ಮೂಗು ಮುಚ್ಚಿದ ಹುಡುಗಿ
ರಾಘವೇಂದ್ರ ಹೆಗಡೇಕರ್
ಅವ್ವನಿಗೆ ಕೈ ನೋವೆಂದು
ನಾನೇ ಪಾತ್ರೆ ಉಜ್ಜಿದೆ
ಉಜ್ಜಿದಷ್ಟು ಬಿಡಲಾರದು
ಅಂಟಿಕೊಂಡ ಜಿಡ್ಡು..
ಈಗ ಅರಿವಾಯಿತು ಯಾಕೆ
ಯಾವಾಗಲು ಅವ್ವನ ಕೈ
ಘಮ ಘಮಿಸುತಿತ್ತು….
ಬೆಳಿಗ್ಗೆ ಕುಡಿದ ತಣ್ಣನೆ
ಕಾಪಿಯಷ್ಟೇ ಇನ್ನು ಹೊಟ್ಟೆಯಲ್ಲಿ
ಕುದಿಯುತ್ತಿದೆ
ಜೊತೆಗೆ ತಿಂಡಿಗೆ ತಂಗಳು ಉಪ್ಪಿಟ್ಟು
ತಳ ಹಿಡಿದ ಬಕೇಟನಲ್ಲಿದ್ದ
ಗೋಡಂಬಿಯ ತುಂಡು..
ಕೈ ನೋವೆಂದರೆ ಮನೆಗೆ ಹೋಗೆಂದು
ಆಗಲೇ ಅಡಿಗೆಯ ಮೇಸ್ತ್ರಿ
ಒಮ್ಮೆ ಅವ್ವನಿಗೆ ಗದರಿಸಿದ್ದಾಗಿದೆ
ಊಟದ ಮನೆಯ ಹಿಂದಿನ ತಿಪ್ಪೆಗೆ
ಎಷ್ಟೊಂದು ನಾಯಿ ಹಸುಗಳು
ನಾನು ಪ್ಲಾಸ್ತಿಕ ಚೀಲಗಳನ್ನು
ಜೋಪಾನವಾಗಿ ಬಚ್ಚಿಟ್ಟಿದ್ದೇನೆ
ಸಿಕ್ಕರೆ ಹೆಚ್ಚುಳಿದ ಅಡಿಗೆಯನ್ನು
ತುಂಬಿಸಿಕೊಳ್ಳಲು…
ಪ್ರತಿ ರಾತ್ರಿಯೂ ನಮಗೆ
ಔತಣಗಳ ಅಳಿದುಳಿದ ಊಟಗಳೆ
ಹೊಟ್ಟೆ ಹಸಿದಾಗ ಮಾತ್ರ
ಕರುಳಲ್ಲಿ ಸದ್ದಿಲ್ಲದೇ ಸುಡುವ ಬೆಂಕಿ.
ಅದಕ್ಕೆ ಮೂಗು ಮುಚ್ಚಿಕೊಂಡಿದ್ದೇನೆ
ಯಾವ ಅಡಿಗೆಯ ವಾಸನೆಯೂ
ಮೂಗಿಗೆ ಅಡರಬಾರದು..





good poem raghavendra.
Thank u