ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಪಾ ಹಾಸನ ಕವಿತೆ: ’ಹೆಣ್ಣ ನೋವಿಗೂ ತುಡಿವ ಪರಿಪೂರ್ಣ..’

ಮಹಾ ಪರಿನಿರ್ವಾಣ

ರೂಪ ಹಾಸನ

1
ಕಾಂಡವೇ ಶಿಲೀಕೃತಗೊಂಡು
ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ
ಕೆತ್ತಿದ ಬುದ್ಧನಿಗೆ
ಅವಳಡುಗೆ ಮನೆಯೀಗ ತಪೋವನ.
ನೀಳ ಕಣ್ಣು ಮುಚ್ಚಿ
ಧ್ಯಾನಕ್ಕೆ ಕೂತ ಅವನೊಂದಿಗೆ
ಅವಳ ನಿತ್ಯ ಕಸುಬಿನಲ್ಲೇ
ಮೌನ ಜುಗಲ್ಬಂದಿ.

2
ಸೊಪ್ಪು ಸೋಸುತ್ತಾ
ಕಾಳು ಬಿಡಿಸುತ್ತಾ
ಪಾತ್ರೆ ತೊಳೆಯುತ್ತಾ
ಮಗುವಿಗೆ ಹಾಲೂಡಿ
ಲಾಲಿ ಹೇಳುತ್ತಾ
ಮರಗಲ್ಲ ಬುದ್ಧನನ್ನು ನೆಟ್ಟಿದ್ದಾಳೆ
ಹೆಣ್ಣ ಪ್ರತಿರೂಪದ ಮೃತ್ತಿಕೆಯಲಿ.
3
ಗಡಿಬಿಡಿಯಲಿ ಕೈಸುಟ್ಟು
ಬೆರಳು ಕೊಯ್ದು
ಜಾರಿ ಬಿದ್ದು
ನೋವು ಉಮ್ಮಳಿಸಿ
ಬಿಕ್ಕಳಿಸಿದ ಸದ್ದು.
ಒಂದಿಷ್ಟೇ ಕಣ್ತೆರೆದು ನೋಡಿ
ಥಟ್ಟನೆ ಮುಚ್ಚುವ ತಥಾಗತ!
 
ಅವಳ ನೋವಿಗೆ ಮಿಡುಕುವನೇ?
ತನ್ನ ಸಂಘಕ್ಕೇ ಹೆಣ್ಣ ನಿರಾಕರಿಸಿ
ಅವಳೊಡಲನೇ ಅಪಮಾನಿಸಿ
ಈ ಹಸಿಮಣ್ಣನೊದ್ದು ಮೇಲೇರಿದವನು?
ಛೆ! ಅವನೆಂಥ ಬುದ್ಧ?

 

4
ಈರುಳ್ಳಿ ಹೆಚ್ಚುವ ನೆವದಲಿ
ಒಳಗಿನ ಸಂಕಟಕ್ಕೇ ಬಾಯ್ಬಂದು
ದಳ ದಳ ಉದುರುವ ಅವಳ ಕಣ್ಣೀರಿಗೆ
ಈಗೀಗ ಅವನ ಕಣ್ಣಂಚಿನಲ್ಲೂ
ಕಂಡೂ ಕಾಣದಂತೆ ನೀರ ಪಸೆಯೇ?
5
ಒಲೆಯ ಕಾವಿಗೆ ಬಿಸಿಯಾಗಿ
ಕುಳಿರ್ಗಾಳಿಗೆ ತಂಪಾಗಿ
ಜೋಗುಳಕ್ಕೆ ನಿದ್ದೆಯಾಗಿ
ಪಾತ್ರೆ ಸಪ್ಪಳಕ್ಕೆ ಕಿವಿಯಾಗಿ
ಅಡುಗೆ ಘಮಕ್ಕೆ ವಾಸನೆಯಾಗಿ
ಅವಳ ತುಡುಮುಡಿಕೆಗೆ ಕಣ್ಣಾಗಿ
ಅರಳುತ್ತಿವೆ ಅವನೊಳಹೊರಗು
ಬುದ್ಧನೆನಿಸಿಕೊಂಡೂ ಮುಕ್ಕಾಗಿ
ಮಿಕ್ಕುಳಿದ ಸಾಕ್ಷಿಗಾಗಿ
ಅವಳ ಆರ್ದ್ರತೆ
ಅವನ ನಿರ್ವಿಕಾರತೆಯ
ಅನುಸಂಧಾನದಲ್ಲೇ ಒಳಗೊಳುವ
ಪರಿಪೂರಕ ಸಂಭಾಳಿಕೆ.
6
ಹೆಣ್ಣ ಮಿಡಿತದ ಮೃತ್ತಿಕೆಯಲಿ ನೆಟ್ಟ
ಮರಗಲ್ಲ ಬುದ್ಧನಿಗೀಗ
ನೆಲದಾಳದಲ್ಲೆಲ್ಲಾ ಬೇರು
ಕೈಕಾಲು ಎದೆ ತಲೆಗಳೆಲ್ಲ ಚಿಗುರು
 
ಅವನೀಗ ಮತ್ರ್ಯಲೋಕದ
ಜೀವಂತ ಕೂಸು
ಕಣಕಣದ ಚಲನೆಗೂ ಮಿಡಿವ
ಹೆಣ್ಣ ನೋವಿಗೂ ತುಡಿವ
ಪರಿಪೂರ್ಣ!
[ಈ ಪದ್ಯದಲ್ಲಿ ಶಿಲೀಕೃತಗೊಂಡ ಕಾಂಡ ಅಥವಾ ಮರಗಲ್ಲು ಎಂಬ ಪದವನ್ನು ಬಳಸಿದ್ದೇನೆ. ಇದು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಪದ. ಮರದ ಕಾಂಡ ಒಣಗಿ ಅನೇಕ ವರ್ಷಗಳ ಕಾಲ ಮಣ್ಣಿನೊಂದಿಗಿನ ಸಂಪರ್ಕದಿಂದ, ರಾಸಾಯನಿಕಕ್ರಿಯೆ ನಡೆದು ಖನಿಜವನ್ನು ಹೀರಿ ಮರದ ಕಾಂಡವೇ ಕಲ್ಲಾಗಿ ಪರಿವರ್ತನೆಯಾಗುವ ಸೃಷ್ಟಿ ವಿಶೇಷಕ್ಕೆ ಇಂಗ್ಲಿಷಿನಲ್ಲಿ petrified wood ಎನ್ನುತ್ತಾರೆ. ಅದಕ್ಕೆ ತಕ್ಕ ಅರ್ಥ ನೀಡುವ ಪದ ಕನ್ನಡದಲ್ಲಿ ಇಲ್ಲ. ಹೀಗಾಗಿ ನಾನದನ್ನು ‘ಮರಗಲ್ಲು’ ಎಂದಿಲ್ಲಿ ಬಳಸಿದ್ದೇನೆ.]

 

 

‍ಲೇಖಕರು avadhi

27 March, 2013

3 Comments

  1. chalam

    ಚೆಂದದ ಕವಿತೆ.

  2. pravara

    ಬುದ್ಧ ಇನ್ನು ಅದೆಷ್ಟು ಜನರ ಕೈಯಲ್ಲಿ ಪದ್ಯಗಳಾಗುತ್ತಾನೋ…. ತುಂಬಾ ಚೆನ್ನಾಗಿದೆ

    • ಅಶೋಕ ಶೆಟ್ಟರ್

      ಪ್ರವರ, ರೂಪ ಅವರ ಈ ಕವಿತೆ ಓದಿ “ಕಪಿಲವಸ್ತುವಿಗೆ ಬುದ್ಧ ಬಂದ” ಎಂಬ ನನ್ನದೇ ಕವಿತೆ ನೆನಪಾಗುತ್ತದೆ. “ಬುದ್ಧನ ಬುದ್ಧತ್ವದಲ್ಲಿದ್ದ ಇನ್ನಾವ ಓರೆಕೋರೆಗಳು ಕನ್ನಡದ ಕವಿ-ಕವಯಿತ್ರಿಯರ ಕಾವ್ಯದಲ್ಲಿ ಅನಾವರಣಗೊಳ್ಳುತ್ತವೋ” ಎಂಬುದು ಸಮಂಜಸ ಪ್ರಶ್ನೆ. It is the business of the poets/poetesses to speak of things that others have not grasped or have grasped but have not spoken about..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading