ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರ‍್ಯಾಗಿಂಗ್ ಬಗ್ಗೆ ಒಂದು ಲೇಖನ

ರ‍್ಯಾಗ್ ಮಾಡುವುದು ರಾಂಗಾ?

– ಶರತ್ ಎಚ್ ಕೆ

ಎಂಜಿನಿಯರೋ ಡಾಕ್ಟರೋ ಮತ್ತಿನ್ನೇನೋ ಆಗುವ ಮಹದಾಸೆಯೊಂದಿಗೆ ಪಿಯುಸಿಯಲ್ಲಿ ಓದಿನಾಚೆಗಿನ ಪ್ರಪಂಚದ ಸಂಭ್ರಮಗಳಿಗೆ ತೆರೆದುಕೊಳ್ಳದೇ ಎಕ್ಸಾಮು, ಸಿಇಟಿ, ರ‍್ಯಾಂಕುಗಳ ಗುಂಗಲ್ಲಿದ್ದವರು ಇದೀಗ ವಿದ್ಯಾರ್ಥಿ ಜೀವನದ ಮತ್ತೊಂದು ಪ್ರಮುಖ ಘಟ್ಟ ಏರುವ ಉಮೇದಿನಲ್ಲಿದ್ದಾರೆ.
ಕೆಲವರಿಗೆ ತಾವು ಬಯಸಿದ ಕಾಲೇಜಿನಲ್ಲಿ ಸೇರಬೇಕೆಂದುಕೊಂಡಿದ್ದ ಕೋರ್ಸ್ಗೇ ಪ್ರವೇಶ ದೊರೆತಿದ್ದರೆ, ಹಲವರಿಗೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುವಂತಾಗಿರಬಹುದು.
ಅದೇನೆ ಇರಲಿ, ಪಿಯು ಮುಗೀತು; ಮುಂದೇನು? ಎಂಬ ಗೊಂದಲಕ್ಕೆ ಎಲ್ಲರೂ ತೆರೆ ಎಳೆದು, ತಮಗಿಷ್ಟವೋ ಅಥವಾ ಪೋಷಕರ ಒತ್ತಡವೋ… ಒಟ್ಟಿನಲ್ಲಿ ಯಾವುದಾದರೂ ಒಂದು ಕಾರಣಕ್ಕೆ ಡಿಗ್ರಿಗೆ ಪ್ರವೇಶ ಪಡೆದಾಗಿದೆ. ಇನ್ನು ಹೊಸ ಕಾಲೇಜಿನಲ್ಲಿ ಹೊಚ್ಚ ಹೊಸ ಅನುಭವಗಳಿಗೆ ತಮ್ಮನ್ನು ತೆರೆದುಕೊಳ್ಳುವುದಷ್ಟೇ ಬಾಕಿ ಇದೆ.
ಹೊಸತು ನಮ್ಮಲ್ಲಿ ಕುತೂಹಲ ಮೂಡಿಸುವ ಜೊತೆ ಜೊತೆಗೆ ಆತಂಕದ ರಥಯಾತ್ರೆಯನ್ನೂ ಏರ್ಪಡಿಸುತ್ತದೆ. ಪಿಯುಸಿಯಿಂದ ಡಿಗ್ರಿ ಕಾಲೇಜಿಗೆ ಈಗೀಗಷ್ಟೇ ಎಂಟ್ರಿ ಕೊಡುತ್ತಿರುವ ವಿದ್ಯಾರ್ಥಿಗಳ     ಮನಸ್ಸಿನಲ್ಲಿ ಹೊಸ ಕಾಲೇಜಿನ ಕುರಿತು ತರಹೇವಾರಿ ಪ್ರಶ್ನೆಗಳು ಪುಟಿದೇಳುತ್ತಿರಬಹುದು.
ಅಲ್ಲಿ ರ‍್ಯಾಗಿಂಗ್ ನಡೆಯುತ್ತಾ? ಎಂಬ ಪ್ರಶ್ನೆ ಬಹುತೇಕ ಎಲ್ಲರೊಳಗೂ ಆತಂಕದ ತೇರು ಎಳೆಯಬಹುದು.
ರ‍್ಯಾಗಿಂಗ್ ನಡೆಯಲೂಬಹುದು, ನಡೆಯದಿರಲೂಬಹುದು. ರ್ಯಾಗಿಂಗ್ಗೆ ನಿಷೇಧವಿದ್ದರೂ ಆಯಾ ಕಾಲೇಜು ಆಡಳಿತ ಮಂಡಳಿ ತಳೆಯುವ ನಿಲುವು ಮತ್ತು ಅಲ್ಲಿನ ವಿದ್ಯಾರ್ಥಿಗಳ ಮನಸ್ಥಿತಿ ಮೇಲೆ ಇದು ಅವಲಂಬಿತವಾಗಿರುತ್ತೆ.
ಅಷ್ಟಕ್ಕೂ ನಿಮ್ಮ ಮೇಲೆ ರ‍್ಯಾಗಿಂಗ್ ನಡೆಯಿತು ಅಂತಿಟ್ಟುಕೊಳ್ಳಿ. ಅದರಿಂದ ಮಾನಸಿಕವಾಗಿ ಕುಗ್ಗಿ ಹೋಗುವ ಅಗತ್ಯವಿಲ್ಲ. ಇಂದು ಕಾಲೇಜಿನಲ್ಲಿ ಸೀನಿಯರ್ಸ್ ನಿಮ್ಮ ಮೇಲೆ ರ‍್ಯಾಗಿಂಗ್ ಮಾಡದಿದ್ದರೂ ಮುಂದೊಂದು ದಿನ ನೀವು ಕೆಲಸಕ್ಕೆ ಸೇರಿದಾಗ, ಅಲ್ಲಂತೂ ಸೀನಿಯರ್ಗಳ ದಬ್ಬಾಳಿಕೆ ಕಟ್ಟಿಟ್ಟಬುತ್ತಿ. ಹಾಗೆ ನೋಡಿದರೆ ಕಾಲೇಜು ಹಂತದಲ್ಲಿ ನಡೆಯುವ ರ್ಯಾಗಿಂಗ್ಗೆ ನಾವು ಬಲಿಪಶುವಾದರೆ, ಬದುಕನ್ನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು. ಸೀನಿಯರ್ಸ್ ಜೂನಿಯರ್ಸ್ ನಡುವಿನ ತಿಕ್ಕಾಟ ಕೇವಲ ಕಾಲೇಜಿನಲ್ಲಿ ಮಾತ್ರ ಇರುವುದೇ? ನೀವು ಓದುವ ಕಾಲೇಜು ಕೂಡ ನಾವು ಬದುಕುತ್ತಿರುವ ಪರಿಸರದಲ್ಲೇ ಇರುವುದರಿಂದ, ಕ್ಯಾಂಪಸ್ನಾಚೆಗಿನ ಜನರ ಮನಸ್ಥಿತಿ ಸಹಜವಾಗಿಯೇ ಕ್ಯಾಂಪಸ್ನೊಳಗೂ ಪ್ರವೇಶ ಪಡೆದುಕೊಳ್ಳುತ್ತದೆ.
ರ‍್ಯಾಗಿಂಗ್ ಅಂದಕೂಡಲೇ, ನಿಮ್ಮ ಮೇಲೆ ಘನಗಂಭೀರವಾದ ದೌರ್ಜನ್ಯವೇನೊ ನಡೆದು ಬಿಡುತ್ತದೆ ಎಂದು ಸುಖಾಸುಮ್ಮನೆ ಆತಂಕಕ್ಕೆ ಒಳಗಾಗಬೇಡಿ. ಬಹುತೇಕ ಸಂದರ್ಭಗಳಲ್ಲಿ ರ‍್ಯಾಗಿಂಗ್ ಆರೋಗ್ಯಕರ ರೀತಿಯಲ್ಲೇ ಇರುತ್ತದೆ. ರ್ಯಾಗಿಂಗ್ ಎಂದರೆ ಕೇವಲ ರೇಗಿಸುವಿಕೆಯೇನೋ ಎಂದು ಅನಿಸಲೂಬಹುದು.

ಸದ್ಯ ನಾನು ಉಪನ್ಯಾಸಕನಾಗಿರುವ ಕಾಲೇಜಿನಲ್ಲಿ ರ‍್ಯಾಗಿಂಗ್ ಒಂದಿಷ್ಟೂ ಅವಕಾಶವಿಲ್ಲ. ಈ ವರ್ಷ ಬಿ.ಇ. ಮುಗಿಸಿ ಹೊರ ಹೋದ ವಿದ್ಯಾರ್ಥಿಗಳು, ಕಾಲೇಜಿನಲ್ಲಿ ತಮಗಾದ ಅನುಭವಗಳನ್ನು ಡಾಕ್ಯುಮೆಂಟರಿಯೊಂದನ್ನು ರೂಪಿಸುವ ಮೂಲಕ ಹಂಚಿಕೊಂಡಿದ್ದಾರೆ. ಅದರಲ್ಲಿ ಕಾಲೇಜಿನಲ್ಲಿ ರ‍್ಯಾಗಿಂಗ್ ಅವಕಾಶ ಇರಬೇಕಿತ್ತಾ ಎಂಬ ಕುರಿತು ಒಂದಷ್ಟು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಒಂದಿಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ, ‘ರ‍್ಯಾಗಿಂಗ್ ಇರಬೇಕಿತ್ತು ಅನಿಸುತ್ತೆ. ಅದರಿಂದ ಜೂನಿಯರ್ಸ್ ಮತ್ತು ಸೀನಿಯರ್ಸ್ ನಡುವೆ ಉತ್ತಮ ಒಡನಾಟ ಏರ್ಪಡುತ್ತದೆ. ರ‍್ಯಾಗಿಂಗ್ ಇನ್ನೊಬ್ಬರ ಮನಸ್ಸು ಘಾಸಿಗೊಳಿಸುವಂತಿರಬಾರದು. ಆರೋಗ್ಯಕರ ರೀತಿಯ ಕಾಲೆಳೆಯುವಿಕೆ, ರೇಗಿಸುವಿಕೆಗೆ ಅವಕಾಶವಿದ್ದರೆ ಚೆಂದ’ ಎಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ.
ನಿಮಗೆ ನೀವೇ ಕೇಳಿಕೊಳ್ಳಿ. ರ‍್ಯಾಗಿಂಗ್ ಏಕೆ ಚಾಲ್ತಿಯಲ್ಲಿದೆ? ರ‍್ಯಾಗಿಂಗ್ ಮಾಡುವವರು ಯಾರು? ಇದರಿಂದ ಮಾನಸಿಕವಾಗಿ ಜರ್ಜರಿತರಾಗುವುದು ಯಾರು?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ನೀವು ಬದುಕನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಬಹುದು. ರ್ಯಾಗಿಂಗ್ಗೆ ಕಾರಣೀಭೂತರು ಯಾರು? ಸೀನಿಯರ್ಸ್ ಅಲ್ವಾ. ಈ ಸೀನಿಯರ್ಸ್ ಕಾಲೇಜಿಗೆ ಎಂಟ್ರಿ ಕೊಡುವಾಗ ಏನಾಗಿದ್ದರು? ಜೂನಿಯರ್ಸ್ ಅಲ್ವಾ. ನಿಮ್ಮ ಹಾಗೆ ಆತಂಕ, ಗೊಂದಲಗಳನ್ನು ಹೊತ್ತುಕೊಂಡು ಕಾಲೇಜಿಗೆ ಕಾಲಿಟ್ಟವರು ಹೋಗ್ತಾ ಹೋಗ್ತಾ ಯಾಕೆ ಹೀಗಾಗ್ತಾರೆ? ನೀವೂ ಮುಂದೆ ಸೀನಿಯರ್ಸ್ ಆಗುವವರಲ್ಲವೇ? ಜೂನಿಯರ್ಸ್ ಆಗಿದ್ದಾಗ ರ್ಯಾಗಿಂಗ್ ಬೇಡವೆನ್ನುವ ನೀವು ಸೀನಿಯರ್ಸ್ ಪಟ್ಟಕ್ಕೇರಿದ ನಂತರವೂ ಇದೇ ನಿಲುವಿಗೆ ಅಂಟಿಕೊಳ್ಳುವಿರಾ? ನಿಮ್ಮೊಳಗೆ ನೀವು ಉತ್ತರ ಕಂಡುಕೊಳ್ಳಿ ಸಾಕು.
ಸೀನಿಯರ್ಸ್ ಜೂನಿಯರ್ಗಳ ಮೇಲೆ ದಬ್ಬಾಳಿಕೆ ನಡೆಸುವುದು ಸರಿ ಎಂಬುದು ನನ್ನ ವಾದವಲ್ಲ. ಕೀಟಲೆ, ಕಾಲೆಳೆಯುವುದು, ರೇಗಿಸುವುದು ಇಲ್ಲದಿದ್ದರೆ ಅದನ್ನು ಕಾಲೇಜು ಕ್ಯಾಂಪಸ್ ಎನ್ನಲಾದೀತೆ? ರ‍್ಯಾಗಿಂಗ್ ರೇಗಿಸುವ ರೂಪದಲ್ಲಿರಲಿ, ಯಾರ ಮನಸ್ಸನ್ನೂ ಘಾಸಿಗೊಳಿಸದಿರಲಿ ಎಂಬುದಷ್ಟೇ ಬಹುತೇಕ ಕಾಲೇಜು ಜೀವಿಗಳ ಆಶಯ.
ಇಲ್ಲಿ ಒಂದು ವೈರುಧ್ಯವೂ ಇದೆ. ಎಲ್ಲರ ಮನಸ್ಥಿತಿಯೂ ಒಂದೇ ತರ ಇರುವುದಿಲ್ಲ. ಒಬ್ಬರ ಪಾಲಿಗೆ ಕೇವಲ ರೇಗಿಸುವಿಕೆಯಾಗಿ ತೋರುವುದು ಮತ್ತೊಬ್ಬರ ಮನಸ್ಸಿನಲ್ಲಿ ದೌರ್ಜನ್ಯದ ಸ್ವರೂಪ ಪಡೆದುಕೊಳ್ಳಲೂಬಹುದು. ‘ಡೋಂಟ್ ಕೇರ್’ ಸ್ವಭಾವದ ಹುಡುಗ-ಹುಡುಗಿಯರು ರ‍್ಯಾಗಿಂಗ್ ಎಂಜಾಯ್ ಮಾಡುತ್ತಾರೆ. ಅದೇ ವೇಳೆ ಸೂಕ್ಷ್ಮ ಸ್ವಭಾವದವರು ಇದನ್ನು ತಮಗಾದ ಅವಮಾನವಾಗಿ ಸ್ವೀಕರಿಸಿ, ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.
ಡೋಂಟ್ ಕೇರ್ ಸ್ವಭಾವದವರು ಯಾರು? ಸೂಕ್ಷ್ಮ ಮನಸ್ಥಿತಿ ಉಳ್ಳವರು ಯಾರು? ಎಂದು ಅರ್ಥ ಮಾಡಿಕೊಂಡು ರ‍್ಯಾಗಿಂಗ್ ಮಾಡುವ ಪ್ರಬುದ್ಧತೆ ಅಸಲಿಗೂ ಸೀನಿಯರ್ಸ್ಗೆ ಇರುತ್ತದೆಯೇ?
ರ‍್ಯಾಗಿಂಗ್ ದೊಡ್ಡ ಸಮಸ್ಯೆಯಾಗಿ ಎದುರು ನಿಲ್ಲುವುದು ಈ ಕಾರಣಕ್ಕಾಗಿಯೇ. ಅಮಾಯಕರ ಸಾವಿಗೆ ರ‍್ಯಾಗಿಂಗ್ ಮೂಲವಾಗುವುದರ ಹಿಂದೆಯೂ ಈ ಹಿನ್ನೆಲೆ ಇದೆ.
ರ‍್ಯಾಗಿಂಗ್ ಹೆಸರಲ್ಲಿ ವಿಕೃತಿ
ರ‍್ಯಾಗಿಂಗ್ ನಿಜಕ್ಕೂ ರೇಗಿಸುವಿಕೆಯ ಸ್ವರೂಪದಲ್ಲಷ್ಟೇ ಉಸಿರಾಡಿಕೊಂಡಿದ್ದಿದ್ದರೆ, ಅದನ್ನು ನಿಷೇಧಿಸುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ರ‍್ಯಾಗಿಂಗ್ ಹೆಸರಿನಲ್ಲಿ ವಿಕೃತಿ ವಿಜೃಂಭಿಸಲಾರಂಭಿಸಿದ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿತ್ತು. ವಿಕೃತಿಯೇ ರ‍್ಯಾಗಿಂಗ್ ಅನ್ನುವುದಾದರೆ, ಅದಕ್ಕೆ ನಿಷೇಧ ಹೇರಿರುವುದೇ ಸೂಕ್ತ.
ರ‍್ಯಾಗಿಂಗ್ ವಿಕೃತ ರೂಪಗಳಲ್ಲಿ ಹೆಚ್ಚಾಗಿ ಅನಾವರಣಗೊಳ್ಳುವುದು ಕಾಲೇಜು ಹಾಸ್ಟೆಲ್ನಲ್ಲಿ. ಅದರಲ್ಲೂ ಮಾದಕ ವಸ್ತುಗಳನ್ನು ಸೇವಿಸುವ ಕೆಲ ಸೀನಿಯರ್ಸ್, ಜೂನಿಯರ್ಗಳ ಮೇಲೆ ನಾನಾ ರೀತಿಯ ದೌರ್ಜನ್ಯ ಎಸಗುವುದೂ ಉಂಟು. ಸಿಗರೇಟಿನಿಂದ ಮೈ ಸುಡುವುದು, ಮಾದಕ ವಸ್ತುಗಳ ಸೇವನೆಗೆ ಒತ್ತಡ ಹೇರುವುದು, ಬಟ್ಟೆ ಕಳಚಿ ಬೆತ್ತಲಾಗಿ ನಿಲ್ಲುವಂತೆ ಸೂಚಿಸುವುದು, ಸಲಿಂಗ ರತಿಗೆ ಬಳಸಿಕೊಳ್ಳುವುದು, ಜೂನಿಯರ್ಗಳನ್ನು ತಮ್ಮ ಸೇವಕರಂತೆ ನಡೆಸಿಕೊಳ್ಳುವುದು ಹೀಗೆ ಹಲವು ರೀತಿಯಲ್ಲಿ ರ‍್ಯಾಗಿಂಗ್ ಅಮಾನವೀಯ ಸ್ವರೂಪ ಹಾಸ್ಟೆಲ್ಗಳಲ್ಲಿ ಎದುರುಗೊಳ್ಳುತ್ತದೆ.
ರ‍್ಯಾಗಿಂಗ್ ಕಾಲೇಜು ಕ್ಯಾಂಪಸ್ನಲ್ಲಿ ಅಷ್ಟಾಗಿ ಅವಕಾಶ ದೊರೆಯುವುದಿಲ್ಲ. ದೊರೆತರೂ ಎಲ್ಲರೆದುರು ವಿಕೃತವಾಗಿ ವರ್ತಿಸಲಾಗುವುದಿಲ್ಲ. ಹಾಗಾಗಿ ಹಾಸ್ಟೆಲ್ ರ‍್ಯಾಗಿಂಗ್ ಕಾರ್ಯಾಲಯವಾಗಿ ಮಾರ್ಪಡುತ್ತದೆ. ಇದನ್ನು ತಪ್ಪಿಸಲೆಂದೇ ಹಲವೆಡೆ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಬ್ಲಾಕ್ನಲ್ಲಿ ಇರಿಸುತ್ತಾರೆ. ಜೂನಿಯರ್ಸ್ ಸೀನಿಯರ್ಸ್ ಒಂದೆಡೆ ಇರಲು ಬಿಟ್ಟರೆ ರ‍್ಯಾಗಿಂಗ್ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ.
ಸೀನಿಯರ್ಗಳೂ ಮನುಷ್ಯರೇ ಆಗಿರುವುದರಿಂದ, ಅವರಲ್ಲೂ ಕೆಲವರು ಸಂವೇದನಾಶೀಲರಾಗಿರುವುದರಿಂದ ಕೆಲ ಸೀನಿಯರ್ಗಳೇ ನಿಮ್ಮ ಬೆಸ್ಟ್ ಫ್ರೆಂಡ್ ಅಥವಾ ಲವರ್ ಆಗಲೂಬಹುದು.
ರ‍್ಯಾಗಿಂಗ್ ಕೆಲವೊಮ್ಮೆ ಓದಿನಾಚೆಗಿನ ಬದುಕಿನ ಪಾಠಗಳನ್ನು ಹೇಳಿಕೊಡುತ್ತದೆ. ನಾವು ಬದುಕುತ್ತಿರುವ ಸಮಾಜದಲ್ಲೇ ಇರಬಹುದಾದ ಆವರಣವೊಂದಕ್ಕೆ ನಮ್ಮನ್ನು ಕರೆದೊಯ್ಯಲೂಬಹುದು. ಆ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗದೇ ಆ ಆವರಣದಿಂದ ಹೊರಬರಲು ಇರುವ ಸಾಧ್ಯತೆಗಳತ್ತ ಮುಖ ಮಾಡುವುದು ಒಳಿತು.
ರ‍್ಯಾಗಿಂಗ್ನಿಂದಾಗಿ…
ಕೆಲ ವರ್ಷಗಳ ಹಿಂದೆ ನನ್ನ ಗೆಳೆಯನೊಬ್ಬ ಓದುತ್ತಿದ್ದ ಕಾಲೇಜು ಕ್ಯಾಂಪಸ್ನಲ್ಲಿ ಉತ್ತರ ಭಾರತೀಯ ವಿದ್ಯಾರ್ಥಿಯೊಬ್ಬನ ಕೊಲೆ ನಡೆಯಿತು. ಮಾದಕ ದ್ರವ್ಯ ಸೇವಿಸಿದ್ದ ಕೆಲ ವಿದ್ಯಾರ್ಥಿಗಳು ಸೇರಿ ಕ್ಲುಲ್ಲಕ ಕಾರಣಕ್ಕೆ ಅವನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದರು. ಆನಂತರ ಅವರು ಜೈಲು ಪಾಲಾದರು.

ನಾವು ಎಂಜಿನಿಯರಿಂಗ್ ಓದುವಾಗ, ಅಂತಿಮ ವರ್ಷದಲ್ಲಿ ಕ್ಲಾಸ್ಮೇಟ್ ಒಬ್ಬ ಮುಖ, ಕೈಗೆಲ್ಲ ಪೆಟ್ಟು ತಿಂದು ಬ್ಯಾಂಡೇಜ್ ಹಾಕಿಸಿಕೊಂಡು ಬಂದಿದ್ದ. ಹಾಸ್ಟೆಲ್ನಲ್ಲಿ ಜೂನಿಯರ್ಸ್ ಅವನ ಮೇಲೆ ಹಲ್ಲೆ ನಡೆಸಿದ್ದಾರೆಂಬುದು ಆನಂತರ ನಮಗೆ ತಿಳಿಯಿತು.
ಇದಕ್ಕೊಂದು ಹಿನ್ನೆಲೆಯೂ ಇತ್ತು. ಕಾಲೇಜು ಹಾಸ್ಟೆಲ್ಗೆ ಹೊಸದಾಗಿ ಎಂಟ್ರಿ ಕೊಟ್ಟ ಜೂನಿಯರ್ಸ್ ಮೇಲೆ ಇವನು ರ‍್ಯಾಗಿಂಗ್ ನಡೆಸಿದ್ದ. ಶುರುವಿನಲ್ಲಿ ಸುಮ್ಮನಿದ್ದ ಜೂನಿಯರ್ಗಳು ಒಂದೆರಡು ವರ್ಷ ಕಳೆದ ಮೇಲೆ ತಮ್ಮದೇ ಬ್ಯಾಚಿನ ಲೋಕಲೈಟ್ಸ್ ಜೊತೆ ಸೇರಿ ಈ ಮೊದಲು ರ‍್ಯಾಗಿಂಗ್ ಹೆಸರಿನಲ್ಲಿ ತಮ್ಮನ್ನು ಥಳಿಸಿದ್ದವರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದರು.

ಕಾಲೇಜೊಂದರ ಜೆಂಟ್ಸ್ ಟಾಯ್ಲೆಟ್ ಗೋಡೆಯ ಮೇಲೆ ಕಾಣಸಿಕ್ಕ ಬರಹವೊಂದು ಜೂನಿಯರ್ಸ್ ಮತ್ತು ಸೀನಿಯರ್ಸ್ ನಡುವಿನ ತಿಕ್ಕಾಟ, ಕಾಲೇಜು ವಿದ್ಯಾರ್ಥಿಗಳ ಮನಸ್ಸಿನೊಳಗಿನ ವಿಕೃತಿಗೆ ಕನ್ನಡಿ ಹಿಡಿಯುತ್ತಿತ್ತು.
ರ‍್ಯಾಗಿಂಗ್ಗೆ ಒಳಗಾದ ಮೆಡಿಕಲ್ ವಿದ್ಯಾರ್ಥಿಯ ಸ್ವಗತ
ಪ್ರತಿಷ್ಠಿತ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಸಿಕ್ಕಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಜಗತ್ತು ಗೆದ್ದ ಸಂಭ್ರಮ ನನ್ನೊಳಗೆ ಮನೆ ಮಾಡಿತ್ತು. ಪಿಯುಸಿಯಲ್ಲಿ ಎಲ್ಲಾ ರೀತಿಯ ಮನರಂಜನೆಗಳಿಂದ ವಿಮುಖನಾಗಿ ಪುಸ್ತಕದ ಹುಳುವಾಗಿದ್ದು ಸಾರ್ಥಕವಾಯಿತು ಎಂದು ನನ್ನೊಳಗೆ ನಾನು ಎಷ್ಟೋ ಸಲ ಅಂದುಕೊಂಡಿದ್ದೆ.
ಆದರೆ, ಮೆಡಿಕಲ್ ಕಾಲೇಜು ಹಾಸ್ಟೆಲ್ನ ಬದುಕು ನನ್ನೆಲ್ಲ ಭ್ರಮೆಯ ಪರದೆಗಳನ್ನು ಕಳಚಿ, ವಾಸ್ತವತೆಯ ಗುದ್ದುಗಳನ್ನು ನೀಡಲಾರಂಭಿಸಿತು. ಮೆಡಿಕಲ್ಗೆ ಸೇರಿದ ಮೊದಲ ವರ್ಷ ಹಾಸ್ಟೆಲ್ನಲ್ಲಿ ಅನುಭವಿಸಿದ್ದು ನರಕಯಾತನೆ. ನಮ್ಮ ಹಾಗೆ ವೈದ್ಯನಾಗುವ ಕನಸು ಕಟ್ಟಿಕೊಂಡು ಬಂದವರೇ ನಮ್ಮನ್ನು ಈ ರೀತಿಯೆಲ್ಲ ನಡೆಸಿಕೊಳ್ಳುತ್ತಾರೆಂದು ನಾನು ಎಣಿಸಿಯೇ ಇರಲಿಲ್ಲ.
ಹಾಸ್ಟೆಲ್ನಲ್ಲಿ ಒಂದು ದಿನ ಸೀನಿಯರ್ಗಳು ನಮಗೆ ಬರ ಹೇಳಿದರು. ನಮ್ಮ ಪರಿಚಯ ಮಾಡಿಕೊಳ್ಳಲು ಇರಬಹುದೆಂದು ನಾವು ಭಾವಿಸಿದ್ದೆವು. ಅದು ನಿಜವೂ ಆಗಿತ್ತು. ಆದರೆ ಅವರು ನಮ್ಮನ್ನು ಪರಿಚಯಿಸಿಕೊಳ್ಳಲು ಅನುಸರಿಸಿದ ರೀತಿ ಇತ್ತಲ್ಲ, ಅದು ಪರಮ ಅಸಹ್ಯ.
ಮೊದಲು ಹೆಸರು, ಊರು ಅದು ಇದು ಕೇಳಿ ನಮ್ಮನ್ನೆಲ್ಲ ಒಂದೆಡೆ ನಿಲ್ಲಿಸಿದ ಸೀನಿಯರ್ಗಳು, ನಾವು ಧರಿಸಿದ್ದ ಬಟ್ಟೆಯನ್ನೆಲ್ಲ ಕಳಚಿ ಅವರೆದುರು ಬೆತ್ತಲಾಗುವಂತೆ ಸೂಚಿಸಿದರು. ಕೆಲವರು ಕೂಡಲೇ ತೊಟ್ಟ ಬಟ್ಟೆ ಕಳಚಿದರು. ನನಗೆ ನಾಚಿಕೆಯಾಯ್ತು. ಅವರ ಸೂಚನೆ ಪಾಲಿಸದ ನಮ್ಮನ್ನು ತೀರಾ ಕೆಟ್ಟದಾಗಿ ನಿಂದಿಸಿ, ಕೆನ್ನೆಗೆ ಬಾರಿಸಿದರು. ನಾವೆಷ್ಟೇ ಕಣ್ಣೀರು ಸುರಿಸಿದರೂ ಅವರ ಮನಸ್ಸು ಕರಗಲಿಲ್ಲ. ಬೇರೆ ದಾರಿ ಇಲ್ಲದೆ ಅವರೆದುರು ಬೆತ್ತಲಾಗಿ ನಿಂತೆ. ಆ ಕ್ಷಣ ನಾನು ಅನುಭವಿಸಿದ ಹಿಂಸೆಯನ್ನು ಪದಗಳಲ್ಲಿ ವಿವರಿಸಲಾಗದು. ಅಷ್ಟಕ್ಕೇ ಅವರ ವಿಕೃತ ಮನಸ್ಸು ತಣಿಯಲಿಲ್ಲ. ಹೀಗೆ ಬೆತ್ತಲಾಗಿಯೇ ಇಡೀ ಹಾಸ್ಟೆಲ್ ಸುತ್ತುವಂತೆ ತಿಳಿಸಿದರು. ನಾವೆಲ್ಲಾ ಕಣ್ಣೀರು ಸುರಿಸುತ್ತ ಓಡುತ್ತಿದ್ದರೆ ಸೀನಿಯರ್ಗಳು ಚಪ್ಪಾಳೆ ತಟ್ಟುತ್ತಾ ಅಪಹಾಸ್ಯ ಮಾಡುತ್ತಿದ್ದರು. ಆನಂತರ ಒಂದಷ್ಟು ದಿನ ಈ ಆಘಾತದಿಂದ ಹೊರಬರಲು ನನಗಾಗಿರಲಿಲ್ಲ.
ಕಾಲ ಸರಿದಂತೆ ಹಾಸ್ಟೆಲ್ ಬದುಕಿಗೆ ನಾನೂ ಒಗ್ಗಿಕೊಂಡೆ. ಅಂದು ನಮ್ಮನ್ನೆಲ್ಲ ಬೆತ್ತಲುಗೊಳಿಸಿ ಅಪಹಾಸ್ಯ ಮಾಡಿದ್ದವರೇ ಇಂದು ನಮಗೆ ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ. ಆವತ್ತು ನೀವು ನಮ್ಮನ್ನ ಹಾಗೆ ನಡೆಸಿಕೊಂಡದ್ದು ಸರಿನಾ ಅಂತ ನನಗೆ ಆತ್ಮೀಯರಾಗಿರುವ ಸೀನಿಯರ್ ಒಬ್ಬರನ್ನು ಕೇಳಿದೆ. ಅದಕ್ಕವರು, ನಿಮಗೆ ನಾವು ಮಾಡಿದ್ದನ್ನು ನಮಗೆ ನಮ್ಮ ಸೀನಿಯರ್ಸ್ ಮಾಡಿದ್ರು. ನಾಳೆ ದಿನ ನೀವು ಕೂಡ ನಿಮ್ಮ ಜೂನಿಯರ್ಸ್ಗೆ ಇದನ್ನೇ ಮಾಡ್ತೀರ, ನೋಡ್ತಾ ಇರಿ ಅಂದ್ರು.
ಜೂನಿಯರ್ಗಳ ಬೆತ್ತಲೆ ಮೆರವಣಿಗೆ ನಾನಿರುವ ಕಾಲೇಜು ಹಾಸ್ಟೆಲ್ನಲ್ಲಿ ಒಂಥರ ‘ಫ್ರೆಶರ್ಸ್ ಡೇ’ ಇದ್ದಂತೆ. ಮುಂದೆ ನಾನೂ ಸಹ ನಮ್ಮ ಸೀನಿಯರ್ಗಳಂತೆ ಎಲ್ಲಿ ಆಗಿ ಬಿಡ್ತೀನೊ ಅನ್ನೋ ಆತಂಕ ನನ್ನಲ್ಲಿದೆ. ಯಾಕಂದ್ರೆ ಅಂದು ನನ್ನೊಂದಿಗೆ ಬೆತ್ತಲಾಗಿ ಅಳುತ್ತಾ ಓಡಿದ್ದ ನನ್ನ ಕ್ಲಾಸ್ಮೇಟ್ಸ್ ಇಂದು ಜೂನಿಯರ್ಗಳ ಮೇಲೆ ತಮಗಾದ ಅವಮಾನದ ಭಾರ ಹೊರಿಸಲು ಅಣಿಯಾಗಿ ನಿಂತಿದ್ದಾರೆ. ಅವರನ್ನು ತಡೆಯುವ ಶಕ್ತಿ ನನಗಂತೂ ಇಲ್ಲ. ಅವರೊಂದಿಗೆ ಸೇರಿ ಜೂನಿಯರ್ಗಳಿಗೆ ಅಪಹಾಸ್ಯ ಮಾಡಲೂ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ.
ಕಾಲೇಜು ತೆಗೆದುಕೊಳ್ಳಬೇಕಾದ ಕ್ರಮಗಳು
ರ‍್ಯಾಗಿಂಗ್ ನಿಯಂತ್ರಣಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದನ್ನು ಯುಜಿಸಿ ಕಡ್ಡಾಯಗೊಳಿಸಿದೆ. ಕಾಲೇಜು ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿ ತಾನು ರ‍್ಯಾಗಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂಬುದಾಗಿ ಅಫಿಡವಿಟ್ ಸಲ್ಲಿಸಲೇಬೇಕು. ಪ್ರತಿ ಕಾಲೇಜಿನಲ್ಲೂ ಆ್ಯಂಟಿ ರ‍್ಯಾಗಿಂಗ್ ಸ್ಕ್ವಾಡ್ ರಚಿಸಬೇಕು. ಕಾಲೇಜಿನ ಮುಖ್ಯಸ್ಥರೇ ಅದರ ನೇತೃತ್ವ ವಹಿಸಬೇಕು. ರ‍್ಯಾಗಿಂಗ್ಗ್ಗೆ ಒಳಗಾದ ವಿದ್ಯಾರ್ಥಿಯ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸಬಾರದು. ವಿದ್ಯಾರ್ಥಿಗಳು ಒಂದು ವೇಳೆ ತಾವು ರ‍್ಯಾಗಿಂಗ್ಗ್ಗೆ ಒಳಗಾದರೆ ದೂರು ನೀಡಲು ಸಂಪರ್ಕಿಸಬೇಕಾದ ವ್ಯಕ್ತಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಕಾಲೇಜು ಮತ್ತು ಹಾಸ್ಟೆಲ್ ಸೂಚನಾಫಲಕಗಳಲ್ಲಿ ನಮೂದಿಸಿರಬೇಕು.
ಸುಪ್ರೀಂಕೋರ್ಟ್  ನಿರ್ದೇಶನದ ಅನ್ವಯ, ರ‍್ಯಾಗಿಂಗ್ ಸಂಬಂಧ ಯಾವುದೇ ದೂರು ಬಂದರೆ ಕಾಲೇಜು ಆಡಳಿತ ಆಂತರಿಕ ತನಿಖೆ ನಡೆಸುವ ಬದಲು ಸಮೀಪದ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಳ್ಳಲು ಅನುವು ಮಾಡಿಕೊಡಬೇಕು.
ಬಲಿಪಶು ಏನು ಮಾಡಬೇಕು?
ಮೊದಲು ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸ್ಕ್ವಾಡ್ ಸದಸ್ಯರನ್ನು ಸಂಪರ್ಕಿಸುವುದು ಒಳಿತು. ಅವರಿಂದ ನ್ಯಾಯ ದೊರಕುವ ವಿಶ್ವಾಸವಿಲ್ಲದಿದ್ದರೆ helpline@antiragging.in <mailto:helpline@antiragging.in> ಗೆ ಇಮೇಲ್ ಮೂಲಕ ಅಥವಾ 1800-180-5522 ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡುವ ಮೂಲಕವೂ ದೂರು ದಾಖಲಿಸಬಹುದು.
ರ‍್ಯಾಗಿಂಗ್ ಮಾಡಿದರೆ ಶಿಕ್ಷೆ ಏನು?
ಹುಡುಗಾಟಕ್ಕೋ ಅಥವಾ ಆ ಕ್ಷಣದ ಖುಷಿಗೋ ಇಲ್ಲ ತಮ್ಮ ವಿಕೃತಿ ತಣಿಸಿಕೊಳ್ಳುವ ಸಲುವಾಗಿಯೋ ರ‍್ಯಾಗಿಂಗ್ ನಡೆಸಿದವರು ಬಲಿಪಶುವಿಗಿಂತ ಸ್ವತಃ ತಾವೇ ಅಧಿಕ ನೋವು ಅನುಭವಿಸುವ ಸಾಧ್ಯತೆಯೇ ಹೆಚ್ಚು. ಯಾಕಂದ್ರೆ ರ‍್ಯಾಗಿಂಗ್ ನಡೆಸುವುದೇ ಅಪರಾಧ. ರ್ಯಾಗಿಂಗ್ನ ಸ್ವರೂಪ ಆಧರಿಸಿ ವಿವಿಧ ಸೆಕ್ಷನ್ಗಳಡಿ ರ‍್ಯಾಗಿಂಗ್ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬಹುದು. ಕೊಲೆಗೆ ಯತ್ನ, ಆತ್ಮಹತ್ಯೆಗೆ ಪ್ರಚೋದನೆ, ಕೊಲೆ, ಹಲ್ಲೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ ಪ್ರಕರಣಗಳಡಿಯಲ್ಲಿ ಅಪರಾಧಿಗಳಾಗಬಹುದು.
ಇದಲ್ಲದೆ ಕಾಲೇಜು ಆಡಳಿತ ಕೂಡ ಶಿಸ್ತು ಕ್ರಮಗಳನ್ನು ಕೈಗೊಳ್ಳಬಹುದು. ಪ್ರವೇಶಾತಿ ರದ್ದು, ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ, ಕಾಲೇಜಿನಿಂದ ಡಿಬಾರ್ ಮಾಡುವುದಲ್ಲದೇ 25ಸಾವಿರ ರೂ. ವರೆಗೂ ದಂಡ ವಿಧಿಸಲೂಬಹುದು.
 

‍ಲೇಖಕರು G

16 September, 2014

4 Comments

  1. Anonymous

    nivu rag madodu sari tappu anno yav cinclusion gu barade barahada bele bittidira. innond chooru kandane irabekittu. baddate irbekalva?

    • Anonymous

      ಇದು ಆಗಸ್ಟ್ ನಲ್ಲಿ “ವಿಜಯವಾಣಿ’ಯ “ಮಸ್ತ್’ ಪುರವಣಿಯಲ್ಲಿ ಪ್ರಕಟವಾದ ಲೇಖನವೇ ಅಲ್ಲವೇ?

  2. sharath h k

    ತಪ್ಪು ಸರಿ ಅಂತ ತೀರ್ಪು ನೀಡುವುದಕ್ಕಿಂತ, ನಾನು ಗಮನಿಸಿರುವ ಮತ್ತು ನನಗನಿಸಿರುವ ವಿಚಾರಗಳನ್ನು ಹಂಚಿಕೊಂಡಿದ್ಡೇನೆ. ನಾನೆಲ್ಲೂ ರಾಗಿಂಗ್ ಮಾಡೋದು ಸರಿ ಅಂತ ವಾದಿಸಿಲ್ಲ. ಆದ್ರೆ ಆರೋಗ್ಯಕರ ಕಾಲೆಳೆಯುವಿಕೆ ಮತ್ತು ಕೀಟಲೆಗೆ ಅವಕಾಶವಿರಲಿ ಎಂಬುದಷ್ಟೆ ಬರಹದ ಆಶಯ. ಕೆಲವೊಮ್ಮೆ ತಪ್ಪು-ಸರಿ ಎಂಬುದು ಎರಡು ಬದಿಯ ಅತಿರೇಕದ ತುತ್ತತುದಿಯಾಗಿರುವ ಸಾಧ್ಯತೆಯೂ ಇದೆ ಅಲ್ಲವೇ?

    • Anonymous

      ಇದು ವಿಜಯವಾಣಿಯಲ್ಲಿ ಕಳೆದ ತಿಂಗಳು ಪ್ರಕಟವಾದ ಇದೇ ಲೇಖಕರ ಬರೆಹ. ಹೀಗೆ ಮಾಡುವುದು ಸಮಂಜಸವೇ?

Trackbacks/Pingbacks

  1. ರ‍್ಯಾಂಗಿಂಗ್ ಕುರಿತು ಮತ್ತಷ್ಟು ಚಿಂತನೆ ಅವಶ್ಯಕ – ಸಿ ಎನ್ ರಾಮಚಂದ್ರನ್ « ಅವಧಿ / Avadhi - [...] ಈ ವಿಷಯವನ್ನು ಕುರಿತು ಬರೆದಿರುವ, ಲೇಖನ (ಲೇಖನದ ಕೊಂಡಿ) ಮತ್ತು ಅದಕ್ಕೆ ಬಂದಿರುವ ಎರಡು [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading