ರಾಹುಲ್ ಅವರ ಅಪ್ಪುಗೆಯನ್ನು ಅಪರಾಧದ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ..

ರಾಹುಲ್ ಗಾಂಧಿ ನಮ್ಮತ್ತ ಫ್ಲೈಯಿಂಗ್ ಕಿಸ್ ತೂರಿದರು ಎಂದು ಬಿಜೆಪಿಯ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಬಿಜೆಪಿಯ ಎಲ್ಲಾ ಮಹಿಳಾ ಸಂಸದರು ಈ ಕುರಿತು ಸ್ಪೀಕರ್ ಗೆ ದೂರು ನೀಡಿದ್ದಾರೆ. 

ಈ ಪ್ರಕರಣದ ಹಿನ್ನೆಲೆಯಲ್ಲಿ ಈ ಹಿಂದೆ ‘ಅವಧಿ’ಯಲ್ಲಿ ರಾಜಕೀಯ ವಿಶ್ಲೇಷಣೆಯ ಅಂಕಣ ಬರೆಯುತ್ತಿದ್ದ ರವಿಕುಮಾರ್ ಟೆಲೆಕ್ಸ್ ಅವರ ಮತ್ತೊಂದು ಬರಹವನ್ನು ಮರು ಓದಿಗಾಗಿ ನೀಡುತ್ತಿದ್ದೇವೆ. ಇದು ಪ್ರಧಾನಿಯನ್ನು ರಾಹುಲ್ ಆಲಂಗಿಸಿದ ಪ್ರಕರಣದ ಬಗ್ಗೆ-

ಅಂಗುಲಿಮಾಲನಿಗೆ ಬುದ್ದ ಆಲಿಂಗನ!

ಮೊನ್ನೆ ಲೋಕಸಭೆಯಲ್ಲಿ ರಾಹುಲ್‌ಗಾಂಧಿ ತನ್ನ ವಿಪಕ್ಷ ಸ್ಥಾನದ ಅಂಗಳದಿಂದ ಆಡಳಿತ ಪಕ್ಷದ ಜಗುಲಿಗೆ ಸಡಗರದಿಂದಲೆ ನಡೆದು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಆಲಿಂಗನ ಮಾಡಿಕೊಂಡದ್ದು ಮಾತ್ರ ಕೆಲವರ ಪಾಲಿಗೆ ಪ್ರಳಯವೇ ಸಂಭವಿಸಿದಂತೆ ಆಗಿಬಿಟ್ಟಿದೆ.

ಇದಾಗಬಾರದಿತ್ತು! ಲೋಕಸಭೆಯ ಕಲಾಪಕ್ಕೆಒಂದು ಸಂವಿಧಾನಿಕ ರೀತಿ-ರಿವಾಜ್ಹುಗಳು ಇವೆ. ಶಿಷ್ಟಾಚಾರದ ಚೌಕಟ್ಟುಗಳಿವೆ. ಯಾರು ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬ ನಿಯಮಗಳಿವೆ. ಅವುಗಳನ್ನು ಮೀರುವುದು ಉಲ್ಲಂಘಿತ ಅಪರಾಧವೇ ಸರಿ. ರಾಹುಲ್‌ಗಾಂಧಿ ಇಂತಹ ಚೌಕಟ್ಟುಗಳನ್ನು ಮೀರಿ ನಡೆದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನಖರ್ಗೆ ಅವರು ಬುದ್ದಿ ಹೇಳಬೇಕಿತ್ತು. ಅದಾಗಲಿಲ್ಲ. ಸುಬ್ರಹ್ಮಣ್ಯಂಸ್ವಾಮಿಯಂತಹ ಹಿರಿಯ (?) ರಾಜಕಾರಣಿ ರಾಹುಲ್‌ಗಾಂಧಿ ಮೋದಿ ಅವರಿಗೆ ವಿಷದ ಸೂಜಿ ಚುಚ್ಚಿರಲೂಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಅಷ್ಟರ ಮಟ್ಟಿಗೆ ರಾಹುಲ್ ಅವರ ಅಪ್ಪುಗೆಯನ್ನು ಅಪರಾಧದ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ.

ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಆಲಂಗಿಸಿಕೊಂಡಿದ್ದರಲ್ಲಿ ಆದ ಪ್ರಮಾದವೇನು? ಎಂದು ನಾನು ಮತ್ತೆ ಮತ್ತೆ ಆ ಸಂದರ್ಭದ ತುಣುಕುಗಳನ್ನು ಅಂತರ್‌ಜಾಲದಲ್ಲಿ ನೋಡಿದೆ.

ರಾಹುಲ್‌ಗಾಂಧಿ ಈ ದೇಶದ ಪ್ರಧಾನಿ (ಮೋದಿಯಲ್ಲ)ಯನ್ನು ಅಪ್ಪಿಕೊಂಡ ಪರಿ, ಅದಕ್ಕೆ ಪ್ರತಿಯಾಗಿ ಪ್ರಧಾನಿಗಳು ರಾಹುಲ್‌ರನ್ನು ಹತ್ತಿರ ಕರೆದು ಏನೋ ಉಸುರಿ ಹಗುರಾಗಿ ಬೆನ್ನು ತಟ್ಟಿದರು.

ಈ ದೃಶ್ಯಕ್ಕೂ ಮುಂಚೆ ರಾಹುಲ್ ಗಾಂಧಿ ಸರ್ಕಾರದ ವಿರುದ್ದ ಮಂಡಿಸಲಾದ ಅವಿಶ್ವಾಸ ನಿರ್ಣಯ ಕುರಿತು ಮಾತನಾಡುತ್ತಾ ಸರ್ಕಾರದ ಲೋಪ-ದೋಷಗಳನ್ನು ಬಿಚ್ಚಿಡುತ್ತಿದ್ದರು. ನೋಟು ಅಮಾನ್ಯೀಕರಣ, ಜಿಎಸ್‌ಟಿ, ರೆಫೇಲ್ ಹಗರಣ, ಗುಂಪು ಹತ್ಯೆ , ದಲಿತರ ಮೇಲಿನ ಹಲ್ಲ -ಹತ್ಯೆ ಮತ್ತು ಇವುಗಳೆಲ್ಲದರ ಹಿಂದಿರುವ ಅಧಿಕಾರಸ್ಥ ಬಿಜೆಪಿಯ ಮತೀಯ ಮನೋಧರ್ಮವನ್ನು ಸೂಚ್ಯವಾಗಿ ಬಿಡಿಸಿದ್ದರು.

ರಾಹುಲ್‌ಗಾಂಧಿ ಈ ಹಿಂದೆಂದಿಗಿಂತಲೂ ಪ್ರಬುದ್ಧವಾಗಿ ಮಾತನಾಡಿದ್ದರು. ವಿಪಕ್ಷ ಸ್ಥಾನದಲ್ಲಿ ಕುಳಿತು ರಾಜಕೀಯ ಚರ್ಚೆಗೆ ಬೇಕಾದ ಎಲ್ಲಾ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಿರುವುದನ್ನು ಸಾಬೀತು ಪಡಿಸುವಂತಿತ್ತು ಅವರ ವಾಗ್ಝರಿ. ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಅಂಗವಸ್ತ್ರಗಳನ್ನು ಅಂಕಿಅಂಶಗಳ ಸಹಿತ ಕಳಚಿ ಹಾಕುತ್ತಾ ಬಿಗುವಿನ ಹವಾ ಸೃಷ್ಟಿಸಿದ್ದರು.

ಇಷ್ಟೆಲ್ಲಾ ಝಾಡಿಸಿ ಜಾಲಾಡಿದ ಮರುಕ್ಷಣದಲ್ಲೇ ರಾಹುಲ್‌ಗಾಂಧಿ ತಮ್ಮ ಕುರ್ಚಿ ಸರಿಸಿ ಸೀದಾ ಪ್ರಧಾನಿಗಳ ಬಳಿ ಬಂದು ಗುಳಿಕೆನ್ನೆಯ ನಗುವಿನೊಂದಿಗೆ ಅಪ್ಪಿಕೊಂಡರು. ಪ್ರಧಾನಿಗಳು ಕ್ಷಣಕಾಲ ಅವಕ್ಕಾದರೂ ಮರುಕ್ಷಣವೇ ಹೊರಡುತ್ತಿದ್ದ ರಾಹುಲ್‌ಗಾಂಧಿ ಅವರನ್ನು ತಡೆದು ನಗುಮೊಗದಿಂದಲೆ ಏನನ್ನೋ ಉಸುರಿ ಹಗುರಾಗಿ ಬೆನ್ನು ಚಪ್ಪರಿಸಿದರು.

ಪ್ರಧಾನಿಗಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸಚಿವ ಅನಂತಕುಮಾರ್, ಸ್ಮೃತಿಇರಾನಿ, ಕಿರಣ್‌ರಿಜೂ, ಸಂಸದ ಜಯಂತ್ ಸಿನ್ಹ, ಅನುರಾಗ್‌ ಠಾಕೂರ್ ಅವರುಗಳು ಈ ಕ್ಷಣವನ್ನು ಆನಂದಿಸುತ್ತಿರುವುದು ಕಾಣುತ್ತಿತ್ತು. ಕೆಲವರು ಚಪ್ಪಾಳೆ ತಟ್ಟಿದರು. ಬಿಗುವಿನಿಂದ ಕೂಡಿದ್ದ ಲೋಕಸಭೆ ತಿಳಿಗೊಂಡು ಉಲ್ಲಾಸಗೊಂಡಿತ್ತು.

ಪ್ರಧಾನಿಯ ಆಡಳಿತ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ರಾಹುಲ್‌ಗಾಂಧಿ ಮರುಕ್ಷಣದಲ್ಲೇ ಅದೇ ಪ್ರಧಾನಿಯವರನ್ನು ಅಪ್ಪಿಕೊಂಡದ್ದು, ಅದಕ್ಕೆ ಪ್ರತಿಯಾಗಿ ಪ್ರಧಾನಿಗಳು ನಗುಮೊಗದಿಂದಲೆ ಪ್ರತಿಕ್ರಿಯಿಸಿದ್ದು ನಿಜಕ್ಕೂ ಪ್ರಜಾಪ್ರಭುತ್ವದ ಸೌಂದರ್ಯದ ಮಾದರಿಗಳಂತೆ ಚರಿತ್ರೆಯ ಪುಟ ಸೇರಿಕೊಂಡಿವೆ.

ರಾಹುಲ್ ಗಾಂಧಿ ಅವರು ಪ್ರಧಾನಿಯವರನ್ನು ಅಪ್ಪಿಕೊಂಡಿದ್ದು ಲೋಕಸಭೆಯ ಶಿಷ್ಟಾಚಾರದ ನೆಲೆಯಲ್ಲಿ ತಪ್ಪಿರಬಹುದು. ಅಥವಾ ಪ್ರಧಾನಿಯ ಸುರಕ್ಷತೆಯ ಕಾರಣದಿಂದಾಗಿ ಈ ನಡೆ ಅಪಾಯವಾಗಿಯೂ ಇರಬಹುದು. ಭದ್ರತೆಯ ಲೋಪವನ್ನು ತಂದೊಡ್ಡಬಹುದು. ಇದೆಲ್ಲಕ್ಕಿಂತ ರಾಹುಲ್‌ಗಾಂಧಿ ಅವರು ಹೂಡಿದ ರಾಜಕೀಯ ಪಟ್ಟು ಇರಬಹುದು. ಇವೆಲ್ಲವೂ ನಮ್ಮ ರಾಜಕೀಯ ಗ್ರಹಿಕೆಯನ್ನು ಅವಲಂಬಿಸಿರುತ್ತವೆ.

ತನಗೆ ಮಗ್ಗಲು ಮುಳ್ಳಾಗಿ ಕಾಡುತ್ತಿರುವ ಪರಮ ಶತೃ ರಾಷ್ಟ್ರ ಪಾಕಿಸ್ತಾನಕ್ಕೆ ಬಸ್ಸಿನಲ್ಲಿ ಹೋದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕ್ ಪ್ರಧಾನಿಯನ್ನು ತಮ್ಮ ಎರಡು ತೋಳುಗಳಿಂದ ಬಾಚಿ ಸಪ್ರೇಮದಿಂದ ತಬ್ಬಿಕೊಂಡದ್ದು ಅವರ ಪಕ್ಷಕ್ಕೆ ಒಂದು ಹಗ್ಗಳಿಕೆಯ ಚರಿತ್ರೆಯಾಗಿ ಈಗಲೂ ಉಳಿದಿದೆ. ಅದೊಂದು ಚರಿತ್ರಾರ್ಹ ಅಪ್ಪುಗೆ!

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಾ, ಇಂದಿಗೂ ಆರ್ಥಿಕ ನೆರವು ಧಾರೆಯರೆಯುತ್ತಾ ಭಾರತದ ವಿರುದ್ದ ನಡೆಯುತ್ತಿರುವ ಭಯೋತ್ಪಾದನೆಗೆ, ಫ್ರಾಕ್ಸಿ ವಾರ್ ಗೆ ಕುಮ್ಮಕ್ಕು ನೀಡುತ್ತಿರುವ ಜಾಗತಿಕ ಕುತಂತ್ರಿ ವ್ಯಾಪಾರಿ ರಾಷ್ಟ್ರ ಅಮೇರಿಕಾದ ಅಧ್ಯಕ್ಷರನ್ನು ಮೋದಿ ಅವರು ತಬ್ಬಿಕೊಂಡು ಪ್ರೀತಿ ಎರೆದದ್ದು ಅದೂ ಒಂದು ಚರಿತ್ರಾರ್ಹಅಪ್ಪುಗೆ !

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಭಯೋತ್ಪಾದಕರೊಂದಿಗೆ ನಂಟು ಇದೆ ಎನ್ನಲಾಗುವ ಪಿಡಿಪಿ ಜೊತೆ ಮೊನ್ನೆ ಮೊನ್ನೆ ವರೆಗೂ ತಬ್ಬಿಕೊಂಡು ಅಧಿಕಾರ ಉಂಡವರಿಗೆ ಅದೊಂದು ಹಿತವಾದ ಪ್ರಣಯಭರಿತ ಆಲಿಂಗನವೇ ಸರಿ.

ಇಂತಹ ಆಲಿಂಗನಗಳನ್ನು ಹೆಗ್ಗಳಿಕೆಯನ್ನಾಗಿ ಕಾಣುತ್ತಿರುವ ಭಕ್ತರು, ಪ್ರಾಯೋಜಿತ ಮಾಧ್ಯಮಗಳು ತನ್ನದೆ ದೇಶದ ಜವಾಬ್ದಾರಿಯುತ ವಿಪಕ್ಷದ ನಾಯಕನೊಬ್ಬ ತನ್ನದೇ ಪ್ರಧಾನಿಯನ್ನು ಆಲಿಂಗಿಸಿಕೊಂಡದ್ದು ಅಪರಾಧವಾಗಿ ಕಾಣುತ್ತಿವೆ. ಶಿಷ್ಟಾಚಾರದ ಉಲ್ಲಂಘನೆಯಾಗಿ ದೂರಿಗೆ ಅರ್ಹವಾಗುತ್ತದೆ. ಎಲ್ಲವನ್ನೂ ರಾಜಕೀಯ ನಂಟು-ಗಂಟುಗಳ ಕಣದಲ್ಲೇ ನೋಡುವ ಪರಿಪಾಠವನ್ನು ಬೆಳೆಸಿಕೊಳ್ಳಲಾಗಿದೆ ಮತ್ತು ಅದನ್ನೆ ಜನರಲ್ಲೂ ಬಿತ್ತುವ ಅದರಾಚೆ ಹೊರಳಬಹುದಾದ ಆಲೋಚನೆಯನ್ನು ಹತ್ತಿಕ್ಕುವ ಭೌದ್ಧಿಕ ಸಂಚು ನಡೆಯುತ್ತಲೆ ಬಂದಿದೆ.

ಯುವಕರಿಗೆ ಉದ್ಯೋಗ, ಆದಿವಾಸಿಗಳು. ಮಹಿಳೆಯರ ಮೇಲಿನ ದೌರ್ಜನ್ಯ, ನೋಟು ಅಮಾನ್ಯೀಕರಣ, ಜಿಎಸ್‌ಟಿ, ರೆಫೇಲ್ ಹಗರಣ, ಡೊಕ್ಲೋಮಾ ಗಡಿ ವಿವಾದ, ರೈತರ ಸಾಲಮನ್ನಾ, ಗುಂಪು ಹತ್ಯೆ , ದಲಿತರ ಮೇಲಿನ ಹಲ್ಲೆ -ಹತ್ಯೆ , ಕಪ್ಪುಹಣ ವಾಪಾಸ್, ಗೋಹತ್ಯೆ ಆರೋಪದಲ್ಲಿ ಸಂಘಟಿತ ಕ್ರೈಂ ನ ಕುರಿತು ರಾಹುಲ್ ಗಾಂಧಿ ಅಡಿದ ಮಾತುಗಳಿಗೆ , ಎತ್ತಿದ ಪ್ರಶ್ನೆಗಳಿಗೆ ಪ್ರಭುತ್ವದ ದಂಡ ಹಿಡಿದವರು ಕೊಟ್ಟ ಉತ್ತರವಾದರೂ ಏನು? ಸತತ ೧೧ ಗಂಟೆಗಳ ಕಾಲದ ಕಲಾಪದಲ್ಲಿ ಭಾಗೀದಾರರು ತನ್ನ ಬೂಸಿತನವನ್ನು ಸಮರ್ಥಿಸಿಕೊಳ್ಳುವ ಕಿಲುಬುತನವನ್ನೆ ತೋರಿದರು. ಈ ಸ್ವಯಂಘೋಷಿತ ಚೌಕಿದಾರ ಮತ್ತು ಭಾಗಿದಾರ ನಿಗೆ ರಾಹುಲ್‌ಗಾಂಧಿ ಅಪ್ಪುಗೆ ಹಿತವೆನಿಸಲಿಲ್ಲ. ಭಕ್ತರಿಗೆ ಅದು ಅಪಥ್ಯವಾಗಿತ್ತು. ತುತ್ತೂರಿ ಮಾಧ್ಯಮಗಳಿಗೆ ಇದೊಂದು ಪಪ್ಪುವಿನ ಆಟವಾಗಿತ್ತು.

ಮನುಷ್ಯನನ್ನು ಮನುಷ್ಯರೆನಿಸಿಕೊಂಡವರ ಗುಂಪೇ ನಡುಬೀದಿಯಲ್ಲಿ ಮಕ್ಕಳ ಕಳ್ಳನೆಂದೋ, ಗೋಹತ್ಯೆಕೋರನೆಂದೋ ಬಡಿದು ಕೊಲ್ಲುತ್ತಿರುವಾಗ ಜಾತಿಯ ಕಾರಣಕ್ಕೆ ಹೆಣ್ಣುಮಗಳನ್ನು ಅತ್ಯಾಚಾರ ನಡೆಸಿ ಜೀವಂತ ಸುಟ್ಟು ಹಾಕುತ್ತಿರುವ, ಧರ್ಮದ ಕಾರಣಕ್ಕೆ ಒಂದು ಸಮುದಾಯವನ್ನು ಶತೃಗಳಂತೆ ಕಾಣುವ ಹಾಗೂ ಜೀವಪರ ದನಿಯ ಸಂತರನ್ನು ಹಾಡುಹಗಲೆ ಹಲ್ಲೆ ನಡೆಸಿ ಕೆಡವುವ ಅತಿರೇಕಗಳ ಕೇಕೆ ಹಾಕುತ್ತಿರುವ ಅಂಗುಲಿಮಾಲಗಳ ಹಾವಳಿಯ ಈ ಹೊತ್ತಿನಲ್ಲಿ ಸಿದ್ದಾಂತ ಭಿನ್ನತೆಗಳಿಂದ ಮುಖಾಮುಖಿಗೊಳ್ಳುತ್ತ ವೈಚಾರಿಕ ಸಂಘರ್ಷ ನಡೆಸುತ್ತಲೆ ನಾವು ಪರಸ್ಪರ ನಮ್ಮೊಳಗಿನ ಜನ್ಮಜಾತ ಪ್ರೀತಿ, ಕಾರುಣ್ಯದಿಂದ ಆಲಂಗಿಸಿ ಬದಲಿಸಬೇಕಾದದ್ದು ತುರ್ತು ಆಗಿದೆ.

ಇದು ಎಲ್ಲಾ ಕಾಲದ ಮದ್ದು ಕೂಡ.

ಲೋಕಸಭೆಯಲ್ಲಿ ನಡೆದದ್ದು ಅದೇ ಎಂದು ಭಾವಿಸುವಷ್ಟು ವಿವೇಕ ಇಲ್ಲದಾಗಿದೆ. ಈಗ ನಡೆಯುತ್ತಿರುವುದು ದೇಶಾವರಿರಾಜಕೀಯ ಮಾತ್ರ. ರಾಹುಲ್ ಅವರು ಮೋದಿಯನ್ನು ಆಲಂಗಿಸಿಕೊಂಡದ್ದು ಕಾಂಗ್ರೆಸ್ಸಿಗರು ಕೊಂಡಾಟದಂತೆ ಇದು ಭೂಕಂಪವೂ ಅಲ್ಲ, ಷೋಕಾಲ್ಡ್ ವಿಶ್ಲೇಷಕರು ಅರ್ಥೈಹಿಸುವ ರಾಜಕೀಯ ಸರ್ಜಿಕಲ್ ಸ್ಟ್ರೈಕೂ ಅಲ್ಲ, ಬಿಜೆಪಿ ಮತ್ತವರ ಭಕ್ತಗಣ ಮಾಡುವ ಲೇವಡಿಯ ಮನರಂಜನೆಯೂ ಅಲ್ಲ ಇದೊಂದು ಸಂವಾದ ವಿಚಾರ ಎದುರುಗೊಳ್ಳುವ ಆರೋಗ್ಯಪೂರ್ಣ ನಡೆಯಷ್ಟೇ. ರಾಜಕೀಯ ಸೌಹಾರ್ದತೆಯ ಗುಣಲಕ್ಷಣಗಳಷ್ಟೆ.

ನನಗಾಗಿ ನಿಮ್ಮಲ್ಲಿ ದ್ವೇಷವಿದೆ
ನನಗಾಗಿ ನಿಮ್ಮಲ್ಲಿ ಸಿಟ್ಟಿದೆ.
ನನಗಾಗಿ ನಿಮ್ಮಲ್ಲಿ ಬಗೆ ಬಗೆಯ ಬೈಗಳಗಳಿವೆ
ನಿಮಗಾಗಿ ನಾನು ಪಪ್ಪು
ಆದರೆ ನಿಮಗಾಗಿ ನನ್ನಲ್ಲಿ ಪ್ರೀತಿ ಇದೆ.
ನಿಮಗಾಗಿ ನನ್ನಲ್ಲಿ ಸ್ಪಲ್ಪವೂ ದ್ವೇಷವಿಲ್ಲ, ಸಿಟ್ಟಿಲ್ಲ,
ನಿಮ್ಮಲ್ಲೂ ಪ್ರೀತಿಯ ಭಾವವಿದೆ ಅದನ್ನು ನಾನು ಹೊರತೆಗೆಯುತ್ತೇನೆ
ಪ್ರತಿಯೊಬ್ಬರಲ್ಲೂ ಆ ಪ್ರೀತಿಯನ್ನು ಹೊರತೆಗೆಯುತ್ತೇನೆ.
ಇದೆ ನಿಜವಾದ ಹಿಂದೂ ಧರ್ಮ

ಇಂತಹ ವಿವೇಕಯುತ ಮಾತುಗಳನ್ನಾಡುತ್ತಲೆ ಅಂಗುಲಿ ಮಾಲನ ಬಳಿಗೆ ಬುದ್ದ ತೆರಳಿದಂತೆ ತೆರಳಿದ ರಾಹುಲ್ ಬುದ್ಧನಲ್ಲದಿರಬಹುದು, ಆದರೆ ಈ ಆಲಿಂಗನದಿಂದ ಅಂಗುಲಿಮಾಲ ಇನ್ನಾದರೂ ಬದಲಾಗಲಿ.

‍ಲೇಖಕರು avadhi

August 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

 1. Kaidal krishnamurthy

  ಟೆಲೆಕ್ಸ್ ಸರ್ ನಿಜಕ್ಕೂ ಓದುಗನ ಮನಸ್ಸೂ ಕರಗಿತು

  ಪ್ರತಿಕ್ರಿಯೆ
 2. B.K.Rathnaiah Setty

  ದ್ವೇಷ ಪೂರಿತ.
  ಬುದ್ಧ ಅಲ್ಲ ಬುದ್ದು.
  ಈ ತರದ ಬರವಣಿಗೆಗಳು ಸಮಾಜದಲ್ಲಿ ಸಾಮರಸ್ಯ ತರುವ ಬದಲು ದ್ವೇಷವನ್ನು ಬಿತ್ತುತ್ತದೆ.

  ಅವಧಿಯಲ್ಲಿ ಈ ತೆರನ ಬರವಣಿಗೆಗಳು ಅನಾವಶ್ಯಕ,
  ಖಂಡನರ್ಹ.

  ಪ್ರತಿಕ್ರಿಯೆ
  • Ajit

   ಶಾಂತಿಯನ್ನು ಹರಡಲು ಹಣಮಂತ ಹೆಗಡೆ ಇದಾರಲ, ಯಾಕೆ ಚಿಂತೆ!!! 🙂

   ಪ್ರತಿಕ್ರಿಯೆ
 3. Shyamala Madhav

  ಕ್ಷಣ ತಬ್ಬಿಬ್ಬಾದರೂ, ಮರುಘಳಿಗೆಯೇ ಮೆಲುನಕ್ಕು, ನುಡಿದು ಬೆನ್ನು ತಟ್ಟಿದ್ದನ್ನು ಕಂಡು, ನಂತರದ ಅಸಹ್ಯ ಪ್ರತಿಭಟನೆಗಳನ್ನು ಕಾಣುವಾಗ, ಅವರೇ ಒಪ್ಪಿಕೊಂಡಿರುವಾಗ ಇವರಿಗೇನು ಇಂಥಾ ಉರಿ, ಅಂದು ಕೊಂಡಿದ್ದೆ. ಆದರೆ ಮತ್ತೆ ಬಂದ ಉತ್ತರದಲ್ಲಿ ಆ ಅತ್ಯಂತ ಕೀಳುರುಚಿಯ ಅಣಕವಾಡುಗಳು, ಆಂಗಿಕಗಳು ಆ ಉಚ್ಚಸ್ಥಾನದ , ಸದನದ ಮರ್ಯಾದೆಯನ್ನು ಕಳೆಯಲಿಲ್ಲವೇ?
  ಉತ್ತಮ ವಿಶ್ಲೇಷಣೆ, ರವಿ!

  ಪ್ರತಿಕ್ರಿಯೆ
 4. ಗಿರೀಶ ಭಟ್

  ಉದ್ದೇಶಪೂರ್ವಕ ವಾಗಿ ಲೇಖನದಲ್ಲಿ ರಫೆಲ್ ಯುದ್ಧ ವಿಮಾನಗಳ ಖರೀದಿಯ ಬಗ್ಗೆ ಆಡಿದ ಸುಳ್ಳು ಮಾತುಗಳನ್ನು, ನಿರಾಧಾರ ಆರೋಪಗಳನ್ನು, ಅದಕ್ಕಾಗಿ ಅನುಭವಿಸಿದ ಮುಖಭಂಗವನ್ನು ಕೈ ಬಿಟ್ಟು, ಅಪ್ಪುಗೆಯ ನಂತರದ ಕಣ್ಣು ಮಿಟುಕಿಸಿದ ಪ್ರಹಸನದ ಬಗೆಗೆ ಪ್ರಸ್ತಾಪವನ್ನೇ ಮಾಡದೆ ಅಪ್ಪುಗೆಯನ್ನೇ ಏನೋ ಒಂದು ಧೀರೋದಾತ್ತ ನಡೆ ಎಂಬಂತೆ ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡಲಾಗಿದೆ. ಭಟ್ಟಂಗಿತನದ ಪರಮಾವಧಿ ಲೇಖನವೊಂದನ್ನು ಪ್ರಕಟಿಸಿದ ಔಚಿತ್ಯವೂ ಅರ್ಥವಾಗಲಿಲ್ಲ

  ಪ್ರತಿಕ್ರಿಯೆ
 5. Shyamala Madhav

  ಸೀಟಿಗೆ ಮರಳಿ ಕುಳಿತಾಗ ಮೆಚ್ಚಿಕೆಯಿಂದ ತನ್ನತ್ತ ನೋಡಿದ ಗೆಳೆಯನತ್ತ ಮಾತಿಗೆ ಬದಲಾಗಿ ಮಾಡಿದ ಕಣ್ಸನ್ನೆಯಷ್ಟೇ. ಆದರೆ ದ್ವೇಷವೇ ತುಂಬಿದ ಮನಸು, ತಲೆಗಳಿಗೆ ಇದು ಹೊಳೆಯುವುದಾದರೂ ಹೇಗೆ? ಒಟ್ಟಿನಲ್ಲಿ ಅಪಾತ್ರದಾನವಾಯ್ತು.

  ಪ್ರತಿಕ್ರಿಯೆ
 6. Srikanth

  ನಿಮ್ಮ ಏಕಪಕ್ಷೀಯ ಮತ್ತು ಪೂರ್ವಾಗ್ರಹಪೀಡಿತ ಲೇಖನಗಳು ನಿರಾಸೆಗೊಳಿಸಿವೆ. ಈ ಲೇಖನವೊಂದೇ ಅಲ್ಲ, ಇತ್ತೀಚಿನ ಎಲ್ಲಾ ಲೇಖನಗಳು.

  ಪ್ರತಿಕ್ರಿಯೆ
 7. madhusudanrangenahally

  ಶಿಷ್ಟಾಚಾರದ ರಾಜಕಾರಣವನ್ನು ಮೀರಿದ ಒಂದು ಅಪ್ಪುಗೆ!

  ಬಹುಶ: ಅದೊಂದು ಸಣ್ಣ ತಪ್ಪನ್ನು ರಾಹುಲರು ಮಾಡದೇ ಹೋಗಿದ್ದರೆ ಮೊನ್ನೆಯ ವಿಸ್ವಾಸ ಮತ ಯಾಚನೆಯ ದಿನದಂದು ರಾಹುಲ್ ಗಾಂದಿಯವರು ನಡೆದುಕೊಂಡ ರೀತಿ ಮತ್ತು ಮಾಡಿದ ಬಾಷಣ ಬಹುಕಾಲ ಇಂಡಿಯಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಿತ್ತು.
  ವಿಶ್ವಾಸಮತದ ಪರವಾಗಿ ಸುದೀರ್ಘವಾಗಿ ವಸ್ತುನಿಷ್ಠವಾಗಿ(ಬಹುಶ: ಪ್ರಾನ್ಸ್ ಸರಕಾರದ ಹೇಳಿಕೆಯ ಉಲ್ಲೆÃಖವೊಂದನ್ನು ಹೊರತು ಪಡಿಸಿ) ಯಾವ ಹಿಂಜರಿಕೆಯೂ ಇರದಂತೆಮಾತಾಡಿದ ರಾಹುಲರ ಸರಕಾರದ ವಿರುದ್ದದ ಟೀಕೆಗಳಿಗೆ ಅಷ್ಟೇ ವಸ್ತುನಿಷ್ಠವಾಗಿ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಅದರೆ ತಮ್ಮ ಮಾತು ಮುಗಿಸಿದಾಕ್ಷಣ ಅವರು ನೇರವಾಗಿ ಪ್ರದಾನಮಂತ್ರಿಗಳ ಆಸನದ ಬಳಿ ಹೋಗಿ ಪ್ರದಾನಿಯವರನ್ನು ಅಪ್ಪಿಕೊಂಡಿದ್ದು ಸದನವನ್ನಿರಲಿ ಸ್ವತ: ಪ್ರದಾನಿಯವರಿಗೆ ವಿಸ್ಮಯವನ್ನುಂಟು ಮಾಡಿದ್ದು ನಿಜ. ಅಲ್ಲಿಯವರೆಗು ಎಲ್ಲವೂ ಚೆನ್ನಾಗಿಯೇ ಇತ್ತು. ಅದರೆ ಪ್ರದಾನಿಯವರ ಅಪ್ಪುಗೆಯ ನಂತರ ತಮ್ಮ ಸ್ಥಾನಕ್ಕೆ ಮರಳಿದ ರಾಹುಲ್ ಕ್ಯಾಮೆರಾಗಳಿವೆಯೆಂಬುದನ್ನುಮರೆತವರಂತೆ ತಮ್ಮ ಗೆಳೆಯ ಸಹ ಸಂಸದನತ್ತ ತಿರುಗಿ ಎಡಗಣ್ಣು ಮಿಟುಕಿಸಿದ್ದು ಅಲ್ಲಿಯವರೆಗಿನ ರಾಹುಲರ ವರ್ತನೆಯ ಗಾಂಭೀರ್ಯತೆಯನ್ನು ಮರೆಸಿಬಿಟ್ಟಿತು. ಅವರು ಸಹಜವಾಗಿಯೇ ಕಣ್ಣು ಮಿಟುಕಿಸಿದ್ದರೂ ನೇರ ಪ್ರಸಾರ ನೋಡುತ್ತಿದ್ದಜನರಿಗೆ ರಾಹುಲ್ ಪ್ರದಾನಿಯವರನ್ನು ತಬ್ಬಿಕೊಂಡಿದ್ದೇ ಒಂದು ನಾಟಕವೇನೊ ಎನ್ನುವಂತಹ ತಪ್ಪು ಸಂದೇಶ ನೀಡಿಬಿಟ್ಟಿತು.ಮೊದಲೇ ರಾಹುಲರನ್ನು ಸಮಯಬಂದಾಗಲೆಲ್ಲ ನೆಗೆಟಿವ್ ಶೇಡ್ ನಲ್ಲಿಯೇ ತೋರಿಸುವ ಪಟ್ಟಭದ್ರ ವಿದ್ಯುನ್ಮಾನ ಮಾಧ್ಯಮಗಳು ಸಹ ಅದನ್ನೆ ಹೈಲೈಟ್ ಮಾಡುತ್ತ ರಾಹುಲರ ಗಂಬೀರವಾದ ಬಾಷಣ ಮತ್ತು ಅಪ್ಪುಗೆಯ ಹಿಂದಿದ್ದ ಮಹತ್ವವನ್ನು ಮತ್ತು ನೈಜತೆಯನ್ನು ಮರೆಮಾಚಿ ಬಿಟ್ಟವು.
  ಮೊದಲಿಗೆ ರಾಹುಲರ ಬಾಷಣವನ್ನೊಮ್ಮೆ ನೋಡೋಣ. ರಾರ್ಫೆಲ್ ವಿಮಾನ ಖರೀಧಿಯಲ್ಲಿನ ಒಂದು ತಪ್ಪು ಮಾಹಿತಿಯ ಹೊರತಾಗಿ ಸರಕಾರಕ್ಕೆ ಅವರು ಕೇಳಿದ ಬಹುತೇಕ ಪ್ರಶ್ನೆಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದವು. ೨೦೧೪ರ ಲೋಕಸಭಾ ಚುನಾವಣೆಗು ಮುಂಚೆ ಪ್ರದಾನಿಯವರು ನೀಡಿದ್ದ ಪ್ರತಿಯೊಬ್ಬರ ಖಾತೆಗು ಹದಿನೈದು ಲಕ್ಷ ಹಣ ಹಾಕುವ ಭರವಸೆ ಇವತ್ತಿಗೂಈಡೇರಿಲ್ಲ. ಇದಕ್ಕೆ ಸರಕಾರ ಉತ್ತರಿಸಲೇ ಬೇಕಿತ್ತು. ಇನ್ನು ನೋಟ್ ಬ್ಯಾನ್ ನಂತರ ಈ ದೇಶದ ಸಾಮಾನ್ಯ ಜನತೆ ಅನುಭವಿಸಿದ ಸಂಕಷ್ಟಗಳ ಬಗ್ಗೆ ಅವರು ಸತ್ಯವನ್ನೆ ಹೇಳಿದ್ದರು. ಅದೇರೀತಿಜಿ.ಎಸ್.ಟಿ. ಕಾಯಿದೆಯನ್ನು ಅವಸರಸರವಾಗಿ ಅವೈಜ್ಞಾನಿಕವಾಗಿ ಜಾರಿಗೊಳಿಸಿ ದೇಶದ ಅರ್ಥ ವ್ಯವಸ್ಥೆ ಕುಸಿಯುವಂತೆ ಮಾಡಿದ್ದಕ್ಕೂ ಸರಕಾರವೇ ನೇರ ಹೊಣೆಯಾಗಿತ್ತು. ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ಬಗ್ಗೆ ಸರಕಾರವೇ ಹೊಣೆಯಾಗಿತ್ತು. ದೇಶದ ರೈತ ಸಮುದಾಯದ ಸರಣಿ ಆತ್ಮಹತ್ಯೆಯನ್ನು ತಡೆಗಟ್ಟಲು ಮತ್ತು ರೈತರ ಸಾಲಮನ್ನಾ ಮಾಡಲು ವಿಫಲವಾದ ಕೇಂದ್ರ ಸರಕಾರದ ಬಗ್ಗೆ ಅವರು ಸರಿಯಾದ ಮಾತುಗಳಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು.
  ಬಹುಶ: ತಮ್ಮ ರಾಜಕೀಯ ಬದುಕಿನಲ್ಲಿ ಮೊಟ್ಟ ಮೊದಲಬಾರಿಗೆ ರಾಹುಲ್ ಗಾಂದಿಯವರು ಇಷ್ಟೊಂದು ದೀರ್ಘಾವದಿಯ ಮೌಲ್ಯಯುತ ಬಾಷಣ ಮಾಡಿದ್ದರು. ಜೊತೆಗೆ ಅಂದಿನ ಅವರ ಬಾಷಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸ, ಆಕ್ರಮಣಕಾರಿ ಮನೋಬಾವ ಎದ್ದು ಕಾಣುತ್ತಿತ್ತು.
  ಪ್ರದಾನಮಂತ್ರಿಯನ್ನು ಅಪ್ಪಿಕೊಂಡಿದ್ದರ ಬಗೆಗಿನ ಟೀಕೆಗಳನ್ನು ಸ್ವಲ್ಪ ನೋಡೋಣ. ಹಲವರ ಪ್ರಕಾರ ಸದನದಲ್ಲಿ ಪ್ರದಾನಮಂತ್ರಿಯ ಸ್ಥಾನದಲ್ಲಿ ಮೋದಿಯವರು ಕೂತಿದ್ದಾಗ ರಾಹುಲರು ಅ ರೀತಿ ಅಪ್ಪಿಕೊಂಡಿದ್ದು ಸದನದ ಶಿಷ್ಟಾಚಾರವನ್ನು ಉಲ್ಲಂಗಿಸಿದಂತಾಗಿದೆ ಮತ್ತು ಪ್ರದಾನಿ ಸ್ಥಾನದ ಗೌರವವಕ್ಕೆ ಚ್ಯುತಿ ತರುವ ಕ್ರಿಯೆ ಎನ್ನಲಾಗುತ್ತಿದೆ, ಇರಬಹುದು! ಸದನದ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ನೋಡುವುದಾದರೆ, ನಮ್ಮ ಪ್ರಜಾಪ್ರಭುತ್ವವನ್ನು ಆರೋಗ್ಯವಾಗಿಡಲು ಶಿಷ್ಟಾಚಾರಗಳೇ ಸಾಕಾಗುವುದಿಲ್ಲ. ಬದಲಿಗೆ ಕೆಲವೊಮ್ಮೆ ಕ್ಷುಲ್ಲಕ ರಾಜಕಾರಣದ ವೈರತ್ವವನ್ನೂ ಮರೆತು ಇಂತಹ ಅಪರೂಪದ ಮಾನವೀಯ ಸ್ಪಂದನೆಗಳು ಸಹ ಬೇಕಾಗುತ್ತವೆಯೆಂಬುದನ್ನು ನಮ್ಮ ಮಾಧ್ಯಮದ ಮಿತ್ರರಾಗಲಿ ಆಡಳಿತ ಪಕ್ಷದ ಸದಸ್ಯರುಗಳಾಗಲಿ ಅರ್ಥ ಮಾಡಿಕೊಳ್ಳಲೇ ಇಲ್ಲ ಎನ್ನುವುದೇ ವಿಷಾದನೀಯ.
  ರಾಹುಲ್ ಗಾಂದಿಯವರ ಪ್ರತಿ ರಾಜಕೀಯ ನಡೆಯನ್ನೂ, ಪ್ರತಿ ಮಾತನ್ನೂ ಲೇವಡಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬಾಜಪದವರ ತಂತ್ರ ಇದೇನು ಮೊದಲಲ್ಲ. ಈ ಹಿಂದೆಯೂಪದೇ ಪದೇ ಮೋದಿಯವರು ರಾಹುಲರನ್ನು ಷಹಜಾದೇ(ರಾಜಕುಮಾರ) ಎಂದು ಅಣಗಿಸುತ್ತಲೇ ಮಾತಾಡುತ್ತಿದ್ದರು. ಜೊತೆಗೆ ರಾಹುಲರ ಬಾಷಣಗಳನ್ನು ತಮ್ಮ ಸಾರ್ವಜನಿಕ ಬಾಷಣಗಳಲ್ಲಿ ಅನುಕರಿಸಿ ಅಣಕಮಾಡುತ್ತ ಅವರ ಆತ್ಮವಿಶ್ವಾಸ ಉಡುಗುವಂತೆ ಮಾಡುತ್ತಲೇ ಬಂದಿದ್ದಾರೆ. ಬಾಜಪದ ಮಾಧ್ಯಮ ಸೆಲ್ಲಿನವರಂತು ರಾಹುಲರನ್ನು ಪಪ್ಪು ಎನ್ನುತ್ತ ಅವರ ಬಗ್ಗೆ ಹಲವು ನೂರು ಜೋಕುಗಳನ್ನು ಹರಿಯ ಬಿಟ್ಟಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಅದ್ಯಕ್ಷರದ ನಂತರವೂ ರಾಹುಲರ ಅನನುಭವಿತನವನ್ನು ಅಪಹಾಸ್ಯ ಮಾಡುತ್ತ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.
  ಆದರೆ ಈ ಬಾರಿ ತಮ್ಮ ಕಣ್ಣು ಹೊಡೆಯುವ ಕ್ರಿಯೆ ಮೂಲಕ ತಮ್ಮ ವಿರೋಧಿಗಳಿಗೆ ತಮ್ಮನ್ನು ಅಪಹಾಸ್ಯ ಮಾಡುವ ಆಯುಧವೊಂದನ್ನು ಸ್ವತ: ಅವರೇನೀಡಿದ್ದು ಮಾತ್ರವಿಷಾದನೀಯ!
  ಕು.ಸ.ಮಧುಸೂದನರಂಗೇನಹಳ್ಳಿ

  ಪ್ರತಿಕ್ರಿಯೆ
  • Ravikumar

   ಲೇಖನ ಸಂಪೂರ್ಣ ಪೂರ್ವಗ್ರಹ ಪೀಡಿತವಾಗಿದೆ . ನೋಟು ಅಮಾನೀಕರಣ ,ಜಿಎಸ್‌ಟಿ ,ರಫೆಲ್ ಈ ಪ್ರಕರಣಗಳ ಹಿಂದೆ ಇರುವ ಅಧಿಕಾರಸ್ಥ ಬಿಜೆಪಿಯ ಮತೀಯ ಮನೋಧರ್ಮ ಎಂದರೇನು? ಆರ್ಥಿಕತೆ ಸದೃಢಗೊಳಿಸಿರುವುದರಲ್ಲೂ ಮತೀಯವಾದ ಇದೆಯೇ ? ಸಹಜವಾದ ಅಪ್ಪುಗೆ ಒಪ್ಪಿಕೊಳ್ಳುವ ವಿಧಾನವೇ ಸರಿ . ಆದರೆ ಸಂಸತ್ತಿನಲ್ಲಿ ಗಾಂಭೀರ್ಯತೆ ಬೇಡವೇ? ನಂತರ ಕಣ್ಣು ಹೊಡೆದದ್ದು ಅಪ್ಪುಗೆ ಒಂದು ನಾಟಕ ಎಂದು ಅನಿಸುವುದಿಲ್ಲವೇ ? ಇಂಥ ಲೇಖನವನ್ನು ಮರುಓದಿಗಾಗಿ ಕೊಟ್ಟಿರುವುದು ಅಚ್ಚರಿ ತರಿಸುತ್ತಿದೆ

   ಪ್ರತಿಕ್ರಿಯೆ
 8. Chandrashekara

  ವಸ್ತುನಿಷ್ಟ ಲೇಖನ. ಮುಕ್ತ ಮನಸ್ಸಿನಿಂದ ಘಟನೆಯ ಎಲ್ಲಾ ಓರೆಕೋರೆಗಳನ್ನು ವಿವರವಾಗಿ ಬರೆದಿರುವುದು ಸಂತಸದ ವಿಷಯ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: