
ಭವ್ಯ ಗೌಡ
ಕುಳಿತು ಬಿಡಲೆ ಇಲ್ಲೆ
ನಿನ್ನ ದಾರಿ ಕಾಯುತ
ಮರೆತಂತೆ ಮರೆಯಾದವರು
ಮರಳಿ ಬರಲೆನುತ
ಬಿಡುವಿಲ್ಲದಾ ಬಾಳು
ನಡುನಡುವೆ ನೆನಪುಗಳು
ಆಚೆ ದಡದಿ ನಿಂತು ಸೆಳೆವ
ಆಸೆಗಳಾ ಬಲೆಗಳು
ಯಾವ ಅಲೆ ತರುವುದೊ
ನಿನ್ನಾಗಮನದ ಸಂದೇಶವ?
ಒಂದೊಂದಕ್ಕು ತಿಳಿಸಿರುವೆ
ತರಲು ನಿನ್ನುತ್ತರವ
ತೀರದಡದ ದೂರವೆಷ್ಟು?
ಅಳತೆಯಿಲ್ಲ
ನಿನ್ನ ನಿರೀಕ್ಷೆಯ ತೀರದ ಆಸೆ
ಕಾಡುತಿದೆಯಲ್ಲ
ನಂಬಿಕೆಯೊಂದೆ ನಿನ್ನೆಡೆಗೆ ಸಾಗಿಸುವ
ಅಂಬಿಗನಿಲ್ಲಿ
ಬರಿ ಆರಂಭವಷ್ಟೆ ನನ್ನ ಕನಸುಗಳಿಗೆ
ಕೊನೆಯೆಲ್ಲಿ?

ಒಮ್ಮೆ ಗೆಲ್ಲಿಸು ಮನವ..
ಮರುಕಳಿಸದಿರಲಿ
ಭರವಸೆಯ ಆಸೆಗಳು,
ಸಂತಸದ ಬೆನ್ನೇರಿ
ಅಚೇತನವಾದ ಭಾವಗಳು
ನಾಳೆ ಏನೆಂಬ
ಸತ್ಯಶೋಧ,
ಇಂದು ನನ್ನೊಳಗೆ ಮಿಡಿವ
ಭಯದ ನಾದ
ಒಮ್ಮೆ ಸಿಕ್ಕಂತೆ,
ಸಿಗಬಹುದೇನೋ ಎಂಬಂತೆ
ವಾಸ್ತವಕ್ಕೂ ಭ್ರಮೆಗೂ
ಜೋಡಿಯಾದ ಕದವಿದು
ಅರಿತುಕೊಳ್ಳಲಾ ,
ನಿನಗೆ ಅರ್ಥೈಸಲ?
ಬೇಕು ಬೇಡೆಂಬ ಬುದ್ದಿವಂತಿಕೆಯನು
ಜೀವನದ ಬೇಡಿಕೆಯನು
ನಿರ್ಜೀವದಂತೆ ನಡೆವ ಕ್ಷಣ,
ಅಗಲಿಕೆಯ ಅಮಲಿನಲಿ
ಒಮ್ಮೆಲೆ ಉಸಿರಿನ ಮಾತು,
ನಿನ್ನ ನೆನಪಿನಲಿ
ಒಂದು ಬಾರಿ ಬದುಕಬೇಕೆನಿಸಿದೆ,
ನನಗೆ ನಾ ಬೇಕಾದಂತೆ,
ನಿನ್ನ ಹೊರತು!
ಬೇರೆಲ್ಲವನ್ನು ಮರೆತಂತೆ
ಒಮ್ಮೆ ಗೆಲ್ಲಿಸು ಮನವ,
ಸೋಲನೊಪ್ಪುವ ಮುನ್ನ,
ಮರುಕಳಿಸದಂತೆ
ಅಚೇತನಗೊಳ್ಳುವ ಆಸೆ





Superb Bhavya:-)
ತುಂಬಾ ಚೆನ್ನಾಗಿ ಮೂಡಿದೆ ಭಾವಗಳು ; ಹೃದಯ ಸ್ಪರ್ಶ ಕವನಗಳು
ಯಾರಿಗಾಗಿ ಈ ಕಾದಾಟ ….
ನಿನದು ಯಾರ ನೆರಳ ಹೂಡಕಾಟ…..????