ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಓಪನ್‌ಹೈಮರ್’

ಅಟಾಮಿಕ್‌ ಬಾಂಬ್‌ ಜನಕನ ಆರೋಹಣ, ಅವರೋಹಣದ ʼ ಓಪನ್‌ಹೈಮರ್ ʼ

ಮ ಶ್ರೀ ಮುರಳಿ ಕೃಷ್ಣ

ಜುಲಿಯಸ್‌ ರಾಬರ್ಟ್‌ ಓಪನ್‌ಹೈಮರ್ (1904-1967) ಯಹೂದಿ ಜನಾಂಗದ, ಅಮೆರಿಕಾ ರಾಷ್ಟ್ರದ ಥಿಯರಿಟಿಕಲ್‌ ಫಿಸಿಸಿಸ್ಟ್‌ ಆಗಿದ್ದರು.  ಎರಡನೇ ವಿಶ್ವ ಸಮರದ ಸಮಯದಲ್ಲಿ ಸ್ಥಾಪನೆಗೊಂಡ ಮ್ಯಾನ್‌ಹಟನ್ ಯೋಜನೆಯ ನಿರ್ದೇಶಕರಾಗಿ ಅವರು ನಿಯೋಜಿತರಾದರು. ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಯೋಜನೆಯಡಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಜರುಗಿದವು.

ವಿಶ್ವಾದ್ಯಂತ ಈ ವರ್ಷದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ʼ ಓಪನ್‌ಹೈಮರ್ ʼ ಕೂಡ ಒಂದಾಗಿತ್ತು. ಇದರ ನಿರ್ದೇಶಕರಾದ ಕ್ರಿಸ್ಟೋಫರ್‌ ನೋಲನ್‌ ಈಗಾಗಲೇ ಹಾಲಿವುಡ್‌ನ ಬ್ಲಾಕ್‌ಬಸ್ಟರ್ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.  ʼಮೆಮಂಟೊʼ, ʼಇನ್ಸೆಪ್ಷನ್‌ ʼ, ʼಇನ್ಸೋಮ್ನಿಯಾ ʼ, ʼಡನ್ಕಿರ್ಕ್‌ ʼ ಮುಂತಾದ ಹೆಸರುವಾಸಿ ಸಿನಿಮಾಗಳನ್ನು ನಿರ್ದೇಶಿಸಿರುವ ನೋಲನ್‌ ಇದುವರೆಗೆ ಹನ್ನೆರಡು ಸಿನಿಮಾ ಕೃತಿಗಳನ್ನು ನೀಡಿದ್ದಾರೆ.

ಯಾವುದೇ ಬಯೋಪಿಕ್‌ ಸಿನಿಮಾವನ್ನು ನಿರ್ದೇಶಿಸುವುದು ದೊಡ್ಡ ಸವಾಲಿನ ಕೆಲಸವೇ ಸರಿ.  ಅದೂ ಒಪನ್ ಹೈಮರ್ ನಂತಹ ಖ್ಯಾತ ವಿಜ್ಞಾನಿಯ ಕ್ಲಿಷ್ಟ ವೃತ್ತಿ ಮತ್ತು ಖಾಸಗಿ ಜೀವನದ ಘಟ್ಟಗಳನ್ನು ಕಟ್ಟಿಕೊಡುವುದು ಸುಲಭದ ವಿಷಯವಲ್ಲ.  ಸುಮಾರು ಮೂರು ಗಂಟೆ ಅವಧಿಯ ಈ ಸಿನಿಮಾ ಒಪನ್‌ಹೈಮರ್‌ ಕುರಿತು  ಕೈ ಬರ್ಡ್‌ ಮತ್ತು ಮಾರ್ಟಿನ್‌ ಜೆ ಶೆರ್ವಿನ್‌ ಬರೆದ ʼಅಮೆರಿಕನ್‌ ಪ್ರೊಮಿತಿಯಸ್‌ ʼ (700 ಪುಟಗಳು) ಎಂಬ ಜೀವನ ಚರಿತ್ರೆ (ಬಯಾಗ್ರಫಿ)ಯನ್ನು ಆಧರಿಸಿ ತಯಾರಿಸಲಾಗಿದೆ.

ಮೂರು ಕಾಲಘಟ್ಟಗಳಲ್ಲಿ ಈ ಸಿನಿಮಾ ಅನಾವರಣಗೊಳ್ಳುತ್ತ ಸಾಗುತ್ತದೆ.  1954ರ ಒಂದು ಕಾಲಘಟ್ಟದಲ್ಲಿ ಅಮೆರಿಕದ ಅಟಾಮಿಕ್‌ ಎನೆರ್ಜಿ ಕಮಿಷನ್‌, ಒಪನ್‌ಹೈಮರ್‌( ಐರಿಷ್‌ ನಟ ಕಿಲಿಯನ್‌ ಮರ್ಫಿ)  ಸೋವಿಯತ್‌ ಯೂನಿಯನ್‌ ನ ಬೇಹುಗಾರನಾಗಿದ್ದನೇ ಎಂಬುದರ ಬಗೆಗೆ ತನಿಖೆ ಮಾಡುವ ನಿಟ್ಟಿನಲ್ಲಿ ಸೆಕ್ಯುರಿಟಿ ಹಿಯರಿಂಗ್‌ ಜರಗುತ್ತದೆ.  ಈ ಹಿಯರಿಂಗ್‌ ಓಪನ್‌ಹೈಮರ್ ನ ಕಾಲೇಜು ದಿನಗಳಿಂದ ಆತ ಅಟಾಮಿಕ್‌ ಬಾಂಬ್‌ ತಯಾರಿಸುವ ಘಟ್ಟದ ಘಟನೆಗಳಿಗೆ ವೀಕ್ಷಕರನ್ನು ಕೊಂಡೊಯ್ಯುತ್ತದೆ.  ಇದಕ್ಕಾಗಿ ಫ್ಲ್ಯಾಷ್‌ ಬ್ಯಾಕ್‌ ತಂತ್ರವನ್ನು ಬಳಸಲಾಗಿದೆ. ಬಣ್ಣದಲ್ಲಿ ತೆಗೆದಿರುವ ಈ ಘಟ್ಟಕ್ಕೆ ಸಿನಿಮಾದ ಸಾಕಷ್ಟು ಸಮಯವನ್ನು ವಿನಿಯೋಗಿಸಲಾಗಿದೆ.  ಮೂರನೇ ಕಾಲಘಟ್ಟ 1959ರಲ್ಲಿ ಜರಗುತ್ತದೆ.  ಇದರಲ್ಲಿ ಅಮೆರಿಕದ ಅಟಾಮಿಕ್‌ ಎನೆರ್ಜಿ ಕಮಿಷನ್‌ನ ಮಾಜಿ ಚೇರ್ಮನ್‌ ಲೂಯಿ ಸ್ಟ್ರಾಸ್ (ನಟ ರಾಬರ್ಟ್‌ ಡೌನಿ ಜೂನಿಯರ್)‌ ಯೂಎಸ್‌ ಸೆನೆಟ್‌ ನ ವಿಚಾರಣೆಗೆ (1954ರ ಕಾಲಘಟ್ಟದ ಘಟನೆಗಳಿಗೆ ಸಂಬಂಧಿಸಿದ) ಗುರಿಪಡಿಸಲಾಗುವುದನ್ನು ತೋರಿಸಲಾಗಿದೆ.  ಇದು ಕಪ್ಪು ಮತ್ತು ಬಿಳುಪಿನಲ್ಲಿದೆ. ನಾನ್-ಲೀನಿಯರ್‌ ನಿರೂಪಣೆಯನ್ನು ಹೊಂದಿರುವ ಈ ಸಿನಿಮಾ ವೀಕ್ಷಕರಲ್ಲಿ ಗೊಂದಲವನ್ನು ಉಂಟುಮಾಡಬಹುದಾದ ಸಾಧ್ಯತೆಗಳಿವೆ.

 ಸಿನಿಮಾದ ಮೊದಲರ್ಧದಲ್ಲಿ ಓಪನ್‌ಹೈಮರ್ ನ ವಿಜ್ಞಾನಿಗಳ ಜೊತೆಗಿನ ಸಭೆಗಳು, ನೀತಿಗಳ ಸುತ್ತ ಜರಗುವ ಸಂಭಾಷಣೆಗಳು, ರಕ್ಷಣಾ ವಿಚಾರಣೆಗಳು(ಸೆಕ್ಯುರಿಟಿ ಹಿಯರಿಂಗ್ಸ್)‌ ಮತ್ತು ಅತನ ಖಾಸಗಿ ಜೀವನದ ಕೆಲವು ರಸಮಯ ಕ್ಷಣಗಳ ಬಗೆಗಿನ ದೃಶ್ಯಗಳಿವೆ.  ಇಡೀ ಸಿನಿಮಾದಲ್ಲಿ ಸಂಭಾಷಣೆಗಳು ಕಿಕ್ಕಿರಿದಿವೆ.   ಜರ್ಮನಿ ನ್ಯೂಕ್ಲಿಯರ್‌ ಸಾಮರ್ಥ್ಯವನ್ನು ಹೊಂದಿರಬಹುದಾದ ಸಾಧ್ಯತೆಯಿದ್ದು, ಅದರಿಂದ ಇಡೀ ವಿಶ್ವಕ್ಕೆ ಆಗಬಹುದಾದ ಗಂಡಾಂತರಗಳ ಹಿನ್ನೆಲೆಯಲ್ಲಿ ಓಪನ್‌ಹೈಮರ್ ಮ್ಯಾನ್‌ಹಟನ್ ಯೋಜನೆಯ ನೇತೃತ್ವವನ್ನು ವಹಿಸಿಕೊಳ್ಳಲು ಮುಂದಾಗುತ್ತಾನೆ.  ಆದರೆ ಅಟಾಮಿಕ್‌ ಬಾಂಬನ್ನು ಬಳಸುವ ನಿಟ್ಟಿನಲ್ಲಿ ಆತನಿಗೆ ಭಿನ್ನಾಭಿಪ್ರಾಯಗಳು, ಆತಂಕಗಳು ಇರುತ್ತವೆ.  ಈ ಯೋಜನೆಯ ಇತರ ಕೆಲವು ವಿಜ್ಞಾನಿಗಳು ಇದೇ ಮನೋಸ್ಥಿತಿಯನ್ನು ಹೊಂದಿರುತ್ತಾರೆ.  ಮೊದಲು ನ್ಯೂ ಮೆಕ್ಸಿಕೋದ ಲಾಸ್‌ ಅಲಮೋಸ್‌ ನ ಮ್ಯಾನ್‌ಹಟ್ಟನ್ ಯೋಜನೆಯ ಕೇಂದ್ರದ ಒಂದು ಕೋಣೆಯಲ್ಲಿ ಯುವ ವಿಜ್ಞಾನಿಗಳನ್ನು ಉದ್ದೇಶಿಸುತ್ತ ನಾಝಿಗಳು ಸೋತಿದ್ದರೂ, ಜಪಾನ್‌ ಮೇಲೆ ಅಟಾಮಿಕ್‌ ಬಾಂಬನ್ನು ಏಕೆ ಪ್ರಯೋಗಿಸಬೇಕೆಂದು ವಿವರಿಸುತ್ತಾನೆ! ಒಂದೆಡೆ ಓಪನ್‌ಹೈಮರ್ ಗೆ ಇರುವ ಪರಮಾಣು ಶಕ್ತಿಯ ಬಗೆಗಿನ ತುಡಿತ ಇನ್ನೊಂದೆಡೆ ಮಾನವತೆಯ ಕುರಿತು ಆತನಿಗಿರುವ ಆದರ್ಶ ಇತ್ಯಾದಿ ದ್ವಂದ್ವಗಳನ್ನು ಸಿನಿಮಾದಲ್ಲಿ ಬಹಿರಂಗಗೊಳಿಸಲಾಗಿದೆ. 

1950ರ ದಶಕದಲ್ಲಿ ಅಮೆರಿಕದಲ್ಲಿ ಜರುಗಿದ ಮೆಕಾರ್ತಿಸಂ ಕುರಿತು ಸಿನಿಮಾ ಪ್ರಸ್ತಾಪಿಸುತ್ತದೆ.  ಕಮ್ಯುನಿಸಂ ಬಗೆಗೆ ಒಲವುಳ್ಳ ಮಂದಿ ಅಮೆರಿಕದ ಆಡಳಿತರಂಗದಲ್ಲಿ ನುಸುಳಿದ್ದಾರೆಂದು ಅನುಮಾನಿಸಿ ಅಂತಹವರನ್ನು ಸದೆಬಡಿಯಲು ಜೋಸೆಫ್‌ ಮೆಕಾರ್ತಿ ಎಂಬ ಅಮೆರಿಕನ್‌ ಸೆನೆಟರ್ ನ ನೇತೃತ್ವದಡಿ ಅನೇಕ ತನಿಖೆಗಳು ಮತ್ತು ವಿಚಾರಣೆ (ಹಿಯರಿಂಗ್‌)ಗಳನ್ನು ಸರ್ಕಾರದ ವತಿಯಿಂದ ನಡೆಸಲಾಯಿತು.  ಅನೇಕರು ಇದರಿಂದ ವಿವಿಧ ಬಾಧೆಗಳಿಗೆ ಈಡಾದರು.  ಕೆಲಸಗಳನ್ನು ಕಳೆದುಕೊಂಡರು.  ಓಪನ್‌ಹೈಮರ್ ಗೆ  ಕಮ್ಯುನಿಸಂ ಕುರಿತು ಸ್ವಲ್ಪ ಒಲವಿತ್ತು.  ಆದರೆ ಆತ ಅಮೆರಿಕಾದ ಕಮ್ಯುನಿಸ್ಟ್‌ ಪಕ್ಷದ ಸದಸ್ಯನಾಗಿರಲಿಲ್ಲ.  ಆತನ ತಮ್ಮ ಈ ಪಕ್ಷದ ಸದಸ್ಯನಾಗಿದ್ದ ಮತ್ತು ಹೆಂಡತಿ ಮಾಜಿ ಸದಸ್ಯೆಯಾಗಿದ್ದಳು. ಈ ನೆಪದಡಿ ಆತನಿಗಿದ್ದ ಅಟಾಮಿಕ್‌ ಬಾಂಬ್‌ನ ಬಳಕೆ ಬಗೆಗಿನ ಭಿನ್ನಾಭಿಪ್ರಾಯಗಳು/ಆತಂಕಗಳನ್ನು ಅಳೆದು ಆತನನ್ನು ತೇಜೋವಧೆ ಮಾಡಲಾಗುತ್ತದೆ. ಇದರಲ್ಲಿ ಆತನ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳ ಷಡ್ಯಂತರಗಳೂ ಇರುತ್ತವೆ. ತನ್ನ ವೈಜ್ಞಾನಿಕ ಸಾಧನೆಗಳಿಂದ ಅಮೆರಿಕದ ಜನತೆಯ ದೃಷ್ಟಿಯಲ್ಲಿ ಎತ್ತರದಲ್ಲಿದ್ದ ಆತನನ್ನು ಕುಟಿಲ ತಂತ್ರಗಾರಿಕೆಯಿಂದ ಹೀನಾಯವಾಗಿ ಕೆಳಗಿಳಿಸಲಾಗುತ್ತದೆ! ಈ ಸಂಗತಿಗಳನ್ನು ಸಿನಿಮಾ ನೇರವಾಗಿ ಕಟ್ಟಿಕೊಡುತ್ತದೆ,

ಓಪನ್‌ಹೈಮರ್ ಎದುರಿಸುವ ನೈತಿಕ ಮತ್ತು ರಾಜಕೀಯ ಪ್ರಶ್ನೆಗಳು ಮತ್ತು ಆ ಸಂದರ್ಭದಲ್ಲಿ ಜರಗುವ ಚರ್ಚೆಗಳು ಇತ್ಯಾದಿಗಳನ್ನು ಲಂಬವಿರುವ(ಲಾಂಗ್) ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ದಾಟಿಸಲಾಗಿದೆ.  ಸಂಕಲನ, ಸಿನಿಮೆಟೋಗ್ರಫಿ ಮತ್ತು ಸಂಗೀತ ವೀಕ್ಷಕರನ್ನು ಸಿನಿಮಾದ ಆಗುಹೋಗುಗಳಲ್ಲಿ ಕೇಂದ್ರೀಕರಿಸುವಂತಹ ರೀತಿಯಲ್ಲಿವೆ.  ಕ್ಲೋಸ್‌ ಅಪ್‌ ಶಾಟ್‌ ಗಳು ಪಾತ್ರಗಳ ವಿವಿಧ ಭಾವಗಳನ್ನು ತೆರೆದಿಡುತ್ತವೆ. ಮರುಕಳಿಸುವ ಜ್ವಾಲೆಗಳು, ಅವಶೇಷಗಳು ಮತ್ತು ಸಣ್ಣ ಸಣ್ಣ ಅಸ್ಪೋಟಗಳ ಷಾಟ್‌ಗಳು ವೀಕ್ಷಕರನ್ನು ಯೋಚನಾ ವಲಯಕ್ಕೆ ಕರೆದೊಯ್ಯುತ್ತವೆ.  ಕಟ್‌ ಗಳು ಸಿನಿಮಾದ ವೇಗಕ್ಕೆ, ಜರಗುವ ನಾನಾ ಘಟನೆಗಳಿಗೆ ಇತ್ಯಾತ್ಮಕ ಆಯಾಮವನ್ನು ನೀಡಿವೆ. 

ಲಾಸ್‌ ಅಲಮೋಸ್‌ನಲ್ಲಿ ಜುಲೈ 16, 1945ರಂದು ಜಗತ್ತಿನ ಪ್ರಥಮ ಪರಮಾಣು ಸ್ಫೋಟ ಜರಗುತ್ತದೆ.  ಅದರ ಹಿಂದೆ ಓಪನ್‌ಹೈಮರ್ ಮತ್ತು ಆತನ ವಿಜ್ಞಾನಿಗಳ ತಂಡದ ಪರಿಶ್ರಮ ಮತ್ತು ಪ್ರೌಢಿಮೆ ಇರುತ್ತವೆ.  ಸ್ಫೋಟವಾಗುವಾಗ ಅದುವರೆಗೆ ಏರುಗತಿಯಲ್ಲಿದ್ದ ಹಿನ್ನೆಲೆ ಸಂಗೀತ ಸ್ತಬ್ಧವಾಗಿ, ಗವ್ವೆನ್ನುವ ಮೌನ ಆವರಿಸುತ್ತದೆ! ಅಗಾಧ ಬೆಂಕಿಯ ಜ್ವಾಲೆಗಳು ಸ್ಕ್ರೀನಾದ್ಯಂತ ಚಾಚಿಕೊಳ್ಳುತ್ತವೆ. ನೋಲನ್‌ ತಾನು ಈ ದೃಶ್ಯಕ್ಕಾಗಿ ಕಂಪ್ಯೂಟರ್‌ ಜನರೇಟಡ್‌ ಇಮೇಜರಿ ಬಳಸಿಲ್ಲವೆಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ!

ಈ ಸಿನಿಮಾದಲ್ಲಿ ಐನ್ಸ್ಟೀನ್‌, ಫರ್ಮಿ, ನೀಲ್ಸ್‌ ಬೋರ್‌, ಲಿಯೊ ಝಿಲಾರ್ಡ್‌, ಎಡ್ಚರ್ಡ್‌ ಟೆಲ್ಲರ್‌ ಮುಂತಾದ ವಿಜ್ಞಾನಿಗಳ ಪಾತ್ರಗಳಿವೆ.  ಐನ್ಸ್ಟೀನ್‌ ಓಪನ್‌ಹೈಮರ್ ಗೆ ಹೇಳುವ ಮಾತುಗಳಂತೂ ಮಾರ್ಮಿಕವಾಗಿವೆ. ಸಿನಿಮಾದ ಅಂತ್ಯ ಭಾಗದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಕುರಿತಂತೆ ಓಪನ್‌ಹೈಮರ್ ವ್ಯಕ್ತಪಡಿಸುವ ವಿಷಾಧ ವೀಕ್ಷಕರನ್ನು ಗಾಢವಾಗಿ ಕಲುಕುವುದಿಲ್ಲವೇನೋ ಎಂದೆನಿಸಿತು.  ಅಲ್ಲದೆ ಮಹಿಳಾ ಪಾತ್ರಗಳಿಗೆ ಇನ್ನಷ್ಟು ಕಸುವನ್ನು ನೀಡಬಹುದಿತ್ತು ಎಂಬ ಭಾವನೆ ಸಹ ಮೂಡಿತು. ಓಪನ್‌ಹೈಮರ್ ಪಾತ್ರದಲ್ಲಿ ಕಿಲಿಯನ್‌ ಮರ್ಫಿ ತಮ್ಮ ಉನ್ನತ ಹಂತದ ನಟನಾ ಸಾಮರ್ಥ್ಯದ ಮೂಲಕ ವೀಕ್ಷಕರ ಗಮನವನ್ನು ಸೆಳೆಯುತ್ತಾರೆ.  ಹಾಲಿವುಡ್‌ನಲ್ಲಿ ಪ್ರಸಿದ್ಧರಾಗಿರುವ ಅನೇಕ ನಟರು ಪಾತ್ರವರ್ಗದಲ್ಲಿದ್ದಾರೆ.  ಅವರು ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ.

ಓಪನ್‌ಹೈಮರ್ ಸಿನಿಮಾವನ್ನು ರಸಾಸ್ವಾದಿಸಲು ಎರಡನೇ ವಿಶ್ವ ಸಮರದ ಪರಿಸ್ಥಿತಿ, ಅದಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ವಿಜ್ಞಾನದ ಸ್ವಲ್ಪ ಅರಿವು ಇದ್ದರೆ ಸಾಕು.  ಇಂತಹ ಸಿನಿಮಾವನ್ನು ನೀಡಿದ ನೋಲನ್‌ ಅಭಿನಂದನಾರ್ಹರು.

‍ಲೇಖಕರು avadhi

July 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: