ಡಾ.ನಾಗರಾಜ್ ದೇಶಪಾಂಡೆ

ಯಾವನವ ನನ್ನ ಈ ಕವನ-ವನದಲ್ಲಿ ನುಸುಳಿ
ಭಾವನೆಯ ಕುಸುಮಗಳ ಕೊಯ್ಯುವವನು?
ಜೀವನದ ಕನಸುಗಳ ಹೊಸೆದ ಕಾವ್ಯದ ಮಾಲೆ
ಹೂವುಗಳ ದೋಚುತ್ತಾ ಒಯ್ಯುತಿಹನು !!
ಮೆದುವಾದ ಪಕಳೆಗಳ ಪುಷ್ಪದ ತುಂಬುಗಳ
ಹದವಾದ ಬೆರಳಿನಿಂ ಚಿವುಟುತಿಹನು
ಮಧುರ ನೋವನು ನೀಡಿ, ಮತ್ತು ಬರೆಸುತ ಮತ್ತೆ
ವಿಧವಿಧದ ಹುಸಿಮುನಿಸು ತರಿಸುತಿಹನು !!

ಏನಿದು ಈ ಮಾಯೆ, ಏಕೆ ನೆನಪನು ಈವೆ?
ನೀನು ಬರುವುದ ದಾರಿ ಕಾಯುತಿರುವೆ
ಅನುಭವವು ಅತಿ ಮಧುರ, ಸಹಿಸಲಾರೆನು ದೂರ,
ಅನುಕ್ತ, ಅನುಭಾವ ಆನಂಧದಾರ!!
ನಾಳೆ ನೀ ಬರುವಂಥ ವೇಳೆಯನ್ನು ಸರಿಯಾಗಿ
ಹೇಳು, ಕಾಯ್ವೆನು ನಾನು ಅರಳಿ ನಿನಗಾಗಿ
ತಾಳಲಾರದ ವಿರಹ, ನೋವ ನೀಡದೆ ನೀನು
ಮೇಳೈಸು ಮುದಗೊಳಿಸು ಈ ಹೂವಿನ ಮಾನವ!!






0 Comments