ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೆ ಅವನೊಬ್ಬ ಗೂಡಚಾರನಂತೆ ಭಾಸವಾಗುತ್ತಿದ್ದಾನೆ..?

ವರ್ತಮಾನದ ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳು

– ಡಾ.ಎಸ್.ಬಿ.ಜೋಗುರ

ಧಾರವಾಡದ ಜನಸಾಹಿತ್ಯ ಸಮಾವೇಶದಲ್ಲಿ ಮಂಡಿಸಿದ ವಿಚಾರಗಳು

ಸದ್ಯದ ಸಂದರ್ಭದಲ್ಲಿ ಮನುಷ್ಯನೊಬ್ಬ ಅಪಾರ ಜನಜಂಗುಳಿಯ ನಡುವೆಯೂ ಅನಾಮಿಕನಾಗಿ ಬದುಕುವ ಸಾಂಸ್ಕೃತಿಕ ಸಂದಿಗ್ದವೇ ವರ್ತಮಾನದ ಬಹು ದೊಡ್ದ ತೊಡಕು. ನಮ್ಮ ಸಹವಾಸದಲ್ಲಿಯೇ ಇರುವ ವ್ಯಕ್ತಿಯೊಬ್ಬನನ್ನು ಅನಾಮತ್ತಾಗಿ ಇದ್ದ ಸ್ಥಿತಿಯಲ್ಲಿಯೇ ಗ್ರಹಿಸುವ, ಸ್ವೀಕರಿಸುವ ಕ್ರಿಯೆ ಒಂದು ಸಹಜ ಪ್ರಕ್ರಿಯೆಯಾಗಿ ಇಂದು ಸಾಧ್ಯವಾಗುತ್ತಿಲ್ಲ. ಮನುಷ್ಯನ ಮಾತು, ವರ್ತನೆ ತೀರಾ ಆತ್ಮೀಯವೆನಿಸುವ ಮರುಗಳಿಗೆಯಲ್ಲಿಯೇ ಯಾಕೆ ಅವನೊಬ್ಬ ಗೂಡಚಾರನಂತೆ ಭಾಸವಾಗುತ್ತಿದ್ದಾನೆ..? ಅವನಿರುವಂತೆ, ಯಥಾವತ್ತಾಗಿ ನನ್ನ ಎದೆಗೆ ಇಳಿಯುವಲ್ಲಿ ಅವನೇಕೆ ಸೋಲುತ್ತಿದ್ದಾನೆ..? ಇಲ್ಲವೇ ಅವನನ್ನು ಇದ್ದಕ್ಕಿದ್ದಂತೆ ಗ್ರಹಿಸಲಾಗದ ಹಾಗೆ ನಮ್ಮ ಮನ:ಸ್ಥಿತಿಯನ್ನು ಸಮಕಾಲೀನ ಸಾಂಸ್ಕೃತಿಕ ಪರಿಸರ ಪ್ರಕ್ಷುಬ್ದಗೊಳಿಸಿರುವದಿದೆಯೇ..? ಮನುಷ್ಯ-ಮನುಷ್ಯನನ್ನು ಗ್ರಹಿಸುವ ಗ್ರಹಿಕೆಯಲ್ಲಿಯೇ ಇಂದು ಅಪಾರವಾದ ತೊಡಕುಗಳಿರುವಾಗ ಆತ ನನ್ನೆದೆಗೆ ಇದ್ದಕ್ಕಿದ್ದಂತೆ ಇಳಿಯುವದಾದರೂ ಹೇಗೆ..? ನನ್ನನೇ ನಾನು ಸಂಶಯ ಪಡಬೇಕಾದ ದುದರ್ಿನಗಳ ನಡುವೆ, ಅಪಾರ ಮಾನವೀಯ ತುಡಿತಗಳ ಮೂಲಕ ಇತರರನ್ನು ಒಳಗೊಳ್ಳುವದಾದರೂ ಹೇಗೆ..? ತಾಂತ್ರಿಕತೆಯ ಸಹವಾಸದ ತೀವ್ರತೆಯ ಪರಿಣಾಮ ಮನುಷ್ಯ ಸಂಬಂಧಗಳು ಜಿಗಿಸಾಯುತ್ತಿರುವ ಹಂತವನ್ನು ತಲುಪಿರುವುದು ನಮ್ಮ ಮುಂದಿರುವ ವರ್ತಮಾನದ ಬಹು ದೊಡ್ಡ ಬಿಕ್ಕಟ್ಟು.
ವರ್ತಮಾನದ ಬಿಕ್ಕಟ್ಟಿನ ಬಗ್ಗೆ ಆಲೋಚಿಸುವ ಸಂದರ್ಭದಲ್ಲಿ ಅದರೊಳಗೆ ಅಂತರ್ಗತವಾಗಿ ಉಳಿದಿರುವ ಭೂತಕಾಲದ ಬಿಕ್ಕಟ್ಟಿನ ಕಸರನ್ನೂ ಮರೆಯುವ ಹಾಗಿಲ್ಲ. ವರ್ತಮಾನದ ಬಿಕ್ಕಟ್ಟು ಭೂತಕಾಲದ ಹೇಗಲೇರಿ ಸಾಗಿ ಬಂದದ್ದಂತೂ ಸುಳ್ಳಲ್ಲ. ಎಲ್ಲ ಕಾಲಗಳ ಬಿಕ್ಕಟ್ಟುಗಳು ಸಂಪೂರ್ಣವಾಗಿ ಬಯಲಾಗಿವೆ ಎಂದು ಖಂಡಿತವಾಗಿ ಹೇಳಲಾಗದು. ಸಾಪೇಕ್ಷವಾಗಿಯಾದರೂ ಆಯಾಕಾಲದ ಬಿಕ್ಕಟ್ಟುಗಳ ಹೊಳಹುಗಳು ಉಳಿದೇ ಇರುತ್ತವೆ. ಮಾಯದ ಗಾಯಗಳ ಹಾಗೆ ಮತ್ತೆ ಮತ್ತೆ ರಸಿಕೆಯಾಡುತ್ತ, ಉಲ್ಬಣಗೊಳ್ಳುತ್ತ ಹುಣ್ಣುಗಳಂತೆ ಪೀಡಿಸುತ್ತಿರುವ ಬಿಕ್ಕಟ್ಟುಗಳು ಹಲವಾರು. ಇಂಥಾ ಮಾಯದ ಗಾಯಗಳನ್ನು ಮತ್ತೆ ಮತ್ತೆ ಪರಚುವ, ಕೆಬರುವ ಆ ಮೂಲಕ ಅದರಲ್ಲೆ ಒಂಥರಾ ಖುಷಿ ಪಡುವ ಗುಣದವರ ನಡುವೆ, ಬಿಕ್ಕಟ್ಟು ಹೆಚ್ಚೆಂದರೆ ಬಯಲಾಗುತ್ತವೆ.. ಬೆಳೆಯುತ್ತವೆ, ಮುಖ ಬದಲಿಸುತ್ತವೆಯೇ ಹೊರತು ಕಣ್ಮರೆಯಾಗುವದಿಲ್ಲ. ಸಾಮಾಜಿಕ ಸಂಪರ್ಕ ಮತ್ತು ಊಟೋಪಚಾರದ ಮೇಲಿನ ನಿರ್ಬಂಧಗಳನ್ನು ಸಡಿಲುಗೊಳಿಸಿದ ಮೊದಲ ಘಟ್ಟ 12 ನೇ ಶತಮಾನದ ಶರಣ ಚಳುವಳಿ. ಅಲ್ಲಿಯ ವಚನಗಳನ್ನು ವಿಭಿನ್ನ ನೆಲೆಯಲ್ಲಿ ಗ್ರಹಿಸಿ ವಚನಗಳು ಜಾತಿವಿರೋಧಿ ಧೋರಣೆಯನ್ನು ಒಳಗೊಂಡಿರಲಿಲ್ಲ ಎನ್ನುವ ಮೂಲಕ ಚರ್ಚೆಯನ್ನು ಹುಟ್ಟುಹಾಕುವ ಸಂದರ್ಭದಲ್ಲಿ ಬಿಕ್ಕಟ್ಟುಗಳು ಖಂಡಿತ ಮಾಯದ ಗಾಯಗಳೇ.. ಒಬ್ಬ ವಯಸ್ಸಾದವನು ಟಿಪ್ಪುವನ್ನು ಕೊಂದದ್ದೇ ಒಳ್ಳೆಯದಾಯಿತು ಎನ್ನುತ್ತಾನೆ. ಇನ್ನೊಬ್ಬ ವಚನಗಳು ಜಾತಿವಿರೋಧಿಯಾಗಿರಲಿಲ್ಲ ಎನ್ನುತ್ತಾನೆ. ಇಂಥ ತುಕ್ಕು ಹಿಡಿದ ಮನ:ಸ್ಥಿತಿಯವರು ನಮ್ಮ ಯುವಜನತೆಯನ್ನು ಸಾಂಸ್ಕೃತಿಕ ಗೊಂದಲಗಳಲ್ಲಿ ಇಡುವ ಮೂಲಕ ಬಿಕ್ಕಟ್ಟುಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ಕಾಪಿಡುತ್ತಾರೆ.

ಸ್ಥಾಪಿತವಾದ ಆಲೋಚನಾ ಕ್ರಮಗಳನ್ನು ಪ್ರಶ್ನಿಸದಿದ್ದರೆ ಈ ಬಗೆಯ ಗೋಷ್ಟಿಗಳು ಬರೀ ಹೊಗೆ ಎಬ್ಬಿಸುತ್ತವೆಯೇ ಹೊರತು ಬೆಳಕಾಗುವದಿಲ್ಲ , ಬಿಕ್ಕಟ್ಟುಗಳೆಂಬ ಮಾಯದ ಗಾಯಗಳಿಗೆ ಮುಲಾಮು ಆಗುವದಿಲ್ಲ. ನಮ್ಮ ಸುತ್ತಮುತ್ತಲೂ ದಾವಂತ, ಬದಲಾವಣೆಯ ತೀವ್ರತೆಗಳೇ ತುಂಬಿವೆ. ಈ ತೀವ್ರತೆಯ ತುರುಸಿನ ನಡುವೆ ಸಣ್ಣ ಪುಟ್ಟ ಸಮುದಾಯಗಳ ಸಂಸ್ಕೃತಿ ಕೊಚ್ಚಿಹೋಗುವ ಅಪಾಯಗಳನ್ನು ಮರೆಯುವಂತಿಲ್ಲ. ಪ್ರವಾಹದ ಸಂದರ್ಭದಲ್ಲಿ ಫéಲವತ್ತಾದ ಮಣ್ಣು ಕೊಚ್ಚಿಹೋಗಿ ಬರೀ ಕಲರ್ ಮತ್ತು ಬಲರ್ಾದ ನೆಲ ಉಳಿಯುವಂತೆ, ಕೊನೆಗೂ ಸಾಮಾಜಿಕ ಅನಿಷ್ಟಗಳು ಗರಿಕೆಯ ಬೇರಿನಂತೆ ಗಟ್ಟಿಯಾಗಿ ಉಳಿಯುವ ಅಪಾಯಗಳನ್ನೂ ಅಲ್ಲಗಳೆಯಲಾಗದು.
ಇವತ್ತಿನ ಜೀವನ, ಬದುಕು ಸದಾ ಓಡುತ್ತಲೇ ಇರುವ ಒಂದು ಮೆರೆಥಾನ್ ಓಟದಂತೆ. ಪ್ರತಿಯೊಂದರಲ್ಲಿಯೂ ತೀಕ್ಷ್ಣವಾದ ಸ್ಪರ್ಧೆ. ಬಾಚಿ ಬಾಚಿ ಕೊಳ್ಳುವ, ಉಪಭೋಗಿಸುವ ಭರಾಟೆಯಲ್ಲಿ ಸಮರ್ಪಕವಾಗಿ ಜೀರ್ಣಿಸಿಕೊಳ್ಳುವ ಕ್ರಮವನ್ನೂ ನಾವು ಮರೆತಿದ್ದೇವೆ. ನಾವೆಲ್ಲರೂ ಇಂದು ಬದುಕಿದ್ದೇವೆ. ಹೇಗೆಂದು ಕೇಳಬೇಡಿ, ಯಾಕೆಂದರೆ ಬರೀ ಜೀವಂತವಾಗಿರುವದೇ ಬದುಕಲ್ಲ. ಕೋಮಾದಲ್ಲಿರುವಾತನೂ ಜೀವಂತವಾಗಿರುತ್ತಾನೆ. ನಮ್ಮ ನಮ್ಮ ಬದುಕಿನ ಕ್ರಮವನ್ನು ಅರ್ಥಪೂರ್ಣವಾಗಿ ಅನುಭವಿಸುವ ಸೃಜನಶೀಲಕ್ರಿಯೆಯಲ್ಲಿಯೇ ಜೀವನಮರ್ಮವಡಗಿದೆ. ಸದ್ಯದ ಸಾಮಾಜಿಕ ಬಿಕ್ಕಟ್ಟುಗಳು ಮನುಷ್ಯ ಸಂಬಂಧಗಳನ್ನೇ ನಾಶಗೊಳಿಸುತ್ತಿವೆ. ಹಾಗಾಗಿಯೇ ಆಲ್ಬರ್ಟ್ ಕಾಮು ಅವರು 1945 ರ ಸಂದರ್ಭದಲ್ಲಿಯೇ ‘ಪ್ರತಿಯೊಬ್ಬನೂ ಇಂದು ಸಾಗರವಾಗುವ ಬದಲಾಗಿ ನಡುಗಡ್ಡೆಯಾಗಿದ್ದಾನೆ.’ ಎಂದಿದ್ದರು. ಇಂದು ವ್ಯಕ್ತಿಯೊಬ್ಬನನ್ನು ನಾವು ಅವನು ಇದ್ದ ಸ್ಥಿತಿಯಲ್ಲಿಯೇ ಗುರುತಿಸುವದಾಗಲೀ.. ಗ್ರಹಿಸುವದಾಗಲೀ ಸಾಧ್ಯವಾಗದಿದ್ದುದಕ್ಕೆ ಸದ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರಗಳೇ ಕಾರಣ.
1963-ಅಗಸ್ಟ್ 28 ರಂದು ಮಾರ್ಟಿನ್ ಲೂಥರ್ ಕಿಂಗ್ ಅಮೇರಿಕೆಯ ಲಿಂಕನ್ ಮೆಮೋರಿಯಲ್ ಹಾಲ್ ಮೆಟ್ಟಿಲುಗಳ ಮೇಲೆ ನಿಂತು ‘ ನನ್ನದೊಂದು ಕನಸಿದೆ. ನನ್ನ ನಾಲ್ಕು ಮಕ್ಕಳನ್ನು ಅವರ ಬಣ್ಣದಿಂದ ಗುರಿತಿಸದೇ ಅವರ ಸಾಮಥ್ರ್ಯದಿಂದ ಗುರುತಿಸುವಂಥ ರಾಷ್ಟ್ರದಲ್ಲಿ ಅವರು ಬದುಕುವಂತಾಗಬೇಕು. ಆ ಕನಸು ನನಸಾಗಲಿಲ್ಲ. ಅಂಬೇಡ್ಕರ್ ಕನಸು ಲೂಥರ್ ಕಿಂಗ್ ಗಿಂತಾ ಭಿನ್ನವಾಗಿರಲಿಲ್ಲ. ಅವರು ‘ನನ್ನ ಜನ ಆಳುವ ವರ್ಗವಾಗುವದನ್ನು, ಇತರ ಸಮುದಾಯಗಳ ಜೊತೆ ರಾಜಕೀಯ ಅಧಿಕಾರ ಹಂಚಿಕೊಳ್ಳುವುದನ್ನು ನನ್ನ ಜೀವಮಾನದಲ್ಲೇ ನೋಡಬಯಸಿದ್ದೆ ಅದಾಗಲಿಲ್ಲ. ಪ್ರಜಾಪ್ರಭುತ್ವ ಸ್ವಾತಂತ್ರ್ಯಕ್ಕೆ ನೀಡಿದಷ್ಟು ಮಹತ್ವವನ್ನು ಸಮಾನತೆಗೆ ನೀಡಲಿಲ್ಲ. ಪರಿಣಾಮ ಸ್ವಾತಂತ್ರ್ಯವು ಸಮಾನತೆಯನ್ನು ನುಂಗಿ ಹಾಕಿತು.’ ಎಂದು ನೊಂದು ನುಡಿದಿರುವದಿದೆ. ಅಂಬೇಡ್ಕರ್ ಹೇಳುವಂತೆ ‘ಜಾತಿಪದ್ಧತಿಯನ್ನು ನಾಶ ಮಾಡಲು ಇರುವ ದೊಡ್ಡ ತೊಡಕೆಂದರೆ ಅದರ ಆತ್ಮವೇ ಆದ ಶ್ರೇಣೀಕೃತ ವ್ಯವಸ್ಥೆಯನ್ನು ತೆಗೆದುಹಾಕಲು ಸಾಧ್ಯವಾಗದಿರುವುದು ಹಾಗೂ ಒಗ್ಗಟ್ಟಾಗಿ ಏನನ್ನೂ ಯೋಚಿಸಲು, ಮಾಡಲು ಸಾಧ್ಯವಾಗದೇ ಇರುವುದು.

ಲಾಂಗಸ್ಟನ್ ಹಗ್ಸ್ ಎಂಬ ಆಫé್ರಿಕಾ ಮೂಲದ ಅಮೇರಿಕಾ ಲೇಖಕ 1940 ರ ಸಂದರ್ಭದಲ್ಲಿ ‘ದ ಬಿಗ್ ಸೀ’ ಎನ್ನುವ ತನ್ನ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾನೆ. ಅವನು ಅಮೇರಿಕಾದ ಜನಾಂಗೀಯ ಬೇಧಕ್ಕೆ ರೋಸಿ ಹೋಗಿ ನ್ಯೂ ಯಾರ್ಕ್ ಪಟ್ಟಣದಿಂದ ತನ್ನ ತಾಯ್ನಾಡು ಆಫ್ರಿಕಾಕ್ಕೆ ತೆರಳುವಾಗ ‘ಅಮೆರಿಕಾದ ಪುಸ್ತಕಗಳನ್ನೆಲ್ಲಾ ಸಮದ್ರಕ್ಕೆ ಎಸೆದೆ. ಅವುಗಳನ್ನು ನಾನು ಸಮುದ್ರಕ್ಕೆ ಎಸೆಯುವಾಗ ಮಿಲಿಯನಗಟ್ಟಲೆ ಇಟ್ಟಿಗೆಗಳನ್ನು ನನ್ನ ಹೃದಯದಿಂದ ಎತ್ತಿ ಒಗೆದಷ್ಟು ಹಗುರಾದೆ.’ ಎಂದಿರುವದಿದೆ. ಅಂದರೆ ಜಾತಿ ಜನಾಂಗಗಳಂಥ ವಿಷಯಗಳು ಸಾರ್ವಕಾಲಿಕ ಬಿಕ್ಕಟ್ಟುಗಳೇ ಹೌದು. ‘ಐಡೆಂಟಿಟಿ ಆಂಡ್ ವಾಯಲೆನ್ಸ್’ ಎನ್ನುವ ಗ್ರಂಥದಲ್ಲಿ ಅಮಾತ್ರ್ಯ ಸೇನ್ ಬಲಪಂಥೀಯರು ರಾಜಕೀಯ ಸತ್ತೆಯನ್ನು ಬಳಸಿಕೊಂಡು ಹೇಗೆ ಪ್ರಭುತ್ವದ ಭಾಗವಾಗಿ ಕೆಲಸ ಮಾಡುತ್ತಿದ್ದರು ಎನ್ನುವದನ್ನು ಒಂದು ಉದಾಹರಣೆಯ ಮೂಲಕ ತೋರಿಸಿರುವರು. ಇಟಲಿಯ ಫé್ಯಾಶಿಸ್ಟ್ ಒಬ್ಬ ಸೋಶಿಯಾಲಿಸ್ಟನನ್ನು ತನ್ನ ರಾಜಕೀಯ ಪಕ್ಷಕ್ಕೆ ಸೇರಲು ಕರೆ ನೀಡುತ್ತಾನೆ. ಆಗ ಆ ಸೋಶಿಯಾಲಿಸ್ಟ್ ‘ ನಮ್ಮ ತಾತ ಸೋಶಿಯಾಲಿಸ್ಟ್, ನಮ್ಮ ತಂದೆ ಸೋಶಿಯಾಲಿಸ್ಟ ಈಗ ನಾನು ಹೇಗೆ ಫ್ಯಾಸಿಸ್ಟ್ ಆಗಲಿ..? ಎನ್ನುವ ಪ್ರಶ್ನೆ ಇಡುತ್ತಾನೆ. ಆಗ ಆ ಫ್ಯಾಸಿಸ್ಟ್ ಅವನನ್ನು ಬಿಡುವದಿಲ್ಲ. ‘ನಿನ್ನ ತಾತ..ಕೊಲೆಗಾರ, ತಂದೆ ಕೊಲೆಗಾರನಾಗಿದ್ದರೆ..?’ ಎಂದಾಗ ಆ ಸೋಶಿಯಾಲಿಸ್ಟ್ ಮುಗಳ್ನಗುತ್ತಾ ‘ಆಗ ನಾನು ಖಂಡಿತ ಫ್ಯಾಸಿಸ್ಟ್ ಆಗುತ್ತಿದ್ದೆ’ ಎಂದನಂತೆ.
ಭಾರತದಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಂವಿಧಾನದ 15, 16, 17 ನೇ ಕಲಮುಗಳು ಸಮಾನತೆಯನ್ನು ಘಂಟಾಘೋಷವಾಗಿ ಪ್ರತಿಪಾದಿಸಿದರೂ ಅಮೂರ್ತವಾದ ಜಾತಿ ಪದ್ಧತಿ ನಮ್ಮ ಬದುಕಿನ ಎಲ್ಲ ಸಂಗತಿಗಳನ್ನು ನಿರ್ಣಯಿಸುವ ಮಟ್ಟಿಗಿನ ಶಕ್ತಿಯಾಗಿದ್ದದ್ದು ಭಾರತೀಯ ಸಮಾಜದ ಅದರಲ್ಲೂ ಜಾತಿಯಿಂದ ಅಪಾರ ನೋವನ್ನು ಅನುಭವಿಸುವ ಒಂದು ದೊಡ್ದ ಜನಸಮೂಹದ ದುರಂತವೇ ಸರಿ. ಈ ಜಾತಿ ವ್ಯವಸ್ಥೆ ಅತ್ಯಂತ ಗಡುಸಾಗಿದ್ದು, ಸಂಕೀರ್ಣವಾಗಿದ್ದು ಇದರ ಬೇರುಗಳು ನಮ್ಮ ವೈಚಾರಿಕ ವ್ಯಕ್ತಿತ್ವಗಳಿಗಿಂತಲೂ ಎಷ್ಟೋ ಆಳವಾಗಿರುವ ಕಾರಣ ಇದರ ಬಿಡುಗಡೆಯ ಹಾದಿ ದುರ್ಗಮವಾಗಿದೆ. ಕಷ್ಟವಾಗಿದೆ. ಇಂದು ಜಾತಿ ಪದ್ಧತಿ ಅನೇಕ ಬಗೆಯ ಸಡಿಲುಗಳನ್ನು ಕಂಡುಕೊಂಡಿದೆ ಎಂದು ಹೇಳುವಾಗ ಅದು ಕಾನೂನಿನ ತೊಡಕುಗಳ ಹಿನ್ನೆಲೆಯಲ್ಲಿ ಸಾಧ್ಯವಾದ ಬದಲಾವಣೆಯೇ ಹೊರತು ಜಾತಿಯ ಆಂತರಿಕ ವಲಯದಲ್ಲಿ ಆಗಿಲ್ಲ. ಅತೀ ಹೆಚ್ಚೆಂದರೆ ಕೂಡಿ ಊಟಮಾಡುವ, ಸಿನೇಮಾ ನೋಡುವ, ಚಹಾ ಕುಡಿಯುವ, ಪ್ರಯಾಣ ಮಾಡುವ ಸಾಧ್ಯತೆಗಳನ್ನೇ ನಾವು ಜಾತಿಯಲ್ಲಿಯ ಬದಲಾವಣೆಗಳೆಂದು ಗ್ರಹಿಸಿದ್ದೇಯಾದರೆ, ಜಾತಿ ಪದ್ಧತಿ ತನ್ನ ಆಚರಣೆ ಮತ್ತು ನಿರ್ಬಂಧಗಳ ವಿಷಯದಲ್ಲಿ ಇನ್ನಷ್ಟು ಗಟ್ಟಿಯಾಗುತ್ತದೆ. ಒಬ್ಬ ಅಪರಿಚಿತ ವ್ಯಕ್ತಿಯ ಪರಿಚಯವೇ ಜಾತಿ ವಾಸನೆಯನ್ನು ಹಿಡಿಯುವ ಮೂಲಕವೇ ಆರಂಭವಾಗುವ ಸಂದರ್ಭದ ನಡುವೆ ಜಾತಿ ಒಂದು ಸಾಂಸ್ಥಿಕ ಮೂಲದ ಬಿಕ್ಕಟ್ಟಾಗಿ ನಮ್ಮೆದುರಿದೆ
ಎಚ್.ಎಸ್.ಶಿವಪ್ರಕಾಶರು ಹೇಳುವಂತೆ ‘ಜಾತಿಮೂಲವಾದ ಶೋಷಣೆಗೂ ವಸಾಹತುವಾದಿ ಶೋಷಣೆಗೂ ಹಲವಾರು ಹೋಲಿಕೆಗಳಿವೆ. ಆಲ್ಬರ್ಟ್ ಮೆಮಿ ಎನ್ನುವ ಫé್ರೆಂಚ್ ಚಿಂತಕನನ್ನು ಅವರು ಉಲ್ಲೇಖಿಸಿ’ ವಸಾಹತುಶಾಹಿ ಸಂಬಂಧದಲ್ಲಿ ಶೋಷಿತರು ಮಾತ್ರವಲ್ಲ ಶೋಷಕರೂ ಒಂದು ವಿಷವರ್ತಿಲದಲ್ಲಿ ಸಿಲುಕಿರುತ್ತಾರೆ. ಎರಡೂ ಕಡೆಯವರು ಮುಕ್ತರಾಗದ ಹೊರತು ಯಾರೊಬ್ಬರೂ ಮುಕ್ತರಾಗುವದಿಲ್ಲ.’ ಎನ್ನುವದನ್ನು ಎತ್ತಿ ಹೇಳುತ್ತಾರೆ. ಇವತ್ತಿಗೂ ಕೆಳಸ್ತರಗಳು ಆರ್ಥಿಕವಾಗಿ ರಾಜಕೀಯವಾಗಿ ಮೇಲೇರುವ ಕ್ರಮವನ್ನು ಮತ್ತು ಅವುಗಳ ಅಂತಸ್ತುಗಳಲ್ಲಾಗುವ ಲಂಬ ರೂಪದ ಸಂಚಲನೆಯನ್ನು ಮೇಲಿನ ಜಾತಿಗಳು ಸಹಿಸುವದಿಲ್ಲ. ಸಂಸ್ಕೃತಾನುಕರಣ ಹೊಂದುವದೇ ತಮ್ಮ ಬದುಕಿನ ಭಾಗ್ಯ ಎಂದರಿತು ಮೇಲಿನ ಜಾತಿಗಳನ್ನು ಅನುಸರಣೆ ಮಾಡಿದ ಪರಿಣಾಮ ಸಂಸ್ಕೃತಾನುಕರಣದ ಸಂದರ್ಭದಲ್ಲಿ ಉಲ್ಲೇಖಿತ ಮಾದರಿಗಳಾಗಿ ಉಳಿದ ಮೇಲಿನ ಜಾತಿಗಳು ಇನ್ನಷ್ಟು ಗಟ್ಟಿಯಾಗಲು ಈ ಸಂಸ್ಕೃತಾನುಕಾರಣ ನೆರವಾಯಿತು. ಇಲ್ಲಿಯೂ ಮತ್ತದೆ ಸಮಾನಂತರ ಸಂಚಲನೆ ಮಾತ್ರ ಸಾಧ್ಯವಾಯಿತು.
ಭಾರತೀಯ ಸಮಾಜದಲ್ಲಿಯ ಜಾತಿ ಪದ್ಧತಿ ಎಲ್ಲ ಬಗೆಯ ಅಸಮಾನತೆಗಳನ್ನು, ಅನ್ಯಾಯಗಳನ್ನು ತನ್ನಲ್ಲಿ ಹುದುಗಿಸಿಕೊಂಡು ಆ ಮೂಲಕ ಏಣಿ ಶ್ರೇಣಿ ಮತ್ತು ಶ್ರೇಷ್ಟ-ಕನಿಷ್ಟ ಎನ್ನುವ ಭಾವನೆಗಳನ್ನು ಹರಡುತ್ತಲೇ ನಡೆದಿದೆ. ಕೆ.ಎನ್.ಪಣಿಕ್ಕರ್ ಎನ್ನುವ ಚಿಂತಕರು ಹೇಳುವಂತೆ ಭಾರತೀಯ ಸಮಾಜ ಮೂರು ಸಂಗತಿಗಳನ್ನು ಆಧರಿಸಿದೆ ಒಂದು ಅವಿಭಕ್ತ ಕುಟುಂಬ ಎರಡು ಇಲ್ಲಿಯ ಗ್ರಾಮಗಳು ಮೂರು ಈ ದೇಶದ ಏಕಮೇವ ಲಕ್ಷಣವಾಗಿರುವ ಜಾತಿ ಪದ್ಧತಿ. ಹುಟ್ಟಿನೊಂದಿಗೆ ಬರುವ ಈ ಅಮೂರ್ತವಾದ ಜಾತಿಪದ್ಧತಿ ವ್ಯಕ್ತಿಯ ಅಸ್ಥಿತ್ವವನ್ನೇ ನಗಣ್ಯ ಎನಿಸುವಂತೆ ತನ್ನ ಸಾಂಪ್ರದಾಯಿಕ ಆಚರಣೆಗಳ ಮೂಲಕ ಅವನ ಬದುಕನ್ನು ನಿರ್ಬಂಧಿಸುವ ಕೆಲಸವನ್ನು ಮಾಡುತ್ತದೆ. ಇದೊಂಥರಾ ಅರಾಜಕತೆಯೇ ಹೌದು. ವೋಲೆ ಷೊಯಂಕಾ ಹೇಳುವ ಹಾಗೆ ‘ ನೈತಿಕ ಪರಮಾದರ್ಶಗಳಿಲ್ಲದ ಯಾವುದೇ ಸಮಾಜ ಅರಾಜಕತೆ ಮತ್ತು ಸವರ್ಾಧಿಕಾರಿ ಸಮಾಜಗಳಾಗುತ್ತವೆ’ ಎಂದಿರುವರು.
ಇಂದು ಪ್ರತಿಯೊಂದು ಜಾತಿಯು ತನ್ನದೇಯಾದ ಸಂಘಟನೆ, ಮಠ, ಶಕ್ತಿ ಪ್ರದರ್ಶನಗಳ ಮೂಲಕ ಒಂದು ಪ್ರತ್ಯೇಕ ಪುಟ್ಟ ಪ್ರಪಂಚವಾಗಿ ಕಾಣುವ ಜೊತೆಗೆ, ರಾಷ್ಟ್ರೀಯ ಐಕ್ಯತೆಗೆ ಗಂಡಾಂತರವಾಗಿ ಪರಿಣಮಿಸಿರುವದು ಇನ್ನೊಂದು ದೊಡ್ಡ ಬಿಕ್ಕಟ್ಟು. ಅಷ್ಟು ಮಾತ್ರ ಅಲ್ಲದೇ ಪ್ರತಿಯೊಂದು ಜಾತಿಯು ತನ್ನದೇಯಾದ ಸಾಂಸ್ಕೃತಿಕ ಶ್ರೇಷ್ಟತೆಯನ್ನು ಮೆರೆಯುವ ಮೂಲಕ ಪರಸ್ಪರ ಗೌರವಿಸುವ ಗುಣ ಗೌಣವಾಗಿ ದ್ವೇಷದ ಭಾವನೆಯ ಹುತ್ತ ಕಟ್ಟುವುದು ಇನ್ನೊಂದು ಅಪಾಯ. ಇಂದಿಗೂ ಇಂಡಿಯಾದ ಜನಸಮೂಹವನ್ನು ಬಹುತೇಕವಾಗಿ ಧರ್ಮ ಮತ್ತು ಭಾಷೆಯ ಆಧಾರದ ಮೇಲೆಯೇ ಗ್ರಹಿಸಲಾಗಿದೆ. ವಿದೇಶಿಯರಿಗೆ ಇಂಡಿಯಾ ಎನ್ನುವುದು ಹಿಂದು ಮುಸ್ಲಿಂರ ನಡುವಿನ ಸಂಘರ್ಷ ಮಾತ್ರ. ಅವರಿಗೆ ಇಲ್ಲಿರುವ ಇತರೆ ಧರ್ಮಗಳ ಬಗ್ಗೆ ಅವರಿಗೆ ತಿಳುವಳಿಕೆಯಿಲ್ಲ. ಇನ್ನು ಈ ದೇಶವಾಸಿಗಳಿಗೂ ನಮ್ಮ ಸಾಮಾಜಿಕ ವ್ಯವಸ್ಥೆಯ ಸೂಕ್ಷ್ಮಾತಿಸೂಕ್ಷ್ಮಗಳು ತಿಳಿದಿಲ್ಲ. ಕೈಕೊಟ್ಟು ಹಗ್ಗ ಕಟ್ಟಿಸಿಕೊಂಡ ಇವರುಗಳು ಅದರಲ್ಲೇ ಸಾರ್ಥಕತೆ ಕಾಣುವ ಮನ:ಸ್ಥಿಯನ್ನು ರೂಢಿಸಿಕೊಂಡವರು. ಒಂದು ಸಲ ಜಾತಿ ವ್ಯವಸ್ಥೆಗೆ ದೈವೀಬಲ ಇದೆ ಎಂದು ಬಿಂಬಿಸಿದರೆ ಸಾಕು ಆಗ ಮೇಲಿನ ಜಾತಿಗಳ ತಾತ್ವಿಕತೆಗೆ ಮತ್ತಷ್ಟು ಬಲ ಸಿಗುತ್ತದೆ. ಚರಿತ್ರೆಯುದ್ದಕ್ಕೂ ಹೀಗೆ ಜಾತಿಯನ್ನು ದೈವೀಕರಿಸುವ ಪ್ರಕ್ರಮ ಅತ್ಯಂತ ಅಚ್ಚುಕಟ್ಟಾಗಿ ಅನೂಚಾನವಾಗಿ ನಡುದುಕೊಂಡು ಬಂದದ್ದು ದೊಡ್ಡ ವಿಪಯರ್ಾಸವೇ ಹೌದು.
ಕೊನೆಯದಾಗಿ ಒಂದು ಮಾತು. ಸದ್ಯದ ಸಾಹಿತ್ಯಕ ಪರಿಸರ ಬಿಕ್ಕಟ್ಟಿನ ಭಾಗವಾಗಿಯೇ ಇದೆ. ಇಂದು ಸಾಹಿತಿಗಳು ಅತ್ಯಂತ ತೀಕ್ಷ್ಣವಾದ ಚದುರಂಗದಾಟದಲ್ಲಿ ತಮ್ಮ ಬೌದ್ಧ್ಹಿಕತೆಯನ್ನು ಪಣಕ್ಕೊಡ್ಡುವದಿದೆ. ಅವರಾಗ ಆತ್ಯಂತಿಂಕವಾದ ರಾಜಕೀಯ ಪರಿಸರವೊಂದರ ಭಾಗವಾಗಿ ಬಿಂಬಿತವಾಗುತ್ತಾರೆ. ಇದು ನನಗೆ ಸಾಮಾಜಿಕ ಸಾಂಸ್ಕೃತಿಕ ಬಿಕ್ಕಟ್ಟಿನ ಮುಂದುವರೆದ ಭಾಗವಾಗಿಯೇ ತೋರುವದಿದೆ.

‍ಲೇಖಕರು avadhi

2 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading