ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಣ ವಿ ಎ ಕವಿತೆ- ಸಂಗೀತ ಕಚೇರಿ…

ಲಕ್ಷ್ಮಣ ವಿ ಎ

ಸಂಗೀತ ಕಚೇರಿ
ಮುಗಿದ ಮೇಲೆ ಹಾಡಿದ ರಾಗಗಳೆಲ್ಲ
ಎಲ್ಲಿಗೆ ಹೋಗುತ್ತವೆ ?
ಗಾಯಕ ಹೊರಡುತ್ತಾನೆ ದಣಿದ
ಗಂಟಲಿಗೆ ಮತ್ತೆ ಋಜು ತುಂಬಲು
ಪಾನ – ಗೋಷ್ಠಿ ಗೆ ತನ್ನ ಪ್ರಿಯತಮೆಯೊಂದಿಗೆ

ಉಳಿಯುತ್ತವೆ ಕೆಲವು
ಆಲಾಪಗಳು ಕೆಲವರ ಕಿವಿಗಳಲ್ಲಿ
ಅನುರಣಿಸುತ್ತವೆ ಹಲವು
ದಣಿದ ಸಹೃದಯರ ಧಮನಿಗಳಲ್ಲಿ

ಹಾಡದೇ ಉಳಿದ ರಾಗಗಳು ?

ಆಡದೆ ಉಳಿದ ಮಾತಿನಂತೆ
ಹೇಳದೆ ಉಳಿದ ಅರ್ಧ ಪ್ರೇಮದಂತೆ
ಮಾತಿಗಿಳಿಯುತ್ತವೆ ಅವು ಅಲ್ಲೇ
ಆರಿದ ದೀಪಗಳೊಂದಿಗೆ
ಹಾಡಿದ ಹಾಡು ಹೊಗಳಲು
ಇಲ್ಲಿ ಎಷ್ಟೊಂದು ದನಿಗಳಿವೆ!
ತೈಲವಿರುವ ತನಕ ಬೆಳಗುವುದು
ಏನು ಮಹಾ ?
ತೀರಿದ ಮೇಲೂ ಬೆಳಗುತ್ತ ಬೆಳಗುತ್ತ
ಅಳಿಯದೇ ಉಳಿಯುವುದು ಹೇಳಿ ಹೇಗದು ?

ಅಲೆಮಾರಿ ಆಲಾಪಗಳು ನಟ್ಟಿರುಳಿನಲಿ
ಬೀದಿ
ಬೀದಿ ಅಲೆಯುತ್ತಿವೆ
ಬಸ್ ಸ್ಟ್ಯಾಂಡಿನ ಬೆಂಚಿನ ಮೇಲೆ
ಥರಗುಡುತ್ತ ಮಲಗಿದ ಭಿಕ್ಷುಕನ
ಮೇಲೆ ಕಂಬಳಿಯ ಹೊದೆಸಿವೆ
ಪ್ರೇಮಿಗಳ
ಅರೆ ತೆರೆದ ಕಿಡಕಿ ಬಾಗಿಲು
ಸಂದಿಗಳಲಿ ನಿಂತು ಪಹರೆ ಕಾಯುತಿವೆ
ಅರ್ಧ ಬರೆದಿಟ್ಟ ಕವಿತೆಯ ಖಾಲಿ
ಹಾಳೆಯಲಿ ಅಲ್ಲಲ್ಲಿ ತಂಗುತ್ತಿವೆ

ಇರುಳ ತಣ್ಣನೆಯ ಅಬ್ಬೇಪಾರಿಯಂತೆ ಅಲೆಯುವ ಅಲೆಮಾರಿ ಗಾಳಿಯಲಿ
ಕಲೆತು ಉಸಿರು ಬಿಗಿ ಹಿಡಿದು
ಮಲಗಿದ ಬೀದಿಗಳ ನರ ನಾಡಿ
ಸಡಿಲು ಗೊಳಿಸುತಲಿವೆ

ಹಾಡದ ರಾಗಗಳ ಆಲಾಪ
ಗಾಯಕನ ಕೊರಳಿನಲಿ
ಪುಟ್ಟನ ಮುಷ್ಠಿಯೊಳಗಡಗಿ
ಫಡ ಫಡಿಸುವ ಚಿಟ್ಟೆಯ ರೆಕ್ಕೆಗಳಂತೆ

ಜಗದ ಜೋಗುಳ
ನಿನ್ನ ತುಂಬಿದ ಜೋಳಿಗೆಯಲಿಟ್ಟ
ಕಿನ್ನರ ಜೋಗಿಯೇ ! ಹಾಡಾಗದ ರಾಗವ ಹಿಡಿದು
ಇಂದು
ಎರಡು ಸಾಲಿನ ಪಲ್ಲವಿಯಾದರೂ
ಹಾಡು
ನಿನ್ನ ಮಾಯಕದ ರಾಗದ ಅಲೆ
ಈ ಚಳಿ ಗಾಳಿಯಲಿ ತೇಲಿಸು

ಬಡಮೊಲೆಯ ಹಾಲು ಸಾಲದೆ
ಒಂದೇ ಸಮ ಅಳುವ ಕಂದನ ರಮಿಸು

‍ಲೇಖಕರು Admin

4 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading