ಹಾಯ್ಕುಗಳು
ರಾಕೇಶ್ ಬಂದೋಳ್
**
೧.
ಸತ್ತ ಗೆದ್ದಲು ಹುಳುವಿನ ರೆಕ್ಕೆಯನ್ನು
ಹೊತ್ತು ಸಾಗುತ್ತಿವೆ ಇರುವೆಗಳು ಬದುಕು ಕಟ್ಟಲು
೨.
ಈಜುಕೊಳದಲ್ಲಿ ನೀರು ಹರಿಯುವುದಿಲ್ಲ,
ದಡಕ್ಕೆ ಬಂದು ಅಪ್ಪಳಿಸುವುದೂ ಇಲ್ಲ
೩.
ದಾರಿಯಲ್ಲಿ ದುಡ್ಡು ಸಿಕ್ಕರೆ ದೇವರಿಗೆ ಹಾಕು ಅಂದಿದ್ದಳು ಅಮ್ಮ,
ನಾನು ಮನೆಯಲ್ಲೇ ಒಂದು ರೂಪಾಯಿ ಕದ್ದು ಸಿಕ್ಕಿಬಿದ್ದಿದ್ದೆ
೪.
ಜಾಮೆಟ್ರಿ ಬಾಕ್ಸ್ ನಲ್ಲಿ ಉಜ್ಜಿ ಉಜ್ಜಿ ಸವೆಸಿದ ಅರ್ಧ ರಬ್ಬರ್ ನಲ್ಲಿ,
ಅವಳ ಹೆಸರಿನ ಕೊನೆ ಅಕ್ಷರಗಳಿವೆ
೫.
ಪರ್ವತದ ಇಳಿಜಾರಿನಲಿ ಮರಗಳು ಜಾರಿ ಬೀಳುವುದಿಲ್ಲ,
ಮೇಲೆ ಹತ್ತಲು ಬಯಸುವುದೂ ಇಲ್ಲ
೬.
ಮುರಿಸಂಜೆಯಲಿ ಎಲ್ಲೂ ಹೋಗಲು ಬಿಡುತ್ತಿರಲಲ್ಲ ಅಮ್ಮ,
ಬಣ್ಣಕ್ಕೆ ಹೆದರಿದಳಾ!!!?
೭.
ಹೋಟೆಲ್ ನ ಒಂಬತ್ತನೇ ಮಹಡಿಯ ರೂಮಿನಿಂದ
ಅರ್ದ ಚಂದ್ರ ಕಾಣುತ್ತಿದ್ದಾನೆ, ಶಿವ ಎಲ್ಲಿಗೆ ಹೋದ?!!
೮.
ಅರೆ! ಅಲ್ಲಿ ಅಪ್ಪ ಅಮ್ಮ ಇಬ್ಬರೂ ಎರಡೂ ಮುಳ್ಳಿಗೆ ಕೈ ಹಾಕಿ ಜೋತು ಬಿದ್ದಿದ್ದಾರೆ ಅವು ಚಲಿಸಿದಂತೆ,
ನನಗೂ ಕೂಗಿ ಹೇಳುತ್ತಿದ್ದಾರೆ, ‘ಆ ಸೆಕೆಂಡಿನ ಮುಳ್ಳು ಓಡುತ್ತಿದೆ ನೋಡು! ಹಿಡಿದುಕೋ…’
೯.
ಅರ್ಥ ವಿಲ್ಲದ/ ವಿರುವ/ ವಾಗದ
ಅರ್ಧಂಬರ್ಧ ಸಾಲುಗಳೇ ಬದುಕಾ!?
0 ಪ್ರತಿಕ್ರಿಯೆಗಳು