ವಿಜಯ ರಾಘವೇಂದ್ರ ಕಿವಿ ಹಿಂಡಿದೆ..!

‘ಮಾಲ್ಗುಡಿ ಡೇಸ್’ ಎಂಬ ನೆನಪು

ಅಜ್ಜಂಪುರ ಎಸ್. ಶೃತಿ

ಮಾಲ್ಗುಡಿ ಡೇಸ್ ಅಂದ್ರೆನೆ ನೆನಪುಗಳ ಸರಮಾಲೆ. ಬಹುಶಃ ನಾನು ಚಿಕ್ಕವಳಿದ್ದಾಗಿನಿಂದಲೂ ಹೆಚ್ಚು ಕೇಳ್ತಿದ್ದ ಪದಗಳಲ್ಲಿ ಇದೊಂದು. ನನ್ನ ತಾತ ಇದರ ಬಗ್ಗೆ ಮಾತಾಡಿದ್ದು ಈಗಲೂ ನೆನಪಿದೆ. ಶಂಕರನಾಗ್ ಸರ್ ಅವರ ನಿರ್ದೇಶನ ಅ‌ಷ್ಟಾಗಿ ಗೊತ್ತಾಗುತ್ತಿರಲಿಲ್ಲವಾದರೂ, ಅದರ ಇಂಟ್ರೋ ಮ್ಯೂಸಿಕ್ ಇವತ್ತಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿಯಲು ಸಾಕಷ್ಟು ಕಾರಣಗಳು ನನ್ನಲ್ಲೇ ಉಳಿದಿವೆ. ಎಂದಿಗೂ ಬೇಸರವಾಗದೇ ಕೇಳ್ತಾನೆ ಇರಬೇಕು ಅನ್ನೊ ಹುಮ್ಮಸ್ಸು ತುಂಬ್ಸತ್ತೆ.

ಬೆಳಗ್ಗೆ ಹತ್ತು ಗಂಟೆಯ ಆಸುಪಾಸು. ಜನರೆಲ್ಲ ಹುಚ್ಚೆದ್ದು ಕುಣಿಯುತ್ತಿದ್ದರು. ಅದರ ನಡುನಡುವೆ ‘ಮಾಲ್ಗುಡಿ ಡೇಸ್’ ಎನ್ನುವ ಶಬ್ದ ಆಗಾಗ ಕಿವಿಗಪ್ಪಳಿಸಿದಾಗಲೆಲ್ಲ ಮೈ ಮನವೆಲ್ಲ ಪುಳಕಗೊಳ್ಳುತ್ತಿತ್ತು. ಸಂತೋಷ್ ಥೀಯೆಟರ್‍ನ ದೊಡ್ಡ ಬೆಳ್ಳಿ ಪರದೆಯ ಮೇಲೆ ಇಂಪಾದ ಸಂಗೀತದೊಂದಿಗೆ ಒಂದೊಂದೆ ಅಕ್ಷರಗಳು ಮೂಡುತ್ತಿದ್ದಾಗ ಇದು ಕನಸೋ ಅಥವಾ ನನಸೊ ಎಂಬ ಗೊಂದಲದಲ್ಲೇ ಒಂದೆರಡು ಬಾರಿ ನನ್ನನ್ನೇ ನಾನು ಎಚ್ಚರಿಸಿಕೊಂಡೆ. ಹೌದು, ಇದು ನಿಜವೇ ಎಂದು ಅರಿವಿಗೆ ಬರುವ ವೇಳೆಗಾಗಲೇ ನಾನು ನನ್ನ ನೆನಪಿನ ಲೋಕಕ್ಕೆ ಜಾರಿದೆ.

ಆಗಿನ್ನು ಚಳಿಗಾಲದ್ದೇ ಹಾವಳಿ, ಬೆಳಗ್ಗೆ ಎದ್ದು ಎಂದಿನಂತೆ ಪೇಪರ್ ಓದಿ ಮಡಚಿಡುವಾಗ ಅಚಾನಕ್ಕಾಗಿ ಹೀಗೊಂದು ಸುದ್ದಿಯತ್ತ ಕಣ್ಗಳು ಸೆಳೆಯಿತು. ಸಿನಿಪುಟದಲ್ಲಿ ಕಾಸ್ಟಿಂಗ್ ಕಾಲ್ ಅಂತ ದೊಡ್ಡದಾಗಿ ಬರೆದಿದ್ದ ಅಕ್ಷರಗಳು. ನಾನೆಂದೂ ಈ ರೀತಿಯ ಸುದ್ದಿಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡವಳಲ್ಲ. ಆದರೆ ಅದರಲ್ಲಿನ ಚಿತ್ರದ ಹೆಸರಿಗೆ ಮತ್ತೆ ಮನಸೋತೆ. ನನಗೂ ತಮ್ಮನಿಗೆ ಕುತೂಹಲವಾಗಿದ್ದು ನಿಜ. ಇಬ್ಬರು ಒಂದಿಷ್ಟೊತ್ತು ಕೂತು ಯೋಚಿಸಿ, ಕಳಿಸ್ಬೇಕೊ ಬೇಡವೋ ಅನ್ನೋ ಗೊಂದಲದಲ್ಲೇ ವಾಟ್ಸಪ್ ಮಾಡಿದ್ವಿ. ಆದರೆ ಯಾವುದೇ ರೆಸ್ಪಾನ್ಸ್ ಅಂತೂ ಇರ್ಲಿಲ್ಲ. ನಮಗೆ ಕಳುಹಿಸಿದ ಅಷ್ಟೇ ಸಂತೋಷ!

ಇದೆಲ್ಲ ಮುಗಿದು ವಾರದ ನಂತರ, ಒಂದು ಕಾರ್ಯಕ್ರಮದ ನಿಮಿತ್ತ ಚನ್ನಗಿರಿ ಇಂದ ವಾಪಸ್ಸ್ ಬರುವಾಗ ನನಗೊಂದು ಪರಿಚಿತ ಕರೆ ಬಂತು. ಶಿವಮೊಗ್ಗ ಹರೀಶ್ ಕಡೆಯಿಂದ, “ನಾಳೆ ಬೆಳಗ್ಗೆ ಶಿವಮೊಗ್ಗದಲ್ಲಿ ಮಾಲ್ಗುಡಿ ಡೇಸ್ ಸಿನಿಮಾದ ಆಡಿಷನ್ ಇದೆ. ನೀನು ಆಡಿಷನ್ ಕೊಡು”, ಅಂತ ಹೇಳಿದ. ನನಗೆ ಅಷ್ಟೇನು ಭರವಸೆ ಇಲ್ಲದಿದ್ದರೂ, ಯಾಕಾಗಬಾರದು ಅಂತ ನಿರ್ಧರಿಸುವ ಹೊತ್ತಿಗೆ ಅರ್ಧ ರಾತ್ರಿ ಕಳೆದು ಹೋಗಿತ್ತು.

ಕೆಲವು ಕುಟುಂಬಗಳಲ್ಲಿ ಸಿನಿಮಾ ಅಂದರೆ ಈಗಲೂ ಅಲ್ಲಗಳೆಯೋದು ಸಾಮಾನ್ಯ. ಬೆಳಗ್ಗೆ ಎದ್ದು ನನ್ನಪ್ಪನನ್ನು ಒಪ್ಪಿಸುವುದು ನನ್ನ ಮನದಲ್ಲಿ ಹರಿದಾಡುತ್ತಿತ್ತು. ಆದುವರೆಗೂ ಸಿನಿಮಾ ಸೀರಿಯಲ್ ಗಳಿಗೆ ಅಷ್ಟಾಗಿ ಆಸಕ್ತಿ ತೋರಿಸದ ಅಪ್ಪ, ಅಂದು ನಾನು ಆಡಿಷನ್ ಗೆ ಹೋಗ್ತೀನಿ ಅಂದಾಗ ಅವರ ಚಿಂತನೆ ವಿಭಿನ್ನ ಮತ್ತು ವಿಶಾಲವಾಗಿತ್ತು.

ಮುದ್ದು ಮುಖದ ಖುಷಿಯಲ್ಲೇ ‘ಆಲ್ ದಿ ಬೆಸ್ಟ್ ಮಗಳೆ’ ಎಂದು ಹಣೆಗೆ ಮುತ್ತಿಟ್ಟು ನನ್ನ ಕಳಿಸಿದ್ದು ಈಗಲೂ ಆಶ್ಚರ್ಯ ಮತ್ತು ಖುಷಿ ಕೊಡತ್ತೆ. ಏನಿದು ಧಿಡೀರ್ ಬದಲಾವಣೆ, ಬಹುಶಃ ಮಗಳು ಕಂಡ ಕನಸಿಗೆ ಕಣ್ಣಾಗುವ ಮನಸ್ಸು ಎಂದುಕೊಂಡೆ, ಹೌದು ಅದು ನಿಜವೇ ಅದಕ್ಕಿಂತ ಹೆಚ್ಚಾಗಿ ಚಿತ್ರದ ಟೈಟಲ್ ‘ಮಾಲ್ಗುಡಿಡೇಸ್’ ಕೂಡ ಕಾರಣ ಅಂತ ಇತ್ತೀಚಿಗೆ ತಿಳಿದು ಬಂತು..

ಎರಡೊ ಮುರನೇ ಕ್ಲಾಸ್ ಓದ್ತಿದ್ದಾಗ ಅಪ್ಪ ಹುಬ್ಬಳ್ಳಿಗೆ ಸಿನಿಮಾವೊಂದರ ಆಡಿಷನ್ ಗೆ ಕರೆದುಕೊಂಡು ಹೋಗಿದ್ದ ನೆನಪಿತ್ತು. ಕಾರಣಾಂತರಗಳಿಂದ ಚಿತ್ರ ಅಲ್ಲಿಗೆ ನಿಂತುಹೋಯಿತು. ಅದಿರಲಿ ಬಿಡಿ ಅಂತೂ ಮನೆಯವರ ಪ್ರೀತಿಯ ಒಪ್ಪಿಗೆ ಮೇರೆಗೆ ಆಡಿಷನ್ ಗೆ ತೆರಳಿದೆ. ಅಲ್ಲಿದ್ದವರೆಲ್ಲ ಭರ್ಜರಿಯಾಗಿ ತಯಾರಾಗುತ್ತಿದ್ದರು, ನಾನು ಏನು ಮಾಡಲಿ ಅನ್ನುವಷ್ಟರಲ್ಲಿ ನನ್ನ ಸರದಿ ಬಂದೆ ಬಿಟ್ಟಿತು,

ನನ್ನ ಡಿಗ್ರಿ ಸಮಯದಲ್ಲಿ ನಾಟಕ ಹೇಳಿಕೊಟ್ಟ ವಿನೀತ್ ಅಣ್ಣನ ಸಹಾಯದಿಂದ ಒಂದೆರಡು ಡೈಲಾಗ್ ಕಲಿತು, ಆಡಿಷನ್ ರೂಂಗೆ ಆತಂಕ, ಕುತೂಹಲದಿಂದಲೇ ಒಳಹೋದೆ. ನನಗೆ ಕಾಲೇಜು ದಿನಗಳಲ್ಲಿ ನಾಟಕಗಳ ಅಭಿನಯದ ಅನುಭವವಿದ್ದರೂ, ಸಿನಿಮಾ ಆಡಿಷನ್ ಆದ್ದರಿಂದ ಆತಂಕವಿತ್ತು. ಧೈರ್ಯವಾಗಿ ಡೈರೆಕ್ಟರ್ ಕಿಶೋರ್ ಸರ್ ಎದುರು, ಆಗಷ್ಟೇ ಕಲಿತ ಒಂದೆರಡು ಸಾಲಿನ ಡೈಲಾಗ್ ಹೇಳಿ ಇನ್ನೂ ನನ್ನ ಈ.ಒ ಶೈಲಿಯಲ್ಲಿ ಒಂದಿಷ್ಟು ಮಾತನಾಡಿ ಹೊರಬಂದಿದ್ದು ಅಷ್ಟೆ. ನಾವ್ ಫೋನ್ ಮಾಡಿ ಹೇಳ್ತಿನಿ ಅಂದು ಸುಮಾರು ಇಪ್ಪತ್ತು ಇಪ್ಪತ್ತೈದು ದಿನಗಳ ವರೆಗೆ ಯಾವ್ದೇ ಫೋನ್ ಇರ್ಲಿಲ್ಲ, ನಾನಂತೂ ಅದೇ ಕುತೂಹಲದಲ್ಲಿ ಪ್ರತಿನಿತ್ಯ ನನ್ನ ಮೊಬೈಲ್ ಸ್ಕ್ರೀನ್ ನೋಡುವುದೇ ಆಗಿತ್ತು.

ಇಳಿ ಸಂಜೆಯ ಹೊತ್ತು, ದೂರದಲ್ಲಿದ್ದ ಮೊಬೈಲ್ ಗೆ ಅಪರಿಚಿತ ಕರೆಯ ಅಶರೀರವಾಣಿಯಲ್ಲಿ ಅವರು ಹೇಳಿದ್ದು ಇಷ್ಟೆ, “ನಾವು ಮಾಲ್ಗುಡಿ ಡೇಸ್ ಸಿನಿಮಾ ತಂಡದಿಂದ, ನೀವು ಶೃತಿ ಅಲ್ವ, ಆಡಿಷನ್ ಕೊಟ್ಟಿದ್ರಿ ಅಲ್ವ..” ಅಂತ ಅಷ್ಟೆ ಅವ್ರು ಮುಂದೆ ಮಾತನಾಡುವ ಹೊತ್ತಿಗೆ ನನ್ನ ಎದೆಬಡಿತ ಜೋರಾಗಿ ಒಂದರೆಕ್ಷಣ ತಲ್ಲಣಗೊಂಡೆ. ಅವ್ರು ಮುಂದುವರೆಸುತ್ತಾ, “ನೀವು ಒಂದು ಪಾತ್ರಕ್ಕೆ ಆಯ್ಕೆಯಾಗಿದ್ದೀರ, ಏಪ್ರಿಲ್ ನಲ್ಲಿ ಬಿಡುವು ಮಾಡಿಕ್ಕೊಳ್ಳಿ..” ಎಂದಾಗ ಪಟಪಟ ಮಾತನಾಡುತ್ತಿದ್ದ ನನ್ನ ನಾಲಿಗೆ ಒಣಗಿದಂತೆ ಭಾಸವಾಗಿತ್ತು. ನನ್ನ ಉತ್ತರ ಹೌದು, ಆಯ್ತು ಅಂದಷ್ಟೆ ಇತ್ತು.

ಏನೇನೋ ಕಾರಣಗಳಿಂದ ಏಪ್ರಿಲ್ ನಲ್ಲಿ ಇದ್ದ ಶೂಟಿಂಗ್ ಆಗಸ್ಟ್ ನ ಕೊನೆಯ ವಾರಕ್ಕೆ ಫಿಕ್ಸ್ ಆಯ್ತು. ಅದೂ ಪಕ್ಕಾ ಮಲೆನಾಡ ತವರು, ಸ್ವರ್ಗದ ಸಾಕ್ಷಾತ್ ರೂಪ ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿ ಆರಗದಲ್ಲಿ. ಊರೆಲ್ಲ ಮಳೆಯ ಹನಿಯಿಂದ ಕೂಡಿದ್ದು, ಬಿಸಿಲನ್ನೆ ಕಾಣದ ನಾವು ಒಂದು ಕ್ಷಣ ಸೂರ್ಯದೇವ ಬಿಸಿಲನ್ನು ನೀಡಿದರೆ ಸಾಕಪ್ಪಾ ಅಂತ ಕಾಯಬೇಕಾದ ಕ್ಷಣಗಳು ಅವು. ಚುಮು ಚುಮು ಚಳಿಯ ಮಧ್ಯೆ ಮನದಲ್ಲಿ ಸಿನಿಮಾದ ಗುಂಗು, ಮಳೆಗಾಲದ ಚಿಟ್ಟೆಯಂತೆ ಗುಯ್ಗುಟ್ಟುತ್ತಿತ್ತು..

ಇದಕ್ಕೆ ಇಮ್ಮಡಿಯಾಗಿ ಮೊದಲನೇ ದಿನದ ಶೂಟಿಂಗ್ ಶುರುವಾಗುವ ಹೊತ್ತು ಬೆಳಗ್ಗೆ 7ಕ್ಕೆ ಪ್ರಥಮವಾಗಿ ಬಣ್ಣ ಹಚ್ಚಿಕೊಂಡು ಚೆಂದದ ಟೀಚರ್ ಪಾತ್ರಕ್ಕೆ ಒಗ್ಗುವ ಕಾಟನ್ ಸೀರೆ ಉಟ್ಟು ರೆಡಿಯಾಗಿ ನಿಂತಾಯ್ತು.

ಈ ವೇಳೆಗಾಗಲೇ ಆರಗದ ಶಾಲಾ ಆವರಣದಲ್ಲಿ ಕಾಲೇಜು ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ನಿಂತಿದ್ದು, ಸುತ್ತ ದೊಡ್ಡ ದೊಡ್ಡ ಲೈಟು, ಕ್ಯಾಮರಾ, ಅಲ್ಲಲ್ಲಿ ಸಿನಿಮಾ ಪ್ರಾಪರ್ಟಿಗಳು, ಹೊಸದಾದ ಅನುಭವ!

ಅದರ ನಡುವೆ ಡೈರೆಕ್ಟರ್ ಸರ್ ನನ್ನನ್ನು ಕರೆದು, ವಿದ್ಯಾರ್ಥಿಯೊಬ್ಬನಿಗೆ ಪರಿಚಯಿಸಿದರು. “ಇವರು ನಿಮ್ಮ ನೆಚ್ಚಿನ ವಿದ್ಯಾರ್ಥಿ ಲಕ್ಷ್ಮೀ ನಾರಾಯಣ ಮಾಲ್ಗುಡಿ”, ಮತ್ತು ಅವ್ರಿಗೆ, “ಇವ್ರು ನಿಮ್ಮ ನೆಚ್ಚಿನ ಶಿಕ್ಷಕಿ ಸರಸ್ವತಿ ಟೀಚರ್” ಎಂದು ಪರಿಚಯಿಸುವ ಅಷ್ಟು ಸಮಯ ನಾ ಆ ವಿದ್ಯಾರ್ಥಿಯನ್ನು ದಿಟ್ಟಿಸಿ ನೋಡುತ್ತಲೇ ಇದ್ದೆ.

ಇವರನ್ನು ಎಲ್ಲೋ ನೋಡಿದ ನೆನಪು ಅಲ್ವಾ ಅಂತ ಮನಸ್ಸು ಅದರಲ್ಲೇ ತೊಯ್ದಾಡುತ್ತಿದ್ದಾಗ ಅರೆರೇ ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ ಸರ್ ಎಂದಾಗ ಮನಸ್ಸಿನಲ್ಲಾದ ಖುಷಿಯನ್ನು ಅದ್ಹೇಗೆ ಪದಗಳಲ್ಲಿ ವರ್ಣಿಸಲಿ. (ವಿಜಯ್ ಸರ್, ಲಕ್ಷ್ಮೀ ನಾರಾಯಣ, ಹತ್ತನೇ ತರಗತಿ ವಿದ್ಯಾರ್ಥಿ ವೇಷದಲ್ಲಿದ್ದರು) ಅದುವರೆಗೂ ಬೆಳ್ಳಿ ಪರದೆಯ ಮೇಲೆ, ಟಿ.ವಿ. ಯಲ್ಲಿ ನೋಡುತ್ತಿದ್ದ ಅವರನ್ನು ಒಮ್ಮೆಲೆ ನೋಡಿದ ಖುಷಿಯ ಪಾರಕ್ಕೆ ನಮಸ್ತೆ ಸರ್ ಎಂದಷ್ಟೆ ಹೇಳಲು ಸಾಧ್ಯವಾಯಿತು. ಮುಂದೆ ಮಾತೇ ಹೊರಳಲಿಲ್ಲ.

ಮನಸಲ್ಲೇ ಸಂತೋಷ , ಮಳೆಯ ಹನಿ ಭೂಮಿಗೆ ಬಿದ್ದ ಸಂಭ್ರಮದ ಹಾಗೆ. ಡೈರೆಕ್ಟರ್ ಕಿಶೋರ್ ಸರ್ ಮಂದಸ್ಮಿತ ದಲ್ಲಿ ನನ್ನ ಪಾತ್ರ ಪರಿಚಯ ಮಾಡಿಕೊಡುತ್ತಿರುವಾಗಲೇ ನನಗೆ ಹೆಮ್ಮೆಯ ಭಾವ ಭಾಸವಾಗುತ್ತಿತ್ತು.

ಒಂದು ಶ್ರೇಷ್ಠ ಪಾತ್ರ, ಶಿಕ್ಷಕಿ ಅದರಲ್ಲೂ ವಿಜಯ ರಾಘವೇಂದ್ರ ಸರ್ ಅವರ ನೆಚ್ಚಿನ ಶಿಕ್ಷಕಿ ಎಂದರೆ ಎಂತಹವರಿಗೂ ಸಂಭ್ರಮದ ಗರಿಯೇ ಸರಿ.

ನನ್ನ ಮೊದಲ ಶೂಟ್ ರೆಡಿ ಇದೆ ಎಂದು ಕರೆಬಂತು. ಸುತ್ತ ಜನ ಸಮೂಹ, ಎದುರು ತೆರೆದ ಕ್ಯಾಮರಾದ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಭಾವ ಅದರ ಮಧ್ಯೆ ಡೈರೆಕ್ಟರ್ ಸರ್ ಒಂದಿಷ್ಟು ಸಲಹೆ ಮಾರ್ಗದರ್ಶನ ನೀಡಿದರೆ, ನನಗೆ ಎಲ್ಲಿಲ್ಲದ ತಳಮಳ, ಸಾವಿರ ಜನರ ಮುಂದೆ ಸುಲಲಿತವಾಗಿ ಹೆದರದೆ ಮಾತನಾಡುವ ನಾನು, ಅಂದು ಭಯವನ್ನು ಎದುರಿಸಿದ್ದು ಇನ್ನೂ ನೆನಪಿದೆ.

ಆ ಕ್ಷಣ ನಾನು ನಿಜವಾಗ್ಲೂ ಆಕ್ಟಿಂಗ್ ಮಾಡುತ್ತಿದ್ದೀನಾ ಅಂತ ನಂಬ್ಲಿಕೆ ಸಾಧ್ಯ ಆಗಿರಲಿಲ್ಲ.

ಮತ್ತೊಂದು ರೋಮಾಂಚನದ ಕ್ಷಣ, ಲಕ್ಷ್ಮೀ ನಾರಾಯಣನ ನೆಚ್ಚಿನ ಶಿಕ್ಷಕಿಯಾದ ನಾನು ಅವನ ಸಾಹಿತ್ಯಕ್ಕೆ ಪ್ರೋತ್ಸಾಹಿಸುವ, ತಪ್ಪು ಮಾಡಿದ್ದರೆ ತಿದ್ದಿ ಬುದ್ದಿ ಹೇಳುವ ಶಿಕ್ಷಕಿಯಾದ್ದರಿಂದ ಅವರ ಕಿವಿ ಹಿಂಡುವ ಸನ್ನಿವೇಶ. ಅಬ್ಬಾ! ಇವತ್ತಿಗೂ ನನ್ನ ಎದೆಬಡಿತ ಜೋರಾಗುತ್ತದೆ. ಅವ್ರನ್ನ ಏಕವಚನದಲ್ಲಿ (ವಿದ್ಯಾರ್ಥಿಯಾಗಿ) ಮಾತನಾಡಿಸೋಕೆ ಎರಡು ಮೂರು ದಿನಗಳನ್ನ ತೆಗೆದುಕೊಂಡ ನಾನು ಅವರ ಕಿವಿ ಹಿಂಡೋದೆಂದರೆ ಸಾಮಾನ್ಯದ ಮಾತೇ!,

ವಿಜಯ್ ಸರ್ ಅವ್ರ ನಿರ್ಲಿಪ್ತ ಮನಸ್ಸು, ದೊಡ್ಡ ಕಲಾ ವಿದರಾದರೂ ಅಷ್ಟೇ ವಿಶಾಲ ಮನಸ್ಸು, ನನಗೆ ಧೈರ್ಯ ನೀಡಿತು. “ಏನು ಅಂದ್ಕೋಬೇಡಿ, ಆರಾಮಾಗಿ ಮಾಡಿ, ನಾನು ನಿಮ್ಮ ಹಾಗೆ ಕಲಾವಿದನೆ, ನೀವು ಜೋರಾಗಿ ಕಿವಿ ಹಿಂಡದ ಹೊರತು ನಾನು ಭಾವನೆ ಕೊಡೋದಕ್ಕೆ ಬರೋದಿಲ್ಲ, ಇದು ಸೀನ್ ಅಷ್ಟೆ” ಅಂತೆಲ್ಲ ಕೇಳಿದ ಅವರ ಮಾತುಗಳು ನಂಗೆ ಧೈರ್ಯ ತುಂಬಿ ಕೊಟ್ಟಿತು.

ಸಿನಿಮಾದಲ್ಲಿ ಅಷ್ಟೆ ನಾನವರ ನೆಚ್ಚಿನ ಶಿಕ್ಷಿಕಿ, ಅದರಿಂದ ಆಚೆ ವಿಜಯ್ ಸರ್, ಹಾಗೆ ಡೈರೆಕ್ಟರ್ ಕಿಶೋರ್ ಸರ್ ನನ್ನ ನಟನೆಯ ಕಲೆಯ ಗುರುಗಳಾಗಿರುವುದು ಅಕ್ಷರಶಃ ಸತ್ಯ.

ಶೂಟಿಂಗ್ ನ ಹನ್ನೆರಡು ದಿನಗಳವರೆಗೆ ಹಿರಿಯ ಕಲಾವಿದರ ನಟನೆ, ಅವ್ರು ಅಭಿನಯಿಸುವ, ಪಾತ್ರ ಪ್ರವೇಶಿಸುವ ಕಲೆ, ಅವರ ವಿನಯ, ಸಂಯಮ, ತಾಳ್ಮೆ, ಎಲ್ಲವೂ ಬಹಳ ಹತ್ತಿರದಿಂದ ಕಂಡು, ಈ ಹಿಂದೆ ನನ್ನಲಿದ್ದ ಸಿನಿಮಾ ಸೆಲೆಬ್ರಿಟಿಗಳ ಮೇಲಿದ್ದ ಪೂರ್ವಗ್ರಹ ದೂರ ಆಯ್ತು. ಎಲ್ಲರೂ ಇವರಂತೆ ಇರಲು ಸಾಧ್ಯವಿಲ್ಲ ಅಂತ ಕೂಡ ತಿಳೀತು.

ಯಾವುದೇ ಕ್ಷೇತ್ರದಲ್ಲಿ ಆಗಿರಬಹುದು, ವಿನಯ, ಪ್ರೀತಿ, ತಾಳ್ಮೆ ಯೆ ಗೆಲುವಿನ ಗುಟ್ಟು ಎಂದು ತಿಳಿದದ್ದು, ವಿಜಯ ರಾಘವೇಂದ್ರ ಸರ್ ಅವರನ್ನು ನೋಡಿ. `ಮಾತೇ ಮುತ್ತು’ ಅಂತ ಕೇಳಿದ್ದೀವಿ. ಮುತ್ತಿಗಿಂತಲೂ ಮೌಲ್ಯಯುತವಾಗಿ ವಿಜಯ್ ಸರ್ ಶೂಟಿಂಗ್ ಬಿಡುವಿನ ವೇಳೆ ಅವರ ಅನುಭವದ ಕ್ಷಣಗಳನ್ನ ನಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದರು. ಇದು ನನ್ನ ಹಾಗೆ ಇದ್ದ ಹೊಸ ಕಲಾವಿದರಿಗೆ ಒಂದಿಷ್ಟು ಸ್ಪೂರ್ತಿಯಾಗಿದ್ದು ಖಂಡಿತ.

ಸಿನಿಮಾ ಅಂದರೆ ಹೆದರುವ ಮನಸಿಗೆ, ಅಲ್ಲಿನ ಅಕ್ಕರೆಯ ಪ್ರೀತಿ, ಮಮತೆಯ ವಾತ್ಸಲ್ಯ, ಅಮ್ಮನ ಹಾರೈಕೆ ಎಲ್ಲವೂ ಮನೆಯ ಅಂಗಳದಂತೆ ಭಾಸವಾಗುತ್ತಿತ್ತು, ಸಹ ನಿರ್ದೇಶಕರು, ಕಾಸ್ಟ್ಯೂಮ್ ಡಿಸೈನರ್ಸ್, ಕ್ಯಾಮರಾ ಮೆನ್, ಮೇಕಪ್ ಆರ್ಟಿಸ್ಟ್, ಟೆಕ್ನಿಷಿಯನ್, ಪ್ರೊಡಕ್ಷನ್ ಟೀಮ್ ಎಲ್ಲರೂ ಒಂದೇ ಕುಟುಂಬದ ಸಂಬಂಧಿಗಳಂತೆ ಕಾಲ ಕಳೆದದ್ದು ಬಹಳ ಖುಷಿಕೊಟ್ಟ ವಿಚಾರ.

ಬಹುಶಃ ನನ್ನ ಪಾಲಿನ ಅತ್ಯಮೂಲ್ಯ ಕ್ಷಣಗಳೆಂದರೆ ಅಂತಹ ಮೇರು ವ್ಯಕ್ತಿತ್ವದೊಂದಿಗೆ ಕಳೆದ ಹನ್ನೆರಡು ದಿನಗಳು. ಜೊತೆಗೆ ಡಬ್ಬಿಂಗ್ ನಲ್ಲೂ ಜೊತೆಯಾದದ್ದು ಮರೆಯಲಾಗದ ಕ್ಷಣ.

ಟೀಚರ್ ಎಂದು ಪ್ರೀತಿಯಿಂದ ಕರೆಯುವ ಧ್ವನಿ ಇನ್ನೂ ಕಿವಿಯಲ್ಲಿ ಇಂಟ್ರೋ ಟ್ಯೂನ್ ನಂತೆ ಉಳಿದಿದೆ.

ಇನ್ನೂ ಸಿನಿಮಾದ ಪೋಸ್ಟರ್ ಬಿಡುಗಡೆ, ಪ್ರಮೋಷನ್ ದಿನಗಳಿಂದ ಹಿಡಿದು ಸಿನಿಮಾ ಬಿಡುಗಡೆಯಾಗುವವರೆಗೂ ಮತ್ತು ಇಂದಿಗೂ ಆ ಸಂಬಂಧ ಉಳಿದಿರುವುದು ಖುಷಿಯ ವಿಚಾರ. ವಿಶೇಷವಾಗಿ ಲಕ್ಷ್ಮೀನಾರಾಯಣ ಸಾಹಿತಿಯಾದ್ದರಿಂದ ಸಾಹಿತಿಗಳಿಗೆ ಪ್ರೀಮಿಯರ್ ಶೋ ಆಯೋಜಿಸಿದ ಸಿನಿಮಾ ತಂಡ, ಸಾಹಿತಿಗಳನ್ನು ಒಗ್ಗೂಡಿಸುವ ಅವಕಾಶ ನನಗೆ ನೀಡಿದ್ದು ಹೆಮ್ಮೆಯ ಸಂಗತಿ, ನಾನು ಅಷ್ಟೆ ಅಚ್ಚುಕಟ್ಟಾಗಿ ಹಿರಿಯರಿಂದ ಕಿರಿಯ ಸಾಹಿತಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಯಶಸ್ಸು ಗಳಿಸಿದ ಹೆಮ್ಮೆಯೂ ಇದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕರಾದ ಕಿಶೋರ್ ಮೂಡುಬಿದ್ರೆ ಸರ್, ಹಾಗೆ ನಿರ್ಮಾಪಕರಾದ ರತ್ನಾಕರ್ ಕಾಮತ್ ಸರ್ ಅವ್ರಿಗೆ ತುಂಬು ಹೃದಯದ ಧನ್ಯವಾದಗಳು.

ಹೀಗೆ ಮಾಲ್ಗುಡಿ ಡೇಸ್ ಎಂದರೆ ಎಲ್ಲರಿಗೂ ತಮ್ಮದೇ ನೆನಪಿನ ಭಾವಗಳ ಬೆಸುಗೆ. ನನಗಿದು ಮೊದಲ ಸಿನಿಮಾದ ಅನುಭವ. ಅಷ್ಟು ದೊಡ್ಡ ಸ್ಕ್ರೀನ್ ನಲ್ಲಿ ನನ್ನನ್ನು ನಾನು ನೋಡುವುದೆ ಒಂದು ಸಂಭ್ರಮವಾಗಿತ್ತು, ಒಟ್ಟಾರೆಯಾಗಿ ಮರುಭೂಮಿಯಲ್ಲಿ ಮಳೆ ಹನಿಯ ಸಂಭ್ರಮ ನನಗೆ. ಕಾಲೇಜಿನ ರಂಗ ವೇದಿಕೆಯಿಂದ ಬೆಳ್ಳಿ ಪರದೆಯ ಮೇಲೆ ನನ್ನನ್ನು ಕಾಣುವಾಗ, ಇದು ನಾನೇನಾ! ಎಂದು ಆಶ್ಚರ್ಯ ಚಕಿತಳಾಗಿದ್ದು ನೂರಕ್ಕೆ ಇನ್ನೂರರಷ್ಟು ಸತ್ಯ. ಇಂದಿಗೂ ಈ ನೆನಪಿನ ಬುತ್ತಿಯಲಿ ಮಿಂದು, ಅವಕಾಶಗಳ ಎದುರು ನೋಡುತ್ತಾ, ನಿಮ್ಮವಳು..

‍ಲೇಖಕರು Avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: