್ನು ಓದಿ ಪ್ರಭಾವಿತರಾದಕಾಕಾ ಅವರು ‘ಬ್ರಹ್ಮಚಾರಿಯಾಗಿ ಉಳಿದು, ಸರ್ಕಾರಿ ನೌಕರಿಗೆ ಸೇರದೆ, ಸಮಾಜ ಸೇವೆ ಮಾಡುತ್ತೇನೆ’ ಎಂಬ ಪ್ರತಿಜ್ಞೆ ಮಾಡಿ ತಮ್ಮ ಬದುಕಿನುದ್ದಕ್ಕೂ ಅದಕ್ಕೆ ಬದ್ಧರಾಗಿದ್ದರು.

ಕಾಕಾ ಅವರು 1922ರಲ್ಲಿ ಮುಳಶಿ ಪೇಠಾ ಸತ್ಯಾಗ್ರಹ, ಅಂಕೋಲಾ ಉಪ್ಪಿನ ಸತ್ಯಾಗ್ರಹ, ಪೆರೋಲ್ ಉಲ್ಲಂಘನೆ, ಕಾರವಾರ ಜಿಲ್ಲೆಯ ಭೂದಾನ ಪಾದಯಾತ್ರೆ ಇತ್ಯಾದಿ ಹೋರಾಟಗಳಲ್ಲಿ ಭಾಗವಹಿಸಿ ಸಶ್ರಮ ಜೈಲು ಶಿಕ್ಷೆಯನ್ನು ಅನುಭವಿಸಿದವರು.ಇವರು 1927ರಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೆ ಹೋಗಿ, ಗಾಂಧೀಜಿಯವರ ಜೊತೆಯಲ್ಲಿದ್ದುಕೊಂಡು ಖಾದೀ ಶಿಕ್ಷಣ ಪಡೆದರು. ಎರಡು ವರ್ಷಗಳ ಖಾದಿ ಶಿಕ್ಷಣ ಪಡೆದು ವಿಜಾಪುರಕ್ಕೆ ಮರಳಿ ಬಂದ ಕಾಕಾ ಅವರು ಕೌಜಲಗಿ ಹಣಮಂತರಾಯರ ಸಹಕಾರದೊಂದಿಗೆ ವಿಜಾಪುರ ಜಿಲ್ಲೆಯಾದ್ಯಂತ ಖಾದೀ ಗ್ರಾಮೋದ್ಯೋಗ ಆಂದೋಲನವನ್ನು ಆರಂಭಿಸಿದರು.ಕೌಜಲಗಿ ಹಣಮಂತರಾಯರು ಗಲಗಲಿಯಲ್ಲಿ ಪ್ರಾರಂಭಿಸಿದ ಖಾದೀ ಉತ್ಪಾದನ ಸಂಘಟನೆಯಲ್ಲಿ ಕಾಕಾ ಅವರು ಪ್ರಮುಖ ಪಾತ್ರ ವಹಿಸಿದರು.1930 ಸಂದರ್ಭದಲ್ಲಿ ಕಾಕಾ ಅವರು ವಿಜಾಪುರದ ಗಲಗಲಿ, ಧಾರವಾಡದ ಬೆಟಗೇರಿ, ಬೆಳಗಾವಿಯ ಕುಮರಿಗಳಲ್ಲಿನ ಖಾದೀ ಕೇಂದ್ರಗಳಲ್ಲಿ ಶಿಕ್ಷಕರಾಗಿ ಅಲ್ಲಿನ ಕಾರ್ಯಕರ್ತರಿಗೆ ನೂಲು ತೆಗೆಯುವುದು, ನೇಯುವುದು, ಖಾದೀ ಅರ್ಥಶಾಸ್ತ್ರ, ಲೆಕ್ಕ ಪತ್ರ ಇಡುವುದು ಮುಂತಾದ ವಿಷಯಗಳ ಬಗೆಗೆ ತರಬೇತಿ ನೀಡಿದರು.ಆ ಮೂಲಕ ಯುವಕರಲ್ಲಿ ಸ್ವಾವಲಂಬಿ ಉದ್ಯೋಗದ ಮಹತ್ವವನ್ನು ಮನವರಿಕೆ ಮಾಡಿದರು.ಬೇಲಾಪುರದಲ್ಲಿ ಸ್ವಾವಲಂಬಿ ಕೃಷಿ ಪ್ರಯೋಗವನ್ನು ಮಾಡಿದರು.ಆದರೆ ಇದರಲ್ಲಿ ಯಶಸ್ವಿಯಾಗಲಿಲ್ಲ. 1942ರ ಸಂದರ್ಭದಲ್ಲಿ ವಿಜಾಪುರ ಜಿಲ್ಲೆಯಲ್ಲಿ ಭೀಕರ ಬರಗಾಲ ಬಂದಾಗ ಶ್ರೀ ಠಕ್ಕರ ಭಾಪಾ ಅವರ ಮಾರ್ಗದರ್ಶನದಲ್ಲಿ ಕಾಕಾ ಅವರು ಬರಗಾಲ ಸಮಿತಿಯ ಕಾರ್ಯಕರ್ತರಾಗಿ ಹಳ್ಳಿ ಹಳ್ಳಿ ತಿರುಗಿ ಸೇವೆ ಸಲ್ಲಿಸಿದ್ದಾರೆ.

ಕಾಕಾ ಅವರು ಜಮನಾಲಾಲ ಬಜಾಜರ ಮುಂದಾಳತ್ವದಲ್ಲಿ 1931ರಲ್ಲಿ ಕರ್ನಾಟಕ ಅಸ್ಪೃಶ್ಯತಾ ನಿವಾರಣಾ ಸಮಿತಿಯ ಕಾರ್ಯದರ್ಶಿಯಾಗಿ ಅಸ್ಪೃಶರ ಪರ ಕೆಲಸ ಮಾಡುತ್ತಿದ್ದರು.ಕೌಜಲಗಿ ಹಣಮಂತರಾಯರ ಆದೇಶದ ಮೇರೆಗೆ ಗಾಂಧೀಜಿಯವರು ಸ್ಥಾಪಿಸಿದ ‘ಹರಿಜನ ಸೇವಕ ಸಂಘ’ದ ವಿಜಾಪುರ ಶಾಖೆಯ ಜವಾಬ್ದಾರಿ ವಹಿಸಿಕೊಂಡು ‘ಇಂದಿನಿಂದ ನಾನು ಹರಿಜನನಾದೆ’ ಎಂದು ಹೇಳಿಕೊಂಡಿದ್ದಾರೆ.ಕರ್ನಾಟಕ ಹರಿಜನ ಸೇವಕ ಸಂಘದ ಉಪಾಧ್ಯಕ್ಷರಾಗಿ, ಮೈಸೂರು ಸರ್ಕಾರದ ‘ಹರಿಜನ ಸೇವಕ ಸಂಘ’ದ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರದ ‘ಪರಿಶಿಷ್ಟ ಜಾತಿ ಸಲಹಾ ಸಮಿತಿ’ಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.1933 ರಂದು ಅಜರೇಕರ ಚಾಳದಲ್ಲಿ ಅಸ್ಪೃಶ್ಯ ಗಂಡು ಮಕ್ಕಳಿಗಾಗಿ ‘ಹರಿಜನ ವಸತಿಗೃಹ’ ವನ್ನು; 1938ರಲ್ಲಿ ಅಸ್ಪೃಶ್ಯ ಹೆಣ್ಣು ಮಕ್ಕಳಿಗಾಗಿ ‘ಹರಿಜನ ಕನ್ಯಾ ಮಂದಿರ’ವನ್ನು; ದೇವದಾಸಿ ಹೆಣ್ಣು ಮಕ್ಕಳಿಗಾಗಿ ‘ಅಹಲ್ಯೋದ್ಧಾರ ಮಂದಿರ’ವನ್ನು ಸ್ಥಾಪಿಸಿದರು. ಏಪ್ರಿಲ್ 1, 1949ರಂದು ಹರಿಜನ ಕನ್ಯಾಮಂದಿರವನ್ನು ಮುಂಬಯಿ ಪ್ರಾಂತದ ಸಮಾಜ ಕಲ್ಯಾಣ ಇಲಾಖೆಯ ಅಂದಿನ ಮಂತ್ರಿಗಳಾಗಿದ್ದ ಜಿ. ಡಿ. ತಪಾಸೆ ಉದ್ಘಾಟನೆ ಮಾಡಿದರು; ಈ ಮಂದಿರದ ಶಿಲಾನ್ಯಾಸ ಮಾಡಿದವರು ಅಂದಿನ ಮುಂಬಯಿ ಮುಖ್ಯಮಂತ್ರಿಗಳಾದ ಶ್ರೀ ಬಾಳಾಸಾಹೇಬ ಖೇರ ಅವರು; ಈ ಮಂದಿರವನ್ನು ನಿರ್ಮಿಸಲು ಅಂದಿನ ಮುಂಬಯಿ ಖ್ಯಾತ ಉದ್ಯಮಿಗಳಾದ ಕನ್ನಡಿಗರಾದ ಕೃಷ್ಣರಾವ ಕಬ್ಬೂರ ಅವರು 25.000=00 ರೂ ದೇಣಿಗೆಯನ್ನು ನೀಡಿದರು.ಅಸ್ಪೃಶ್ಯರು, ದೇವದಾಸಿಯರಲ್ಲಿ ಜಾಗೃತಿ ಮೂಡಿಸುವುದು, ಅವರಿಗೆ ಶಿಕ್ಷಣ ನೀಡುವುದು, ಅವರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸುವುದು, ಶಿಸ್ತು ಶುಚಿತ್ವವನ್ನು ಕಲಿಸುವುದು ಇವರ ಮುಖ್ಯ ಉದ್ದೇಶ.

ಕಾಕಾ ಅವರು ಶಾಲಾ ವಸತಿಗೃಹಗಳನ್ನು ಬೇಕಂತಲೇ ಸವರ್ಣೀಯರ ಕೇರಿಯ ಮಧ್ಯದಲ್ಲಿಯೇ ಸ್ಥಾಪಿಸುತ್ತಿದ್ದರು.ಕಾರಣ ದಲಿತೇತರರಲ್ಲಿರುವ ಜಾತಿಯ ಅಹಂಕಾರ; ದಲಿತರಲ್ಲಿರುವ ಜಾತಿಯ ಕೀಳರಿಮೆ ಹೋಗಲಿ ಎಂದು.ತಮ್ಮದೊಂದು ವಸತಿ ಗೃಹವನ್ನು ವಿಜಾಪುರದ ಮಠಪತಿ ಗಲ್ಲಿಯಲ್ಲಿ ಸ್ಥಾಪಿಸಿದರು.1941ರ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಉತ್ತರಾಧಿ ಮಠದ ಸ್ವಾಮಿ ಶ್ರೀ ಸತ್ಯಧ್ಯಾನ ತೀರ್ಥರು ವಿಜಾಪುರಕ್ಕೆ ಬಂದು ಕಾಕಾ ಅವರ ಮನೆಯ ಎದುರಿಗಿದ್ದ ಪರ್ವತಿಕರ ಅವರ ಮನೆಯಲ್ಲಿ ಉಳಿದಿದ್ದರು.ಈ ಸ್ವಾಮಿಗಳು ಬಂದಾಗ ಕೇರಿಯ ಬ್ರಾಹ್ಮಣರಿಗೆ ಪಂಕ್ತಿ ಊಟ ಹಾಕುವುದು ಸಂಪ್ರದಾಯ. ಹೀಗೆ ಬ್ರಾಹ್ಮಣರ ಊಟ ನಡೆಯುತ್ತಿದ್ದಾಗ ಕಾಕಾ ಅವರ ಮನೆಯಲ್ಲಿದ್ದ ಅಸ್ಪೃಶ್ಯ ಹುಡುಗನೊಬ್ಬ ಅವರ ಹತ್ತಿರ ನಡೆದು ಹೋಗಿದ್ದನ್ನು ಸಹಿಸದ ಕೇರಿಯ ಸಂಪ್ರದಾಯ ಬ್ರಾಹ್ಮಣರು ಸ್ವಮಿಗಳಿಗೆ ಕಾಕಾ ಅವರ ವಿರುದ್ಧ : ಇಲ್ಲೊಬ್ಬ ಶೂದ್ರ ಬ್ರಾಹ್ಮಣ(ಕಾಕಾ)ನಿದ್ದಾನೆ. ಆತ ತನ್ನ ಮನೆಯಲ್ಲೆ ಶೂದ್ರ ಹುಡುಗರನ್ನು ಇಟ್ಟುಕೊಂಡು ಊಟ ವಸತಿ ಸೌಕರ್ಯ ಒದಗಿಸಿದ್ದಾನೆ.

ಇದರಿಂದ ನಮ್ಮ ಸಮಾಜಕ್ಕೆ ಅವಮಾನ ಮಾಡಿದ್ದಾನೆ ಎಂದು ದೂರು ನೀಡಿದರು.ಮರುದಿನ ಕಾಕಾ ಅವರ ಮನೆಗೆ ಹೋದ ಸ್ವಾಮಿಗಳ ಮುಂದೆ ಅಸ್ಪೃಶ್ಯ ಹುಡುಗರು ಸಂಸ್ಕೃತ ಶ್ಲೋಕ, ಭಗವದ್ಗೀತೆ ಶ್ಲೋಕವನ್ನು ಹೇಳಿದಾಗ ಸ್ವಾಮಿಗಳು ಮೆಚ್ಚಿ ತಲೆದೂಗಿದರಂತೆ. ನಂತರ ಸ್ವಾಮಿಗಳು ಕಾಕಾ ಅವರನ್ನು ಅಪ್ಪಿಕೊಂಡು ಅವರ ಬೆನ್ನು ತಟ್ಟಿ : ಇದು ನಿಜವಾದ ಸಮಾಜ ಉದ್ಧಾರದ ಕೆಲಸ, ಜನಸೇವೆ, ಜನಾರ್ಧನ ಸೇವೆ ಎಂದು ಹೊಗಳಿ, ತಮ್ಮ ಮಠದ ಅನ್ನ ಪ್ರಸಾದವನ್ನು ಈ ಶೂದ್ರ ಮಕ್ಕಳಿಗೂ ಕಳುಹಿಸುವ ವ್ಯವಸ್ಥೆ ಮಾಡಿದರಂತೆ.ಕಾಕಾ ಅವರು ಒಮ್ಮೆ ರಸ್ತೆಯಲ್ಲಿ ಹೋಗುವಾಗ ಚರಂಡಿಗೆ ಬಿದ್ದು ಮೇಲೆ ಬರಲಾಗದೆ ಪ್ರಾಯಾಸ ಪಡುತ್ತಿದ್ದ ಹಂದಿ ಮರಿಗಳನ್ನು ಮಕ್ಕಳು ಕಲ್ಲಿನಿಂದ ಹೊಡೆಯುತ್ತಿದ್ದಾಗ ಆ ಮಕ್ಕಳಿಗೆ ವಿವೇಕ ಹೇಳಿ ಸ್ವತಃ ತಾವೇ ಆ ಚರಂಡಿಯ ಕೆಸರಿಗೆ ಇಳಿದು ಹಂದಿ ಮರಿಗಳನ್ನು ರಕ್ಷಿಸಿದರಂತೆ.ಈ ಘಟನೆಗಳು ಕಾಕಾ ಅವರ ಜಾತಿ ಮೀರಿದ ಮಾನವೀಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿವೆ. ವಿಜಾಪುರದ ಸುತ್ತಮುತ್ತಲಿನ ಹಳ್ಳಿಗಳನ್ನ ತಿರುಗಿ ಅಲ್ಲಿನ ಜನರಲ್ಲಿ ಅಸ್ಪೃಶ್ಯತಾ ನಿವಾರಣೆಯ ಬಗೆಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ.ದೇವಸ್ಥಾನ, ಹೋಟೆಲ್, ಕ್ಷೌರಿಕರ ಅಂಗಡಿಗಳಿಗೆ ದಲಿತರ ಪ್ರವೇಶವನ್ನು ನಿರಾಕರಿಸಿರುವ ವಿಚಾರ ಕಾಕಾ ಅವರಿಗೆ ತಿಳಿದು ಬಂದರೆ, ಕಾಕಾ ಅವರು ತಮ್ಮ ಜೊತೆ ಪೊಲೀಸ್ ಅಧಿಕಾರಿಯನ್ನ ಕರೆದುಕೊಂಡು ಹೋಗಿ ಅವರ ಸಮಕ್ಷಮದಲ್ಲಿಯೇ ದಲಿತರಿಗೆ ಪ್ರವೇಶ ಕಲ್ಪಿಸುತ್ತಿದ್ದರು.1950ರ ಸಂದರ್ಭದಲ್ಲಿಯೇ ದೇವದಾಸಿಯರನ್ನು ಪರಿವರ್ತಿಸಿ, ಅವರನ್ನು ಯೋಗ್ಯ ವರರಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ.ಹೀಗೆ ಪರಿವರ್ತಿತಳಾದ ಮಹಿಳೆಯೊಬ್ಬಳನ್ನು ಶ್ರೀಮಂತ ಕಾಮುಕನೊಬ್ಬ ಪೀಡಿಸಿದಾಗ ಆಕೆ ಆತನಿಗೆ ಚಪ್ಪಲಿಯಲ್ಲಿ ಹೊಡೆದ ವಿಚಾರವನ್ನು ಕೇಳಿದ ಕಾಕಾ ಅವರು ತುಂಬಾ ಸಂತೋಷ ಪಟ್ಟರಂತೆ.

1940 ಸಂದರ್ಭದಲ್ಲಿ, ಕಾಕಾ ಅವರ ಹರಿಜನ ವಸತಿ ಗೃಹದಲ್ಲಿ ಕಲಿತ ವಿದ್ಯಾರ್ಥಿಗಳು ಕಾಕಾ ಅವರ ಬಗೆಗೆ ಪುಸ್ತಕ ಬರೆಯುವ ಕಾರಣಕ್ಕಾಗಿ ಅವರ ಬಳಿ ಹೋಗಿ ‘ನಿಮ್ಮ ಬದುಕಿಗೆ ಸಂಬಂಧಿಸಿದ ಮಾಹಿತಿಗಳನ್ನು ಹೇಳಿ’ ಎಂದು ಕೇಳಿದರಂತೆ. ಆಗ ಕಾಕಾ ಅವರು : ಹುಚ್ಚ ಹುಡುಗರು ನೀವು. ನನ್ನ ಜೀವನ ಚರಿತ್ರೆ ಬರೆಯುತ್ತೀರಾ?ನೀವೆಲ್ಲಾ ನನ್ನ ಜೀವನ ಚರಿತ್ರೆಯ ಜೀವಂತ ಪಾನುಗಳಿದ್ದಾಗ ಬೇರೆ ಚರಿತ್ರೆಯ ಅವಶ್ಯಕತೆ ಏನು?ನೀವೆಲ್ಲ ಶಿಕ್ಷಣವನ್ನು ಮುಗಿಸಿ, ಹೊರಬಂದಾಗ ಎಲ್ಲಿಯೇ ಇರಲಿ, ಸದಾಚಾರ, ಸುಸಂಸ್ಕೃತ ಹಾಗೂ ಅನ್ಯರಿಗೆ ಮಾದರಿಯಾಗಿ ಕಂಡುಬರುವ ಜೀವನವನ್ನು ಸಾಗಿಸಿ.ನೆರೆಹೊರೆಯವರಿಂದ ಗೌರವ, ಆದರ, ಸಹಕಾರ ಗಳಿಸಿದರೆ ಸಾಕು.ಆ ಸುಗಂಧ ವಾರ್ತಿ ನನ್ನ ಆತ್ಮಕ್ಕೆ ತಗುಲಿದಾಗ ನನಗಾಗುವ ಆನಂದ, ಹರ್ಷ, ಸುಖ, ಶಾಂತಿಯನ್ನು ಬರಹದಲ್ಲಿ ಬಣ್ಣಿಸಲು ಬಾರದಂಥವುಗಳು.ಇಂಥ ಜೀವನ ಸಾಗಿಸುವ ನೀವೆಲ್ಲ ಸುಗಂಧ ಬೀರುವ ಗಿಡದ ಟೊಂಗೆಗಳಿದ್ದಂತೆ, ಹೂವುಗಳಿದ್ದಂತೆ.ಅಂಥ ಸುಗಂಧ ಬೀರುವ ಟೊಂಗೆ-ಹೂವು-ಎಲೆ-ಕಾಯಿಗಳಿಂದ ಕೂಡಿದ ಗಿಡ ನಾನು!ಎಂದು ಹೇಳಿದರಂತೆ.ಇದು ಅವರ ನಿಸ್ವರ್ಥ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ.

ಒಳ್ಳೆಯ ವ್ಯಾಯಾಮ ಪಟುವಾಗಿದ್ದ ಕಾಕಾ ಅವರು, ವಸತಿ ಗೃಹದಲ್ಲಿರುವ ವಿದ್ಯಾರ್ಥಿಗಳು ಪ್ರತಿ ದಿನ ತಪ್ಪದೆ ಎರಡು ಬಾರಿ ಪ್ರಾರ್ಥನೆ, ವ್ಯಾಯಾಮ ಮಾಡಬೇಕಿತ್ತು.ಆಟ, ಚರ್ಚಾಕೂಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿತ್ತು. ವಸತಿ ಗೃಹದಲ್ಲಿ ಊಟ ಚೆನ್ನಾಗಿಲ್ಲವೆಂದು ವಿದ್ಯಾರ್ಥಿಗಳು ಹೇಳಿದರೆ ಕಾಕಾ ಅವರು ಬಂದು ತಾವು ಮೊದಲು ಊಟ ಮಾಡಿ ಪರೀಕ್ಷಿಸಿ ಚೆನ್ನಾಗಿದೆ ಎನಿಸಿದಾಗ ಮಕ್ಕಳಿಗೆ ಊಟ ಬಡಿಸುತ್ತಿದ್ದರು. ‘ಅಸ್ಪೃಶ್ಯರ ಮಕ್ಕಳು ಕಡ್ಡಾಯವಾಗಿ ಸಂಸ್ಕೃತ ಭಾಷೆಯನ್ನು ಕಲಿಯಬೇಕು’ ಎಂದು ಹೇಳುತ್ತಿದ್ದ ಕಾಕಾ ಅವರು, ದಲಿತರ ಮಕ್ಕಳನ್ನು ತಮ್ಮ ಮನೆಗೆ ಬರಮಾಡಿಕೊಂಡು ತಾವೇ ಸ್ವತಃ ಸಂಸ್ಕೃತ ಹೇಳಿಕೊಡುತ್ತಿದ್ದರು. ದಲಿತರು ಅಭಿವೃದ್ಧಿ ಹೊಂದದ ಹೊರತು ದೇಶದ ಉದ್ಧಾರ ಸಾಧ್ಯವಿಲ್ಲ ಎಂದು ಖಚಿತವಾಗಿ ಹೇಳುತ್ತಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು.ಕಾಕಾ ಅವರು ಅಸ್ಪೃಶ್ಯರ ಸೇವೆಗೆ ನಿರತರಾದ ಕಾರಣ ಸ್ವತಃ ತಮ್ಮ ಮನೆಯವರಿಂದಲೇ ಬಹಿಷ್ಕಾರಕ್ಕೆ ಒಳಗಾದರು.ಮುಂದೆ ಮನೆಯವರು ಇವರ ಕಾರ್ಯಕ್ಕೆ ಬೆಂಬಲಿಸಿದಾಗ ಇವರ ಜಾತಿ ಸಮಾಜದವರು ಇವರ ಮನೆಯವರನ್ನೆ ಬಹಿಷ್ಕರಿಸಿದರು. ಇವರು ಸ್ಥಾಪಿಸಿದ ವಸತಿ ಗೃಹದಲ್ಲಿ ಕಲಿತು ಮ್ಯೆಟ್ರಿಕ್ ಪಾಸಾದ ಮೊದಲ ವಿದ್ಯಾರ್ಥಿ ‘ನಾರಾಯಣ ಕದಮ’, ವಿದ್ಯಾರ್ಥಿನಿ ‘ಯಮುನಾ ಇಂಗಳಗಿ'(ಇವರು ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.); ಮುಲ್ಕಿ ಪರೀಕ್ಷೆ ಪಾಸಾದ ಪ್ರಥಮ ವಿದ್ಯಾರ್ಥಿನಿ ‘ತುಳಸಾ ಲಮಾಣಿ’; ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಎಚ್. ಎಸ್. ಕಂಕಣವಾಡಿ; ಎಚ್. ಜಿ. ಕಾಂತ;ಬಿ. ಎಸ್ಸಿ. ಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಗಜಾಕೋಶ; ಹರಿಜನ ಕನ್ಯಾಮಂದಿರದಲ್ಲಿ ಓದಿದ ಶ್ರೀಮತಿ ಸೈದಮ್ಮಾ ಚಂದ್ರಕಾಂತ ದ್ಯಾಪೂರ ಅವರು ಧಾರವಾಡದ ಎ. ಕೆ.ಗರ್ಲ್ಸ್ ಹೈ ಸ್ಕೂಲಲ್ಲಿ ಶಿಕ್ಷಕಿಯಾಗಿ, 1980ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ.ಮುಂತಾದ ಅಸಂಖ್ಯಾತ ವಿದ್ಯಾರ್ಥಿಗಳು ಇವರ ಶಾಲೆಯಲ್ಲಿ ಕಲಿತು ಬದುಕು ರೂಪಿಸಿಕೊಂಡರು.ಇವರ ವಸತಿಗೃಹದಲ್ಲಿ ಓದಿದ ಹಲವು ದಲಿತ ವಿದ್ಯಾರ್ಥಿಗಳನ್ನ ತಮ್ಮ ಜೊತೆಯಲ್ಲಿ ಕರೆದುಕೊಂಡು ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋಗಿ ಅವರಿಗೆ ಹೇಳಿ ನೌಕರಿ ಕೊಡಿಸಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಧನ ಸಹಾಯ ಕೂಡ ಮಾಡಿದ್ದಾರೆ.ಕಾಕಾ ಅವರ ವಸತಿ ಗೃಹದಲ್ಲಿ ಓದಿದ ಶ್ರೀ ಈಶ್ವರ ಅಲ್ಲಪ್ಪಾ ಅವುಡಿ ಅವರು ಭಾರತೀಯ ತಂತಿ ಇಲಾಖೆಯಲ್ಲಿ ಸೆಕ್ಷನ್ ಸೂಪ್ರವೈಜರ್ ಆಗಿದ್ದಾರೆ.ಇವರ ಮಡದಿ ಎಲ್ಲವ್ವ ಈಶ್ವರ ಅವುಡಿ ಸಹಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಕಲ್ಯಾಣ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಹರಿಜನ ಕನ್ಯಾ ಮಂದಿರದಲ್ಲಿ ಬೆಳೆದ ಅನಾಥೆ ಶ್ರೀಮತಿ ಎಲ್ಲವ್ವ ಈಶ್ವರ ಅವುಡಿ ಅವರನ್ನು ಈಶ್ವರ ಅಲ್ಲಪ್ಪಾ ಅವುಡಿ ಅವರ ಜೊತೆ ಮದುವೆ ಮಾಡಿದ್ದು ಕಾಕಾ ಅವರೆ.

ಈ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಕಾಕಾ ಅವರೆ ಆನಂದ ಎಂದು ಹೆಸರಿಟ್ಟರು. ವಿಜಾಪುರ ಜಿಲ್ಲೆಯ ದಲಿತರ ವಿಮೋಚಕ ಕಾಕಾ ಎಂದರೆ ತಪ್ಪಾಗಲಾರದು. ಒಮ್ಮೆ ಗಾಂಧಿ ಜಯಂತಿಯಲ್ಲಿ ಭಾಗವಹಿಸಿದ್ದ ಕಾಕಾ ಅವರು :ವರ್ಷಕ್ಕೆ ಒಂದು ಸಲ ಕಾಟಾಚಾರಕ್ಕೆ ಈ ಗಾಂಧೀ ಜಯಂತಿ, ಹರಿಜನೋದ್ಧಾರದ ನಾಟಕವನ್ನು ಆಡಬೇಡಿರಿ. ನಿಮಗೆ ನಿಜವಾಗಿಯೂ ಕಳಕಳಿ ಇದ್ದರೆ ನಿಮ್ಮ ಹೆಣ್ಣು ಮಕ್ಕಳನ್ನು ನನ್ನ ಹಾಸ್ಟೇಲ್ನ ಅಸ್ಪೃಶ್ಯ ಗಂಡು ಮಕ್ಕಳಿಗೆ; ನಿಮ್ಮ ಗಂಡು ಮಕ್ಕಳನ್ನು ನನ್ನ ಹಾಸ್ಟೇಲ್ನ ಹೆಣ್ಣುಮಕ್ಕಳಿಗೆ ಕೊಟ್ಟು ಮದುವೆ ಮಾಡಿ.ಆಗ ಸಮಾಜೋದ್ಧಾರದ ಕನಸು ನನಸಾಗುತ್ತದೆ.ಎಂದು ನಿಷ್ಠೂರವಾಗಿ ಹೇಳಿದ್ದುಂಟು.ತುಕಾರಾಮ, ಸ್ವಾಮಿ ವಿವೇಕಾನಂದ, ಗುರುದೇವ ರಾನಡೆಯವರ ಆಧ್ಯಾತ್ಮ ಪ್ರಭಾವಕ್ಕೆ ಒಳಗಾಗಿದ್ದ ಕಾಕಾ ಅವರು ಆಧ್ಯಾತ್ಮವನ್ನು ಸಮಾಜಮುಖಿಯಾಗಿ ಬಳಸಿದ ಬಹುದೊಡ್ಡ ಸಂತರಾಗಿದ್ದಾರೆ. ‘ಇಂಚಗೇರಿ’ ಪರಂಪರೆಗೆ ಸೇರಿದ ಕಾಕಾ ಅವರು, ಗುರುದೇವ ರಾನಡೆ ಅವರ ಸಂಪರ್ಕದಿಂದ ಭಾವು ಸಾಹೇಬ ಮಹಾರಾಜ(ಇಂಚಗೇರಿ) ಅವರಿಂದ 1910ರಲ್ಲಿ ದೀಕ್ಷೆ ಪಡೆದರು. ಇಂಚಗೇರಿ ಪರಂಪರೆಯನ್ನು ಕುರಿತು ಕಾಕಾ ಅವರು ತಮ್ಮ ‘ಸಂತ ಮತ್ತು ಸಮಾಜ’ ಎಂಬ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ.

ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿರುವ ಹಾಗೆ ಇಂಚಗೇರಿ ಪರಂಪರೆಯ ಹಿನ್ನೆಲೆ ಹೀಗಿದೆ : ‘ಸಿದ್ಧ’ ಸಂಪ್ರದಾಯವು ‘ನಾಥ’ ಸಂಪ್ರದಾಯದ ಒಂದು ಉಪಭಾಗ. ಸಿದ್ಧ ಸಂಪ್ರದಾಯದಲ್ಲಿ ‘ಕಾಡಸಿದ್ಧ’ ರೇವಣ ಸಿದ್ಧ’ ಮೊದಲಾದ ಪ್ರಸಿದ್ಧ ಯೋಗಿಗಳು ಪ್ರಮುಖರು.ಕೊಲ್ಹಾಪುರದ ಹತ್ತಿರವಿರುವ ‘ಸಿದ್ಧಗಿರಿ’ ಕಾಡಸಿದ್ಧರ ವಾಸಸ್ಥಾನ. ಇಚಿಡಿ ತಾಲ್ಲೂಕಿನ ದೇವರನಿಂಬರಗಿ ಗ್ರಾಮದ ನಾರಾಯಣರಾವ ಎಂಬ ಯುವಕ ಕಾಡಸಿದ್ಧರ ದರ್ಶನಕ್ಕೆ ಹೋಗಿದ್ದಾಗ, ಓಂಗಮ ರೂಪದಲ್ಲಿ ಕಾಣಿಸಿಕೊಂಡ ಕಾಡಸಿದ್ಧರು ನಾರಾಯಣರಾವರಿಗೆ ಆಧ್ಯಾತ್ಮ ದೀಕ್ಷೆ ಕೊಟ್ಟರಂತೆ.ಮುಂದೆ ನಾರಾಯಣರಾವರು ದೇವರನಿಂಬರಗಿಯಲ್ಲಿ ನಲವತ್ತು ವರ್ಷ ಸಾಧನೆ ಮಾಡಿ ‘ನಿಂಬರಗಿ ಮಹಾರಾಜ’ ಎಂದು ಹೆಸರಾದರು.ನಂತರ ಇವರು ತೆಲಂಗಾಣದ ಬ್ರಾಹ್ಮಣರಾದ ಶ್ರೀ ರಘುನಾಥ ಪ್ರಿಯ ಮಹಾರಾಜ, ಉಮದಿಯ ಶ್ರೀ ಭಾವು ಸಾಹೇಬ ಮಹಾರಾಜ, ಚಿಮ್ಮಡದ ಶ್ರೀ ರಾಮಭಾವು ಮಹಾರಾಜ ಯರಗಟ್ಟೀಕರ ಅವರಿಗೆ ದೀಕ್ಷೆ ನೀಡಿದರು.ಉಮದಿಯ ದೇಶಪಾಂಡೆಗಳ ಮನೆತನದಲ್ಲಿ ಜನಿಸಿದ ಶ್ರೀ ಭಾವು ಸಾಹೇಬರು ನಿಂಬರಗಿಯ ಮಹಾರಾಜರೊಟ್ಟಿಗೆ ನಿಕಟ ಸಂಬಂಧ ಹೊಂದಿದ್ದು, ಮುಂದೆ ಸಾವಿರಾರು ಸಾಧಕರಿಗೆ ಆಧ್ಯಾತ್ಮ ದೀಕ್ಷೆ ಕೊಟ್ಟು ಇಂಚಗೇರಿ ಸಂಪ್ರದಾಯವನ್ನು ಬೆಳೆಸಿದರು.ಭಾವು ಸಾಹೇಬ ಮಹಾರಾಜರು ಇಂಚಗೇರಿಯಲ್ಲಿ ಮಠವನ್ನು ಸ್ಥಾಪಿಸಿ ಅಲ್ಲಿ ಶ್ರೀ ನಿಂಬರಗಿ ಮಹಾರಾಜರ ಸಮಾಧಿಯನ್ನು ನಿರ್ಮಿಸಿ, ಮುಂದೆ ತಾವು ಸಹಾ ಅಲ್ಲೆ ಸಮಾಧಿ ಹೊಂದಿದರು. ‘ಸಮರ್ಥ ಸದ್ಗುರು’ ಎಂದು ಪ್ರಸಿದ್ಧರಾದ ಭಾವು ಸಾಹೇಬ ಮಹಾರಾಜರ ಶಿಷ್ಯರಲ್ಲಿ ‘ಶ್ರೀ ಅಂಬುರಾವ ಮಹಾರಾಜ ಹಾಗೂ ಖ್ಯಾತ ತತ್ವಜ್ಞಾನಿ ಗುರುದೇವ ರಾಮಭಾವು ರಾನಡೆ’ ಪ್ರಮುಖರು.

ನಿಂಬಾಳದ ಗುರುದೇವ ರಾನಡೆ ಅವರು ಜಮಖಂಡಿಯ ‘ಗುರುದೇವರು ಭಾವೂ ಸಾಹೇಬ ಮಹಾರಾಜ’ರಿಂದ ದೀಕ್ಷೆ ಪಡೆದರು.ಮುಂದೆ ರಾನಡೆಯವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಅಲಹಾಬಾದ ವಿಶ್ವವಿದ್ಯಲಯದ ಉಪಕುಲಪತಿಗಳಾಗಿದ್ದರು. ಪುನಿಷತ್ತುಗಳ ರಚನಾತ್ಮಕ ಅಭ್ಯಾಸ; ಕನ್ನಡ, ಮರಾಠಿ, ಹಿಂದಿ ಸಾಹಿತ್ಯಗಳಲ್ಲಿ ಪಾರಮಾರ್ಥ ಪಥಗಳು ಇವರ ಕೆಲವು ಪ್ರಮುಖ ಕೃತಿಗಳು.ಇವರು ಗ್ರೀಕ್ ತತ್ವಜ್ಞಾನಿ ಹರಾಕುಲಟಸ್ನ ತತ್ವಜ್ಞಾನವನ್ನು ಕುರಿತು ಬರೆದ ಲೇಖನಗಳನ್ನು ಶ್ರೀ ಅರವಿಂದರು ಓದಿ, ಗುರುದೇವ ರಾನಡೆ ಅವರೊಂದಿಗೆ ಪತ್ರ ವ್ಯವಹಾರದ ಮೂಲಕ ಚರ್ಚಿಸಿ ದ್ದರಂತೆ.ಈ ಪತ್ರಗಳ ಸಂಗ್ರಹವು ಹರಕ್ಕುಲಟಸ್ ಎಂಬುದಾಗಿ ಶ್ರೀ ಅರವಿಂದಾಶ್ರಮವು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.

ಈ ಪುಸ್ತಕದ ಮುನ್ನುಡಿಯಲ್ಲಿ ಶ್ರೀ ಅರವಿಂದರು ಹೀಗೆ ಬರೆದಿದ್ದಾರೆ : “These letteres were exchanged with shri R.D. Ranade a great scholar.”ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ಆಧ್ಯಾತ್ಮ ವಿದ್ಯಾಪೀಠವನ್ನು ಸ್ಥಾಪಿಸಿದ ರಾನಡೆ ಅವರು, ಇಂಡಿಯ ಹತ್ತಿರದ ನಿಂಬಾಳದಲ್ಲಿ ಆಶ್ರಮವನ್ನು ಸ್ಥಾಪಿಸಿ ಅಲ್ಲಿಯೇ ನೆಲೆಸಿದ್ದು, 1956 ರಂದು ಸಮಾಧಿ ಪಡೆದರು. ಕಾಕಾ ಕಾರಖಾನೀಸರು ವಿದ್ಯಾರ್ಥಿ ದಿಸೆಯಲ್ಲಿಯೆ ರಾನಡೆಯವರ ಪ್ರಭಾವಕ್ಕೆ ಒಳಗಾಗಿದ್ದು, 1910ರಲ್ಲಿ ಸಾಂಪ್ರದಾಯಿಕವಾಗಿ ಶ್ರೀ ಭಾವುಸಾಹೇಬ ಮಹಾರಾಜರಿಂದ ದೀಕ್ಷೆ ಪಡೆದು, ಗುರುದೇವ ರಾನಡೆ ಅವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದರು.ಇಂಚಗೇರಿ ಸಂಪ್ರದಾಯದಲ್ಲಿ ನಾಮ, ಜಪ, ಧ್ಯಾನಗಳಿಗೆ ತುಂಬ ಮಹತ್ವವಿದೆ.ರಾನಡೆಯವರು ನಾಮ ಕೊಡುತ್ತಿದ್ದರು. ಈ ನಾಮವು ಆಯಾ ಜನರ ಇಷ್ಟದೇವತೆಯ ನಾಮವೇ ಆಗಿರುತ್ತಿತ್ತು.ನಾಮವು ಎಲ್ಲ ಜಾತಿ, ಧರ್ಮ, ಪಂಥದವರಿಗೆ ದೊರೆಯುತ್ತಿತ್ತು.

ದಿನಚರಿ ಬರೆಯುವ ಹವ್ಯಾಸವಿದ್ದ ಕಾಕಾ ಕಾರಖಾನೀಸರು ಮರಾಠಿ ಭಾಷೆಯಲ್ಲಿ ಗುರುದೇವರ ನೆನಪುಗಳು; ಸಂತ ಮತ್ತು ಸಮಾಜ; ಶ್ರೀ ಸಮರ್ಥ ರಾಮದಾಸ ವಿಚಾರ ಮತ್ತು ಕಾರ್ಯ; ಜ್ಞಾನೇಶ್ವರರ ಸನಾತನ ತತ್ವ; ತುಕಾರಾಮ ಮಹಾರಾಜರ ಸಾಮಾಜಿಕ ವಿಚಾರಗಳು; ಸ್ವಾಮಿ ವಿವೇಕಾನಂದರ ಸಾಮಾಜಿಕ ವಿಚಾರಗಳು ಮುಂತಾದ ವೈಚಾರಿಕ ಕೃತಿ ಹಾಗೂ ಲೇಖನಗಳನ್ನು ರಚಿಸಿದ್ದಾರೆ. ಕರ್ನಾಟಕದಲ್ಲಿ ದೇವದಾಸಿ ಪದ್ಧತಿಯ ಮೌಢ್ಯ, ಅದಕ್ಕೆ ಕಾರಣಗಳೇನು, ದುಸ್ಪರಿಣಾಮಗಳೇನು ಎಂಬುದನ್ನು ಕುರಿತು ಬರೆದ ಲೇಖನವು ಗಾಂಧೀಜಿಯವರ ‘ರೂರಲ್ ಇಂಡಿಯಾ’ ಪತ್ರಿಕೆಯ ಜೂನ್ 1941ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಈ ಬಗೆಯ ಇವರ ಹಲವಾರು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮೈಸೂರು ಸರ್ಕಾರವು 1958ರಲ್ಲಿ ‘ಸುವರ್ಣ ಪದಕ’ವನ್ನು; 1959ರಲ್ಲಿ ಭಾರತ ಸರ್ಕಾರವು ‘ಪದ್ಮಶ್ರೀ ಪ್ರಶಸ್ತಿ’ಯನ್ನು; ಸಂಕೇಶ್ವರ ಮಠವು ‘ತ್ಯಾಗ ಮಹರ್ಷಿ’ ಎಂಬ ಬಿರುದನ್ನು ನೀಡಿ ಗೌರವಿಸಿವೆ. ಸ್ವತಃ ಗಾಂಧೀಜಿಯವರೆ :ಕಾಕಾ ಕಾರಖಾನೀಸರು ಒಳ್ಳೆಯ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚಿಗೆಯ ಮಾತನಾಡಿದ್ದಾರೆ.ಮೊನ್ನೆ ವಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಾವ ಗೋಷ್ಠಿಯು ಇವರನ್ನು ನೆನಪು ಮಾಡಿಕೊಳ್ಳದಿರುವುದು ವಿಪರ್ಯಾಸ. ನ್ಯಾಯೋಚಿತವಾಗಿ ಕಾಕಾ ಅವರ ಬಗೆಗೆ ಒಂದು ವಿಚಾರ ಗೋಷ್ಠಿಯನ್ನು ಏರ್ಪಡಿಸಬೇಕಿತ್ತು.ಕನಿಷ್ಠ ಯಾವುದೇ ವೇದಿಕೆಗೂ ಇವರ ಹೆಸರಿಡದಿರುವುದು ದುರಂತವೆ ಸರಿ.

 

‍ಲೇಖಕರು avadhi

21 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading