ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

19.1

ಮಣಿಪುರವನ್ನು ಅಟ್ಲಾಸಿನಲ್ಲಿಯಾದರೂ ಸರಿಯಾಗಿ ಎಲ್ಲಿದೆ ಎಂದು ಎಂದೂ ನೋಡಿಯೂ ತಿಳಿಯದಿದ್ದ ನನಗೆ ಮಣಿಪುರ ಗೊತ್ತಿದ್ದುದ್ದು ಈ ಕಾರಣಗಳಿಂದ. ಒಂದು ಸುಂದರ ದಿರಿಸಿನ ಮಣಿಪುರಿ ನೃತ್ಯದಿಂದ, ದೂರದರ್ಶನದ ನೋಟಗಳಿಂದ. ಮತ್ತೊಂದು ಮಹಾಭಾರತದ ನಮ್ಮ ಬಭ್ರುವಾಹನ ಅವರಮ್ಮ ಚಿತ್ರಾಂಗದೆಯಿಂದ. ಅದರಲ್ಲೂ ಬಿ.ಎಯಲ್ಲಿ ಕುವೆಂಪುರವರ ಚಿತ್ರಾಂಗದೆ ಖಂಡಕಾವ್ಯ ನಮಗೆ ಪಠ್ಯವಾಗಿದ್ದರಿಂದ ಮಣಿಪುರದ ಹೆಸರು ಮನದಲ್ಲಿತ್ತು. ಆಮೇಲೆ ರಾಜಣ್ಣ ದ್ವಿಪಾತ್ರ ಮಾಡಿದ ಬಭ್ರವಾಹನ ಮೂರ್ನಾಲ್ಕು ಸಲ ನೋಡಿ ಅರ್ಜುನ-ಬಭ್ರುವಾಹನರ ಡೈಲಾಗ್ ನಡುವೆ ರಾಜಣ್ಣನ ಧ್ವನಿಯಲ್ಲಿ ಮಣಿಪುರದ ಹೆಸರು ಕೇಳಿಕೇಳಿ. ಮೂರ್ನಾಲ್ಕು ಸಲ ನೋಡಿದ್ದೇಕೆಂದರೆ ರಾಜಣ್ಣನ ಮೇಲಿನ ಅಭಿಮಾನದಿಂದ ಮೊದಲ ಸಲ. ಹಳ್ಳಿಯಲ್ಲಿ ವಾಸವಾಗಿದ್ದ ಅಜ್ಜಿ ಯಾನೆ ಅತ್ತೆ ಏನೇ ಕೆಲಸಕ್ಕೆ ಮಂಡ್ಯಕ್ಕೆ ಬಂದರೆ ಒಂದು ಪಿಕ್ಚರ್ ತೋರಿಸುವುದು ಗ್ಯಾರಂಟಿ ಆಗಿದ್ದ ಕಾರಣದಿಂದ ಅವರ ಜೊತೆ ಒಂದ್ ಸಲ. ಗೆಳತಿಯರ ಜೊತೆ. ಆಮೇಲೆ ಟಿ.ವಿಯಲ್ಲಿ ಎಷ್ಟೊಂದು ಸಲ. ರಾಜಣ್ಣನ ಡೈಲಾಗ್ ಕಿವಿಗೆ ಚಿರಪರಿಚಿತ.

ಆದರೆ ಮಣಿಪುರಕ್ಕೂ ಹಕ್ಕಿ ಹುಡುಕಿಕೊಂಡು ಹೋಗುವುದು ಕಲ್ಪನೆಯಲ್ಲಿಯೂ ಇರದ ಕಾಲದಿಂದ ಸರಿದು ಹಕ್ಕಿ ಹಿಂದೆ ತಪ್ಪದೆ ಬೀಳುವ ಲೀಲಾ ಆಗುವ ಕಾಲಕ್ಕೆ ಜಮಾನ ಬದಲಾಗಿತ್ತು. ಖುಷ್ಬೂ `ಅಮ್ಮಾ ಮಣಿಪುರಕ್ಕೆ ಪ್ಲ್ಯಾನ್ ಮಾಡ್ತಿದೀವಿ ಬರುವಿರಾ’ ಎಂದು ಕರೆದದ್ದೇ ತಡ ಬಕಪಕ್ಷಿ ತರಹಕ್ಕೆ ರೆಡಿಯಾದೆ ಮಣಿಪುರದಲ್ಲಿ ಎಲ್ಲಿಯೂ ಬಕಪಕ್ಷಿಗಳ ಫೋಟೊ ತೆಗೆಯಬೇಕಿಲ್ಲವಾದರೂ. 2018ರ ಡಿಸೆಂಬರಿನಲ್ಲಿ ಮಣಿಪುರದ ಟೂರ್ ಖಚಿತವಾಯಿತು. ಸೆಪ್ಟೆಂಬರಿನಿಂದ ಸತತವಾಗಿ ರಾಜಸ್ಥಾನ್, ಸತ್ತಾಲ್ ಸುತ್ತಾಡಿ, ನವೆಂಬರಿನಲ್ಲಿ ಚೋಪ್ತಾ, ಮಂಡಲ ಪ್ರವಾಸ ಮುಗಿಸಿದ್ದೆ. ಸತ್ತಾಲ್, ಚೋಪ್ತಾ, ಮಂಡಲ್ ಹೋಗಿದ್ದ ಸ್ಥಳಗಳು, ಆದರೆ ಮಣಿಪುರ ಹೊಸ ಹಕ್ಕಿ ನೆಲೆಯಾಗಿತ್ತು. ಸಹಜವಾಗಿಯೇ ಖುಷಿ ಇಮ್ಮಡಿಸಿತ್ತು, ಕನಸುಗಳೂ ಹುಟ್ಟಿಕೊಂಡವು. ಕನಸು ಕಾಣಲು ಕಾಸು ಕೊಡಬೇಕೆ.

ಇಂಫಾಲದಲ್ಲಿ ಇಳಿದಾಗ ಏನೋ ಉಲ್ಲಾಸ… ಏನೋ ಹರುಷ. ಆದರೆ ವಿಮಾನ ನಿಲ್ದಾಣ ದಾಟಿ ನಮಗಾಗಿ ಕಾಯುತ್ತಿದ್ದ ಗಾಡಿ ಹತ್ತಲು ಬಂದೆವಾ ಮೊದಲ ಸೂಜಿ ನಮ್ಮ ಉತ್ಸಾಹದ ಬುಗ್ಗೆಯ ಪುಗ್ಗೆಗೆ ಚುಚ್ಚಿತು. ನಾವು ಹಕ್ಕಿಯಾನಕ್ಕೆ ಹೊರಟಾಗ ನಮ್ಮ ವಾಹನದ ಸೌಕರ್ಯವೂ ಮುಖ್ಯ. ತಾಸುಗಟ್ಟಲೆ, ಮೈಲಿಗಟ್ಟಲೆ ಪ್ರಯಾಣ. ಕೆಲವೊಮ್ಮೆ ಗಾಡಿ ಇಳಿದು ಹೋಗುತ್ತಿದ್ದೆವು, ಕೆಲವು ಕಡೆ ಅನಿರೀಕ್ಷಿತವಾಗಿ ಹಕ್ಕಿ ಕಂಡರೆ ಗಾಡಿಯಿಂದಲೇ ತಕ್ಷಣಕ್ಕೆ ಕ್ಲಿಕ್ ಮಾಡಬೇಕಾಗುತ್ತದೆ. ಗಾಡಿ ಅನುಕೂಲಕರವಾಗಿ ಇರದಿದ್ದರೆ ಹಕ್ಕಿಗಾಗಿ ಟೂರ್ ಅನ್ನುವುದೇ ವ್ಯರ್ಥ ಸುತ್ತಾಟ.

ನಮಗಾಗಿ ತಂದಿದ್ದ ಗಾಡಿ ಟಾಟಾ ವಿಂಗರ್. ಆ ಗಾಡಿ ಅವತಾರ ನೋಡಿಯೆ ನಮ್ಮ ಉತ್ಸಾಹದ ವಿಂಗ್‌ ಕಳಚಿಕೊಂಡವು. ಗುಜರಿಗೆ ಹಾಕಲು ಯೋಗ್ಯವಾದ ಮಾಡೆಲ್ ಗಾಡಿ. ನನಗೋ ಆ ಗಾಡಿ ಹತ್ತಲು ಇಳಿಯಲು ಒಂದು ಸ್ಟೂಲ್ ಬೇರೆ ಹೊಂದಿಸಿಕೊಳ್ಳಬೇಕಿತ್ತು. ಜೊತೆಗೆ ಹಿಂದೆ ಹೋಗುವ ಬರುವವರಿಗೆ ಮುಂದಿನ ಸೀಟನ್ನು ಮಡಿಸಬೇಕಿತ್ತು. ಇದೇ ದೊಡ್ಡ ಸರ್ಕಸ್ ಆಗ್ತಿತ್ತು. ರಾಹುಲ್ ಅವರ ವಯಸ್ಸಾದ ತಾಯಿ-ತಂದೆ, ಖುಷ್ಬೂ ತಮ್ಮ ಕೂಡಾ ನಮ್ಮ ಜೊತೆಗೆ ಸೇರಿದ್ದರು. ಸ್ಥಳೀಯ ಗೈಡ್, ಆಯೋಜಕ ಅಭಿಷೇಕ್ ಟೂರ್ ಬುಕ್ ಮಾಡಿದಾಗ ಹಾಕಿದ್ದ ವಿಂಗರ್ ಗಾಡಿಯ ಚಿತ್ರ ಫ್ಯಾಕ್ಟರಿಯ ಷೋರೂಂನ ಮಾಡೆಲ್ ತರಹಕ್ಕೆ ಇತ್ತೆಂದು ಖುಷ್ಬೂ ಗೊಣಗಿದ್ದೇ ಗೊಣಗಿದ್ದು. ಆದರೆ ಅಭಿಷೇಕ್ ಕಿವಿಗೆ ಬೀಳದವನ ರೀತಿ ವರ್ತಿಸಿ ಉತ್ತರವೀಯದೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಸ್ಪಷ್ಟವಾಗಿತ್ತು. ನಮ್ಮ ಜೊತೆ ಇದ್ದ ತಂದೆ-ತಾಯಿ ಇಬ್ಬರು ಗಂಡುಮಕ್ಕಳ ಪರಿವಾರಕ್ಕೆ ಜೀಪ್ ಮಾಡಿಕೊಟ್ಟಿತ್ತು. ಆದರೆ ನಮ್ಮ ಗಾಡಿಯ ಕಂಡೀಷನ್ನೆ ಅಲ್ಟ್ರಾ ಸೂಪರ್ ಆಗಿತ್ತು. ಕಸರತ್ತು ಮಾಡಿ ಗಾಡಿ ಹತ್ತಿದ್ದಾಯಿತು.

ಇಂಫಾಲದಲ್ಲಿ ಸುತ್ತಾಡಿಸಿ ಕೊನೆಗೆ ಅಲ್ಲಿಯ ಮಹಿಳಾ ಮಾರ್ಕೆಟ್ಟಿನ ಬಳಿ ನಿಲ್ಲಿಸಿದ ನಮ್ಮ ಗೈಡ್, ಇದು ಮಹಿಳೆಯರು ಮಾತ್ರ ವ್ಯಾಪಾರ ನಡೆಸುವ ಜಾಗ ಹೋಗಿ ನೋಡಿಬನ್ನಿ ಎಂದ. ಈ ಮಾರುಕಟ್ಟೆಯಲ್ಲಿ  ಸಾವಿರಾರು ಮಹಿಳಾ ಮಾರಾಟಗಾರರಿದ್ದು ಸಂಪೂರ್ಣವಾಗಿ ಮಹಿಳೆಯರಿಂದ ನಡೆಸಲ್ಪಡುವ ವಿಶ್ವದ ಏಕೈಕ ಮಾರುಕಟ್ಟೆ. 500 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಇಮಾ ಕೇಯ್ಥೆಲ್‌ ಅಂದರೆ ತಾಯಿಯ ಮಾರುಕಟ್ಟೆ ಮಣಿಪುರದ ಆರ್ಥಿಕತೆ ಹೆಚ್ಚಿಸಲು ಸಹ ಈ ಮಾರುಕಟ್ಟೆ ಪ್ರಮುಖ ಪಾತ್ರ ಬೀರುತ್ತಿದೆ. ಸಂಪೂರ್ಣವಾಗಿ ಮಹಿಳಾ ಸದಸ್ಯರ ಒಕ್ಕೂಟವೊಂದು ನಿರ್ವಹಿಸುತ್ತದೆ. ಹೋಗಿ ನೋಡಬಹುದಿತ್ತು. ನಾವೋ ಮಣಿಪುರದ ಹಕ್ಕಿಗಳಿಗಾಗಿ ಪ್ರವಾಸಕ್ಕೆ ಹೋಗಿದ್ದವರು. ವಿಮಾನದ ಲಗೇಜು ಮಿತಿಯ ಒಳಗೆ ಪ್ರಯಾಣಿಸುವವರು. ಏನು ಕೊಂಡುಕೊಳ್ಳಲು ಸಾಧ್ಯ. ನೋಡಿಯಾದರೂ ನೋಡಬಹುದಿತ್ತೇನೋ! ವಿಂಗರ್‌ನಿಂದ ಇಳಿಯುವುದು ಹತ್ತುವುದೇ ಪ್ರಯಾಸ. ಇರುವ ಎನೆರ್ಜಿ ಹಕ್ಕಿಗಳಿಗೆ ಮೀಸಲು ಮಾಡಿ ನಾನು ಇಳಿಯಲಿಲ್ಲ. ರಾಹುಲ್ ಖುಷ್ಬೂ ಇಳಿದು ಹೀಗೆ ಹೋಗಿ ಹಾಗೇ ಬರಿಗೈಯಲ್ಲೇ ಬಂದು ಗೊಣಗುತ್ತಾ ಗಾಡಿಯೇರಿದರು.

ಗಾಡಿಗೆ ಬಿಡದೆ ಅಂಟಿಕೊಂಡಿದ್ದ ನಮ್ಮನ್ನು ನಮ್ಮ ಲಗೇಜುಗಳನ್ನು ಇಳಿಸದೆ ನಮ್ಮ ವಸತಿಯತ್ತ ಮುಖ ಮಾಡಿಸದೆ ಸುತ್ತಾಡಿಸುತ್ತಿದ್ದ ಗೈಡ್ ಕೊನೆಗೂ ಊಟಕ್ಕೆಂದು ಹೊಟೇಲಿಗೆ ಕರೆದುಕೊಂಡು ಹೋದ. ಕೂರಲೂ ಜಾಗವಿಲ್ಲದೆ ತಾಸರ್ಧ ನಿಂತೇ ಕಾಯ್ದ ಬಳಿಕ ಕೂರಲು ಜಾಗ ಸಿಕ್ಕಿತು. ನಾವು ಊಟ ಮಾಡುವ ತಾಟಿನ ಎರಡು ಪಟ್ಟು ದೊಡ್ಡದಾದ ಖಾಲಿ ತಾಟು ಬಂದವು. ಬಡಿಸಲು ಅರ್ಧ ಗಂಟೆ ತೆಗೆದುಕೊಂಡರು. ಬಗೆಬಗೆಯ ಅನ್ನ, ವ್ಯಂಜನಗಳು-ಅದರಲ್ಲೂ ಕಪ್ಪಕ್ಕಿಯ ಅನ್ನ. ರುಚಿಯೇನೊ ತಿನ್ನುವಂತಿತ್ತು, ಆದರೆ ಅಷ್ಟು ಹೊತ್ತಿಗೆ ಹಸಿವೆಂಬ ರಾಕ್ಷಸ ಕಾಡಿ ತಣ್ಣಗಾಗಿದ್ದರಿಂದ ಊಟದ ರುಚಿ ಹತ್ತಲಿಲ್ಲ. ಹೀಗೆ ಆಡಿ ಸುತ್ತಾಡಿ ಮಧ್ಯಾಹ್ನ ಆಯಿತು.

ಊಟದ ಬಳಿಕ ನೇರವಾಗಿ ಹಕ್ಕಿಗೆ ಹೋಗೋಣ ಎಂದ ಗೈಡ್. ಹಿಂದಿನ ರಾತ್ರಿ ಊರು ಬಿಟ್ಟವರು. ಬೆಂಗಳೂರಿನಿಂದ ಮುಂಜಾನೆಯೆ ವಿಮಾನ ಹತ್ತಿ ಇಂಫಾಲದಲ್ಲಿ ಇಳಿದವರು. ಮುಖಕ್ಕೆ ನೀರೂ ಹಾಕಿಲ್ಲ, ಸುಸ್ತಾಗಿತ್ತು, ಮತ್ತೊಂದಕ್ಕೂ ಹೋಗಿರಲಿಲ್ಲ. ಅದರಲ್ಲೇ ಎರಡು ಗಂಟೆಯ ಹೊತ್ತಿಗೆ ಇಂಫಾಲದ ಆಚೆಯ ಜೌಗು ಪ್ರದೇಶಕ್ಕೆ ಕರೆದುಕೊಂಡು ಹೋದ. ಎರಡೂ ಕಡೆಯೂ ಕೊಚ್ಚೆ ನೀರು ಬಂದು ಸೇರುವಂತಿದ್ದ ಜಾಗ, ಬೇಲಿ ಹಾಕಿದ್ದರು, ಇಲ್ಲೇ ಹಕ್ಕಿಗಳು ಬರುತ್ತವೆ ನೋಡಿ ಎಂದ. ಮೊದಲೇ ಇಷ್ಟು ಚಂದದ ವಾಹನ, ಅದರಿಂದ ಕ್ಯಾಮೆರಾ ಇಟ್ಟುಕೊಂಡು ಫೋಟೋ ತೆಗೆಯೋ ಸ್ಥಿತಿಯಂತೂ ಇರಲಿಲ್ಲ. ಅತ್ತಿಂದಿತ್ತ ಠಳಾಯಿಸುತ್ತಾ ಹಕ್ಕಿಗೆ ಕಾಯಬೇಕಿತ್ತು. ಹಾಗೆ ಅಡ್ಡಾಡುವಾಗ ಕಂಡದ್ದು Great Myna. ಅವುಗಳೋ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಹಸುಗಳ ಮೈಮೇಲೆ ಸವಾರಿಸುತ್ತಿದ್ದವು. ಒಂದೊಂದು ಹಸುವಿನ ಮೈ ಹತ್ತು ಹನ್ನೆರಡು ಮೈನಾಗಳಿಗೆ ಹುಳುಗಾವಲಾಗಿದ್ದವು. ಲೈಫರ್ ಆದರೂ ಅಷ್ಟು ಆಕರ್ಷಣೆ ಎನಿಸಲಿಲ್ಲ. ಹಕ್ಕಿಪ್ರಿಯರು ಹ್ಯಾಬಿಟಾಟಿನಲ್ಲಿ ತೆಗೆಯಬೇಕೆಂದು ಆಸೆ ಪಡೋದೇನೊ ನಿಜ, ಆದರೆ ಹೀಗೆ ದನಗಳ ಮೈಮೇಲೆ ಕುಳಿತವನ್ನು ಹ್ಯಾಬಿಟಾಟ್‌ನಲ್ಲಿ ಸಿಕ್ಕವು ಎನ್ನಲು ಸಂಕಟ ಆಗುತ್ತದೆ.

ಇನ್ನೇನು ಸಿಗತ್ತಪ್ಪ ಅಂತಾ ಹುಡುಕುತ್ತಿದ್ದಾಗ ಹಂದಿಗೂಡಿನ ಪಕ್ಕದಲ್ಲಿದ್ದ ಮರದ ಮೇಲೆ ಗುಬ್ಬಿ ಕಾಣಿಸಿದವು. ಗುಬ್ಬಚ್ಚಿ ಅಲ್ವಾ ಅಂತಾ ನೆಗ್ಲೆಕ್ಟ್ ಮಾಡೋವಷ್ಟರಲ್ಲಿ ಏನೋ ಸ್ವಲ್ಪ ಬೇರೆ ತರಹ ಅನ್ನಿಸಿ ನೋಡಿದರೆ ಅವು Eurasian tree sparrow ಆಗಿದ್ದವು. ಆದ್ದರಿಂದ ಅವು ಹಾರಿಹೋಗುವ ಮುನ್ನ ಕ್ಲಿಕ್ ಮಾಡಿಕೊಂಡೆ. ಮತ್ತೂ ಕಣ್ಣಾಡಿಸಿದರೆ ಕಳಿಂಗ ಕಾಣಿಸಿತು. ಕಳಿಂಗ ತಾನೇ ಎಂಬ ಉಪೇಕ್ಷೆ ತೋರುವ ಮುನ್ನವೇ ಗೈಡ್ ಅದಕ್ಕೆ Tri colour Black headed shrike ಎಂಬ ಹೊಸ ಉದ್ದದ ಹೆಸರು ಹೇಳಿದ. ಅದನ್ನೂ ಕ್ಲಿಕ್ ಮಾಡಿದ್ದಾಯ್ತು. ಬೇಲಿಯ ತಂತಿಯ ಮೇಲೆ ಕುಳಿತ ಸಾಮಾನ್ಯ ಎನಿಸುವಂತೆ ಕಾಣುತ್ತಿದ್ದ Grass Bird ಲೈಫರ್ ಆಗಿತ್ತು. ಒಂದು ಸೆಷನ್ನಿನಲ್ಲಿ ನಾಲ್ಕು ಲೈಫರ್ ಸಿಕ್ಕಿದವು.

ಕತ್ತಲು ಮೆಲ್ಲಗೆ ಕವಿಯತೊಡಗಿತು. ಇನ್ನು ಸುತ್ತಾಡಿಸಲು ಆಗದೆ ವಿಧಿಯಿಲ್ಲದೆ ವಸತಿಯೆಡೆಗೆ ಕರೆದೊಯ್ಯಲಾರಂಭಿಸಿದ. ಹೊಸ ರಸ್ತೆ ಮಾಡುತ್ತಿದ್ದ ಕಾರಣ ರಸ್ತೆ ಒದರಿಹೋಗಿತ್ತು. ಸೂಪರ್ ಸುಪ್ರೀಂ ಗಾಡಿಯಿಂದ ನಮ್ಮ ಬಾಡಿ ಬಸವಳಿದಿತ್ತು. ಮಾರ್ಗ ಮಧ್ಯದಲ್ಲಿ ಗಾಡಿಯ ಎಂಜಿನ್ನಿಗೆ ಸಮಸ್ಯೆ ಅಡರಿ ಸಧ್ಯಕ್ಕೆ ಚಾಲೂ ಆಗುವಂತೆ ಕಾಣಲಿಲ್ಲ. ಮನಸಿನಲ್ಲಿ ಗೊಣಗಿಕೊಳ್ಳುವ ಮುಲಾಜಿನ ಹಂತ ದಾಟಿ ಜೋರಾಗಿ ಬೈಯಲು ಆರಂಭಿಸಿದ್ದೆವು. ಒಂದೆರಡು ಗಂಟೆ ಪ್ರಯತ್ನಿಸಿ ಬಳಿಕ ಬೇರೊಂದು ಗಾಡಿ ತರಿಸಿ ಇಂಫಾಲದಿಂದ ಸಾಕಷ್ಟು ದೂರದಲ್ಲಿದ್ದ ರಿಸಾರ್ಟಿಗೆ ಬಿಟ್ಟ. ಒಂದೊಂದು ರೂಮೂ ಒಂದೊಂದು ಕಡೆ. ತಡವಾಗಿ ಊಟ ಸಿಕ್ಕಿತು. ನಾನು ಆ ದಿನ ಮುಗಿಯಿತು ಎಂದುಕೊಂಡೆ, ಆದರೆ ಅದು ನನ್ನ ಪಾಲಿಗೆ. ಗೈಡ್ ನಮ್ಮ ಗುಂಪಿನವರಿಗೆ ಇನ್ನೊಂದು ತಾಣಕ್ಕೆ ಕರೆದೊಯ್ಯುವ ಭರವಸೆ ನೀಡಿದ್ದ. ಆ ರಾತ್ರಿ ಅವರು ಹೋದರು. ಸರಿಯಾಗಿ ದೋಣಿ ವ್ಯವಸ್ಥೆ ಮಾಡದೆ ಫಜೀತಿ ಪಡುವಂತೆ ಮಾಡಿದ್ದನೆಂದು ಮರುದಿನ ಅವರು ಬೈದುಕೊಂಡದ್ದು ಕಿವಿಗೆ ಬಿದ್ದಿತು. ಸಧ್ಯ ಹೋಗಲಿಲ್ಲವಲ್ಲ ಎಂದಷ್ಟೆ ಸಮಾಧಾನಿಸಿಕೊಂಡೆ ಆ ಕತ್ತಲಲ್ಲಿ ನನ್ನ ಪ್ರತಾಪ ತೋರಿಸಲಾಗದೆ ಉಳಿದುಕೊಂಡು.

ಎರಡನೆಯ ದಿನ ಬೆಳಿಗ್ಗೆ ವಿಷ್ಣುಪುರದ Keibul Lamjao National ಪಾರ್ಕಿಗೆ ಹೋಗೋಣವೆಂದಿದ್ದ. ಹೋದರೆ ಬಾಗಿಲು ತೆರೆದಿರಲಿಲ್ಲ. ಡಿಸೆಂಬರ್ ಚಳಿಗೆ ಟೀ ಕುಡಿದು ಬಿಸಿ ಮಾಡಿಕೊಂಡರು. ಗಾಡಿ ಒಂದು ಹಂತದ ತನಕ ಮಾತ್ರ ಒಳಗೆ ಹೋಗುತ್ತಿತ್ತು. ನಂತರ ಕಾಲ್ನಡೆ. ನಾನೂ ನಡೆದೆ. ಮೀನುಮರಿ ಸಾಕುವ ಕೊಳಕ್ಕೆ ಮಣಿಪುರಿ ಸ್ವಿಫ್ಟ್ ಬರುತ್ತದೆಂದು ಕಾಯಿಸಿದ. ಮಬ್ಬುಬೆಳಕಿನಲ್ಲಿ ದೂರದಲ್ಲಿದ್ದ ಕಾರಣ ಮಾಮೂಲಿ ಸ್ವಿಫ್ಟೊ ಮಣಿಪುರಿ ಸ್ವಿಫ್ಟೊ ಅದೇ ತನ್ನ ಪರಿಚಯ ಹೇಳಿಕೊಳ್ಳಬೇಕಿತ್ತು. ಒಂದು ಗಂಟೆ ಪ್ರಯತ್ನಿಸಿ ಮೋರೆ ಸಪ್ಪೆಯಾದದ್ದು ಮಾತ್ರ ದಾಖಲಾಯಿತು. ಅಷ್ಟರಲ್ಲಿ ದೋಣಿ ನಡೆಸುವವರು ಬಂದರು. ದೋಣಿ ನಡೆಸುವ ಜಾಗಕ್ಕೆ ನಡೆದು ಬಂದೆವು.

ಇದು ಅತ್ಯದ್ಭುತವಾದ ಜಾಗ. ವಿಶ್ವದ ಒಂದೇ ಒಂದು Floating national Park. ಲೋಕತಾಕ್ ಸರೋವರದ ಆಗ್ನೇಯ ಭಾಗದಲ್ಲಿ ಷಾಂಗಾಯ್ ಜಿಂಕೆಗಳ ರಕ್ಷಣೆಗಾಗಿ ಘೋಷಿಸಿದ್ದ ನಲವತ್ತು ಚದರ ಕಿ.ಮೀ ವ್ಯಾಪ್ತಿಯ ಈ ಪಾರ್ಕಿನಲ್ಲಿ ಮೇಲೆ ಗಿಡಗಂಟಿ ಬೆಳೆದಿದ್ದರೂ ನೆಲದೊಳಗೆ ನೀರು ಇತ್ತು. ನೆಲದ ಮೇಲೆ ನಡೆದರೆ ಅನುಭವಕ್ಕೆ ಬರುತ್ತಿತ್ತು. ಅಲ್ಲೊಂದು ಕಿರುನೀರದಾರಿ. ದೋಣಿಯೊಳಗೆ ಕುಳಿತೇ ಛಾಯಾಗ್ರಹಣ ಮಾಡಬೇಕಿತ್ತು. ನಾವಷ್ಟೂ ಜನಕ್ಕೂ ಒಂದೇ ದೋಣಿ ಮಾಡಿದ್ದರಿಂದ ಯಾರು ಯಾವ ಕಡೆ ತಿರುಗಿದರೂ ಮನುಷ್ಯರೆ ಕಾಣುತ್ತಿದ್ದೆವೆ ವಿನಾ ಹಕ್ಕಿ ಚಿತ್ರ ತೆಗೆಯಲೂ ಆಗದ ಇಕ್ಕಟ್ಟಿತ್ತು. ನಾನು ಕೊನೆಯ ಸಾಲಿನಲ್ಲಿ ಕುಳಿತರೂ ಗೈಡ್ ದೋಣಿಯ ಮೂಕಿಯ ಮೇಲೆ ಕುಳಿತು ಕ್ಯಾಮೆರಾಗೆ ಅಡ್ಡಿಯಾಗಿದ್ದ. ಬೇರೆಕಡೆ ಕೂರಲು ಅವನಿಗೆ ಜಾಗವೂ ಇರಲಿಲ್ಲ. ಆ ಬದಿ, ಈ ಬದಿಯಲ್ಲೊಬ್ಬ ಅಂಬಿಗರು. ಆಳವಿಲ್ಲದೆ ದೋಣಿ ಮುಂದೆ ಸಾಗದೇ ಇದ್ದಾಗ ಪಕ್ಕದ floating ground ಮೇಲೆ ಇಳಿದು ದೋಣಿ ಮುಂದೆ ತಳ್ಳಿ ನಡೆಸಿಕೊಂಡು ಹೋಗುತ್ತಿದ್ದರು.

ಸುತ್ತಲೂ ಆಳೆತ್ತರ ಬೆಳೆದ ಗಿಡಗಂಟಿ. ಆಗಾಗ್ಗೆ ಹಕ್ಕಿಗಳು ಕಾಣುತ್ತಿದ್ದವು. ನಮ್ಮ ಮುಖ್ಯ ಗುರಿ Parrot bill ಆಗಿತ್ತು. ಆದರದು ದೂರದಲ್ಲಿ ಕಂಡಿತೇ ವಿನಾ ಹತ್ತಿರಕ್ಕೆ ಬರಲೇ ಇಲ್ಲ. ಅದರ ಬದಲಿಗೆ White Tailed Stone Chat ಹತ್ತಿರದಲ್ಲಿ ಕಾಣಿಸಿಕೊಂಡು ಆಸೆ ತೋರಿಸಿ ಹಾರುತ್ತಲೇ ಇತ್ತು. ಕೊನೆಗೂ ಒಂದಷ್ಟು ಕ್ಲಿಕ್ ಮಾಡಿದೆ. ಒಂದಷ್ಟು ದೂರ ದೋಣಿಯನ್ನು ತಳ್ಳುತ್ತಾ ತಳ್ಳುತ್ತಾ ನಮ್ಮನ್ನೆಲ್ಲಾ ಸಾಗಿಸಿದರು. ರಾಹುಲ್‌ಗೆ ಮೈ ಪರಚಿಕೊಳ್ಳುವಂತಾಗಿತ್ತು. ಖುಷ್ಬೂ ಗೊಣಗುತ್ತಲೇ ಇದ್ದುದು ಕಿವಿಗೆ ಬೀಳುತ್ತಿತ್ತು. ರಾಹುಲ್ ತೂಗುವ ನೆಲದಲ್ಲಿಳಿದು ಬ್ಯಾಲೆನ್ಸ್ ಮಾಡಿ ಸರ್ಕಸ್ ಮಾಡಿದರೂ ಹಕ್ಕಿಗಳ್ಯಾವೂ ಕೇರ್ ಮಾಡಲೇ ಇಲ್ಲ. ಕಂಡದ್ದು ಒಂದೆರಡು ಜಿಂಕೆಗಳು. ಗೈಡ್ ಸ್ಟ್ಯಾಗ್ ಡೀರ್ ಎಂದು ಕಿರುಚಿದ. ನಾವೂ ಹೂಗುಡುತ್ತಲೇ ಕ್ಲಿಕ್ ಮಾಡಿದೆವು. ನಂತರದ ದಿನಗಳಲ್ಲಿ ರಾಹುಲ್ ಸ್ಟ್ಯಾಗ್‌ಡೀರ್ ಎಂದು ಪೋಸ್ಟಿಸಿದಾಗ ಒಬ್ಬರು ಸ್ಟ್ಯಾಗ್‌ಡೀರ್ ಅಲ್ಲವೆಂದು ಕಾಮೆಂಟಿಸಿದರು. ಸ್ಟ್ಯಾಗ್‌ ಬೀರ್ ಬಗ್ಗೆ ಕೇಳಿದ್ದೆವು. ಸ್ಟ್ಯಾಗ್‌ಡೀರ್ ಬಗ್ಗೆ ಕೇಳಿದ್ದೆವು. ಆದರೆ ಪಕ್ಷಿಪ್ರಿಯರಾದ ನಮಗೆ ಯಾವುದೋ ಜಿಂಕೆಯನ್ನು ಸ್ಟ್ಯಾಗ್‌ಡೀರ್ ಎಂದು ನಂಬಿಸಿ ಚಿತ್ರ ತೆಗೆಸಿದವನಿಗೆ ಎಷ್ಟು ಜ್ಞಾನ ಇದೆ ಎನ್ನುವುದಂತೂ ಸಾಬೀತಾಯ್ತು, ನಮಗೂ ಕೂಡಾ. ಕೊನೆಗದು ವೆಸ್ಟರ್ನ್ ಹಾಗ್ ಡೀರ್ ಎನ್ನುವುದು ಗೊತ್ತಾಯಿತು. ಒಟ್ಟಿನಲ್ಲಿ ಯಾವುದೋ ಒಂದು ಡೀರ್ ಎನ್ನುವುದು ಗ್ಯಾರಂಟಿಯಾಯಿತು.

ಗಂಟೆ ಹತ್ತು ದಾಟಿದ್ದರಿಂದ ರಿಸಾರ್ಟಿಗೆ ಮರಳಿದೆವು. ರಿಸಾರ್ಟಿನಲ್ಲಿ ಬರುವ ಹಕ್ಕಿಗೆ ಕಾಯುತ್ತಾ ಕುಳಿತೆ. ಪಾಪಿ ರಾಮೇಶ್ವರಕ್ಕೆ ಹೋದರೂ ಮೊಣಕಾಲುದ್ದ ನೀರೆನ್ನುವಂತೆ ಮಾಮೂಲಿ ಹಕ್ಕಿ ಬಿಟ್ಟರೆ ಊರಾಚೆ ಇದ್ದ ರಿಸಾರ್ಟಿನತ್ತ ಬರಲೇ ಇಲ್ಲ. ಟೈಗಾ ಫ್ಲೈಕ್ಯಾಚರ್ ಆಗಾಗ್ಗೆ ಬಂದು ರಿಸಾರ್ಟಿನ ಪಕ್ಕ ಹರಿಯುತ್ತಿದ್ದ ಕೊಚ್ಚೆನೀರಿನಲ್ಲಿ ಆಳವಾದ ಅಧ್ಯಯನ ಮಾಡುತ್ತಿತ್ತು. ಕೊಚ್ಚೆನೀರಿನ ಗಮಲು ಮೂಗಿಗೆ ಹೊಡೆದರೂ ಹಕ್ಕಿಯಾಸೆಯಿಂದ ಮನಸ್ಸಿಗೆ ತಂದುಕೊಳ್ಳದೆ ಕಾಯುತ್ತಿದ್ದೆ. ಅಷ್ಟಕ್ಕಾದರೂ ಕನಿಕರ ತೋರಿಸಿ ಟೈಗಾ ಸರಿಯಾಗಿ ಪೋಸ್ ಕೊಡಬೇಕಿತ್ತು. ಆದರೆ ಕೊಡದೆ ಪರಾರಿಯಾಯಿತು. ರಿಸಾರ್ಟಿನಲ್ಲಿದ್ದಷ್ಟು ಹೊತ್ತು ರೂಮಿನಲ್ಲಂತೂ ಇರಲಿಲ್ಲ.

ಊಟದ ಬಳಿಕ ಮತ್ತೊಮ್ಮೆ ಪ್ರಯಾಣ, ಎಲ್ಲಿಗೆ ಎಂದದ್ದಕ್ಕೆ ಅದೇ ಪಾರ್ಕಿಗೆ. ನಾನಂತೂ ನಡೆದು ಆ ಇಳಿಜಾರಿನಲ್ಲಿ ಬರುವುದಿಲ್ಲ ಎಂದು ಅಲ್ಲಿದ್ದ ಕಟ್ಟಡದ ಮೇಲಿನ ವೀಕ್ಷಣಾ ಗೋಪುರ ಏರಿದೆ. ಮತ್ತೆ ಏನು ಸಿಕ್ಕಿತೆಂದರೆ ಜನವೋ ಜನ. ಹೇಳಿಕೇಳಿ ಕ್ರಿಸ್ಮಸ್ ರಜಾದಿನ. ಪರಿವಾರ, ಮಿತ್ರರ ಜೊತೆ ಬಂದಿದ್ದವರೆ. ಅವರೆಲ್ಲರ ಕಣ್ಣಿಗೆ ನಾನಂತೂ ಗುರಿಯಾದೆ. `ಈ ಹೆಂಗಸು ಕ್ಯಾಮೆರಾಗೆ ಇಷ್ಟುದ್ದದ ಲೆನ್ಸ್ ಕೂಡಿಸಿಕೊಂಡು ಇಲ್ಲೇನು ಮಾಡುತ್ತಿದ್ದಾಳೆ’ ಎಂಬ ನೋಡುಗರ ಕುತೂಹಲದ ನೋಟಕ್ಕೆ ಗುರಿಯಾದದ್ದಕ್ಕೆ ಉತ್ತರವಾಗಿ ಒಂದು ಹಕ್ಕಿಯಾದರೂ ಬರಬಾರದೆ. ಕೊನೆಗೆ ಬೆಳಿಗ್ಗೆ ಕಂಡಿದ್ದ ಜಿಂಕೆ ಅಡ್ಡಾಡುತ್ತಿತ್ತು. ಇರಲಿ ಬಿಡು ಎಂದು ಅದನ್ನೇ ಕ್ಲಿಕ್ ಮಾಡ್ತಾ ಇದ್ದಂತೆ ಸುತ್ತ ಅಡ್ಡಾಡುತ್ತಿದ್ದವರಿಗೆ ಇಷ್ಟುದ್ದದ ಕ್ಯಾಮೆರಾದಲ್ಲಿ ಹೇಗೆ ಕಾಣುತ್ತದೆ ಎಂಬ ಕುತೂಹಲ. ನಾವೂ ಇದರಲ್ಲಿ ನೋಡಬಹುದೆ ಎಂಬ ಆಸೆಗಣ್ಣಿನ ಕೋರಿಕೆ, ಇಲ್ಲವೆನ್ನಲಾಗದೆ ಕೇಳಿದವರಿಗೆಲ್ಲಾ ಬಯಾಸ್ಕೋಪ್ ತೋರಿಸುತ್ತಿದ್ದೆ. ಒಬ್ಬೊಬ್ಬರಿಗೂ ಹತ್ ರೂಪಾಯಿ ಛಾರ್ಜ್ ಮಾಡಿದ್ದರೆ ಒಂದೈನೂರು ರೂಪಾಯಿ ಸಂಪಾದಿಸಬಹುದಿತ್ತು. ಯಾವುದೇ ಛಾರ್ಜ್ ಮಾಡದೆ ಫ್ರೀನೋಟ ಕೊಡಿಸಿದ್ದೆ. ಅಷ್ಟುಹೊತ್ತಿಗೆ ಇಳಿಜಾರಿನಲ್ಲಿ ಇಳಿದುಹೋದವರು ತಮ್ಮ ಕ್ಯಾಮೆರಾ ಹೊತ್ತುಕೊಂಡು ಗೊಣಗೊಣ ಎನ್ನುತ್ತಾ ಮೇಲೆ ಬಂದರು. ಅಲ್ಲಿಗೆ ಆ ಎರಡನೆ ದಿನವೂ ಮುಗಿದೇಹೋಯ್ತು. ಗೈಡ್ ಹೇಳಿದ ಪಟ್ಟಿಯಲ್ಲಿದ್ದ ಹಕ್ಕಿಗಳು ಇನ್ನೂವರೆಗೂ ಕಣ್ಣಿಗೆ ಬಿದ್ದಿರಲೇ ಇಲ್ಲ. ನೋಡೋಣ ಇನ್ನೂ ಐದು ದಿನ ಇದೆಯಲ್ಲ ಎಂಬ ಸಮಾಧಾನ. ರೂಮಿಗೆ ಬಂದವರನ್ನು ಪ್ಯಾಕ್ ಮಾಡಿಸಿ ಮತ್ತೆ ಕರೆದುಕೊಂಡು ಹೋಗಿ ಇಂಫಾಲದಲ್ಲೆ ಇನ್ನೊಂದು ರಿಸಾರ್ಟಿನಲ್ಲಿ ಬಿಟ್ಟರು.

ಮರುದಿನ ಮತ್ತೆ ಮತ್ತೊಂದು ಪಾರ್ಕಿನತ್ತ ಪ್ರಯಾಣ. ಅಲ್ಲೇನೋ ದೂರದೂರಕ್ಕೆ ಒಂದೊಂದು ಹಕ್ಕಿಗಳು ಕಾಣಸಿಕ್ಕವು, Blue throated barbet, Green billed malkoha, white eye… ಹೀಗೆ ನಮ್ಮ ಹಳೆಯ ಹಕ್ಕಿ ನಂಟರು. ಮಣಿಪುರದಲ್ಲಿ Manipur Fulvetta ಕೂಡಾ ಕಾಣಸಿಗಲಿಲ್ಲ. ಹತ್ತಿರದಲ್ಲೊಂದು ಜಲಪಾತ ಇದೆ, ಅಲ್ಲಿಗೆ ಹಕ್ಕಿಗಳೂ ಬರುತ್ತವೆ ಬನ್ನಿ ಎಂದು ಗೈಡ್ ಅವರೆಲ್ಲರನ್ನೂ ಕರೆದುಕೊಂಡು ಹೋದ. ಅಷ್ಟೆತ್ತರದ ಮರಗಳ ಸಂಧಿಯಲ್ಲಿ ಹಕ್ಕಿ ಹುಡುಕಿಕೊಂಡು ಕ್ಯಾಮೆರಾ ಹೊತ್ತು ಮೂರ್ನಾಲ್ಕು ಕಿ.ಮೀಟರ್ ನಡೆಯುವ ಶ್ರಮ ತೆಗೆದುಕೊಳ್ಳಲು ನನಗೆ ಕಾಲು ಅನುಮತಿ ಕೊಡಲಿಲ್ಲ. ಹಾಗಾಗಿ ಅಲ್ಲೇ ಸುತ್ತಮುತ್ತ ಸುತ್ತಾಡಿಕೊಂಡು ಕಂಡ ಹಕ್ಕಿಗಳನ್ನು ಹಿಡಿಯುವ ಪ್ರಯತ್ನದಲ್ಲಿದ್ದೆ.

ಎರಡು ಮೂರು ಗಂಟೆ ಸುತ್ತಾಡಿದ ಹಕ್ಕಿ ವೀರರು ಮರಳಿ ಬಂದರು. ಸಹಪ್ರವಾಸಿಗಳಾಗಿದ್ದ ಕುಟುಂಬದ ಹಿರಿಯ ಮಗ ಹಕ್ಕಿ ಟೂರಿಗಾಗಿ ರಜಾ ಹೊಂದಿಸಿಕೊಂಡು ವಿದೇಶದಿಂದ ಬಂದಿದ್ದ. ಹಾಗಾಗಿ ಸಿಕ್ಕಿದೆಲ್ಲಾ ಹಕ್ಕಿಗಳಿಗೂ ಕ್ಯಾಮೆರಾ ತೋರಿಸುತ್ತಿದ್ದ. ಆದರೆ ರಾಹುಲ್ ತಣ್ಣನೆಯ ಜಲಪಾತದ ಬಳಿ ಹೋಗಿಯೂ ಹೊತ್ತಿ ಉರಿಯುತ್ತಿದ್ದ. ಯಾಕೆಂದರೆ ಹೊತ್ತುಹೋದ ಅವನ ಕ್ಯಾಮೆರಾಕ್ಕೆ ಕೆಲಸವನ್ನೇ ಕೊಟ್ಟಿರಲಿಲ್ಲ. ರಾಹುಲ್ ಚಿತ್ರ ತೆಗೆಯೋದು ಅಂದರೆ ಅದು ಪಕ್ಕಾ ಪರ್ಫೆಕ್ಟ್ ಆಗಿರಲೇಬೇಕಿತ್ತು. ಯಾವುದರ ರೆಕಾರ್ಡ್ ಷಾಟ್  ಕೂಡಾ ಖಂಡಿತಾ ಮಾಡುತ್ತಿರಲಿಲ್ಲ. ನನ್ನಂತಹವಳಿಗೆಯೆ ಮೂರನೆ ದಿನವೂ ವೇಸ್ಟ್ ಅನ್ನಿಸಿದ್ದರೆ ರಾಹುಲನಿಗೆ ಹೇಗೆ ಆಗಿರಬಹುದು ಎನ್ನುವುದು ಊಹಾತೀತ. ಮರಳಿ ಬಂದವರನ್ನು ಮಧ್ಯಾಹ್ನ ಮತ್ತದೇ ಇಂಫಾಲದ ಮಾರ್ಷ್ ಲ್ಯಾಂಡ್, ಅಲ್ಲೇ ಸುತ್ತಾಟ ಹೊಸದೇನೂ ಇರಲಿಲ್ಲ. ಈ ಮಧ್ಯೆ ರಾಹುಲ್ ತಂದೆ ತಾಯಿಯರಿಗೆ ಇಂಫಾಲದ ಸುತ್ತಾಟ ಮಾಡಿಸಲು ಖುಷ್ಬೂ ಗೈಡ್ ಅಭಿಷೇಕ್ ಜೊತೆ ಮಾತಾಡಿ ನಿಶ್ಚಯಿಸಿದ್ದರು. ಅದಕ್ಕಾಗಿ ಅವರಿಗೆ ಒಂದು ವಾಹನದ ಅನುಕೂಲ ಮಾಡಿಕೊಡಲೂ ದುಡ್ಡು ಪಡೆದಿದ್ದ ಎಂದು ಖುಷ್ಬೂ ಹೇಳಿದ್ದರೂ ಆತ ವ್ಯವಸ್ಥೆ ಮಾಡಿಕೊಡಲಿಲ್ಲ. ಕೊನೆಗೆ ಅವರಿಬ್ಬರೆ ರಿಸಾರ್ಟ್ ಮಾಲೀಕರ ಬಳಿ ಮಾತಾಡಿಕೊಂಡು ಬೇರೆ ವ್ಯವಸ್ಥೆ ಮಾಡಿಕೊಂಡು ಇಂಫಾಲ ನೋಡಿ ಬಂದಿದ್ದರು.

‍ಲೇಖಕರು avadhi

August 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: