ಸುಚಿತ್ರಾ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕತಗಾಲ ಹುಟ್ಟೂರು. ಕುಮಟಾದ ಬಾಳಿಗಾ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಹಲವು ಕವನಗಳು ನಾಡಿನ ವಿವಿಧ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಕೆ. ಇಪ್ಪತ್ತೆರಡು ವರುಷಗಳಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ಇತ್ತೀಚಿನವರೆಗೂ ಬೆಂಗಳೂರು ನಿವಾಸಿಯಾಗಿದ್ದು ಪ್ರಸ್ತುತ ಸಾಂಸ್ಕ್ರತಿಕ ನಗರಿ ಮೈಸೂರಲ್ಲಿ ನೆಲೆಸಿದ್ದಾರೆ.
ಮಾತಿನ ಬೆಂಕಿಯ
ಸೋಲಿನ ಬಣವೆಗಿಟ್ಟರೆ
ಕಣ್ಣ ಮೂಲೆಯ ಕೆಂಪುಬಣ್ಣವ
ಚೆಲ್ಲಿ ಓಕುಳಿಯಾಡಿದರೆ
ಎದೆಯೊಳಗೆ ಹೆಪ್ಪುಗಟ್ಟಿದ ಕಲ್ಲ
ಎತ್ತಿ ಬಿಸಾಡಿದರೆ
ನೆತ್ತಿಯೊತ್ತುವ ಚಿಂತೆಹೊರೆಯ
ರಪ್ಪನಿಳಿಸಿ ಗೋಡೆಗಾನಿಸಿದರೆ
ಜೀತದ ಸುರುಳಿ ಸುತ್ತಿಟ್ಟ

ಬೆನ್ನುಹುರಿ ಹಾಸಿಗೆಯ
ಜಾಡಿಸಿ ಕೊಡವಿ ನೇರ ಹಾಸಿದರೆ
ಮರೆತ ಕನಸಿನ ಮಣಿಸರ
ಎಣಿಸದೇ ತೆಗೆದು ಟ್ರಂಕಿನಲ್ಲಿಟ್ಟರೆ
ಅಡ್ಡಡ್ಡ ಬರುವ ಅಹಂಬಾಗಿಲ
ಅಷ್ಟೇ ಒರಟಾಗಿ ಸರಿಸಿಟ್ಟು
ಹೊಸಗಾಳಿಯ ಹಾಯಿಸಿದರೆ
ಹಗುಹಗುರ ಜೀವದಚೀಲ!!






0 Comments