ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮನವಮಿಗಾದರೂ ರಾವಣನಾಗು..

 

ರಜನಿ

ಹಸೆ ಹಾಸಿ ನನ್ನ ನಡುವೆ ಮಲಗಿಸಿ
ಕಸೂತಿದಿಂಬು ನೀ ಎಳೆದೊಯ್ದಾಗ
ನಾನಿನ್ನೂ ಮಂಪರಿನಲ್ಲಿದ್ದೆ

ಸುರುಳಿಸುತ್ತಿ ಹೊತ್ತುನಡೆದೆ
ನಿನ್ನೊಂದಿಗೇ ನಿನ್ನ ನೆನಪನೂ
ಅಲ್ಲೇ ಉಳಿದ ಖಾಲಿ ಜಾಗ ಈಗ
ಆಟದ ಬಯಲು ನನಗೆ
ಗಜ್ಜುಗ ಗೋಲಿಯಾಡಿ ಈಗ
ಕುಂಟಲಿಪಿಯಾಟಕ್ಕೆ ಒಂಟಿ
ಕಾಲಲ್ಲಿ ಕುಪ್ಪಳಿಸುತ್ತಿದ್ದೇನೆ

ಇನ್ನೂ ಉಳಿದ ಸಮಯದಲಿ
ರಾಮ-ಕೃಷ್ಣಾವತಾರದ ನಿನ್ನ
ಚಿತ್ರಪಟ ನೋಡುತ್ತೇನೆ

ಹೇ ಅವತಾರಿ,
ರಾಮರಾಜ್ಯದ ಸುದ್ದಿಗೆ
ಬಹಳ ಆಕಳಿಸಿದೆ….
ಮಾತಿಗೆ ಸಿಗದಷ್ಟು ಕೆಲಸ
ನಿನ್ನ ಗೋಪಿಕೆಯರಿಗೆ….
ಸಾಕುಮಾಡಿನ್ನು
ವಯ್ಯಾರದ ಅವತಾರವನ್ನು

ಈ ರಾಮನವಮಿಗೆ
ರಾವಣನಾಗಿಬಿಡು ಒಮ್ಮೆ…

ಹೊತ್ತೊಯ್ದು ಬಿಡು ನನ್ನ
ನಿರುಮ್ಮಳ ಕೈ ಬೀಸಿ
ಹೆಗಲೇರಿ ಬಂದುಬಿಡುತ್ತೇನೆ
ನೆಲದ ಅಂಚಿಗೆ ನಡೆಸಿ
ಲಂಕೆಯ ಅಶೋಕವನದಲ್ಲಿರಿಸು
ಕಾವಲಿಲ್ಲದೆ ಇರುವೆ
ಹಾಯಾಗಿ….

ಮತ್ತೆ ರಾಮನೆನ್ನಲಾರೆ

ಪರಶಿವನೊಲಿಸಿಕೊಂಡಿದ್ದು
ತಾಯಿ ಗೌರಿಯ ಮೋಹಿಸಿದ್ದು
ಕಡಲ ತಡಿಯಲಿ ಆತ್ಮಲಿಂಗವನಿರಿಸಿ
ಪರಿತಪಿಸಿದ ಕಥೆ ಹೇಳು…
ನಿನ್ನ ಉತ್ಕಟತೆಯಲ್ಲಿ

ತಲೆ ಹುದುಗಿಸಬೇಕು
ಈ ಹೆಣ್ತನದ ಪೊರೆಕಳಚಿ
ನಿನ್ನ ಕೈಗಿಟ್ಟು
ಖಾಲಿ ಮುಂದೆ ನಡೆಯಬೇಕು
ನಾ…

 

‍ಲೇಖಕರು avadhi

5 April, 2017

2 Comments

  1. kusuma patel

    Very nice

  2. vinod scribble

    ವಾಹ್ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading