ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರೇಷಿಮೆ ಮತ್ತು ಕಾಲ್ಗೆಜ್ಜೆ' – ಮಾಲತಿ ಭಟ್ ಕವನ

ಮಾಲತಿ ಭಟ್

ಹಿಂದೊಮ್ಮೆ ನನ್ನಪ್ಪ
ಹೊಸ ಕೃಷಿ ಮಾಡುವ ಕನಸ ಕಂಡ.
ಎಲ್ಲೆಲ್ಲೋ ಅಡ್ಡಾಡಿ ಹುಡುಕಾಡಿ
ಹಿಪ್ಪ ನೇರಳೆ ಗಿಡ ತಂದು
ಹಚ್ಚಿಯೇ ಬಿಟ್ಟ ಸಾಲುಗಟ್ಟಿ..!
 
ರೇಷಿಮೆಯ ಮೊಟ್ಟೆಗಾಗಿ
ಇಲಾಖೆಯೊಂದಿಗೇ ಖಾಸಾ ಗೆಳೆತನ;
ಬಿಳಿ ಹಾಳೆಗೆ ಅಂಟಿಕೊಂಡಿದ್ದ ತತ್ತಿಗಳೂ
ಅಟ್ಟಕ್ಕೇರಿ ಬಿಟ್ಟವು ಅಪ್ಪನೊಡನೆಯೇ
ಜೋಪಾನವಾಗಿ..!
ಏನು,ಎತ್ತ,ಹೇಗೆ..?
ತಿಳಿದದ್ದೇ ತಡ,
ಶುರು ಹಚ್ಚಿಕೊಂಡ ಚಿನ್ನದ ಬೇಸಾಯ..!
 
ಸಾಕಣೆಕೆಗೆ ಸಿದ್ಧವಾಯಿತು
ವಿಶೇಷ ತಟ್ಟೆ;
ಕೋಶ ಒಡೆದು ಹೊರಬಂದಡನೆಯೇ
ಈ ಸಿರಿವಂತ ಹುಳುಗಳು
ಕಚಕಚನೆ ಎಲೆ ಅಗೆಯತೊಡಗಿ
ಬರಬರನೆ ಬೆಳೆಯತೊಡಗಿದವು;
ಥೇಟ್ 3ಜಿ ಕಂದಮ್ಮಗಳಂತೆ..!
ಒಂದೇ ವಾರದಲ್ಲಿ ಏರಿಯೇ ಬಿಟ್ಟವು,
ಅವುಗಳದ್ದೇ ಮನೆ,
ಜಾಲ ಪರದೆಯ ನಿಲಯದೊಳಗೆ;
ಸರ್ವ ಸ್ವತಂತ್ರ ಜೀವಿಗಳಾಗಿ..!

ಪಕ್ಕಾ ಬಕಾಸುರ ವಂಶಸ್ಥರ ಪಡಿಯಚ್ಚು ಇವು!
ಸಾಲದಾಯಿತು ಅಪ್ಪ ಹಾಕಿದ ಸೊಪ್ಪು,
ಚಡಪಡಿಸತೊಡಗಿದವು; ಹೇಗೋ ಏನೋ ಪೂರೈಸಿದ!
ನೋಡನೋಡುತ್ತಿದ್ದಂತೆಯೇ ಪಾಸೂ ಆಯಿತು,
ನಾಕು ಹಂತದ ಜ್ವರಗಿರ ಭರಭರ!
ಅನ್ನಾಹಾರ ತ್ಯಜಿಸಿದವು ಕುಂಭಕರ್ಣ ಹುಳುಗಳು;
ಚಂದ್ರಿಕೆಯೊಳಗೆ ನುಸುಳಿದವು,
ಗೂಡುಕಟ್ಟಲು ತರಾತುರಿ!
 
ಎಲ್ಲಾ ಮುಗಿಯಿತು;
ಗೂಡುಗಳು ಪೇಟೆ ಮಂಡಿಯ ಸೇರಿದವು,
ನನ್ನೊಳಗೋ ಖುಷಿಯ ನೊರೆ.!
ಅಪ್ಪನ ಕೈಯಲ್ಲಿ ದುಡ್ಡು;
ನನ್ಕಾಲ್ಗಳಿಗೆ ಬೆಳ್ಳಿಗೆಜ್ಜೆ,ಗಿಲಿಗಿಲಿ ಗಿಲಕ್ಕಿನ ಲಜ್ಜೆ.!
 
ಕಾಲವುರುಳಿದ ಮೇಲೆ ಸ್ಪಷ್ಟವಾಯಿತು,
ತೊಡುವ ರೇಷಿಮೆಯ ಉಡುಗೆ,
ಚಿನ್ನದ ಹುಳುಗಳ ಸಮಾಧಿಯ ಮೇಲಿನ
ಚಿನ್ನದ ನೂಲೆನ್ನುವ ಸತ್ಯ..!
 
ರೇಷಿಮೆಯ ಕಸುಬಿನೊಳಗಿನ
ಮರ್ಮ ತಿಳಿಯುವ ಹೊತ್ತಿಗೆ,
ನನ್ನ ಗಿಲಕಿ ಶಬ್ಧದ ಕಾಲ್ಗೆಜ್ಜೆಯ ಸದ್ದೂ ಅಡಗಿ
ಮೂಲೆಯ ಹಳೆಯ ಸಂದೂಕನು ಸೇರಿ
ಭದ್ರವಾಗಿ ತಳವೂರಿಬಿಟ್ಟಿತ್ತು
ಅಮ್ಮನ ರೇಷಿಮೆಯ ಸೀರೆಯೊಳಗೆ…!
 

‍ಲೇಖಕರು G

17 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading