ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಾಕಪ್ಪಿನೊಳಗಿನ ದಿನಗಳು..

ಬೀಗ ಜಡಿದಿರುವ ಹೋಟೆಲ್ಲು ಮತ್ತು ಲಾಕಪ್ಪಿನೊಳಗಿನ ದಿನಗಳು

ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಹಗಲೂ ಕತ್ತಲಾದಂತೆ ಬಾಸವಾಗುತಿದೆ
ನಿರ್ಜನ ರಸ್ತೆಗಳು, ಮನೆಬಾಗಿಲುಗಳು ಮುಚ್ಚಿವೆ
ಹೆದರುವಂತೆ ಅರಚುವ ನಾಯಿಗಳು
ಧಾರ್ಮಿಕ ಬಿಕ್ಕಟ್ಟಿಗಾಗಿ ನಡೆದ
ಕರ್ಪ್ಯೂ ಇರಬಹುದು ಅಲ್ಲಲ್ಲಿ ನಾಲ್ಕೈದು ಜನ ನಿಲ್ಲುವಹಾಗಿಲ್ಲ
ಅಲ್ಯಾರೋ ಟೈರ್ ಗೆ ಬೆಂಕಿ ಹಚ್ಚಿದ್ದಾರೆ
ಅನ್ನೋ ವಾರ್ತೆಯು ಇಲ್ಲ
ಮೇಲಿಂದಮೇಲೆ
ಕಿಡಕಿಯಿಂದಲೇ ಕೇಳಿ ಬೆಚ್ಚಿಬೀಳುವ
ಪೋಲಿಸರ ಎಚ್ಚರಿಕೆಯ ಸಂದೇಶ ಬೇರೆ
ಅಬ್ಬಾ!!!

ಎದುರುಮನೆಯಲ್ಲಿ ಸಾವಾಗಿದೆ
ಬಂಧುಬಳಗವೂ ಇಲ್ಲ
ಯಾರೂ ಅಳುವ ಶಬ್ದ ಕೇಳುತ್ತಿಲ್ಲ,
ತಮಟೆ ಜಾಗಟೆಗಳಿಲ್ಲ
ದೂರ ದೇಶದಲ್ಲಿರುವ ಅವನ ಮಗ
ಇನ್ನು ಬಂದಿಲ್ವಂತೆ ಅನ್ನೊರಿಲ್ಲ
ಸ್ಮಶಾನದಲಿ ಬುರುಡೆಯೊಡೆದಾಗ ಆಗುವ ಶಬ್ದಕ್ಕೆ ಹೆದರಿ ಭಯದಿಂದ ಜ್ವರಬರಬೇಕಿತ್ತು
ಇದ್ಯಾಕೆ ಹೀಗಾಯ್ತು…!!?

ಬಸ್ಟಾಪಿನ ಅಂಚಿಗೆ ನಿಂತು
ಟೀ ಬನ್ನು ಮಾರುವವನು ಕಾಣೆಯಾಗಿದ್ದಾನೆ
ಹೆಂಗೆಳೆಯರ ಮನಸೆಳೆದು ಹೂಮಾರುವ ಹೂಗಾರನ ಜಾಗದಲ್ಲಿ ಅದೆಂತದೋ ಟೆಂಟು ಹಾಕಿದ್ದಾರೆ
ರಸ್ತೆ ಬದಿಯಲ್ಲಿ ಕುಳಿತು ಚಪ್ಪಲಿ
ಹೊಲಿಯುತ್ತಿದ್ದವನು
ಪೋಲಿಸ್ ಸ್ಟೇಷನ್ನಿನ ಅತಿಯಾಗಿರುವ ಸುದ್ಧಿ
ಬೀಗ ಜಡಿದಿರುವ
ಪೈಸ್ಟಾರ್ ಹೋಟೆಲಿಗೆ ಯುಗಾದಿಯಲಿ
ಅಲಂಕರಿಸಿದ ವಿದ್ಯುತ್ ದೀಪಗಳಿನ್ನೂ ಹಾಗೆ ಹೊಳೆಯುತ್ತಲೇ ಇವೆ…

ರಾತ್ರಿ ವಿಶ್ರಾಂತಿಗೆಂದು
ಊರ ಹೊರಗೆ ನಿಲ್ಲಿಸಿದ ಲಾರಿಗಳು
ನಾಲ್ಕೈದು ದಿನದಿಂದ ನಿಂತಲ್ಲಿಯೇ ನಿಂತಿವೆ
ಅವರೇಕೆ ಹೋಗುತ್ತಿಲ್ಲ
ಎಲ್ಲಿಂದ ಬಂದಿದ್ದಾರೋ ಎಲ್ಲಿಗೆ ಹೋಗಬೇಕೊ
ಆ ಚಾಲಕರ ಮನೆಯವರು
ಅಚಾನಕ್ಕಾಗಿ ಆಚೆ ಬಂದುಬಿಟ್ಟರೇ
ಹೇಗೆ?
ಛೇ.. ಈ ಭಯ ಅವನಲ್ಲಿಯೂ ಮೂಡಿರಬಹುದು
ಮತ್ತದೇ ಭಯ ನನ್ನಲ್ಲಿಯೂ ಯಾಕೆ ಮೂಡುತ್ತಿದೆ??

ಹೊರಗೆ ಹೆಜ್ಜೆ ಇಡುವಾಗೊಮ್ಮೆ ಅವ್ವ
ಹುಷಾರು ಮಗನೇ ಎನ್ನುತ್ತಾಳೆ
ಯಾಕೆ ಹೇಳಿದಳೆಂದು ಯೋಚಿಸುವುದಕ್ಕೂ
ಆಗುತ್ತಿಲ್ಲ..
ದಿನಾಲು ಕೂಡಿ ಆಡುವ ಮಕ್ಕಳು
ಅವರವರ ಮನೆಯ ಕಂಪೌಡಿನಲ್ಲೇ ನಿಂತು
ಪರಸ್ಪರ ಹಾಯ್ ಎನ್ನುತ್ತಿವೆ..ಅಷ್ಟೇ..
ಮತ್ತೆ ಮುಂದಿನದೇನೂ ಇಲ್ಲ
ಏನಾಗಿದೆಯೋ ತಿಳಿಯುತ್ತಿಲ್ಲ ಹಾಳಾದ್ದು
ಬೆಳಿಗ್ಗೆ ಬರುವ ಪತ್ರಿಕೆಯೂ ಇತ್ತೀಚೆಗೆ ಬರುತ್ತಿಲ್ಲ..
ಅಂದಹಾಗೆ ಹಸಿವಾದರೆ
ಬಸ್ಸನ್ನು ದಿನಾಲು ಹತ್ತಿ ಇಳಿದು
ಹಮಾಲಿ ಮಾಡುವವನು ಏನು ಮಾಡುತ್ತಾನೆ?
ಪಕ್ಕದ ಮನೆಗೆ ಜೀವನದಾಸರೆಗಾಗಿ
ಕಸಮುಸುರೆ ತಿಕ್ಕಲು ಬರುವ
ಕೆಲಸದವಳು ಎಲ್ಲಿ ಹೋದಳು?
ಯಾಕೇ ಹೀಗೆ ಹಗಲು ಕತ್ತಲಾಗಿ ಬದಲಾಗಿದೆ
ದಿನಗಳೆಲ್ಲ ಲಾಕಪ್ಪಿನ ಸರಳುಗಳೊಳಗೆ ದಿಗ್ಭಂದನಗೊಂಡು ಕುಳಿತಿವೆ..

‍ಲೇಖಕರು avadhi

1 April, 2020

3 Comments

  1. ಸಚಿನ್‌ಕುಮಾರ ಬ.ಹಿರೇಮಠ

    ಸಾಕಷ್ಟು ಹತಾಶೆಯಲಿ ಗೃಹಬಂಧನದ ಬಗ್ಗೆ ಬರೆದಿದ್ದೀರಿ.ಇದೆಲ್ಲವೂ ಸ್ವಯಂಕೃತ ಅಪರಾಧ. ನಮ್ಮ ಅಳಿವಿಗೆ ನಾವೇ ಕಾರಣ‌ ಎಂಬಂತೆ ಶಾಂತಿಯ ಮೌನಕ್ಕೆ ಕ್ರಾಂತಿ ಬೆರೆಸಲು ಹೋಗಿ ತಂದುಕೊಂಡ ನಿರೀಕ್ಷಿತ ವಿಪತ್ತು… ಅನುಭವಿಸಲೇಬೇಕು…

    • ಸುರೇಶ ರಾಜಮಾನೆ

      ತುಂಬಾ ಧನ್ಯವಾದಗಳು ಸರ್

  2. Kotresh T A M Kotri

    ಜೀವಪರವಾದ ಕವಿತೆ.
    ಎಲ್ಲರ ದನಿಯೂ ಕವಿತೆಯಲ್ಲಿ ತುಂಬಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading