ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಜನಿ ಪ್ರಭು ಅವರ ಹೊಸ ಕವಿತೆ- ಶ್ರುತಿ ಹಿಡಿಯಲೇನು??

ರಂಜನಿ ಪ್ರಭು



ಸುರಿಯುತಿಹ ಶ್ರಾವಣದ
ಸೋನೆಮಳೆ ನೀನು
ಮಳೆಯಹಾಡಿಗೆ ಶ್ರುತಿಯ
ಹಿಡಿಯಲೇನು?

ಶ್ರಾವಣಕೆ ಶರಣಾದ
ನೆಲದಿಂದ ಮೂಡುತಿವೆ
ಹಸಿರ ಮೊಳಕೆ,
ಮೊಳಕೆಯಾ ಮೇಲೆಲ್ಲ
ನಿನ್ನದೇ ಹೆಸರು
ನಿನ್ನ ಹೆಸರಿಗೆ ಶ್ರುತಿಯ
ಹಿಡಿಯಲೇನು?

ಮಿಂದೆದ್ದ ಗಂಧವತಿ ಪೃಥಿವಿಯ
ಒಡಲ ಘಮ
ಹರಡುತಿದೆ ಎಲ್ಲ ಕಡೆಗೆ
ಸುಗಂಧಿತ ಪವನ ಚಲಿಸುವೆಡೆಯಲ್ಲೆಲ್ಲ
ನಿನ್ನದೇ ಉಸಿರು
ನಿನ್ನ ಉಸಿರಿಗೆ ಶ್ರುತಿಯ ಹಿಡಿಯಲೇನು?

ಬಯಕೆ ಭಾರದಿ ಬಸುರು ಮೋಡಗಳು ತೇಲುತಿವೆ
ಬಾನಿನಲಿ ದೋಣಿಯಂತೆ
ಮೋಡದೊಳಗಿನ ಕನಸು ಇಳಿಯುತಿವೆ
ನಿದ್ರೆಯಲಿ ಮೈಮರೆತ
ಕಣ್ಣಿನೊಳಗೆ
ಕಣ್ಣ ಕನಸಿಗೆ ಶ್ರುತಿಯ
ಹಿಡಿಯಲೇನು?

ಸಿಡಿಲಿನಬ್ಬರ ಕೇಳುತಿದೆ
ಮುಗಿಲಿಂದ
ರಾಮ ಮುರಿದನೇನು
ಶಿವಧನುವನು
ಸೀತೆ ರೂಪದ ಒಲವು
ವರಮಾಲೆ ತಂದಿರಲು
ಶಿರಬಾಗಿ ಒಪ್ಪಿಸಿಕೊ
ನಿನ್ನ ನೀನು
ಚೆಲುವ ಮಿಲನಕೆ ಶ್ರುತಿಯ ಹಿಡಿಯಲೇನು??

      

‍ಲೇಖಕರು avadhi

27 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading