ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರಂಗ ಸ್ಥಳದ ಆಚೀಚೆ’ – ಪ್ರಜ್ಞಾ ಮತ್ತೀಹಳ್ಳಿ

ತೊಂಗ ತಾ ತೊಂ ಧಿನ್ನಂಗ

ಪ್ರಜ್ಞಾ ಮತ್ತೀಹಳ್ಳಿ

ಗುಡಾರದ ಟೆಂಟಿನ ಸಂದಿಗಳಿಂದ ಒಳನುಗ್ಗುವ ತಣ್ಣನೆಯ ಗಾಳಿಗೆ ಬೆರಳುಗಳು ಮರಗುಟ್ಟುತ್ತಿವೆ. ಒತ್ತರಿಸಿ ಬರುವ ನಡುರಾತ್ರಿಯ ನಿದ್ದೆಗೆ ತಂತಾನೇ ಮುಚ್ಚಿಕೊಳ್ಳುವ ಕಣ್ಣ ಕದದ ಮೇಲೆ ಅಬ್ಬರದ ಚೆಂಡೆ ಬಿಡ್ತಿಗೆ ಚಿಲಕ ಕುಟ್ಟುತ್ತಿದೆ. ರಂಗಸ್ಥಳದಲ್ಲಿ ಕುಣಿಯುತ್ತಿರುವ ಭೀಮ ಭಾಗವತರ ಆಲಾಪದಲ್ಲೇ ತೇಲುತ್ತ ದೂರ ಹೋಗುತ್ತಿರುವಂತೆ ಭಾಸವಾಗುವ ಮಂಪರಿನ ಅಲೆಯೊಂದು ಆವರಿಸುತ್ತಿದೆ. ಕಿಬ್ಬೊಟ್ಟೆಯಾಳದಲ್ಲೊಂದು ಸಣ್ಣ ನೋವಿನಲೆಯೆದ್ದು ಸುಳಿಸುಳಿಯಾಗಿ ಕಚಗುಳಿಯಿಟ್ಟಾಗ ಎದ್ದು ಹೊರ ಹೋಗಲೇಬೇಕಾಗಿದೆ. ಹೊದ್ದ ಶಾಲನ್ನು ಬಿಗಿಯಾಗಿ ಎಳೆದು ಕಿವಿ ಮುಚ್ಚುವಂತೆ ಸುತ್ತಿಕೊಳ್ಳುತ್ತ ಕಾಲು ಚಾಚಿ ಕೂತವರ ಎದುರು ಕೊಂಚ ನಿಲ್ಲುತ್ತ ಅವರು ಕಾಲೆಳೆದುಕೊಂಡು ನೆಟ್ಟಗೆ ಕೂತ ಮೇಲೆ ಮುಂದೆ ಹೋಗುತ್ತ ಹಾಗೆ ನಿಂತಾಗೊಮ್ಮೆ ಹಿಂದಿನ ಸಾಲಿನವರಿಗೆ ಕಾಣಲು ಅಡ್ಡಿಯಾಗಿ ತಲೆಯನ್ನು ಹಾಗೊಮ್ಮೆ ಹೀಗೊಮ್ಮೆ ವಾಲಿಸುತ್ತ ಪ್ಚ ಪ್ಚ ಲೊಚಗುಟ್ಟುವುದು ಕೇಳಿದರೂ ತೆಪ್ಪಗೆ ಸರಿಯುತ್ತ ಹೊರ ಬಂದರೆ ಓಹ್ ಮಂಜಿನ ಶಾಲು ಹೊದ್ದ ಬಯಲು, ತೆಳ್ಳಗೆ ಹೊಯ್ದ ಕಾವಳದ ರೋಮಾಂಚನಕ್ಕೆ ಮೈಯೊಡ್ಡಿದ ಕಾರು-ಬೈಕುಗಳು, ಸುತ್ತಮುತ್ತಿದ ಜನರ ನಡುವೆ ಭರ್ರನೆ ಸದ್ದಿನ ಪೆಟ್ರೊಮ್ಯಾಕ್ಸ ಬೆಳಕಲ್ಲಿ ನೀಲಿ ಬೆಂಕಿ ನಾಲಿಗೆಗಳು ಕಪ್ಪು ಕಾವಲಿಯನ್ನು ನೆಕ್ಕುತ್ತಿರುವತಳ್ಳುಗಾಡಿಗಳು. ಕಿಟ್ಲಿಯ ಬಿಸಿ ಚಹಾ ಗ್ಲಾಸುಗಳಿಗೆ ಹೊಯ್ಯುತ್ತ ಇನ್ನೊಂದು ಕೈಯಿಂದ ಆಮ್ಲೆಟ್ ಮಗಚುತ್ತ ತಿಂದು ಹೊಂಟವರಿಗೆ ಕರಾರುವಾಕ್ಕಾದ ಬಿಲ್ಲಿನ ಲೆಕ್ಕ ಹೇಳುತ್ತ ಈಗ ಕೈ ತಿಕ್ಕುತ್ತ ಬಂದವರಿಗೆ ಇವತ್ತಿನ ಆಟ ಹ್ಯಾಂಗ್ರೋ ಎಂದು ಪ್ರಶ್ನಿಸುತ್ತ ಶತಾವಧಾನಿಯೇ ಆಗಿದ್ದಾನೆ ಶಂಕ್ರಣ್ಣ. ಆಗಲೇ ಕರಿದು ಸೇರಿಸಿಟ್ಟ ಭಜ್ಜಿಯ ಪರ್ವತ ತನ್ನ ವಿಶಿಷ್ಟ ಕಾಂದಾ ಪರಿಮಳದಿಂದಲೇ ಜನರ ಬೆರಳು ಸೆಳೆದು ಅರ್ಧ ಖಾಲಿಯಾಗಿದೆ. ಕೆಳಗೆ ಕೂತು ಮಾಸಲು ಬಕೆಟ್ಟಲ್ಲಿ ಪ್ಲೇಟು ಚಮಚ ಅದ್ದಿ ತೊಳೆಯುತ್ತಿರುವ ಗಣೇಶನಿಗೆ ಲಗು ತೊಳೆಯೊ ಎಂಬ ಆದೇಶ ಹತ್ತು ಸಲ ಬಂದಾಗಿದೆ.
ಶಂಕಾಕೃತಿಯ ಕಾಗದದ ಕೊಟ್ಟೆಗಳನ್ನು ಎತ್ತರದ ಗೋಪುರದಂತೆ ಒಂದರೊಳಗೊಂದು ಜೋಡಿಸಿಕೊಂಡು ಶೆಂಗಾ ಗಾಡಿಯವ ಹುರಿಯುತ್ತಿರುವ ಬಾಣಲೆಯ ಉರಿ ಕಡಿಮೆ ಮಾಡಿ ಮಂಡಕ್ಕಿ ಮಿಸಳ್ ಬೆರೆಸುತ್ತಿದ್ದಾನೆ. ಗುಟ್ಕಾ,ಬಾಳೆಹಣ್ಣು ಮಾರುತ್ತಿರುವವನಿಗೆ ಪಾನು ಕಟ್ಟಲೂ ಪುರುಸೊತ್ತು ಸಿಗದೇ ಎದುರಿಗೆ ನಿಂತ ಗಿರಾಕಿಗೆ ಆಯ್ತು ಒಂದೇ ನಿಮಿಷ ಎಂದು ಎಂಟು ಸಲ ಹೇಳಿದ್ದಾನೆ.

ಟೆಂಟಿನೊಳಗಿಂದ ಜೋರಾದ ಚಪ್ಪಾಳೆ ಸದ್ದಿನೊಂದಿಗೆ ಹೊಸ ಕಂಠದ ಹಾಡು ಕೇಳುತ್ತಿದೆ. ಓಹೋ ಬಾಗವತರಾದಿಯಾಗಿ ಹಿಮ್ಮೇಳ ಬದಲಾಯ್ತು. ಇಳಿ ಮದ್ದಲೆಯ ಟುಂಟುಂ ಸದ್ದು ಮೂರನೇ ಜಾವದ ನೀರವಕ್ಕೆ ಹಿತದ ಅಲೆಗಳ ತರಂಗ ಹುಟ್ಟಿಸುತ್ತಿದೆ. ಅಮದರೆ ಎರಡನೆಯ ಪ್ರಸಂಗ ಶುರುವಾಯ್ತೆಂದು ಅರ್ಥ. ಪ್ರವೇಶ ನೋಡುವ ಅವಕಾಶ ತಪ್ಪಿಸಿಕೊಳ್ಳಬಾರದೆಂದು ಗಾಡಿಯ ಸುತ್ತಲಿದ್ದವರೆಲ್ಲ ಟೆಂಟಿನೊಳಗೆ ಓಡುತ್ತಿದ್ದಾರೆ. ಕೃಷ್ಣನ ಜೊತೆ ಬಂದ ಮಕರಂದ ಇತ್ಯಾದಿ ಹಾಸ್ಯಗಾರರು ಎಬ್ಬಿಸಿದ ನಗೆಯ ಅಲೆಗೆ ಬಿದ್ದು ಬಿದ್ದು ನಗುತ್ತಿರುವ ಪ್ರೇಕ್ಷಕರ ಕಣ್ಣಿಂದ ಹೊರ ಬಂದ ನಿದ್ದೆ ಮಂಪರು ಗೋಣಿ ತಾಟಿನ ಮೇಲೆ ಮುದುಡಿಕೊಂಡು ಮಲಗಿದ ಗಣೇಶನ ಕಣ್ಣೊಳಗೆ ಇಳಿಯುತ್ತಿದೆ.
ಓ ಅಲ್ಲಿ ರಂಗಸ್ಥಳದ ಹಿಂದಿನ ಟೆಂಟಿನ ಚೌಕಿಮನೆಯಲ್ಲಿ ವೇಷ ಕಳಚಿದ ಕೌರವ ಮುಖಕ್ಕೆ ಕೊಬ್ಬರಿಎಣ್ಣೆ ಮೆತ್ತುತ್ತ ಸಂಬಾವನೆ ಬಾಕಿಗಾಗಿ ಸಂಘಟಕರನ್ನು ಹುಡುಕುತ್ತಿದ್ದಾನೆ. ಇಳಿದು ಬಂದ ಮೊದಲಾಟದ ಭಾಗವತ ಬಾಯಿಗೆ ಕವಳ ತುರುಕಿಕೊಳ್ಳುತ್ತ ಪಕ್ಕದ ಹಳ್ಳಿಯ ಇನ್ನೊಂದು ಆಟಕ್ಕೆ ಹೋಗಲು ಬೈಕು ಹತ್ತುತ್ತಿದ್ದಾರೆ. ಆಗಷ್ಟೇ ಎದ್ದು ಆಕಳಿಸುತ್ತ ಕನ್ನಡಿಯೆದುರು ಕೂತವ ಬೇಸಿನ ಟಬ್ಬ ಹುಡುಕುತ್ತಿದ್ದಾನೆ. ಪ್ರವೇಶಕ್ಕಾಗಿ ಅವಸರದಿಂದ ಹೊರಟ ಚಂದ್ರಾವಳಿಯ ಜರಿ ಸೀರೆ ನೋಡಿ ಚೌಕಳಿ ಸೀರೆ ಉಡದಿರುವ ಬಗ್ಗೆ ಆಕ್ಷೇಪಿಸುತ್ತ ವಯಸ್ಸಾದ ಕಲಾವಿದರು ಸಾಂಪ್ರದಾಯಿಕತೆಯಿಂದ ದೂರ ಸರಿಯುತ್ತಿರುವ ಕಲೆಯ ಬಗ್ಗೆ ಭಾಷಣ ಶುರುವಿಟ್ಟಿದ್ದಾರೆ. ಬ್ಯಾಗಿನ ಮೇಲೆ ತಲೆಯಿಟ್ಟು ಕಸೆ ಸೀರೆ ಹೊದ್ದು ಮಲಗಿದ ಭೀಮ ಮಗ್ಗುಲಾಗಿದ್ದಾನೆ.
ಸಿಪ್ಪೆ ಸುಲಿದ ಈರುಳ್ಳಿಯ ಸರಸರ ಹೆಚ್ಚುತ್ತಿರುವ ಶಂಕ್ರಣ್ಣ ಒಲೆ ಮೇಲೆ ಕುದಿಯುತ್ತಿರುವ ನೀರಿಗೆ ಚಾಪುಡಿ ಸುರಿದಿದ್ದಾನೆ. ಅವನಿಗೆ ಗೊತ್ತು ನಾರದನ ನೀರಸ ಪೀಠಿಕೆ ಶುರುವಾದದ್ದೇ ಜನ ಒಬ್ಬೊಬ್ಬರೇ ಹೊರಗೆ ಬರುತ್ತಾರೆ. ಕೆಳಗೆ ಬಿದ್ದ ಆಮ್ಲೇಟಿನ ಚೂರು ತಿಂದು ಮುಗಿಸಿದ ನಾಯಿ ಸೆರೆ ಕುಡಿದು ಜೀಪಿನಡಿ ಬಿದ್ದುಕೊಂಡವನ ಚಪ್ಪಲಿ ಕಚ್ಚು ಹೋಗಿದೆ. ಬೆತ್ತಲೆ ಚಂದ್ರನ ಓಡಾಟ ನೋಡಿ ಸಾಕಾದ ಯಾಮಿನಿ ನೇರಳೆ ಮೋಡದ ಸೆರಗು ಹೊಚ್ಚಿದ್ದಾಳೆ. ಅಲ್ಲಿ ಅರ್ಧ ಚಂದ್ರಾಕೃತಿಯ ರಂಗಸ್ಥಳದ ಕೆಳಗೆ ಚಂಡೆ-ಮದ್ದಳೆಯ ಆರ್ಭಟಕ್ಕೆ ಕುಣಿವ ವéೇಷಗಳಿಂದ ಅಲುಗಾಡುತ್ತಿರುವ ಹಲಗೆಗಳ ಅಡಿಯಲ್ಲಿ ನಿರುಮ್ಮಳವಾಗಿ ನಿರಾತಂಕದಿಂದ ಮುದುಡಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ ಕುರ್ಚಿ ಹಾಕುವ ಕೆಲಸದ ಹುಡುಗ. ಸದ್ದು-ಗದ್ದಲ-ಚಲನೆ-ಆವೇಶ-ಮಾತು-ಕತೆಗಳನ್ನೆಲ್ಲ ಮೀರಿದ ಲೋಕಾತೀತ ಸುಖದ ನಿದ್ದೆಯೊಂದು ಮಾಯದೂರಿನ ಇನ್ನರ ಬೀದಿಗಳಲ್ಲಿ ಅವನನ್ನು ಮುದ್ದಿಸುತ್ತಿದೆ.
 

‍ಲೇಖಕರು avadhi

19 February, 2013

1 Comment

  1. Raghunandan K

    Very Nice article…
    ಯಕ್ಷಗಾನದ ನೆಪದಲ್ಲಿ ಒಂದಷ್ಟು ಆಪ್ತತೆಯನ್ನ ಕಟ್ಟಿಕೊಟ್ಟಿದ್ದೀರಿ, ಶುಭವಾಗಲಿ.
    ಈ ತರಹದ ಬರಹದ ಶೈಲಿ ನನಗೆ ಇಷ್ಟವಾಗುತ್ತದೆ. ಜಯಂತ ಕಾಯ್ಕಿಣಿಯವರ ಬರಹದಂತೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading