
ಮೂಲ ಮಲಯಾಳಂ: ಸಚ್ಚಿದಾನಂದನ್
ಕನ್ನಡಕ್ಕೆ: ಸುನೈಫ್
ಬಾಣ ಹೊಕ್ಕ ನೀಲಿ ಕಾಲು ಕಂಡು
ಶವಾಗಾರದಲ್ಲಿ ಗುರುತು ಹಿಡಿದರು
ನಂತರ ಹಾಲು ಮಾರುವ ಹೆಂಗಸರು
ಕೆಲವು ಚಿಹ್ನೆಗಳನ್ನು ಗುರುತಿಸಿದರು
ಬೆಣ್ಣೆ, ಸೀರೆ, ಹೆಣ್ಣು ಮೊದಲಾದ
(ಮತ್ತು ಕೆಲವು ಯಾದವರಿಗೆ ಮಾದರಿಯಾದ)
ಕುಖ್ಯಾತ ಕಳ್ಳತನಗಳ ಆರೋಪಿಯನ್ನು
ಪೊಲೀಸರೂ ಬೇಗನೆ ಗುರುತು ಹಿಡಿದರು.

ದೇವನಾಗಿದ್ದರಿಂದ ಹಕ್ಕುದಾರರಿಲ್ಲ
ಬಂಧುಬಳಗವೂ ಇಲ್ಲ
ಉಪದೇಶ ಪಡೆದ ಶಿಷ್ಯಗಣ
ಆಯುಧ ಹಿಡಿದು ಹಲವು ಸಲ ಸತ್ತಾಗಿತ್ತು
ಅಭಿಮಾನಿಗಳ ಶ್ರದ್ಧಾಂಜಲಿ ಸಭೆಯಲ್ಲಿ
ರಾಧೆಯ ಗೈರು ಹಾಜರಿಯನ್ನು
ಮಾಧ್ಯಮಗಳು ಚರ್ಚೆಗೆ ಎತ್ತಿದವು
ಅವಳಿಗೀಗ ಬೇರೆ ‘ಅಫೇರ್’ ಇದೆಯೆಂದು
ಕೆಲ ಸಿನಿಮಾ ಮ್ಯಾಗಝಿನ್’ಗಳು ಗೀಚಿದವು
ರಾಸಲೀಲೆ ಎಲ್ಲ ಪೋರ್ನ್ ಸೈಟ್ ಗಳಲ್ಲಿ
ತುಂಬಿಕೊಂಡಿದ್ದರಿಂದ
ಅಮರತ್ವ ಪ್ರಾಪ್ತಿಯಾಯಿತು

ಮುನಿಸಿಪಲ್ ಗಾಡಿ ಬಂದಾಗ
ಶವ ಕಾಣೆಯಾಗಿದೆ
ಹುಡುಕಿದಾಗ ಕಂಡದ್ದು:
ಅಲ್ಲಿ ತೆರೆಯ ಹಿಂದೆ
ವೇಷ ಕಳಚಿ
ಕೈಯಲ್ಲಿ ಕತ್ತಿ ಹಿಡಿದು
ಮುಂದಿನ ಅಂಕದ ಕಲ್ಕಿ ಪಾತ್ರಕ್ಕೆ
ಮೇಕ್ಅಪ್ ಹಚ್ಚುತ್ತಿದ್ದಾನೆ!






0 Comments