ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಪ್ರಸಾದ್ ಅಂಕಣ ’ಬಿಸಿಲೆದೆಯ ಹುಡುಗನ ಪದ’

ಈ ಹುಡುಗನ ಕವನಗಳನ್ನು ಓದಿದಾಗ ಮನಸ್ಸು ಕಲ್ಲೆಸೆದ ಕೊಳ, ಬರೆಯುತ್ತಿದ್ದ ವಿಷಯಗಳನ್ನು ನೋಡಿದಾಗ ಇವನ ಓದಿನ ವಿಸ್ತಾರದ ಅರಿವಾಗುತ್ತಿತ್ತು. ಬರಹಗಳಲ್ಲಿದ್ದ ಪ್ರಾಮಾಣಿಕತೆ ಮನಸ್ಸನ್ನು ತಟ್ಟುತ್ತಿತ್ತು.  ಇಂದು ಈ ಹುಡುಗನ ಜನುಮ ದಿನ, ಈ ಮಂಡ್ಯದ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ಈ ಅಂಕಣ ನಿಮ್ಮ ಓದಿಗೆ.
ಇನ್ನು ಮುಂದೆ ಪ್ರತಿವಾರ ಅವಧಿಯಲ್ಲಿ ಈ ’ಬಿಸಿಲೆದೆಯ ಹುಡುಗನ ಪದ’ ನಿಮಗಾಗಿ …

ದೊಡ್ಡಹಳ್ಳಿಯೊಂದರಲ್ಲಿ ಕವಿತೆ ಬರ್ಕೊಂಡು ಇದ್ದ  ಈ ಬಿಸಿಲೆದೆಯ ಹುಡುಗನಿಗೆ ದೊಡ್ಡ ಹಲಗೆ – ಬಳಪವನ್ನು ಕೊಟ್ಟಿದೆ – ‘ಅವಧಿ’.  ಅದರ ನೇಪಥ್ಯದ ಸೂತ್ರಧಾರರ ಪ್ರೀತಿಗೆ ಶರಣು.. ಈ ಚಿಕ್ಕ ಹುಡುಗ ಏನು ತಾನೇ ಬರೆಯಬಲ್ಲ …ವಿಶ್ವದ ಕಣ್ಣು, ನೆಲದ ಬದುಕಿನ ಶಿಂಷೆ, ಲೋಕಪಾವನಿ, ಕಾವೇರಿ ಎಂಬ ಮೂರು ನದಿಗಳ ನಡುವೆ ಜೀವಿಸುವ ಜನಮನವೇ  ಈ ಅಂಕಣದ ಮೂಲ ಭೂಮಿಕೆ. ಇಲ್ಲಿಯ ಇತಿಹಾಸ, ಕಾವ್ಯ, ವಿಜ್ಞಾನ, ಅರ್ಥ, ಆಚರಣೆ ಮತ್ತು  ಅದರಾಚೆಗೂ ಇಣುಕಬಹುದು ಗೊತ್ತಿಲ್ಲ.. ಹರಿಯುವ ನದಿಯ ಪಾತ್ರವನ್ನು , ಓಘವನ್ನು ಮುನ್ನಾಂದಾಜಿಸಲಾಗದು. ಈ ಮೂಲಕ  ನನ್ನ ಅನುಭವ, ಅಧ್ಯಯನ, ಆಸಕ್ತಿಗಳ ಬೆರಗನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ

***

ಜಾಗತೀಕರಣೋತ್ತರ ಭಾರತದಲ್ಲಿ ನಗರಗಳು ಹೆಚ್ಚು ಹೆಚ್ಚು ಜನಪ್ರಿಯವೂ, ಜನದಟ್ಟಣೆಯ ಪ್ರದೇಶಗಳಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾ ಬದಲಾಗುತ್ತಾ ಬೆಳೆಯುತ್ತಲೇ ಇವೆ. ಜೊತೆಗೆ ಬೇಕಾದಷ್ಟು ವಿದೇಶಿ ಬಂಡವಾಳ ಹರಿದುಬಂದು  ಐ.ಟಿ. ವಲಯವೂ ಸೇರಿದಂತೆ ಇತರೆ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿದೆ.

೨೦೨೦ರ ವೇಳೆಗೆ ಭಾರತ ವಿಶ್ವದ ಅತಿಹೆಚ್ಚು  ಯುವಜನರನ್ನು ಹೊಂದಿರುವ ರಾಷ್ಟ್ರವಾಗಲಿದೆಯಂತೆ. ೨೦೧೧ರಲ್ಲಿ ೪೩೦ ಮಿಲಿಯನ್ ಇರುವ ಯುವಜನ ೨೦೨೧ರ ವೇಳೆಗೆ ೪೬೪  ಮಿಲಿಯನ್. ಅಂದರೆ ಪ್ರತಿ ಮೂವರರಲ್ಲಿ ಒಬ್ಬಯುವಕನನ್ನು ಕಾಣಬಹುದು.  ಒಟ್ಟೂ ಜನಸಂಖ್ಯೆಯಲ್ಲಿ  ಶೇ. ೬೪% ರಷ್ಟು ಆಗುವ ಸಂಭವಿದೆ ಅಂತ ಪರಿಣಿತರ ಅಂಬೋಣ

ಇದೇ ಸಂದರ್ಭದಲ್ಲಿ ಫೋಷಕರು ಕೂಡ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್, ಇತ್ಯಾದಿ ಜ್ಞಾನಾಧಾರಿತ ಕಸುಬುಗಳತ್ತ ಹೋಗಲೆಂದು ಬಯಸುತ್ತಿದ್ದಾರೆ. ಓದು ಜ್ಞಾನಾರ್ಜನೆಗೆ ಎಂಬುದು ಈಗೀಗ ಮಾಸಲು ವಿವರಣೆಯಷ್ಟೇ !  ವ್ಯಾಸಂಗ ಮತ್ತು ಉದ್ಯೋಗ ಎರಡಕ್ಕೂ ಗ್ರಾಮೀಣ ಯುವಜನ ಈ ನಗರಗಳಿಗೆ ಜೋತುಬೀಳುವುದನ್ನು ಕಾಣುತ್ತ ಇದ್ದೇವೆ. ಬಹುಶಃ ಇವತ್ತಿನ ಓದು ನೌಕರಿ ಗಿಟ್ಟಿಸಿಕೊಳ್ಳುವ ಕಾರ್ಯತಂತ್ರವಾಗಿ ಮಾರ್ಪಟ್ಟಿದೆ. ಎಲ್ಲರ ಕಣ್ಣು ಈಗ ನಗರಗಳತ್ತಲೇ ತಿರುಗುವಾಗ ಗ್ರಾಮೀಣ ಭಾರತವನ್ನು ಕಾಣುವ ಕಣ್ಣುಗಳನ್ನು ಹುಡುಕಬೇಕಿದೆ.

ಹಳ್ಳಿಗಳು ಮತ್ತು ಅಲ್ಲಿನ ಆಗುಹೋಗುಗಳನನ್ನು ತೀವ್ರವಾಗಿ ಗಮನಿಸಬೇಕಾದ ತುರ್ತು ಇವತ್ತಿಗಿದೆ.  ಯಾಕಂದ್ರೆ ತುತ್ತು ಹುಟ್ಟುವುದೇ ಗ್ರಾಮೀಣ ಭಾರತದಲ್ಲಿ.  ಆದರೆ ತುತ್ತು ಹುಟ್ಟಿಸುವ ಕೆಲಸ ತೊರೆದು ಯುವಕರು ನಗರದ ವಿಲಾಸಿ ಹಾಗು ಸೌಕರ್ಯಬದ್ದ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ..ಅಧುನಿಕತೆಗೆ ಸಿಕ್ಕು ಹಾಳಾಗಿದ್ದು ನಗರಗಳಿಗಿಂತ ಹಳ್ಳಿಗಳೇ ಹೆಚ್ಚು.  ಆಧುನಿಕಯುಗದ ಜ್ಞಾನ ಮತ್ತು ಕೌಶಲ್ಯಧಾರಿತ ಓದುಗಳ ಹಿಂದೆಬಿದ್ದ ಯುವಸಮೂಹ ‘ಕೃಷಿ’ಗೆ ಎಳ್ಳು-ನೀರು ಬಿಟ್ಟಿದೆ. ಈ ಜಿಜ್ಞಾಸೆಗಳ ನಡುವೆ  ಕೃಷಿ ಮತ್ತು ಅದ್ರ ಸಹವರ್ತಿ ಉಪಕಸಬುಗಳು ಕಣ್ಮರೆಯಾಗುತ್ತಿವೆ.
ರಾಜಕೀಯ, ಸಿನಿಮಾ, ಕ್ರಿಕೆಟ್ ನ ಸುದ್ದಿಗಳು ಅಪ್ದೇಟ್ ಆಗುವಷ್ಟು, ಗ್ರಾಮೀಣ ಭಾರತದ ಸಮಸ್ಯೆಗಳು ಸುದ್ದಿಯಾಗುವುದಿಲ್ಲ.. ಆಗೊಮ್ಮೆ ಹೀಗೊಮ್ಮೆ ರಸಗೊಬ್ಬರಕ್ಕೊ, ನದಿನೀರಿನ ಹೋರಾಟಕ್ಕೋ ಅಷ್ಟೇ ಸುದ್ದಿ. ಉಳಿದಂತೆ ಮತ್ತೆ ನೆನೆವಾಗುವುದು ಚುನಾವಣೆಗಳಲ್ಲಿ!
ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಕೃಷಿ ಆಧಾರಿತ ಉತ್ಪನ್ನಗಳ ಇಳುವರಿ ಗಣನೀಯವಾಗಿ ಕುಸಿಯುತ್ತಿದೆ.  ವಾಣಿಜ್ಯ ಬೆಳೆಗಳ ಬೆಲೆ ತೊಯ್ದಾಟದಲ್ಲಿ ಕೃಷಿಕ ಸಾಲದ ಹೊರೆಗೆ ಸಿಲುಕಿದ್ದಾನೆ.. ಈ ಹೊತ್ತಿನಲ್ಲಿ ಬಹುತೇಕ ಕೃಷಿಕ ಕುಟುಂಬಗಳ ಯುವ ಪೀಳಿಗೆ ನಗರಗಳಲ್ಲೇ ಜೀವನ ಕಂಡುಕೊಳ್ಳ ತೊಡಗಿದ್ದಾರೆ. ದಿನೇದಿನೇ ಉಲ್ಬನವಾಗುತ್ತಿರುವ ನೀರಿನ ಸಮಸ್ಯೆ, ಕೃಷಿ ಕೂಲಿಕಾರರ ಕೊರತೆ, ಮಾರುಕಟ್ಟೆಯ ಬೆಳೆಗಳ ಏರಿಳಿತ, ಸಣ್ಣ ಸಣ್ಣ  ಭೂ ಹಿಡುವಳಿ, ಸರಿಯಾಗಿ ತಲುಪದ ಸರ್ಕಾರದ ಸೆಬ್ಸಿಡಿಗಳು, ನೂತನ ತಂತ್ರಜ್ಞಾನಗಳ ಕೊರತೆ ಮತ್ತು ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಉದಾಸೀನತೆ, ಹೆಚ್ಚುತ್ತಿರುವ ಭೂ ಮಾಫಿಯಾ, ರಿಯಲ್ ಎಸ್ಟೇಟ್ ದಂಧೆಗಳು ಇವುಗಳ ಜೊತೆಗೆ ವಾತಾವರಣದಲ್ಲಿ ಆಗುತ್ತಿರುವ ತೀವ್ರತರ ಬದಲಾವಣೆಗಳು ಹಂತಹಂತವಾಗಿ ಕೃಷಿ  ಮೇಲಿನ ಆಸಕ್ತಿ ಕಳೆದುಕೊಳ್ಳಲು ಕಾರಣಾವಾಗುತ್ತಿವೆ.

ಹಳ್ಳಿಯ ಇತರೆ ಉಳಿದ ಅವಿದ್ಯಾವಂತ ಯುವವರ್ಗವೂ  ಕೂಡ ಕೃಷಿಗಿಂತಲೂ ಸಮೀಪದ ನಗರ, ಪಟ್ಟಣಗಳಲ್ಲಿ ಆಟೋ ಓಡಿಸುವ, ಕಟ್ಟಡಗಳಲ್ಲಿ ಕೆಲಸ ಮಾಡುವ, ನದಿ ಪಾತ್ರದಲ್ಲಿ ಇರುವ ಕೆಲವು ಮಂದಿ ಮರಳು ತೆಗೆಯುವ ಕಾಯಕಗಳಲ್ಲಿ, ರಸ್ತೆ ಬದಿಯ ಫಸ್ಟ್ಪುಡ್, ಗಾರ್ಮೆಂಟುಗಳು ಮತ್ತು ಕೆಲವರು ಆದಷ್ಟು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಾ  ಕಳೆದುಹೋಗುತ್ತಿದ್ದಾರೆ. ಎಡ-ಬಲ ರಾಜಕಾರಣಗಳು ಕೂಡ ಹಳ್ಳಿಯನ್ನು ತಲುಪಿವೆ.

ವಿದ್ಯಾವಂತರಾದಷ್ಟು ಜಾತಿಯ, ಮೂಢನಂಬಿಕೆಗಳ ಹಿಡಿತಕ್ಕೆ ಸುಲಭಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಟ್ರಾಕ್ಟರು ಕೊಳ್ಳಲು, ಬೆಳೆ ಬೆಳೆಯಲು ಮುಂತಾದ ಕಾರಣಗಳಿಗೆ  ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವ ಭೂಮಿಗಳನ್ನು ಮುಂದೆ ಬ್ಯಾಂಕುಗಳೇ ವ್ಯವಸಾಯ ಮಾಡಿಸಬೇಕೋ ಏನೋ!!

ಎಲ್ಲರೂ ಇಂಜಿಯರ್, ಡಾಕ್ಟರ್, ಸರ್ಕಾರಿ ಅಧಿಕಾರಿಗಳೇ ಆಗಿ ಹೋದರೆ ವ್ಯವಸಾಯ ಮಾಡುವವರು ಯಾರು ‘ಆಹಾರ’ ಅನ್ನೋದು ಎಲ್ಲಿ ಹುಟ್ಟತ್ತೆ ? ಕಂಪ್ಯೂಟರ್ ನಲ್ಲಿ ಸಾಧ್ಯವಾ ? ಇನ್ನು ದೊಡ್ಡ ತಲೆನೋವು ಯುವ ಕೃಷಿಕರಿಗೆ ಹೆಣ್ಣು ಕೊಡಲು ಕೂಡ ಜನ ಹಿಂದೆಮುಂದೆ ನೋಡುವ ಸ್ಥಿತಿ ಒದಗಿದ್ದು ವಿಪರ್ಯಾಸವೇ ಸರಿ!

ಇಷ್ಟೆಲ್ಲಾ ಘಟಿಸುತ್ತಿರುವಾಗ ನಾವು ನಮ್ಮ ಮುಂದಿನ ದಿನಗಳ ಬಗ್ಗೆ  ಯೋಚಿಸಲೇಬೇಕು.. ರಿಯಲ್ ಎಸ್ಟೇಟ್ ಗಳಿಗೆ ಭೂಮಿ ಮಾರುವಾಗ, ದೊಡ್ಡ ದೊಡ್ಡ ಲಾನ್ ಗಳನ್ನು ಮಾಡಿ ಕೆಲಸಕ್ಕೆ ಬಾರದ ಹುಲ್ಲು ಬೆಳೆಸುವಾಗ, ಮನಸೋ ಇಚ್ಛೆ ನೀರು ಬಳಸುವಾಗ ನಾವು ಎಚ್ಚರಗೊಳ್ಳಲೇಬೇಕು. ಕೈಗಾರಿಕೆಗಳು  ಹಣವನ್ನು ಮಾತ್ರ ಕೊಡಬಲ್ಲವೇ ಹೊರತು  ತುತ್ತು ಅನ್ನವನ್ನು ಕೊಡಲಾರವು. ಕಂಪ್ಯೂಟರ್ ನಲ್ಲಿ ಭತ್ತ  ಬೆಳೆಯಲು ಸಾಧ್ಯವಿಲ್ಲ … ನೆಲವನ್ನು ಉತ್ತು ಬಿತ್ತು ಬೆಳೆಯಬೇಕೆ ವಿನಃ ಇನ್ನಾವ ತಂತ್ರಜ್ಞಾನಗಳು ಸಾಧಿಸಲಾರವು.

ನಾವೀಗ ನಗರೀಕರಣದಿಂದ ಹಿಂದೆ ಸರಿದು ‘ಹಳ್ಳಿಗಳಿಗೆ ಹಿಂತಿರುಗಿ’ ಎಂದು ಹೊರಡಲಿಲ್ಲವಾದರೆ ಮುಂದೆ ಭಾರತದಲ್ಲಿ ಮನುಷ್ಯನ ಬಿಟ್ಟು ಬೇರೇನೂ ಉಳಿದುಕೊಳ್ಳುವುದಿಲ್ಲವೇನೋ!  ನಮ್ಮಗಳ ಉದಾಸೀನದಿಂದ ಈಗಾಗಲೇ ಬೇಕಾದಷ್ಟು ನದಿಗಳು, ಕೆರೆಗಳು ಬತ್ತಿಹೋಗಿವೆ, ಭೂಮಿ ಬಂಜರಾಗುತ್ತಿದೆ. ಇರುವನ್ನಾದ್ರು ನಮಗೆ & ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮದು. ಕೃಷಿ, ಕೃಷಿ ಪರಿಕರಗಳು, ವಿಧಾನಗಳು, ಎಲ್ಲವನ್ನೂ ಪ್ರಾತ್ಯಕ್ಷಿಕೆಗಳಲ್ಲಿ ಮಾತ್ರ ನೋಡುವಂತಾಗಬಾರದು.
ಕೃಷಿ ಮತ್ತು ಅದರ ಉಪಕಸುಬುಗಳು ಕೂಡ ‘ವೃತ್ತಿ’ ಎಂದೇ ಬಗೆಯಬೇಕು ಅದರ ಬಗ್ಗೆ ಇರುವ ಕೀಳರಿಮೆ ಹೋಗಿಸಬೇಕಿದೆ. ಈಗಾಗಲೇ ಬಹಳಷ್ಟು ಮಂದಿ ವಿದ್ಯಾವಂತರು ಹಳ್ಳಿಗೆ ಹಿಂತಿರುಗಿ ವ್ಯವಸಾಯ, ಹೈನುಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಉಳಿದೆಲ್ಲ ಅಭದ್ರತೆಯ ಉದ್ಯೋಗಗಳಿಗಿಂತ ವ್ಯವಸಾಯ/ ಹೈನುಗಾರಿಕೆಯು  ಆದಾಯ, ಸಂತೃಪ್ತಿ ಎರಡನ್ನೂ ತಂದು ಕೊಡುತ್ತಿದೆ. ಅವರು ನಮಗೆ ಮಾದರಿಯಾಗಬೇಕು.
ಕೃಷಿಕ ಎಂಬುದು ಈ ದೇಶದ ಹೆಮ್ಮೆಯ ವೃತ್ತಿ ಎಂಬುದನ್ನು ಎಲ್ಲರು ಮನಗಾಣಬೇಕು. ಈ  ನಿಟ್ಟಿನಲ್ಲಿಯೇ ಮಹಾತ್ಮಾ ಗಾಂಧಿಯವರು ‘ಗ್ರಾಮ ಸ್ವರಾಜ್ಯ’ದ ಪರಿಕಲ್ಪನೆಯನ್ನು ತಂದದ್ದು. ಆದರೆ ದುರದೃಷ್ಟವಶಾತ್ ಅವರ ಅನುಯಾಯಿಗಳೇ ಅದನ್ನು ಜಾರಿಗೆ ತರುವಲ್ಲಿ ಉದಾಸೀನ ಮಾಡಿದರು. ಎಂದಿಗೆ ನಮ್ಮ ಹಳ್ಳಿಗಳು & ಕೃಷಿ ಸ್ವಾವಲಂಬನೆಯನ್ನು ಸಾಧಿಸುತ್ತವೋ ಅವತ್ತಿಗೆ ನಾವು ಮುಂದುವರಿದ ರಾಷ್ಟ್ರ ಎನಿಸಿಕೊಳ್ಳುತ್ತೆವೆಯೇ  ಹೊರತು ಬರಿಯ ಕೈಗಾರಿಕೆಗಳು, ಜಿಡಿಪಿ ದರಗಳು ನಮ್ಮ ಅಭಿವೃದ್ದಿಯನ್ನು ಸಾಧಿಸಲಾರವು .
ಕೃಷಿ ಎಂದಾಗಲೆಲ್ಲಾ ಕುಮಾರವ್ಯಾಸ ಈ ಷಟ್ಪದಿ ಪದ್ಯ ನೆನಪಾಗುತ್ತದೆ,

 

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ

ಪಸರಿಸುವುದಾ ಕೃಷಿಯನುದ್ಯೋ

ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ

ವಸು ತೆರಳುವುದು ವಸುವಿನಿಂ ಸಾ

ಧಿಸುವಡಾವುದಸಾಧ್ಯವದರಿಂ

ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ||೬೪||

 

ಹೌದು ಕೃಷಿ ವಿಹೀನ ದೇಶ .. ದುರ್ದೇಶವೇ ಸರಿ..

‍ಲೇಖಕರು G

19 March, 2014

6 Comments

  1. Raghunandan K

    ಅವಧಿಯ ಪುಟಗಳಲ್ಲಿ ನಿನ್ನ ಕಂಡು ಸಂತೋಷ ನನಗೆ
    ನಿನ್ನ ಜನ್ಮದಿನಕ್ಕೆ ನಮಗೆ ಕೊಡುಗೆ, ಶುಭಾಶಯ..
    ನಿನ್ನ ಕವನಗಳ ಗಾಢತೆ, ಬದುಕಿನ ಭಾವಗಳ ಘಮಲು ಬರಹಗಳಲ್ಲೂ ಮೂಡಲಿ, ಕಾದಿರುತ್ತೇನೆ.
    ಒಳಿತಾಗಲಿ.

  2. Venkatesha G

    Wish YOU HAPPY BIRTH DAY RAJENDRA and Congrats for writing a column in AVADHI.

  3. sudha chidanand gowd

    good start.
    ರಾಜೇಂದ್ರ, ಹುಟ್ಟುಹಬ್ಬದ ಶುಭಾಶಯಗಳು.
    ಅಂಕಣವೊಂದು ಆರಂಭವಾಗಲು ಕುಮಾರವ್ಯಾಸ- ಕೃಷಿಗಿಂತ ಒಳ್ಳೆ ವಿಷಯ ಇನ್ಯಾವುದು?
    ನಿರೀಕ್ಷೆ ಹುಟ್ಟಿಸಿರುವ ಬರವಣಿಗೆ.
    good luck

  4. ಕುಸುಮಬಾಲೆ

    ರಾಜೇಂದ್ರ..ಲೇಖನ ಚೆನ್ನಾಗಿದೆ. ಗಂಭೀರವಾಗಿದೆ. ಮೈಸೂರು, ಬೆಂಗಳೂರ ಮಧ್ಯದಲ್ಲಿ ಸಿಲುಕಿದ, ಚನ್ನಪಟ್ಟಣ, ಮಂಡ್ಯದಂತ ಊರುಗಳೂ, ಆ ಉದ್ದನೆ ರಸ್ತೆಯ ಅಕ್ಕಪಕ್ಕದ ಹಳ್ಳಿಗಳೂ, ಜಮೀನುಗಳು, ಇದೆಲ್ಲದರ ಒಳಗೆ ಸಿಲುಕಿದ ಜನರ ನೂರಾರು ಕಥೆಗಳಿವೆ, ಅವೆಲ್ಲವೂ ಬರಹವಾಗಲಿ, ಮಂಡ್ಯದ ಸೊಗಡಲ್ಲಿ.

  5. bm basheer

    ಅಭಿನಂದನೆಗಳು. ಯುವ ಪ್ರತಿಭೆಗಳನ್ನು ಹುಡುಕಿ ಅವರಿಗೆ ಮಣೆ ಹಾಕುತ್ತಿರುವ ಅವಧಿಯ ಪ್ರಯತ್ನ ಶ್ಲಾಘನೀಯ

  6. satish javaregowda

    Mahakavi rajendra,enu eddukidda hage gambeeravagi bareyalu shuru madiddeyalla guru!bari guru shili channagide.eshte aadaru neenu namma mandya jilla yuva barahagaarara balagada huduga alva? Bare bareyutthale beli mithra.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading