ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರ ಕಾಲುಗಳಿಗೂ ಕಣ್ಣಿರುವುದಿಲ್ಲ

ನೋವಿನ ಹಂಗಿಲ್ಲದ ಬದುಕು

ಶ್ರೀವಿಭಾವನ

1

ಆ ಗಜಿಬಿಜಿ, ಗದ್ದಲ
ಮೂಗು ಮುಚ್ಚಿಕೊಂಡರೂ
ಕಾಡುವ ದುರ್ನಾತ,
ಕ್ಷಣಕ್ಕೊಂದು ಬಸ್, ಕಾರುಗೀರು ಇತ್ಯಾದಿಗಳು
ಮೇಲೆ ಕೆಂಡದಂತೆ ಕಾಯುವ ಸೂರ್ಯ
ಇವೆಲ್ಲನ್ನೂ ಮೀರಿದ ಬದುಕು

2

ಫುಟ್‍ಪಾತ್‍ನ ಕಲ್ಲು, ಗಾಜು, ಲೋಹದ
ಚೂರುಗಳಿಗೆ ಕರುಣೆ ಇದ್ದಂತಿಲ್ಲ.
ಯಾವಾಗ, ಯಾರು ಬೇಕಾದರೂ
ತುಳಿಯಬಹುದು; ಯಾರ ಕಾಲುಗಳಿಗೂ ಕಣ್ಣಿರುವುದಿಲ್ಲ
ಕ್ಷಣಗಳ ರೂಪದ ಲೆಕ್ಕಾಚಾರದ ಸಂತೆಯದು
ಇವೆಲ್ಲದರ ಸೋಂಕು ತಾಗದ ಕಂದಮ್ಮಗಳು

3

ಶಪಿಸುತ್ತಲೇ ಯಾರೋ ಬಿಸಾಕಿದ
ನಾಲ್ಕಾರು ನಾಣ್ಯಗಳು, ಹರಿದ ನೋಟುಗಳು,
ಹಳೆ ಬಟ್ಟೆ-ಬರೆ, ತಂಗಳನ್ನ.
ಇಷ್ಟರ ಹುಡುಕಾಟದಲ್ಲೇ
ದಣಿದ ಹೆತ್ತ ಕರುಳಿನ ಮಮತೆ
ನೋವಿನ ನಡುವೆಯೇ ದಟ್ಟ ಜೀವನ ಪ್ರೀತಿ
4
ಗಾಢ ನಿದ್ದೆಯಲ್ಲಿ ಮೈಮರೆತಿವೆ
ಈ ಮುದ್ದು ಮಕ್ಕಳು.
ಇಹದ ನೋವಿನ ಹಂಗಿಲ್ಲದೆ.
ಅವುಗಳ ನಿದ್ದೆಯಲ್ಲಿ ಕನಸುಗಳು
ತೇರು. ಎಲ್ಲಾ ಗೌಜಿ-ಗದ್ದಲ ಮೀರಿದ ಜೀವಗಳವು
ಜಗದ ಜಂಜಾಟಗಳು ಸೋತ ಸಮಯವದು

‍ಲೇಖಕರು admin

25 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading