ಸಿ ಮಾಲತಿ ಶಶಿಧರ್
ಶಾಲೆಯ ಕಡೆ ಹೊರಟ
ಪುಟ್ಟ ಮಕ್ಕಳ
ಕಂಗಳಲ್ಲಿ ಅರಳುವ
ಆ ಬೇಲಿ ಹೂವು
ಅವರದ್ದೇ ಬರುವಿಕೆಗೆ ಎದುರು
ನೋಡುತ್ತಲೇ ಹುಟ್ಟಿ
ಬದುಕಿ ಅಳಿಯುತ್ತದೆ
ಹಸ್ತಗಳಿಗೆ ಅಂಟಿಕೊಂಡ
ಅವುಗಳ ಪರಾಗರೇಣುಗಳು
ಪುಟ್ಟ ಪುಟ್ಟ
ಆತ್ಮಗಳಿಗೆ ಕಚಗುಳಿ ಇಟ್ಟು
ನಗಿಸಿ ನಿರ್ಲಿಪ್ತವಾಗುತ್ತದೆ
ಕೆಂಪು ನೇರಳೆ ಗುಲಾಬಿ ಹಳದಿ
ಒಂದೊಂದಕ್ಕೂ
ಒಂದೊಂದು ದಿನದ
ಚಂದ್ರಾಕೃತಿಯ
ರೂಪ
ಮಟಾ ಮದ್ಯಾಹ್ನ
ಅವುಗಳ ಸೌಂದರ್ಯದ
ಅನಾವರಣ ಮಾಡಲೆಂದೇ
ರಾಜಕುಮಾರನೊಬ್ಬನ
ಬರುವಿಕೆಗಾಗಿ
ನಿಂತು ಕಾದು ಸೋತಾಗ
ಕಿತ್ತಳೆ ತುದಿಯ ಚಿಟ್ಟೆಗಳು
ತಮ್ಮ ಮೀಸೆಯನ್ನು
ಮೃದುವಾಗಿ ತಿವಿದಾಗ
ರಾಜಕುಮಾರನ
ಕಿರೀಟಕ್ಕಾಗಿ ತಡಕಾಟ
ನಡೆಸುತ್ತವೆ

ಬೇಲಿಯುದ್ದಕ್ಕೂ ರಾಚಿಕೊಂಡ
ಕೌದಿಗಳ ಮೇಲೆ ಅದೆಷ್ಟೋ
ದಾರಿಹೋಕ ಆತ್ಮಗಳು
ಅಲೆದಾಡಿದರು
ಅವುಗಳ ಬಣ್ಣ ಪ್ರತಿಫಲಿಸಿದ್ದು
ಪ್ರಕೃತಿಯ ಕಾಲ ಬೆರಳ
ಉಗುರಲ್ಲೂ ಸೌಂದರ್ಯವ
ಆರಾಧಿಸಿದ ಕಂಗಳಲ್ಲಿ ಮಾತ್ರ
0 ಪ್ರತಿಕ್ರಿಯೆಗಳು