ಸ್ಮೃತಿ ಪಟಲದಿಂದ..‌‌

ಡಾ ಸದಾಶಿವ ದೊಡಮನಿ

ಮೊನ್ನೆ ಚಂದವಳ್ಳಿ ತೋಟಕ್ಕೆ ಹೋಗಿದ್ದೆ. ಅಲ್ಲಲ್ಲ ಚಂದವಳ್ಳಿ ತೋಟದ ಹೊಕ್ಕಳ ಕೇಂದ್ರ ಭಾಗಕ್ಕೆ ಹೋಗಿದ್ದೆ. ಹೀಗೆ ಹೇಳಿದರೆ ಮಾತ್ರ ನಾನು ಮುಂದೆ ಹೇಳಲಿರುವ ವಿಷಯಕ್ಕೆ ಹೆಚ್ಚು ಸೂಕ್ತವೆಂದೆನಿಸುತ್ತದೆ. ಅದು ಚಂದವಳ್ಳಿಯ ತೋಟದ ವಾಸಿಗರ ಮೂಲ ನೆಲೆವೀಡು. ಅವರ ಜನ್ಮಭೂಮಿ, ಕರ್ಮಭೂಮಿ. ಗುಡಿಸಲು, ಮನೆ ಕಟ್ಟಿಕೊಂಡು, ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಕೌಟುಂಬಿಕ ಜೀವನ ನಡೆಸಿದ ತಾಣ. ಹೊಲ, ಬಾವಿ, ದನ-ಕರ, ಎತ್ತು, ಎಮ್ಮೆ, ಕೋಳಿ, ಕುರಿ, ಗಿಡ, ಮರ, ದವಸ-ಧಾನ್ಯ ಪ್ರಕೃತಿಯೊಂದಿಗೆ ಅನ್ನೋನ್ಯವಾಗಿ ಬದುಕಿ, ಬಾಳಿ ಮಣ್ಣಲ್ಲಿ ಮಣ್ಣಾಗಿ ಹೋದ ಹಿರಿಯ ಚೇತನಗಳ ನೆಲ. ಅದೇ ನೆಲದಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ನನ್ನ ಬಾಲ್ಯದ ಬಹುಪಾಲು ದಿನಗಳನ್ನು ಅವರೊಂದಿಗೆ ಕಳೆದ ನೆನಪುಗಳು ನನಗೆ ಇಂದಿಗೂ ಮಾಸದ ಕನ್ನಡಿ. ಆ ಹಿರಿಯ ಚೇತನಗಳು ಹಾಗೂ ಆ ಪುಣ್ಯ ಭೂಮಿ ಆ ನನ್ನ ಬಾಲ್ಯಕ್ಕೆ ಬಣ್ಣವನ್ನು, ಕನಸನ್ನು, ಕಸುವನ್ನು, ಜೀವನಾನುಭವವನ್ನು ತುಂಬಿದ ಮೂಲ ಕ್ರತುಶಕ್ತಿಗಳೆಂದರೆ ತಪ್ಪಾಗಲಾರದು. ಆ ನೆಲ ನಾನು ಉಂಡುಟ್ಟು, ಓಡಾಡಿದ, ಹಾರಾಡಿದ, ಹಾಡಿ ಕುಣಿದು ಕುಪ್ಪಳಿಸಿದ, ದುಡಿದು, ದಣಿದು ಮಗುವಾಗಿ ಮಲಗಿದ ತಾಯಿ ಮಡಿಲು. ಆ ಮಡಿಲಿಗೆ ನಾನು ಮೊನ್ನೆ ಭೇಟಿ ನೀಡಿದಾಗ ಮೂರು ದಶಕಗಳ ಹಿಂದಿನ ಬದುಕು, ಹಿರಿಯ ಚೇತನಗಳಾದ ಯಲ್ಲಪ್ಪ ಮುತ್ಯಾ, ಮಲಕವ್ವ ಆಯಿ, ಚಂದ್ರವ್ವ ಆಯಿ, ಮಾಸ್ತಾರ್ ಮುತ್ಯಾ, ಭೀಮವ್ವ ಆಯಿ, ಮಲ್ಲಪ್ಪ ಮುತ್ಯಾ, ಮರಿಯಪ್ಪ ಮುತ್ಯಾ ಎಲ್ಲರೂ ನನ್ನ ಸ್ಮೃತಿಪಟಲದ ಮುಂದೆ ಒಬ್ಬೊಬ್ಬರಾಗಿ ಹಾಯ್ದು ಹೋದರು.

ಕುದರಿ ಗುಡಿಸಲು ಇದ್ದ ನಮ್ಮ ಜಾಗಾಕ ಹೋದಾಗ ಕುದರಿ ಗುಡಿಸಿಲಿನಲ್ಲಿ ಹರಕು ಕೌದಿ ರಗಟಿಯ ಮೇಲೆ ಮುದುಡಿಯಾಗಿ ಮಲಗಿದ ಎಲುಬಿನ ಗೂಡಾದ ಯಲ್ಲಪ್ಪ ಮುತ್ಯಾ (ಅವ್ವನ ಅಪ್ಪ) ಥಟ್ಟನೇ ನೆನಪಾದರು. ಅವರು ಒಂದೇ ಸಮನೆ ಕೆಮ್ಮಿ, ಕೆಮ್ಮಿ, ತೇಕುತ್ತಾ ತೇಕುತ್ತಾ ಕ್ಯಾಕರಿಸಿ ಉಗುಳಿದಂತೆ, ಜೋರಾಗಿ ನರಳಿದಂತೆ ದೃಕ್ ಶ್ರವಣ; ಮೂತ್ಯಾನಿಗೆ ಹಚ್ಚಿಯೇ ಕುಳಿತು  ಕೈಯಲ್ಲಿ ರಟ್ಟು ಹಿಡಿದು ಒಂದೇ ಸಮನೆ ಗಾಳಿ ಹಾಕುವ ಮಲಕವ್ವ ಆಯಿ (ಅವ್ವನ ಅವ್ವ)‌ ‌. ಮುತ್ಯಾ ತೀರಿದ ಮೇಲೆ ಅದೆಷ್ಟೋ ವರ್ಷಗಳ ಕಾಲ ಅತ್ತು, ಅತ್ತು ಸಣ್ಣಾಗಿ, ನಿದ್ರೆ ಬಾರದೆ ನಾಡುರಾತ್ರಿಯಲ್ಲಿ ಎದ್ದು, ಬೆನ್ನಿಗೆ ತಲೆದಿಂಬು ಹಚ್ಚಿಕೊಂಡು ನಾಲ್ಕೈದು ಒಬ್ಬಿ  ರೊಟ್ಟಿ ಬಡೆಯುವ, ರೊಟ್ಟಿ ಆದ ಮೇಲೆ ಒತ್ತಲಕ್ಕೆ ಉರಿ ಹಚ್ಚಿ, ಅದರ ಮುಂದೆ ಕುಳಿತು ಹುಲ್ಲು ತಿಕ್ಕುವ ಹಾಗೂ ನಾನು ತಾನು ಹೇಳಿದ ಮಾತು ಕೇಳದೇ, ಎದುರು ಮಾತನಾಡಿದಾಗ “ಯಾಕ ಸದಪ್ಪಾ, ನೀನೂ ಗಮಂಡಿಗಿ ಬಂದಂಗ ಕಾಣತಾದ, ಅಜ್ಜಣ್ಣ ಬರಲಿ  ಮಾಡಸ್ತೀನಿ ನಿನ್ನ ವಾಲಗಾನ” ಅಂತ ಹೇಳಿ, ಹೆದರಿಸುವ ತಾಯಿಯಂತಿಂದ್ದ ಅದೇ ಮಲಕವ್ವ ಆಯಿ ಕಣ್ಣ ಮುಂದೆ ಹಾಯ್ದು ಹೋದಳು.

ನಮ್ಮ ಕುದುರಿ ಗುಡಿಸಿಲಿಗೆ ಹತ್ತಿಯೇ ಉತ್ತರ ದಿಕ್ಕಿಗೆ ಇದ್ದದ್ದು ಚಂದ್ರವ್ವ ಆಯಿಯ ಮನೆ. ಅವಳು ಯಲ್ಲಪ್ಪ ಮುತ್ಯಾನ ಅಣ್ಣನ ಹೆಂಡತಿ. ಚಂದ್ರವ್ವ ಆಯಿ ಹೆಸರಿಗೆ ತಕ್ಕಂತೆ  ಅವಳು ಚಂದ್ರಾ ತಾಯಿಯೇ! ಅವಳು ದುಡಿಯಲೆಂದೇ ಹುಟ್ಟಿದವಳು.  ಸೂರ್ಯ ಮೂಡುವುದರೊಂದಿಗೆ ಸೀರೆ ಕಚ್ಚಿ ಹಾಕಿದಳೆಂದರೆ ಸೂರ್ಯ ಮುಳುಗಿದರೂ ಕಚ್ಚಿ ಕಳೆಯದೇ, ಒಂದೊಂದು ದಿನ ಕಚ್ಚಿ ಹಾಕಿಕೊಂಡೇ ಮಲಗಿ ಬಿಡುತ್ತಿದ್ದಳಂತೆ. ಅಂತಹ ದುಡಿಮೆಯ ಜೀವ ಚಂದ್ರವ್ವ ಆಯಿಯಳದಾಗಿತ್ತು. ಅವಳ ನೆನಪು ಆದಾಗಲೆಲ್ಲ ನನಗೆ ಶ್ರಮ ಸಂಸ್ಕೃತಿ, ಜೀವನ ಪ್ರೀತಿಯ ಪ್ರತೀಕದಂತಿರುವ ಲಂಕೇಶರ ‘ಅವ್ವ’ ಕವಿತೆ ನೆನಪಿಗೆ ಬರುತ್ತದೆ. ಹಬ್ಬ ಹುಣ್ಣಿಮೆಗೆ ಹೋಳಿಗೆ ಮಾಡಿದಾಗ ಕಟ್ಟಿನ ಸಾಂಬರಕ್ಕೆಂದು ಒಂದೆರಡು ಎಲೆ ಕರಿಬೇವು ಎಲೆಗಳನ್ನು ತರಲು ಚಂದ್ರವ್ವ ಆಯಿಯ ಕಣ್ಣು ತಪ್ಪಿಸಿ ಹೋದರೆ, ನನ್ನನ್ನು ಅದ್ಹೇಗೆ ನೋಡುತ್ತಿದ್ದಳೋ ಗೊತ್ತಿಲ್ಲ ದೇವರೇ! ಎಲಾ! ಎಲಾ! ಕರಿಬೇವಿನ ಗಿಡಯೆಲ್ಲ ಬರಿಚೀದೇನ್ಲಾ…? ಅಂತ ವದರಕೋಂತ ಮನೆತನಕ ಬಂದಂತಾಗಿ, ಗಾಭರಿಯಿಂದ ಬಲಕ್ಕೆ ಹೊರಳಿ ನೋಡಿದೆ  ಚಂದ್ರವ್ವ ಆಯಿ ಮನಿ ಬಾಗ್ಲಾ ಹಾಕಿದಾಂಗ ಕಂಡಿತು. ಹಂಗ ಮುಂದಕ್ಕೆ ಹೋದೆ. ಅಂಗಳ!

ಅಂಗಳದಾಗ ನಾನು ,ಹನುಮ, ಚಂದಪ್ಪ ಗೋಟೆ ಆಡಾಕತ್ತಿದ್ವಿ. ನಾ ಮುಂದ ಮಾರಿ ಮಾಡಿ ಗೆರೆಯೊಳಗ ಕಾಳು ಹಾಕಾಕತ್ತಿದ್ದೆ.  ಮಾಸ್ತಾರ್ ಮುತ್ಯಾ (ಚಂದ್ರವ್ವ ಆಯಿ ಗಂಡ) ಹಿಂದಿನಿಂದ ಬಂದು ‘ಎಡಗೈ ಹಿಡಿದು ಬೆನ್ನಾಗ ನಾಲ್ಕು ಬಾರಿಸಿ ‘ನಿನ್ನ ಜ್ಯಾತ್ಯಾಗರ ಮಚ್ಚಿ’ ಬರಿಯಾಂಗಿಲ್ಲ, ಓದಾಂಗಿಲ್ಲ  ಅಂದದ್ದು ಮತ್ತ ಕೇಳಿದಂಗಾತು. ಬೆನ್ನು ಚರಾ ಚರಾ ಉರದಂಗಾತು. ನೋಡಿದರ ಈಗ ಅಂಗಳ ಬಣಾಬಣ! (ಮಾಸ್ತಾರ್ ಮುತ್ಯಾನ ಕುರಿತ ಹೆಚ್ಚಿನ ವಿವರಗಳಿಗೆ ಆತ ತೀರಿಕೊಂಡಾಗ ಅವನ ಮಾನವೀಯ ವ್ಯಕ್ತಿತ್ವದ ಬಗ್ಗೆ ಬರೆದ ನುಡಿನಮನ ನೋಡಿರಿ)

ಹಾಗೆಯೇ ಎಡಗಡೆ ಬಂದೆ. ಭೀಮವ್ವ ಆಯಿಯ ಬೀಸುಕಲ್ಲಿನ ಶಬ್ದ ಕೇಳಿದಂಗ ಆಯಿತು. ಭೀಮವ್ವ ಆಯಿ ಬೇರೆ ಯಾರೂ ಅಲ್ಲ, ಯಲ್ಲಪ್ಪ ಮುತ್ಯಾನ ಅಣ್ಣಂದಿರಲ್ಲಿ ಎರಡನೆಯವನಾದ ಮಲ್ಲಪ್ಪ ಮುತ್ಯಾನ ಹೆಂಡತಿ. ನನಗೆ ತಿಳುವಳಿಕೆ ಬಂದಾಗಿನಿಂದ, ನಾನು ಗಮನಿಸಿದಂತೆ ಕೃಷಿಯ ಮೂಲಕ, ಪ್ರಧಾನವಾಗಿ ಬೇಳೆ ಕಾಳುಗಳನ್ನು ಬೆಳೆದೋ, ಸಂತೆಗಳಲ್ಲಿ ಕೊಂಡು ತಂದೋ ಅವುಗಳನ್ನು ಒಡೆದು, ಬೇಳೆ ಮಾಡಿ ಸಂತೆ, ಸಂತೆ ತಿರುಗಾಡಿ ಬೇಳೆಕಾಳು ಮಾರಿ, ಜೀವನ ನಿರ್ವಹಿಸುತ್ತಿದ್ದರು. ತೋಟದಲ್ಲಿ ನೆಲೆಸಿದ್ದ ಕುಟುಂಬಗಳಲ್ಲಿಯೇ ನಮ್ಮ ಆಯಿ, ಮುತ್ಯಾನದು ತುಂಬಾ ಬಡತನದ ಕುಟುಂಬವಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ರೊಟ್ಟಿಯೇ ಇರುತ್ತಿರಲಿಲ್ಲ. ಆಗ ಗೋವಿನ ಜೋಳದ ತೆನೆಗಳನ್ನು ಕುದಿಸಿಕೊಂಡು ತಿಂದೋ, ಸಪ್ಪಾನ ನುಚ್ಚು ಮಾಡಿಕೊಂಡು ಉಂಡೋ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವು. ಇನ್ನು ನಮಗ ವಣಗೀಯ ಮಾತಂತೂ ದೂರವೇ ಉಳಿಯಿತು. ವಾರದಲ್ಲಿ ಒಂದೆರಡು ದಿನ ಮಾತ್ರ ರೊಟ್ಟಿಯ ಜೊತೆಗೆ ವಣಗಿ ಬೆರೆತು ಹೊಟ್ಟಿ ಪ್ರವೇಶಿಸುತ್ತಿತ್ತು. ಆ ವಣಗಿಗೆ ಬಳಸಿದ ನುಚ್ಚಬೇಳೆ ಕಾಳುಗಳೇನು ಕೊಂಡು ತಂದಿದಲ್ಲ. ಕೊಂಡು ತರಲು ವಾಸ್ತವದಲ್ಲಿ ಹಣವೇ ಇರುತ್ತಿರಲಿಲ್ಲ. ಬೇಳೆ ಕಾಳುಗಳನ್ನು ಭೀಮವ್ವ ಆಯಿ ಒಡೆದು ಮಾಡುತ್ತಿದ್ದಳು ಎಂದು ಹೇಳಿದೆನಲ್ಲ, ನಾನೋ ಇಲ್ಲ ನಮ್ಮ ಆಯಿಯೋ ಭೀಮವ್ವ ಆಯಿ ಮನೆಗೆ ಹೋಗಿ, “ಆಯಿ, ನಮ್ಮ ಆಯಿ ವಣಗಿಗೆ ಒಂದಿಷ್ಟು ನುಚ್ಚುಬ್ಯಾಳಿ ಕೊಡು ಅಂತ ಹೇಳ್ಯಾಳ” ಅಂತ ಅಂದಾಗ ಭೀಮವ್ವ ಆಯಿ, ಬೇಳೆಯ ಜೊತೆಗೆ ಬಿದ್ದ ಬೇಳೆಯ ಸಣ್ಣ ಪುಡಿಯನ್ನು ಬಳೆದು ಕೊಡುತ್ತಿದ್ದಳು. ಅವಳು ಹಾಗೆ ಯಾವಾಗಲೂ ಕೊಡುತ್ತಿದ್ದಳು ಅಂತ ಅಲ್ಲ. ಕೆಲವೊಮ್ಮೆ ನುಚ್ಚು ಬ್ಯಾಳಿ ಇಲ್ಲ ಅಂತ ಮಾರಿಗೆ ಹೊಡೆದ ಹಾಗೆ ಹೇಳಿ ಕಳುಹಿಸುತ್ತಿದ್ದಳು. ಆದರೆ ಅವಳು ಬಾವಿಯ ನೀರಿಗೆ ಬಂದಾಗ ನಾನು ಕೊಡ ತೆಗೆದುಕೊಂಡು ಬಾವಿಗೆ ಇಳಿದು ಒಂದು ಕೊಡ ನೀರು ತುಂಬಿಕೊಟ್ಟಿದ್ದರೆ; ಇಲ್ಲವೆ ಸೇಂಗಾದ ಬುಡ್ಡಿ ಒಡೆದು ಕೊಟ್ಟಿದ್ದರೆ ತುಂಬಾ ಖುಷಿಯಿಂದ ಮನೆಗೆ ಕರದೋ ಇಲ್ಲ ತಾನೇ ಮನೆತನಕ ತಂದೋ ನುಚ್ಚಬೇಳೆಯನ್ನು ಕೊಟ್ಟು ಹೋಗುತ್ತಿದ್ದಳು. ಇಂತಹ ಕೊಡು, ಕೊಳ್ಳುವಿಕೆ ಸ್ವಭಾವದ ಭೀಮವ್ವ ಆಯಿ ಮನೆ ಮುಂದೆ ಹೋದರೆ; ಮಲ್ಲಪ್ಪ ಮುತ್ಯಾ ಕಿವಿ ಸಂದ್ಯಾಗ ರೇಡಿಯೋ ಇಟಗೊಂಡು, ಕೇಳಕೊಂತು ಮಲಕೊಂಡಾಂಗ ಕಾಣ್ತು. ರೇಡಿಯೋದಿಂದ ‘ಕರಿ ಎತ್ತ ಕಾಳಿಂಗ…. ರೈತ ಬಾಂಧವರಿಗಾಗಿ ಕೃಷಿರಂಗ ….’ ಧ್ವನಿ ತೇಲಿ ಬಂದಂಗಾತು… ತುಸು ಗೋಣು ಇಣುಕಿ ಹಾಕಿ, ಹಿಂದೆ ಸರಿದೆ. ಯಾರು? ಅಂದಂಗಾತು… ನಾ ಮುತ್ಯಾ…ಸ… ಯಾಕ ಬಂದೀ…? ಮಲಕೊಂಡಿದ್ದ ಜಾಗದಿಂದಲೇ ಮತ್ತೊಂದು ಪ್ರಶ್ನೆ ತೂರಿ ಬಂತು. ‘ಮುತ್ಯಾ ಆಯಿ ವಣಗೀಗೆ ಕಳಿಸಿದ್ದಳು’. ಅನ್ನೋದುರಾಗ ಎಲ್ಲಾ ತಿಳಿದಂಗಾಗಿ…. ‘ಏಯ್… ಮಲಕವ್ವಗ ಒಣಗಿ ಅಂತ ನೋಡು, ಹಾಕು’ ಅನ್ನೋದಾಗ… ಭೀಮವ್ವ ಆಯಿ ಇಚ್ಚೀ ಕಡೆ ಬಾಗಿಲಿನಿಂದ ಹೊರಗ ಬಂದಂಗ ಆಯ್ತು. ಆಯಿ ಕಡೆ ತಿರುಗಿ, ‘ಆಯಿ ನಮ್ಮ ಆಯಿಗಿ ತುಸು ಒಣಗಿ ಹಾಕು’ ಅಂದೆ. ಭೀಮವ್ವ ಆಯಿ ಮಲ್ಲಪ್ಪ ಮುತ್ಯಾನ ಮಾತು, ಮೀರುವಂಗ ಇರಲಿಲ್ಲ. ನನ್ನ ಕೈಯೊಳಗಿನ ಗಂಗಾಳ ತೊಗೊಂಡು, ಬಾ ಅಂತ ಒಳಗ ಕರ್ದು, ವಣಗಿ ಹಾಕಿ ನನ್ನ ಕೈಯಾಗ ಗಂಗಾಳ ಕೊಡುವುದರೊಳಗ ಮಲ್ಲಪ್ಪ ಮುತ್ಯಾ ತಾನ ಎದ್ದು ಬಂದು,  ನನ್ನ ಕೈಯೊಳಗಿನ ಗಂಗಾಳ ಇಸಗೊಂಡು, ಒಳಗೆ ಹೋಗಿ, ಇಡೀ ಗಡಗೀನ ಗಂಗಾಳಕ್ಕ ಸುರುವಿ, ‘ತೊಗೊಂಡು ಹೋಗ’ ಅಂತ ಕೊಟ್ಟು ಕಳಿಸಿ ಬಿಡುತ್ತಿದ್ದ. ಭೀಮವ್ವ ಆಯಿಗಿ ವಣಗಿ ಕೊಡಬಾರ್ದು ಅಂತ ಏನ್ ಇರಲಿಲ್ಲ. ಅದ ವಣಗಿ ಮುಂಜಾನೆ ಮಲ್ಲಪ್ಪ ಮುತ್ಯಾಗ ಒಂದಿಷ್ಟು ಇರಲಿ ಅನ್ನುವ  ಭಾವನೆ ಅಷ್ಟೇ. ಮಲ್ಲಪ್ಪ ಮುತ್ಯಾ ಮತ್ತ ಭೀಮವ್ವ ಆಯಿ ಇಡೀ ವಾರ ಊರು ಊರು ತಿರುಗಿ ಸಂತ್ಯಾಗ ಬೇಳೆ ಕಾಳು ಮಾರಲು ಹೋಗುತ್ತಿರುವುದರಿಂದ, ಬರುವಾಗ ಮಾಂಸವನ್ನು ಕೊಂಡು ತರುತ್ತಿದ್ದರು. ಹೀಗಾಗಿ ವಾರದಲ್ಲಿ ಐದು ದಿನ ಮನೆಯಲ್ಲಿ ಬರೀ ಮಾಂಸವೇ ವಣಗಿ ಆಗಿರುತ್ತಿತ್ತು. ನಮ್ಮ ಆಯಿಗೆ ವಿಶೇಷವಾಗಿ ಮಾಂಸದ ಮೇಲೆ ಹಂಬಲ, ಆಸೆ ಇರುವುದರಿಂದ ನಾನು ನಿಯಮಿತವಾಗಿ ಮಲ್ಲಪ್ಪ ಮುತ್ಯಾರ ಮನಿಗೆ ವಣಗಿ ಇಸಗೊಂಡು ಬರಲು ಹೋಗುತ್ತಿದ್ದೆ.

ನಮ್ಮ ಆಯಿ, ‘ಏಯ್ ಸದಪ್ಪಾ…. ಮರೆಪ್ಪ ಮುತ್ಯಾನ ಕಡೆ ಹೋಗಿ, ತಂಬಾಕ ಕರಕ ಇಸಕೊಂಡು ಬಾ ಹೋಗೋ’ ಅಂದಂಗಾತು. ಪಟಕ್ಕನ ಎದ್ದು  ಮಾದೆಪ್ಪ ಮಾಮಾನ ಮದಗದ ಕಡೆ ಹೊಂಟೆ. ಇನ್ನೂ ಮೊಬ್ಬಗತ್ತಲಿತ್ತು. ಅಂಜೀಕಿ ಬರಾಕತ್ತು. ತುಸು ಅಲ್ಲೇ ನಿಂತುಕೊಂಡೆ. ತಂಬೀಗಿ ತೊಗೊಂಡು ಹೋಗಿ, ಜರದ ಪಟಕಾ ಸುತ್ತಿದ್ದ ಮರೆಪ್ಪ ಮುತ್ಯಾ ತಮ್ಮ ಕೆಳಗೀನ ಹೊಲದ ಕಡೆ ಹೊರಟಾಂಗ ಕಾಣ್ತು. ಜೋರ್ ಆಗಿ ಹಿಂದಿಂದ ಓಡಿ ಹೋದೆ. ಮರೆಪ್ಪ ಮುತ್ಯಾ ಹಿಂದೆ ಒಮ್ಮೆ ನೋಡಿದ. ಮುತ್ಯಾ ಆಯಿಗಿ ಕರಕ ಅಂದೆ. ಅಲ್ಲೇ ನಿಂತು ಎರಡು ಬೂಚ್ ಅಳೆದು ಕರಕ ಹಾಕ್ದ. ತೊಗೊಂಡು ಮನಿ ಕಡೆ ಹೊರಟು, ಹೊರಳಿ ನೋಡಿದೆ. ಮರೆಪ್ಪ ಮುತ್ಯಾ ಮಟಾಮಾಯ್. ಅಪ್ಪ ಆವಾಗಾವಾಗ ಹೇಳುತ್ತಿದ್ದ ಮಾತು ನೆನಪಿಗೆ ಬಂತು…‌’ಮರೆಪ್ಪ ಮಾಂವಂದು ಹೆಣ್ಗರಳಪಾ…ದುಡಿಯಾಕನೂ ಬಾಳ ಬಿರಸೋ…’ ಇನ್ನೂ ಏನೇನೋ ಹೊಗಳು ನುಡಿ…

ಚಂದವಳ್ಳಿಯ ತೋಟವನ್ನು ಇಡೀ ಒಂದು ಸುತ್ತು ಹಾಕಿದೆ. ಯಾಕೋ ಬಿಕೋ ಬಿಕೋ ಅನ್ಸದಂಗಾತು. ಒಂದು ಕಾಲದಲ್ಲಿ ಜನಜಂಗುಳಿ, ಸದ್ದು-ಗದ್ದಲದಿಂದ ತುಂಬಿ ತುಳುಕುತ್ತಿದ್ದ ಚಂದವಳ್ಳಿ ತೋಟ ಇಂದು ನಿರ್ಜನ ಪ್ರದೇಶ! ಚಂದವಳ್ಳಿಯ ತೋಟದ ಈ ಎಲ್ಲ ಹಿರಿಯ ಚೇತನಗಳು ಇಲ್ಲಿ ಈ ಹಿಂದೆ ನೆಲೆಸಿದ್ದರು ಎನ್ನುವುದನ್ನು ನೆನಪಿಸಿಕೊಂಡಾಗ ತುಂಬಾ ಸಂಕಟವಾಗುತ್ತದೆ. ಅನ್ನೋನ್ಯ ಸಂಬಂಧಗಳ ಹೃದಯದಂತಿದ್ದ ಚಂದವಳ್ಳಿಯ ತೋಟದ ಮಣ್ಣಲ್ಲಿ ಈ ಹಿರಿಯ ಚೇತನಗಳು ಮಣ್ಣಾದರೂ ಆ ಮಣ್ಣಿನ ಕಣಕಣದಲ್ಲೂ ಅವರು ಜೀವಂತವಾಗಿರುವರು ಎಂಬ ದೃಢ ನಂಬಿಕೆಯೊಂದಿಗೆ ಮುಂದೆ ಮುಂದೆ ಹೆಜ್ಜೆ ಹಾಕಿದೆ.

‍ಲೇಖಕರು avadhi

May 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: