ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ…

img_9629.jpg

ಮಯೂರದಲ್ಲಿ ಕಡಿದಾಳ್ ಶಾಮಣ್ಣ ಅವರ ಆತ್ಮವೃತ್ತಾಂತವನ್ನು ಬರೆಯುವುದರ ಮೂಲಕ ಸುದ್ದಿಯಾದ ಅಕ್ಷತಾ ಕೆ ಕವನ ಸಂಕಲನ ಹೊರ ತಂದಿದ್ದಾರೆ. ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಎಂಬ ಹೆಸರೇ ಅವರ ಕವನಗಳ ಭಿನ್ನ ಹಾದಿಯನೂ ಸೂಚಿಸುತ್ತದೆ. ಈ ಕವಿಯ ನೋಟದ ಬೀಸು ದೊಡ್ಡದು ಎನ್ನುತ್ತಾರೆ ವೈದೇಹಿ ತಮ್ಮ ಬೆನ್ನುಡಿಯಲ್ಲಿ. ಇದು ಹೌದು ಎನ್ನುವುದನ್ನು ಇವರು ಆಯ್ದುಕೊಂಡಿರುವ ಕವಿತೆಯ ವಸ್ತುಗಳು ಸೂಚಿಸುತ್ತವೆ.

ಸದಾ ಕವನ ಬರೆಯುವ ಪ್ರತಿಭಾ ನಂದಕುಮಾರ್ ಅಪರೂಪವಾದ ಮುನ್ನುಡಿ ಬರೆದಿದ್ದಾರೆ. ಪ್ರತಿಭಾ ಮುನ್ನುಡಿ ಕಾರಣಕ್ಕೂ ಈ ಸಂಕಲನ ಓದಬೇಕು ಎನಿಸುವಂತಿದೆ. ಅಕ್ಷತಾ ಅಮ್ಮ ಹೇಳುತ್ತಿದ್ದರಂತೆ. ನಿನ್ನ ಕವನಗಳಿಗಿಂತ ಅದನ್ನು ಓದಿ ಬರುವ ಪತ್ರಗಳೇ ಚೆನ್ನಾಗಿರುತ್ತವೆ ಅಂತ.

ಸರ್ಕಸ್ ಹುಡುಗಿ ಎಂಬ ಕವಿತೆ  ಕರ್ಮವೀರದಲ್ಲಿ ಪ್ರಕಟವಾದಾಗ ಬಂದ ಪತ್ರಗಳ ರಾಶಿ ನಿರೀಕ್ಷೆಗೂ ಮೀರಿದ್ದು. ಮಲೆನಾಡ ಒಡಲಲ್ಲಿ ಅರಳಿದ ಈ ಕವಯತ್ರಿಯ ಆ ಒಂದು ಕವನ ನಿಮ್ಮ ಮುಂದೆ ಇಡುತ್ತಿದ್ದೇವೆ. ಪುಸ್ತಕವೇ ಬೇಕಾದಲ್ಲಿ :
ಅಹರ್ನಿಶಿ ಪ್ರಕಾಶನ
ರಾಗಂ ಎರಡನೆ ತಿರುವು ವಿದ್ಯಾನಗರ ಸಹ್ಯಾದ್ರಿ ಕಾಲೇಜಿನ ಎದುರು ಶಿವಮೊಗ್ಗ- ೫೭೭೨೦೩ ಗೆ ಸಂಪರ್ಕಿಸಿ
ಮೊಬೈಲ್: ೯೪೪೯೧ ೭೪೬೬೨

  

img_1120.jpg  ಕಲೆ: ಮಕಾಳಿ

  

ಸರ್ಕಸ್ ಹುಡುಗಿ

ರಾತ್ರಿಯಿಡಿ ಕುಣಿದ ಹುಡುಗಿ
ಈಗ ಮಲಗಿದ್ದಾಳೆ
ಯಾರು ಬಂದು ಎಬ್ಬಿಸಿದರೂ
ಏಳಲೊಳ್ಳಲು  ಚೆಲುವೆ
ಕುಂಭಕರ್ಣನ ಸುಖನಿದ್ದೆಯಲ್ಲ
ಒಂದಿಷ್ಟು ಬಿಡುಗಡೆ
ಬದುಕಿನಿಂದ ಬದುಕಿನಾಚೆಯ
ಲೋಕಕ್ಕೆ ಒಮ್ಮೆಗೆ
ಜಿಗಿಯುವ ತುಡಿತ
ಉಸಿರಿನ ಮಿಡಿತಕ್ಕಾಗಿಯೇ
ಈ ಎಲ್ಲಾ ದುಡಿತ

ರಾತ್ರಿಯೆಲ್ಲಾ ಮಾಡಿ ತೋರಿಸಿದ್ದಾಳೆ
ತರತರದ ಚಾಕಚಕ್ಯತೆ
ರಿಂಗ್ ಮಾಸ್ತರ್ ನ  ತಾಳಕ್ಕೆ
ತಕ್ಕಂತೆ ಕುಣಿದು ಗಳಿಸಿದ್ದಾಳೆ
ಪ್ರೇಕ್ಷಕ ಪ್ರಭುವಿನ ಮೆಚ್ಚುಗೆ
ರಾತ್ರಿಯ ಕಲೆಕ್ಷನ್ ಗೇನು
ಖೋತಾ ಇಲ್ಲ ಎಂಬ ನಮ್ಬುಗೆಯಲ್ಲಿ

ಆನೆ, ಸಿಂಹ, ಹುಲಿ, ಕರಡಿ
ಬಾಯಿಗೆ ಕೈಯಿಟ್ಟು, ಹತ್ತಿಕೂತು
ತಿವಿದು ತಾನಿನ್ನೂ  ಬದುಕಿದ್ದೇನಲ್ಲ
ಎನ್ನುವ ಅಚ್ಚರಿಯಲ್ಲಿ
ಹುಡುಗಿ ಸರ್ಕಸ್ ಕಂಪನಿಯ
ಮೂಲೆಯಲ್ಲಿ ನಿದ್ದೆ ಹೋಗಿದ್ದಾಳೆ

ಬೆಚ್ಚನೆಯ ಹಾಸಿಗೆಯಿಲ್ಲ
ಮೇಲು ಹೊದಿಕೆಯು ಇಲ್ಲ
ಕೊನೆಗೊಂದು ಚಾಪೆಗೂ ಗತಿಯಿಲ್ಲ
ಕನಸಿಗೆಲ್ಲಿಯ ಬರ ಹೇಳಿ?
ಎಬ್ಬಿಸಬೇಡಿ ಅವಳ ಕಾಡಬೇಡಿ

ಸೂರ್ಯ ಬಾಡುವವರೆಗಾದರೂ
ಮಲಗಲಿ ಬಿಡಿ ಆಮೆಲಿದ್ದೆ
ಇದೆಯಲ್ಲ ಅವಳ ಬದುಕ
ವ್ಯಾಪಾರ ಅಲ್ಲಿಯವರೆಗಾದರೂ
ಕನಸ ಬರೆಸಿಕೊಳ್ಳಲು
ಅವಳಿಗೆ ಅನುವು ಮಾಡಿಕೊಡಿ

‍ಲೇಖಕರು avadhi

12 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading