ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಬಂಗಾಳದ ಅಂಗಳದಲ್ಲಿ ಭಾಗ 6: ಡಾರ್ಜಿಲಿಂಗ್ ಎಂಬ ಡಾರ್ಲಿಂಗ್..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

18. 6

ಇಂಡಿಯಾದ Queen of Hills’ ಆದ ಡಾರ್ಜಿಲಿಂಗ್ ಹೆಸರು ಕಿವಿದೆರೆಗೆ ತಾಗಿದರೆ ಸಾಕು ರೋಮಾಂಚನಗೊಳ್ಳುವ ಪ್ರಾಯ ಕಳೆದ ಮೇಲೆ ಹಕ್ಕಿ ಹಿಂದೆ ಅಲೆಯುತ್ತಿದ್ದೇನೆ. ದಂತವೈದ್ಯನಾದ, ಒಂದು ದಿನವೂ ತನ್ನ ಕ್ಲಿನಿಕ್ ಮುಚ್ಚದಿದ್ದ ಪತಿಪರಮೇಶ್ವರ ಡಾರ್ಜಿಲಿಂಗ್ ಹೆಸರೇ ಕೇಳಿದ್ದು ಡೌಟು ಎಂದ ಮೇಲೆ ಇನ್ನು ಡಾರ್ಜಿಲಿಂಗಿಗೆ ಕರೆದೊಯ್ಯುತಾನೆಂಬ ಕನಸು ಕಾಣಲೂ ಸಾಧ್ಯವಿರಲಿಲ್ಲ.  ನಾನೇ ಮೇಡಂ ಆಗಿದ್ದಾಗ ಮಗಳೊಡನೆ ಕಾಲೇಜಿನಿಂದ ಉತ್ತರ ಭಾರತದ ಟೂರ್ ಮಾಡಿದ್ದರೂ ಕಾಶಿ ದಾಟಿ ಅತ್ತ ಹೋಗಿರಲಿಲ್ಲ. ಇನ್ನು ಸ್ವೀಟ್ ಸಿಕ್ಸ್ಟಿ ದಾಟಿದ ಮೇಲೆ ಹಕ್ಕಿ ಅಮಲೇರಿ ಸಿಕ್ಕಿಸಿಕ್ಕಿದ ಕಡೆಗೆ ಸಿಕ್ಕಿಕೊಂಡರೂ ಡಾರ್ಜಿಲಿಂಗಿನತ್ತ ಸುಳಿಯಲಾಗಲಿಲ್ಲ.

ಆಗಲಿಲ್ಲ ಎಂದಲ್ಲ. 2019ರ ಫೆಬ್ರವರಿಯಲ್ಲೊಮ್ಮೆ ಮಾರ್ಚಿನಲ್ಲೊಮ್ಮೆ ಒಟ್ಟು ಎರಡು ಸಲ ಸಿಂಗಲೀಲಾ ನ್ಯಾಷನಲ್ ಪಾರ್ಕಿಗೆ ಹೋದಾಗ ಡಾರ್ಜಿಲಿಂಗಿಗೆ ತೀರಾ ಸನಿಹದ ಗೂಮ್ ಬಳಿ ಹೋದಾಗೆಲ್ಲ… ರೂಟ್ ಬದಲಿಸಿ ಹೀಗೆ ಹೋದರೆ ಎಂದು ಆಸೆಗಣ್ಣಿನಿಂದ ನೋಡಿದ್ದೆ, ಆದರೆ ಹೋಗಲಿಲ್ಲ. ಸಂದೀಪ್ ಜೊತೆ ಟೂರ್ ಆಯೋಜಿಸಿದಾಗ ಹೋಗಲು ಸಾಧ್ಯವೆ ಎಂದು ಯೋಚಿಸಿ ಯೋಜಿಸಲಾಗದೆ ಕೈಬಿಟ್ಟೆ. ಮೂರನೆಯ ಸಲ ಬಂದಾಗಲೂ ಹತ್ತಿರದ ಕುರೇಸಾಂಗ್ ತನಕ ಹೋಗಿಬಂದೆನೆ ವಿನಾ ಡಾರ್ಜಿಲಿಂಗ್ ಕಡೆಗೆ ಹೋಗಲಿಲ್ಲ. ಡಾರ್ಜಿಲಿಂಗ್ ವುಡ್ ಪೆಕರ್ ಹಿಡಿಯಲಿಲ್ಲ. ಬಂಗಾಳದ ಪ್ರತಿ ಪ್ರವಾಸದಲ್ಲೂ ಹಾದಿಯುದ್ದಕ್ಕೂ ಟಾಯ್ ಟ್ರೈನಿನ ಕಂಬಿ ನೋಡಿ, ಟ್ರೈನ್ ನೋಡಿ ಫೋಟೊ ತೆಗೆದು, ವಿಡಿಯೋ ಮಾಡಿಕೊಂಡು ಬರುತ್ತಿದ್ದೆ ಅಷ್ಟೆ. ಒಮ್ಮೆಯಾದರೂ ಅದರಲ್ಲಿ ಕೂರುವ ಕನಸು ಕೈಗೂಡಿರಲಿಲ್ಲ 2023ರ ಮಾರ್ಚಿಯ ತನಕ.

2023ರಲ್ಲಿ ವಾಗ್ದಾನ ಪೂರೈಸಲು ನಿರ್ಧರಿಸಿದ್ದೆ. ಮೊಮ್ಮಗಳ ಮೊದಲ ವರ್ಷದ ಮೆಡಿಕಲ್ ಪರೀಕ್ಷೆ ಮುಗಿಸಿದಾಗ ಅಂಡಮಾನಿಗೆ ಕರೆದುಕೊಂಡು ಹೋಗುವ ಪ್ರಾಮಿಸ್ ಮಾಡಿದ್ದೆ. 2020ರ ಮಾರ್ಚಿಗೆ ಕೊರೊನಾದಿಂದ ಆಲೋಚನೆ ಕೈಬಿಟ್ಟೆ. ಅದರ ಮುಂದಿನ ವರ್ಷದ ಪರೀಕ್ಷೆ ಮುಗಿದಾಗ ನನ್ನ ಗಂಡ  ಲೋಕದ ಸಹವಾಸ ಬಿಟ್ಟು ಹೊರಟದ್ದರಿಂದ ನಾನೂ ಹೋಗುವ ಸ್ಥಿತಿಯಲ್ಲಿರಲಿಲ್ಲ. 2022ರ ಮಾರ್ಚ್ ವೇಳೆಗೆ ಎರಡೂ ಕಾಲಿನ ಮಂಡಿಚಿಪ್ಪು ಬದಲಿಸಿ ಮೂರು ತಿಂಗಳಷ್ಟೇ ಆಗಿತ್ತು. ಮಾರ್ಚಿಯಲ್ಲಿ ಲೈಟಾಗಿ ಎಡಗಾಲು ಎಡಗೈಗಳಿಗೆ ಸ್ಟ್ರೋಕ್ ಹೊಡೆದದ್ದರಿಂದ ಆಗಲಿಲ್ಲ. 2023ರಲ್ಲಿ ಹೋಗಿಯೇಬಿಡಲು ನಿರ್ಧರಿಸಿ ಪರೀಕ್ಷೆ ಸಮಯದಲ್ಲೇ ಮೊಮ್ಮಗಳಿಗೆ `ಸ್ಕುಬಾ ಡೈವಿಂಗಿಗಾಗಿ ಅಂಡಮಾನಿಗೆ ಹೋಗುವ ಬದಲು ನಿತ್ರಾಣಿಗೆ ಹೋದರಾಯಿತು. ಈಗ ಡಾರ್ಜಿಲಿಂಗ್ ಚೆನ್ನಾಗಿರುತ್ತದೆ ಅಲ್ಲಿಗೆ ಹೋಗೋಣವೆ’ ಎಂದೆ. ಅವಳೂ ಯೆಸ್ ಎಂದಳು. ಫಲಿತಾಂಶ ಬರುವಷ್ಟರಲ್ಲಿ ಟೂರ್ ಮುಗಿಸಬೇಕಿತ್ತು. ಕಿರಿಯ ಮಗಳಿಗೆ ಮನವಿ ಸಲ್ಲಿಸಿದೆ… ಅವಳೂ ಒಪ್ಪಿದಳು. ನಾನು ಡಾರ್ಜಿಲಿಂಗ್ ಮಾತ್ರ ಹೇಳಿದ್ದೆ. ಮಗಳು ಜೊತೆಗೆ ಸಿಕ್ಕಿಮ್ ಸೇರಿಸಿದ್ದಳು. ಸಿಕ್ಕಿಂ ಮುಗಿಸಿ ಡಾರ್ಜಿಲಿಂಗ್, ನಂತರ ವಾಪಸ್ ಎಂದು ಆರು ದಿನದ ಟೂರ್ ಅರೇಂಜ್ ಮಾಡಿದಳು, ಜೊತೆಗೂ ಬಂದಳು.

ಮೂವರು ಹೊರಟು ತಲುಪಿದ್ದು ಬಾಗ್ಡೋಗ್ರಾಕ್ಕೆ. ಸಿಡುಕುಮೂತಿ ಸಿದ್ದಪ್ಪನ ಅಪ್ಪನಂತಿದ್ದ ಸಾರಥಿಯಿದ್ದ ಕಾರೇರಿದೆವು. ಹತ್ತುವಾಗಲೇ ಸೂಚನೆ ಕೊಟ್ಟು `ಹಕ್ಕಿ ಕಂಡರೆ ಹೇಳುತ್ತೇನೆ, ಕಾರು ನಿಲ್ಲಿಸಬೇಕು’ ಎಂದು ಕ್ಯಾಮೆರಾ ಕೈಯಲ್ಲಿ ಹಿಡಿದೇ ಕುಳಿತಿದ್ದೆ. ಆದರೆ ಎಲ್ಲಿಯೂ ನಿಲ್ಲಿಸಲು ಹೇಳಲಿಲ್ಲ, ಊಟಕ್ಕೆ ಬಿಟ್ಟರೆ. ವಿಪರೀತ ರಶ್ ಇದ್ದ ದಾರಿ ಬದಿಯ ಹೊಟೇಲ್ ಮುಂದೆ ನಿಲ್ಲಿಸಿದ. ನಿಲ್ಲಿಸುವಾಗ ಇತ್ತಿತ್ತ ನಿಲ್ಲಿಸು ಎಂದು ಗಿಡ ಮರ ಕಾಣಿಸುವ ಕಡೆ ನಿಲ್ಲಿಸಿಸಿದೆ. ಮಗಳು ತಿನ್ನಲು ಕರೆದರೆ `ನೀವೆ ಏನಾದರೂ ತಂದುಬಿಡಿ’ ಎಂದು ಇಳಿಯದೆ ಹಕ್ಕಿ ಅರಸುತ್ತಾ ಕುಳಿತೆ.

ಎದುರುಗಡೆ ಇದ್ದ ಆಲದಮರ ಹಣ್ಣು ಬಿಟ್ಟಿತ್ತು. ಹಕ್ಕಿ ಬಂದೇ ಬರಬಹುದೆಂಬ ಆಸೆ. ರಸ್ತೆಯಲ್ಲಿ ವಿಪರೀತ ಗಾಡಿ. ಹೊಟೇಲ್ ಮುಂದೆ, ಅಕ್ಕಪಕ್ಕ ಎಲ್ಲೆಂದರಲ್ಲಿ ಜನವೋ ಜನ. ಗಾಡಿಗಳೋ ಗಾಡಿಗಳು. ಅಂತಹ ಕಡೆ ಕ್ಯಾಮೆರಾ ಟ್ರೈಪಾಡಿಗೆ ಹಾಕಿ ನಿಲ್ಲೋದು ಕಷ್ಟ ಎನಿಸಿ  ನಿಕಾನ್ ಪಿ-1000 ಹಿಡಿದು ಕುಳಿತೆ ಆಲಕ್ಕೆ ಕಣ್ಣಿಟ್ಟು. ಮೊದಲಿಗೆ ಬುಲ್ಬುಲ್ ಬಂದವು. ಹೇಗೋ ಈಗಾಗಲೇ ಸಿಕ್ಕಿರುವಂತಹವು ಎಂದು ಕ್ಲಿಕ್ಕಿಸಲೇ ಇಲ್ಲ. ಪಕ್ಕದ ಮರಕ್ಕೆ ಹಾರಿಬಂದ ಹಕ್ಕಿಗೆ ಕ್ಲಿಕ್ಕಿಸಿದರೆ ಅದು ಗ್ರೇ ಟ್ರೀಪೈ. ಈ ಮೊದಲೇ ಅದರ ಚಂದದ ಪಟ ಸಾಕಷ್ಟು ತೆಗೆದಿದ್ದರಿಂದ ಕ್ಯಾಮೆರಾ ನಾನೊಲ್ಲೆ ಎಂದು ಸ್ಟ್ರೈಕ್ ಮಾಡಿತು, ನಾನೂ ತೆಪ್ಪಗಾದೆ. ಬಿಂಬಗ್ರಾಹಕ ಮುನಿದರೆ ಛಾಯಾಗ್ರಾಹಕನ ಸ್ಥಿತಿ `ಹರ ಕೊಲ್ಲಲ್ ಪರ ಕಾಯ್ವನೆ’ ಎಂಬಂತಾಗುತ್ತದೆ.

ಆಲದೆಲೆಗಳ ನಡುವೆ ಹಣ್ಣುಗಳ ಬಳಿಗೆ ಕೆಂಪು ಪಾದದ ಪಾರಿವಾಳ ಸರಿಯುತ್ತಿರುವುದು ಕಾಣಿಸಿತು. ಅದು Pin tailed gree pigeon ಎಂದುಕೊಂಡೆ. ನಿಕಾನ್ ಇಂದ ಕ್ಲಿಕ್ಕಿಸಿ ನನ್ನ 600 ಪ್ರೈಮ್ ಜೋಡಿಸಿಕೊಂಡೆ. ಅಷ್ಟರಲ್ಲಿ ಅದು ಹಾರಿತು. ಕೆಲಕ್ಷಣದಲ್ಲಿ ಕಾರಿನ ಬಳಿ ಏನೋ ಬಿದ್ದಂತಾಯಿತು. ಇಣುಕಿ ನೋಡಿದರೆ ಪಾರಿವಾಳ ಕೆಳಗೆ ಬಿದ್ದಿದೆ. ಹಾರಲು ಪ್ರಯತ್ನಿಸುತ್ತಿತ್ತು. ಸಾರಥಿ ಬಂದವನೇ ಅದನ್ನೊಂದು ಕಡೆಗೆ ಎತ್ತಿಟ್ಟ. 24-105 ದಿಂದ ನಾಲ್ಕೈದು ಚಿತ್ರ ತೆಗೆದೆ. ಯಾಕೋ ಮನಸ್ಸಿಗೆ ಕಸಿವಿಸಿ ಆಗುತ್ತಿತ್ತು. ಅದೂ ತೆವಳಿಕೊಂಡೆ ಬೇರೆ ಕಡೆಗೆ ನುಸುಳಿತು. ಸ್ವಲ್ಪ ಹೊತ್ತಿಗೆ ಸರಿಹೋಗುತ್ತದೆಂದು ಸ್ಥಳೀಯರು ಹೇಳಿದರು. ಸಮಯವೂ ಓಡುತ್ತಿತ್ತು. ಭಾರವಾದ ಮನದಿಂದ ಗಾಡಿಯೇರಿ ಗ್ಯಾಂಗಟೋಕಿನತ್ತ ಹೊರಟರೂ ಪಾರಿವಾಳದ ಚಿತ್ರ ಮನದಿಂದ ಮರೆಯಾಗಿರಲಿಲ್ಲ. 

ಗ್ಯಾಂಗಟೋಕಿನ ಮೂರು ದಿನದ ಸುತ್ತಾಟ ಮುಗಿಸಿ ಮಾರ್ಚ್ ಹತ್ತರ ಬೆಳಿಗ್ಗೆ ಡಾರ್ಜಿಲಿಂಗ್ ಕಡೆಗೆ ಹೊರಟೆವು. ಯಥಾಪ್ರಕಾರ ಕ್ಯಾಮೆರಾ ಕೈಯಲ್ಲಿ ಕಣ್ಣು ಹಕ್ಕಿ ಹುಡುಕಾಟದಲ್ಲಿ. ನೂರಾರು ತಿರುವುಗಳ ಬೆಟ್ಟಗುಡ್ಡಗಳ ಹಾದಿಯಲ್ಲಿ ಹಕ್ಕಿ ಕಣ್ಣಿಗೆ ಕಂಡರೂ ಕೂಡಲೇ ನಿಲ್ಲಿಸಲು ಆಗುವುದಿಲ್ಲ. ನಿಲ್ಲಿಸಬಹುದು, ಹಿಂದಿನವರು ಹಿಂದೆ ಗುದ್ದಿದರೆ, ಮುಂದಿನಿಂದ ಬರುವವರು ಮುಂದೆ ಗುದ್ದರಿಸಿ ಪ್ರಪಾತಕ್ಕೆ ಗಾಡಿಯನ್ನು ಜೊತೆಗೆ ನಮ್ಮನ್ನೂ ಇಳಿಸುವ ಕಳಿಸುವ ಛಾನ್ಸೆ ಜಾಸ್ತಿ. ಹಾಗಾಗಿ ಅಲ್ಲಿ ಆ ಹಕ್ಕಿ ಹಾರಿತು, ಇಲ್ಲಿ ಈ ಹಕ್ಕಿ ಕಂಡೆ ಎಂದುಕೊಂಡು ತೆಪ್ಪಗೆ ಕುಳಿತಿದ್ದೆ.

ಹೊರನೋಟಗಳ ಸೊಬಗನ್ನು ತೀಸ್ತಾದ ಹರಿವನ್ನು ಕಣ್ತುಂಬಿಸಿಕೊಳ್ಳುತ್ತಿದ್ದೆ. ಡಾರ್ಜಿಲಿಂಗ್ ಇಪ್ಪತ್ತು ಕಿಮೀ ಇದ್ದಂತೆ ಕಂಡ ಲಾಮ್ಹಾಟ್ಟಾದ ರಸ್ತೆ ಬದಿಯಲ್ಲಿ ಬೇಜಾನ್ ಗಾಡಿ ನಿಂತಿದ್ದವು. ಪಕ್ಕ ತಿರುಗಿ ನೋಡಿದರೆ ಪಾರ್ಕ್, ಜನವೋ ಜನ. ಮಗಳು ಮೊಮ್ಮಗಳಿಗೆ ಹೋಗ್ರೋ ನೋಡಿ ಬನ್ರೋ ಎಂದೆ, ಅವರೂ ಇಳಿದರು. ಇಳಿಸಿದ ಕಡೆ ಕಾರು ನಿಲ್ಲಿಸುವಂತಿರಲಿಲ್ಲ. ಸಾರಥಿ ಮುಂದೆ ಹಾಕ್ತೀನಿ ಎಂದ. ಅರಳಿದ ರೋಡೋಡೆಂಡ್ರನ್ ಕಾಣಿಸಿಬಿಡೋದೆ. ಇಲ್ಲೇ ಇಲ್ಲೆ ನಿಲ್ಲಿಸು ಎಂದೆ, ಅದಿದ್ದ ಕಡೆ ಹಕ್ಕಿ ಬರ್ತವೆ ಎಂಬ ಗ್ಯಾರಂಟಿಯಿಂದ. ಕಾರಿನಲ್ಲೇ ಕೂತರೂ ಕಣ್ಣು ಹೂವಿನತ್ತ ಇತ್ತು. ನಿರೀಕ್ಷೆ ಹುಸಿಯಾಗಿಸದೆ ರೂಫಸ್ ಸಿಬಿಯಾ ಬಂದವು. ಮೂತಿಗೆ ಮಕರಂದ ಮೆತ್ತಿಕೊಳ್ಳುವ ಸೀನ್ ಸಿಕ್ಕಿಯೇ ಸಿಕ್ಕಿತು. ಪಾರ್ಕಿನೊಳಗೆ ಸುತ್ತಾಡಿದ ಮಗಳು ಮೊಮ್ಮಗಳು ಗಾಡಿಯೇರಿದರು. ಡಾರ್ಜಿಲಿಂಗ್ ಕಡೆಗೆ ಸಾಗಿ ಉಳಿಯಬೇಕಾದ ವಸತಿಯ ದಾರಿ ಒನ್ ವೇ ಎಂದು ಪಕ್ಕದ ರಸ್ತೆ ಬಳಿ ಇಳಿಸಿ ಹೋದಾಗ ಸಮಯ ಎರಡೂವರೆ ಆಗಿತ್ತು.

ಮಗಳು ಟೂರಿಗೆ ವ್ಯವಸ್ಥೆ ಮಾಡುವಾಗಲೇ ಟಾಯ್ ಟ್ರೈನಿಗೆ ಟೈಂ ಆಗದು ಎಂದಿದ್ದರಿಂದ ನಿರೀಕ್ಷೆ ಇರಲಿಲ್ಲ.  ಡಾರ್ಜಿಲಿಂಗ್ ಬರ್ತಾ ಇದ್ದಂತೆ, ಆನ್ಲೈನಿನಲ್ಲಿ ಟಾಯ್ ಟ್ರೈನಿನ ಟೈಮಿಂಗ್ ನೋಡಿದ ಮಗಳು `ಅಮ್ಮಾ ಮೂರೂವರೆಗೆ ಟ್ರೈನ್ ಇದೆ, ಏನು ಮಾಡೋಣ’ ಎಂದ ತಕ್ಷಣ `ಬುಕ್ ಮಾಡು ಮಾಡು ಪುಟ್ಟಿ ಪ್ಲೀಸ್’ ಎಂದೆ ಆಸೆಗಣ್ಣಿನಿಂದ ನೋಡುತ್ತಾ. ಬಹುದಿನದ ಕನಸು ಈಡೇರುವ ಕ್ಷಣ ಬಂತು. ಟ್ಯಾಕ್ಸಿಗೆ ವಿಚಾರಿಸಿದರೆ ಹೋಟೇಲಿನವ ಐದು ನಿಮಿಷದ ದಾರಿ ಎಂದ. ನಾನೋ ಬಹುತೇಕ ಓಡುತ್ತಾ ಸ್ಟೇಷನ್ನಿಗೆ ತಲುಪಿದೆ. ತಡವಾಗಿ ಬಂದ ಮೂರು ಬೋಗಿಯ ಟ್ರೈನ್ ಫುಲ್ಲಾಗಿ ಕೂಕ್ಕೂ ಕ್ಕೂ ಕೂಗುತ್ತಾ ಗಡಬಡ ಎನ್ನುತ್ತಾ ಹೊರಟಿತು. ಬಟಾಸಿಯಾ ಲೂಪಿನಲ್ಲಿ ಇಪ್ಪತ್ತು ನಿಮಿಷ ನಿಲ್ಲಿಸಿದಾಗ ಮಗಳು ಮಾತ್ರ ನೋಡಿ ಬಂದಳು. ಘೂಮ್ ತಲುಪಿ ಅರ್ಧ ಗಂಟೆ ನಿಲ್ಲಿಸಿದರು. ಮಗಳು ಇಳಿದು ಹೋಗಿ ತಂದದ್ದನ್ನೆಲ್ಲಾ ತಿಂದೆವು. ಪಯಣದ ಉದ್ದಕ್ಕೂ ಮೊಬೈಲಿಗೆ ಕ್ಯಾಮೆರಾಕ್ಕೆ ಕೆಲಸ ಕೊಟ್ಟಿದ್ದೆ. ಮಗಳು ಮೊಮ್ಮಗಳಿಗೆ ಹೇಳುತ್ತಿದ್ದಳು `ಅಜ್ಜಿ ಮುಖ ನೋಡು… ಎಷ್ಟು ಖುಷಿ.’ ನಿಜ ಎಷ್ಟು ವರ್ಷದ ಕನಸು ಕೈಗೂಡಿತ್ತು. ಮರಳುವಾಗ ನಡೆಯಲಾರದೆ ಟ್ಯಾಕ್ಸಿಯಲ್ಲಿ ಹೋಟೇಲ್ ತಲುಪಿ ಉರುಳಿಕೊಂಡೆ. ಅವರಿಬ್ಬರು ಹೊರಗೆ ತಿರುಗಾಡಿ ನನಗೂ ತಿನ್ನಲೂ ತಂದುಕೊಟ್ಟರು.

ಮರುದಿನ ಡಾರ್ಜಿಲಿಂಗ್ ಸುತ್ತಾಟ ಇತ್ತು. ಬೆಳಿಗ್ಗೆ ಟೈಗರ್ ಹಿಲ್ಲಿಗೆ ಸೂರ್ಯೋದಯ ನೋಡಲು ಬರುವೆ, ನಂತರ ನೀವಿಬ್ಬರೂ ಸುತ್ತಾಡಿ ಬನ್ನಿ ಎಂದೆ. ಸಂದೀಪನಿಗೆ ಹೇಳಿ ಲೋಕಲ್ ಗೈಡ್ ಬಿಪಿನ್ ಜೊತೆ ಬೆಳಿಗ್ಗೆ ಒಂದು ಸೆಷನ್ ಬರ್ಡಿಂಗ್ ಗೊತ್ತುಪಡಿಸಿಕೊಂಡಿದ್ದೆ. ಗೈಡ್ ಟೈಗರ್ ಹಿಲ್ಲಿಗೆ ತಾನು ಬರುತ್ತೇನೆಂದ. ಬೆಳಿಗ್ಗೆ ನಾಲ್ಕು ಗಂಟೆಗೆ ಟೈಗರ್ ಹಿಲ್ಲಿನ ಚಳಿಗೆ ಟೀ ಕುಡಿಯುತ್ತಾ ಕಾಯುತ್ತಿದ್ದ ಸಾವಿರಾರು ಜನರಲ್ಲಿ ನಾವೂ ಸೇರಿಕೊಂಡೆವು. ಗಂಟೆ ಕಾಲ ನಿಂತೆ ಕಾಯುತ್ತಿದ್ದೆ. `ಬಂದ ಬಂದ ಭಾಸ್ಕರ ತಂದ ತಂದ ಬಂಗಾರದ ಹೊದಿಕೆಯ’ ಎಂದು ಹೇಳಿಕೊಳ್ಳುತ್ತಿದ್ದಂತೆ ಕಾಂಚನಗಂಗಾದ ಹಿಮಕ್ಕೆ ಬಂಗಾರ ಬಣ್ಣ ಹೊದಿಸುವ ರವಿರಾಯ  ನಿರ್ವಿಘ್ನವಾಗಿ ಕಾರ್ಯ ಪೂರೈಸಿ ಖುಷಿ ಕೊಟ್ಟ.

ಟೈಗರ್ ಹಿಲ್ಲಿನಿಂದ ಇಳಿದು ಬಿಪಿನ್ ಸೂಚಿಸಿದ್ದ ಆಲಯದ ಬಳಿ ಇಳಿದೆ. ಅಲ್ಲಿ ಕಂಡ ಹಕ್ಕಿಗಳತ್ತ ಕ್ಯಾಮೆರಾ ತಿರುಗಿತು. ಫೀಡ್ ಇಟ್ಟಿದ್ದೆಡೆ ಹಕ್ಕಿಗಳು ಬರುತ್ತಿದ್ದವು. ಬಿಪಿನ್ ಬಂದ ಬಳಿಕ ಮಗಳು ಮೊಮ್ಮಗಳು ಡಾರ್ಜಿಲಿಂಗ್ ಸೈಟ್ ಸೀಯಿಂಗಿಗೆ ಹೊರಟರು, ನಾನು ಮತ್ತೊಂದೆಡೆ ಹಕ್ಕಿ ಶೂಟಿಂಗಿನಲ್ಲಿ ಮಗ್ನಳಾದೆ. Chestnut-crowned Laughingthrush, White-throated Laughingthrush, Spotted Laughingthrush ಬರುತ್ತಿದ್ದವು. ಹಿಂದೆ ಸಾತ್ತಾಲಿನಲ್ಲಿ ತೆಗೆದಿದ್ದ Striated Laughingthrushನ ಒಳ್ಳೆಯ ಚಿತ್ರಗಳಾದವು. Gray-sided Laughingthrush ಬಂದು ಲೈಫರ್ ಆಯಿತು. ಅರುಣಾಚಲ ಪ್ರದೇಶಕ್ಕೆ ಹೋಗಿದ್ದಾಗ ಇದಕ್ಕಾಗಿ ಹುಡುಕಿ ಸಿಕ್ಕಿತೆನ್ನುವಷ್ಟರಲ್ಲಿ ಹಾರಿ ನಿರಾಶೆ ಮೂಡಿಸಿತ್ತು. ಅಲ್ಲಾದ ನಿರಾಶೆ ಇಲ್ಲಿ ತೊಡೆದುಹೋಯಿತು.

Hill Partridge ಬರಬಹುದು ರೆಡಿಯಿರಿ ಎಂದ ಬಿಪಿನ್. ಹೆಣ್ಣು-ಗಂಡು Partridge ಒಟ್ಟಿಗೆ ಬಂದು ಲೈಫರಾದವು. ಸಾಕಷ್ಟು ಶಾಟ್ ಸಿಕ್ಕವು. ಕೊಂಬೆಯ ಮೇಲೆ ಹಾರಿ ಬಂದ Rufous-gorgeted flycatcher ಗಂಡನ್ನು ಕ್ಲಿಕ್ ಮಾಡಿಕೊಂಡೆ. ಮೂರ್ನಾಲ್ಕು Yellow billed treepie,  Oriental turtle dove ಬಂದು ಹೋದವು. Hoary throated Barwing  ಜೋಡಿ ಬಂದಿತು. ಇನ್ನೂ ಐದಾರು ಜನ ಪಕ್ಷಿಛಾಯಾಗ್ರಾಹಕರು ಬಂದರು. ಅವರ ಗುರಿ Hill Partridge ಆಗಿದ್ದರೂ ಅವು ಬರಲಿಲ್ಲ. ಕೆಲವರು ಒಂದೆರಡು ಮೈಲಿ ಮೇಲೆ ಹೋಗಿ ಬಂದರೂ ಪ್ರಯೋಜನವಾಗಲಿಲ್ಲ.

ಒಂದು ಸೆಷನ್ನಿನಲ್ಲಿ ಮೂರು ಲೈಫರ್ ಸಿಕ್ಕಿದವು. ಡಾರ್ಜಿಲಿಂಗ್ ಗೆ ಬಂದ ಪೈಸಾ ವಸೂಲ್ ಆಯಿತು.  ಬಿಸಿಲಿನ ಝಳ ಹೆಚ್ಚಾಯಿತು, ಹಕ್ಕಿಗಳು ಹೊರಬರಲಿಲ್ಲ. ಬಿಪಿನ್ ಹೊರಡೋಣ ಎಂದೆ. ನನ್ನ ಮುಖ್ಯ ಗುರಿ ಇದ್ದ Darjeeling Woodpecker ಸಿಗಲಿಲ್ಲ. ಮತ್ತೊಮ್ಮೆ ಬನ್ನಿ ಮೇಡಂ ಆಹ್ವಾನಿಸಿದ ಬಿಪಿನ್ ನನ್ನನ್ನು ವಸತಿಗೆ ಡ್ರಾಪ್ ಮಾಡಿಹೋದರು. ಮಗಳು ಮೊಮ್ಮಗಳು ಬರುವ ತನಕ ಹೊದ್ದು ಮಲಗಿ ವಿರಮಿಸಿದೆ, ಇನ್ನು ಹಕ್ಕಿ ನೋಡುವ ಅವಕಾಶ ಇಲ್ಲದ್ದರಿಂದ. ಮರುದಿನ ಬೆಳಿಗ್ಗೆ ಬೇಗ ಬಾಗ್ಡೋಗ್ರಾ ಕಡೆಗೆ ಪಯಣ ಆರಂಭ. ಯಥಾಪ್ರಕಾರ ಕ್ಯಾಮೆರಾ ಕೈಯಲ್ಲಿ. ಒಂದೆರಡು ಕಡೆ ಇಳಿದು ಕ್ಲಿಕ್ಕಿಸಿದೆ. ಹೊಸವು ಸಿಕ್ಕಲಿಲ್ಲ, ಬೇಸರವಿಲ್ಲ. ಏಕೆಂದರೆ ಮಗಳು-ಮೊಮ್ಮಗಳ ಜೊತೆ ಸುತ್ತಲು ಬಂದಿದ್ದ ನನಗೆ ಸಂಧಿಯಲ್ಲಿ ಮೂರು ಹೊಸ ಹಕ್ಕಿ ಸಿಕ್ಕಿತ್ತಲ್ಲ ಅದಕ್ಕಿಂತ ಹೆಚ್ಚು ಮತ್ತೇನು ಬೇಕಿದೆ. ಡಾರ್ಜಿಲಿಂಗ್ ಎಂಬ ಡಾರ್ಲಿಂಗಿಗೆ ಬೈ ಹೇಳಿ ಬೆಂಗಳೂರಿನೆಡೆಗೆ ಹೊರಟೆ ನನ್ನ ಎರಡು ಹಕ್ಕಿಗಳೊಡನೆ.

‍ಲೇಖಕರು avadhi

August 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಎಂ. ಕುಸುಮ

    ಅತ್ಯಂತ ಆಪ್ತ ಬರಹ, ನಾವೇ ಸುತ್ತಾಡಿದ ಅನುಭವವಾಯ್ತು. ನಿಮ್ಮ ಉತ್ಸಾಹ, ಎಲ್ಲರಿಗೂ ಮಾದರಿ . ✨️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: