ವಲಸೆಹಕ್ಕಿಗಳ ಹಾಡು-ಪಾಡು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಹೋಲಿ ಹಬ್ಬದ ಅವಧಿಯಲ್ಲಿ ಕಾರ್ಮಿಕರನ್ನು ಹಿಡಿಯುವುದೇ ಕಷ್ಟ ಎನ್ನುತ್ತಿದ್ದ ದಿಲ್ಲಿ ಮೂಲದ ಓರ್ವ ಗುತ್ತಿಗೆದಾರ.

ಅವರು ಹೇಳುವ ಪ್ರಕಾರ ಬೇರೆ ದಿನಗಳಲ್ಲಿ ಭಾನುವಾರವಾದರೂ ಕಾರ್ಮಿಕರು ಕೆಲಸಕ್ಕೆ ಸಿಗುತ್ತಾರೆ. ಆದರೆ ಹೋಲಿ, ದಸರಾ, ದೀಪಾವಳಿಯಂಥಾ ಹಬ್ಬಗಳ ಋತುವಿನಲ್ಲಿ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ.

ಭಾರತದ ಇತರ ಮಹಾನಗರಿಗಳಂತೆ ದಿಲ್ಲಿಯಲ್ಲೂ ಇರುವ ಕಾರ್ಮಿಕರ ಸಂಖ್ಯೆಯಲ್ಲಿ ಬಹುಪಾಲು ವಲಸಿಗರೇ ಇರುವುದರಿಂದ, ಹಬ್ಬದ ದಿನಗಳಲ್ಲಿ ಈ ಮಂದಿ ಒಂದೆರಡು ದಿನ ಹೆಚ್ಚೇ ರಜೆ ಹಾಕಿ ಹಬ್ಬವನ್ನಾಚರಿಸಲು ತಮ್ಮ ಪ್ರದೇಶಗಳಿಗೆ ತೆರಳುವುದು ಸಾಮಾನ್ಯವೂ ಹೌದು. ‘ಇರಲಿ ಬಿಡಿ, ಅದು ಅವರ ಹಕ್ಕಿನ ರಜೆ ಸಾರ್’, ಎಂದ ಆತ ಹಾಯಾಗಿ ನಕ್ಕಿದ್ದ. ನಾವೂ ಕೂಡ ಇನ್ನೇನು ಬರಲಿರುವ ಹಬ್ಬದ ಹ್ಯಾಂಗೋವರಿಗೆ ಸಜ್ಜಾದೆವೇನೋ ಎಂಬಂತೆ ಅವರ ಖುಷಿಯಲ್ಲಿ ಶಾಮೀಲಾದೆವು.

ಉತ್ತರ ಭಾರತದ ಇತರ ಭಾಗಗಳಂತೆ ದಿಲ್ಲಿಯಲ್ಲೂ ಹೋಲಿಯ ರಂಗಿನಾಟವು ಭರಪೂರವೇ. ಬಹಳ ಹಿಂದಿನಿಂದಲೂ ಬಾಲಿವುಡ್ ಈ ಹಬ್ಬಕ್ಕೆ ವಿಶೇಷವಾದ ಗ್ಲಾಮರ್ ಅನ್ನು ಬೇರೆ ತಂದುಕೊಟ್ಟಿದೆ. ಹೀಗಾಗಿ ಹಬ್ಬದ ಭರದಲ್ಲಿ ಯಾರನ್ನು ಯಾರೂ ಕೇಳುವವರಿಲ್ಲ. ಇಲ್ಲಿ ಯಾರು ಯಾರಿಗೂ ರಂಗನ್ನು ಎರಚಿ ಏನೂ ಆಗಿಲ್ಲವೆಂಬಂತೆ ಜನಜಂಗುಳಿಯಲ್ಲಿ ಮರೆಯಾಗಬಹುದು. ತಮ್ಮ ಪಾಡಿಗೆ ನಡೆದು ಹೋಗುತ್ತಿದ್ದರೆ ಗೊಮ್ಮಟೇಶ್ವರನಿಗೆ ಆಗುವ ಮಹಾಮಜ್ಜನದ ಅಭಿಷೇಕದಂತೆ, ಎಲ್ಲಿಂದಲೋ ಬಣ್ಣದ ಬಕೆಟ್ ಪೂರ್ತಿ ನೀರಿನ ರಾಶಿಯು ಅಚಾನಕ್ಕಾಗಿ ಮೈಗೆ ಅಪ್ಪಳಿಸಿ ನಮ್ಮನ್ನು ಸಂಪೂರ್ಣವಾಗಿ ತೋಯಿಸಬಹುದು.

ಈ ರಂಗಿನಾಟವು ಕೆಲವೊಮ್ಮೆ ಪುಂಡಾಟಕ್ಕೆ ತಿರುಗಿ ಎಡವಟ್ಟುಗಳಾಗುವುದೂ ಉಂಟು. ಆಗೆಲ್ಲಾ ‘ಬುರಾ ನಾ ಮಾನೋ, ಹೋಲಿ ಹೈ’ (ತಪ್ಪು ತಿಳ್ಕೋಬೇಡಿ, ಹೇಗೂ ಹೋಳಿಯಲ್ವಾ?) ಎಂದು ಹೇಳಿ, ಆದ ತಪ್ಪಿಗೆ ತೇಪೆ ಹಚ್ಚಲು ಒಂದು ರೆಡಿಮೇಡ್ ಡೈಲಾಗೂ ಇದೆ. ಒಟ್ಟಿನಲ್ಲಿ ಕಳ್ಳನಿಗೊಂದು ಪಿಳ್ಳೆನೆವ.

ಅಂದಹಾಗೆ ಹಬ್ಬದ ಋತುವಿನಲ್ಲಾಗುವ ಇಂಥಾ ಅಲಭ್ಯತೆಯು ವಲಸಿಗ ಕೂಲಿಕಾರ್ಮಿಕರ ವರ್ಗಕ್ಕಷ್ಟೇ ಸೀಮಿತವೇನಲ್ಲ. ಏಕೆಂದರೆ ಸದ್ಯದ ತಂತ್ರಜ್ಞಾನದ ಯುಗದಲ್ಲಿ ಬಹುತೇಕ ಎಲ್ಲಾ ಉದ್ಯೋಗಿಗಳೂ ವಲಸಿಗರೇ. ಸಿಕ್ಕ ಒಂದಷ್ಟು ಸಂಬಳವನ್ನೇ ಕಣ್ಣಿಗೊತ್ತಿಕೊಂಡು, ಸರ್ಕಾರಕ್ಕೆ ನಿಯಮಿತವಾಗಿ ತೆರಿಗೆ ಕಟ್ಟುತ್ತಾ, ಲೋನು-ಇನ್ಷೂರೆನ್ಸ್ ಪಾಲಿಸಿಯ ಜಂಜಾಟಗಳಲ್ಲಿ ಬೆಂದುಹೋಗಿರುವ, ಆರಕ್ಕೇರದ ಮೂರಕ್ಕಿಳಿಯದ ನಮ್ಮ ದೇಶದ ಮಧ್ಯಮವರ್ಗವು ಇಲ್ಲಿಂದಲೂ ಇಂದು ದೊಡ್ಡಮಟ್ಟದಲ್ಲಿ ಮೊಳಕೆಯೊಡೆಯುತ್ತಿದೆ.

ಅಸಲಿಗೆ ಸರಕಾರಗಳು ಅಭಿವೃದ್ಧಿ ಕೇಂದ್ರಿತ ದೂರದೃಷ್ಟಿಯನ್ನಿಟ್ಟುಕೊಂಡು ಹೆಜ್ಜೆಯಿಟ್ಟಂತೆಲ್ಲಾ ನಗರಗಳು ವಿಪರೀತವೆಂಬಷ್ಟು ವಲಸಿಗರಿಂದ ತುಂಬಿಹೋಗಿವೆ. ಅಷ್ಟಕ್ಕೂ ಇದು ಇಂದು ನಿನ್ನೆಯ ಮಾತೇನಲ್ಲವಲ್ಲಾ. ಮಾನವನ ಇತಿಹಾಸ ಮತ್ತು ವಿಕಾಸದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಇರುವಿಕೆಯು ನಮಗೆ ಇತಿಹಾಸದುದ್ದಕ್ಕೂ ಸ್ಪಷ್ಟವಾಗಿ ಕಾಣುತ್ತದೆ. ಕೈಗಾರಿಕೀಕರಣದ ಆರಂಭದ ದಿನಗಳಿಂದ ಶುರುವಾದ ಈ ವಲಸೆಯು ಇಂದಿಗೂ ಎಗ್ಗಿಲ್ಲದೆ ಮುಂದುವರಿದಿದೆ. ಇಡೀ ಜಗತ್ತೇ ಒಂದು ಜಾಗತಿಕ ಹಳ್ಳಿಯಾಗಿ ಬದಲಾದ ನಂತರವೂ!

ಉದ್ಯೋಗನಿಮಿತ್ತವಾಗಿ ಕರ್ನಾಟಕದ ಕರಾವಳಿಯಿಂದ ದಿಲ್ಲಿಯವರೆಗೆ ವಲಸೆ ಬಂದು, ಖುದ್ದು ವಲಸಿಗನಾಗಿರುವ ನಾನು ನನ್ನ ಸುತ್ತಮುತ್ತಲ ವಲಸಿಗರ ಬದುಕನ್ನು ಒಂದು ಆರೋಗ್ಯಕರ ಕುತೂಹಲದಿಂದಲೇ ಕಂಡಿದ್ದೇನೆ. ವಲಸಿಗರ ಸಮುದಾಯಗಳು ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ದೊಡ್ಡ ಮಟ್ಟಿನ ಕೊಡುಗೆಯನ್ನು ಆಯಾ ಪ್ರದೇಶಕ್ಕೆ ನೀಡಿದರೂ, ಈ ಗುಂಪುಗಳು ಹಲವು ಸ್ತರಗಳಲ್ಲಿ ಒಂದಲ್ಲಾ ಒಂದು ರೀತಿಯ ಕಡೆಗಣಿಕೆಗೆ ಒಳಗಾಗುವುದನ್ನೂ ನೋಡಿದ್ದೇನೆ. ಹೀಗಾಗಿ ಮಹಾನಗರಿಗಳಲ್ಲಿ ವಲಸಿಗರ ಬದುಕು ಎಂಬ ಸಂಗತಿಯು ನನ್ನ ಮಟ್ಟಿಗೆ ಎಂದಿಗೂ ನೀರಸವೆನಿಸದ ಅಚ್ಚರಿಯ ಮೂಟೆ.

ಈಚೆಗೆ ನನ್ನ ಆಫ್ರಿಕಾ ಸಂಬಂಧಿ ದಸ್ತಾವೇಜುಗಳಲ್ಲಿ ಕೈಯಾಡಿಸುತ್ತಿದ್ದಾಗ ಕೆಲ ದಶಕಗಳ ಹಿಂದೆ ಭಾರೀ ಸದ್ದು ಮಾಡಿದ್ದ ಕುಖ್ಯಾತ ಹೆಸರೊಂದು ಮತ್ತೊಮ್ಮೆ ಥಟ್ಟನೆ ನೆನಪಾಗಿತ್ತು. ಅದು ಈದಿ ಅಮೀನ್. ಅಸಲು ಸಂಗತಿಯೇನೆಂದರೆ ಈ ಹೆಸರಿನೊಂದಿಗೆ ನಾನು ನನ್ನ ಬಾಲ್ಯದ ದಿನಗಳಲ್ಲೇ ಮುಖಾಮುಖಿಯಾಗಿದ್ದೆ. ಅದೂ ಅನಿರೀಕ್ಷಿತವೆಂಬಂತೆ.

ಹಲವು ವರ್ಷಗಳ ಹಿಂದೆ ಮಕ್ಕಳ ಪಾಕ್ಷಿಕ ಪತ್ರಿಕೆಯಾದ ಬಾಲಮಂಗಳದಲ್ಲಿ ಈದಿ ಅಮೀನನ ಬಗ್ಗೆ ಪುಟ್ಟ ಲೇಖನವೊಂದು ಪ್ರಕಟವಾಗಿತ್ತು. ಈದಿ ಅಮೀನ್ ಓರ್ವ ನರಭಕ್ಷಕನಾಗಿದ್ದ ಎಂಬ ಅಂಶವು ಲೇಖನದಲ್ಲಿದ್ದ ಪರಿಣಾಮವೋ ಏನೋ. ಶಾಲಾದಿನಗಳಲ್ಲಿ ಓದಿದ್ದರೂ ಅಮೀನನ ಬಂಡೆಯಂಥಾ ಮುಖ ಮತ್ತು ಅದರ ಜೊತೆಗಿದ್ದ ಆತನ ವಿಚಿತ್ರ ಕಥೆಯು ನನ್ನ ನೆನಪಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿತ್ತು.

ಉಗಾಂಡಾ ದೇಶದ ರಾಷ್ಟ್ರಾಧ್ಯಕ್ಷನಾಗಿದ್ದ ಈದಿ ಅಮೀನ್ ದಾದಾ ಅಲ್ಲಿಯ ಮಿಲಿಟರಿ ನಾಯಕನಾಗಿದ್ದವನು. ವಾಮಮಾರ್ಗಗಳಿಂದಲೇ ಗದ್ದುಗೆಯನ್ನೇರಿದ್ದ ಭ್ರಷ್ಟ ಸರ್ವಾಧಿಕಾರಿ. ಕ್ರೌರ್ಯದ ಸಾಕ್ಷಾತ್ ಪ್ರತಿರೂಪದಂತಿದ್ದ ಈತನ ಅಧಿಕಾರಾವಧಿಯಲ್ಲಿ ಅಂದಾಜು ಎರಡು ಲಕ್ಷದಿಂದ ಐದು ಲಕ್ಷ ನಾಗರಿಕರು ಹತ್ಯೆಗೊಳಗಾದರು ಎಂದು ಹೇಳಲಾಗುತ್ತದೆ.

ಕೈಹಿಡಿದ ಒಂದಿಬ್ಬರು ಪತ್ನಿಯರನ್ನೂ ಸೇರಿದಂತೆ, ತನ್ನ ಮಂತ್ರಿಮಂಡಲದಲ್ಲಿದ್ದ ಕೆಲ ಸಚಿವರನ್ನೂ ಆತ ನಿಗೂಢವಾಗಿ, ಅಮಾನುಷವಾಗಿ ಕೊಲ್ಲಿಸಿದ್ದ. ಹೀಗೆ ಎಂಟು ವರ್ಷಗಳ ತನ್ನ ಅಲ್ಪ ಅಧಿಕಾರಾವಧಿಯಲ್ಲೇ ಎಲ್ಲೆಡೆ ಭಯದ ವಾತಾವರಣವನ್ನು ಸೃಷ್ಟಿಸಿದ್ದ ಈ ವಿಲಕ್ಷಣ ಮಿಲಿಟರಿ ನಾಯಕನನ್ನು `ಉಗಾಂಡಾದ ಕಟುಕ’ ಎಂದೂ ಮಾಧ್ಯಮಗಳು ಜರೆದಿದ್ದವು.

೧೯೭೨ ರ ಅವಧಿಯಲ್ಲಿ ಉಗಾಂಡಾದಲ್ಲಿ ವಿಚಿತ್ರ ಸನ್ನಿವೇಶವೊಂದು ಸೃಷ್ಟಿಯಾಗುತ್ತದೆ. ಎಪ್ಪತ್ತರ ದಶಕದಲ್ಲಿ ಉಗಾಂಡಾದಲ್ಲಿದ್ದ ಏಷ್ಯನ್ನರು ಉಗಾಂಡಾದ ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡುತ್ತಿದ್ದರು. ಅದರಲ್ಲೂ ಈ ಏಷ್ಯನ್ ಮೂಲದ ಉದ್ಯಮಗಳ ಸಂಖ್ಯೆಯಲ್ಲಿ ಸಿಂಹಪಾಲು ಭಾರತೀಯರದ್ದೇ ಆಗಿತ್ತು. ಹಲವು ವರ್ಷಗಳಿಂದ ಉಗಾಂಡಾದಲ್ಲಿ ನೆಲೆಯೂರಿದ್ದ ಭಾರತೀಯ ಮೂಲದ ಮಂದಿ ಅಲ್ಲಿ ವಿವಿಧ ಬಗೆಯ ಉದ್ಯಮಗಳನ್ನು ನಡೆಸುತ್ತಾ ಯಶಸ್ವಿಯೂ ಆಗಿದ್ದರು. ಇದರಂತೆ ಸಹಜವಾಗಿಯೇ ತನ್ನ ಗೂಡಿನಲ್ಲಿರುವ ವಿದೇಶಿ ಮೂಲದ, ಚಿನ್ನದ ಮೊಟ್ಟೆಗಳನ್ನಿಡುವ ಕೋಳಿಯನ್ನು ಈದಿ ಅಮೀನ್ ಸರಿಯಾಗಿ ಗುರುತಿಸಿದ್ದ.

ಆದರೆ ಚಿನ್ನದ ಮೊಟ್ಟೆಗಳನ್ನಿಡುವ ಕೋಳಿಯನ್ನು ನಿಭಾಯಿಸುವ ಶಕ್ತಿ, ಬುದ್ಧಿವಂತಿಕೆಗಳು ಎಲ್ಲರಲ್ಲೂ ಇರಬೇಕೆಂದಿಲ್ಲವಲ್ಲಾ. ಈದಿ ಅಮೀನ್ ದಾದಾ ಎಡವಿದ್ದೇ ಇಲ್ಲಿ. ‘ಉಗಾಂಡಾದ ಸಂಪತ್ತು ಉಗಾಂಡನ್ನರಿಗಷ್ಟೇ ಸಿಗಬೇಕು; ಏಷ್ಯನ್ನರು ಇಲ್ಲಿಂದ ತೊಲಗಲಿ’ ಎಂದು ಘೋಷಿಸಿದ ಮಿಲಿಟರಿ ಸರ್ವಾಧಿಕಾರಿ ಸಾಹೇಬ ಅಲ್ಪ ಅವಧಿಯ ಗಡುವನ್ನು ನೀಡಿ ಎಲ್ಲರನ್ನೂ ಉಗಾಂಡಾದಿಂದ ಓಡಿಸಿಬಿಟ್ಟ.

ಎಲ್ಲಾ ಸಂದರ್ಭಗಳಲ್ಲಾಗುವಂತೆ ಸರ್ವಾಧಿಕಾರಿಯ ವಂಧಿಮಾಗಧರು ಇದಕ್ಕೂ ಬಹುಪರಾಕು ಹಾಕುತ್ತಾ ಆತನನ್ನು ಇಂದ್ರ-ಚಂದ್ರ ಎಂದು ಹೊಗಳಿಬಿಟ್ಟರು. ಬದುಕಿನುದ್ದಕ್ಕೂ ಈದಿ ಅಮೀನ್ ತನ್ನನ್ನು ತಾನೇ ಹೊಗಳಿಕೊಂಡಿದ್ದು, ತನಗೆ ತಾನೇ ಉದ್ದುದ್ದ ಬಿರುದು-ನಾಮಾವಳಿಗಳನ್ನು ಕೊಟ್ಟಿದ್ದು ಸಾಲದ್ದೆಂಬಂತೆ.

ಈ ಅವಧಿಯಲ್ಲಿ ಈದಿ ಅಮೀನನ ಪುಂಡ ಹಿಂಬಾಲಕರ ದಬ್ಬಾಳಿಕೆ, ದೌರ್ಜನ್ಯಗಳಿಂದಾಗಿ ಅದೆಷ್ಟೋ ಏಷ್ಯನ್ನರ ಅಂಗಡಿ ಮುಂಗಟ್ಟುಗಳು, ಕಾರ್ಯಾಲಯಗಳು ಹಾಡಹಗಲೇ ಲೂಟಿಗೊಳಗಾದವು. ವಿನಾಕಾರಣ ಅಲ್ಲಲ್ಲಿ ಕೊಲೆ, ದಂಗೆ, ರಕ್ತಪಾತಗಳಾದವು. ಇವೆಲ್ಲದರ ಪರಿಣಾಮವೆಂಬಂತೆ ಭಾರತೀಯ ಮೂಲದ ಸಾವಿರಾರು ಕುಟುಂಬಗಳು ಉಗಾಂಡಾದಿಂದ ಇಂಗ್ಲೆಂಡಿಗೆ ವಲಸೆ ಹೋದರೆ, ಉಳಿದವರು ಇತರೆ ಕಾಮನ್ ವೆಲ್ತ್ ದೇಶಗಳಲ್ಲಿ ಚದುರಿಹೋದರು. ಒಟ್ಟಿನಲ್ಲಿ ಆಗಲೇ ಇಟ್ಟಿದ್ದ ಅಮೂಲ್ಯವಾದ ಚಿನ್ನದ ಕೆಲ ಮೊಟ್ಟೆಗಳು ಗೂಡಿನಲ್ಲಿ ಉಳಿದವಾದರೂ ಕೋಳಿಯನ್ನು ಮಾತ್ರ ನಿರ್ದಯವಾಗಿ ಕತ್ತು ಹಿಸುಕಿ ಕೊಲ್ಲಲಾಗಿತ್ತು.

ಹೀಗೆ ಸಾವಿರಾರು ಭಾರತೀಯ ಮೂಲದ ವಲಸಿಗರೂ ಸೇರಿದಂತೆ ಒಟ್ಟಾರೆ ಏಷ್ಯನ್ನರನ್ನು ಗಡಿಬಿಡಿಗೆ ಬಿದ್ದವನಂತೆ ಗಡೀಪಾರು ಮಾಡಿದ ಈದಿ ಅಮೀನ್, ಈ ಮಂದಿ ಇಟ್ಟಿದ್ದ ಅಂಗಡಿ ಮುಂಗಟ್ಟುಗಳನ್ನು, ವಾಣಿಜ್ಯ ಸಂಕೀರ್ಣಗಳನ್ನು ತನ್ನ ಹಿಂಬಾಲಕರಿಗೆ ಬೇಕಾಬಿಟ್ಟಿ ದಾನ ಮಾಡಿದ್ದ. ಆದರೆ ಈ ಬಗೆಯ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಬೇಕಿದ್ದ ಜ್ಞಾನವೂ, ಅನುಭವವೂ ಸ್ಥಳೀಯ ಉಗಾಂಡನ್ನರಿಗೆ ಇರದಿದ್ದ ಪರಿಣಾಮವಾಗಿ ಪರಿಸ್ಥಿತಿಯು ಕೈಮೀರಿ ಹೋಯಿತು.

ಇತ್ತ ಸರ್ವಾಧಿಕಾರಿ ಈದಿ ಅಮೀನನ ಅತ್ಯಾಪ್ತರಾಗಿದ್ದ ಹಲವು ಮಿಲಿಟರಿ ಸೈನ್ಯಾಧಿಕಾರಿಗಳು ಸ್ವಭಾವತಃ ಭ್ರಷ್ಟರಾಗಿದ್ದ ಪರಿಣಾಮವಾಗಿ ಅವರಿಂದ ಹೆಚ್ಚಿನದೇನನ್ನು ನಿರೀಕ್ಷಿಸುವಂತೆಯೂ ಇರಲಿಲ್ಲ. ಅಂತೂ ಮೊದಲೇ ವ್ಯಥೆಪಟ್ಟು ಕಾಲೆಳೆಯುತ್ತಾ, ಏದುಸಿರು ಬಿಡುತ್ತಿದ್ದ ಉಗಾಂಡಾದ ಆರ್ಥಿಕತೆಯು ಈದಿ ಅಮೀನನ ಮೂರ್ಖ ರಾಜಕೀಯ ನಡೆಯಿಂದಾಗಿ ಮತ್ತಷ್ಟು ಹಳ್ಳಹಿಡಿದಿತ್ತು.

ಸ್ಥಳವೊಂದರಲ್ಲಿ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಬೀಡುಬಿಟ್ಟು, ಏಕಾಏಕಿ ಒಕ್ಕಲೆಬ್ಬಿಸಿಬಿಟ್ಟರೆ ಆಗುವ ಆಘಾತ, ಆತಂಕಗಳ ವಿಷಮ ಪರಿಸ್ಥಿತಿಯನ್ನು ಬಹುಷಃ ಈ ಏಷ್ಯನ್ನರಷ್ಟು ಪರಿಣಾಮಕಾರಿಯಾಗಿ ಬರ‍್ಯಾರೂ ಹೇಳಲಾರರು. ಹಲವು ದಶಕಗಳಿಂದ ಅಲ್ಲೇ ನೆಲೆಯೂರಿ, ಉಗಾಂಡಾದ ಭಾಗವೇ ಆಗಿಬಿಟ್ಟಿದ್ದ ಈ ಮಂದಿಯಲ್ಲಿ ತಾವು ವಲಸಿಗರೆನ್ನುವ ಭಾವವೂ ತಕ್ಕಮಟ್ಟಿಗೆ ಅಳಿದುಹೋಗಿದ್ದಿರಬಹುದು. ತಮ್ಮ ಅಸಾಮಾನ್ಯ ಸಾಮರ್ಥ್ಯ, ಅನುಭವ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಪರದೇಶವೊಂದರ ಆರ್ಥಿಕತೆಗೆ ದೊಡ್ಡಮಟ್ಟಿನ ಕೊಡುಗೆಯನ್ನು ನೀಡುತ್ತಿದ್ದೇವೆಂಬ ಹೆಮ್ಮೆಯೂ ಅವರಲ್ಲಿ ಅಲ್ಪಸ್ವಲ್ಪ ಇದ್ದಿರಬಹುದು. ಆದರೆ ವಲಸಿಗರ ಈ ಭ್ರಮೆಯ ನೀರಗುಳ್ಳೆಯನ್ನು ಒಡೆಯಲು ಈದಿ ಅಮೀನನಿಗೆ ಹೆಚ್ಚು ಸಮಯವೇನೂ ಹಿಡಿದಿರಲಿಲ್ಲ.

ಇವೆಲ್ಲದರಿಂದಾಗಿ ಒಟ್ಟಾರೆಯಾಗಿ ನಷ್ಟವಾಗಿದ್ದು ಉಗಾಂಡಾಕ್ಕೇನೇ ಎಂಬುದರಲ್ಲಿ ಎರಡು ಮಾತಿಲ್ಲ. ಅದು ಬೇರೆ ಮಾತು. ಆದರೆ ಪ್ರಭುತ್ವದ ಶಕ್ತಿಗಳು ಆಗಾಗ ವಲಸಿಗರಲ್ಲಿ ಹುಟ್ಟುಹಾಕುವ ಇಂಥಾ ಅಭದ್ರತೆಯ ಸಾಧ್ಯತೆಗಳನ್ನು ಯಾವತ್ತಿಗೂ ತಳ್ಳಿಹಾಕುವ ಹಾಗಿಲ್ಲ. ಹೀಗಾಗಿ ಅಂದಿಗೂ, ಇಂದಿಗೂ ವಲಸಿಗರಲ್ಲಿ ಇಂಥದ್ದೊಂದು ಅಭದ್ರತೆಯ, ಪರಕೀಯತೆಯ ಭಾವವು ಸದಾ ಗುಪ್ತಗಾಮಿನಿಯಂತೆ ಇದ್ದೇ ಇದೆ. ಅತ್ತ ಹಳ್ಳಿಗೂ ಆಗದ, ಇತ್ತ ಮಹಾನಗರಕ್ಕೂ ಪೂರ್ಣರೂಪದಲ್ಲಿ ಸಲ್ಲದ ತ್ರಿಶಂಕು ಸ್ಥಿತಿಯ ನಡುವೆಯೂ ತನ್ನ ಬೇರಿನತ್ತ ಇರುವ ಸೆಳೆತವೇ ಹೆಚ್ಚು ಮಾನ್ಯವಾಗುವ ಹಿಂದೆ, ಅಪ್ಪಟ ತನ್ನತನದ ಪರಿಪೂರ್ಣತೆಯ ಮತ್ತು ಭದ್ರತೆಯ ಭಾವವೂ ಇರಬಹುದು. ಅದು ಮಾನವನ ಮೂಲಗುಣವೂ ಹೌದು!

ದಿಲ್ಲಿಯ ವಿಚಾರಕ್ಕೆ ಬಂದರೆ ಕೊರೋನಾ ಕಾಲದಲ್ಲಿ ದಿಲ್ಲಿ-ಗುರುಗ್ರಾಮ ಭಾಗದಲ್ಲಿದ್ದ ನೂರಾರು ದಿನಗೂಲಿ ಕಾರ್ಮಿಕರು ಮರಳುತ್ತಿದ್ದ ಸಂದರ್ಭದಲ್ಲಿ ಶಹರದ ಅನ್ಯಮನಸ್ಕತನವು ಅನಾವರಣಗೊಂಡಿದ್ದು ಸತ್ಯ. ಪರಿಸ್ಥಿತಿಯು ಸುಧಾರಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಈ ಮಂದಿ ನಿಯಮಿತ ಆದಾಯವಿಲ್ಲದೆ ಮನೆಯ ಬಾಡಿಗೆಗಳನ್ನೂ ಕಟ್ಟಲು ಸಾಧ್ಯವಾಗದೆ, ಕೊನೆಗೂ ವಿಧಿಯಿಲ್ಲವೆಂಬಂತೆ ಗಂಟುಮೂಟೆ ಕಟ್ಟಿ, ಮರಳಿ ತಮ್ಮ ಹಳ್ಳಿಗಳತ್ತ ಸಾಗುತ್ತಿದ್ದಿದ್ದು ಹತಾಶೆಯ ದೃಶ್ಯಗಳೇ ಆಗಿದ್ದವು. ಇಷ್ಟು ದಿನ ನಮ್ಮನ್ನು ಪೊರೆದ ಮಹಾನಗರಿಯು ಏಕಾಏಕಿ ನಮ್ಮನ್ನು ಕೈಬಿಟ್ಟಿತೇ ಎಂಬ ಭಾವವನ್ನು ಈ ಘಟನಾವಳಿಗಳು ಅವರಲ್ಲಿ ಮೂಡಿಸಿದ್ದರೂ ಅಚ್ಚರಿಯೇನಿಲ್ಲ.

ಇನ್ನು ಇಲ್ಲಿಯ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದ ಹಲವರ ಪರಿಸ್ಥಿತಿಯೂ ಬಹುತೇಕ ಇದೇ ಆಗಿತ್ತು. ಬರುವ ಒಂದಷ್ಟು ಸಂಬಳ, ಒಲ್ಲೆನೆಂದರೂ ಬೆನ್ನುಬಿಡದ ಹತ್ತಾರು ಖರ್ಚುಗಳು, ಬೇಕಿರುವ-ಬೇಡದ ಐಷಾರಾಮಗಳಿಗೆ ಎತ್ತಲಾಗಿರುವ ಸಾಲದ ಮಾಸಿಕ ಕಂತುಗಳು, ಕೊರೋನಾದಂತಹ ಸಂದಿಗ್ಧ ಅವಧಿಯಲ್ಲಿ ನೆಲ ಕಚ್ಚಿದ ಜಾಗತಿಕ ಮಾರುಕಟ್ಟೆ ವ್ಯವಸ್ಥೆ, ಯಾವ ಕ್ಷಣದಲ್ಲೂ ಕೈತಪ್ಪಿಹೋಗಬಹುದಾದ ಉದ್ಯೋಗ, ವರ್ಕ್ ಫ್ರಂ ಹೋಮ್ ಎನ್ನುತ್ತಾ ದಿನಕ್ಕೆರಡು ತಾಸು ಹೆಚ್ಚು ದುಡಿಸುವ ಕಾರ್ಪೋರೆಟ್ ಸಂಸ್ಥೆಗಳು, ಈ ನೆಪದಲ್ಲಿ ಆಫೀಸಿನ ಜಂಜಾಟಗಳನ್ನು ಮನೆಗೆ ಎಳೆದು ತಂದು ಅಸ್ತವ್ಯಸ್ತವಾಗಿರುವ ಮನೆಯ ಆಂತರಿಕ ವ್ಯವಸ್ಥೆ, ವಿಚಿತ್ರ ಕಲಬೆರಕೆಯಾಗಿ ತಿನ್ನಲಾರದ ಚೌಚೌ ಬಾತ್ ಆಗಿಬಿಟ್ಟಿರುವ ಖಾಸಗಿ ಮತ್ತು ವೃತ್ತಿ ಬದುಕು… ಸಮಸ್ಯೆಗಳು ಒಂದೇ, ಎರಡೇ? ಇದು ದಿಲ್ಲಿ-ಗುರುಗ್ರಾಮ-ನೋಯ್ಡಾದಂಥಾ ಮಹಾನಗರಿಗಳಲ್ಲಿ ಬೀಡುಬಿಟ್ಟಿರುವ ವಿದ್ಯಾವಂತ ವಲಸಿಗರ ಪಾಡು.

ಮಹಾನಗರಿಯ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಕೆಲಸ ಮಾಡುವ ಎಂಜಿನಿಯರ್ ಒಬ್ಬ, ತನ್ನ ಪಾಲಿಗಿಲ್ಲದ ಸ್ವಾತಂತ್ರ್ಯಕ್ಕೆ ಆಸೆಪಡುತ್ತಾ ಇದಕ್ಕಿಂತ ರಸ್ತೆಬದಿಯಲ್ಲಿ ಬೋಂಡಾ-ಭಜ್ಜಿ ಮಾರೋದೇ ವಾಸಿ. ಮೇಲಧಿಕಾರಿಯ ಗುಲಾಮತನ ಯಾರಿಗೆ ತಾನೇ ಬೇಕು’ ಎಂದು ನಿಡುಸುಯ್ಯುತ್ತಿರುತ್ತಾನೆ. ಅತ್ತ ಬೋಂಡಾ-ಭಜ್ಜಿ ಮಾರುವಾತ ಆಹಾ… ಏಸಿ ರೂಮು, ಕತ್ತಿಗೊಂದು ಟೈ, ಕುಟುಕುಟು ಕುಟ್ಟಲು ಲ್ಯಾಪ್ಟಾಪು, ಜುಮ್ಮನೆ ಹೋಗಿಬರಲು ಕಾರು, ತಿಂಗಳ ಕೊನೆಗೊಂದಿಷ್ಟು ಸಂಬಳ… ಉದ್ಯೋಗ ಎಂದರೆ ಇದಪ್ಪಾ…’ ಎಂದೆಲ್ಲಾ ಹಗಲುಗನಸು ಕಾಣುತ್ತಿರುತ್ತಾನೆ. ಎಲ್ಲರಿಗೂ ಕಾಣಲು ದೂರದ ಬೆಟ್ಟ ನುಣ್ಣಗೆ. ಒಟ್ಟಿನಲ್ಲಿ ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬಂತಿನ ತ್ರಿಶಂಕು ಪರಿಸ್ಥಿತಿ.

ಹನ್ಸಲ್ ಮೆಹ್ತಾ ನಿರ್ದೇರ್ಶನದ ಸಿಟಿ ಲೈಟ್ಸ್’ ನನ್ನ ಮೆಚ್ಚಿನ ಹಿಂದಿ ಚಿತ್ರಗಳಲ್ಲೊಂದು. ತನ್ನ ಪತ್ನಿಯ ಸಮೇತವಾಗಿ ರಾಜಸ್ಥಾನದಿಂದ ಮುಂಬೈಗೆ ವಲಸೆ ಬರುವ ಅಮಾಯಕ ಯುವಕಯೊಬ್ಬನು ಮುಂಬೈ ಮಹಾನಗರಿಯಲ್ಲಿ ಅನುಭವಿಸುವ ಪರಿಪಾಟಲಿನ ಅದ್ಭುತ ಕಥೆಯದು.ತಮ್ಮವರ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಳ್ಳಲು ನೀವು ಎಷ್ಟು ದೂರ ಸಾಗಬಲ್ಲಿರಿ?’ ಎಂದು ಕೇಳುತ್ತದೆ ಸಿಟಿ ಲೈಟ್ಸ್ ಸಿನೆಮಾದ ಟ್ಯಾಗ್ ಲೈನ್. ಹಾಗೆ ನೋಡಿದರೆ ಮಹಾನಗರಿಯು ಈ ಯಕ್ಷಪ್ರಶ್ನೆಯನ್ನು ಬಹುತೇಕ ಎಲ್ಲಾ ವಲಸಿಗರಿಗೂ ತನ್ನದೇ ಆದ ರೀತಿಯಲ್ಲಿ ಕೇಳುತ್ತಲೇ ಇರುತ್ತದೆ. ಹೀಗಾಗಿಯೇ ಇಲ್ಲಿ ವಿಪುಲ ಅವಕಾಶಗಳಿರುವಂತೆ ಸವಾಲುಗಳೂ ಹೆಚ್ಚು. ರಿಸ್ಕ್ ದೊಡ್ಡದಾದಷ್ಟು ಕೈಗೆಟುಕಬಹುದಾದ ಪ್ರತಿಫಲದ ಸಾಧ್ಯತೆಯ ಮಟ್ಟವೂ ಹೆಚ್ಚು.

ಅಂತೂ ಮಹಾನಗರಿಯಂತೆ ವಲಸಿಗನೂ ಇಲ್ಲಿ ನಿರಂತರ ಚಲಿಸುತ್ತಲೇ ಇರಬೇಕು. ಕೊನೆಯಿಲ್ಲದ ನಾಗಾಲೋಟವೇ ಇಲ್ಲಿಯ ಕರ‍್ಯವಿಧಾನ. ಕನಸುಗಳೇ ಇಲ್ಲಿ ಇಂಧನ. ಮಹಾನಗರಿಯು ನಡೆಯುವುದೇ ನನ್ನಿಂದ’ ಎಂದು ಅತ್ತ ವಲಸಿಗನೂ,ನನ್ನ ಇರುವಿಕೆಯಿಂದಷ್ಟೇ ವಲಸಿಗನಿಗೊಂದು ಅಸ್ತಿತ್ವ’ ಎಂದು ಇತ್ತ ಮಹಾನಗರಿಯೂ ತಮ್ಮತಮ್ಮಲ್ಲೇ ಬೀಗುತ್ತಲೂ ಇರಬೇಕು. ಕನಸುಗಳಿರುವಷ್ಟು ದಿನ ಈ ಕಸರತ್ತುಗಳು ನಡೆಯುತ್ತಲೇ ಇರುತ್ತವೆ. ನಡೆಯಲೂಬೇಕು. ಅದು ಜಗದ ನಿಯಮ.

ಏಕೆಂದರೆ ವಲಸಿಗನೆಂಬ ವಲಸೆಹಕ್ಕಿಯ ಕನಸುಗಳಿಗೂ ಕೊನೆಮೊದಲಿಲ್ಲ. ಆ ಪುಟ್ಟ ಹಕ್ಕಿಯ ಪುಟಾಣಿ ರೆಕ್ಕೆಗಳು ಆವರಿಸಬಲ್ಲ ಆಗಸಕ್ಕೂ ಕೊನೆಮೊದಲಿಲ್ಲ.

March 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: