ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಕದಲೂರು ಕವಿತೆ – ದೀಪಧಾರಿ ಬಂಧು…

ವಸುಂಧರಾ ಕದಲೂರು

ಸೋನೆ ಮಳೆಯಾಗಿ
ಸುರಿದ ಕವಿ – ಕಣವಿಯವರೇ
ಅದಾವ ಕಣಿವೆಯಲಿ ಹಾಲು
ಹೊಳೆಯಾಗಿ ಹರಿದು ಹೋದಿರಿ!
ವಿನೂತನ ವಿಶ್ವಕೆ ನವಚೇತನರಾಗಿ
ಎಲ್ಲಿ ಮಾಯವಾದಿರಿ..?

ಸೂರ್ಯನತ್ತ ಹೊರಳಿ ನಿಂತ
ಅನಂತ ಹೂವಗಳ ಸೊಬಗಲಿ
ಸಿಲುಕಿತೇ ನಿಮ್ಮ ಚಿತ್ತ!
ಚಂದಿರನ ಹಾದಿ ಬಿಟ್ಟು
ಹೀಗೆ ಪರಿಮಳದ ಜಾಡು
ಹಿಡಿದು ತೆರೆಳಿದ್ದು ಅದಾವ
ತುರ್ತು ಕಾರ್ಯನಿಮಿತ್ತ…!

ಮುಟ್ಟಿದರೆ ಮಾಸುವ ಚೆಲುವ
ಪಾರಿಜಾತವ ಬಿಟ್ಟು, ಏಳೆಂದು
ಎಬ್ಬಿಸಿ, ಘಮಲು ಸೂಸುವ ಮಲ್ಲಿಗೆ
ಸಸಿಯ ನಮ್ಮಂಗಳದಿ ನೆಟ್ಟು; ಆ
ಎಳೆಮೊಗ್ಗು ಹೂವಾಗಿ ಕಂಪು
ಹರಡಿದುದ ಕಂಡು ಹಿಗ್ಗಿ ಹರಸಿದ
ಹಿರಿಯ ಅಮರ ಮರ ನೀವು
ಅದಾರ ನೆತ್ತಿಗೆ ಈಗ ನೆರಳ ಕೊಡೆ
ಹಿಡಿದು ಹೋದಿರಿ…?

ನಿಮ್ಮ ಕರುಣೆಯ ಕಾವ್ಯಾಕ್ಷಿ
ಕತ್ತಲ ಹಾದಿಗೆ ಜ್ಯೋತಿ ಬೆಳಗಲು
ಮೆರವಣಿಗೆ ಹೊರಟಿತೆ? ಸರ್ವರ
ಹೃದಯದಿ ಚೆಂಬೆಳಗು ಹರಡಿ
ಕಾಲನಿಲ್ಲುವುದಿಲ್ಲವೆಂದು ನೀವೂ
ನಿಲ್ಲದೇ ಮರೆಯಾದಿರಾ…

ಮರಳಿ ಬನ್ನಿರಿ ಮತ್ತೊಮ್ಮೆ
ನಗುವ ಸೂಸುತ್ತಾ; ನೀವಲ್ಲದೇ
ಮತ್ತಾರು ಕರುನಾಡಿಗೆ ಸೇರುವರು
ಓ ದೀಪಧಾರಿ ಬಂಧು..

‍ಲೇಖಕರು Admin

22 February, 2022

2 Comments

  1. Uma Ashok

    Good one

  2. T S SHRAVANA KUMARI

    ಸುಂದರ ನುಡಿನಮನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading