
ವಿಮರ್ಶೆ ಹಾಗೂ ಚಿತ್ರಗಳು: ಕಿರಣ ಭಟ್
“ಅಲ್ಲಿ, ಅಂಥ ಸಗ್ಗದ ಜಗಕೆ
ನಿದ್ದೆ ಕಳೆದೆದ್ದ ನನ್ನ ಜನರನ್ನು
ಕೈಹಿಡಿದು ನಡೆಸು”
ನಾಟಕದ ಪ್ರಾರಂಭ.
ಕೇಸರಿ ಬಾರ್ಡರಿನ ಹಸಿರು ಸೀರೆಯುಟ್ಟ ಬಿಳಿಯ ಶಾಲು ಹೊದ್ದ ತಾಯಿಯೊಬ್ಬಳು ರಂಗದ ಮುಂಭಾಗದಲ್ಲಿ ನಿಂತಿದ್ದಾಳೆ. ಮುಖ ಕಳೆಗುಂದಿದೆ. ತನ್ನ ಸುತ್ತ ನಡೆದಿರೋ ಹಿಂಸೆಯಿಂದ ಆಘಾತಗೊಂಡಿದ್ದಾಳೆ. ನೊಂದು ಮುದುಡಿಹೋದ ಆಕೆಯಿಂದ ನೋವು ತುಂಬಿದ ಮಾತುಗಳು.
ಆಗ ರಂಗವನ್ನು ಪ್ರವೇಶಿಸುವ ಗುಂಪು ಮೇಲಿನ ಸಾಲುಗಳನ್ನ ಹೇಳುತ್ತದೆ.
ಹೀಗೆ ಟಾಗೋರರ ಕವನದ ಸಾಲುಗಳಿಂದ ಪ್ರಾರಂಭವಾಗೋ ‘ ಲೋಕದ ಒಳ ಹೊರಗೆ’ ನಾಟ್ಕ ಮುಂದೆ ನೂರು ನಿಮಿಷಗಳ ಕಾಲ ನಮ್ಮನ್ನು ವಿಭಜನೆಯ ಕಾಲದ ಬಂಗಾಳದ ನೆಲಕ್ಕೆ ಕರಕೊಂಡು ಹೋಗಿ ಬಿಟ್ಟುಬಿಡ್ತದೆ.
ಆ ಕಾಲದ ಸ್ವದೇಶೀ ಚಳುವಳಿಯಲ್ಲಿ ಸ್ವತ: ಭಾಗವಹಿಸಿದ ಟ್ಯಾಗೋರರು ರಚಿಸಿದ ‘ ಘರೇ ಬೈರೇ ‘ ಕಾದಂಬರಿಯ ರಂಗರೂಪ ಈ ನಾಟ್ಕ. ಬಹುಚರ್ಚಿತ ಈ ಕಾದಂಬರಿಯನ್ನ ಸತ್ಯಜಿತ್ ರೇ ಸಿನಿಮಾವನ್ನಾಗಿಸಿದ್ರು. ಇಂಥ ಶ್ರೇಷ್ಠ ಕೃತಿಯನ್ನು ಬಿ. ಸುರೇಶ್ ರಂಗರೂಪಕ್ಕಿಳಿಸಿ ರಂಗಕ್ಕೆ ತಂದಿದ್ದಾರೆ.
‘ರಂಗಸಂಪದ’ ತಂಡದ ಐವತ್ತನೇ ವರ್ಷದ ಪ್ರಯೋಗ ಇದು.

ನಾಟಕದ ನಾಯಕ ಸಿದ್ಧಾರ್ಥ್ ವಿದೇಶೀ ಶಿಕ್ಷಣ ಪಡೆದವನು. ಹೊಸ ವಿಚಾರಗಳನ್ನ ತಲೇಲಿ ತುಂಬ್ಕೊಂಡವನು. ಆತನ ಹೆಂಡತಿ ಶಾರದೆ ಮನೆಯಾಚೆಗೇ ಬರದವಳು. ಅದೇ ಆಕೆಯ ಜಗತ್ತು. ಆದರೆ ಆಕೆ ಹೊರ ಜಗತ್ತನ್ನೂ ಕಾಣಲಿ ಎನ್ನೋದು ಸಿದ್ಧಾರ್ಥ್ ನ ಆಸೆ. ಈ ಮಧ್ಯೆ ಸಿದ್ಧಾರ್ಥ್ ನ ಗೆಳೆಯ ಇಂದ್ರಜಿತ್ ನ ಪ್ರವೇಶವಾಗ್ತದೆ. ಮಾತಿನ ಮಲ್ಲ ಇಂದ್ರಜಿತ್ ಹೋರಾಟಗಾರ. ಆತ ಸಿದ್ಧಾರ್ಥ್ ನ ಮನೆಗೆ ಪ್ರವೇಶ ಪಡೀತಾನೆ. ಶಾರದೆಯನ್ನ ಮಾತುಗಳಿಂದಲೇ ಮರುಳು ಮಾಡ್ತಾನೆ. ಶಾರದೆಗೆ ಹೊರ ಜಗತ್ತನ್ನ ಕಾಣಿಸ್ತಾನೆ. ಚಳುವಳಿ ಅದೂ ಇದೂ ಅಂತ ಮನೆಯ ಒಳಹೊರಗೆ ಆತನ ಓಡಾಟ ಜೋರಾಗ್ತದೆ. ಸಿದ್ಧಾರ್ಥ್ ನ ಕೌಟುಂಬಿಕ ಜೀವನ ವಿಚಿತ್ರ ತಿರುವುಗಳನ್ನು ಪಡೆದುಕೊಳ್ತಾ, ಸ್ವದೇಶೀ ಚಳುವಳಿಯ ಒಳಸುಳಿಗಳಾಟಕ್ಕೆ ಭೂಮಿಕೆಯಾಗ್ತದೆ. ಹೀಗೆ.….
ಕ್ರಮೇಣ ಸ್ವದೇಶೀ ಚಳುವಳಿಯ ಮಖದ ಹಿಂದಿನ ರಾಷ್ಟ್ರೀಯವಾದದ ಬಣ್ಣಗಳು ಬಯಲಾಗ್ತಾಹೋಗ್ತವೆ. ಸ್ವದೇಶೀ ಚಳುವಳಿಗೆ ಸಹಾಯ ಮಾಡೋ ಸಿದ್ದಾರ್ಥ ಚಳುವಳಿಯ ನೆಪದಲ್ಲಿ ವಿದೇಶೀ ವಸ್ತುಗಳನ್ನು ಸುಡೋದನ್ನ ಮತ್ತು ಊರಿನ ಬಡ ವ್ಯಾಪಾರಿಗಳನ್ನ ಸಂಕಷ್ಟಕ್ಕೀಡುಮಾಡುತ್ತಿರೋದನ್ನ ನೋಡಿ ಮರುಗ್ತಾನೆ . ಆದರೆ ಈ ದೊಂಬಿಯೊಳಗೆ ಅಸಹಾಯಕನಾಗ್ತಾನೆ.
ಆತ ನಂಬಿಕೊಂಡ ರಾಷ್ಟ್ರೀಯವಾದದ ವ್ಯಾಖ್ಯೆಯೇ ಬೇರೆ. ಸ್ವದೇಶೀ ಚಳುವಳಿಯ ಕುರಿತ ಆತನ ಚಿಂತನೆಗಳೇ ಬೇರೆ. ಸ್ವದೇಶೀ ಚಳುವಳಿಯ ಹೆಳೆಯಲ್ಲಿ ಊರನ್ನೂ, ನಂತರ ಸಿದ್ದಾರ್ಥ ನ ಮನೆಯನ್ನೂ ಹೊಕ್ಕು ಎಲ್ಲರ ನೆಮ್ಮದಿಯನ್ನೂ ನುಚ್ಚು ನೂರು ಮಾಡಿದ ಇಂದ್ರಜಿತ್ ನ ವ್ಯಾಖ್ಯಾನವೇ ಬೇರೆ. ಅದು ಅಮಾನವೀಯತೆಯ ನೆಲೆಯ ಮೇಲೆ ನಿಂತಿದ್ದು.
ಸುಳ್ಳುಗಳ ನೆಲೆಗಟ್ಟಿನ ಮೇಲೆ ಕಟ್ಟಿದ್ದು. ಸುಡು ಸುಡುವ ಬೆಂಕಿ ಅದು. ಅದಕೆ ಕರುಣೆಯಿಲ್ಲ. ಶಾಲೆಯ ಮಕ್ಕಳ ಮಿದುಳಲ್ಲೂ ವಿಷ ತುಂಬಿ ಬೀದಿಗೆ ತಂದು ಬಿಡುವಂಥದ್ದು. ಬದುಕ ಸುಡುವಂಥದ್ದು

ಸುರೇಶ್ ರ ನಾಟಕದಲ್ಲಿ ಈ ಪಾತ್ರದ ಶೇಡ್ ತುಸು ಹೆಚ್ಚೇ ಗ್ರೇ. ಹಾಗೆಯೇ ಈ ಪಾತ್ರಕ್ಕೆ ಸ್ವಲ್ಪ ಹೆಚ್ಚು ಒತ್ತು ಕೂಡ. ಆ ಮೂಲಕವೇ ನಾಟ್ಕವನ್ನು ಸಮಕಾಲೀನಗೊಳಿಸುತ್ತ ಸಾಗ್ತಾರೆ ಸುರೇಶ್.
ಆಗಾಗ್ಗೆ ಬೇರೆ ಬೇರೆ ಕಾರಣಗಳಿಗಾಗಿ ‘ ಭಾರತ ಮಾತೆ’ ಯ ಉದ್ಘೋಷ ಮಾಡುವ ಈ ಪಾತ್ರ ಒಂದು ಹಂತದಲ್ಲಿ “ಇಡೀ ದೇಶ ನನ್ನ ಮುಷ್ಟಿಯಲ್ಲಿರಬೇಕೆಂಬ ಆಸೆ ನನಗೆ” ಎನ್ನುತ್ತದೆ. ‘ ಜಗದ ಬೀಜ ಬೆಂಕಿ’ ಎನ್ನುತ್ತಲೇ ತನ್ನ ಉದ್ದೇಶ ಸಾಧನೆಗೆ ಇಂದ್ರಜಿತ್ ಆಯ್ದುಕೊಂಡಿರೋದು ಕೆಂಡದ ಹಾದಿ. ಹಾದಿಯಲ್ಲಿ ಇದಿರಾದವರನ್ನೆಲ್ಲ ಸುಟ್ಟು ಬೂದಿ ಮಾಡುವ ಕರುಣೆಯಿಲ್ಲದ ಹಾದಿ ಹಾಗಾಗಿಯೇ ಒಂದು ಕಡೆ ಸಿದ್ಧಾರ್ಥ್ ಹೇಳುತ್ತಾನೆ ” ಎರಡು ಉತ್ಕಟ ಭಕ್ತಿಗಳು ಎದುರಾದಾಗ ಆಗೋದೊಂದೇ. ಅದೇ…ಹಿಂಸೆ”.
ಹೀಗೆ ರಾಷ್ಟ್ರೀಯತೆಯ ವಿಭಿನ್ನ ವಿಚಾರಗಳಿಗೆ ಮುಖಾಮುಖಿಯಾಗುವ ಈ ನಾಟ್ಕ ಇಂದ್ರಜಿತ್ ನಂಥವರ ಮುಖವಾಡಗಳನ್ನು ಕಳಚುತ್ತ ಅವರನ್ನು ಬೆತ್ತಲಾಗಿಸ್ತಾ ಸಾಗುತ್ತದೆ.
ಇಡಿಯ ರಂಗಪ್ರಯೋಗದ ಶಕ್ತಿ ಇರೋದೇ ನಾಟಕದ ಸಾಹಿತ್ಯದ ಭಾಗದಲ್ಲಿ. ಬಹು ಮಹತ್ವದ ಕಾದಂಬರಿಯನ್ನೆತ್ಕೊಂಡು ಸಶಕ್ತವಾದ ಅನುವಾದದೊಂದಿಗೆ ರಂಗರೂಪ ನೀಡಿದಾರೆ ಸುರೇಶ್. ಮಾತೇ ಇಲ್ಲಿ ಮುನ್ನೆಲೆಯಲ್ಲಿದೆ. ಸಂಭಾಷಣೆಗಳ ತೀವ್ರತೆ ರಂಗಪ್ರಯೋಗವನ್ನು ಇನ್ನಷ್ಟು ತೀಕ್ಷ್ಣವಾಗಿಸಿದೆ . ಸನಕಾಲೀನಗೊಳಿಸಿದೆ ಕೂಡ.

ಇಂಥ ಮಾತುಗಳನ್ನ ತುಂಬ ಪ್ರಭಾವಶಾಲಿಯಾಗಿ ಪಾತ್ರಧಾರಿಗಳು ದಾಟಿಸ್ತಾರೆ. ಅಭಿನಯವೂ ಉನ್ನತ ಮಟ್ಟದ್ದೇ. ತುಂಬ ಆಕರ್ಷಕವಾದ, ಅಷ್ಟೇ ನಿಖರವಾದ ವಿವರವಾದ ಸೆಟ್ ಗಳಿವೆ. ಮತ್ತು ಅವುಗಳ ಬಳಕೆಯೂ ಕೂಡ ಅಷ್ಟೇ ಚೆನ್ನಾಗಿದೆ. ಅಲ್ಲಲ್ಲಿ ಚಂದದ ಚೌಕಟ್ಟುಗಳಲ್ಲಿ ಶಾರದೆಯನ್ನ ಹಿಡಿದಿಡುವ ಆ ಮೂಲಕ ಸೂಚ್ಯವಾಗಿ ಹವೇಲಿಯಲ್ಲಿನ ಚೌಕಟ್ಟಿನೊಳಗಿನ ಅವಳ ಬದುಕನ್ನ ಸಾಂಕೇತಿಸುವ ಪರಿ ಚಂದ. ಸೀಮಿತ ರಂಗ ಚಲನೆಗಳ ವಾಸ್ತವವಾದೀ ಪ್ರಯೋಗದಲ್ಲಿ ಅಲ್ಲಲ್ಲಿ ಸಾಂಕೇತಿಕ ಕ್ರಿಯೆಗಳ ಸೆಳಕುಗಳಿವೆ. ಶಾರದೆಯನ್ನು ಸಿದ್ಧಾರ್ಥ ಬಿಡುಗಡೆಗೊಳಿಸುವಾಗ, ಆಕೆಯ ತಲೆಯ ಮೇಲೆನ ಸೆರಗನ್ನ ಎತ್ತಿ ಆಚೆಯಿಡುತ್ತ ಆಕೆಯ ಬಿಡುಗಡೆಯ ಮಾತುಗಳನಾನಾಡೋದು ಇಂಥವುಗಳಲ್ಲೊಂದು. ನಾಟ್ಕದಲ್ಲಿ ಆಗಾಗ ರೂಪಕವಾಗಿ ಬರೋ ಬೆಂಕಿ, ಗಾಳಿ, ರಂಗದಲ್ಲಿ ಕೆಂಪು ಬೆಳಕು, ಪಟಗುಡುವ ಜ್ವಾಲೆಯಂಥ ಪತಾಕೆಗಳ ಧ್ವನಿಗಳೊಂದಿಗೆ ಬಿಸಿ ಮುಟ್ಟಿಸ್ತವೆ. ವಸ್ತ್ರವಿನ್ಯಾಸವೂ ನಿಖರವಾಗಿದೆ.
ಸಂಗೀತ ಹಿತವಾಗಿದೆ. ಆದ್ರೂ ವಾದ್ಯಗಳ ಶಬ್ದ ಜೋರಾಯ್ತೇನೋ ಎನಿಸ್ತದೆ. ಕೆಲವು ಬಾರಿ ಹಾಡಿನ ಸಾಲುಗಳನ್ನೂ ವಾದ್ಯಗಳು ನುಂಗಿಬಿಡ್ತವೆ.
ಇನ್ನೇನು, ನಾಟಕದ ಮುಗೀಲಿಕ್ಕಿದೆ. ಇಂದ್ರಜಿತ್ ಹಬ್ಬಿಸಿದ ದ್ವೇಷದ ಬೆಂಕಿಯಲ್ಲಿ ಊರಿಗೆ ಊರೇ ಸುಟ್ಟುಹೋಗಿದೆ. ಆತನನ್ನ ಊರಿಂದಾಚೆ ಓಡಿಸಿಯಾಗಿದೆ. ಆದರೆ ಅವನೇನೂ ಆಟ ನಿಲ್ಲಿಸಿಲ್ಲ. ಪಕ್ಕದೂರಿನಲ್ಲಿ ಅದೇ ಆಟ ಶುರು ಮಾಡಿದ್ದಾನೆ. ಅಲ್ಲಿಯೂ ಬೆಂಕಿ ಧಗಧಗ ಉರೀತಿದೆ..
ಅರೆ, ನಮ್ಮಲ್ಲೇ ಇದೆಲ್ಲ ಇತ್ತೀಚೆಗೆ ನಡೆದ ಸಂಗತಿಯಲ್ವಾ ಎನಿಸ್ತಿದೆಯಾ?
ಹಾಗೆ ಅನಿಸಿದ್ರೆ ನಾಟಕ ಸಾರ್ಥಕ.

‘ರಂಗಸಂಪದ’ ದ ನಾಟಕ: ಲೋಕದ ಒಳ ಹೊರಗೆ
ಮೂಲ: ರವೀಂದ್ರನಾಥ್ ಟಾಗೋರ್ ರ್ ಕಾದಂಬರಿ ‘ ಘರೇ ಬೈರೇ’
ವಿನ್ಯಾಸ/ ರಂಗರೂಪ/ ನಿರ್ದೇಶನ: ಬಿ.ಸುರೇಶ್.
ಸಂಗೀತ: ಅನುಷ್ ಶೆಟ್ಟಿ ಮತ್ತು ಮುನ್ನ
ಪ್ರಸಾಧನ: ರಾಮಕೃಷ್ಣ ಎನ್. ಕೆ.
ರಂಗಪರಿಕರ: ವಿಠ್ಠಲ್ ಅಪ್ಪಯ್ಯ
ರಂಗ ನಿರ್ವಹಣೆ: ಶಿವಲಿಂಗಪ್ರಸಾದ್
ವಸ್ತ್ರ ವಿನ್ಯಾಸ: ರಾಮಕೃಷ್ಣ ಬೆಳ್ತೂರ್
ಬೆಳಕು ವಿನ್ಯಾಸ, ಸಹಾಯ ನಿರ್ದೇಶನ: ಅಕ್ಷರ ವೇಣುಗೋಪಾಲ್
ನಿರ್ವಹಣೆ: ಚಡ್ಡಿ ನಾಗೇಶ್



0 ಪ್ರತಿಕ್ರಿಯೆಗಳು