ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರು, ಯಾರನ್ನು ಕಾಯಬೇಕು?..

ಸದಾಶಿವ್ ಸೊರಟೂರು

ಬಿಸಿಲು ಮಳೆಗೆ
ಬಣ್ಣಗೆಟ್ಟ
ದುರ್ಬಲ ಜಗತ್ತಿನಂತ
ಒಂದು ಹಳೇ ಕುರ್ಚಿಯ
ಮೇಲೆ ಕೂತವನನ್ನು
ಅನ್ನ ಕರುಣಿಸುವ
ನೀಲಿ ಸಮವಸ್ತ್ರವೊಂದು
ತಬ್ಬಿದೆ!

ಗೇಟಿನ ಬಾಗಿಲು ಎಳೆದು
ದಡಕ್ಕನೆ ಅದರ ಚಿಲುಕ
ಹಾಕಿ
ನುಗ್ಗುವ ಗಾಳಿಯ ಮೇಲೂ
ಒಂದು ನಿಗಾವಣೆ
ಆದರೂ ಒಮ್ಮೊಮ್ಮೆ
ತೂಕಡಿಕೆ ಆಕಳಿಕೆ
ಅಕಾರಣ ಚಡಪಡಿಕೆ
ಮಾತೇ ಮರೆತಂತ ಮೌನ
ಕಾಯುವುದೂ ಒಂದು ಧ್ಯಾನ!

ಕಿರ್ರ್ ಕಿರ್ರ್ ಹಾರ್ನ್ ಸದ್ದಿಗೆ
ತಪಸ್ಸುಗೆಟ್ಟ ಗಲಿಬಿಲಿ
ಭಯ ಗೌರವ ಬೆಸೆದುಕೊಂಡು
ಗೇಟಿನ ಬಾಗಿಲು ಕಳಚಿದ
ಕೈಗಳು
ಹಣೆ ಮೇಲೆ ಸರಿದು
ಸೆಲ್ಯೂಟು ಹೂಡುತ್ತವೆ

ತಿಂಗಳ ಬದಿಗೆ ನೀಡುವ
ನಗುವ ಒಂದಷ್ಟು ಗಾಂಧಿ
ನೋಟಿಗೆ
ತನ್ನ ಖಾತೆಗೆಷ್ಟು ಸೆಲ್ಯೂಟುಗಳು
ಜಮೆಯಾಗುತ್ತವೆ ಎಂಬುದರ
ಅಂದಾಜಿಲ್ಲ ಅವನಿಗೆ
ಲೆಕ್ಕಾಚಾರದ ಗೊಡವೆಯಿಲ್ಲ
ಪೋಲಾಗುವ ಕಾಳಜಿಯಿಲ್ಲ
ಕೆಲಸದ ಖಾತ್ರಿಗೆ ಎಷ್ಟಾದರೂ
ಸುರಿಯಲು ಆತ ಸಿದ್ದ..

ಅತ್ತ ಆ ಮನೆಯಲಿ
ಅವನ ಮಗುವೊಂದು
ಅರ್ಧರಾತ್ರಿಯಲಿ ಬದುಕು
ದಯಪಾಲಿಸಿದ ಕೆಟ್ಟ ಕನಸಿಗೆ
ಕನಲಿ ಪಕ್ಕದಲಿ ಕೈಚಾಚಿ
ಅಪ್ಪನನು ಹುಡುಕುತ್ತದೆ..

ಇತ್ತ ಈತ ಬದುಕಿನ ಚಕ್ರಕೆ
ತನ್ನ ನಿದ್ದೆಗಳನು ಬಲಿಕೊಟ್ಟು
ದೊಡ್ಡವರ ಕನಸುಗಳಿಗೂ
ತುಣಕೇ-ತುಣಕು ಕೆಡುಕ ಕೂಡ
ಇಣುಕದಂತೆ ಕಾವಲಿದ್ದಾನೆ..

ಯಾರು ಯಾರನ್ನು ಕಾಯಬೇಕು?
ಯಾರಗೊಡವೆ ಯಾರಿಗೆ?
ಹಣವೊಂದೆ ಉತ್ತರ!

ನೋಟಿನೊಳಗಿನ ಗಾಂಧೀ
ಯಾಕೋ
ಇನ್ನೂ ನಗು ನಿಲ್ಲಿಸಿಲ್ಲ!

‍ಲೇಖಕರು Admin

13 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading