ಲಲಿತಾ ಸಿದ್ಧಬಸವಯ್ಯ ಕಂಡಂತೆ ‘ರತಿಯ ಕಂಬನಿ’

ಲಲಿತಾ ಸಿದ್ಧಬಸವಯ್ಯ

ಪುರಾಣಕಾಲದ್ದೊಂದು ಕತೆಯಿದೆ. ಶಿವನು ಕಾಮನನ್ನು ಸುಟ್ಟ ಕತೆ. ಆ ಕತೆಯಲ್ಲಿ ಧ್ಯಾನಭಂಗವಾಯ್ತೆಂದು ಸಿಟ್ಟಿಗೆದ್ದ ಮಸಣರುದ್ರ ಕಣ್ತೆರೆದು ಮಾಡಿದ್ದು ಎರಡು ಕಾರ್ಯಗಳು. ಒಂದು ಕಾಮನನ್ನು ಸುಟ್ಟದ್ದು. ಇನ್ನೊಂದು `ಪಾರು’ವನ್ನು ವರಿಸಿ, ಕೂಡಿ ಕುಮಾರನನ್ನು ಸಂಭವಿಸಿದ್ದು. ಈ ಎರಡನೆಯ ಕಾರ್ಯದಲ್ಲಿ, ಕಾಯ್ದಿದ್ದ ಉಮೆಗೆ, ಕಾಯ್ದಿದ್ದ ದೇವ ಸಮುದಾಯಕ್ಕೆ, ಸ್ವತಃ ಒಂಟಿ ಶಿವನಿಗೂ ಲಾಭವಾಯ್ತು. ಆದರೆ ಮೊದಲನೆಯ ಕಾರ್ಯದಲ್ಲಿ? ಅದನ್ನು ಪುರಾಣ ಕತೆ ಹೇಳುವುದಿಲ್ಲ, ನಂದಿನಿಯವರು ಹೇಳುತ್ತಾರೆ.

ಒಂದು ಜನ ಸಮುದಾಯವನ್ನು ಕಾಪಾಡಲು ಕಾಮದೇವನು ಸತ್ತದ್ದು ಸರಿ ಎಂದಷ್ಟೇ ಹೇಳಿ ಕೈ ತೊಳೆದುಕೊಳ್ಳುತ್ತದೆ ಪುರಾಣ ಕತೆ. ಆಯಿತು, ಸತ್ತವನನ್ನು ಜಗತ್ತಿನ ಮೊದಲ ಹುತಾತ್ಮ ಎಂದೇ ಇಟ್ಟುಕೊಳ್ಳೋಣ. ಸತ್ತವನು ಅತ್ತ ಸಂಪೂರ್ಣವಾಗಿ ಸತ್ತುಬಿಟ್ಟಿದ್ದರೆ ಒಂದೆರಡು ದಿನವೊ, ವಾರವೋ ಅತ್ತು ಅವನ ಹೆಂಡತಿ ರತಿಹುಡುಗಿ ಮುಂದಿನ ದಾರಿ ನೋಡಿಕೊಳ್ಳುತ್ತಿದ್ದಳು. ಹಾಗಾಗಲಿಲ್ಲ. ಅವನನ್ನು ಅರೆಜೀವವಾಗಿರಲು ಉದಾರತೆಯಿಂದ ವರ ಕರುಣಿಸಿದರು ಮಹಾದೇವರು. ಆ ಪ್ರಕಾರ ಸತ್ತವನಿಗೆ ಮನಸ್ಸಿದೆ, ದೇಹವಿಲ್ಲ. ಆ ಮನಸ್ಸಿನ ಜೊತೆಗೆ ರತಿಯು ಹೇಗೆ ಸಂಸಾರ ಮಾಡಬೇಕು? ಈ ಪ್ರಶ್ನೆಯನ್ನು ಮಹಾದೇವ ಕೇಳಿಕೊಳಲಿಲ್ಲ, ಈ ಕವಯಿತ್ರಿ ಕೇಳಿಕೊಂಡರು, ಬಹುಶಃ ಈ ಕತೆ ಹುಟ್ಟಿದ ಏಸೋ ಸಾವಿರ ವರ್ಷದ ತರುವಾಯ ಮೊಮ್ಮೊದಲಿಗೆ!!

ಸಂತೈಸುವರು ಎಲ್ಲಾ
ಏನಾಗಲಿಲ್ಲ ಬಿಡೆ
ಕಾಮನಿನ್ನು ಚಿರಾಯು
ಅಂಗವಿರದ ಹೆಳವ ಅಷ್ಟೇ…
ನಿನ್ನ ತಿಟ್ಟೆ ದಿಣ್ಣೆ ಆಲಯ ನಿಲಯಗಳಲಿ
ಭ್ರಮೆಯ ಬೆರಳಾಡುವವು
ಅಳುತೀಯ ಯಾಕೇ ರತೀ
ಸುಖದಲೇನೂ ಕೊರತೆಯಾಗದೇ

ಲೋಕಕ್ಕೆ ಇಷ್ಟೇ ಗೊತ್ತು, ಸತ್ತವರ ಮನೆಯಲ್ಲಿ ಒಂದೆರಡು ಮಾತಿನ ಸಮಾಧಾನ, ಅಗತ್ಯವಿದ್ದರೆ ಒಂದೆರಡು ದಿನಕ್ಕೆ ಊಟದ ವ್ಯವಸ್ಥೆ. ಆದರೆ ರವಿಕೆಯೊಳಗೆ ಕಾಮನ ಬೆರಳುಗಳಾಡುವಾಗಿನ ಹಿತವನ್ನು ಕಣ್ಣುಮುಚ್ಚಿ ಸುಖಿಸುತ್ತಿದ್ದ ಆ ಹುಡುಗಿಗೆ ಆ ಬೆರಳೇನಿದ್ದರೂ ಇನ್ನು ಮುಂದೆ ನನ್ನ ಕಲ್ಪನೆಯಲ್ಲಿ ಮಾತ್ರ ಎಂಬ ಕ್ರೂರಸತ್ಯ ಗೊತ್ತಾಗಿದೆ. ಎಳೆಹುಡುಗಿಯ ಮೈ ತುಂಬ ಬಯಕೆಯ ಬೆಂಕಿ. ಆ ಬೆಂಕಿ ತಣಿಸಲು ‘ಇಗೋ ನಿನ್ನ ಗಂಡನುರಿದ ಬೂದಿಗುಡ್ಡೆಯಿದೆ ಹೊರಳಾಡು’ ಎಂದು ಶಿವದೇವರು ಅನುಗ್ರಹಿಸಿ ಹೊಸ ಹೆಂಡತಿಯ ಕೂಟಕ್ಕೆ ಹೊರಟಿದ್ದಾರೆ. ಈ ಹಳೆಗಂಡನ ಹೊಸ ಕೇಳಿಗೆ ಅನುವುಗೊಳಿಸಲು ಹಿಂದೆಯೆ ಹೊರಟಿದೆ ದೇವಗಣ. ರತಿಹುಡುಗಿ ಮಾತ್ರ ಕುಂತಿದ್ದಾಳೆ ಪ್ರಶ್ನೆಗಳನ್ನು ಹರಡಿಕೊಂಡು ಕಂಬನಿ ಸುರಿಸಿಕೊಂಡು.

‘ತಡರಾತ್ರಿ ತುಟಿಯ ಸುಖಿಸುತ್ತಿದ್ದವನ ತಬ್ಬಹೋದ’ ಹುಡುಗಿಗೆ ಏನೇನೂ ಸಿಗದೆ ತಬ್ಬಿಬ್ಬಾಗಿದ್ದಾಳೆ. ಅತ್ತ ಕೈಲಾಸದಲ್ಲಿ ಶಿವೆಗೆ ಕಾರ್ತೀಕ ಹುಟ್ಟಿದ್ದಾನೆ. ಮಕ್ಕಳು ಬೇಡವೆಂದ ಗಂಗೆಗೆ ಗುಳಿಗೆಗಳೂ ಸಪ್ಲೈ ಆಗಿದ್ದಾವೆ. ಆದರಿತ್ತ ಹುತಾತ್ಮನ ಪತ್ನಿಗೆ? ಅವಳು ಗಂಡನ ಕಾಯಸುಖಕ್ಕೂ ಹಕ್ಕುದಾರೆ, ಮನಃಸುಖಕ್ಕೂ ಹಕ್ಕುದಾರೆ. ಆದರೆ ಕೇಳುವುದಾರನ್ನು ಹಕ್ಕುಗಳ ಕುರಿತು? ‘ಗರ್ಭಗುಡಿಯೇ ಅನ್ಯಾಯದ ತವರು!’

ಗಂಡು ಹೆಣ್ಣಿನ ನಡುವಿನ ಈ ದೇಹ ಮನಸ್ಸುಗಳ ತರ್ಕ ಶಿವಪುರಾಣದಷ್ಟೇ ಹಳೆಯದು. ಈ ಕತೆಯಲ್ಲಿ ಕಾಮನ ಬದಲಾಗಿ ರತಿಯೇ ದಹನಗೊಂಡಿದ್ದರೆ, ಮರುಕ್ಷಣವೇ ಕಾನೂನುಸೀರ ಹೊಸ ರತಿಯ ವ್ಯವಸ್ಥೆಯಾಗುತ್ತಿತ್ತು. ಕಾನೂನುಗಳನ್ನು ಲಾಗಾಯ್ತಿನಿಂದ ಅವರಿಗೆ ಅನುಕೂಲಕರವಾಗಿಯೆ ರಚಿಸಲಾಗಿದೆ. ಈಗ ಹುಡುಗಿಯನ್ನೇನು ಮಾಡುವುದು? ಕಾಲ್ಪನಿಕ ದೇಹಸುಖದ ಅಮಲಿಗೆ ತಳ್ಳಿಬಿಡುವುದು. ಆಮೇಲೆ ಜಾರೆಯೋ, ಕುಟಿಲೆಯೋ, ತಿಕ್ಕಲೋ, ಏನೋ ಒಂದು ಹೆಸರಿಟ್ಟು ನಿವಾರಿಸಿ ಬಿಡುವುದು. ಹೆಣ್ಣಿನ ತನುವಿನಲ್ಲೂ ಹಾರ್ಮೋನು ದ್ವಾರಾ ಆಸೆಗಳುಂಟಾಗುತ್ತವೆ ಎಂಬುದೇ ಅಪಥ್ಯ, ಕೆಲವು ಸಲ ಹೆದರಿಕೆ, ಕಾನೂನಿಗೆ.

ಈ ‘ರತಿಯ ಕಂಬನಿ’ ಹೆಸರಿನ ಒಂದು ಕವನದ ಬಗ್ಗೆಯೆ ಇಷ್ಟು ವಿವರವಾಗಿ ಮಾತನಾಡಿದ್ದಕ್ಕೆ ಕಾರಣವಿದೆ. ನಂದಿನಿಯವರ ಈ ಸಂಕಲನದ ಮುಕ್ಕಾಲು ಮೂರುವೀಸೆ ಕವನಗಳು ರತಿಯ ಕಂಬನಿಗಳೇ! ಒಂದು ಹಿಡಿಗಾತ್ರದಷ್ಟು ಕವನಗಳು ಅತ್ತಿತ್ತ ಹೊರಳಿರುವುದನ್ನು ಬಿಟ್ಟರೆ, ಉಳಿದೆಲ್ಲವೂ ಬುಧ್ಯಾಪೂರ್ವಕ ಆಯ್ದುಕೊಂಡಿರುವುದು ಈ ರತಿನಾಯಕಿಯ ಹಾದಿಯನ್ನೆ.

ಅಲ್ಲಿ ಮುಚ್ಚಿಟ್ಟು ಮಾತನಾಡುವ ಸೋಗಿಲ್ಲ. ಹೇಳ ಬೇಕಾದುದರ ಬಗ್ಗೆ ಖಚಿತತೆ, ಸ್ಪಷ್ಟವಾಗಿ ಹೇಳುವ ಪ್ರಾಮಾಣಿಕತೆ, ಐವತ್ತು ಕವನಗಳಲ್ಲಿ ಪುನರಾವರ್ತಿತ ವಾಗುವ ಒಬ್ಬಳೇ ಕಾವ್ಯನಾಯಕಿಯನ್ನು ಪ್ರತಿ ಸಲವೂ ಹೊಸಬಳೆಂಬಂತೆ ಚಿತ್ರಿಸುವ ಪ್ರತಿಭೆ, ಪ್ರತಿ ಕವನದಲ್ಲೂ ವಸ್ತುವಿಗೆ ಪೂರಕವಾಗುವಂತೆ ಪ್ರತಿಮೆಗಳನ್ನು ಅನಾಯಾಸ ಸೃಜಿಸಬಲ್ಲ ಭಾಷಾಶಕ್ತಿ ಇವು ನಂದಿನಿಯವರ ಆಸ್ತಿ. Assets ಜೊತೆಗೆ Liabilities ವಿವರಗಳನ್ನೂ ವಾರ್ಷಿಕವರದಿಯಲ್ಲಿ ತೋರಿಸಬೇಕಾಗುತ್ತದೆ ಕವಿಗಳೂ!! ಅವನ್ನು ಮುಂದೆ ನೋಡೋಣ.

ಅವರು ಸೃಜಿಸಿರುವ ಒಬ್ಬಳೇ ನಾಯಕಿಯ ಐವತ್ತು ಶೇಡ್ ಎಷ್ಟು ಆಸಕ್ತಿದಾಯಕವಾಗಿವೆಯೆಂದರೆ ಅವಳ ಮೇಲೆ ಸಿಟ್ಟು ಬರುವಾಗಲೂ ಓದುಗರ ತುಟಿಯ ಮೇಲೆ ಅವು ನಸುನಗುವನ್ನು ಹುಟ್ಟಿಸುತ್ತವೆ. ಇಲ್ಲಿಯ ರತಿಹಂಬಲೆಯೊಬ್ಬಳು ‘ಮರಳುಗಾಡಿಗೂ ಆಗಾಗ ಅತಿವೃಷ್ಟಿಯ ಯೋಗವಿದೆ, ಅತಿಯೆಂದು ಹಂಗಿಸದಿರು, ಗಾಜು ನಾನೇ ಒರೆಸುತ್ತೇನೆ ನೀನು ಬೆಳಕು ಒಳಗಿಳಿಯಲು ಸಹಕರಿಸು ಪ್ರಭುವೇ’ ಎಂದು ಆರ್ತಳಾಗಿ ಪ್ರಾರ್ಥಿಸುತ್ತಾಳೆ. ಅವಳ ಆ ಬಯಕೆಯನ್ನು ಹೊಲ್ಲ ಎಂದು ಆ ಪ್ರಭುವಾದರೂ ಹೇಗೆ ನಿರಾಕರಿಸಬಲ್ಲ? ನಿರಾಕರಿಸಿದ್ದೇ ಆದರೆ ಅವನು ದೇವರಲ್ಲ. ಮನುಷ್ಯರ ನೀತಿಸಂಹಿತೆ ಯಾವುದನ್ನೂ ನಿರಾಕರಿಸಬಲ್ಲದು, ನಿಯಮ ಉಪನಿಯಮಗಳ ಸಿಕ್ಕಲಿನೊಳಗೆ ನಮ್ಮನ್ನು ಸಿಲುಕಿಸಿ.

ಕದಗಳ ತಟ್ಟುತ್ತ ತಟ್ಟುತ್ತ ಹೋಗುವ ಇನ್ನೊಬ್ಬಳು ಕಾವ್ಯ ನಾಯಕಿ, ತಾನು ಹಾಗೆ ತಟ್ಟಿದ ಬಹುಕದಗಳನ್ನು ತೆರೆವ ಮನೆಯೊಡೆಯರೆಲ್ಲರಿಗೂ, ನಾನು ಹುಡುಕುತ್ತಿದ್ದವ ನೀನಲ್ಲ ಎಂದು ಮುಖಕ್ಕಪ್ಪಳಿಸಿ ಹೇಳಿ ಅವರನ್ನು ತನ್ನ ಹೊಸ ಆಟದ ಸರಕುಗಳನ್ನಾಗಿಸಿ ವಿಚಿತ್ರ ವಿನೋದ ಅನುಭವಿಸುತ್ತ, ತನ್ನ ಬಹುಕಾಲದ ಸಜ್ಜೆಮನೆ ಹಸಿವಿನ ನಷ್ಟವನು ತುಂಬಿಕೊಳಲೆಳೆಸುತ್ತಾಳೆ. ಈ ನಾಯಕಿಗೆ ಏನೆನ್ನಬೇಕೆಂಬುದು ಬಹುತೇಕರಿಗೆ ಗೊತ್ತಾಗಲಾರದು. ಕಾರಣವಿಷ್ಟೇ, ಅಂತಹ ರಕ್ತಮಾಂಸವುಳ್ಳ ಕಾವ್ಯ ನಾಯಕಿಯರನ್ನು ನೀವು ಕಂಡೇ ಇಲ್ಲ, ಅಥವಾ ‘ನಾವು’ ನಿಮಗೆ ಕೊಟ್ಟೇ ಇಲ್ಲ. ಅಕಸ್ಮಾತ್ ಕೊಟ್ಟರೆ ಅವಳು ವ್ಯಾಂಪ್ ಅಮೃತಮತಿಯಾದಾಳೇ ಸಿವಾಯಿ ನಾಯಕಿ ಅಮೃತಮತಿಯಲ್ಲ.
ಇಲ್ಲಿನ ಇನ್ನೊಬ್ಬ ನಾಯಕಿಯು ಬಹು ಉದಾರವಾದಿ. ಒಂದು ನಾಯಕಮರಕ್ಕೆ ಹಾರಿ ಬರುವ ನೂರಾರು ನಲ್ಲೆಹಕ್ಕಿಗಳ ಬಗ್ಗೆ ಅವಳದೇನೂ ತಕರಾರಿಲ್ಲ. ಬದಲಾಗಿ ಆ ಎಲ್ಲರನ್ನೂ ಮೇಂಟೇನ್ ಮಾಡಿ, ಹಾಡು ಕಲಿಸಿ, ಎಲ್ಲರಿಂದಲೂ ಷಹಬ್ಬಾಸ್‌ಗಿರಿ ಪಡೆಯುವ ಮ(ಮಾ)ರನಾಯಕನ ಬಗ್ಗೆ ಅವಳಿಗೆ ಬಲುಮೆಚ್ಚುಗೆ.

ಮಗದೊಬ್ಬಳು ತನಗೊಲಿದವನು ಅಲ್ಲಿಯೂ ಇಲ್ಲಿಯೂ ಸಿಕ್ಕ ಸಿಕ್ಕ ಹೆಣ್ಗೊರಳುಗಳ ಮೇಲೆಲ್ಲ ದೇಶ ಕಟ್ಟುವ ಬೃಹಸ್ಪತಿಯೆಂದು ತಿಳಿದೂ, ಅವನನ್ನು ಘನತೆರದ ಗಂಡೇ ನನ್ನ ಆಡಮ್ಮನೇ ಎಂದು ಮುದ್ದಾಡಿ, ಹೋಗು ಹೋಗು ಅವಳ ಕಡೆಗೂ ಹೋಗಿ ಬಾ, ಎಂದು ಪ್ರೇಮಾರತಿ ಎತ್ತಿ ಕಾಮಕದನಕ್ಕೆ ಕಳುಹಿಸುವ, ಹೋದವನು ತಿರುಗಿ ತನ್ನಲ್ಲಿಗೆ ಬಂದೇ ಬರುತ್ತಾನೆಂಬ ಮದೋನ್ಮತ್ತ ವಿಶ್ವಾಸಿನಿ.

ಯಾವುದೋ ಹೆಸರಿಸಲಾಗದ ಬಿಕ್ಕಟ್ಟಿಗಂಜಿ ಹೀಗೆ ರಾಜಿ ಮಾಡಿಕೊಂಡಂತೆ ಕಂಡರೂ ಈ ನಾಯಕಿಯರು ಅಂತಹ ಮುಗ್ಧೆಯರಲ್ಲ. ಸ್ವತಃ ತಾನೇ ಏಕಕಾಲಕ್ಕೆ ಹಲಬಣ್ಣಗಳ, ಹಲರುಚಿಗಳ ಬಯಸುತ್ತ, ಚಂದಮಾಮ ಚೆಂದ ಎಂದರೆ ಚುಕ್ಕೆ ಯಾಕೆ ಬಿಕ್ಕಬೇಕು ಎಂಬ ಸಮರ್ಥನೆಯ ತರ್ಕ ಹೂಡಿ ಹಲ ಗೆಳೆಯರ ಬಾಯಿ ಮುಚ್ಚಿಸುವ ಛಾತಿಯ ನಾಯಕಿ ಇಲ್ಲುಂಟು. ರಾಜಿಗೆ ಬಗ್ಗಿದವಳಂತೆ ಕಂಡರೂ ಅದು ಅನುಭವಗಳಿಂದ ಕಲಿತ ಚಾತುರ್ಯ ಅಷ್ಟೇ. ಅದರಿಂದಲೇ ಸಾಲುಸಾಲು ಗೆಳತಿಯರ ಸರತಿಗೆ ನನ್ನನ್ನೂ ಸೇರಿಸಿಕೋ ಎಂದವಳು ಹೊಸಗೆಳೆಯನನ್ನು ನೇರವಾಗಿ ಕೋರುತ್ತಾಳೆ. ಈಗಾಗಲೆ ಇರುವ ಒಂದಿಬ್ಬರು ಗೆಳೆಯರ ಜೊತೆ ನೀನೂ ಇರುತ್ತಿ ಎಂದು ಸತ್ಯವನ್ನೇ ನುಡಿಯುತ್ತಾಳೆ. ಇಂತಹ ಗೆಳತಿಯರನ್ನೇ ನನಗೂ ಸಿಗಿಸೊ ದೇವ ಎಂದು ಎಲ್ಲಾ ಗಂಡುಗಳೂ ಬೇಡಬಹುದೇನೋ! ಆದರೆ ಅಂತಹ ನಾಯಕಿಯರು ಎಲ್ಲರಿಗೂ ಸಿಗುವುದು ಬೇಡ. ಪಾತಿವ್ರತ್ಯವು ಒಂದು ಬಗೆಯ ಅಮಲುಪದಾರ್ಥವಾದರೆ ಈ ಛಾತಿಯೂ ಇನ್ನೊಂದು ಅಮಲು ಪದಾರ್ಥ.

ನಾಯಕಿಯ ಈ ಛಾತಿಗೆ ಹಿನ್ನೆಲೆಯನ್ನೊದಗಿಸುತ್ತದೆ ಇನ್ನೊಂದು ಕವಿತೆ. ಇರುವೆರಡೇ ಕಾಲುಗಳ ಎರಡು ಬೆರಳಿಗೆ ಮಾತ್ರ ವಿವಿಧ ಡಿಸೈನುಗಳ ಕಾಲುಂಗುರ ತೊಡಿಸಿ, ಒತ್ತಿಸಿಕೊಂಡು, ಚುಚ್ಚಿಸಿಕೊಂಡು ಊದಿಸಿಕೊಂಡು, ಥರಾವರಿ ನೋವಿಗೆ ಉಪುö್ಪಕಾವು ಕೊಟ್ಟು ಒದರುವ ತನ್ನ ಗೋಳಿನ ಭಗವತಿಗೀತೆ ತನಗೇ ಬೇಜಾರಾಗಿ ಹೋದ ನಾಯಕಿ ಈ ಉಂಗುರೇತ್ಯಾದಿಗಳ ಸುತ್ತುಗಳನ್ನು ಹರಿದುಕೊಂಡು ರಾಜಾರೋಷವಾಗಿ ಜಗದೆದುರು ತೆರೆದುಕೊಳ್ಳುವ ಖುಷಿಗಾಗಿಯೆ, ಖುಷಿ ಪಡೆಯಲೋಸುಗವೇ ತಾನೇ ಹೆಜ್ಜೆ ಮುಂದೊಡಗುವಷ್ಟು ಛಾತಿವಂತಳಾದ ಹಾಗಿದೆ.

ರಾಜಾರೋಷ ಪ್ರಣಯದ ಬಗ್ಗೆ ಪಾಠ ಮಾಡಬಲ್ಲಂಥ ಪ್ರೇಮಗುರು ಒಬ್ಬ ನಾಯಕಿ. ಒಬ್ಬಳ ಕಣ್ತಪ್ಪಿಸಿ ಇನ್ನೊಬ್ಬಳ ತೆಕ್ಕೆಗೆ ಜಾರುವ ಚತುರ ಶಿಖಾಮಣಿ ಶಿವನೇ ಅವಳ ಶಿಷ್ಯ. ಈ ಶಿಷ್ಯನನ್ನು ದಬಾಯಿಸುತ್ತಾ ಅವಳು –
ಮೂರನೇ ಕಣ್ಣು ಮುಚ್ಚಿ
ಸುಮ್ಮನೇ ಮಲಗೊ ಶಿವನೊ
ನಿನಗೇನು ಗೊತ್ತು ರಾಜಾರೋಷ ಪ್ರೇಮದ ಬಗ್ಗೆ
ನಾನಾದರೋ ಜೋಡಿ ಹೆಜ್ಜೆ ಗುರುತುಗಳ ಬೇಜಾನು
ಬಿಟ್ಟುಬಂದಿರುವೆ ರೇವೆಯಲ್ಲಿ
ತೆರೆದುಕೊಳ್ಳುವದರ ಖುಷಿ ಪಾಠವ
ಓದಿಕೋ ಹೋಗಿ ಬೇಕಾದರೆ
ಆ ತೀರದಲ್ಲಿ
ಎಂದು ಖಡಕ್ ಮಾತಲ್ಲಿ ಹೇಳುವಳು. ಅವಳೆಷ್ಟು ಖುಲ್ಲಂಖುಲ್ಲ ಅಂದರೆ ಅವಳು ನೀಡುವ ಸಜ್ಜೆ ಆಹ್ವಾನವೂ ಕಡು ಖುಲ್ಲಂಖುಲ್ಲ!! ಎಡಬದಿಯ ಪ್ರೇಮ ಮೆತ್ತಗೆ ಬೆಂದಿದೆ, ಬಲಬದಿಯ ಕಾಮವನೂ ಮೆತ್ತಗಾಗುವಷ್ಟು ಬೇಯಿಸು ಬಾ! ಅವಳ ಈ `ಬಗೆ’ಯನ್ನು ಬದಲಾಯಿಸಿಕೊಳ್ಳಲು ತಿಳಿದವರಿಂದ ಆಗಾಗ ಆಣತಿಯಾಗುತ್ತದೆ, ಆದರವಳಿಗೆ ಅಪರೂಪದವನು ದೊರಕಿರುವಾಗ ಇಂತಹ ಆಣತಿಗಳೆಲ್ಲ ಲೆಕ್ಕದವಲ್ಲ. ಅವನು ಅವಳು ಮರುಜನ್ಮದಲ್ಲಿ ಹಡೆಯಬೇಕಾದವನು, ಹಾಲೂಡಬೇಕಾದವನು, ಅವಳಿಗೆ ಅಪ್ಪನಂತವನು.

ತನ್ನ ಈ ಪ್ರಿಯನನ್ನು ಎಷ್ಟು ಬಗೆಯಲ್ಲಿ ಕೂಡಿದರೂ, ಕೂಡಿದ್ದನ್ನು ಸೊಗ ಸೊಗದ ಪದಗಳಲ್ಲಿ ಎಷ್ಟು ಬಗೆಯಲ್ಲಿ ವರ್ಣಿಸಿದರೂ ನಾಯಕಿಗೆ ಬೇಸರವಿಲ್ಲ. ಎಷ್ಟು ಬಾಯಿಗೆ ಬೇಕಾದರೂ ಹೊಲಿಗೆ ಹಾಕಿ, ನೋಟಗಳಿಗೆ ಬಟ್ಟೆ ಕಟ್ಟಿ, ಒಂದು ಅಕಾಲದ ಪ್ರೇಮದಲ್ಲಿ ತೊಡಗುವುದೆಂದರೆ ಅದು ಆ ರತಿರೂಪೆಗೆ ಸುಖವಾದ ದುಃಖ! ಬೇಟಸುಂದರಿಯೊಬ್ಬಳು ಅನಾಮತ್ತು ಬುದ್ಧನನ್ನೇ ಇಲ್ಲಿ ಬಲೆಗೆ ಕೆಡವಿಕೊಂಡಿದ್ದಾಳೆ. ಅವಳೀಗ ಯಶೋಧರೆಯ ಹೊಸಸೋದರಿಯಂತೆ!! ಆ ಮಳ್ಳು ಯಶೋಧರೆ ತನ್ನ ಗಂಡನ ಈ ಹೊಸ ಪ್ರೇಯಸಿಯ ಬಾಣಂತನಕ್ಕೆ ನಿಂತಳಂತೆ.

ಈ ನಾಯಕಿಗೀಗ ಒದ್ದಾಡೋ ಒದೆಯೋ, ಮೊಲೆ ಕುಡಿಯೋ, ಇತ್ಯಾದಿ ಇತ್ಯಾದಿ ಬಹುರೂಪಿ ಬುದ್ಧಂದಿರು ಲಭ್ಯವಾಗಿದ್ದಾರೆ. ಇಲ್ಲಿ ನಾಯಕಿಗೆ ತನ್ನಂತಹ ಇನ್ನೊಂದು ಹೆಣ್ಣಿನ ದಾಂಪತ್ಯ ಕದಡಿದ ಅಪರಾಧೀ ಭಾವವು ಕಿಂಚಿತ್ ಇಲ್ಲ. ಸರಿಯೇ! ಇದ್ದುದಾದರೆ, ಇವಳನ್ನು ಬಯಸಿ ಕೂಡಿದ ವಿವಾಹಿತ ಬುದ್ಧನಿಗೂ ಆ ಅಳುಕು ಜರೂರಾಗಿರಬೇಕಿತ್ತಲ್ಲವೇ!! ಈ ಹಿರೇಹೆಂಡತಿಯ ಹಿಂಸಾತ್ಯಾಗದ ಶೋಷಣೆ ನಮ್ಮನ್ನು ಕೊರೆದರೂ, ಬುದ್ಧನನ್ನೇ ಅಲ್ಲಾಡಿಸಿದ ನಂದಿನಿಯವರ ಈ ಕಾವ್ಯನಾಯಕಿ ನಿಜವಾಗಿಯೂ ಇಷ್ಟವಾಗುತ್ತಾಳೆ! ಅದೇ ನಂದಿನಿಯವರ ಶಕ್ತಿ. ನಮಗೆ ರೂಢಿಗತವಾಗಿ ಹೋಗಿರುವ ಬಹು ಸುಗುಣೆ ಸುಶೀಲೆ ಗಂಭೀರೆ ನಾಯಕಿಯನ್ನು ಕವನದ ಪಕ್ಕಕ್ಕೂ ಬಿಟ್ಟುಕೊಳ್ಳದೆ ಅವರು ಕವನವನ್ನು ಯಶಸ್ವಿಯಾಗಿಸುತ್ತಾರೆ.

ಅಪರೂಪಕ್ಕೆ ತನ್ನೊಳಗಿನ ಕಾಮಾಗ್ನಿ ತಪ್ಪೆಂದು ಗೊತ್ತಿರುವ ಕವನಹಣ್ಣೊಬ್ಬಳೂ ಇದ್ದಾಳಿಲ್ಲಿ. ಆದರೆ ಅದಕ್ಕೆ ಪಶ್ಚಾತ್ತಾಪ, ಪ್ರಾಯಶ್ಚಿತ್ತ, ಅಗ್ನಿಪ್ರವೇಶ, ಶುದ್ಧೀಕರಣದ ಸೋಗಿನ ನಾಟಕಗಳನ್ನೇನೂ ಆಡದೆ ಅವಳು ಪ್ರಿಯನನ್ನು ನೇರಾನೇರ ಮೈಥುನಕ್ಕಾಹ್ವಾನಿಸುತ್ತಾಳೆ. ‘ಬಾ ಇಲ್ಲಿಗೆ ಕೆಳಗೆ ಇಂಚುಗಳು ಕೊಂಚ ಸಡಿಲಾಗಲಿ, ಹಸಿದು ಅರಳಿದ್ದೇನೆ’ ಹೇಳುತ್ತ ಹೋದರೆ ಈ ಸಂಕಲನದ ಒಬ್ಬಳೇ ನಾಯಕಿಯ ಹಲಬಗೆಯ ನೆರಳುಗಳು ಹೇಳಿಸಿಕೊಳ್ಳುತ್ತಲೇ ಇರುತ್ತವೆ.

ಇಷ್ಟು ಉದಾಹರಣಾ ಪೂರ್ವಕವಾಗಿ ನಂದಿನಿಯವರ ಕಾವ್ಯನಾಯಕಿಯನ್ನು ಪರಿಚಯಿಸಿದ ಕಾರಣ, ಹೊಸ ಮಾರ್ಗವೊಂದನ್ನು ತುಳಿದು ಕವಯಿತ್ರಿ ಯಶಸ್ವಿಯಾಗಿ ದ್ದಾರೆನುವುದನ್ನು ಓದುಗರ ಗಮನಕ್ಕೆ ತರಲು. ಅದು ನನ್ನ ಜವಾಬ್ದಾರಿ. ಶೃಂಗಾರ ರಸದಲ್ಲದ್ದಿ ತೆಗೆದಂತಹ ಕಾವ್ಯವೇನು ಭಾರತೀಯರಿಗೆ ಹೊಸದಲ್ಲ. ಆದರೆ ಕನ್ನಡ ಕವಯಿತ್ರಿಯೊಬ್ಬರು ಇಡೀ ಸಂಕಲನದ ಎಲ್ಲ ಕವಿತೆಗಳನ್ನೂ ಉನ್ಮತ್ತ ಶೃಂಗಾರಕ್ಕೆ ಅಂಕಿತಗೊಳಿಸಿದ್ದು, ಅದನ್ನು ಸೊಗಸಾಗಿ ನಿಭಾಯಿಸಿದ್ದು ಇದು ನಾನು ಕಂಡಂತೆ ಮೊದಲು.

ಸಾಹಿತ್ಯದಲ್ಲಿ ಶೃಂಗಾರವೇನು ನಮಗೆ ಹೊಸದಲ್ಲ ಎಂದೆ. ಅದು ನಿಷೇಧವೂ ಅಲ್ಲ. ನಮಗೆ ಹತ್ತಿರದ್ದೇ ಆದ ತೆಲುಗಿನ ಪದಗಳು, ಜಾವಳಿಗಳು ಶರೀರ ಸುಖದ ಪರಮಾನಂದವನ್ನು ಬಗೆಬಗೆಯಾಗಿ ವರ್ಣಿಸಿರುವವೇ ಆಗಿವೆ. ಭಕ್ತಗಾಥೆ ಎನಿಸಿಕೊಂಡ ಜಯದೇವ ಕವಿಯ ಅಷ್ಟಪದಿಗಳು ಶೃಂಗಾರ ರಸದ ಕೊಳಗಳು. ನಮ್ಮ ಮಹಾಕಾವ್ಯಗಳು ಹಾಗು ಮರಿ ಕಾವ್ಯಗಳು ತುಳುಕುವಷ್ಟು ಶೃಂಗಾರ ಸರಕು ತುಂಬಿಕೊಂಡೇ ಇರುತ್ತವೆ. ಆದರದು ಹೆಂಗಸೊಬ್ಬಳ ಲೇಖನಿಯಿಂದ ಬಂದರೆ ನೀತಿಸಂಹಿತೆಯ ಕಾವ್ಯೋಧ್ಯಾಯಕ್ಕೆ ಇರುಸುಮುರುಸು. ಗಂಡುಕವಿಯ ಶೃಂಗಾರ ಸಂದರ್ಭದ ನಾಯಕ ನಾಯಕಿಯರು ದೈವಾಂಶ ಸಂಭೂತರಾಗಿರುವುದೇ ಹೆಚ್ಚು ನಮ್ಮಲ್ಲಿ.

ಈ ಹುಸಿಮುಸುಗಿಲ್ಲದೆ ಶೃಂಗಾರವನ್ನು ಮುಖ್ಯ ರಸವೆಂದು ಒಪ್ಪಿಕೊಳ್ಳಲು ಭಾರತೀಯ ಮಡಿವಂತ ಮನಸ್ಸುಗಳಿಗೆ ಆಗಲೇ ಇಲ್ಲ. ಧರ್ಮ ಅರ್ಥ ಕಾಮ ಮೋಕ್ಷಗಳು ಮಾನುಷಜೀವದ ನಾಲ್ಕು ಪುರುಷಾರ್ಥಗಳೆಂದು ಸಾರುವ ಭಾರತೀಯ ತತ್ವಶಾಸ್ತ್ರಕ್ಕೂ ಖಜುರಾಹೋದ ಮಿಥುನ ಶಿಲ್ಪಗಳನ್ನು ಪುರುಷಾರ್ಥಗಳಲ್ಲೊಂದರ ಶಿಲಾ ಅಭಿವ್ಯಕ್ತಿಗಳೆಂದು ರಾಜಾರೋಷವಾಗಿ ಒಪ್ಪಿಸಲು ಆಗಿಲ್ಲ. ಅಂತಹುದರಲ್ಲಿ ಪ್ರೇಮ ಕಾಮ ಇವುಗಳನ್ನೇ ಸಂಕಲನ ಪೂರ್ತಿ ಉದ್ಧೃತಗೊಳಿಸುವ ಹೆಣ್ಣುಕವಿಗಳನ್ನು ಅದು ಪುರಸ್ಕರಿಸೀತೇ? ಇದೇ ಕಾರಣವಾಗಿ ಮೀರಾ, ಆಂಡಾಳ್, ಅಕ್ಕ ಇವರು ಒಂದು ದೈವವನ್ನು ತಮ್ಮ ನಲ್ಲನನ್ನಾಗಿಸಿಕೊಂಡು ಆ ಅಂಕಿತಗಳಡಿಯಲ್ಲಿ ವ್ಯಕ್ತವಾದರೇನೋ. ಈ ಮೂವರ ಕಾವ್ಯವೆಂದರೆ ತೀವ್ರ ಪ್ರೇಮ, ಕಾಮ, ವಿರಹ, ಸಮರ್ಪಣ ಭಾವದ ಅತ್ಯುಚ್ಛ ಸ್ತ್ರೀ ಮಾದರಿಗಳು.

ಇತ್ತೀಚಿಗೆ ನಾನು ಹೆಚ್.ಆರ್. ಸುಜಾತ ಅವರ `ಜೇನುಮಲೆಯ ಹೆಣ್ಣುಗಳು’ ಕವನ ಸಂಕಲನಕ್ಕೆ ಮುನ್ನುಡಿ ಬರೆದೆ. ನವಿರಾಗಿಯೂ ಬುದ್ಧಿವಂತಿಕೆಯಿಂದಲೂ ಪ್ರತಿಭೆಯ ಫಲವಾಗಿಯೂ ಆಗಿದ್ದ ಆ ಸಂಕಲನದ ಅಷ್ಟೂ ಕವನಗಳು ಸ್ತ್ರೀ ದೃಷ್ಟಿಯಿಂದಲೇ ನೋಡಿದ, ಭಾವಿಸಿದ, ಕೇವಲ ಅವಳವೇ ಆದ ಪ್ರೇಮಕವನಗಳು. ಅಲ್ಲಿ ವಿಷಯಾಂತರವೇ ಇಲ್ಲ, ನವಿರು ಪ್ರೇಮವೇ ಆ ಸಂಕಲನದ ನಾಯಕಿ. ಇದು ಆ ಬಗೆಯಲ್ಲಿ ಕನ್ನಡಕ್ಕೆ ಕವಯಿತ್ರಿಯೊಬ್ಬರು ಕೊಟ್ಟ ಮೊದಲ ಸಂಪೂರ್ಣ ಪ್ರೇಮಾಯಣ. ನಂದಿನಿಯವರ ಈ ಸಂಕಲನವೂ ಅದೇ ರೀತಿಯಲ್ಲಿ ಕವಯಿತ್ರಿಯೊಬ್ಬರು ಕನ್ನಡಕ್ಕೆ ಕೊಟ್ಟಿರುವ ಸಂಪೂರ್ಣ ಪ್ರಣಯಾಯಣ. ಇದು ಹೆಣ್ಣಿನ ಲೈಂಗಿಕ ಬಯಕೆಯನ್ನು ಇಡೀ ಸಂಕಲನದ ಪ್ರಧಾನ ವಸ್ತುವಾಗಿರಿಸಿಕೊಂಡು ಬಹು ಪ್ರಾಮಾಣಿಕತೆಯಿಂದ ಕಟ್ಟಿ ಕೊಟ್ಟ ಮೊದಲ ಕವನಗುಚ್ಛವೆಂದು ನನ್ನ ತಿಳುವಳಿಕೆ.

ಮೇಲೆ ಕವಿಗೆ ಮಿತಿಗಳೂ ಇವೆಯೆಂದಿದ್ದೆ. ನಂದಿನಿಯವರ ಸೀಮಿತ ವಸ್ತು ಆಯ್ಕೆಯೇ ಅವರ ಮಿತಿ. ಅವರಿಗೆ ಸಿದ್ಧಿಸಿರುವ ಚಿತ್ರಕ ಶಕ್ತಿ ಒಂದು ಬಲ. ಆದರೆ ಒಂದೇ ವಿಷಯವನ್ನು ಪದೇ ಪದೇ ಓದುವಾಗ ಅದೆಂತದ್ದೇ ಚಿತ್ರಕಶಕ್ತಿಯೂ ಕ್ಲೀಷೆಗೊಳ್ಳುತ್ತದೆ. ಈ ಸಂಕಲನದಲ್ಲಿ ಇರುವ ಹಿಡಿಯಷ್ಟು ಇತರೆ ಕವನಗಳು ಅಪವಾದ ನಿವಾರಣೆಗೆ ಕವಿ ಹಿಡಿದ ವ್ರತಸೂತ್ರಗಳಂತಿವೆ.

ನಂದಿನಿಯವರ ಅನೇಕ ಬಿಡಿಗವಿತೆಗಳನ್ನು ಓದಿದ್ದೆ. ಈಗ ಸಂಕಲನವೊಂದನ್ನು ಪ್ರಕಟಪೂರ್ವ ನನ್ನಿಂದ ಓದಿಸಿದ್ದಾರೆ, ಮುನ್ನುಡಿ ಬರೆಯಲು ಕೋರಿ ನನ್ನ ಮೇಲಿನ ನಂಬಿಕೆಯನ್ನು ದೃಢೀಕರಿಸಿದ್ದಾರೆ. ಅವರಿಗೆ ಧನ್ಯವಾದಗಳು ಹಾಗೂ ಅನೇಕ ಶುಭಹಾರೈಕೆಗಳು.

‍ಲೇಖಕರು Admin

September 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: