ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಕದಲೂರು ಹೊಸ ಕವಿತೆ- ಭ್ರಮೆ ಕರಗುವ ಕಾಲ

ವಸುಂಧರಾ ಕದಲೂರು

ಲಾಭಕೋರ ಮನಸು ಒಳ
ಅಂತರಾಳಕ್ಕಿಳಿಯದೆ, ಗಬಗಬನೆ
ಬಗೆಬಗೆಯ ವಿಷಯಾಂತರಕ್ಕೆಳೆಸುತ್ತಿತ್ತು;
ನುಂಗಿನೊಣೆವ ಸಣ್ಣಬುದ್ಧಿ,
ಮನ್ನಣೆಗೆ ಹವಣಿಸುತ್ತಾ ತನ್ನ ಸುತ್ತೇ
ಕೋಟೆ ಕಟ್ಟಿ ಬಂಧಿಯಾಗುತ್ತಿತ್ತು ;

ಭ್ರಮೆಗೊಂದು ಬಿಡುಗಡೆ ಕೊಡದೆ,
ಕತ್ತಲೆಯಲಿ ಬೆಳಕ ಸಂಭ್ರಮಿಸಲು
ಹೋಗಿ, ರೆಕ್ಕೆ ಪಟಪಟ ಬಡಿದು
ಬೆಂಕಿಪಾಲಾಗುತ್ತಿತ್ತು; ಉರಿಯ ಮುಂದೆ
ಹುಳವು ತಾನೆಂಬ ಅರಿವು ಆಗದೆ;
ನಿತ್ಯದಂತೆ ಸತ್ಯದೊಡನೆ ಸರಸವಾಡಲು
ಹೋಗಿ ಸುಟ್ಟು ಕರಗಿ, ಕಡೆಯ ಪ್ರಹಸನ
ಮುಗಿಸುತ್ತಿತ್ತು..

ರಂಗಿನ ಹಳಸಲು ಮೋಹಕತೆಯ
ಮೋಹಿಸುತಾ, ಮಾಸಿದ ಮನ;
ಹೇಸದ ನಿಲುವಂಗಿ ಧರಿಸಿ ಮತ್ತೆ ಮತ್ತೆ
ಗದ್ದುಗೆ ಏರುವ ಗೆಲುವಿನ ಕನಸು ಭಾವಿಸಿ;
ಸಣ್ಣತನ ಎತ್ತಿ ಮೆರೆಸಿ ಭ್ರಮಿಸುತ್ತಿತ್ತು, ಸಂಭ್ರಮಿಸುತ್ತಿತ್ತು ..

ನಿಂತ ನಿಲುವಿಗೇ ಕಾಲ ಬದಲಾಗದು;
ಭ್ರಮೆಯ ಬೆಟ್ಟ ಕರಗದು. ಮೋಡ
ಮುಸುಕಿ ಮಂಕಾದ ಸೂರ್ಯ ಕಾದು;
ಬಿಸಿಲೊಡನೆ ಬಯಲಿಗೆ ಬರುವಂತೆ,
ಕಾಲವೂ ಎಲ್ಲದರ ಭ್ರಮೆ ಕಳಚುವ
ಹೊಸ ಕಾಲಕೆ ಕಾಯಬೇಕಿದೆ…

‍ಲೇಖಕರು Avadhi

4 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading