ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಹ್! ಎಂ ಆರ್ ಕಮಲ

ಎಂ ಆರ್ ಕಮಲ

 

ಗುಂಪಿಗೆ ಸೇರದ ಪದ

ಗುಂಪಿಗೆ ಸೇರದ ಪದ -ಬಿಟ್ಟು ಬಿಡಿ

ಉರಿವ ಮನೆಯಲ್ಲಿ ಗಳ ಹಿರಿದು
ಹಿರಿಹಿರಿ ಹಿಗ್ಗುವವರ ನಡುವೆ
ಬೇಲಿ ಗಿಡದಲಿ ಹೂವರಳಿಸುತ್ತಿದ್ದಾಳೆ

ಗುಂಪಿಗೆ ಸೇರದ ಪದ -ಬಿಟ್ಟು ಬಿಡಿ

ಹೂಹಗುರ, ಹಂಸ ತುಪ್ಪುಳದ ನವಿರ
ಹದವರಿತ ಪದ ಲಲಿತೆಯರ ನಡುವೆ
ಕಿಡಿನುಡಿಯ ಖಚಿತೆ-ಇವಳ ಹದನು ಬೇರೆ

ಗುಂಪಿಗೆ ಸೇರದ ಪದ -ಬಿಟ್ಟು ಬಿಡಿ

ಡಮರು, ಡೋಲು, ಡಿಂಡಿಮಗಳ
ಡುಮುಡುಮು ಡಮಡಮದ ನಡುವೆ
ಮಂದ್ರದಲಿ ಮಿಡಿವ ವೀಣೆಯಾಗಿದ್ದಾಳೆ

ಗುಂಪಿಗೆ ಸೇರದ ಪದ -ಬಿಟ್ಟು ಬಿಡಿ

ಅಬ್ಬರದಿ ಉಬ್ಬಿ, ಅರಬ್ಬಿಯ ಬೆತ್ತಲು ತಬ್ಬಿ
ಹಾರಿ ನಲಿವ ಕುಣಿವ ನದಿಗಳ ನಡುವೆ
ಹೃನ್ಮಯಿ, ಮೃಣ್ಮಯಿ, ತನ್ಮಯಿ ಶಾಲ್ಮಲೆ

ಗುಂಪು ಗಮನಿಸಿದ ಪದ.. .ಬಿಡಬೇಡಿ

shiva

ಹೂವಿನ ಮಾರುಕಟ್ಟೆಯಲ್ಲಿ ಶಿವ!

ಸೆಲ್ಫ್ ಮಾರ್ಕೆಟಿಂಗ್ ಯುಗದಲ್ಲಿ
ಹೂವುಗಳ ಮಾರುಕಟ್ಟೆಗೊಮ್ಮೆ
ನಿಜದ ಕಂಪನರಸಿ ಶಿವನು ಬಂದ!

ನರುಗಂಪಿನ ನವಿರು ಜಾಜಿ
ನಸು ನಾಚಿದಂತೆ ತುಸು ನಟಿಸಿ
ಉನ್ಮತ್ತೆಯ ಮತ್ತ ಸುತ್ತ ರಾಚಿತು

ಬಿಸಿಲಲ್ಲಿ ಬಸವಳಿದ ಚೆನ್ನೆ, ಕನ್ನೆ
ಹೊನ್ನ ಕೇಸರದ ಸುರಹೊನ್ನೆ,
ಬೆಳುದಿಂಗಳ ಇಂಗಡಲ ಹರಡಿತು.

ಮುದುರಿದ ಚಿಟ್ಟೆ ಹೂ ಮಾಧವೀ
ಎಸಳ ರೆಕ್ಕೆಯ ದಿಕ್ಕುದಿಕ್ಕಿಗೆ ಚೆಲ್ಲಿ
ಮೋಹಕತೆಯ ಮೋದ ಬೀರಿತು.

ಅಲುಗಿನಂಥ ಎಲೆಯ ನಡುವೆ
ನಲುಗದ ಚಂದದ ಚೆಂಗಣಿಗಲೆ
ಕುಂಕುಮದ ತಾರೆಯಂತೆ ಮಿನುಗಿತು

ಹಳದಿ ನೇಸರನ ಕಾಸಾರ
ಪಂಪನೂ ಗೊಣಗದ ಚಂಪಕ
ಬವಳಿ ಬೀಳಿಸುವ ಪನ್ನೀರನೆರಚಿತು.

ಕಣ್ಣು ಕುಕ್ಕದ, ಸುಲಭಕ್ಕೆ ದಕ್ಕದ
ಕಂಪಿನ ನಿಧಿ, ಪುಷ್ಪವಿಧಿ, ತುಂಬೆ
ಎಲೆಯಲ್ಲಿ ಹುದುಗಿ, ಮುದುರಿಕೊಂಡಿತು

ತುಂಬೆಯನ್ನೇ ನಂಬಿ ಶಿವ ಕೈಗೆತ್ತಿಕೊಂಡ!

 

m r kamala in marriage

ಸಂತೆಯಲಿ ನಾನಿಲ್ಲ ಸಂತಳೂ ಅಲ್ಲ

ಕಿಕ್ಕಿರಿದ ಸಂದಣಿಯಲಿ ಕಕ್ಕಾಬಿಕ್ಕಿ
ಮೌನ ಮೂಲೆಯಲ್ಲಿ ಬಿಕ್ಕಿ ಬಿಕ್ಕಿ

ಸಂತೆಯಲಿ ನಾನಿಲ್ಲ ಸಂತಳೂ ಅಲ್ಲ.

ಹೂವ ದಳದಲ್ಲಿ ಬಿಗಿದಿಟ್ಟ ಪರಿಮಳ
ಹಾರಿದಾಗೆಲ್ಲ ಕಳಕೊಂಡ ಕಳವಳ

ಸಂತೆಯಲಿ ನಾನಿಲ್ಲ ಸಂತಳೂ ಅಲ್ಲ.

ಬೆರಳ ಕಟ್ಟಿದ್ದ ಬೆರಗಿನುಂಗುರ
ನದಿಯಲ್ಲಿ ಜಾರಿ ನೋವಿನಾಗರ

ಸಂತೆಯಲಿ ನಾನಿಲ್ಲ ಸಂತಳೂ ಅಲ್ಲ.

ಮುಚ್ಚಿಟ್ಟ ಬಾಗಿಲು ಮುಗ್ಗು ಮುಗ್ಗು
ತೆರೆ ತೆರೆದಿಟ್ಟರೆ ಹಿಗ್ಗಿರದ ಸಿಗ್ಗು

ಸಂತೆಯಲಿ ನಾನಿಲ್ಲ ಸಂತಳೂ ಅಲ್ಲ.

ಆಲಯದಲಿ ಬಯಲ ಕನಸಿ
ಬಯಲಿನಲಿ ಆಲಯವ ಅರಸಿ

ಸಂತೆಯಲಿ ನಾನಿಲ್ಲ ಸಂತಳೂ ಅಲ್ಲ.

‍ಲೇಖಕರು Admin

24 February, 2016

4 Comments

  1. sangeetha raviraj

    ಕವಿತೆ ಚೆನ್ನಾಗಿದೆ

  2. S.p.vijaya Lakshmi

    Eshtu sundaravaada kavithegalu, nimmella kavithegalanthe…..Hachcha hasiru gidadalli araliruva ‘Sujimallige’ galanthe mohaka…..

  3. S.P.Vijayalakshmi

    Vah, nijakku kavithegalu chennaagive, Kamala avara endina kavithegala haage.
    Hachcha Hasirina gidadalli arali naguva Achchamalligegalanthe…….!

  4. Praveen V Savadi

    ಇಷ್ಟವಾಗುವ ವಿಷಯಗಳ, ಮುತ್ತಿನಂತ ರೂಪಕ ಶಬ್ದಗಳ ಸುಂದರವಾದ ಕವಿತೆಗಳು… ಹೂವುಗಳ ಸುವಾಸನೆಗಳ ಜೊತೆ ಅವುಗಳ ಬಿನ್ನಾಣವು ಮೋಹಕವಗಿದೆ.. “ಕಿಕ್ಕಿರಿದ ಸಂದಣಿಯಲಿ… ಬಿಕ್ಕಿ ಬಿಕ್ಕಿ..” ಎಂತಹ ಮನ ನಾಟುವ ಶಬ್ದಗಳ ಉಪಯೋಗಿಸಿದ್ದೀರಾ ಮೇಡಮ್. ಸುಂದರವಾದ ಕವಿತೆಗಳ ಓದಿದ ಕುಶಿಯಾಯಿತು… ವಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading